Sunday, October 30, 2011

ಪೋಕಿರಿ ಮಹೇಶನ ಹುಡುಗಿ ನಮ್ರತಾ !


ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ತೆಲುಗಿನ ಪೋಕಿರಿ, ದೂಕುಡು ಚಿತ್ರದ ಪ್ರಿನ್ಸ್ ಮಹೇಶ್ ಬಾಬುಗಾಗಿ ಚಿತ್ರರಂಗವನ್ನು ತೊರೆದು ಸತಿ ಸಾವಿತ್ರಿಯಾಗಲು ಹೊರಟ್ಟಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಕೋಲು ಮುಖ. ಯಾರನ್ನೋ ಹುಡುಕಾಟದಲ್ಲಿರುವ ಸುಂದರ ಕಣ್ಣುಗಳು. ತುಟಿ ತುಂಬಿ ಬಿಡದ ನಗು ಎಲ್ಲವೂ ಒಟ್ಟು ಸೇರಿಸಿ ಹೇಳುವುದಾದರೆ ನಮ್ರತಾ ಶಿರೋಡ್ಕರ್ ತಕ್ಕಮಟ್ಟಿಗೆ ಗ್ಲಾಮ್ ಜತೆಯಲ್ಲಿ ದೇಸಿ ತಡ್ಕಾ ಹುಡುಗಿ. ಅಂದಹಾಗೆ ನಮ್ರತಾ ಇಷ್ಟ ಪಟ್ಟುಕೊಂಡು ಸಿನ್ಮಾ ಲ್ಯಾಂಡ್‌ಗೆ ಬಂದವರು ಅಲ್ಲ. ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ಅಂದಹಾಗೆ ನಮ್ರತಾ ಹೇಳಿಕೊಳ್ಳುವಂತೆ ಆಕ್ಟಿಂಗ್ ಘರಾಣಾದಲ್ಲಿ ಹುಟ್ಟಿ ಬೆಳೆದು ನಿಂತ ಬಾಲೆ.
ಖ್ಯಾತ ಮರಾಠಿ ನಟಿ ಮೀನಾಕ್ಷಿ ಶಿರೋಡ್ಕರ್ ನಾವು ಹೇಳ ಹೊರಟಿರುವ ನಮ್ರತಾರ ಅಜ್ಜಿ. ಮೀನಾಕ್ಷಿ ಬ್ರಹ್ಮಚಾರಿ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಬಂದು ಜೋರಾಗಿ ಹೆಸರು ಮಾಡಿಕೊಂಡಿದ್ದರು. ಜತೆಗೆ ಸ್ವಿಮ್ಮಿಂಗ್ ಸೂಟ್ ಧರಿಸಿ ಈಜು ಕೊಳದಲ್ಲಿ ಮಿಂದು ಬರುವ ತಾಕತ್ತು ತೋರಿಸಿದ ದಿಟ್ಟೆ ನಾಯಕಿಯ ಮೊಮ್ಮಗಳು ಎನ್ನುವ ಕಾರಣಕ್ಕೆ ಸಿನ್ಮಾ ಜಗತ್ತು ನಮ್ರತಾರನ್ನು ಒಂದು ನಾಯಕಿಯಾಗಿ ಕಂಡಿತ್ತು.
೧೯೯೮ರಲ್ಲಿ ಸನ್ಮಾನ್ ಖಾನ್ ಹಾಗೂ ಟ್ವಿಂಕಲ್ ಖನ್ನಾ ನಟಿಸಿದ ಚಿತ್ರ ‘ಜಬ್ ಪ್ಯಾರ್ ಕೈಸೇ ಹೋತಾ ಹೈ’ಯ ಮೂಲಕ ನಮ್ರತಾ ಬಣ್ಣದ ಜಗತ್ತಿಗೆ ಅಬ್ಬೆಕಾಲ್ಟಿಟಳು. ಸಂಜಯ್ ದತ್ ಜತೆಯಲ್ಲಿ ‘ವಾಸ್ತವ್’ ಚಿತ್ರದ ಮೂಲಕ ನಮ್ರತಾ ನಾಯಕಿಯ ಇಮೇಜ್ ಉಳಿಸಿಕೊಂಡರು ಎನ್ನುವುದು ಸಿನ್ಮಾ ವಿಮರ್ಶಕರು ಹೇಳಿಕೊಳ್ಳುವ ಮಾತು. ಯಾಕೋ ಗೊತ್ತಿಲ್ಲ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಸಿನ್ಮಾ ನಗರಿಯ ಜನ ನಮ್ರತಾರನ್ನು ಬರೀ ಪೋಷಕ ಪಾತ್ರಕ್ಕೆ ಮಾತ್ರ ಸೀಮಿತ ಮಾಡಿಬಿಡುವ ಪರಂಪರೆ ಬೆಳೆಯಿತು. ನಮ್ರತಾ ಎಲ್ಲ ಪೋಷಕ ಪಾತ್ರಗಳಿಗೆ ಜೀವ ತುಂಬಿ ಮಾಡುತ್ತಿರುವುದರಿಂದ ಅಂತಹ ಪಾತ್ರಗಳಿಗೆ ಖಾಯಂ ಗಿರಾಕಿಯಾಗಿ ಹೋದರು.
ಒಂದು ವರ್ಷ ಬಾಲಿವುಡ್‌ನಲ್ಲಿ ಒಂದರ ಹಿಂದೆ ಒಂದು ಚಿತ್ರಗಳನ್ನು ಒಪ್ಪಿಕೊಂಡು ಬಾಲಿವುಡ್‌ನಲ್ಲೂ ಹೇಳಿಕೊಳ್ಳುವಂತಹ ಚಿತ್ರಗಳನ್ನು ಕೊಡದೇ ಅಲ್ಲಿಂದ ಹೊರಬಿದ್ದು ಮಲಯಾಳಂ, ತೆಲುಗು, ತಮಿಳು, ಕನ್ನಡ ಚಿತ್ರಗಳತ್ತ ನಮ್ರತಾ ಗಮನ ಹರಿಯಿತು. ಮಲಯಾಳಂನಲ್ಲಿ ಮಮ್ಮುಟ್ಟಿ, ತೆಲುಗಿನಲ್ಲಿ ಚಿರಂಜೀವಿ, ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕೆಲವೊಂದು ನಾಯಕರ ಜತೆ ಕಾಣಿಸಿಕೊಂಡು ಕೊನೆಗೆ ಬಂದು ಬಿದ್ದದ್ದು ನಟ ಮಹೇಶ್‌ಬಾಬು ಅವರ ತೆಕ್ಕೆಗೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲಿಕ್ಕಿಲ್ಲ.
ಏನಪ್ಪಾ ಕತೆ ಅಂದ್ರೆ ೨೦೦೦ರಲ್ಲಿ ತೆಲುಗಿನಲ್ಲಿ ಬಂದ ‘ವಂಶಿ ’ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆಯಲ್ಲಿ ನಮ್ರತಾ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕವೇ ಇಬ್ಬರ ನಡುವೆ ಪ್ರೇಮ ಹುಟ್ಟಿತು. ೨೦೦೫ರ ಪೆಬ್ರವರಿಯಲ್ಲಿ ಇಬ್ಬರ ವಿವಾಹ ಕೂಡ ನಡೆದು ಹೋಯಿತು. ಈಗ ನಮ್ರತಾ ಪ್ರಿನ್ಸ್ ಮಹೇಶ್‌ರ ಜತೆ ಪುತ್ರ ಗೌತಮ್ ಕೃಷ್ಣ ಲಾಲನೆ- ಪಾಲನೆ ನೋಡಿಕೊಂಡು ಚಿತ್ರ ನಗರಿಯಿಂದ ಅಡುಗೆ ಮನೆಯಲ್ಲಿ ಸೆಟ್ಲ್ ಆಗಿ ಹೋಗಿದ್ದಾರೆ. ಕಳೆದ ಆರು ವರ್ಷಗಳಿಂದ ನಮ್ರತಾ ಸಿನ್ಮಾ ಲ್ಯಾಂಡ್‌ಗೆ ಸರಿಯಾಗಿ ಮುಖ ಮಾಡಿಲ್ಲ. ಮಾಧ್ಯಮಗಳ ಜತೆಯಲ್ಲೂ ಕಣ್ಣು ಮುಚ್ಚಾಳೆಯಾಡುವ ನಮ್ರತಾ ಪತಿರಾಯ ಪ್ರಿನ್ಸ್ ಮಹೇಶ್ ಬಾಬುರ ಕುರಿತು ಸಿಕ್ರೇಟ್ಸ್ ಮಾತನ್ನು ಮಾಧ್ಯಮವೊಂದರ ಮುಂದೆ ಆಡಿದ್ದಾರೆ. ಓವರ್ ಟೂ ನಮ್ರತಾ ಮೇಡಂ..
ಪೋಕಿರಿ ಹುಡುಗ ಮಹೇಶ:
ತೆಲುಗು ಸಿನ್ಮಾದ ಸೂಪರ್‌ಸ್ಟಾರ್ ಮಹೇಶ್‌ಬಾಬು ತುಂಬಾ ಸಿಂಪಲ್ ಮನುಷ್ಯ ಎನ್ನೋದು ನಮ್ರತಾರ ಮಾತು. ಹೈದರಾಬಾದ್‌ನಲ್ಲಿ ನಡೆಯುವ ಪೇಜ್-೩ ಪಾರ್ಟಿಗಳಂತೂ ಅವರಿಬ್ಬರೂ ಕಾಣಿಸಿಕೊಳ್ಳುವುದು ಕಡಿಮೆ. ಮನೆಯಲ್ಲಿ ಗೌತಮ್ ಜತೆ ಇರೋದು ಇಬ್ಬರಿಗೂ ಬಹಳ ಖುಷಿಯಂತೆ. ಪುತ್ರ ಗೌತಮ್ ಎಂದರೆ ಮಹೇಶ್‌ಬಾಬುವಿಗೆ ಬಹಳ ಇಷ್ಟವಂತೆ. ಗೌತಮ್ ಹೇಳಿದ ಎಲ್ಲ ಮಾತುಗಳನ್ನು ಚಾಚು ತಪ್ಪದೇ ಮಹೇಶ್ ಪಾಲಿಸುತ್ತಾರೆ. ಗೌತಮ್ ಈಗಾಗಲೇ ತಂದೆಯ ಹತ್ತಿರ ಕಾರು ಕೇಳಿದ್ದ ಅದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದರು. ಆದರೆ ನಾನು ಬಂದು ಅಡ್ಡ ನಿಂತು ಬಿಟ್ಟೆ ಎನ್ನೋದು ನಮ್ರತಾರ ಮಾತು.
ಮಹೇಶ್ ಚಿತ್ರ ರಂಗವನ್ನು ಅತೀಯಾಗಿ ಪ್ರೀತಿಸುತ್ತಾರೆ. ಅವರಿಗೆ ಕುಟುಂಬಕ್ಕಿಂತ ಮೊದಲು ಚಿತ್ರರಂಗ. ಅದಕ್ಕಾಗಿ ಈಗಲೂ ತೆಲುಗು ಸಿನ್ಮಾದಲ್ಲಿ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ವಿವಾಹಕ್ಕಿಂತ ಮೊದಲು ಮಹೇಶ್‌ರ ಬಣ್ಣದ ಬದುಕು ಏರಿಳಿತಗಳಿಂದ ಕೂಡಿತ್ತು. ಆದರೆ ವಿವಾಹದ ನಂತರ ಯಾವಾಗಲೂ ಹಿಟ್ ಸಿನ್ಮಾಗಳನ್ನೇ ಕೊಡುತ್ತಾ ಹೋದರು ಎನ್ನುವುದು ನಮ್ರತಾ ಮಹೇಶ್‌ರ ಬಾಕ್ಸಾಫೀಸ್ ಹಿಟ್‌ಗಳ ಕುರಿತು ಕೊಡುವ ಸಮಜಾಯಿಸಿ.
ನಮ್ರತಾ ಆಕ್ಟಿಂಗ್ ಫೀಲ್ಡ್‌ಗೆ ಮತ್ತೆ ಬರೋದಿಲ್ಲ ಕಾರಣ ಆಕ್ಟಿಂಗ್ ಹಾಗೂ ಕುಟುಂಬ ಎರಡನ್ನು ಒಟ್ಟಾಗಿ ಸಾಗಿಸುವುದು ತುಂಬಾ ಕಷ್ಟವಂತೆ. ಇತ್ತೀಚಿನ ಬಾಲಿವುಡ್ ನಾಯಕಿಯರ ಬಗ್ಗೆ ನಮ್ರತಾರಿಗೆ ಬಹಳ ಬೇಸರವಿದೆ. ಸರಿಯಾಗಿ ಹಿಂದಿ ಬಾರದ ಹುಡುಗಿಯರು ಬಾಲಿವುಡ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದು ಸರಿಯಲ್ಲ ಎನ್ನೋದು ನಮ್ರತಾ ಮೇಡಂರ ವಾದ. ಟೋಟಲಿ ಮಹೇಶ್‌ಬಾಬು ಜತೆಯಲ್ಲಿ ಸುಖವಾಗಿ ಬದುಕು ಮಾಡುವುದು ಮಾತ್ರ ನನ್ನ ಬದುಕಿನ ಮುಂದಿರುವ ಕನಸ್ಸು ಎನ್ನುವ ನಮ್ರತಾ ಬಣ್ಣದ ನಗರಿಯಲ್ಲಿ ಮಿಂಚೊಂದನ್ನು ತರಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಯಾವಾಗಲೂ ಜತೆಯಲ್ಲಿ ಇರುತ್ತದೆ ಎನ್ನುವುದನ್ನು ಹೇಳಲು ಮರೆಯುವುದಿಲ್ಲ.

No comments:

Post a Comment