Wednesday, October 12, 2011

ಕರಾವಳಿಯಲ್ಲಿ ಚಿನ್ನಾದಂತಹ ‘ಉಜ್ವಾಡು’


ಹೊಸ ಬೆಳಕು ಈಗ ಕೋಸ್ಟಲ್‌ವುಡ್ ಸಿನ್ಮಾ ಲ್ಯಾಂಡ್‌ನಲ್ಲೂ ಬರುತ್ತಿದೆ. ಕರಾವಳಿ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾರ ನಿರ್ದೇಶನದಲ್ಲಿ ‘ಉಜ್ವಾಡು’ ಚಿತ್ರ ಥಿಯೇಟರ್‌ಗೆ ಇಳಿಯುತ್ತಿದೆ.

ಕತ್ತಲೆಯನ್ನು ದೂರಕ್ಕೆ ಓಡಿಸಿ ಬೆರಗು ಕಣ್ಣಿನಿಂದ ನೋಡುವಂತಹ ಲೋಕವನ್ನು ಸೃಷ್ಟಿ ಮಾಡಬಲ್ಲ ಸಾಮರ್ಥ್ಯ ಇರುವ ಬೆಳಕು ಎಲ್ಲಕ್ಕೂ ಮುಖ್ಯ ಅನ್ನೋದು ಎಲ್ಲರ ಅನುಭವದ ಮಾತು. ಇದೇ ಬೆಳಕು ಈಗ ಕೋಸ್ಟಲ್‌ವುಡ್ ಸಿನ್ಮಾ ಲ್ಯಾಂಡ್‌ನಲ್ಲೂ ಬರುತ್ತಿದೆ. ಹೌದು. ಕರಾವಳಿ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾರ ನಿರ್ದೇಶನದಲ್ಲಿ ಬರುತ್ತಿರುವ ‘ಉಜ್ವಾಡು’ ಶುಕ್ರವಾರ(ಅ.೧೪)ದಂದು ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾಗೆ ಬರುತ್ತಿದೆ.
ಕಾಸರಗೋಡು ಚಿನ್ನಾ ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಕೈ ಹಾಕಿರುವುದರಿಂದ ಚಿತ್ರದ ಕುರಿತು ಕರಾವಳಿಯ ಪ್ರೇಕ್ಷಕರಿಗೆ ನಿರೀಕ್ಷೆ ಮೂಟೆ ಜಾಸ್ತಿಯಾಗಿದೆ. ಈಗಾಗಲೇ ಕರಾವಳಿಯ ರಂಗಭೂಮಿಯಲ್ಲಿ ವಿಭಿನ್ನ ಮಾದರಿಯ ಕೊಂಕಣಿ ಸೇರಿದಂತೆ ನಾನಾ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶನ ಮಾಡಿ ಹೆಸರು ಉಳಿಸಿಕೊಂಡಿರುವ ಕಾಸರಗೋಡು ಚಿನ್ನಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬೆಳೆಯುವ ಕನಸ್ಸು ಕಾಣುತ್ತಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕೊಂಕಣಿ ಭಾಷೆಯಲ್ಲಿ ಸಿನ್ಮಾಗಳು ಥಿಯೇಟರ್‌ಗೆ ಬರುವುದೇ ತೀರಾ ಅಪರೂಪ. ಸೀಮಿತ ಮಾರುಕಟ್ಟೆಯೊಳಗೆ ಕೊಂಕಣಿ ಚಿತ್ರಗಳು ಯಶಸ್ಸು ಕಾಣಲು ಸಾಧ್ಯವಿಲ್ಲ ಎನ್ನುವ ಯೋಚನೆಯಿಂದ ಯಾವ ನಿರ್ಮಾಪಕ, ನಿರ್ದೇಶಕ ಚಿತ್ರ ಮಾಡುವ ಕೆಲಸಕ್ಕೆ ಕೈ ಹಾಕೋದಿಲ್ಲ. ಅದರಲ್ಲೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಜಾಗ ಪಡೆಯಲು, ಪ್ರಶಸ್ತಿ ಬಾಚಲು ಮಾತ್ರ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಆರೋಪಗಳೇ ಜಾಸ್ತಿ.
ಆದರೆ ‘ಉಜ್ವಾಡು’ ಈ ಎಲ್ಲ ಆರೋಪಗಳಿಂದ ಮುಕ್ತವಾಗಿ ಬರೀ ಕರಾವಳಿಯ ಪ್ರೇಕ್ಷಕ ವರ್ಗವನ್ನು ಮಾತ್ರ ಸೆಳೆಯಲು ನಿರ್ಧಾರ ಮಾಡಿಕೊಂಡಿದೆ ಎನ್ನೋದು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು. ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಕಳೆದ ೩೫ ವರ್ಷಗಳಿಂದ ಕೊಂಕಣಿ ಚಿತ್ರ ಬಂದಿಲ್ಲ. ‘ಉಜ್ವಾಡು’ ಇಷ್ಟು ವರ್ಷಗಳ ನಂತರ ಥಿಯೇಟರ್‌ಗೆ ಬರುತ್ತಿದೆ ಎನ್ನೋದು ಕರಾವಳಿಯ ಕೊಂಕಣಿಗರಿಗೆ ಹೆಮ್ಮೆ ಪಡಬೇಕಾದ ವಿಷಯ ಎನ್ನುತ್ತಾರೆ ಚಿನ್ನಾ.
ಈ ಹಿಂದೆ ರಮೇಶ್ ಕಾಮತ್, ಅಮೃತ್ ಪ್ರಭು ಅವರ ‘ತಪಸ್ವಿನಿ’, ‘ಜನಮನ’ ಸಿನಿಮಾಗಳು ಹಾಗೂ ಕ್ಯಾಥೋಲಿಕ್ ಕೊಂಕಣಿ ಭಾಷೆಯಲ್ಲಿ ರಿಚರ್ಡ್ ಕ್ಯಾಸ್ಟಲಿನೊ ಅವರ ‘ಬೊಗ್ಸಾಣೆ’ ಮತ್ತು ‘ಕಾಜಾರ್’ ಚಿತ್ರ ಬಿಡುಗಡೆಗೊಂಡಿತ್ತು. ಈಗ ‘ಉಜ್ವಾಡು’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೂಲಕ ಕೊಂಕಣಿ ಸಿನ್ಮಾ ಇಂಡಸ್ಟ್ರಿಯನ್ನು ಇನ್ನಷ್ಟೂ ಶ್ರೀಮಂತ ಮಾಡಬೇಕು. ಅದರಲ್ಲೂ ಕೊಂಕಣಿ ಸಮುದಾಯದಲ್ಲಿರುವ ಸಂಸ್ಕೃತಿ, ಆಚರಣೆ, ಹೋಳಿ ಹಬ್ಬ, ಚೂಡಿ ಪೂಜೆ ಎಲ್ಲವನ್ನು ಇತರ ಸುಮುದಾಯದ ಬಂಧುಗಳಿಗೆ ತೋರಿಸಬೇಕು ಎನ್ನುವ ಕನಸ್ಸಿನಿಂದ ಚಿತ್ರ ನಿರ್ದೇಶನ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಚಿತ್ರವನ್ನು ಪ್ರಾಮಾಣಿಕವಾದ ರೀತಿಯಲ್ಲಿ ಹೊರ ತರಲು ಪ್ರಯತ್ನ ಪಟ್ಟಿರುವುದರಿಂದ ಚಿತ್ರ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎನ್ನುವ ಧೈರ್ಯದ ಮಾತುಗಳಿಂದ ಕಾಸರಗೋಡು ಚಿನ್ನಾ ನಗುತ್ತಾರೆ.
ಆರಂಭದಲ್ಲಿ ಚಿತ್ರವನ್ನು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಉಳಿದಂತೆ ಕಾರ್ಕಳದ ಥಿಯೇಟರ್‌ನಲ್ಲಿ ಡಿಟಿಎಸ್ ಅಳವಡಿಸಿದ ಬಳಿಕ ಅಲ್ಲಿ ಹಾಗೂ ಉಡುಪಿ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಕಮರ್ಷಿಯಲ್ ಸ್ಪರ್ಶ ಇಲ್ಲದೆ ಮೂಡಿ ಬಂದಿರುವ ಉಜ್ವಾಡು ಚಿತ್ರವನ್ನು ಕಾರ್ಕಳದಲ್ಲಿ ನಿರಂತರ ೧೮ ದಿನಗಳ ಕಾಲ ಹಾಗೂ ಜಿಎಸ್‌ಬಿ ಕುಲದೇವರು ಇರುವ ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಉಜ್ವಾಡು ಅಂದರೆ ಬೆಳಕು. ಸಿನಿಮಾದಲ್ಲಿ ವೃದ್ಧಾಶ್ರಮದ ಹೆಸರು ಉಜ್ವಾಡು. ವೃದ್ಧಾಶ್ರಮದಲ್ಲಿರುವ ಹಿರಿಯರ ಬದುಕೇ ಬೆಳಕು ಎಂಬುದು ಇದರ ಅರ್ಥ. ಇದು ಕೊಂಕಣಿ ಸಿನಿಮಾ ಆಗಿದ್ದರೂ ಭಾಷೆಗಿಂತ ಸಂವೇದನೆ ಮುಖ್ಯ ಎನ್ನುವುದು ಚಿನ್ನಾರ ಚಿನ್ನದಂತಹ ಮಾತು.
ಚಿನ್ನಾ ಅವರ ಜತೆ ಕಥೆ-ಚಿತ್ರಕಥೆಯಲ್ಲಿ ಸಹಕಾರ ನೀಡಿರುವ ಗೋಪಾಲಕೃಷ್ಣ ಪೈ, ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ. ಖ್ಯಾತ ಕೇರಳದ ಛಾಯಾಗ್ರಾಹಕ ಉತ್ಪಲ್ ವಿ.ನಾಯನಾರ್ ಅವರ ಛಾಯಾಗ್ರಹಣದ ಚುಂಬಕ ಶಕ್ತಿ ಚಿತ್ರದಲ್ಲಿ ಕಾಣ ಸಿಗುತ್ತದೆ. ವಿ.ಮನೋಹರ್ ಅವರ ಸುಮಧುರ ಸಂಗೀತ, ಶಶಿಧರ ಅಡಪರ ಕಲಾ ನಿರ್ದೇಶನದ ಕೈಚಳಕವಿದೆ.
ಭದ್ರಗಿರಿ ಅಚ್ಯುತದಾಸ ಮತ್ತು ಜಯಂತ ಕಾಯ್ಕಿಣಿ ಅವರ ಹಾಡುಗಳನ್ನು ಪುತ್ತೂರು ನರಸಿಂಹ ನಾಯಕ್, ಶಂಕರ್ ಶಾನುಭೋಗ್, ಸೀಮಾ ರಾಯ್ಕರ್ ಹಾಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿದೆ. ನಿರ್ಮಾಪಕರಾಗಿ ಕೆ.ಜೆ.ಧನಂಜಯ್ ಮತ್ತು ಅನುರಾಧಾ ಪಡಿಯಾರ್ ಇದ್ದಾರೆ.
ನಟವರ್ಗದಲ್ಲಿ ಸದಾಶಿವ ಬ್ರಹ್ಮಾವರ್, ನೀತು, ಉಮಾಶ್ರೀ, ಸಂಧ್ಯಾ ಪೈ, ಶಶಿಭೂಷಣ್ ಕಿಣಿ, ಪ್ರಕಾಶ್ ಶೆಣೈ, ಓಂಗಣೇಶ್, ಸತೀಶ್ ಭಟ್, ಪೂರ್ಣಿಮಾ ಸುರೇಶ್, ಸತೀಶ್ ನಾಯಕ್, ಮಂಜುನಾಥ್ ಕುಡ್ವ ಸೇರಿದಂತೆ ರಂಗಭೂಮಿಯ ೮೫ ಕಲಾವಿದರು ಅಭಿನಯಿಸಿದ್ದಾರೆ ಎನ್ನೋದು ‘ಉಜ್ವಾಡು’ ಚಿತ್ರದ ಹೈಲೇಟ್ ಆಗುವ ವಿಚಾರ. ಇನ್ನೂ ಹೆಚ್ಚಿನ ಮಾಹಿತಿಗೆ ‘ಉಜ್ವಾಡು’ ಚಿತ್ರವನ್ನು ತೆರೆ ಮೇಲೆ ನೋಡಿ ಬನ್ನಿ.

No comments:

Post a Comment