Monday, April 14, 2014

ಕಾಲಿವುಡ್‌ನಲ್ಲಿ ಮತ್ತೆ ಹುಂಜ ಚಿತ್ರ!

* ಸ್ಟೀವನ್ ರೇಗೊ, ದಾರಂದಕುಕ್ಕು ಕಾಲಿವುಡ್ ಸಿನಿಮಾಗಳೇ ಹಾಗೇ ಇಲ್ಲಿನ ಕತೆಗಳೇ ಚಿತ್ರಕ್ಕೆ ಜೀವಾಳ. ಕಾಲಿವುಡ್ ಸಿನಿಮಾ ನಿರ್ದೇಶಕರು ಒಳ್ಳೆಯ ಕತೆ ಇದ್ದಾರೆ ಮಾತ್ರ ಸಿನ್ಮಾ ಮಾಡೋದು ಎನ್ನೋದು ಸಿನಿಮಾ ಮಂದಿಯವರು ಹೇಳುವ ಮಾತು. ಇದೇ ಒಂದು ಕಾರಣದಿಂದ ಇಲ್ಲಿನ ಸಿನಿಮಾಗಳನ್ನು ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಯವರು ರಿಮೇಕ್ ಮಾಡಿಕೊಂಡು ಸಿನಿಮಾ ಗೆಲ್ಲಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಈಗ ಕಾಲಿವುಡ್‌ನಲ್ಲಿ ಮತ್ತೆ ಹುಂಜದ ಮೇಲೊಂದು ಸಿನಿಮಾ ಮೂಡಿಬರುತ್ತಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ಶಿಷ್ಯ ಎ.ಎಲ್. ವಿಜಯ್ ಅವರ ಹೊಸ ಚಿತ್ರ ‘ಶೈವಂ’ ನಲ್ಲಿ ಹುಂಜ ಹಾಗೂ ಬಾಲಕಿಯೇ ಲೀಡ್ ನಟರು. ಹೌದು. ವಿಜಯ್ ಈಗಾಗಲೇ ತಮಿಳಿನಲ್ಲಿ ದೈವ ತಿರುಮಗಳ್ ಚಿತ್ರ ಮಾಡಿದವರು. ಈ ಚಿತ್ರದಲ್ಲಿ ವಿಕ್ರಂ ಅವರನ್ನು ಬುದ್ದಿಮಾಂದ್ಯತಂದೆಯಂತೆ ಚಿತ್ರಿಸಿಕೊಂಡು ಮಗಳನ್ನು ಹುಡುಕುವ ಪಾತ್ರದಲ್ಲಿ ಪ್ರೇಕ್ಷಕರಿಗೆ ಕಣ್ಣೀರು ಕೊಟ್ಟವರು. ಈ ಚಿತ್ರದಲ್ಲಿ ನಟಿಸಿದ ಸಾರಾ ಅರ್ಜುನ್. ಶೈವಂ ಚಿತ್ರದಲ್ಲಿ ನಾಯಕಿ. ಈ ಪುಟಾಣಿಯ ಜತೆಗೆ ಹುಂಜವೊಂದು ನಟಿಸುತ್ತಿದೆ.
ಶೈವಂನಲ್ಲಿ ಹುಂಜಕ್ಕೆ ಪಾಪಾ ಎನ್ನುವ ಹೆಸರಿದೆ. ಸಾರಾ ಪ್ರೀತಿಸುವ ಪಾಪಾ ಕಳೆದು ಹೋಗುತ್ತದೆ. ಹಳ್ಳಿಗಾಡಿನಲ್ಲಿ ಪಾಪಾ ಕ್ಷಿಡುಕಾಟ, ಅವರಿಬ್ಬರ ನಡುವಿನ ಪ್ರೀತಿಯ ಕತೆಯೇ ಶೈವಂನ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು. ಇಡೀ ಚಿತ್ರದಲ್ಲಿ ಸಾರಾ ಹಾಗೂ ಹುಂಜದ ನಟನೇ ಗಮನ ಸೆಳೆದುಬಿಡುತ್ತದೆ. ಇದರ ಜತೆಗೆ ಹಿರಿಯ ನಟ ನಾಜೀರ್ ಕೂಡ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾರೆ. ಮುಂಬಯಿಯಲ್ಲಿ ಬೆಳೆದ ಹುಡುಗಿ ಸಾರಾ ಅರ್ಜುನ್ ಈಗಾಗಲೇ ೪೦೪ ಹಾಗೂ ಏಕ್ ತಿ ಡಯಾನ್ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಸಣ್ಣಪುಟ್ಟ ರೋಲ್‌ಗಳಲ್ಲಿ ಮಿಂಚುತ್ತಿರುವ ಅರ್ಜುನ್ ಅವರ ಪುತ್ರಿ ಸಾರಾ ಅವರನ್ನು ವಿಜಯ್ ಜಾಹೀರಾತು ಶೂಟಿಂಗ್‌ವೊಂದರಲ್ಲಿ ಕಂಡಿದ್ದರು. ಈ ಬಳಿಕ ಸಾರಾ ಅವರನ್ನು ಮುಖ್ಯವಾಗಿಟ್ಟುಕೊಂಡು ದೈವ ತಿರುಮಗಳ್ ಚಿತ್ರ ಮಾಡಿ ಬಾಕ್ಸಾಫೀಸ್‌ನಲ್ಲಿ ಹೊಸ ತಿರುವಿಗೆ ಕಾರಣವಾಗಿದ್ದರು. ಈಗ ಶೈವಂ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಕಾಣುತ್ತಿದೆ. ಅದಕ್ಕೂ ಮೊದಲಾಗಿ ಚಿತ್ರದ ಟ್ರೈಲರ್ ಸಾಮಾಜಿಕ ತಾಣಗಳಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಅಂದಹಾಗೆ ೨೦೧೧ರಲ್ಲಿ ಕಾಲಿವುಡ್‌ನಲ್ಲಿ ಬಂದ ‘ಆಡುಕಲಂ’ ಚಿತ್ರದಲ್ಲಿ ಕೋಳಿ ಅಂಕದ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಈ ಚಿತ್ರವನ್ನು ತೆರೆಗೆ ತಂದಿದ್ದರು.
ಕಾಲಿವುಡ್ ಸ್ಟಾರ್ ನಟ ಧನುಷ್, ನಟ ಕಿಶೋರ್ ಹಾಗೂ ತಪಸಿ ನಟಿಸಿದ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಕೂಡ ಬಂದಿತ್ತು. ಕರಾವಳಿಯಲ್ಲಿ ನಡೆಯುತ್ತಿರುವ ಕೋಳಿ ಅಂಕ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಇದೇ ಮಾದರಿಯ ಕೋಳಿ ಅಂಕ ತಮಿಳುನಾಡಿನ ಮಧುರೈಯಲ್ಲೂ ಫೇಮಸ್. ನಿರ್ದೇಶಕ ವೆಟ್ರಿಮಾರನ್ ಮಧುರೈ ಅಸುಪಾಸಿನಲ್ಲಿ ನಡೆಯುತ್ತಿದ್ದ ಈ ಕೋಳಿ ಅಂಕದ ಕತೆಯನ್ನೇ ತನ್ನ ಚಿತ್ರಕ್ಕೆ ಜೀವಾಳ ಮಾಡಿಕೊಂಡು ಭಾರತೀಯ ಸಿನಿಮಾರಂಗದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದರು. ಈ ಬಳಿಕ ವೆಟ್ರಿಮಾರನ್ ಆನೆ ಮೇಲೊಂದು ಸಿನಿಮಾ ಮಾಡಿದ್ದರು. ಆದರೆ ‘ಆಡುಕಲಂ’ನಂತೆ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡುವಲ್ಲಿ ವಿಫಲವಾಯಿತು. ಟೋಟಲಿ ಶೈವಂನಲ್ಲಿ ಹುಂಜವೊಂದರ ಕತೆ ಸಿನಿಮಾಗಳಲ್ಲಿ ಯಾವ ರೀತಿ ವರ್ಕ್ ಔಟ್ ಆಗುತ್ತೆ ಎನ್ನುವ ಕುತೂಹಲ ಸಿನಿಮಾ ಬಿಡುಗಡೆ ಕಂಡ ನಂತರವೇ ತಿಳಿಯಬೇಕು. ಅಲ್ಲಿವರೆಗೂ ಪ್ರೇಕ್ಷಕ ಕಾದು ಕೂರಬೇಕು.

No comments:

Post a Comment