Thursday, October 13, 2011

ಅಸಲ್ ಮಾತು ಅಸಲಿ ಟಾಕ್ ವಿದ್ ಕೊಡಿಯಾಲ್‌ಬೈಲ್


ಕರಾವಳಿಯ ಮನೆ- ಮನಗಳಲ್ಲಿ ಈಗ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್‌ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ಅಸಲ್ ಚಿತ್ರಕ್ಕೆ ನೀಡಿದೆ. ನೂರು ದಿನಗಳನ್ನು ಪೂರೈಸಿಕೊಂಡು ನೂರವೈತ್ತು ದಿನಗಳತ್ತ ಮೈಗೆದರಿಕೊಂಡು ಓಡಲಾರಂಭಿಸಿದೆ.

ಅಸಲ್ ಸೂಪರ್ರೋ ಸೂಪರ್.. ಮಾರಾಯ್ರೆ. ಇದು ಥಿಯೇಟರ್‌ನಲ್ಲಿ ಒರಿಯರ್ದೊರಿ ಅಸಲ್ ಸಿನ್ಮಾವನ್ನು ೧೪ ಬಾರಿ ನೋಡಿಕೊಂಡು ಹೊರಬಂದ ವಿಠಲ ಸಾಹೇಬ್ರ ಗಟ್ಟಿ ಮಾತು. ಅಸಲ್ ಚಿತ್ರವಿರುವ ನಗರದ ಥಿಯೇಟರ್‌ಗಳಲ್ಲಿ ಈಗಲೂ ಹೌಸ್‌ಪುಲ್ ನೇಮ್‌ಪ್ಲೇಟ್ ತೂಕಾಡಿಸಿದ್ದು ಕಾಣಬಹುದು. ಅಸಲ್ ನೂರು ದಿನ ಓಟ ಮುಗಿಸಿಕೊಂಡು ನೂರೈವತ್ತು ದಿನಗಳತ್ತ ಕಣ್ಣು ಹಾಕಿದರೂ, ಪ್ರೇಕ್ಷಕ ಮಾತ್ರ ಅಸಲ್ ಚಿತ್ರವನ್ನು ಆರಂಭದಲ್ಲಿ ನೋಡಿದ ಜೋಶ್‌ನಂತೆ ನೋಡುತ್ತಿದ್ದಾನೆ ಎನ್ನುತ್ತಾರೆ ನಗರದ ಜ್ಯೋತಿ ಥಿಯೇಟರ್‌ನ ಕೌಂಟರ್‌ನಲ್ಲಿ ಕೂತು ಟಿಕೇಟ್ ಹರಿದುಕೊಡುತ್ತಿರುವ ರಂಜಿತ್.
ಇದು ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ಅತೀ ದೊಡ್ಡ ರೆಕಾರ್ಡ್. ನಲವತ್ತು ವರ್ಷಗಳ ತುಳು ಸಿನ್ಮಾ ಲ್ಯಾಂಡ್‌ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದೆ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್’ ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಈ ತುಳು ಸಿನ್ಮಾದ ಮೂಲಕ ಹೊಸ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತು. ಅವರ ಕಂಪನಿಯಿಂದ ಹೊರಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್. ಅದರಲ್ಲೂ ‘ಅಸಲ್’ ಇಡೀ ತುಳು ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ಯಶಸ್ವಿನಿಂದ ಕರಾವಳಿಯಲ್ಲಿ ತುಳು ನಾಟಕ ಮಾಡುವ ಉಮೇದು ಹುಟ್ಟಿಕೊಂಡಿತು.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಅಂದಹಾಗೆ ಅಕ್ಟೋಬರ್ ೨೧ರಂದು ಮುಂಬಯಿ, ಪುಣೆಯಲ್ಲೂ ಸಿನ್ಮಾವನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಮಧ್ಯ ಪ್ರಾಚ್ಯದೇಶಗಳಲ್ಲಿಯೂ ಚಿತ್ರವನ್ನು ಥಿಯೇಟರ್‌ಗೆ ಇಳಿಸಬೇಕು ಎನ್ನೋದು ವಿಜಯ್‌ಕುಮಾರ್ ಕೊಡಿಯಾಲ್ ಬೈಲ್‌ರ ತಲೆಯಲ್ಲಿ ಓಡುತ್ತಿರುವ ಮಾಸ್ಟರ್ ಪ್ಲಾನ್.
ಅಸಲ್ ಮೋಲಿವುಡ್ ಎಂಟ್ರಿ:
‘ಒರಿಯರ್ದೊರಿ ಅಸಲ್’ ಚಿತ್ರವನ್ನು ಮಲಯಾಳಂನ ನಿರ್ದೇಶಕರೊಬ್ಬರು ರಿಮೇಕ್ ಮಾಡಲು ಕೇಳಿದ್ದರು. ಆದರೆ ಕೋಸ್ಟಲ್‌ವುಡ್‌ನಲ್ಲಿ ಅಸಲ್ ಕಂಡ ಸಕ್ಸಸ್ ಹಾಗೂ ಬೇರೆ ಸಿನ್ಮಾ ಉದ್ದಿಮೆಯಲ್ಲಿ ಸಕ್ಸಸ್ ಪಾಯಿಂಟ್‌ಗಳು ಬೇರೆ ಬೇರೆಯಾಗಿರುತ್ತದೆ. ಅದರಲ್ಲೂ ಬೇರೆ ಭಾಷೆಯಲ್ಲೂ ನಾನೇ ಅಸಲ್ ಚಿತ್ರವನ್ನು ನಿರ್ದೇಶನ ಮಾಡಬೇಕು ಎನ್ನೋದು ನನ್ನ ಕನಸ್ಸು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್.
‘ಅಸಲ್’ ಚಿತ್ರದ ನಂತರ ಕೋಸ್ಟಲ್‌ವುಡ್‌ನಲ್ಲಿ ಹನ್ನೆರಡು ಚಿತ್ರಗಳು ಮುಹೂರ್ತ ಮಾಡಿಕೊಂಡಿದೆ. ಅದು ಅಸಲ್ ಹಿಟ್ ಆಗಿದೆ ಎನ್ನುವುದಕ್ಕೆ ತುಳು ಸಿನ್ಮಾ ಇಂಡಸ್ಟ್ರಿ ಕೊಟ್ಟ ಉದಾಹರಣೆ. ಅಸಲ್ ಬರೀ ಓಡಿದ್ದಲ್ಲ ..ಅದು ತಟಸ್ಥವಾಗಿ ನಿಂತು ಹೋದ ತುಳು ಸಿನ್ಮಾ ಇಂಡಸ್ಟ್ರಿಯನ್ನು ಓಡಿಸಿದೆ ಎನ್ನುವುದು ವಿಜಯಣ್ಣನ ಅಸಲಿ ಮಾತು.
ಅಸಲ್ ವಾಟ್ ನೆಕ್ಸ್ಟ್:
ಬಹುತೇಕ ಮಂದಿ ‘ಅಸಲ್’ ನಂತರ ಮತ್ತೊಂದು ತುಳು ಸಿನ್ಮಾ ಮಾಡುತ್ತೇನೆ ಎನ್ನುವ ಸುದ್ಧಿ ಹಬ್ಬಿದೆ. ನಿಜಕ್ಕೂ ಅಸಲ್ ಚಿತ್ರವನ್ನು ಇಡೀ ವರ್ಷ ಕರಾವಳಿ ಸೇರಿದಂತೆ ಮುಂಬಯಿ, ಮಧ್ಯಪ್ರಾಚ್ಯ ದೇಶಗಳ ಉದ್ದಗಲಕ್ಕೂ ಓಡಿಸಿದ ನಂತರವೇ ಮತ್ತೊಂದು ಚಿತ್ರವನ್ನು ಮಾಡಬೇಕು ಎನ್ನೋದು ನನ್ನ ಅಲೋಚನೆ. ಸಧ್ಯಕ್ಕೆ ಅಸಲ್‌ನ ಓಡಾಟದಲ್ಲಿ ಬ್ಯುಸಿ. ಇನ್ನೂಳಿದ ಟೈಮ್‌ನಲ್ಲಿ ತುಳು ರಂಗಭೂಮಿಗೆ ಹೊಸ ನಾಟಕ ‘ಅಜ್ಜೇರ್’ ತರಬೇಕು.
ಅಜ್ಜೇರ್’ ಕತೆ ಪಾತ್ರವರ್ಗ ಎಲ್ಲವೂ ಸಿದ್ಧವಾಗಿದೆ. ಸಧ್ಯಕ್ಕೆ ಅದನ್ನು ಬಿಡುಗಡೆ ಮಾಡುವ ಯೋಚನೆ ಮಾಡುತ್ತಿದ್ದೇನೆ. ನಂತರ ನನ್ನ ಹಳೆಯ ನಾಟಕವೊಂದನ್ನು ಮತ್ತೊಂದು ತುಳು ಚಿತ್ರರಂಗಕ್ಕೆ ಸಿದ್ಧ ಮಾಡುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದಾರೆ ಬರುವ ವರ್ಷದಲ್ಲಿಯೇ ಮತ್ತೊಂದು ಚಿತ್ರವನ್ನು ಪ್ರೇಕ್ಷಕರಿಗೆ ಕೊಡುತ್ತೇನೆ ಎನ್ನುತ್ತಾರೆ ವಿಜಯ್ ಕುಮಾರ್.
ತುಳು ಚಿತ್ರವನ್ನು ಸಾಟಲೈಟ್ ಚಾನೆಲ್‌ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್‌ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್‌ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್‌ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಅದರಲ್ಲೂ ನೂರು ದಿನ ಭರ್ಜರಿಯಾಗಿ ಓಡಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?

No comments:

Post a Comment