ಪಂಚಭಾಷೆ ತಾರೆ ಸುಮನ್ ಈ ವಯಸ್ಸಿನಲ್ಲೂ ಲವ್ ಮಾಡಲು ಹೊರಟ್ಟಿದ್ದಾರೆ. ಸುಮನ್‌ಗೆ ಮದುವೆಯಾಗಿದೆ.. ಮುದ್ದಾದ ಮಗಳಿದ್ದಾರೆ. ಆದರೂ ಲವ್ವಾ.. ಮಾರಾಯ್ರೆ ಅಂತೀರಾ..? ಬನ್ನಿ ಸುಮನ್ ಹಾಡು- ಪಾಡು ಇಲ್ಲಿ ಕೇಳಿಬಿಡಿ.
ಪ್ರೀತಿ ಚಿಗೋರೋದು ಗೊತ್ತಿಲ್ಲ. ಮುರುಟಿ ಬೀಳೋದು ಗೊತ್ತಿಲ್ಲ. ವಿಶೇಷ ಅಂದ್ರೆ ಪ್ರೀತಿಗೆ ಯಾವುದೇ ಆರ್ಹತೆ ಎನ್ನುವ ತಡೆಗೋಡೆಗಳಿಲ್ಲ. ಶ್ರೀಮಂತ-ಬಡವ, ವಯಸ್ಸು- ಜಾತಿ ಯಾವುದು ಕೂಡ ಪ್ರೀತಿ ಮಾಡುವವನ ಕಣ್ಣಿಗೆ ಬೀಳೋದಿಲ್ಲ. ಅಲ್ಲಿ ಕಾಣೋದು ಬರೀ ಪ್ರೀತಿ. ಈ ಪ್ರೀತಿಯ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ ಅವರೇ ಪಂಚಭಾಷೆ ತಾರೆ ಸುಮನ್ ತಲ್ವಾರ್.
ಅಂದಹಾಗೆ ಸುಮನ್ ಈಸ್ ಎ ಜೆಮ್ ಪರ್ಸನ್ ಎನ್ನುವ ವಿಚಾರ ಇಡೀ ಭಾರತೀಯ ಸಿನ್ಮಾ ಇಂಡಸ್ಟ್ರಿಗೇ ಗೊತ್ತಿದೆ. ಸುಮನ್ ಶ್ರೀಷಾ ಅವರನ್ನು ಮದುವೆಯಾಗಿ ಮುದ್ದಾದ ಮಗಳು ಅಖಿಲಾಚಾ ಪ್ರತ್ಯುಶಾ ಅವರೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಈ ಟೈಮ್‌ನಲ್ಲಿ ಲವ್ವಿ-ಡವ್ವಿನ ಅಂತಾ ಪ್ರಶ್ನೆ ಮಾತ್ರ ಎಸೆಯಲು ಹೋಗಬೇಡಿ. ಸುಮನ್ ತಲ್ವಾರ್ ಲವ್‌ನಲ್ಲಿ ಬೀಳುತ್ತಾರೆ ನಿಜ. ಆದರೆ ಅದು ರಿಯಲ್ ಬದುಕಿನಲ್ಲಿ ಅಲ್ಲ. ರೀಲ್ ಬದುಕಿನಲ್ಲಿ ಸುಮನ್ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಎದ್ದು ಕೂತಿದ್ದಾರೆ. ೫೦ರ ಹರೆಯದಲ್ಲಿ ಸುಮನ್ ಸ್ಪುರದ್ರೂಪಿ ನಟ ಮತ್ತೆ ಹೀರೋವಾಗಿ ರೀಲಾಂಜ್ ಆಗುತ್ತಿದ್ದಾರೆ.
ತೆಲುಗಿನ ಇನ್ನೂ ಹೆಸರಿಟ್ಟಿಲ್ಲದ ಚಿತ್ರದಲ್ಲಿ ಸುಮನ್ ಪಕ್ಕಾ ಲವರ್‌ಬಾಯ್ ಆಗಲು ಹೊರಟ್ಟಿದ್ದಾರೆ. ಇದು ಸುಮನ್ ತಲ್ವಾರ್ ವಿಲನ್ ಗೆಟಪ್‌ನಿಂದ ಹೀರೋ ಗೆಟಪ್‌ಗೆ ಶಿಪ್ಟ್ ಆಗುತ್ತಿರುವ ಚಿತ್ರ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಚಿತ್ರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿ ಹೊಸ ರೆಕಾರ್ಡ್ ಬರೆಯಬಹುದಾದ ಚಿತ್ರವಂತೆ. ಇಲ್ಲಿ ಸುಮನ್ ಒಬ್ಬರೇ ಪುರುಷ. ಉಳಿದ ಎಲ್ಲ ಸ್ಟಾರ್ ಕಾಸ್ಟ್‌ಗಳು ಮಹಿಳಾ ಮಣಿಗಳು. ಅದು ನಿರ್ದೇಶಕರಿಂದ ಹಿಡಿದು ಕಟ್ಟಕಡೆಯ ಕಾಸ್ಟ್ಯೂಮ್ ಡಿಸೈನರ್ ವರೆಗೂ ಮಹಿಳೆಯರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಮೊದಲು ತಮಿಳು ಸಿನ್ಮಾದಲ್ಲೊಂದು ನಿರ್ದೇಶಕಿ ರೇವತಿ ಇಂತಹ ಪ್ರಯತ್ನ ಮಾಡಿದ್ದರು. ಅಲ್ಲಿ ಯಾರು ಕೂಡ ಪುರುಷರು ಇರಲಿಲ್ಲ. ಆದರೆ ತೆಲುಗಿನ ಈ ಚಿತ್ರದಲ್ಲಿ ಸುಮನ್ ಇದ್ದಾರೆ. ಈಗ ಈ ಚಿತ್ರ ಕೂಡ ರೆಕಾರ್ಡ್ ಅಬೇಲ್ ಚಿತ್ರವಾಗಲಿದೆ ಎಂಬ ಮಾತು ಬಿಸಿಲು ನಾಡಿನ ಆಂಧ್ರದಿಂದ ಹೊರ ಬಂದ ಮಾಹಿತಿ.ಕಳೆದ ವಾರವಷ್ಟೇ ಚಿತ್ರಕ್ಕೆ ಹೈದರಾಬಾದ್‌ನ ಪ್ರಖ್ಯಾತ ರಾಮನಾಯ್ಡು ಸ್ಟುಡಿಯೋದಲ್ಲಿ ಮುಹೂರ್ತ ಮಾಡಲಾಗಿದೆ.
ಖುದ್ದು ರಾಮನಾಯ್ಡು ಬಂದು ಕ್ಯಾಮೆರಾ ಚಾಲು ಮಾಡಿದ್ದರು. ಆಂಧ್ರದ ನಾನಾ ಕಡೆ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರಕ್ಕೆ ತೆಲುಗು ಪ್ರೇಕ್ಷಕರೇ ಹೆಸರು ಸೂಚಿಸಿಬಿಡಿ ಎಂದು ಆಂಧ್ರದ ಬಹುತೇಕ ಮಾಧ್ಯಮಗಳಲ್ಲಿ ಚಿತ್ರ ತಂಡ ಜಾಹೀರಾತು ನೀಡುತ್ತಿದೆ. ವರ್ಷದ ಕೊನೆಯಲ್ಲಿ ಚಿತ್ರವಂತೂ ತೆರೆಗೆ ಬರೋದು ನೂರಕ್ಕೆ ನೂರರಷ್ಟು ಖಚಿತ ಎನ್ನೋದು ಚಿತ್ರ ತಂಡದ ಭರವಸೆಯ ಮಾತು.
ಸುಮನ್ ತಲ್ವಾರ್ ಹೇಳುವಂತೆ: ಚಿತ್ರದಲ್ಲಿ ಎರಡನೇ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದರಲ್ಲೂ ೫೦ರ ಹರೆಯದಲ್ಲಿ ಲವರ್ ಬಾಯ್ ಪಾತ್ರ. ಪ್ರೀತಿಗೆ ವಯಸ್ಸಿನ ಬ್ಯಾರಿಯರ್ ಇರೋದಿಲ್ಲ ಎಂದುಹೇಳಿಕೊಳ್ಳುವ ಈ ಚಿತ್ರ ಯುವಜನತೆಗೆ ಒಂದು ಹೊಸ ಸಂದೇಶ ಕೊಡುತ್ತದೆ. ನನ್ನ ಪಾಳಿಗೆ ಇದು ಸೆಕೆಂಡ್ ಚಾನ್ಸ್. ಮೊದಲು ತಮಿಳಿನ ‘ಶಿವಾಜಿ’ ಚಿತ್ರದಲ್ಲಿ ಸಿಕ್ಕಿದ ವಿಲನ್ ಪಾತ್ರ ಬಣ್ಣದ ಬದುಕಿಗೆ ಹೊಸ ಟರ್ನಿಂಗ್ ಪಾಯಿಂಟ್ ಕೊಟ್ಟಿತು. ಈ ಚಿತ್ರ ಮತ್ತೊಂದು ಟರ್ನಿಂಗ್ ಪಾಯಿಂಟ್ ಕೊಡುತ್ತದೆ ಎನ್ನೋದು ಅವರ ಭರವಸೆಯ ಮಾತು.
ಅಂದಹಾಗೆ ಸುಮನ್ ತಲ್ವಾರ್ ಈಗಾಗಲೇ ತೆಲುಗಿನಲ್ಲಿ ನೂರಕ್ಕೂ ಅಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ಇಂಗ್ಲೀಷ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದ ಸುಮನ್ ತಮ್ಮ ವೃತ್ತಿ ಬದುಕಿನ ಸೆಕೆಂಡ್ ಹಾಫ್‌ನಲ್ಲಿ ವಿಲನ್ ಪಾತ್ರಕ್ಕೆ ಒಗ್ಗಿಕೊಂಡರು. ಈಗ ತಮ್ಮ ಮೂರನೇ ಅವತಾರದಲ್ಲಿ ನಾಯಕರಾಗುತ್ತಿದ್ದಾರೆ.
ತೆಲುಗಿನಲ್ಲಿ ಸೂಪರ್‌ಸ್ಟಾರ್ ಪಟ್ಟಕ್ಕೆ ಒಂದು ಕಾಲದಲ್ಲಿ ಚಿರಂಜೀವಿಯ ಜತೆಯಲ್ಲಿ ತೊಡೆತಟ್ಟಿ ಹೋರಾಡಿದ ಸುಮನ್ ಮಂಗಳೂರಿನ ಮೂಲ್ಕಿ-ಹೆಜಮಾಡಿನವರು. ವರ್ಷದಲ್ಲಿ ಒಂದರೆಡು ಬಾರಿ ತಮ್ಮ ಊರಿಗೆ ಬಂದು ನಾಗ ದೇವರಿಗೆ ಕೈ ಮುಗಿದು ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ಹೆಚ್ಚೆಚ್ಚು ನಟಿಸಬೇಕೆನ್ನುವ ಮಹಾದಾಸೆ ಹೊತ್ತುಕೊಂಡವರು. ಆದರೆ ಕನ್ನಡ ಸಿನ್ಮಾ ಇಂಡಸ್ಟ್ರಿಯವರು ಮಾತ್ರ ಅವರನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ಇದು ಮಹಾ ದುರಂತವೇ ಸರಿ ಅಲ್ವಾ..?