Friday, April 11, 2014

ಕನ್ನಡಕ್ಕೆ ಬಂದ್ಳೂ ಡಿಯೋಲ್ ಕುಡಿ

*ಸ್ಟೀವನ್ ರೇಗೊ, ದಾರಂದಕುಕ್ಕು ದಕ್ಷಿಣ ಭಾರತದ ಸಿನಿಮಾ ರಂಗನೇ ಹಾಗೇ ಇಲ್ಲಿ ಯಾರು ಬಂದರೂ ಕೂಡ ಪ್ರೀತಿಯಿಂದ ಸ್ವೀಕಾರ ಮಾಡುವ ಸಿನಿ ಪ್ರಿಯರಿದ್ದಾರೆ. ಉತ್ತರ ಭಾರತ ಹಾಗೂ ಬಾಲಿವುಡ್ ಅಂಗಳದಿಂದ ಬಂದವರಿಗಂತೂ ಮೊದಲ ಮಣೆ ಸಿಕ್ಕೇ ಸಿಗುತ್ತದೆ. ಅದರಲ್ಲೂ ಸ್ಯಾಂಡಲ್‌ವುಡ್ ಸಿನಿಮಾವಂತೂ ಒಂದು ಹೆಜ್ಜೆ ಮುಂದೆನೇ ನಿಂತಿದೆ. ಇಲ್ಲಿ ಉತ್ತರ ಭಾರತದಿಂದ ಬಂದವರಂತೂ ನೆಲೆ ನಿಂತು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಗ್ಗಿಕೊಂಡವರು ಜಾಸ್ತಿ.ಉತ್ತರ ಭಾರತದಿಂದ ಬಂದ ಪೂಜಾ ಗಾಂಧಿ ನಿರ್ದೇಶಕ ಯೋಗರಾಜ್ ಭಟ್ಟರ ‘ಮುಂಗಾರು ಮಳೆ’ ಸಿನಿಮಾದ ಮೂಲಕ ಬಂದವರು ಈಗಲೂ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿಯೇ ಬದುಕು ಕಾಣುತ್ತಿದ್ದಾರೆ. ಇಂತಹ ಹತ್ತಾರು ಉದಾಹರಣೆಗಳು ಕನ್ನಡ ಸಿನಿಮಾ ಲೋಕದಲ್ಲಿ ಬೇಕಾದಷ್ಟು ಕಾಣಸಿಗುತ್ತದೆ. ಈಗ ಇಂತಹವರ ಸಾಲಿನಲ್ಲಿ ನಟಿ ಈಶಾ ಡಿಯೋಲ್ ಸೇರಿಕೊಂಡಿದ್ದಾರೆ.
ಹೌದು. ಬಾಲಿವುಡ್ ಬೆಡಗಿ ಈಶಾ ಡಿಯೋಲ್ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಶನ್ ನಿರ್ದೇಶನ ಮಾಡಿದ ‘ಕೇರಾಫ್ ಫುಟ್‌ಪಾತ್’ ಚಿತ್ರದ ಇನ್ನೊಂದು ಸಿಕ್ವೇಲ್ ಸೆಟ್ಟೇರುತ್ತಿದೆ. ಅಂದಹಾಗೆ ‘ಕೇರಾಫ್ ಫುಟ್ ಪಾತ್-೨’ನಲ್ಲಿ ಈಶಾ ಡಿಯೋಲ್ ನಟಿಸುವುದು ಬಹುತೇಕ ಖಚಿತಗೊಂಡಿದೆ. ಈಶಾ ಕುರಿತು ಚಿತ್ರದ ನಿರ್ದೇಶಕ ಕಿಶನ್ ಹೇಳುವ ಮಾತು ಹೀಗಿದೆ: ಕೇರಾಫ್ ಫುಟ್‌ಪಾತ್-೨ ಚಿತ್ರದಲ್ಲಿ ಬಾಲಿವುಡ್ ಕನಸ್ಸಿನ ಕನ್ಯೆ ಹೇಮಾ ಮಾಲಿನಿ ನಟಿಸುವುದು ಗ್ಯಾರಂಟಿಯಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಹೇಮಾ ಮಾಲಿನಿ ಬ್ಯುಸಿಯಾಗಿರುವ ಕಾರಣ ಹೇಮಾ ಮಾಲಿನಿ ಬದಲಾಗಿ ಅವರ ಪುತ್ರಿ ಈಶಾ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹೇಮಾ ಮಾಲಿನಿ ಹಾಗೂ ನಟ ಧರ್ಮೆಂದ್ರ ಈಶಾ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಏಪ್ರಿಲ್ ೧೫ರ ನಂತರ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುವ ಯೋಜನೆ ಇದೆ. ಕೇರಾಫ್ ಫುಟ್‌ಪಾತ್‌ನಲ್ಲಿ ಈಶಾ ಡಿಯೋಲ್ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕಿಶನ್ ಮಾತು. ಕಿಶನ್ ನಿರ್ದೇಶನದ ಕೇರಾಫ್ ಫುಟ್‌ಪಾತ್ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಕಾಣಿಸಿಕೊಂಡಿದ್ದರು. ‘ಕೇರಾಪ್ ಫುಟ್‌ಪಾತ್-೨’ರಲ್ಲಿ ಬಾಲಿವುಡ್‌ನ ಇನ್ನಷ್ಟೂ ನಟ- ನಟಿಯರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಾಲಿವುಡ್ ಅಂಗಳದಲ್ಲಿ ಈಶಾ ಡಿಯೋಲ್ ಹೇಳಿಕೊಳ್ಳುವಂತಹ ಬಿಗ್ ಹಿಟ್ ಚಿತ್ರಗಳನ್ನು ನೀಡಿಲ್ಲ. ಆದರೆ ಈಶಾ ನಟನೆಯಂತೂ ಬಾಲಿವುಡ್‌ನಲ್ಲಿ ಹೊಗಳಿಕೆಗೆ ಪಾತ್ರವಾಗಿರೋದು ನಿಜ. ಬಾಲಿವುಡ್ ಚಿತ್ರರಂಗದಲ್ಲಿ ಸಿಗದ ಅದೃಷ್ಟ ಸ್ಯಾಂಡಲ್‌ವುಡ್ ಇಲ್ಲದೇ ಹೋದರೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಿಗುವುದರಲ್ಲಿ ಸಂದೇಹ ಇಲ್ಲ. ಕಿಶನ್ ಕೇರಾಫ್‌ನಲ್ಲಿ ಏನಿದೆ: ಮಾಸ್ಟರ್ ಕಿಶನ್ ನಿರ್ದೇಶಿಸಿದ ‘ಕೇರಾಫ್ ಫುಟ್‌ಪಾತ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಮಕ್ಕಳ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಹೇಳಿದ್ದ ಆ ಚಿತ್ರ ಅನೇಕ ಪ್ರಶಸ್ತಿಗಳನ್ನು ಕೂಡಾ ಬಾಚಿಕೊಂಡಿತು. ಈಗ ‘ಕೇರಾಫ್ ಫುಟ್‌ಪಾತ್’ ಆ ಚಿತ್ರದ ಮುಂದುವರಿದ ಭಾಗ. ಹಾಗಂತ ಕತೆಯ ವಿಷಯದಲ್ಲಿ ಅಲ್ಲ. ಏಕೆಂದರೆ, ಅಲ್ಲಿ ಶಿಕ್ಷಣದ ಬಗ್ಗೆ ಹೇಳಿದ್ದರೆ ಇಲ್ಲಿ ಮಕ್ಕಳ ಕ್ರೈಂ ಬಗ್ಗೆ ಹೇಳಲು ಹೊರಟಿದ್ದಾರೆ. ಕಿಶನ್ ಇಲ್ಲಿ ಬಾಲಾಪರಾಧಿಗಳ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಲ್ಲಿ ಕ್ರೈಂ ಮಾಡುವ ಮಕ್ಕಳು ಮುಂದೇನಾಗುತ್ತಾರೆ, ಅವರ ಮನಸ್ಥಿತಿ ಹೇಗಿರುತ್ತದೆ. ಮೂರು ವರ್ಷ ಶಿಕ್ಷೆಯಾದ ಬಳಿಕ ಅವರು ಹೇಗಾಗುತ್ತಾರೆ ... ಹೀಗೆ ಹಲವು ಅಂಶಗಳ ಕುರಿತು ‘ಕೇರಾಫ್ ಫುಟ್‌ಪಾತ್’ನಲ್ಲಿ ಹೇಳಲಿದ್ದಾರಂತೆ ಕಿಶನ್. ಅಂದಹಾಗೆ, ಕಿಶನ್‌ಗೆ ಈ ಕಥೆಗೆ ಪ್ರೇರಣೆ ವಿದೇಶಿ ಪತ್ರಕರ್ತೆ. ತಮ್ಮ ‘ಕೇರಾಫ್ ಫುಟ್‌ಪಾತ್’ ಸಿನಿಮಾದ ಪ್ರದರ್ಶನಕ್ಕಾಗಿ ಈಜಿಪ್ಟ್‌ಗೆ ಹೋಗಿದ್ದಾಗ ಅಲ್ಲಿನ ಪತ್ರಕರ್ತೆಯೊಬ್ಬರು, ‘ಈಗ ೧೩ನೇ ವರ್ಷಕ್ಕೆ ಮಕ್ಕಳ ಕೈಯಲ್ಲಿ ಗನ್ ಇರುತ್ತೆ. ೧೪ ರಿಂದ ೧೭ ವರ್ಷದವರೆಗಿನ ಮಕ್ಕಳು ಕ್ರೈಂನಲ್ಲಿ ತೊಡಗುತ್ತಿದ್ದಾರೆ. ಈ ವಿಷಯದ ಬಗ್ಗೆ ನೀವ್ಯಾಕೆ ಸಿನಿಮಾ ಮಾಡಬಾರದು’ ಎಂದು ಕೇಳಿದರಂತೆ. ಆಗ ಕೇಳಿದ ಅವರ ಪ್ರಶ್ನೆಗೆ ಉತ್ತರವಾಗಿ ಕಿಶನ್ ಈಗ ಬಾಲಪರಾಧದ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿ ೧೪ ರಿಂದ ೧೭ ವರ್ಷದ ಮಕ್ಕಳ ಮನಸ್ಥಿತಿ, ಅವರು ಮಾಡುವ ಕ್ರೈಂ ಮತ್ತು ಅವರು ಮುಂದೆ ಯಾವ ರೀತಿ ಬೆಳೆಯುತ್ತಾರೆ ... ಇಂತಹ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಕಿಶನ್. ಕಿಶನ್ ಪ್ರಕಾರ ಇದೊಂದು ವರ್ಲ್ಡ್ ಸಿನಿಮಾ. ‘ಹರೆಯದಲ್ಲಿ ಮಾಡುವ ಕ್ರೈಂ ಮುಂದೆ ಅವರ ಇಡೀ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತೆ. ಸಮಾಜ ಕೂಡಾ ಅವರನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ನಾನು ಅನೇಕ ಕೇಸ್ ಸ್ಡಡೀಸ್ ಮೂಲಕ ಹಾಗೂ ಸಂದರ್ಶನಗಳ ಮೂಲಕ ಕಥೆಗೆ ಬೇಕಾದ ಅಂಶಗಳನ್ನು ಪಡೆದುಕೊಂಡಿದ್ದೇನೆ’ ಎಂಬುದು ಕಿಶನ್ ಮಾತು. ಅಂದಹಾಗೆ ಇದು ಹಿಂದಿ ಹಾಗೂ ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು ನೈಜ ಲೊಕೇಶನ್‌ಗಳಲ್ಲೇ ಚಿತ್ರೀಕರಣ ಮಾಡಲಿದ್ದು, ಸರ್ಕಾರದಿಂದ ಅನುಮತಿ ಕೂಡಾ ಸಿಕ್ಕಿದೆಯಂತೆ. ಚಿತ್ರದಲ್ಲಿ ಕೆಲವು ಸಚಿವರು ಕೂಡಾ ನಟಿಸುವ ಸಾಧ್ಯತೆ ಇದೆಯಂತೆ. ನಿರ್ದೇಶನದ ಜತೆಗೆ ಕಿಶನ್ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ. ಜತೆಗೆ ರಾಮ್‌ಚರಣ್ ಎಂಬವರು ಕೂಡಾ ನಟಿಸುತ್ತಿದ್ದು, ಅವೀಕಾ ಗೋರ್ ಚಿತ್ರದ ನಾಯಕಿ. ಇನ್ನು ‘ಸಲಾಂ ಬಾಂಬೆ’ಯಲ್ಲಿ ಬಾಲನಟನಾಗಿ ನಟಿಸಿದ ಶಫೀಕ್ ಸೈಯ್ಯದ್ ಇಲ್ಲಿ ಪಾನ್‌ವಾಲ ಪಾತ್ರ ಮಾಡುತ್ತಿದ್ದಾರೆ. ದೇವರಾಜ್ ಪಾಂಡೆ ‘ಕೇರಾಪ್ ಫುಟ್‌ಪಾತ್-೨’ನ ನಿರ್ಮಾಪಕರು. ಟೋಟಲಿ ಸಿನಿಮಾವಂತೂ ಕುತೂಹಲ ಕೆರಳಿಸಿದೆ.

No comments:

Post a Comment