Wednesday, March 18, 2015

ತುಳುಚಿತ್ರರಂಗದ ಟೇಲರ್ ಯುಗಾಂತ್ಯ

* ಸ್ಟೀವನ್ ರೇಗೊ,ದಾರಂದಕುಕ್ಕು ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ಪುಟ್ಟ ಟೈಲರ್ ಶಾಪ್‌ನಲ್ಲಿ ಕೂತು ಟೈಲರಿಂಗ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕ್‌ದಂ ತುಳು ರಂಗಭೂಮಿಗೆ ಬರುತ್ತಾರೆ. ಅಲ್ಲಿ ತಮ್ಮ ವಿಶೇಷ ಕತೆ, ರಂಗವೇದಿಕೆಯ ಸಜ್ಜಿಕೆಯಲ್ಲಿ ಹೊಸ ಛಾಪು ಮೂಡಿಸುತ್ತಾ ಹೋಗುತ್ತಿದ್ದಂತೆ ಸಿನಿಮಾ ರಂಗಭೂಮಿ ಅವರನ್ನು ಕೈ ಬೀಸಿ ಕರೆದುಕೊಳ್ಳುತ್ತದೆ. ಮತ್ತೆ ಇಡೀ ಸಿನಿಮಾ ರಂಗದಲ್ಲಿ ಭೀಷ್ಮರಾಗಿ ಕಾಣಿಸಿಕೊಂಡು ಹೊಳೆಯುವ ನಕ್ಷತ್ರವಾಗಿ ಕಣ್ಮರೆಯಾಗುತ್ತಾರೆ. ಇದು ಕೆ.ಎನ್. ಟೇಲರ್ ಎನ್ನುವ ಹಿರಿಯ ತುಳು ನಟನ ಕುರಿತಾದ ಪುಟ್ಟ ಮಾಹಿತಿ. ಕೆ.ಎನ್.ಟೇಲರ್ ಸಿನಿಮಾಗಳೆಂದರೆ ಪಕ್ಕಾ ಕನ್ನಡದ ಹಿರಿ ನಟ ರಾಜ್‌ಕುಮಾರ್ ಅವರನ್ನು ಬದಿಗಿಟ್ಟುಕೊಂಡು ನೋಡಿದ ಅನುಭವ ಸಿನಿಮಾ ಪ್ರೇಕ್ಷಕನಿಗೆ ಆಗಿ ಬಿಡುತ್ತಿತ್ತು. ಸೇಮ್ ಟು ಸೇಮ್ ರಾಜ್‌ಕುಮಾರ್ ಅವರ ಹಾವಭಾವಗಳನ್ನು ಟೇಲರ್ ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸುತ್ತಿದ್ದರು. ಸೂಜಿ ಮೀಸೆಯಲ್ಲಿ ತಮ್ಮ ವಿಶಿಷ್ಟ ಕ್ರಾಪ್ ಮಾಡಿದ ಕೂದಲಿನಿಂದ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವ ತಾಕತ್ತು ಟೇಲರ್‌ಗೆ ಸಿದ್ದಿಸಿತ್ತು. ವಿಶಿಷ್ಟ ಮಾದರಿಯಲ್ಲಿ ಡೈಲಾಗ್ ಡೆಲಿವರಿ ಜತೆಗೆ ಪ್ರತಿ ಚಿತ್ರದಲ್ಲೂ ಭಿನ್ನ ನಟನೆಗೆ ಒತ್ತುಕೊಡುತ್ತಾ ಸಿನಿಮಾದ ತುಂಬಾ ಅವರ ಓಡಾಟ ಸಿನಿಮಾ ನೋಡುವ ಮಂದಿಗೆ ಇಷ್ಟವಾಗಿ ಬಿಡುತ್ತಿತ್ತು ಎನ್ನುವುದು ಅವರ ಸಿನಿಮಾಗಳನ್ನು ನೋಡಿದವರ ಮಾತು. ಟೋಟಲಿ ಎಲ್ಲ ಮಾದರಿಯಲ್ಲೂ ಟೇಲರ್ ತುಳು ಸಿನಿಮಾದ ರಾಜ್‌ಕುಮಾರ್ ಅವರೇ ಆಗಿ ಹೋಗಿದ್ದರು. ರಂಗಭೂಮಿಯ ಪ್ರಯೋಗಶೀಲ: ಕೆ.ಎನ್.ಟೇಲರ್ ಆರಂಭದಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದವರು. ಅವರಿಗೆ ರಂಗಭೂಮಿಯ ನಂಟು ಹೇಗೆ ಬಂತು ಎನ್ನುವ ಕುತೂಹಲದ ಮಾತಿಗೆ ಅವರ ಗೆಳೆಯರು ಹೇಳುವುದು ಹೀಗೆ: ಟೇಲರ್ ಟೈಲರಿಂಗ್ ವೃತ್ತಿ ಮಾಡಿಕೊಳ್ಳುತ್ತಿದ್ದಾಗ ಒಂದೊಂದು ಕತೆಯನ್ನು ಅಭಿನಯಿಸುತ್ತಾ ಹೇಳುತ್ತಿದ್ದರು. ಬಂದ ಗ್ರಾಹಕರಲ್ಲೂ ಅದೇ ರೀತಿ ಮಾತನಾಡುತ್ತಾ ಮುಂದೆ ಗೆಳೆಯರು ಸಲಹೆಯ ಪಡೆದು ಗಣೇಶ ನಾಟಕ ಸಭಾವನ್ನು ಹುಟ್ಟುಹಾಕಿದರು. ಈ ಬಳಿಕ ಮುಂಬಯಿ, ಬೆಂಗಳೂರು, ಮಂಗಳೂರು ಸೇರಿದಂತೆ ಕರಾವಳಿಯ ಉದ್ದ ಅಗಲಕ್ಕೂ ಟೇಲರ್ ನಾಟಕಗಳು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಒಂದು ಪ್ರದರ್ಶನ ಕಾಣುತ್ತಿದ್ದಂತೆ ಮತ್ತೊಂದು ಪ್ರದರ್ಶನಕ್ಕೆ ಅಲ್ಲಿಯೇ ಪ್ರೇಕ್ಷಕರು ದುಂಬಾಲು ಬೀಳುತ್ತಿದ್ದರು. ಹೀಗೆ ಅವರ ನಾಟಕಗಳು ಬಹಳ ಜನಪ್ರಿಯತೆಯ ಜತೆಗೆ ಸಿನಿಮಾವಾಗಿ ತೆರೆಗೆ ಬಂತು. ಅಂದಹಾಗೆ ಅವರು ತುಳು ನಾಡಿಗೆ ಅರ್ಪಿಸಿದ ಒಟ್ಟು ನಾಟಕಗಳ ಸಂಖ್ಯೆ ಹದಿನೇಳು. ‘ಬೊಂಬಾಯಿ ಕಂಡನೆ’, ‘ಪುದರ್ ಕೇನಡೆ’, ‘ಡಾ. ಶಂಕರ್’, ‘ತಮ್ಮಲೆ ಅರುವತ್ತನ ಕೋಲ’, ‘ಏರ್ ಮಲ್ತಿನ ತಪ್ಪು’, ‘ಶಾಂತಿ’, ‘ಕಲ್ಲ್‌ದ ದೇವೆರ್’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್‌ದಾಯೆ ಕಂಡೆನಿ’, ‘ಬಾಡಾಯಿದ ಬಂಗಾರ್’, ‘ಕಂಡನೆ ಬುಡೆದಿ’, ‘ಇಂದ್ರನ ಆಸ್ತಿ’, ‘ಕಲ್ಜಿಗದ ವಿಶ್ವಾಮಿತ್ರ ಮೇನಕೆ’, ‘ಏರೆನ್ಲಾ ನಂಬೊಡ್ಜಿ’, ‘ದೇವೆರ್ ಕೊರ್ಪೆರ್’, ‘ಸೈನಗಾಂಡಲಾ ಸತ್ಯ ಪನ್ಲೆ’, ‘ದಾಸುನ ಮದ್ಮೆ ’ ಮುಂತಾದ ನಾಟಕಗಳು ತುಳು ನಾಟಕರಂಗದ ಅಭ್ಯುದಯದ ಅಡಿಪಾಯವೆಂದೇ ಹೇಳಬೇಕು. ರಂಗಭೂಮಿಯ ಮೇಲೆ ಜೀವಂತ ಪ್ರಾಣಿಗಳನ್ನು ತಂದು ಪ್ರೇಕ್ಷಕರಿಗೆ ಮುದ ಕೊಡುತ್ತಿದ್ದ ಅವರ ನಾಟಕಗಳಲ್ಲಿ ಕತೆಗೆ ಬಹಳ ಒತ್ತು ನೀಡುತ್ತಿದ್ದರು ಎನ್ನುವುದು ಅವರ ನಾಟಕಗಳ ಅಭಿಮಾನಿಗಳು ಹೇಳುತ್ತಿರುವ ಮಾತು. ೨೦೧೩ರಲ್ಲಿ ಕೆ.ಎನ್.ಟೇಲರ್ ಮತ್ತೆ ರಂಗಭೂಮಿಗೆ ಪ್ರವೇಶ ಪಡೆಯಲು ಪ್ರಯತ್ನ ಪಟ್ಟಿದ್ದರು. ಅವರ ಬಹು ನಿರೀಕ್ಷೆ ಹುಟ್ಟುಹಾಕಿದ ನಾಟಕ ‘ಏರೆನ್ಲಾ ನಂಬೊಡ್ಚಿ ’ ಮಂಗಳೂರು ಪುರಭವನದಲ್ಲಿ ಪ್ರದರ್ಶನ ಕಂಡಿತ್ತು. ಇದು ಸಿನಿಮಾ ಮಾಡುವ ಇರಾದೆಯಿಂದ ಮಂಗಳೂರಿನ ಉದ್ಯಮಿಯೊಬ್ಬರ ಪ್ರಾಯೋಜಕತ್ವದಲ್ಲಿ ಮಾಡಲಾಗಿತ್ತು. ಆದರೆ ಕಮರ್ಷಿಯಲ್ ದುನಿಯಾಕ್ಕೆ ಈ ಕತೆ ಅಷ್ಟಾಗಿ ಒಗ್ಗಿ ಬರೋದಿಲ್ಲ ಎನ್ನುವುದಕ್ಕೆ ಸಿನಿಮಾ ಮಾಡುವ ಯೋಜನೆಗೆ ಕಲ್ಲು ಬಿತ್ತು. ಈ ಬಳಿಕ ಗಣೇಶ ನಾಟಕ ಸಭಾ ೫೫ ವರ್ಷಗಳನ್ನು ಪೂರೈಸಿದ ಖುಷಿಯಲ್ಲಿ ಮತ್ತೆ ಟೇಲರ್ ರಂಗಭೂಮಿ ಏರಿದ್ದರು. ಅಲ್ಲೂ ತಮ್ಮ ಇಷ್ಟದ ನಾಟಕವನ್ನು ಪ್ರದರ್ಶನ ಮಾಡಿ ಎಲ್ಲರಿಂದಲೂ ಭೇಷ್ ಎನ್ನಿಸಿಕೊಂಡಿದ್ದರು ಎನ್ನುತ್ತಾರೆ ಅವರ ಆಪ್ತ ವಲಯ. ಆದರೆ ಇದರ ಬಳಿಕ ತುಳುರಂಗಭೂಮಿಯ ವೇದಿಕೆ ಏರಲು ಟೇಲರ್‌ಗೆ ಆರೋಗ್ಯ ಸಾಥ್ ಕೊಟ್ಟಿರಲಿಲ್ಲ. ಪದೇ ಪದೇ ಕಾಯಿಲೆಗೆ ಗುರಿಯಾಗುತ್ತಿದ್ದ ಟೇಲರ್ ಗಣೇಶ ನಾಟಕ ಸಭಾದಿಂದ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ನಾಟಕಗಳನ್ನು ಮಾಡುತ್ತಾ ಕರಾವಳಿಯ ತುಂಬಾ ಓಡಾಟಬೇಕು ಎನ್ನುವ ಯೋಜನೆ ಇಟ್ಟುಕೊಂಡಿದ್ದರು. ತುಳುವರ ಪಾಲಿನ ರಾಜ್‌ಕುಮಾರ್: ತುಳು ಚಿತ್ರರಂಗಕ್ಕೆ ಟೇಲರ್ ಎಂಟ್ರಿ ತೀರಾ ವಿಚಿತ್ರ ತುಳು ರಂಗಭೂಮಿಯಲ್ಲಿ ಗಣೇಶ ನಾಟಕ ಸಭಾ ಕಟ್ಟಿಕೊಂಡು ನಾಟಕಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾಗ ಅವರಿಗೆ ಬಣದಣದ ಲೋಕದ ಟಚ್ ದಿಢೀರ್ ಆಗಿ ಬಂತು. ಒಂದರ ನಂತರ ಒಂದು ಚಿತ್ರಗಳನ್ನು ಮಾಡುತ್ತಾ ಪಕ್ಕಾ ತುಳು ಸಿನಿಮಾ ರಂಗದ ಭೀಷ್ಮರಾಗಿ ಕಾಣಿಸಿಕೊಂಡರು. ತುಳು ಚಿತ್ರರಂಗದಲ್ಲಿ ಬರೋಬರಿ ೯ ಸಿನಿಮಾಗಳನ್ನು ಕೊಡುವ ಮೂಲಕ ತುಳು ಚಿತ್ರರಂಗದ ಭರ್ಜರಿ ಕೊಯ್ಲಿಗೆ ಸಾಥ್ ಕೊಟ್ಟಿದ್ದರು. ‘ದಾರೆದ ಬುಡೆದಿ’, ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್ ದಾಯೇ ಕಂಡಾನಿ’ ‘ಏರ್ ಮಲ್ತಿನಾ ತಪ್ಪು’ ‘ತುಳುನಾಡ ಸಿರಿ’, ‘ಸಾವಿರೊ ಡೊರ್ತಿ ಸಾವಿತ್ರಿ’, ‘ಭಾಗ್ಯವಂತೆದಿ’ ಮುಂತಾದ ಸಿನೆಮಾಗಳು ಟೇಲರ್ ಅವರ ನಟನೆಗೆ ಸಾಕ್ಷಿಯಾಗಿತ್ತು. ಅಂದಹಾಗೆ ಅವರ ಹೆಚ್ಚಿನ ಕತೆಗಳಿಗೆ ಅವರ ನಾಟಕಗಳೇ ಬಂಡವಾಳವಾಗಿತ್ತು. ಕತೆಯ ಗಟ್ಟಿತನ ಸಿನಿಮಾದಲ್ಲೂ ಉಳಿಕೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿತ್ತು. ಒಂದರ ಹಿಂದೆ ಒಂದು ಚಿತ್ರಗಳು ಕಾಣಿಸಿಕೊಳ್ಳುತ್ತಿದ್ದಂತೆ ಟೇಲರ್ ತುಳು ಸಿನಿಮಾ ರಂಗದಲ್ಲಿ ಬೆಳೆಯುತ್ತಾ ಹೋದರು. ರಾಜ್-ಟೇಲರ್ ಕಾಂಬೀನೇಷನ್: ಡಾ.ರಾಜ್‌ಕುಮಾರ್ ಹಾಗೂ ಕೆ.ಎನ್.ಟೇಲರ್ ಇಬ್ಬರು ತುಂಬಾ ಆತ್ಮೀಯತೆಯನ್ನು ಇಟ್ಟುಕೊಂಡಿದ್ದರು. ಅಂದು ಚಿತ್ರದ ಎಲ್ಲಕ್ಕೂ ಮದ್ರಾಸ್‌ಗೆ ಹೋಗಬೇಕಿತ್ತು. ರೆಕಾರ್ಡಿಂಗ್‌ಗಾಗಿ ಕನ್ನಡ ಸಿನಿಮಾದವರು ಕೂಡ ಅಲ್ಲಿಗೆ ಬರುತ್ತಿದ್ದರು. ಇದೇ ಸಮಯದಲ್ಲಿ ಟೇಲರ್- ರಾಜ್ ಭೇಟಿ ನಡೆಯುತ್ತಿತ್ತು. ಚಿತ್ರರಂಗದ ಬಗ್ಗೆ ನಟನೆಯ ಕುರಿತು ಮಾತುಕತೆ ನಡೆಯುತ್ತಿತ್ತು. ಇದೇ ಮುಂದೆ ಹೋಗಿ ಒಂದ್ ಬಾರಿ ನಟಿ ಜಯಮಾಲಾ ಅವರನ್ನು ಕೆ.ಎನ್. ಟೇಲರ್ ಡಾ. ರಾಜ್‌ಗೆ ಪರಿಚಯ ಮಾಡಿಕೊಟ್ಟಿದ್ದರು. ಆಗಲೇ ಡಾ.ರಾಜ್ ಜಯಮಾಲಾ ತನ್ನ ಮುಂದಿನ ಚಿತ್ರಕ್ಕೆ ನಟಿ ಎಂದು ಘೋಷಣೆ ಮಾಡಿದ್ದರು. ಈ ಬಳಿಕ ಜಯಮಾಲಾ ಕನ್ನಡದಲ್ಲಿಯೇ ಉಳಿದುಬಿಟ್ಟರು. ಇದರ ಜತೆಗೆ ಜಯಮಾಲಾ ಸಹೋದರಿ ವಿಜಯಮಾಲಾಗೂ ನಟನೆ ಹಾಗೂ ಗಾಯಕಿಯಾಗಿ ಕನ್ನಡಕ್ಕೆ ಪರಿಚಯ ಮಾಡಿಕೊಟ್ಟವರು ಇದೇ ಟೇಲರ್ ಎನ್ನುವುದು ಟೇಲರ್ ಜತೆಯಲ್ಲಿ ದುಡಿದ ನಿರ್ಮಾಪಕ ಶ್ರೀನಿವಾಸ್ ಹೇಳುವ ಮಾತು. ನಮ್ಮ ಭಾಗ್ಯ ಬಿಡುಗಡೆ ಕಾಣಲೇ ಇಲ್ಲ: ಕೆ.ಎನ್.ಟೇಲರ್ ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಂಡ ಚಿತ್ರ ‘ನಮ್ಮ ಭಾಗ್ಯ’ ಇಷ್ಟರ ವರೆಗೆ ಅವರ ಚಿತ್ರಗಳು ಕಪ್ಪು ಬಿಳುಪು ಮಾದರಿಯಲ್ಲಿ ಕಾಣಿಸಿಕೊಂಡರೆ ಈ ಚಿತ್ರ ಕಲರ್ ಸ್ಕೋಪ್‌ನಲ್ಲಿ ಪ್ರೇಕ್ಷಕರ ಮುಂದೆ ಇಡಬೇಕು ಎನ್ನುವ ಕನಸ್ಸು ಅವರದಾಗಿತ್ತು. ಕನ್ನಡದ ಸ್ಟಾರ್ ನಟಿಯಾಗಿದ್ದ ಮಂಜುಳಾ ಅವರನ್ನು ನಾಯಕಿಯಾಗಿ ಇಟ್ಟುಕೊಂಡು ಚಿತ್ರ ಮಾಡಿದರೂ ಚಿತ್ರ ಆರ್ಥಿಕ ಕಾರಣಗಳಿಂದ ಕ್ಲೈಮ್ಯಾಕ್ಸ್ ಹಾದಿಯಲ್ಲಿ ನಿಂತೇ ಹೋಯಿತು. ಆದರೆ ೨೫ ವರ್ಷಗಳ ಬಳಿಕ ಚಿತ್ರವನ್ನು ಮತ್ತೆ ಆರಂಭಿಸಿ ತೆರೆಗೆ ತರಬೇಕು ಎನ್ನುವುದಕ್ಕೆ ಟೇಲರ್ ಒದ್ದಾಟ ಮಾಡುತ್ತಿದ್ದರು. ಚಿತ್ರ ಬಿಡುಡಗೆಗೆ ಬರೋಬರಿ ೨೫ ಲಕ್ಷ ಹಿಂದೆ ಖರ್ಚು ಮಾಡಿದ್ದರು. ಆದರೆ ಈಗ ೧೦ ಲಕ್ಷ ಖರ್ಚು ಮಾಡಿದರೆ ಸಿನಿಮಾ ಹೊರಗೆ ತರಬಹುದು ಎನ್ನುವುದು ಟೇಲರ್ ಅವರ ಮಾತಾಗಿತ್ತು.
ಹೆಸರಲ್ಲೇ ವೃತ್ತಿ ಬಂತು: ಕೆ.ಎನ್.ಟೇಲರ್ ಹೆಸರು ಹೇಗೆ ಬಂತು ಎನ್ನುವ ಕುತೂಹಲ ಬಹಳ ಮಂದಿಯಲ್ಲಿ ಇದೆ. ಆದರೆ ನಿಜಕ್ಕೂ ಟೇಲರ್ ಎನ್ನುವುದು ವೃತ್ತಿಯಿಂದ ಬಂದ ಹೆಸರು. ಕೆ ಎಂದರೆ ಕಡಂದಲೆ ಎನ್ ಎಂದರೆ ನಾರಾಯಣ ಹಾಗೂ ಟೈಲರ್ ವೃತ್ತಿಯಿಂದಾಗಿ ಟೇಲರ್ ಹೆಸರು ಅವರಿಗೆ ಖಾಯಂ ಉಳಿದು ಹೋಯಿತು. ಮುಖ್ಯವಾಗಿ ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ಪುಟ್ಟ ಅಂಗಡಿಯಲ್ಲಿ ಬಹಳ ವರ್ಷಗಳಿಂದ ಟೈಲರಿಂಗ್ ವೃತ್ತಿ ಮಾಡುತ್ತಾ ಅಲ್ಲಿಯೇ ಪಕ್ಕದಲ್ಲಿದ್ದ ಗಣಪತಿ ಹೈಸ್ಕೂಲ್‌ನಲ್ಲಿ ಸಂಜೆ ಹೊತ್ತು ನಾಟಕದ ಕುರಿತು ತರಬೇತಿ ನಡೆಯುತ್ತಿತ್ತು. ನಾಟಕದ ಖಯಾಳಿ ಹೆಚ್ಚಿದಂತೆ ಪುಟ್ಟ ಅಂಗಡಿ ಮಾರಾಟ ಮಾಡಿ ಪಡುಬಿದ್ರಿಯ ಕಡೆ ಟೇಲರ್ ಹೊರಟು ನಿಂತರು ಎನ್ನುವುದು ಅವರ ಗೆಳೆಯ ಶ್ರೀನಿವಾಸ್ ಹೇಳುವ ಮಾತು. ಇದೇ ವರ್ಷದಲ್ಲಿ ಎರಡು ಸಂಭ್ರಮ: ಕೆ.ಎನ್. ಟೇಲರ್ ಅವರು ೨೦೧೫ರ ಏಪ್ರಿಲ್‌ನಲ್ಲಿ ತಮ್ಮ ದಾಂಪತ್ಯ ಬದುಕಿನ ೬೦ ವರ್ಷಗಳ ಜತೆಯಲ್ಲಿ ಗಣೇಶನಾಟಕ ಸಭಾದ ೫೮ ವರ್ಷದ ಆಚರಣೆ ಮಾಡುವ ಕುರಿತು ಯೋಜನೆ ಹಾಕಿಕೊಂಡಿದ್ದರು. ಆರೋಗ್ಯ ಆಗಾಗ ಕೈ ಕೊಡುತ್ತಿದ್ದಾಗಲೂ ಕಾರ‍್ಯಕ್ರಮದ ಕುರಿತು ರೂಪುರೇಷೆಗಳನ್ನು ಸಿದ್ಧ ಮಾಡುತ್ತಾ ಬರುತ್ತಿದ್ದರು. ಇದೇ ಸಮಯದಲ್ಲಿ ನಮ್ಮ ಭಾಗ್ಯ ಸಿನಿಮಾವನ್ನು ತೆರೆಗೆ ತರುವುದಕ್ಕಾಗಿ ಬೆಂಗಳೂರಿನ ಉದ್ಯಮಿಯೊಬ್ಬರ ಜತೆಗೆ ಮಾತುಕತೆ ಕೂಡ ನಡೆಸಿದ್ದರು ಎನ್ನುವುದು ಟೇಲರ್ ಅವರ ಮತ್ತೊಬ್ಬ ಗೆಳೆಯ ಶರತ್ ಹೇಳುವ ಮಾತು. ಯುಗಾದಿಗೆ ಹುಟ್ಟಿಕೊಂಡ ಗಣೇಶ ನಾಟಕ ಸಭಾ ಕೆ.ಎನ್. ಟೇಲರ್ ಅವರ ಗಣೇಶ ನಾಟಕ ಸಭಾ ಹುಟ್ಟಿಕೊಂಡದ್ದು ಯುಗಾದಿ ದಿನದಂದು ಎನ್ನುವುದು ವಿಶೇಷ. ೧೯೫೮ರಲ್ಲಿ ಸೌರಮಾನ ಯುಗಾದಿಯಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಸ್ತಿತ್ವಕ್ಕೆ ಬರುವ ಮೊದಲು ಮೈಸೂರು ಸರಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಡಾ. ನಾಗಪ್ಪ ಆಳ್ವ ಅವರು ಟೇಲರ್ ಅವರ ನಾಟಕಗಳನನು ತಪ್ಪದೇ ನೋಡುತ್ತಿದ್ದರು. ನಾಗಪ್ಪ ಅವರ ಪುತ್ರ ಡಾ.ಜೀವರಾಜ ಆಳ್ವರಿಗೂ ಇದೇ ಖಯಾಲಿ ಇತ್ತು. ಟೇಲರ್ ಅವರ ನಾಟಕಗಳಲ್ಲಿ ಆಳ್ವರು ಕೂಡ ಬಣ್ಣ ಹಾಕಿದ ಉದಾಹರಣೆಗಳಿವೆ. ಸಜಾನ್ ರೇ ಹಳೆಯ ಟ್ಯೂನ್ ಮೋಹ ! ಕೆ.ಎನ್. ಟೇಲರ್ ಅವರು ಬಾಲಿವುಡ್ ಗಾಯಕ ಮುಕೇಶ್ ಅವರ ಬಹು ದೊಡ್ಡ ಅಭಿಮಾನಿ. ಅದರಲ್ಲೂ ತೀಸ್ರಿ ಕಸಂ ಚಿತ್ರದ ಸೂಪರ್ ಹಿಟ್ ಹಾಡು ‘ಸಜಾನ್ ರೇ ಛೂಟ್ ಮತ್ ಬೋಲೋ...’ ಹಾಡು ಟೇಲರ್‌ಗೆ ಬಹಳ ಇಷ್ಟವಾಗಿತ್ತು. ಇದನ್ನು ತಮ್ಮ ಮೊಬೈಲ್ ಟ್ಯೂನ್ ಮಾಡಿಸಿಕೊಂಡಿದ್ದರು. ಇಡೀ ಹಾಡು ಕೇಳಿದ ಬಳಿಕವೇ ಹಲೋ ಯಾನ್ ಟೇಲರ್ ಪಾತೆರೂನಾ.. ಎಂದು ಸಂಭೋದನೆಗೆ ಇಳಿಯುತ್ತಿದ್ದರು.

Thursday, December 11, 2014

ಕರಾವಳಿಯ ದೈವ ದೇವರುಗಳ ನಂಬಿಕೆಯ ‘ಬೊಲ್ಕಿರ್’

ಸ್ಟೀವನ್ ರೇಗೊ, ದಾರಂದಕುಕ್ಕು ‘ಬೊಲ್ಕಿರ್’ ಇದು ಪಕ್ಕಾ ತುಳು ಭಾಷೆಯ ಪದ. ಅದನ್ನು ಇಡೀಯಾಗಿ ಕನ್ನಡಕ್ಕೆ ತಂದರೆ ಬೆಳಕು ಎನ್ನುವ ಅರ್ಥ ನೀಡುತ್ತದೆ. ಅಂದಹಾಗೆ ‘ಬೊಲ್ಕಿರ್’ ಕಾರ್ನಿಕೋದ ತುಡರ್ ಎನ್ನುವ ಹೆಸರಿನ ಪುಟ್ಟ ಸಾಕ್ಷ್ಯಚಿತ್ರವೊಂದು ರೆಡಿಯಾಗಿದೆ. ಕರಾವಳಿಯ ದೈವ- ದೇವರುಗಳ ಕುರಿತಾದ ನಂಬಿಕೆ ಒಂದೆಡೆಯಾದರೆ ಮತ್ತೊಂದೆಡೆ ದೇಶದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರಗಳಿಗೆ ದೈವಗಳ ಯಾವ ರೀತಿಯಲ್ಲಿ ಪರಿಹಾರ ಕೊಡುತ್ತದೆ ಎನ್ನುವ ಸಾರ ಹೊತ್ತಿರುವ ‘ಬೊಲ್ಕಿರ್’ ತುಳು ಚಿತ್ರ ವಿಶ್ವ ತುಳುವೆರೆ ಪರ್ಬದಲ್ಲಿ ಬಿಡುಗಡೆ ಕಾಣಲಿದೆ. ಅಂದಹಾಗೆ ೩೦ ನಿಮಿಷಗಳ ಸಣ್ಣ ಸಾಕ್ಷ್ಯಾಚಿತ್ರದಲ್ಲಿ ಕರಾವಳಿಯ ಸಂಸ್ಕೃತಿಯ ಜತೆಗೆ ದೈವ, ದೇವರುಗಳ ಮೇಲಿನ ನಂಬಿಕೆಗಳು ಇಲ್ಲಿಯವರನ್ನು ಯಾವ ರೀತಿಯಲ್ಲಿ ಬದುಕಲು ಕಲಿಸಿಕೊಟ್ಟಿದೆ. ಕಷ್ಟ ಕಾರ್ಪಣ್ಯಗಳು ಎದುರುಗೊಂಡಾಗ ದೈವಗಳು ಯಾವ ರೀತಿಯಲ್ಲಿ ನೆರವಾಗುತ್ತದೆ ಎನ್ನುವ ಕಲ್ಪನೆಯೊಳಗೆ ಮೂಡಿಬಂದ ‘ಬೊಲ್ಕಿರ್’ ಸಾಕ್ಷ್ಯಾಚಿತ್ರವನ್ನು ಮೂಡುಬಿದಿರೆಯ ಯುವ ಚಿತ್ರ ಸಾಹಿತಿ ಪ್ರಸ್ತುತ ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿರುವ ಲೋಕು ಕುಡ್ಲ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕರಾಗಿ ಅಖಿಲ ಭಾರತ ತುಳು ಒಕ್ಕೂಟಗಳ ಅಧ್ಯಕ್ಷ ಹಾಗೂ ಮುಂಬಯಿ ಉದ್ಯಮಿ ಧರ್ಮಪಾಲ ಯು. ದೇವಾಡಿಗ ಸಾಥ್ ಕೊಟ್ಟಿದ್ದಾರೆ. ಯೂಟೂಬ್‌ನಲ್ಲೂ ಮೊಳಗಿದ ಹಾಡು: ‘ಬೊಲ್ಕಿರ್’ ಚಿತ್ರದ ‘ಜನ್ಮಾ ಇರೇ ಕೊರ್‌ತೀನಾ...’ ಹಾಡು ಈಗಾಗಲೇ ತುಳು ಪ್ರಿಯರನ್ನು ಮೋಡಿ ಮಾಡಿದ ಸಾಮಾಜಿಕ ತಾಣಗಳು ಸೇರಿದಂತೆ ಯೂ ಟ್ಯೂಬ್‌ನಲ್ಲೂ ಸಿಕ್ಕಾಪಟ್ಟೆ ಲೈಕ್‌ಗಳನ್ನು ಪಡೆಯುತ್ತಾ ಮುಂದೆ ಸಾಗುತ್ತಿದೆ. ಯುವಜನತೆಯಲ್ಲೂ ಮೋಡಿ ಮಾಡಿದ ಈ ಹಾಡನ್ನು ಕರಾವಳಿ ಮೂಲದ ದುಬಾಯಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ ಅಕ್ಷತಾ ರಾವ್ ಕಂಠಸಿರಿಯಿಂದ ಹೊರಬಂದಿದೆ. ಈಗಾಗಲೇ ‘ನಿರೆಲ್’ ತುಳು ಚಿತ್ರದ ಮೂಲಕ ಗಮನ ಸೆಳೆದ ಅಕ್ಷತಾ ರಾವ್‌ಗೆ ಇದು ಎರಡನೇ ತುಳು ಹಾಡು. ಇದರ ಸಾಹಿತ್ಯದಲ್ಲೂ ಲೋಕು ಕುಡ್ಲ ಕೆಲಸ ಕಾಣಿಸಿಕೊಂಡಿದೆ. ‘ಬೊಲ್ಕಿರ್’ ತುಳು ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಪ್ರತಿನಿಽಸಲು ಮಾಡಿರುವ ಸಾಕ್ಷ್ಯಾಚಿತ್ರ. ಯುವಜನತೆಯಲ್ಲೂ ದೈವ, ದೇವರುಗಳ ಬಗ್ಗೆ ಇರುವ ನಂಬಿಕೆಯನ್ನು ತಿಳಿಯಪಡಿಸಲು ಕರಾವಳಿಯಲ್ಲಿರುವ ಯುವ ನಟರನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ತುಳು ಭಾಷೆಯಲ್ಲಿ ಅದ್ಧೂರಿತನದಲ್ಲಿ ಈ ಸಿನಿಮಾ ಮೂಡಿಬಂದಿದೆ ಎಂದು ಚಿತ್ರದ ನಿರ್ದೇಶಕ ಲೋಕು ಕುಡ್ಲ ಹೇಳುತ್ತಾರೆ. ಬೊಲ್ಕಿರ್‌ನಲ್ಲಿ ಯುವಜನರದ್ದೇ ಕಾರುಬಾರು: ಯುವಜನರೇ‘ಬೊಲ್ಕಿರ್’ ಸಾಕ್ಷ್ಯಾಚಿತ್ರದ ತುಂಬಾ ಕಾಣಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತೀಕ್ ಶೆಟ್ಟಿ, ವಿಜೆಯಾಗಿರುವ ಅಮಿತಾ ಕುಲಾಲ್, ಆರ್‌ಜೆ ಅನುರಾಗ್, ವಿಜೆ ರಕ್ಷಾ ಶೆಣೈ, ಆರ್‌ಜೆ ವಿನೀತ್, ಪೂಜಾ ರೈ, ರತೀಶ್ ಶೆಟ್ಟಿ ಮೊದಲಾದ ಯಂಗ್ ಟೀಮ್ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಕಾಪು ಹಾಗೂ ಎಲ್ಲೂರು ಸುತ್ತಮುತ್ತದಲ್ಲಿಯೇ ಚಿತ್ರೀಕರಣಗೊಂಡ ‘ಬೊಲ್ಕಿರ್’ ಚಿತ್ರದಲ್ಲಿ ಕಮರ್ಷಿಯಲ್ ದೃಷ್ಟಿಕೋನವಿಲ್ಲದೇ ಶುದ್ಧ ತುಳುವಿನ ನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ನಿಲ್ಲುತ್ತದೆ. ದೇಶದಲ್ಲಿ ದಿನನಿತ್ಯ ನಡೆಯುವ ಆತ್ಯಾಚಾರಗಳಿಗೆ ಮುಕ್ತಿ ಕೊಡುವ ಸಂದೇಶ ಚಿತ್ರದಲ್ಲಿ ತೊಡಗಿಕೊಂಡಿರೋದು ಚಿತ್ರವನ್ನು ಗಮನವಿಟ್ಟು ನೋಡುವಂತೆ ಮಾಡಿ ಹಾಕುತ್ತದೆ. (vk published dis article on 11.12.2014)

Friday, May 30, 2014

ಕೊಂಕಣಿ ಕೃತಿಗಳಿಗೆ ಮೊಬೈಲ್ ಕೊಂಕಣಿ ಬಜಾರ್

ಕರ್ನಾಟಕ ಕೊಂಕಣಿ ಅಕಾಡೆಮಿಯ ವಿನೂತನ ಪ್ರಯತ್ನ * ಮನೆ ಬಾಗಿಲಲ್ಲಿ ಕೊಂಕಣಿ ಕೃತಿಗಳ ಬಿಕರಿ * ಸ್ಟೀವನ್ ರೇಗೊ,ದಾರಂದಕುಕ್ಕು
ಸಾಹಿತ್ಯ ಕೃತಿಗಳನ್ನು ಖರೀದಿಸಿ ಓದುವ ಮನಸ್ಸು ಈಗ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಸದಾ ಕಾಲ ಸಾಹಿತ್ಯ ವಲಯದಲ್ಲಿರುವವರನ್ನು ಕಾಡುತ್ತಾ ಬಂದಿದೆ. ಹೊಸ ಹೊಸ ಪ್ರಯತ್ನಗಳ ಮೂಲಕ ಸಾಹಿತ್ಯ ಕೃತಿಗಳನ್ನು ಖರೀದಿ ಮಾಡಿ ಓದಿಸುವ ಕೆಲಸಗಳಂತೂ ಭರ್ಜರಿಯಾಗಿ ನಡೆಯುತ್ತಾ ಸಾಗುತ್ತಿದೆ. ಈ ಎಲ್ಲ ತಯಾರಿಗಳಿಂದ ಕನ್ನಡ ಸಾಹಿತ್ಯ ವಲಯ ಕೂಡ ಬಲಗೊಳ್ಳುತ್ತಿದೆ. ಆದರೆ ಕರುನಾಡಿನಲ್ಲಿರುವ ಕೊಂಕಣಿ ಭಾಷೆಯಲ್ಲಿ ಹೊಸ ಹೊಸ ಲೇಖಕರು ಹುಟ್ಟಿಕೊಳ್ಳುವ ಜತೆಗೆ ಕೊಂಕಣಿ ಪುಸ್ತಕೋದ್ಯಮದಲ್ಲೂ ಹೊಸ ಕೊಂಕಣಿ ಸಾಹಿತ್ಯ ಕೃತಿಗಳು ಲಗ್ಗೆ ಹಾಕುತ್ತಿದೆ. ಆದರೆ ಇಂತಹ ಕೃತಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯಂತೂ ನೆಟ್ಟಗೆ ಇಲ್ಲ ಎನ್ನುವುದು ಕೊಂಕಣಿ ಸಾಹಿತಿಗಳ ಮಾತು. ಇದಕ್ಕೆ ಉತ್ತರ ಎನ್ನುವಂತೆ ಕರ್ನಾಟಕ ಕೊಂಕಣಿ ಅಕಾಡೆಮಿ ಈಗ ಕೊಂಕಣಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ವಿನೂತನವಾದ ಪ್ರಯತ್ನವೊಂದು ಸಾಗಿದೆ. ‘ಮೊಬೈಲ್ ಕೊಂಕಣಿ ಬಜಾರ್’ ಎನ್ನುವ ಕಲ್ಪನೆಯನ್ನು ಹೊತ್ತುಕೊಂಡು ಕೊಂಕಣಿ ಅಕಾಡೆಮಿ ಕೊಂಕಣಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ಹೊರಟಿದೆ. ಏನಿದು ಮೊಬೈಲ್ ಕೊಂಕಣಿ ಬಜಾರ್: ಮೊಬೈಲ್ ಕೊಂಕಣಿ ಬಜಾರ್ ಎನ್ನುವ ಯೋಜನೆಯ ಕರ್ನಾಟಕ ಕೊಂಕಣಿ ಅಕಾಡೆಮಿಯ ಪ್ರಕಟಣೆಗಳ ಜತೆಗೆ ಕೊಂಕಣಿ ಅಕಾಡೆಮಿ ಲೇಖಕರಿಂದ ಪಡೆದುಕೊಳ್ಳುವ ಕೃತಿಗಳು, ಕೊಂಕಣಿ ಭಾಷೆಯ ನಾನಾ ಬಗೆಯ ಧ್ವನಿ ಸುರಳಿಗಳನ್ನು ಟೆಂಪೋ ಟ್ರಾವೆಲ್ಲರ್‌ವೊಂದರ ನೆರವಿನಿಂದ ಊರೂರೂ ಸುತ್ತಾಡಿಕೊಂಡು ಮಾರಾಟ ಮಾಡುವ ವ್ಯವಸ್ಥೆ. ಮುಖ್ಯವಾಗಿ ಸರಳ ಭಾಷೆಯಲ್ಲಿ ಹೇಳುವುದಾದರೆ ಸಂಚಾರಿ ಮಾದರಿಯ ಗ್ರಂಥಾಲಯ ಎನ್ನಬಹುದು. ಈ ಸಂಚಾರಿ ಗ್ರಂಥಾಲಯದಲ್ಲಿ ಒಬ್ಬ ಚಾಲಕ ಸೇರಿದಂತೆ ಅವನಿಗೆ ನೆರವು ನೀಡಲು ಒಬ್ಬ ಸಹಾಯಕನಿರುತ್ತಾನೆ. ಈ ವಾಹನದಲ್ಲಿ ಕೊಂಕಣಿ ಸಾಹಿತ್ಯ ಕೃತಿಗಳ ಕುರಿತು ಊರೂರು ಹೇಳಿಕೊಂಡು ತಿರುಗಾಡಲು ಮೈಕ್ ಹಾಗೂ ಸೌಂಡ್ ಸಿಸ್ಟಂ ಕೂಡ ಜತೆಗಿರುತ್ತದೆ. ಇದರಿಂದ ಪ್ರಕಟವಾದ ಕೊಂಕಣಿಯ ಉತ್ತಮ ಸಾಹಿತ್ಯ ಕೃತಿಗಳು ಕೇವಲ ನಗರ ಕೇಂದ್ರಿತ ಮಾರುಕಟ್ಟೆಯಲ್ಲಿ ಉಳಿಯದೇ, ಹಳ್ಳಿಹಳ್ಳಿಗೂ ತಲುಪುತ್ತದೆ. ಅಂದಹಾಗೆ ಮೊಬೈಲ್ ಕೊಂಕಣಿ ಬಜಾರ್‌ನ ಎರಡು ಭಾಗದಲ್ಲೂ ಯುವ ಕಲಾವಿದ ವಿಲ್ಸನ್ ಕಯ್ಯಾರ್ ಅವರು ಕೊಂಕಣಿ ಸಾಹಿತ್ಯ ಲೋಕದಲ್ಲಿ ವಿಶೇಷವಾಗಿ ದುಡಿದ ಹಿರಿಯ ಚೇತನಗಳನ್ನು ತಮ್ಮ ಕುಂಚದ ಮೂಲಕ ಬಿಡಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಇಡೀ ಮೊಬೈಲ್ ಕೊಂಕಣಿ ಬಜಾರ್‌ನಲ್ಲಿ ಕೊಂಕಣಿ ಸಾಹಿತ್ಯ ಲೋಕದ ದಿಗ್ಗಜರು ಬ್ರಾಂಡ್ ಅಂಬಾಸೀಡರ್‌ಗಳಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಭರ್ಜರಿ ವಹಿವಾಟು: ಮೇ ೨೪ರಂದು ಬೆಂಗಳೂರಿನಲ್ಲಿ ಅಽಕೃತವಾಗಿ ಬಿಡುಗಡೆಯಾದ ‘ಮೊಬೈಲ್ ಕೊಂಕಣಿ ಬಜಾರ್’ ಬರೀ ಒಂದು ವಾರದಲ್ಲಿಯೇ ೫೦ ಸಾವಿರ ರೂಪಾಯಿ ವಹಿವಾಟು ನಡೆಸುವ ಮೂಲಕ ಕೊಂಕಣಿ ಅಕಾಡೆಮಿಯ ಹೊಸ ಪ್ರಯತ್ನಕ್ಕೆ ಗೆಲುವು ಬಂದಿದೆ. ‘ಮೊಬೈಲ್ ಕೊಂಕಣಿ ಬಜಾರ್‌ನ ಆರಂಭದಲ್ಲಿ ಸ್ವಲ್ಪ ಅಳುಕಿತ್ತು. ನಮಗೆ ಕೃತಿಗಳನ್ನು ಮಾರಾಟ ಮಾಡಿ ಲಾಭಗಳಿಸುವ ಇರಾದೆ ಇಲ್ಲ. ಆದರೆ ಕೊಂಕಣಿ ಸಾಹಿತ್ಯ ಕೃತಿಗಳಂತೂ ನಗರ ಮಾತ್ರವಲ್ಲದೇ ಹಳ್ಳಿಯ ಮೂಲೆ ಮೂಲೆಯಲ್ಲೂ ಸಿಗಬೇಕು ಎನ್ನುವ ಉದ್ದೇಶ ಮಾತ್ರವಿತ್ತು. ತಿಂಗಳಿಗೆ ೫೦ ಸಾವಿರ ರೂಪಾಯಿ ವಹಿವಾಟು ನಡೆಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬೆಂಗಳೂರಿನಲ್ಲಿ ಮೊಬೈಲ್ ಕೊಂಕಣಿ ಬಜಾರ್‌ನ ವಹಿವಾಟಿನಿಂದ ಖುಷಿಯಾಗಿದೆ ಎನ್ನುತ್ತಾರೆ ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟೋಲಿನೋ ಹೇಳುತ್ತಾರೆ. ‘ರಾಜ್ಯದಲ್ಲಿ ಈಗ ಸದ್ಯಕ್ಕೆ ಒಂದೇ ಮೊಬೈಲ್ ಕೊಂಕಣಿ ಬಜಾರ್ ವಾಹನ ಇದೆ. ಕೊಂಕಣಿ ಅಕಾಡೆಮಿಯ ಕಾರ‍್ಯಕ್ರಮಗಳು ರಾಜ್ಯದ ಯಾವುದೇ ಪ್ರದೇಶದಲ್ಲಿ ನಡೆಯುವಾಗ ಅಲ್ಲಿಗೆ ಈ ಸಂಚಾರಿ ಗ್ರಂಥಾಲಯ ಹಾಜರಿರುತ್ತದೆ. ಇದರ ಜತೆಗೆ ಕರಾವಳಿಯಲ್ಲಿ ನಡೆಯುವ ಚರ್ಚ್‌ಗಳ ಹಬ್ಬದ ಸಮಯದಲ್ಲೂ ಈ ಮೊಬೈಲ್ ಕೊಂಕಣಿ ಬಜಾರ್ ಹೋಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಿರುವ ಅಕಾಡೆಮಿಯ ಸದಸ್ಯರು ತಮ್ಮ ತಮ್ಮ ಊರುಗಳಲ್ಲಿ ಸಂಚಾರಿ ಗ್ರಂಥಾಲಯಕ್ಕೆ ನೆರವು ನೀಡಲಿದ್ದಾರೆ ಎನ್ನುತ್ತಾರೆ ರೋಯ್. ಕೊಂಕಣಿ ಸಾಹಿತ್ಯ ಕೃತಿಗಳ ಪ್ರಕಟಣೆಯ ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಮಂಗಳೂರಿನ ಕೆಲವೊಂದು ಮಳಿಗೆಯಲ್ಲಿ ಮಾತ್ರ ಕೊಂಕಣಿ ಪುಸ್ತಕಗಳು ಲಭ್ಯವಾಗುತ್ತಿದೆ. ಆದರೆ ಮಂಗಳೂರು ಬಿಟ್ಟು ಬೇರೆ ಊರಿನವರಿಗಂತೂ ಕೊಂಕಣಿ ಸಾಹಿತ್ಯ ಕೃತಿಗಳು, ಧ್ವನಿ ಸುರುಳಿಗಳು ಸುಲಭದಲ್ಲಿ ಸಿಗುವುದಿಲ್ಲ. ಇಂತಹ ಮೊಬೈಲ್ ಕೊಂಕಣಿ ಬಜಾರ್‌ನಿಂದ ಕೊಂಕಣಿ ಸಾಹಿತಿಗಳ ಜತೆಗೆ ಓದುವವರಿಗೂ ಲಾಭವಾಗಲಿದೆ ಎನ್ನುತ್ತಾರೆ ಕೊಂಕಣಿ ಪುಸ್ತಕ ಪ್ರಕಾಶಕ ವಿಕ್ಟರ್ ಮಥಾಯಸ್. ಟೋಟಲಿ ಸರಕಾರದ ಅಕಾಡೆಮಿಯೊಂದು ವಿನೂತನ ಮಾದರಿಯಲ್ಲಿ ಪುಸ್ತಕ ಮಾರಾಟಕ್ಕೆ ಇಳಿದಿರೋದು ಶ್ಲಾಘನೀಯ ಎನ್ನಬಹುದು.

Thursday, May 8, 2014

ಎಳೆನೀರಿನ ತಿರಿಳಿನ ಐಸ್ ಕ್ರೀಮ್

* ಸ್ಟೀವನ್‌ರೇಗೊ, ದಾರಂದಕುಕ್ಕು ಕರಾವಳಿಯಲ್ಲಿ ಈಗ ಸಿಕ್ಕಾಪಟ್ಟೆ ಬಿಸಿಲು. ಅದರಲ್ಲೂ ಈ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಎಳೆನೀರು, ಕಲ್ಲಂಗಡಿ ಹಣ್ಣು ,ಕೋಲ್ಡ್ ಡ್ರಿಂಕ್ಸ್‌ಗೆ ಈಗ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಐಸ್‌ಕ್ರೀಮ್‌ವಂತೂ ಬಿಸಿಲಿಗೆ ತಂಪು ಕೊಡುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಐಸ್‌ಕ್ರೀಮ್ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಖ್ಯವಾಗಿ ಹ್ಯಾಂಗ್ಯೋ, ಐಡಿಯಲ್ ಹಾಗೂ ನ್ಯಾಚುರಲ್ ಐಸ್‌ಕ್ರೀಮ್‌ಗಳ ಹುಟ್ಟು ಇಲ್ಲಿದೆ.
ಈಗಾಗಲೇ ಈ ಮೂರು ಕಂಪನಿಗಳು ತಮ್ಮ ಆಸ್ತಿತ್ವವನ್ನು ಮಂಗಳೂರಿನಲ್ಲಿ ಮಾತ್ರವಲ್ಲದೇ ದೇಶದ ನಾನಾಕಡೆಗಳಲ್ಲಿ ತಮ್ಮದೇ ಫ್ರಾಂಚೈಸಿಗಳನ್ನು ತೆರೆದುಕೊಂಡಿದೆ. ಇವುಗಳ ಜತೆಗೆ ಸಣ್ಣಪುಟ್ಟ ಐಸ್‌ಕ್ರೀಮ್ ಕಂಪನಿಗಳು ಕರಾವಳಿಯ ಬಿಸಿಲಿಗೆ ತಂಪು ಕೊಡುವಲ್ಲಿ ಕೆಲಸ ಮಾಡುತ್ತಾ ಬರುತ್ತಿದೆ. ಐಸ್‌ಕ್ರೀಮ್‌ನಲ್ಲಂತೂ ನೂರಾರು ವೈರೆಟಿಗಳು ಇದ್ದೇ ಇದೆ. ಕರಾವಳಿಯಲ್ಲಿ ಈಗ ಎಳೆನೀರಿನ ಐಸ್‌ಕ್ರೀಮ್ ಸಖತ್ ಫೇಮಸ್. ಕರಾವಳಿಯಲ್ಲಿ ಸಿಗುವ ಎಳೆನೀರು ಸೇರಿದಂತೆ ತಮಿಳುನಾಡು, ರಾಜ್ಯದ ಹತ್ತಾರು ಊರುಗಳಿಂದ ಎಳೆನೀರು ತಂದು ಮಂಗಳೂರಿನ ನ್ಯಾಚುರಲ್ ಐಸ್‌ಕ್ರೀಮ್ ಕಂಪನಿ ಇಂತಹ ಐಸ್‌ಕ್ರೀಮ್ ತರುತ್ತಿದೆ. ಮಂಗಳೂರಿನಲ್ಲಿರುವ ನ್ಯಾಚುರಲ್ ಐಸ್‌ಕ್ರೀಮ್ ಔಟ್‌ಲೇಟ್‌ನಲ್ಲೂ ಇಂತಹ ಐಸ್ ಕ್ರೀಮ್ ಸಿಗುತ್ತದೆ. ಇವುಗಳ ಜತೆಗೆ ಇತರ ಐಸ್‌ಕ್ರೀಮ್ ಕಂಪನಿಗಳು ಇದೇ ಮಾದರಿಯ ಐಸ್‌ಕ್ರೀಮ್‌ಗಳನ್ನು ತಯಾರಿಸುತ್ತಿದೆ. ಆದರೆ ನ್ಯಾಚುರಲ್ ಐಸ್‌ಕ್ರೀಮ್ ಕಂಪನಿಯಂತೂ ಬರೀ ಮಂಗಳೂರು ಅಲ್ಲದೇ ದೇಶ- ವಿದೇಶಕ್ಕೂ ಎಳೆನೀರಿನ ತಿರಿಳಿನ ಐಸ್‌ಕ್ರೀಮ್ ರಫ್ತು ಮಾಡುತ್ತಿದೆ. ಎಳೆನೀರಿನ ಐಸ್ ಕ್ರೀಮ್ ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎನ್ನುವುದು ಸಾಮಾನ್ಯ ಕುತೂಹಲ. ಈ ಕುರಿತು ನ್ಯಾಚುರಲ್ ಸಂಸ್ಥೆಯ ಮುಖ್ಯಸ್ಥರೊಬ್ಬರು ಹೇಳುವ ಮಾತು ಹೀಗಿದೆ: ಎಳೆನೀರು ಆಯ್ಕೆಯಲ್ಲಿ ವಿಶೇಷವಾದ ಆಸ್ಥೆ ವಹಿಸಲಾಗುತ್ತದೆ. ಮುಖ್ಯವಾಗಿ ತೆಳುವಾದ ಎಳೆನೀರಿನ ತಿರುಳು ಉಂಟೋ ಇಲ್ಲವೋ ಎನ್ನುವುದನ್ನು ಖಾತರಿ ಮಾಡಿಕೊಂಡ ಬಳಿಕವೇ ಎಳೆನೀರು ಆಯ್ಕೆ ನಡೆಯುತ್ತದೆ. ಎಳೆನೀರಿನ ತಿರುಳು ತೆಗೆದ ಬಳಿಕ ಹಾಲು ಸೇರಿಸಲಾಗುತ್ತದೆ. ಸಕ್ಕರೆ ಹಾಗೂ ಫ್ರೆಶ್ ಕ್ರೀಮ್‌ಗಳನ್ನು ಸೇರಿಸಿಕೊಂಡ ಬಳಿಕ ಮಿಕ್ಸಿಂಗ್ ಕೆಲಸ ನಡೆಸಿ ಫ್ರಿಜರ್‌ನಲ್ಲಿ ಇಡಲಾಗುತ್ತದೆ. ಈ ಬಳಿಕ ಎಳೆನೀರಿನ ಐಸ್‌ಕ್ರೀಮ್ ರೆಡಿಯಾಗುತ್ತದೆ. ಅಂದಹಾಗೆ ನ್ಯಾಚುರಲ್ ಐಸ್‌ಕ್ರೀಮ್ ೧೯೮೪ರಲ್ಲಿ ಮುಂಬಯಿಯಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿತ್ತು. ಈಗ ದೇಶದಲ್ಲಿ ೯೦ಕ್ಕೂ ಅಧಿಕ ಫ್ರಾಂಚೈಸಿಗಳನ್ನು ಹೊಂದಿದೆ. ನ್ಯಾಚುರಲ್ ಐಸ್‌ಕ್ರೀಮ್‌ನಲ್ಲಿ ಎಲ್ಲವೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಿಕೊಂಡು ಐಸ್‌ಕ್ರೀಮ್ ತಯಾರಿಸಲಾಗುತ್ತದೆ ಎನ್ನುವುದು ಸಂಸ್ಥೆಯ ಮಾಲೀಕ ಆರ್.ಎಸ್. ಕಾಮತ್ ಅವರ ಮಾತು. ಟೋಟಲಿ ಒಂದ್‌ಸಾರಿ ನ್ಯಾಚುರಲ್ ಐಸ್‌ಕ್ರೀಮ್ ಒಳಗಡೆ ಹೋದಾಗಲೇ ಅಲ್ಲಿನ ವೈರೆಟಿ ಆಫ್ ಐಸ್‌ಕ್ರೀಮ್‌ಗಳು ನಿಮಗೆ ಮೋಡಿ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದರೆ ನ್ಯಾಚುರಲ್‌ನಲ್ಲಂತೂ ಎಳೆನೀರು ತಿರಿಳಿನ ಐಸ್‌ಕ್ರೀಮ್‌ವನ್ನಂತೂ ತಿನ್ನದೇ ವಾಪಸ್ ಬರಬೇಡಿ.

ಸಿಗಡಿ ಫ್ರೈ ತಿನ್ನಲು ಮಂಗಳೂರಿಗೆ ಬನ್ನಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸಿಗಡಿಯನ್ನು ತುಪ್ಪದಲ್ಲಿ ಹುರಿದು ತಯಾರಿಸುವ ಖಾದ್ಯ ಮಂಗಳೂರಿನಲ್ಲಿ ಅತೀ ಹೆಚ್ಚು ಜನಪ್ರಿಯ. ಕರಾವಳಿಯ ಪ್ರತಿಯೊಂದು ಮಾಂಸದೂಟ ವಿಭಿನ್ನ ರುಚಿ, ಪರಿಮಳ, ಸ್ವಾದಿಷ್ಟತೆಯನ್ನು ಹೊಂದಿ ಪಾಕ ಪ್ರಪಂಚದಲ್ಲೇ ಅದ್ಭುತ ಎನಿಸಿದೆ. ಸರಳ ಮಾಂಸಹಾರಿ ಅಡುಗೆಯಲ್ಲೂ ಕಂಡುಬರುವ ರುಚಿ ಮಂಗಳೂರಿನ ಮಸಾಲೆಗಿದೆ. ಅಂದಹಾಗೆ ಸಿಗಡಿ ಫ್ರೈ ಚಿಕನ್ ಫ್ರೈಗಿಂತಲೂ ಹೆಚ್ಚು ಜನಪ್ರಿಯ ಖಾದ್ಯವಾಗಿದ್ದು ಕರಾವಳಿಯಲ್ಲಂತೂ ಎಲ್ಲರ ಮನಸ್ಸು ಗೆದ್ದಿದೆ. ಇದರ ರುಚಿ ಪ್ರತ್ಯೇಕವಾಗಿದ್ದು ಅನ್ನ ಚಪಾತಿ ರೋಟಿ ಹೀಗೆ ಪ್ರತಿಯೊಂದಕ್ಕೂ ಸೈಡ್‌ಡಿಶ್ ಆಗಿ ಮ್ಯಾಚ್ ಆಗುತ್ತದೆ. ಇದನ್ನು ತಯಾರಿಸುವ ವಿಧಾನ ಕೂಡ ಬಹಳ ಸುಲಭ ಎನ್ನುತ್ತಾರೆ ಮಂಗಳೂರಿನ ಸಿಗಡಿ ಫ್ರೈ ಅಡ್ಡೆಗಳಲ್ಲಿ ಒಂದಾದ ಚೇಫ್ಸ್ ನ ಕುಕ್ ನಿಕೋಲ್ ಅವರ ಮಾತು. ಅಂದಹಾಗೆ ಈ
ಸಾಂಪ್ರದಾಯಿಕ ಸಿಗಡಿ ಫ್ರೈಗಾಗಿ ಜಂಬೊ ಸಿಗಡಿಗಳೇ ಲಯಾಕ್ಕು ಎನ್ನುವುದು ಅವರ ಮಾತು. ಇದರ ಜತೆಗೆ ಕರಾವಳಿಯ ಬಹುತೇಕ ಮಾಂಸಹಾರಿ ಹೋಟೆಲ್‌ಗಳಲ್ಲಿ ತಯಾರಾಗುವ ಮೀನಿನ ಹಲವು ಬಗೆಯ ವ್ಯಂಜನಗಳು ರಾಜ್ಯದ ಹೊರಗೂ ಬಹು ಜನಪ್ರಿಯತೆಯನ್ನು ಪಡೆದಿದೆ. ಮಾಂಸಹಾರಿ ಆಹಾರದ ವಿಷಯಕ್ಕೆ ಬಂದಾಗ ಇಲ್ಲಿ ಮಾಂಜಿ, ಅಂಜಲ್, ಸಿಗಡಿ, ಏಡಿ, ಕಾನೆ ಹಾಗೂ ಇನ್ನಿತರ ಹಲವು ಮೀನುಗಳ ನಾನಾ ಅಡುಗೆಗಳು ನೋಡುತ್ತಿದ್ದಂತೆಯೇ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಸೂಜಿ ರವೆಯಲ್ಲಿ ಕರಿದ ಕಾನೆ ಫ್ರೈ ಬಾಯಿಗಿಡುತ್ತಿದ್ದಂತೆ ಕರಗುವಷ್ಟು ಮೆದುವಾಗಿದ್ದರೆ, ಮಾಂಜಿ ತವಾ ಫ್ರೈ, ಸಿಗಡಿ ಗೀ ರೋಸ್ಟ್, ಏಡಿ ಗೀ ರೋಸ್ಟ್, ಕಾನೆ ಮೀನಿನ ಕರಿ ಇತ್ಯಾದಿ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಈ ಎಲ್ಲ ಪದಾರ್ಥಗಳಿಗೆ ಬ್ಯಾಡಗಿ ಮೆಣಸಿನ ಮಸಾಲೆ ಸಿಕ್ಕರೆಯಂತೂ ಪದಾರ್ಥ ಸೂಪರ್ ಆಗಿರುತ್ತದೆ. ಮೀನು ಸಾರಿನ ಜೊತೆ ಮಂಗಳೂರು ಸ್ಪೆಷಲ್ ನೀರುದೋಸೆ, ಅಪ್ಪಂ ಮತ್ತು ಅನ್ನ ಊಟಕ್ಕೆ ಮತ್ತಷ್ಟು ಕಳೆ ನೀಡುತ್ತದೆ. ಒಟ್ಟಾರೆಯಾಗಿ ಕರಾವಳಿ ಪ್ರದೇಶದ ವಿಶೇಷವಾಗಿ ಸಮುದ್ರಾಹಾರವನ್ನು ಸೇವಿಸಲು ಬಯಸುವವರಿಗೆ ಕರಾವಳಿಯ ಮಾಂಸಹಾರಿ ಹೋಟೆಲ್‌ಗಳು ಇಷ್ಟವಾಗುತ್ತದೆ. ತೀರಾ ಇತ್ತೀಚೆಗೆ ಪ್ರಸಿದ್ಧ ಆಂಗ್ಲ ಪತ್ರಿಕೆ ಟೈಮ್ಸ್ ತನ್ನ ರೆಸ್ಟೊರಾಂಟ್ ರಿವೀವ್ ಅಂಕಣದಲ್ಲಿ ಕರಾವಳಿಯ ಮಾಂಸಹಾರಿ ಹೊಟೇಲ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಉತ್ತಮ ಅಂಕಗಳನ್ನು ನೀಡಿ ಪ್ರಶಂಸಿಸದೆ. ಟೋಟಲಿ ಮೀನಿನ ಊಟವಂದರೆ ಅದು ಕರಾವಳಿಯ ಹೋಟೆಲ್‌ಗಳೇ ದೀ ಬೆಸ್ಟ್ ಎನ್ನುವ ವಿಷ್ಯಾವಂತೂ ಒಪ್ಪಲೇ ಬೇಕು.

ಬಾಲಿವುಡ್ ಅಂಗಳದಲ್ಲಿ ಬಳ್ಳಾರಿ ಗಣಿ

* ಸ್ಟೀವನ್ ರೇಗೊ, ದಾರಂದಕುಕ್ಕು ಗಣಿಗಾರಿಕೆ ವಿಷ್ಯಾ ಇದು ಬರೀ ಬಳ್ಳಾರಿಗೆ ಮಾತ್ರ ಸೀಮಿತವಲ್ಲ. ಇಡೀ ದೇಶವೇ ಗಣಿಗಾರಿಕೆಯ ಬಗ್ಗೆ ಮಾತನಾಡುತ್ತಿದೆ. ಅದರಲ್ಲೂ ಬಳ್ಳಾರಿಯಲ್ಲಿರುವ ಗಣಿಗಾರಿಕೆಯನ್ನು ಮತ್ತೆ ಕೆದಕುವ ಪ್ರಯತ್ನವನ್ನು ಬಾಲಿವುಡ್ ಅಂಗಳದಲ್ಲಿ ನಿರ್ದೇಶಕರು ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಬಾಲಿವುಡ್ ಅಂಗಳದಲ್ಲಿ ಎರಡು ಸಿನ್ಮಾಗಳು ತೆರೆಗೆ ಬಂದು ಅಪ್ಪಳಿಸಿ ದೊಡ್ಡ ಸುದ್ದಿಮಾಡಿತ್ತು. ಬಾಲಿವುಡ್‌ನಲ್ಲಿ ೧೯೭೯ರಲ್ಲಿ ತೆರೆಗೆ ಬಂದ ‘ಕಾಲ ಪತ್ತರ್ ’ಹಾಗೂ ೨೦೧೨ರಲ್ಲಿ ಬಂದ ‘ಗ್ಯಾಂಗ್ಸ್ ಆ- ವಾಸೇಪುರ್’ನಲ್ಲಿ ಇದೇ ಗಣಿಗಾರಿಕೆಯ ಕುರಿತು ಪ್ರೇಕ್ಷಕರನ್ನು ಕುಟುಕಿದ ಸಿನ್ಮಾವಾಗಿತ್ತು. ತೀರಾ ಇತ್ತೀಚೆಗೆ ಬಂದ ‘ಗುಂಡೇ ’ಸಿನ್ಮಾ ಕೂಡ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಚಿತ್ರದ ಕತೆ ಹಾಗೂ ನಟನೆಯಿಂದಾಗಿ ಈ ಮೂರು ಸಿನ್ಮಾಗಳು ಬಾಕ್ಸಾಫೀಸ್‌ನ ಲೆಕ್ಕಚಾರವನ್ನು ಉಲ್ಟಾಪಲ್ಟಾ ಮಾಡಿತ್ತು. ಅಂದಹಾಗೆ ಬಾಲಿವುಡ್‌ನಲ್ಲಿ ಈಗ ಬರುತ್ತಿರುವ ಸಿನ್ಮಾ ಮಾತ್ರ ಕೊಂಚ ಡಿ-ರೆಂಟ್ ಆಗಲಿದೆ. ಇದಕ್ಕಿರುವ ಕಾರಣ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಕರಾವಳಿಯ ಮೂಲದ ನಟ ಸುನೀಲ್ ಶೆಟ್ಟಿಗೆ ರಾಜ್ಯದಲ್ಲಿರುವ ಗಣಿಗಾರಿಕೆಯ ಕುರಿತು ಅರಿವಿದೆ. ಅದಕ್ಕೂ ಮುಖ್ಯವಾಗಿ ಕರ್ನಾಟಕದ ಗಣಿಗಾರಿಕೆ ಹಾಗೂ ಜಾರ್ಖಂಡ್ ರಾಜ್ಯದ ಗಣಿಗಾರಿಕೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಸಿನ್ಮಾ ಮಾಡಲಾಗುತ್ತಿದೆ. ಚಿತ್ರದ ನಿರ್ದೇಶಕ ಅಶು ತಾರೀಕಾ ಮೂಲತಃ ಜಾರ್ಖಂಡ್ ರಾಜ್ಯದವರು. ಈ ಕಾರಣಗಳಿಂದ ಎರಡು ರಾಜ್ಯದ ಗಣಿಗಾರಿಕೆ ವಿಷ್ಯಾ ಬಾಲಿವುಡ್ ಅಂಗಳದಲ್ಲಿ ಪ್ರೇಕ್ಷಕರಿಗೆ ಕಾಣಸಿಗಲಿದೆ.
ಗಣಿಗಾರಿಕೆಯ ಕುರಿತು ಬರುತ್ತಿರುವ ಸಿನ್ಮಾಕ್ಕೆ ‘ಕೊಯ್ಲಾಂಚಲ’ ಎನ್ನುವ ಹೆಸರಿಡಲಾಗಿದೆ. ಇದರಲ್ಲಿ ಗಣಿಗಾರಿಕೆ, ರಾಜಕೀಯ, ಕಾರ್ಮಿಕರ ಬವಣೆಯನ್ನು ಚಿತ್ರಿಸಲಾಗುತ್ತದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಾಲಿವುಡ್ ನಟರಾದ ವಿನೋದ್ ಖನ್ನಾ ಹಾಗೂ ಸುನೀಲ್ ಶೆಟ್ಟಿ ಇರಲಿದ್ದಾರೆ ಎನ್ನುವುದು ಸದ್ಯಕ್ಕೆ ಚಿತ್ರತಂಡ ಹೊರಬಿಟ್ಟ ಮಾಹಿತಿ. ಉಳಿದ ಮಾಹಿತಿಗಳನ್ನು ಚಿತ್ರತಂಡ ಶೀಘ್ರದಲ್ಲಿಯೇ ಹೊರಗಿಡುವ ಸಾಧ್ಯತೆಗಳನ್ನು ಹೇಳುತ್ತಿದೆ. ಚಿತ್ರದ ನಿರ್ದೇಶಕ ಅಶು ಹೇಳುವಂತೆ ‘ ಅಣ್ಣಾ( ಶೆಟ್ಟಿ) ಅವರ ಜತೆಗೆ ಚಿತ್ರದ ಕುರಿತು ಮಾತುಕತೆ ನಡೆದಿದೆ. ಇದರಲ್ಲಿ ಅಣ್ಣಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಐಎಎಸ್ ಅಽಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದೆ. ಚಿತ್ರ ಕತೆ ಕೇಳಿದಾಕ್ಷಣ ತಾನು ನಟಿಸುವುದಾಗಿ ಒಪ್ಪಿಕೊಂಡರು ಎಂದು ಅಶು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡರೆ ನೆಗೇಟಿವ್ ಶೇಡ್‌ನಲ್ಲಿ ವಿನೋದ್ ಖನ್ನಾ ಕಾಣಿಸುತ್ತಾರೆ. ಈ ಹಿಂದೆ ವಿನೋದ್ ಖನ್ನಾ ಅವರನ್ನು ನೆಗೆಟೀವ್ ಶೇಡ್‌ನಲ್ಲಿ ತೋರಿಸಿದ ದೀವಾನಾ ಪನ್(೨೦೦೧) ಚಿತ್ರ ಕೂಡ ಸಾಕಷ್ಟು ಹೊಗಳಿಕೆಗೆ ಪಾತ್ರವಾಗಿತ್ತು. ಈ ಬಳಿಕ ಅಶು ಅವರ ನಿರ್ದೇಶನದಲ್ಲಿ ವಿನೋದ್ ಖನ್ನಾ ಮತ್ತೊಂದು ಸಲ ನೆಗೆಟೀವ್ ಶೇಡ್‌ನಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಚಿತ್ರದ ಕತೆಯಿಂದ ಸ್ಪೂರ್ತಿ ಪಡೆದ ಖನ್ನಾ ಅವರು ಚಿತ್ರದಲ್ಲಿ ನಟಿಸಲು ತಾನು ರೆಡಿ ಎಂದರಂತೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಶು. ಈ ವರ್ಷದ ಮಧ್ಯಭಾಗದಲ್ಲಿ ಚಿತ್ರದ ಶೂಟಿಂಗ್ ಕೆಲಸಗಳು ಆರಂಭವಾಗಲಿದೆ. ೪೫ ದಿನಗಳ ಒಂದೇ ಶೆಡ್ಯುಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಚಿತ್ರದಲ್ಲಿ ಎರಡು ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತದೆ. ಒಂದನೇಯದ್ದು ಕರ್ನಾಟಕದ ಬಳ್ಳಾರಿ ಹಾಗೂ ಮತ್ತೊಂದು ಜಾರ್ಖಂಡ್‌ನ ರಾಮಘರ್, ಹಜಾರೀಭಾಗ್, ಅರ್‌ಗದಾದಲ್ಲಿ ಆದರೆ ಮೊದಲು ಎಲ್ಲಿ ಶೂಟಿಂಗ್ ಕೆಲಸ ಆರಮಭವಾಗುತ್ತದೆ ಎನ್ನುವುದು ಸಧ್ಯಕ್ಕೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಕನ್ನಡದಲ್ಲಿ ಬಂದ ಪ್ರಥ್ವಿ: ರಾಜ್ಯದ ಗಣಿಗಾರಿಕೆಯ ಕುರಿತು ಬೆಳಕು ಚೆಲ್ಲುವಂತಹ ವಿಶಿಷ್ಟ ಚಿತ್ರಗಳಲ್ಲಿ ಒಂದಾದ ‘ಪ್ರಥ್ವಿ’ಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡೀಸಿ ಪಾತ್ರದಲ್ಲಿ ಮಿಂಚಿದ್ದರು. ಇದರಲ್ಲೂ ಗಣಿಗಾರಿಕೆ, ರಾಜಕೀಯ , ಕಾರ್ಮಿಕರ ಸಮಸ್ಯೆ ಎಲ್ಲವನ್ನು ಕೊಡುವಲ್ಲಿ ಚಿತ್ರದ ನಿರ್ದೇಶಕರು ಗೆದ್ದುಕೊಂಡಿದ್ದರು. ಈಗ ಇಂತಹದ್ದೇ ಕತೆಯನ್ನು ಇಟ್ಟುಕೊಂಡು ಬಾಲಿವುಡ್‌ನಲ್ಲಿ‘ಕೊಯ್ಲಾಂಚಲ’ ಬರುತ್ತಿದೆಯಾ ಎನ್ನುವ ಅನುಮಾನಗಳು ಕಾಡುತ್ತಿದೆ. ಆದರೆ ಬಾಲಿವುಡ್‌ನಲ್ಲಿ ಬರಲಿರುವ ಈ ಚಿತ್ರವನ್ನು ನೋಡಿದ ಬಳಿಕವಷ್ಟೇ ನಿಖರವಾಗಿ ಹೇಳಿಬಿಡಬಹುದು ಅಲ್ವಾ..? ಚಿತ್ರಬರುವರೆಗೆ ಕಾಯಬೇಕಾಗುತ್ತದೆ ಎನ್ನುವುದು ಪ್ರೇಕ್ಷಕ ಮಹಾಪ್ರಭುಗಳ ಮಾತು.

ಬಾಲಿವುಡ್‌ನಲ್ಲಿ ತಂದೆ ಮಗನ ಜುಗಲ್‌ಬಂಧಿ ಹವಾ ಎಬ್ಬಿಸುತ್ತಿರುವ ಹವಾಯಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸ್ಕೇಟಿಂಗ್ ಕ್ರೀಡೆಯನ್ನು ಸಿನ್ಮಾ ಮಾಡುವ ಯೋಜನೆ, ಯೋಚನೆ ಹಾಲಿವುಡ್ ಇರಲಿ ಬಾಲಿವುಡ್ ಅಂಗಳದಲ್ಲೂ ಇರಲಿಲ್ಲ. ಆದರೆ ಬಾಲಿವುಡ್‌ನಲ್ಲಿ ನಿಧಾನವಾಗಿ ಟ್ರೇಲರ್ ಮೂಲಕ ಹವಾ ಎಬ್ಬಿಸುತ್ತಿರುವ ‘ಹವಾ ಹವಾಯಿ’ ಸಿನ್ಮಾವಂತೂ ಸ್ಕೇಟಿಂಗ್ ಕ್ರೀಡೆಯನ್ನು ಪ್ರಧಾನವಾಗಿಟ್ಟುಕೊಂಡು ಥಿಯೇಟರ್‌ಗೆ ಬರುವ ತಿಂಗಳ ಆರಂಭದಲ್ಲಿ ಲಗ್ಗೆ ಹಾಕುತ್ತಿದೆ. ಬಾಲಿವುಡ್‌ನಲ್ಲಿ ಬರುವ ಎಲ್ಲ ಚಿತ್ರಗಳಂತೆ ಈ ಚಿತ್ರ ಕೂಡ ಇರಲಿದೆ ಎನ್ನುವ ಕಲ್ಪನೆಯನ್ನು ನಿಮ್ಮ ತಲೆಯೊಳಗೆ ತಂದುಹಾಕಿದರೆ ಅದು ನಿಮ್ಮ ತಪ್ಪು ಕಲ್ಪನೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ಚಿತ್ರ ವಿಶ್ವದಲ್ಲಿಯೇ ಮೊದಲ ಪ್ರಯತ್ನ. ಇಲ್ಲಿವರೆಗೂ ಅಥ್ಲೀಟ್, ಕ್ರಿಕೆಟ್, ಹಾಕಿ, ಬಾಕ್ಸಿಂಗ್ ಎಲ್ಲವನ್ನು ಸಿನ್ಮಾದಲ್ಲಿ ತೋರಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಲಾಗಿದೆ. ಆದರೆ ಸ್ಕೇಟಿಂಗ್ ಎನ್ನುವ ಕ್ರೀಡೆಯನ್ನು ಒಂದು ವಿಭಿನ್ನ ರೀತಿಯಲ್ಲಿ ತೋರಿಸುವ ಕೆಲಸ ಹವಾ ಹವಾಯಿಯಲ್ಲಿ ನಡೆದಿದೆ.
ಈ ಹಿಂದೆ ಬಾಲಿವುಡ್ ಅಂಗಳದಲ್ಲಿ ವಿಶೇಷ ಮನ್ನಣೆಗಳಿಸಿದ ‘ಸ್ಟ್ಯಾನ್ಲಿ ಕಾ ಡಬ್ಬಾ’ ಸಿನ್ಮಾವನ್ನು ನಿರ್ದೇಶನ ಮಾಡಿದ ಅಮೂಲ್ ಗುಪ್ತೆ ಈ ಸಿನ್ಮಾದ ನಿರ್ದೇಶಕರು. ‘ಸ್ಟ್ಯಾನ್ಲಿ ಕಾ ಡಬ್ಬಾ’ ಚಿತ್ರದಲ್ಲಿ ನಟಿಸಿದ ಪಾರ್ತೋ ಗುಪ್ತೆ ಈ ಚಿತ್ರದ ಲೀಡ್ ನಟ. ಈ ಹಿಂದಿನ ಚಿತ್ರದಲ್ಲಿ ಪಾರ್ತೋ ನಟನೆಯನ್ನು ಬಾಲಿವುಡ್ ಮಂದಿ ಬಹಳಷ್ಟು ಹೊಗಳಿದ್ದರು. ಅದಕ್ಕೂ ಮುಖ್ಯವಾಗಿ ಪಾತ್ರಕ್ಕಾಗಿ ನಾನಾ ಪ್ರಶಸ್ತಿಗಳು ಕೂಡ ಬಂದಿತ್ತು. ಬಹಳ ಸಣ್ಣ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರ ಬರೀ ಎರಡು ವಾರದಲ್ಲಿ ೩.೫ ಕೋಟಿ ರೂ ವ್ಯವಹಾರ ಮಾಡಿತ್ತು. ಸ್ಟ್ಯಾನ್ಲಿ ಜತೆಗೆ ಐದು ಮಂದಿ ಗೆಳೆಯರು, ಒಂದು ಶಾಲೆ, ಪುಟ್ಟ ಹೋಟೆಲ್‌ನಲ್ಲಿ ಪೂರ್ತಿ ಚಿತ್ರ ಸಿದ್ಧವಾಗಿತ್ತು. ಚಿತ್ರದ ನಿರ್ದೇಶಕರು ಪಾರ್ತೋ ಅವರ ತಂದೆಯಾಗಿರುವ ಕಾರಣ ಚಿತ್ರದ ಕೆಮಸ್ಟಿ ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿತ್ತು. ಈಗ ಇಂತಹ ತಂದೆ- ಮಗ ಮತ್ತೆ ಜತೆಗೂಡಿದ್ದಾರೆ. ಸ್ಕೇಟಿಂಗ್ ಎನ್ನುವ ಕ್ರೀಡೆಯನ್ನು ತಳಮಟ್ಟದಲ್ಲೂ ಕ್ಲಿಕ್ ಮಾಡಲು ಈ ಚಿತ್ರ ವರವಾಗಲಿದೆ. ಹವಾ ಹವಾಯಿ ವಿಭಿನ್ನ ಕತೆ: ‘ಹವಾ ಹವಾಯಿ’ ಎನ್ನುವ ಪದ ಈ ಹಿಂದೆ ಮಿಸ್ಟರ್ ಇಂಡಿಯಾ ಸಿನ್ಮಾದಲ್ಲಿ ಶ್ರೀದೇವಿ ಬಳಸಿದ ಮಾತು. ಆದರೆ ಈ ಚಿತ್ರದಲ್ಲಿ ಮಾತ್ರ ಸ್ಕೇಟಿಂಗ್ ಕಲಿಯುವ ಕನಸ್ಸು ಹೊತ್ತ ಬೀದಿ ಬದಿಯ ಹುಡುಗ ಯಾವ ರೀತಿಯಲ್ಲಿ ಈ ಕ್ರೀಡೆಯನ್ನು ತನ್ನ ಬದುಕಿನಲ್ಲಿ ತೆಗೆದುಕೊಳ್ಳುತ್ತಾನೆ. ಅದಕ್ಕೆ ಬೆಂಬಲ ನೀಡುವ ಕೋಚ್ ಪಾತ್ರದಲ್ಲಿ ನಟ ಸಖೀಬ್ ಸಲಿಂ ಪಡುವ ಕಷ್ಟಗಳು. ಪಾರ್ತೊನ ಗೆಳೆಯರು ಅವನನ್ನು ಸ್ಕೇಟಿಂಗ್ ಸ್ಟಾರ್ ಮಾಡುವ ಮಜಬೂತಾದ ಕತೆ ಚಿತ್ರದಲ್ಲಿ ಕಾಣಸಿಗಲಿದೆ. ಚಿತ್ರವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಅಮೂಲ್ ಗುಪ್ತೆ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀದೇವಿ ಕೂಡ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಆದರೆ ಶ್ರೀದೇವಿ ಚಿತ್ರದ ಕುರಿತು ಅಷ್ಟೊಂದು ಸಿರೀಯಸ್ ರೀತಿಯಲ್ಲಿ ಇಲ್ಲದೇ ಹೋದ ಕಾರಣ ಚಿತ್ರದಲ್ಲಿರುವ ಒಂದು ಪಾತ್ರವನ್ನು ನಟಿಯೊಬ್ಬರು ಮಾಡುತ್ತಿದ್ದಾರೆ. ಅಮೂಲ್ ಗುಪ್ತೆ ಈ ಚಿತ್ರಕ್ಕೆ ಒಂದು ಹಾಡನ್ನು ಬರೆದಿರುವ ಜತೆಗೆ ಹಾಡಿದ್ದಾರೆ. ಉಳಿದ ಹಾಡುಗಳನ್ನು ಹಿತೇಶ್ ಸೋನಿಕ್ ಮಾಡಿದ್ದಾರೆ. ಈ ಚಿತ್ರದ ಕತೆ ಹಾಗೂ ನಿರ್ದೇಶನ ಅಮೂಲ್ ಗುಪ್ತೆ ಮಾಡಿರೋದು ಮತ್ತಷ್ಟೂ ಹೈಫ್‌ಗೆ ಕಾರಣವಾಗಿದೆ. ಈ ಹಿಂದೆ ಅಮೂಲ್ ಬರೆದ ತಾರೇ ಜಮೀನ್ ಪರ್ ಸಿನ್ಮಾ ಬಾಲಿವುಡ್ ಅಂಗಳದಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತ್ತು ಎನ್ನುವ ನೆನಪು ಈಗಲೂ ಪ್ರೇಕ್ಷಕರಲ್ಲಿ ಉಳಿದುಕೊಂಡಿದೆ.