Thursday, April 3, 2014

ಸಿಂಗಂ-೨ನಲ್ಲಿ ಕುಡ್ಲದ ದಯಾ

* ಸ್ಟೀವನ್ ರೇಗೊ, ದಾರಂದಕುಕ್ಕು ಅದು ಒಂದೇ ಹೊಡೆತ. ಅಪರಾಧಿಗಳು ತಮಗೆ ಗೊತ್ತಿಲ್ಲದ, ಗೊತ್ತಿರುವ ವಿಚಾರ ಒಂದೇ ಬಾರಿಗೆ ಕಕ್ಕುತ್ತಾರೆ.ಇದು ಸಿಐಡಿ ಸೀರಿಯಲ್‌ನ ಸೀನಿಯರ್ ಇನ್ಸ್‌ಸ್ಪೆಕ್ಟರ್ ದಯಾನಂದ ಶೆಟ್ಟಿ ಯಾನೆ ದಯಾ ಅವರ ಕುರಿತಾದ ಮಾತು. ಭಾರತೀಯ ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿದ ಟಿವಿ ಸರಣಿ ಇದ್ದರೆ ಅದು ಸಿಐಡಿ ಮಾತ್ರ. ಹಿಂದಿಯ ಸೋನಿ ವಾಹಿನಿಯಲ್ಲಿ ಸಿಐಡಿ ಟಿವಿ ಸರಣಿ ೧೭ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಸಾಗುತ್ತಿದೆ. ಸಿಐಡಿಯನ್ನು ಬಿ.ಪಿ. ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಟಿವಿ ಸರಣಿ ಗಿನ್ನೆಸ್ ರೆಕಾರ್ಡ್ ಬುಕ್‌ನಲ್ಲಿ ಜಾಗ ಪಡೆದಿದೆ. ೨೦೦೭ರಲ್ಲಿ ಹಿಂದಿಯ ‘ಜಾನಿ ಗದ್ಧಾರ್’ ಹಾಗೂ ೨೦೦೯ ‘ರನ್‌ವೇ’ ಚಿತ್ರದಲ್ಲಿ ದಯಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೊಂದು ಸಲ ಪೊಲೀಸ್ ಅಧಿಕಾರಿಯಾಗಿ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ. ಹಿಂದಿಯಲ್ಲಿ ಬರುತ್ತಿರುವ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ-೨ನಲ್ಲಿ ದಯಾ ಪೊಲೀಸ್ ಅಧಿಕಾರಿ. ಖಾಸಗಿ ವಾಹಿನಿಯ ರಿಯಾಲಿಟಿ ಶೋ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ‘ಕತ್ರೋಂಕಾ ಕಿಲಾಡಿಯಲ್ಲಿ’ ದಯಾ ಅವರ ಸಾಹಸಿ ಪ್ರವೃತ್ತಿಯನ್ನು ಕಂಡು ನಿರ್ದೇಶಕ ರೋಹಿತ್ ಶೆಟ್ಟಿ ದಂಗಾಗಿ ಹೋಗಿದ್ದರು. ತನ್ನ ಮುಂದಿನ ಚಿತ್ರದಲ್ಲಿ ದಯಾ ಅವರಿಗೆ ಪಾತ್ರವೊಂದು ಕೊಡಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದರು ಎಂದು ಚಿತ್ರದ ಆಪ್ತ ಮೂಲಗಳು ಹೇಳುತ್ತದೆ. ಈ ವರ್ಷದ ಮಧ್ಯಭಾಗದಲ್ಲಿ ಸಿಂಗಂ-೨ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಮೂಲಕ ದಯಾ ದೊಡ್ಡ ತೆರೆಯಲ್ಲಿ ದೊಡ್ಡ ಸುದ್ದಿ ಮಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅದಕ್ಕೂ ಮುಖ್ಯವಾಗಿ ಸಿಂಗಂ-೨ನಲ್ಲಿ ದಯಾ ನಟನೆ ಕ್ಲಿಕ್ ಆದರೆ ಮತ್ತಷ್ಟೂ ಆಫರ್‌ಗಳು ಅವರನ್ನು ಹುಡುಕಿಕೊಂಡು ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ. ಕುಡ್ಲದ ಹುಡುಗ ದಯಾನಂದ: ದಯಾ(ದಯಾನಂದ ಶೆಟ್ಟಿ) ಕಿನ್ನಿಗೋಳಿಯ ಶಿಮಂತ್ತೂರು ಮಜಲುಗುತ್ತು ಮನೆತನದ ಹುಡುಗ. ಶಾಟ್‌ಪುಟ್, ಡಿಸ್ಕಸ್‌ನ ರಾಷ್ಟ್ರೀಯ ಪ್ರತಿಭೆ. ಕ್ರೀಡೆಯಲ್ಲಿ ತೊಡಗಿದ್ದಾಗ ಆದ ಅಪಘಾತ ಕ್ರೀಡಾಬದುಕಿನ ಫುಲ್‌ಸ್ಟಾಪ್‌ಗೆ ಕಾರಣವಾಯಿತು. ದಯಾ ಹುಟ್ಟಿದ್ದು ಕಿನ್ನಿಗೋಳಿಯಲ್ಲದರೂ ಬೆಳೆದದ್ದು ಮುಂಬಯಿಯಲ್ಲಿ. ಪ್ರಾಥಮಿಕ ಶಿಕ್ಷಣ ಹಾಗೂ ಬಿಕಾಂ ಪದವಿ ಎಲ್ಲವೂ ಮರಾಠಿ ಶಾಲೆಗಳಲ್ಲಿ.
ಸಿಐಡಿಯಲ್ಲಿ ಮಿಂಚಿದ ಒಂದು ಕತೆ: ಪುತ್ರನ ವಿದ್ಯಾಭ್ಯಾಸ ಬಳಿಕ ತಂದೆ ಚಂದ್ರಶೇಖರ್ ಕಾಂದೀವಿಲಿಯಲ್ಲಿ ‘ಸಂಧ್ಯಾ’ ಹೋಟೆಲ್ ತೆರೆದರು. ಈ ಸಂದರ್ಭ ಚಂದ್ರಶೇಖರ್ ಶೆಟ್ಟಿ ನಿಧನರಾದರು. ಹೋಟೆಲ್ ಗಲ್ಲಾ ಪೆಟ್ಟಿಗೆ ಮೇಲೆ ದಯಾನಂದ ಶೆಟ್ಟಿ ವಿರಾಜಮಾನರಾದರು. ಇದೇ ಸಮಯ ಸೋನಿ ಚಾನೆಲ್‌ನ ಸಿಐಡಿ ಸೀರಿಯಲ್‌ಗಾಗಿ ಸಮರ್ಥ ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಅಡಿಷನ್ ನಡೆಯಿತು. ೧೯೯೮ ಜ.೧ರಂದು ದೇಶ, ವಿದೇಶದ ಲಕ್ಷಾಂತರ ಮಂದಿಯ ಅಡಿಷನ್ ನಡುವೆ ದಯಾ ಎಂಬ ‘ಮಸಲ್‌ಮ್ಯಾನ್’ ಕೂಡ ಭಾಗವಹಿಸಿದರು. ಜಡ್ಜ್‌ಗಳು ದಯಾರ ಪರ್ಸನಾಲಿಟಿ, ಡೈಲಾಗ್ ಡೆಲಿವರಿಗೆ ದಂಗಾಗಿದ್ದರು. ‘ಮೊದಲ ಸಲವೇ ಜಡ್ಜ್‌ಗಳಿಂದ ‘ಯೂ ಆರ್ ಸೆಲೆಕ್ಟ್ ಫಾರ್ ಸಿಐಡಿ ಟೀಮ್’ ಎಂದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನಾನು ಸಿಐಡಿ ಸೀರಿಯಲ್‌ನ್ನು ಬಹಳ ಸೀರಿಯಸ್ಸಾಗಿ ನೋಡುತ್ತಿದ್ದೆ. ಆದರೆ ಇದೇ ಸೀರಿಯಲ್‌ನಲ್ಲಿ ನಟಿಸುವ ಭಾಗ್ಯ ಬರುತ್ತದೆ ಎಂಬ ಕನಸು ಮಾತ್ರ ಎಂದಿಗೂ ಇರಲಿಲ್ಲ.’ಎನ್ನುತ್ತಾರೆ ದಯಾನಂದ ಶೆಟ್ಟಿ. ಅಂದಿನಿಂದ ಸಿಐಡಿಯಲ್ಲಿ ಫುಲ್‌ಟೈಮ್ ಸೀನಿಯರ್ ಇನ್‌ಸ್ಪೆಕ್ಟರ್ ಆಗಿ ದಯಾ ಮಿಂಚುತ್ತಿದ್ದಾರೆ. ಕುಡ್ಲ ಎಂದರೆ ಪಂಚಪ್ರಾಣ ಕುಡ್ಲ ಎಂದರೆ ದಯಾರಿಗೆ ಪಂಚಪ್ರಾಣ. ಅದಕ್ಕಾಗಿ ಮೂಲ್ಕಿಯಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ. ವರ್ಷದಲ್ಲಿ ಒಂದೆರಡು ವಾರ ಈ ಮನೆಯಲ್ಲಿರುತ್ತಾರೆ. ವರ್ಷಂಪ್ರತಿ ಇಲ್ಲಿ ನಡೆಯುವ ಧಾರ್ಮಿಕ ಕಾರ‍್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾಂದೀವಿಲಿಯಲ್ಲಿರುವ ಫ್ಲ್ಯಾಟ್‌ನಲ್ಲಿ ದಯಾ ಪತ್ನಿ, ಪುಟ್ಟ ಮಗಳು ವೀವಾಳೊಂದಿಗೆ ಇದ್ದಾರೆ. ಪತ್ನಿ ಸ್ಮಿತಾ ಮೂಲತಃ ಮಂಗಳೂರಿನ ಹಂಪನಕಟ್ಟೆಯವರು. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಯಾರ ತಂಗಿಯರಾದ ಸಂಧ್ಯಾ, ನಯನಾ ಮುಂಬಯಿಯಲ್ಲಿಯೇ ವಿವಾಹವಾಗಿ ನೆಲೆನಿಂತಿದ್ದಾರೆ.

No comments:

Post a Comment