Friday, April 11, 2014

ಮನುಕುಲದ ರಕ್ಷಣೆಯ ಶುಭ ಶುಕ್ರವಾರ

* ಸ್ಟೀವನ್ ರೇಗೊ, ದಾರಂದಕುಕ್ಕು ಶುಭ ಶುಕ್ರವಾರ ಕ್ರೈಸ್ತರಿಗೆ ಪವಿತ್ರ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತದೆಯೋ ಹಾಗೆ ಶುಭ ಶುಕ್ರವಾರ ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಯೇಸುಕ್ರಿಸ್ತ ಈ ಪವಿತ್ರ ಶುಭ ಶುಕ್ರವಾರದಂದು ಪ್ರಾಣತ್ಯಾಗ ಮಾಡಿ ಮಾನವತೆಯ ಅಂತಃಕರಣವನ್ನೇ ಕಲಕಿ ಪ್ರೇಮದ ನೆಲೆಯನ್ನು ಉದ್ಭವಗೊಳಿಸಿದವರು. ಈ ಅರ್ಥದಲ್ಲಿ ಶುಭ ಶುಕ್ರವಾರ ಕ್ರೈಸ್ತ ಬಂಧುಗಳಿಗೆ ಧ್ಯಾನ ದಿನ. ವಿಶ್ವಾದಾದ್ಯಂತ ಎಲ್ಲ ಕ್ರೈಸ್ತರು ಯೇಸುಕ್ರಿಸ್ತನ ಶಿಲುಬೆಯ ಮರಣದಲ್ಲಿ ಅಡಗಿರುವ ಅಪೂರ್ವವಾದ ತ್ಯಾಗ, ಬಲಿದಾನಗಳನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾ ದೇವರನ್ನು ಕೊಂಡಾಡುವುದೇ ಈ ಆಚರಣೆಯ ಮಹತ್ವ. ಕೆಲವು ದಿನಗಳ ಹಿಂದೆ ವಿಭೂತಿ ಬುಧವಾರವನ್ನು ಆಚರಿಸಿ, ಕ್ರಿಸ್ತನ ನಿಜ ಅನುಯಾಯಿಗಳಾಗಲು ಕರೆ ನೀಡಿರುವ ಕ್ರೈಸ್ತ ಧರ್ಮಸಭೆ ಈ ತಪಸ್ಸು ಕಾಲದಲ್ಲಿ ಕ್ರೈಸ್ತ ಸಮುದಾಯದೊಡಗೂಡಿ ಕ್ರಿಸ್ತರ ಪಾಡು ಮರಣವನ್ನು ಧ್ಯಾನಿಸುತ್ತದೆ. ಬೂದಿ ಬುಧವಾರದಿಂದ ಶುಭ ಶುಕ್ರವಾದವರೆಗೆ ನಲ್ವತ್ತು ದಿನಗಳು ಉಪವಾಸ ಮಾಡುವುದು, ಧ್ಯಾನದಲ್ಲಿ ತೊಡಗುವುದು, ಧ್ಯಾನ, ಧರ್ಮ ಮತ್ತು ತ್ಯಾಗದಿಂದ ಕೂಡಿದ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು ಇತ್ಯಾದಿಗಳು ಕ್ರೈಸ್ತರಲ್ಲಿ ಬಂದಿರುವ ಧಾರ್ಮಿಕ ಸಂಪ್ರದಾಯ. ಕೇವಲ ೩೦ ಬೆಳ್ಳಿನಾಣ್ಯಗಳ ಆಸೆಯಿಂದ ಯೇಸುವಿನ ಶಿಷ್ಯರಲ್ಲೊಬ್ಬನಾದ ಯೂದನು ತನ್ನ ಗುರುವನ್ನು ಹಿಡಿದು ಕೊಟ್ಟು ನಂತರ ತನ್ನ ಗುರುದ್ರೋಹಕ್ಕಾಗಿ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡ ಎಂದು ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಯೇಸು ಬಂಧಿತರಾದ ರಾತ್ರಿಯನ್ನು ಕ್ರೈಸ್ತರು ಬಹು ಗಂಭೀರವಾಗಿ ಆಚರಿಸುತ್ತಾರೆ. ಇದನ್ನು ‘ಪಾಸ್ಕಾ ಹಬ್ಬದ ರಾತ್ರಿ’ ಎಂದು ಕರೆಯುತ್ತಾರೆ. ಇತಿಹಾಸದಲ್ಲಿ ಇಸ್ರೇಲರು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ದೇವರು ಅವರ ಪ್ರಾಣವನ್ನುಳಿಸಿ ದಾಸತ್ವದಿಂದ ಅವರನ್ನು ಬಿಡಿಸಿದ್ದನ್ನು ನೆನಪಿಸಿಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ರಾತ್ರಿಯ ಆಚರಣೆಯ ಉದ್ದೇಶ. ಶುಭ ಶುಕ್ರವಾರಕ್ಕೆ ಬೈಬಲ್ ವ್ಯಾಖ್ಯೆ:
ಆ ಕಾಲದಲ್ಲಿ ಮರಣದಂಡನೆಯ ಶಿಕ್ಷೆಯನ್ನು ಶಿಲುಬೆಗೆ ಹಾಕಿ ಸಾಯಿಸುವುದರ ಮೂಲಕ ವಿಧಿಸಲಾಗುತ್ತಿತ್ತು. ಯೇಸುವಿನ ಪ್ರಗತಿಯನ್ನು ಕಾಣಲಾರದೆ ಯೆಹೂದ್ಯ ಯಾಜಕರು, ಶಾಸ್ತ್ರಿಗಳು ಅವರ ಮೇಲೆ ಉರಿದು ಬಿದ್ದು ಅವರನ್ನು ಯಾವ ರೀತಿಯಲ್ಲಾದರೂ ನಿರ್ಮೂಲ ಮಾಡಬೇಕೆಂದು ಪ್ರಯತ್ನಪಟ್ಟರು. ಕ್ರಿಸ್ತರು ಈ ಪ್ರಗತಿಯೇ ಅವರ ಅಧಿಕಾರತ್ವಕ್ಕೆ ಮುಳ್ಳಾಗಬಹುದೆಂಬ ಅನುಮಾನ ಅವರಲ್ಲಿ ಮೊಳೆಯಿತು. ಆದುದರಿಂದ ಸುಳ್ಳು ಆರೋಪಗಳನ್ನು ಯೇಸುವಿನ ತಲೆಯ ಮೇಲೆ ಹೇರಿದ ಬಳಿಕ ಪಿಲಾತನನ್ನು ಹುರಿದುಂಬಿಸಿ, ಶಿಲುಬೆಗೇರಿಸು, ಶಿಲುಬೆಗೇರಿಸು ಎಂಬ ಅಟ್ಟಹಾಸದೊಡನೆ ಮೆರೆದು ಕಡೆಗೂ ಕ್ರಿಸ್ತರ ಹೆಗಲ ಮೇಲೆ ಭಾರವಾದ ಶಿಲುಬೆಯನ್ನು ಹೊರಿಸಿದರು. ಹೀಗೆ ಅಂಬರದಡಿಯ ಗಿರಿಕಂದರಗಳ ನಡುವೆ ಎದ್ದು ನಿಂತಿರುವ ಗೊಲ್ಗೋಥಾ ಬೆಟ್ಟವನ್ನು ಹತ್ತಿಸಿ ಯೇಸುವನ್ನು ಶಿಲುಬೆ ಮೇಲೆ ತೂಗಾಡಿಸಲು ತಾವು ಸಹ ಹೊರಟರು. ‘ಗೊಲ್ಗೋಥಾ’ದ ಗುರಿ ಮುಟ್ಟಿದ ಕ್ರಿಸ್ತರನ್ನು ಅರೆಬೆತ್ತಲೆಯಾಗಿಸಿ, ಶಿಲುಬೆ ಮರದ ಮೇಲೆ ಮಲಗಿಸಿ ಕೈಗೂ, ಕಾಲಿಗೂ ಮೊಳೆಯನ್ನು ಜಡಿದರು. ಯೇಸುವಿಗೆ ಶಿಕ್ಷೆ ವಿಧಿಸಿದ ನಂತರ ಹುರಿಮಾಡಲ್ಪಟ್ಟ ಕೊರಡೆಗಳಿಂದ (ಕೊರಡೆ ಎಂದರೆ ಚೂಪಾದ ಎಲುಬಿನ ತುಂಡುಗಳನ್ನು ತುದಿಗೆ ಸಿಕ್ಕಿಸಿದ ಚರ್ಮದ ಚಾವಟಿಗಳು ಹೊಡೆದರೆ ರಕ್ತ ಮಾಂಸ ಒಂದೇ ಏಟಿಗೆ ಹೊರಬರುತ್ತಿತ್ತು) ಬಲವಾಗಿ ಹೊಡೆದು, ನೋಯಿಸಿ ಮುಖದ ಮೇಲೆ ಗುದ್ದಿ ಅವಮಾನಿಸಿ ಅಂತಿಮವಾಗಿ ಮುಳ್ಳಿನಿಂದ ಹೆಣೆದ ಕಿರೀಟವೊಂದನ್ನು ತಲೆಯ ಮೇಲೆ ಒತ್ತಿ ಹಿಡಿದು ಕ್ರೂರವಾಗಿ ಹಿಂಸಿಸಲಾಯಿತು. ಹೀಗೆ ಅಂಗಾಲಿನಿಂದ ನಡು ನೆತ್ತಿಯವರೆಗೂ ಗಾಯಗಳು ಮತ್ತು ರಕ್ತ ಸ್ರಾವ ಎಂದು ಬೈಬಲ್‌ನಲ್ಲಿ ಯೇಸುವಿನ ಕಷ್ಟದ ಬಗ್ಗೆ ಉಲ್ಲೇಖಗಳಿವೆ. ಶುಭ ಶುಕ್ರವಾರ ಆಚರಣೆಗಳು: ಅಂದು ದೇವಾಲಯಗಳಲ್ಲಿ ಕ್ರಿಸ್ತನ ಸಾವಿನ ಸಂಬಂಧಿಸಿದ ಭೋದನೆ, ಪ್ರಸಂಗಗಳು ನಡೆಯುತ್ತವೆ. ವಿಶೇಷ ಕೀರ್ತನೆ ಗೀತೆಗಳನ್ನು ರಚಿಸಿ ಹಾಡುವುದು ಉಂಟು. ಪೂಜ್ಯ ಯೇಸುವಿನ ಹಾಡುಗಳು ಎಂಬ ಮಹಾರೂಪಕವನ್ನು ಅಭಿನಯಿಸುವುದರ ಮೂಲಕ ಶೋಕವನ್ನು ವ್ಯಕ್ತಪಡಿಸುವುದುಂಟು. ಯೇಸು ತನ್ನ ಶಿಷ್ಯರ ಪಾಪಗಳನ್ನು ತೊಳೆದು ಇತರರ ಸೇವೆಯ ಮಹತ್ವವನ್ನು ತೋರಿಸಿದಂತೆ ಹನ್ನೆರಡು ಶಿಷ್ಯರ ಪಾದ ತೊಳೆಯುವಿಕೆ ಎಂಬ ಕಾರ್ಯ ಪ್ರತಿ ಚರ್ಚ್‌ನಲ್ಲಿ ನಡೆಯುತ್ತದೆ. ಶುಭಶುಕ್ರವಾರ ಉಪವಾಸ ಮಾಡುವುದು, ಕಪ್ಪು ಬಟ್ಟೆಗಳನ್ನು ಧರಿಸುವುದು, ಮೌನವೃತ ಮತ್ತು ಧ್ಯಾನದಲ್ಲಿ ನಿರಂತರಾಗಿರುವುದು, ಆ ದಿನ ದೇವಾಲಯಗಳಲ್ಲಿ ಯಾವುದೇ ಅಲಂಕಾರ ಇರುವುದಿಲ್ಲ. ಗರ್ಭಗುಡಿಯ ಒಳಾಂಗಣವನ್ನು ಬಟ್ಟೆಯಿಂದ ಹೊದಿಸಿ, ಚರ್ಚುಗಳ ಗಂಟೆಗಳನ್ನು ಬಾರಿಸದೆ ಎಲ್ಲರೂ ಶೋಕವನ್ನು ಆಚರಿಸುತ್ತಾರೆ. ಆ ದಿನ ಮಧ್ಯಾಹ್ನ ೧೨ರಿಂದ ೩ ಗಂಟೆಯವರೆಗೂ ಕ್ರಿಸ್ತನು ಸಾಯುವ ಮುನ್ನ ಶಿಲುಬೆಯ ಮೇಲೆ ನುಡಿದರೆನ್ನಲಾದ ಏಳೂ ವಾಕ್ಯಗಳನ್ನು ವಿಸ್ತಾರವಾಗಿ ವ್ಯಾಖ್ಯಾನಿಸಿ ಧರ್ಮೋಪದೇಶ ಮಾಡಲಾಗುತ್ತದೆ. ಇದು ರೋಮನ್ ಕಥೋಲಿಕರು, ಪ್ರಾಟೆಸ್ಟೆಂಟರು ಮತ್ತು ಎಲ್ಲ ಪಂಗಡಗಳಲ್ಲಿಯೂ ಕಂಡು ಬರುವ ಒಂದು ಮುಖ್ಯವಾದ ಸಾರ್ವತ್ರಿಕ ಆಚರಣೆ. ದೈವ ಪ್ರೀತಿ, ಮಾನವ ಪ್ರೇಮ, ಮಾನವೀಯತೆಗಳಿಂದ ಕೂಡಿದ ಸೇವಾ ಮನೋಭಾವ ಮುಂತಾದವುಗಳನ್ನು ಪ್ರತಿಪಾದಿಸಿದ ಕ್ರಿಸ್ತನ ಬೋಧನೆ, ಸಾಧನೆ, ವಿಶ್ವ ಕಲ್ಯಾಣದಲ್ಲಿ ಅಸ್ಥೆ ಇರುವ ವಿಶ್ವ ಸಮಾಜದಲ್ಲಿ ನಂಬಿಕೆ ಇರಿಸಿಕೊಂಡಿರುವ ಎಲ್ಲ ಮತಧರ್ಮೀಯರ ಗಮನ ಸೆಳೆದಿದೆ.

No comments:

Post a Comment