Tuesday, March 25, 2014

ಕೋಸ್ಟಲ್‌ವುಡ್‌ನಲ್ಲಿ ರಾಥೋಡ್ ಹಾಡು

* ಸ್ಟೀವನ್ ರೇಗೊ, ದಾರಂದಕುಕ್ಕು ಪಕ್ಕಾ ಲೋಕಲ್ ಆಗಿ ಯೋಚನೆ ಮಾಡುತ್ತಿದ್ದ ಕರಾವಳಿಯ ಸಿನಿಮಾ ನಿರ್ದೇಶಕರು ಈಗ ಬಾಲಿವುಡ್ ರೇಂಜ್‌ಗೆ ಏರಿದ್ದಾರೆ. ಹೊಸ ಯೋಚನೆಗಳ ಜತೆಗೆ ಸಂಗೀತ ಕ್ಷೇತ್ರದಲ್ಲೂ ಗಂಭೀರವಾಗಿ ಕೆಲಸ ಮಾಡುವ ಪರಂಪರೆ ಕೋಸ್ಟಲ್‌ವುಡ್‌ನಲ್ಲಿ ಮೊಳಕೆಯೊಡೆಯುತ್ತಿದೆ. ಇತ್ತೀಚಿನ ಒಂದಷ್ಟು ತುಳು ಚಿತ್ರಗಳ ಹಾಡುಗಳನ್ನು ಕೇಳಿ, ಅಲ್ಲಿರುವ ಧ್ವನಿ ಬಾಲಿವುಡ್ ಗಾಯಕರದು. ಉದಿತ್ ನಾರಾಯಣ್, ಕೈಲಾಶ್ ಕೇರ್, ಆಲಿಖಾನ್, ಸಿದ್ಧಾರ್ಥ್ ಮಹದೇವನ್, ಸೋನು ನಿಗಮ್, ವಿನೋದ್ ರಾಥೋಡ್.. ಹೀಗೆ ಬಾಲಿವುಡ್ ಸಿಂಗರ್ಸ್ ಬಾಯಲ್ಲಿ ಪಕ್ಕಾ ತುಳು ಹಾಡುಗಳನ್ನು ಹಾಡಿಸುತ್ತಿದ್ದಾರೆ.
ತುಳು ಚಿತ್ರರಂಗದ ವ್ಯಾಪ್ತಿ ಸೀಮಿತ.ದಕ್ಷಿಣ ಕನ್ನಡದ ಗಡಿ ದಾಟಿದರೆ ಮಾರುಕಟ್ಟೆ ಇಲ್ಲ ಎಂಬ ಮಾತಿದೆ. ಕರಾವಳಿಯಲ್ಲಿ ತುಳು ನಾಟಕಗಳು ಪ್ರೇಕ್ಷಕರನ್ನು ಸೆಳೆಯುವಷ್ಟು ಇಂದಿಗೂ ತುಳು ಚಿತ್ರಗಳು ಸೆಳೆಯುತ್ತಿಲ್ಲ. ಆದರೂ ಬಾಲಿವುಡ್ ಗಾಯಕರಾ? ಎಂಬ ಪ್ರಶ್ನೆ ಬರುತ್ತದೆ. ಆದರೆ, ಜನರನ್ನು ಸೆಳೆಯಬೇಕಾದರೆ ಏನಾದರೂ ಹೊಸತನ ನೀಡಬೇಕು, ಫ್ರೆಶ್‌ನೆಸ್ ಇರಬೇಕು ಎಂಬುದು ಇಲ್ಲಿನ ನಿರ್ದೇಶಕರ ಮಾತು. ಈಗ ಇಂತಹ ಸರದಿಯಲ್ಲಿ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ವಿನೋದ್ ರಾಥೋಡ್ ಬಂದು ಸೇರಿದ್ದಾರೆ. ಅಂದಹಾಗೆ ಕೋಸ್ಟಲ್‌ವುಡ್‌ನ ‘ಮುಳ್ಳ ಬೇಲಿ’( ಮುಳ್ಳಿನ ಬೇಲಿ)ಯಲ್ಲಿ ವಿನೋದ್ ಎರಡು ಹಾಡುಗಳನ್ನು ಹಾಡಿದ್ದಾರೆ. ಲಕ್ಷಗಟ್ಟಲೆ ತೂಗುವ ಹಿನ್ನೆಲೆ ಗಾಯಕ ವಿನೋದ್ ರಾಥೋಡ್ ತುಳು ಚಿತ್ರದಲ್ಲಿ ಹಾಡಲು ಹೇಗೆ ಒಪ್ಪಿಕೊಂಡರು ಎನ್ನುವುದು ಸೋಜಿಗ ವಿಷ್ಯಾವಾಗಿ ಮುಂದೆ ನಿಂತಿದೆ. ಈ ಕುರಿತು ಚಿತ್ರದ ನಿರ್ದೇಶಕ ಶರತ್‌ಚಂದ್ರ ಕುಮಾರ್ ಕದ್ರಿಯವರಲ್ಲಿ ಕೇಳಿದರೆ ಹೇಳುವುದು ಹೀಗೆ: ಒಬ್ಬ ದೊಡ್ಡ ಹಿನ್ನೆಲೆಗಾಯಕ ತೀರಾ ಸೀಮಿತ ಮಾರುಕಟ್ಟೆ ಹೊಂದಿರುವ ತುಳು ಚಿತ್ರದಲ್ಲಿ ಹಾಡಲು ಒಪ್ಪಿಕೊಂಡಿರುವುದು ಒಂದು ಮ್ಯಾಜಿಕ್ ಎನ್ನಬಹುದು. ಚಿತ್ರದಲ್ಲಿ ಐದು ಹಾಡುಗಳಿವೆ. ಅದರಲ್ಲಿ ಎರಡು ಹಾಡುಗಳಿಗೆ ನೀವು ಹಾಡಬೇಕು ಎಂದು ವಿನಂತಿ ಮಾಡಿಕೊಂಡೇ ಒಂದ್ ಸಲ ಯೋಚನೆ ಮಾಡಿ ‘ಯೆಸ್’ ಅಂದುಬಿಟ್ಟರು. ನೀವು ನನ್ನ ಅಜ್ಜನ ಹಾಗೆ ಕಾಣುತ್ತೀರಿ. ಅದಕ್ಕೂ ಮುಖ್ಯವಾಗಿ ಪ್ರಾದೇಶಿಕ ಭಾಷೆಯ ಚಿತ್ರವೊಂದರಲ್ಲಿ ಹಾಡುವುದು ಎಂದರೆ ನನಗೂ ಖುಷಿ ಎಂದು ಬಿಟ್ಟರು. ಚಿತ್ರದ ಟೈಟಲ್ ಹಾಡು ‘ಮುಳ್ಳಬೇಲಿ’ಯಂತೂ ವಿನೋದ್‌ಗೆ ಅತೀ ಇಷ್ಟವಾಯಿತು. ತುಳು ಭಾಷೆಯಲ್ಲಿರುವ ಹಾಡಿನ ಸಾಹಿತ್ಯವನ್ನು ಕೇಳಿ ಖುಷಿಯಾದರು ಎನ್ನುತ್ತಾರೆ ಶರತ್ ಚಂದ್ರ ಕುಮಾರ್ ಕದ್ರಿ. ಅಂದಹಾಗೆ ಚಿತ್ರದ ಸಂಗೀತ ನಿರ್ದೇಶಕರು ಕೂಡ ಮುಂಬಯಿಯ ಹಿರಿಯ ಸಂಗೀತ ನಿರ್ದೇಶಕ ಜಿತಿನ್ ಶ್ಯಾಮ್ ಕೊಟ್ಟಿದ್ದಾರೆ. ರಾಥೋಡ್ ಜತೆಗೆ ಸಂದೀಪ್ ದಾತೆ, ಬೊಬ್ಬಿ ದತ್ತಾ, ಸುದಕ್ಷಿಣ ದೀಕ್ಷಿತ್, ವಾಯ್ಸ್ ಆಪ್ ಕರ್ನಾಟಕದ ವಿನ್ನರ್ ಡಾ. ನಿತಿನ್ ಆಚಾರ್ಯ, ಪುತ್ತೂರಿನ ಕವಿತಾ ಗೋಶಲ್ ಹಾಡಿದ್ದಾರೆ. ಇದರಲ್ಲಿ ಮುಂಬಯಿಯ ಖ್ಯಾತ ರಿರ್ಕಾಡಿಸ್ಟ್ ಅಮೊಂಗ್ ಡೇನಿಯಲ್ ಅವರ ಸಂಗೀತ ಪರಿಕರಣಗಳ ಸಂಯೋಜನೆ ‘ಮುಳ್ಳ ಬೇಲಿ’ಚಿತ್ರದ ಹಾಡುಗಳಿಗೆ ಹೊಸ ಟಚ್ ಸಿಕ್ಕಿದೆ. ಅಂದಹಾಗೆ ಬಾಲಿವುಡ್ ಗಾಯಕರಿಂದ ಹಾಡಿಸುವುದು ಕೂಡಾ ದುಬಾರಿ. ಇಲ್ಲಿಂದ ಮುಂಬಯಿಗೆ ಹೋಗಿ ಲಕ್ಷಗಟ್ಟಲೆ ಕೊಟ್ಟು ಹಾಡಿಸಬೇಕು. ಕನ್ನಡಕ್ಕಾದರೆ ಓಕೆ, ಮಾರುಕಟ್ಟೆ ಸ್ವಲ್ಪ ಮಟ್ಟಿಗಾದರೂ ದೊಡ್ಡದು, ಸೆಟಲೈಟ್ ರೈಟ್ಸ್ ಕೂಡ ಸಿಗುತ್ತದೆ. ಆದರೆ ತುಳು ಚಿತ್ರರಂಗಕ್ಕೆ ಬಜೆಟ್ ಹೊರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಸಿನಿಮಾದಲ್ಲಿ ಹೊಸತನವಿದ್ದರೆ ಹಾಡು ಹಿಟ್ ಆದರೆ, ಸಿನಿಮಾ ಹಿಟ್ ಆದರೆ ಬಜೆಟ್ ತನ್ನಿಂತಾನೇ ಬರುತ್ತದೆ ಎಂಬುದು ಇಲ್ಲಿನ ನಿರ್ದೇಶಕರ ಮಾತು. ಈ ಎಲ್ಲ ವಿಷ್ಯಾಗಳನ್ನು ನೋಡುತ್ತಾ ಹೋದಂತೆ ತುಳು ಚಿತ್ರರಂಗ ಅಪ್‌ಡೇಟ್ ಆಗುತ್ತಿದೆ ಅನ್ನೋದೇ ಡಬ್ಬಲ್ ಖುಷಿಯಾಗುತ್ತದೆ.

No comments:

Post a Comment