ಚಿತ್ರ ವಿಮರ್ಶೆ
ಚೌಕಟ್ಟಿನಲ್ಲಿ ನಿಲ್ಲದ ಕತೆ, ಪದೇ ಪದೇ ಕಾಣಿಸಿಕೊಳ್ಳುವ ಕ್ಲೋಸಫ್ ಶಾಟ್‌ಗಳು,ಅನಗತ್ಯವಾಗಿ ತುರುಕಿಸಲಾಗಿರುವ ಹಾಡು ಚಿತ್ರದ ಓಡಾಟಕ್ಕೆ ಅಲ್ಲಲ್ಲಿ ಬ್ರೇಕ್‌ಕೊಟ್ಟು ಪ್ರೇಕ್ಷಕನಿಗೆ ವಿಚಿತ್ರ ಸಂಕಟಕ್ಕೆ ದೂಡುವ ಉಜ್ವಾಡು ಕೊಂಕಣಿ ಪ್ರೇಕ್ಷಕರ ನಿರೀಕ್ಷಿತ ಮಟ್ಟವನ್ನು ತಲುಪಲೇ ಇಲ್ಲ. ಕಳೆದ ೩೫ ವರ್ಷಗಳಿಂದ ಜಿಎಸ್‌ಬಿ ಕೊಂಕಣಿ ಸಮುದಾಯದಲ್ಲಿ ಚಿತ್ರಗಳಿಲ್ಲದೇ ಬರದ ಪರಿಸ್ಥಿತಿಯಲ್ಲಿ ನೀರಿನ ಒರತೆಯಂತೆ ಬಂದು ನಿಂತ ಉಜ್ವಾಡು ಪ್ರೇಕ್ಷಕರ ಮುಂದೆ ಬರೀ ಡಾಕ್ಯುಮೆಂಟರಿ ಚಿತ್ರದಂತೆ ಭಾಸವಾಗುತ್ತಿದೆ.
ಉಜ್ವಾಡು(ಬೆಳಕು) ಎನ್ನುವ ಆಶ್ರಮದ ಕತೆಯ ಜತೆಯಲ್ಲಿ ಥಳಕು ಹಾಕುವ ಜಿಎಸ್‌ಬಿ ಸಮುದಾಯದ ಸಂಸ್ಕೃತಿ, ಆಚಾರ- ವಿಚಾರ, ಬಾಳಿಗರ ಹೋಟೆಲ್, ಹೋಳಿ ಹಬ್ಬವನ್ನು ಅಲ್ಲಲ್ಲಿ ತುರುಕಿಸಲಾದರೂ ಎಲ್ಲವನ್ನು ಸಮರ್ಥವಾಗಿ ಎಳೆದುಕೊಂಡು ಹೋಗಲು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಬಹುತೇಕವಾಗಿ ವಿಫಲವಾಗಿದ್ದಾರೆ. ಚಿತ್ರದಲ್ಲಿ ಘಟಾನುಘಟಿ ನಟ- ನಟಿಯರು, ತಂತ್ರಜ್ಞರು ಇದ್ದರೂ ಸಮರ್ಥವಾಗಿ ಚಿನ್ನಾ ಬಳಸಿಕೊಳ್ಳಲೇ ಇಲ್ಲ ಎನ್ನುತ್ತದೆ ಉಜ್ವಾಡು ಚಿತ್ರ.
ಮಲಯಾಳಂನ ಖ್ಯಾತ ಛಾಯಾಗ್ರಾಹಕ ಉತ್ಪಲ್ ನಾಯನಾರ್ ಅವರ ಕ್ಯಾಮೆರಾವರ್ಕ್ ಚಿತ್ರದಲ್ಲಿ ಸಾಕಷ್ಟು ವರ್ಕ್ ಔಟ್ ಆಗಿದೆ ಎಂದುಕೊಳ್ಳುವ ಮೊದಲೇ ಚಿತ್ರದಲ್ಲಿ ತುಂಬಾ ಕ್ಲೋಸಫ್ ಶಾಟ್‌ಗಳು ಓಡಾಡಿಕೊಂಡು ಛಾಯಾಗ್ರಾಹಕನ ಕೆಲಸವನ್ನು ಡಲ್ ಮಾಡುತ್ತದೆ. ಜಯಂತ್ ಕಾಯ್ಕಿಣಿಯ ‘ರಂಗ ಪಂಚಮಿ’ ಹಾಡು ಚಿತ್ರದಲ್ಲಿ ಕೇಳಲು ಕೊಂಚ ಇಂಪು ಅನ್ನಿಸುತ್ತದೆ. ಸಂಗೀತ ನಿರ್ದೇಶಕ ವಿ. ಮನೋಹರ್ ಕೆಲಸ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಚಿತ್ರಕ್ಕೆ ಕತೆ ಜೀವಾಳ ಎಂದುಕೊಂಡು ಬಂದ ಪ್ರೇಕ್ಷಕರಿಗೆ ಏನೂ ಸಿಗದಿದ್ದರೂ ಗಜ್ಜು( ಗಜಾನನ) ಎನ್ನುವ ಬಾಲಪ್ರತಿಭೆ ಬಹಳ ಹತ್ತಿರವಾಗುತ್ತದೆ. ಹಿರಿಯ ಚಿತ್ರ ನಟ ಸದಾಶಿವ್ ಬ್ರಹ್ಮಾವರ್ , ಉಮಾಶ್ರೀ, ನೀತು ತಕ್ಕ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿರುತೆರೆ ನಟ ಶಿವಧ್ವಜ್ ನಟನೆಯನ್ನು ಮರೆತು ಕೂತವರಂತೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾಸರಗೋಡು ಚಿನ್ನಾ ಚಿತ್ರವನ್ನು ಇನ್ನಷ್ಟೂ ಉತ್ತಮವಾಗಿ ತೆರೆಗೆ ತರಬಹುದಿತ್ತು ಎನ್ನುವ ಅಶಯ ಭಾವನೆ ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನಿಗೆ ಕಾಡದೇ ಇರದು. ಆದರೂ ಕೊಂಕಣಿ ಚಿತ್ರ ಬೆಳೆಯಬೇಕು ಎನ್ನುವ ಉದ್ದೇಶದಿಂದ ಮಾತ್ರ ಥಿಯೇಟರ್‌ಗೆ ಹೋದರೆ ಚಿತ್ರ ಸೂಪರ್ ಕ್ಲಾಸ್ ಎನ್ನುವುದರಲ್ಲಿ ಯಾವುದೇ ಡೌಟ್ ಉಳಿಯೋಲ್ಲ.
No comments:
Post a Comment