Friday, October 7, 2011

ಮಲ್ಲಿಗೆ ಬೆಳೆಯ ಭಯಾನಕ ಕತೆ ‘ಶಂಕರಪುರ’ ಟ್ರ್ಯಾಜಿಡಿ ಊರು !


ಶಂಕರಪುರ ಎಂದಾಗ ಮಲ್ಲಿಗೆಯ ನೆನಪು ಕಾಡುತ್ತದೆ. ಈ ಊರಿಗೂ ಮಲ್ಲಿಗೆಗೂ ಬಹಳ ಹತ್ತಿರದ ನಂಟು. ಸಾವಿರಾರು ಕುಟುಂಬಗಳು ಈ ಮಲ್ಲಿಗೆ ಮ್ಯಾಲೆ ಬದುಕು ಕಟ್ಟುತ್ತಿವೆ. ಆದರೆ ಮಲ್ಲಿಗೆಗೆ ವಿಪರೀತವಾಗಿ ಬಳಸಲಾಗುತ್ತಿರುವ ಗೊಬ್ಬರ, ಕೀಟನಾಶಕ,ರೋಗನಾಶಕಗಳು ಶಂಕರಪುರವನ್ನು ಬರಡು ಮಾಡುತ್ತಿದೆಯಾ..? ಬೆಳೆಗಾರರ ಆರೋಗ್ಯ ಕೆಡಿಸುತ್ತಿದೆಯಾ ಎಂಬ ಪುಟ್ಟ ಕಳವಳ ಮಣ್ಣಿನ ಮಕ್ಕಳದ್ದು.. ಬನ್ನಿ ಅವರ ಬವಣೆ ಕೇಳೋಣ......

ಉಡುಪಿಯ ಶಂಕರಪುರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುವಾಗಲೇ ಮಲ್ಲಿಗೆಯಂತೆ ಮುದ್ದಾಡಿ ಬಿಡೋಣ ಎನ್ನುವ ಆಪ್ತತೆಯೊಂದು ಈ ಊರಿನಲ್ಲಿ ಸೃಷ್ಟಿಯಾಗುತ್ತದೆ. ರಬ್ಬರ್‌ಗೆ ಕೊಚ್ಚಿನ್, ಕ್ಯಾಲಿಕಟ್ ಇದ್ದ ಹಾಗೆ ಮಲ್ಲಿಗೆ ಎಂದಾಗ ಶಂಕರಪುರದ ಮಾರ್ಕೆಟ್ ಕಾಣಿಸಿಕೊಳ್ಳುತ್ತದೆ. ಕಟಪಾಡಿಯಿಂದ ಕೊಂಚ ದೂರಕ್ಕೆ ಹೋದಾಗ ಅಲ್ಲಿ ಶಂಕರಪುರ ಎದುರುಗೊಳ್ಳುತ್ತದೆ. ಅಂದಿಗೂ ಇಂದಿಗೂ ಅಲ್ಲಿನ ಸಾವಿರಾರು ಕುಟುಂಬಗಳು ಮಲ್ಲಿಗೆಯ ಮ್ಯಾಲೆ ಬದುಕು ಕಟ್ಟುತ್ತಿವೆ. ಈ ಮಲ್ಲಿಗೆ ಬೆಳೆಗಾರರ ಬದುಕು ಹಿಂದಿನಂತೆ ಈಗ ಇಲ್ಲ ಎನ್ನುವುದು ಎಲ್ಲರೂ ಒಪ್ಪಲೇ ಬೇಕಾದ ವಿಚಾರ.
ಶಂಕರಪುರದ ಮಲ್ಲಿಗೆ ಈಗ ಕಳೆಗುಂದುತ್ತಿದೆ. ಮಲ್ಲಿಗೆ ಬೆಳೆದವರಿಗೂ ಅದರ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ವಾಸ್ತವವಾಗಿ ಇಲ್ಲಿ ರಸಗೊಬ್ಬರ, ಮನಬಂದಂತೆ ಪ್ರಯೋಗ ಮಾಡುವ ಕೀಟನಾಶಕ, ರೋಗನಾಶಕದ ಪರಿಣಾಮ ಈಗ ಇದ್ಯಾವುದಕ್ಕೂ ಮಲ್ಲಿಗೆ ಬಗ್ಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಂಕರಪುರದ ಫಲವತ್ತಾದ ಮಣ್ಣು ಮಲ್ಲಿಗೆ ಬೆಳೆಗಾರರಿಂದ ಕೈ ಬಿಟ್ಟು ಹೋಗುತ್ತಿದೆ ಎನ್ನುವ ಪುಟ್ಟ ಕಳವಳ ಬೆಳೆಗಾರರಿಗೂ ಬಂದು ಬಿಟ್ಟಿದೆ. ಅದಕ್ಕೆ ತಕ್ಕಂತೆ ಪದೇ ಪದೇ ಮಲ್ಲಿಗೆ ಗಿಡಗಳಿಗೆ ಅಂಟಿಕೊಳ್ಳುವ ಕಾಯಿಲೆಗಳು ಈ ಎಲ್ಲ ವಿಚಾರಗಳಿಗೆ ಮತ್ತಷ್ಟೂ ಪುಷ್ಠಿ ನೀಡುತ್ತಿದೆ. ಜತೆಗೆ ವಿಪರೀತವಾಗಿ ರೋಗನಾಶಕಗಳ ಬಳಕೆಯಿಂದ ಮಲ್ಲಿಗೆ ಬೆಳೆಗಾರರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀಳುತ್ತಿದೆ ಎನ್ನುವ ಅರಿವು ಕೂಡ ಅವರಲ್ಲಿ ಬೆಳದಂತೆ ಕಾಣಿಸುತ್ತಿಲ್ಲ.
ಇಲ್ಲಿನ ಮಲ್ಲಿಗೆ ಉಡುಪಿ, ಮಂಗಳೂರು, ಭಟ್ಕಳ, ಕಾಸರಗೋಡು ಸೇರಿದಂತೆ ಮುಂಬಯಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಕುದುರಿಸಿದೆ. ಶಂಕರಪುರ, ಬಂಟಕಲ್ಲು, ಮಂಚಕಲ್ಲು, ಶಿರ್ವ ಹೀಗೆ ಮಲ್ಲಿಗೆಯ ಹಾದಿ ಹಾಗೂ ಉತ್ಪಾದನೆ ಎರಡೂ ಸಾಕಷ್ಟು ಬೆಳೆದಿದೆ ನಿಜ. ಆದರೆ ಹಿಂದಿನಂತಹ ಪ್ರಗತಿ ಇಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕೀಟನಾಶಕಗಳ ಬಳಕೆ ಇಲ್ಲದೇ ಹೋದರೆ ಮಲ್ಲಿಗೆ ಗಿಡವೇ ಉಳಿಯುವುದಿಲ್ಲ ಎನ್ನುವುದು ಮಂಚಕಲ್ಲುವಿನ ಮಲ್ಲಿಗೆ ಬೆಳೆಗಾರ ರಾಮಯ್ಯ ಅವರ ಮಾತು.
ಶಂಕರಪುರದ ಕತೆ ಏನು:
ವಾಸ್ತವಾಗಿ ಇಲ್ಲಿ ಮಲ್ಲಿಗೆ ಬೆಳೆಯ ಬೆಳೆಗಾರರೇ ತಜ್ಞರು. ಅವರು ಮಾಡಿದ್ದೇ ಕೃಷಿ ಜತೆಗೆ ಅವರು ಮಾಡಿದ್ದೇ ಮದ್ದು. ಇಲ್ಲಿಯ ಗೊಬ್ಬರದಂಗಡಿಯವರೇ ವಿಜ್ಞಾನಿಗಳು. ಕೃಷಿ ವಿವಿಯಿಂದ ಬರುವ ಅಕಾರಿಗಳು ಹೇಳುವ ಮಾತಿಗೆ ಬೆಳೆಗಾರರು ಬರೀ ತಲೆಯಾಡಿಸುವುದರಲ್ಲಿಯೇ ಸಮಯ ಕಳೆದು ಬಿಡುತ್ತಾರೆಯೇ ಹೊರತು. ಅವರು ಹೇಳಿದ ಸಲಹೆಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುವ ನಿರ್ಧಾರಕ್ಕಂತೂ ಬರೋದೆ ಇಲ್ಲ ಎನ್ನುವುದು ಕೃಷಿ ಅಕಾರಿ ರಾಜಣ್ಣ ಅವರ ಅಭಿಪ್ರಾಯ.
ಶಂಕರಪುರದ ಪಕ್ಕದ ಊರು ಇನ್ನಂಜೆಯ ದಡ್ಡುವಿನ ಶೋಭಾಕ್ಕ ೩೮ಮಲ್ಲಿಗೆ ಗಿಡಗಳನ್ನು ನೆಟ್ಟಿದ್ದಾರೆ. ೩೮ ಗಿಡಗಳಿಗೆ ಬರೋಬರಿ ೧೦ ಸಾವಿರ ರೂ. ಖರ್ಚು ಮಾಡುತ್ತಾರೆ. ೫ ಸಾವಿರ ಕೊಟ್ಟು ಎರಡು ಟೆಂಪೊ ಲೋಡು ಹಟ್ಟಿ ಗೊಬ್ಬರ ತಂದು ಮಲ್ಲಿಗೆ ಗಿಡಗಳಿಗೆ ಸುರಿಯುತ್ತಾರೆ. ೮೦೦-೧೦೦೦ರೂ. ಕೊಟ್ಟು ರಾಸಾಯನಿಕ ಗೊಬ್ಬರ ಹಾಗೂ ಔಷಯನ್ನು ತರುತ್ತಾರೆ. ದಿನಕ್ಕೆ ೧೫ ಅಟ್ಟೆಯಷ್ಟು ಮಲ್ಲಿಗೆ ಕೊಯ್ಯುತ್ತಿದ್ದ ಶೋಭಾಕ್ಕನಿಗೆ ಮಳೆಗಾಲದಲ್ಲಿ ಕೊಯ್ಯಲು ಕೂಡ ಮಲ್ಲಿಗೆ ಗಿಡದಲ್ಲಿ ಮಲ್ಲಿಗೆ ಬಿಡಿ ಎಲೆಯೂ ಇಲ್ಲವಂತೆ. ಆದರೂ ಕೊಂಚನೂ ಧೈರ್ಯ ಕುಂದಿಲ್ಲ ಶೋಭಾಕ್ಕನಿಗೆ, ಈಗಲೂ ಪಕ್ಕದ ಔಷಧ ಅಂಗಡಿಯಿಂದ ತಂದು ರಾಸಾಯನಿಕಗಳನ್ನು ಗಿಡಗಳಿಗೆ ಸುರಿಯುತ್ತಿದ್ದಾರೆ.
ತುಂಬಾನೇ ಮುಗ್ದರು:
ಶಂಕರಪುರ, ಬಂಟಕಲ್ಲು, ಕಟಪಾಡಿ ಟೋಟಲಿ ಹತ್ತಕ್ಕಿಂತ ಜಾಸ್ತಿ ರಾಸಾಯನಿಕ ಹಾಗೂ ಕೀಟನಾಶಕಗಳ ದುಕಾನುಗಳಿವೆ. ಇವು ಬರೀ ದುಕಾನುಗಳು ಎಂದರೆ ತಪ್ಪಾಗುತ್ತದೆ. ಮೊಡರ್ನ್ ಭಾಷೆಯಲ್ಲಿ ‘ಚಿಕಿತ್ಸಾಲಯ’ಗಳು ಇದೇ ಸರಿಯಾದ ಪದ. ಶಂಕರಪುರ ಹಾಗೂ ಪಕ್ಕದ ಊರುಗಳಿಗೆ ಇಲ್ಲಿಂದಲೇ ರಾಸಾಯನಿಕಗಳು ಪೂರೈಕೆಯಾಗುತ್ತಿರುವುದು. ದುರಾದೃಷ್ಟವೆಂದರೆ ಕೆಲವು ಮಲ್ಲಿಗೆ ಬೆಳೆಗಾರರಿಗೆ ಈ ರಾಸಾಯನಿಕಗಳ ಹೆಸರೇ ಗೊತ್ತಿಲ್ಲ ಬಿಡಿ. ಅಂಗಡಿಯವರು ಹೇಳುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಮಲ್ಲಿಗೆ ಗಿಡಗಳಿಗೆ ಸುರಿಯಲಾಗುತ್ತಿದೆ. ಹಸಿರು ಪುಡಿ, ಕೇಸರಿ ಪುಡಿ, ತ್ರಿಕೋನ ಮಾರ್ಕಿನ ಬಾಟಲಿ, ಬಾಣ ಮಾರ್ಕಿನ ಸ್ಯಾಚೆಟ್ ಇದೆಲ್ಲವೂ ಇಲ್ಲಿನ ಬೆಳೆಗಾರರು ರಾಸಾಯನಿಕಗಳಿಗೆ ಇಟ್ಟ ಲೋಕಲ್ ಬ್ರಾಂಡ್‌ನೇಮ್‌ಗಳು.
ಮಂಚಕಲ್ಲಿನ ಅಪ್ಪಿ, ಸುಂದರಿ, ಸೂರ‍್ಯ ಮೂಲ್ಯ ಹೇಳುವಂತೆ ‘ಸಾವಯವದಲ್ಲಿ ಬೆಳೆಯುವ ಮಲ್ಲಿಗೆ ಗಿಡಗಳಿಗೆ ರೋಗಗಳು ಇಲ್ಲ ಎನ್ನುವಂತಿಲ್ಲ. ಅಲ್ಲೂ ಇದೆ ಆದರೆ ಅದರ ಪ್ರಮಾಣ ಕೊಂಚ ಕಡಿಮೆ. ಜತೆಗೆ ಇಳುವರಿಗೂ ಬಹಳ ಪೆಟ್ಟಿದೆ. ಕೀಟನಾಶಕಗಳು ಬಳಸದೇ ಇದ್ದರೆ ಮಲ್ಲಿಗೆ ಕೃಷಿ ಬಿಡಬೇಕಾದೀತು’ ಎನ್ನುತ್ತಾರೆ ಅವರು. ಮಲ್ಲಿಗೆಯಲ್ಲಿ ರೋಗಗಳು ಬರಲಿ ಅಥವಾ ಬರದೇ ಇರಲಿ ಕೀಟನಾಶಕಗಳನ್ನು ತಂದು ಹಾಕದೇ ಇದ್ದರೆ ಮುಂದಿನ ವರ್ಷದಿಂದ ಕಾಯಿಲೆಗಳು ಕಟ್ಟಿಟ್ಟ ಬುತ್ತಿ ಎನ್ನುವುದು ಅವರ ಅಭಿಪ್ರಾಯ.
ಹೊಸ ಹೊಸ ರೋಗಗಳು:
ಬಂಟಕಲ್ಲಿನ ರಾಮಕೃಷ್ಣ ಶರ್ಮ ‘ನಾವು ತಂದೆಯ ಕಾಲದಿಂದಲೂ ಮಲ್ಲಿಗೆ ಕೃಷಿ ಮಾಡುತ್ತಾ ಬರುತ್ತಿದ್ದೇವೆ. ಅಂದಿನ ಕಾಲದಲ್ಲಿ ಇಳುವರಿ ಹೆಚ್ಚಿತ್ತು ಜತೆಗೆ ಕಾಯಿಲೆಗಳು ಕೂಡ ಕಡಿಮೆ ಇದ್ದವು. ಆದರೆ ಈಗ ಮಲ್ಲಿಗೆಯ ಗಿಡ ಹಳದಿ ಬಣ್ಣಕ್ಕೆ ತಿರುಗುವುದು, ಎಲೆಗಳಿಗೆ ಚುಕ್ಕೆ ರೋಗ ಕಾಣಿಸಿಕೊಳ್ಳುವುದು, ಗಿಡವೇ ಸತ್ತು ಹೋಗುವುದು, ಹಾವಸೆಯಿಂದ ಇಡೀ ಮಲ್ಲಿಗೆ ಗಿಡವೇ ತುತ್ತಾಗುವುದು ಇತ್ಯಾದಿ ಕಾಯಿಲೆಗಳಿಗೆ ಪರಿಹಾರ ನೀಡಲು ಇಂದಿನ ವರೆಗೂ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಬೆಳೆಗಾರರು ಇಂತಹ ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಾರೆ’ ಎನ್ನುತ್ತಾರೆ ಅವರು.
‘ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಮಲ್ಲಿಗೆಗೆ ಬರುವ ಕಾಯಿಲೆಗಳನ್ನು ತಪಾಸಣೆ ಮಾಡಲು ಕೃಷಿ ವಿವಿಯ ವಿಜ್ಞಾನಿಗಳ ಜತೆಯಲ್ಲಿ ತಜ್ಞರನ್ನು ಕರೆಸಿಕೊಂಡಿದ್ದೇವು. ಆದರೆ ಈ ತಜ್ಞರಿಗೂ ಈ ಕಾಯಿಲೆಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಮಲ್ಲಿಗೆ ಗಿಡಗಳನ್ನು ಹಾವಸೆ ತಿಂದು ಮುಗಿಸುತ್ತದೆ. ಈ ಸಮಯದಲ್ಲಿ ಕೃಷಿಕರಿಗೆ ದಿಕ್ಕೆ ತೋಚುವುದಿಲ್ಲ. ರಾಸಾಯನಿಕ ಅಂಗಡಿಯವರು ಇಂತಹ ಮದ್ದು ಕೊಟ್ಟು ನೋಡಿ ಎಂದು ಬೆಳೆಗಾರರಿಗೆ ಸಲಹೆ ಕೊಡುತ್ತಾರೆ ಇಂತಹ ಉದಾಹರಣೆಗಳೇ ಬಹಳಷ್ಟು ಶಂಕರಪುರಂನಲ್ಲಿ ಕಾಣಿಸಿಕೊಳ್ಳುತ್ತಿದೆ ’ಎನ್ನುತ್ತಾರೆ ಅವರು.
ಕೃಷಿಗೂ,ಕೃಷಿಕರಿಗೂ ತೊಂದ್ರೆ:
ಕೃಷಿ ಪತ್ರಕರ್ತ ನಾ.ಕಾರಂತ ಪೆರಾಜೆ ‘ಕೀಟನಾಶಕ ಹಾಗೂ ರಾಸಾಯನಿಕಗಳ ಪ್ರಯೋಗದಿಂದ ಕೃಷಿ ಭೂಮಿಯ ಜತೆಗೆ ಕೃಷಿಕರ ಆರೋಗ್ಯ ಕೂಡ ಹದಗೆಡುತ್ತದೆ. ಯಾವ ಕೀಟನಾಶಕಗಳು ಯಾವಾಗ ಏನೂ ಮಾಡುತ್ತದೆ ಎನ್ನುವಂತಿಲ್ಲ. ಅದೆಲ್ಲವೂ ಲಾಂಗ್ ಟೈಮ್ ಎಫೆಕ್ಟ್ ಎನ್ನುವುದು ಮಾತ್ರ ನಿಜ. ಕೆಲವು ಕೀಟನಾಶಕಗಳು ಅವುಗಳ ಬಳಕೆಯ ಸಮಯದಲ್ಲಿಯೇ ತನ್ನ ಪ್ರಭಾವವನ್ನು ತೋರಿಸುತ್ತದೆ. ಕೀಟನಾಶಕಗಳನ್ನು ಸಿಂಪಡಣೆ ಮಾಡುವಾಗಲೇ ತಲೆಸುತ್ತು ಬರೋದು ಒಂದು ರೀತಿಯ ಎಫೆಕ್ಟ್ . ಕೆಲವು ವರ್ಷಗಳ ನಂತರ ಕೃಷಿಕರಿಗೆ ಬೇರೆ ರೀತಿಯ ಕಾಯಿಲೆಗಳು ಮುತ್ತಿಡುವ ಚಾನ್ಸ್ ಬಹಳಷ್ಟಿದೆ. ಇದೆಲ್ಲವೂ ಅಧ್ಯಯನದಿಂದ ಮಾತ್ರ ಸಾಧ್ಯ ’ಎನ್ನುತ್ತಾರೆ ಅವರು.
ಮಲ್ಲಿಗೆ ಬೆಳೆಗಾರ ಗೊಂದಲಕ್ಕೆ ಸಿಲುಕಿಕೊಂಡಿರುವುದು ನಿಜ. ರಾಸಾಯನಿಕ ವಸ್ತುಗಳಿಗೆ ಸಾಥ್ ಕೊಡಬೇಕಾ ಅಥವಾ ಸಾವಯವದತ್ತ ಮುಖ ಮಾಡಬೇಕಾ..? ಎಂಬ ಚಿಂತೆಯಲ್ಲಿ ಮುಳುಗಿ ಹೋಗಿದ್ದಾನೆ. ರಾಸಾಯನಿಕದ ಹಾದಿ ಮಲ್ಲಿಗೆ ಬೆಳೆಗಾರನನ್ನು ತಿರುಗಿ ಬರಲಾಗದಂತೆ ಮಾಡಿದೆ ಎನ್ನುವುದು ಶಂಕರಪುರ ಮಲ್ಲಿಗೆ ಊರನ್ನು ನೋಡಿದವರಿಗೆ ಅನ್ನಿಸದೇ ಇರಲಾರದು.

( ೨೦೧೦-೨೦೧೧ರ ಸಾಲಿನ ‘ಕಡಂದಲೆ ಪ್ರಶಸ್ತಿ ’ಪಡೆದುಕೊಂಡ ಲೇಖನವಿದು. ಈ ಲೇಖನ ವಿಜಯ ಕರ್ನಾಟಕದ ೨ನೇ ಮುಖಪುಟದಲ್ಲಿ ಈ ಹಿಂದೆ ಪ್ರಕಟಗೊಂಡಿತ್ತು. )

No comments:

Post a Comment