Friday, April 11, 2014

ಪ್ರಣೀತಾಳಿಗೆ ಬಾಲಿವುಡ್ ನೋ ಎಂಟ್ರಿ !

* ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್ ಅಂಗಳದ ಮ್ಯಾಜಿಕ್‌ಗಿರಿಯೇ ಅಂತದ್ದು. ಈ ಅಂಗಳದಲ್ಲಿ ಒಂದ್ ಸಾರಿನಾದರೂ ಬಂದು ಕುಣಿಯಬೇಕು ಎನ್ನುವ ನಟ, ನಟಿಯರೇ ಹೆಚ್ಚು. ಭಾರತೀಯ ಸಿನಿಮಾ ರಂಗದಲ್ಲಿ ಕೊನೆಯ ನಿಲ್ದಾಣ ಏನಾದರೂ ಇದ್ದಾರೆ ಅದು ಬಾಲಿವುಡ್ ಅಂಗಳ ಮಾತ್ರ ಎನ್ನುವ ಮಾತು ಚಾಲ್ತಿಯಲ್ಲಿದೆ. ಇಂತಹ ಅಂಗಳದಲ್ಲಿ ಮಿಂಚಬೇಕು ಎಂದುಕೊಂಡು ಗಂಟುಮೂಟೆ ಕಟ್ಟಿದವರು ಈಗ ಮತ್ತೆ ಹಳೆ ಗಂಡನ ಪಾದವೇ ಗತಿ ಎಂದುಕೊಂಡು ವಾಪಾಸು ಮೂಲ ಸಿನಿಮಾ ಲ್ಯಾಂಡ್ ಬಂದು ಬಿಟ್ಟಿದ್ದಾರೆ. ಹೌದು. ಇದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ನಟಿ ಪ್ರಣೀತಾ ಅವರ ಮಾತು. ಪ್ರಣೀತಾ ಈಗಾಗಲೇ ಕನ್ನಡದಲ್ಲೂ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಮತ್ತೊಂದೆಡೆ ತಮಿಳು ಸಿನಿಮಾದಲ್ಲೂ ತಮ್ಮ ಖದರು ತೋರಿಸಿದ್ದಾರೆ. ತೆಲುಗುವಿನಲ್ಲೂ ನಟನೆಯ ಮೂಲಕ ಮನಸ್ಸು ಗೆದ್ದುಕೊಂಡಿದ್ದಾರೆ. ಬೇಸಿಕಲಿ ಕನ್ನಡದ ಹುಡುಗಿ ಪ್ರಣೀತಾರ ಆರಂಭದ ಚಿತ್ರ ನಟ ದರ್ಶನ್ ನಟಿಸಿದ ‘ಪೊರ್ಕಿ’. ಈ ಬಳಿಕ ಕನ್ನಡದಲ್ಲಿ ಬಂದ ಆಫರ್‌ಗಳನ್ನು ಬಹಳಷ್ಟು ಚ್ಯೂಸಿಯಾಗಿ ಆಯ್ಕೆಮಾಡಿಕೊಂಡು ಮುಂದುವರೆದ ಪ್ರಣೀತಾ ತಮಿಳು, ತೆಲುಗು ಚಿತ್ರರಂಗದಲ್ಲೂ ಒಳ್ಳೆಯ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಇಂತಹ ನಟಿಮಣಿ ಬಾಲಿವುಡ್ ಅಂಗಳದಿಂದ ಜಾರಿ ಬಿದ್ದಿದ್ದಾರೆ ಎನ್ನೋದು ಸಧ್ಯಕ್ಕೆ ಸಿಕ್ಕಿಕೊಂಡ ಮಾಹಿತಿ.
ಬಾಲಿವುಡ್ ಖ್ಯಾತ ಪ್ರತಿಭಾವಂತ ನಿರ್ದೇಶಕ ನೀರಜ್ ಪಾಂಡೆ ತನ್ನ ಮುಂದಿನ ಚಿತ್ರಕ್ಕೆ ಮುಂಬಯಿಯಲ್ಲಿ ನಟಿಯರ ಆಡಿಷನ್ ಕರೆಸಿಕೊಂಡಿದ್ದರು. ನೀರಜ್‌ಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಪಾಂಡೆ ಹಾಗೂ ಅಕ್ಷಯ್ ಕುಮಾರ್ ಜೋಡಿಯ ಎರಡನೇ ಚಿತ್ರ ಇದಾಗಲಿದೆ. ಈ ಹಿಂದೆ ‘ಸ್ಪೆಶಲ್ ೨೬’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ಪಾಂಡೆ ಬಾಲಿವುಡ್ ಅಂಗಳದಲ್ಲಿ ಮಿಂಚಿದ್ದರು. ರಿಯಾಲಿಟಿ ಕತೆಗಳ ಜತೆಗೆ ಆಡುವ ತಾಕತ್ತು ಇರುವ ನೀರಜ್ ಪಾಂಡೆ ತನ್ನ ಮುಂದಿನ ಚಿತ್ರದ ಕತೆ ಕೂಡ ರಿಯಾಲಿಟಿಗೆ ತಕ್ಕಂತೆ ಇರಲಿದೆ ಎನ್ನುವ ಕಾರಣಕ್ಕೆ ಸೌತ್ ಸಿನಿಮಾ ಇಂಡಸ್ಟ್ರಿಯ ನಟಿಯರನ್ನು ಆಯ್ಕೆ ಮಾಡುವುದಕ್ಕಾಗಿಯೇ ಈ ಆಡಿಷನ್ ಏರ್ಪಡಿಸಿದ್ದರು ಎನ್ನಲಾಗಿದೆ. ತಪ್ಪಿಹೋಯಿತು ಅವಕಾಶ: ಮುಂಬಯಿಯಲ್ಲಿ ನಡೆದ ಆಡಿಷನ್‌ನಲ್ಲಿ ನಟಿ ಪ್ರಣೀತಾ ಕೊಂಚ ತಡವಾಗಿಯೇ ಆಡಿಷನ್‌ಗೆ ಎಂಟ್ರಿಕೊಟ್ಟಿದ್ದರು. ಆದರೆ ಈ ವಿಚಾರದಲ್ಲಿ ಚಿತ್ರತಂಡ ಮಾಫಿ ಮಾಡಿತ್ತು. ಅದಕ್ಕೂ ಮುಖ್ಯವಾಗಿ ಪ್ರಣೀತಾರಿಗೆ ಹಿಂದಿ ಭಾಷೆಯ ಮೇಲೆ ಹಿಡಿತ ಇಲ್ಲ ಎನ್ನುವ ಕಾರಣಗಳಿಗೆ ಚಿತ್ರದಿಂದ ಕೈಬಿಡಲಾಗಿದೆ ಎನ್ನುವುದು ಚಿತ್ರತಂಡದಿಂದ ಹೊರ ಬಂದ ಮಾಹಿತಿ. ಇದೇ ಚಿತ್ರಕ್ಕೆ ನೀರಜ್ ಪಾಂಡೆಯ ಈ ಹಿಂದಿನ ಸ್ಪೆಶಲ್-೨೬ ಚಿತ್ರದ ನಾಯಕಿ ಕಾಜಲ್ ಅಗರ್‌ವಾಲ್ ಆಯ್ಕೆಯಾಗಿದ್ದಾರೆ. ಬಾಲಿವುಡ್‌ಗೆ ಹೋಗುವ ಕನಸ್ಸು ಪ್ರಣೀತಾರಿಂದ ಜಾರಿ ಬಿದ್ದಿದೆ ಎನ್ನೋದು ಈ ಮೂಲಕ ಸ್ವಷ್ಟವಾಗಿದೆ. ಇತ್ತ ಕಡೆ ತೆಲುಗು ಸಿನಿಮಾದಲ್ಲೂ ಪ್ರಣೀತಾದ ದೆಸೆ ಕೂಡ ವಕ್ರವಾಗಿದೆ. ತೆಲುಗಿನ ಜೂನಿಯರ್ ಎನ್‌ಟಿಆರ್ ನಟಿಸುತ್ತಿರುವ ‘ರಬಾಸಾ’ ಚಿತ್ರದಲ್ಲಿ ಸಮಂತಾ ಲೀಡ್ ನಟಿಯಾಗಿ ಕಾಣಿಸಿಕೊಂಡರೆ ಪ್ರಣೀತಾ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಪವನ್ ಕಲ್ಯಾಣ್ ನಟಿಸಲಿದ್ದ ಗಬ್ಬರ್ ಸಿಂಗ್-೨ ಚಿತ್ರನೂ ಕುಂಟುವ ಚಾನ್ಸ್ ಜಾಸ್ತಿಯೇ ಇದೆ. ಕಾರಣ ಜನಸೇನಾ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಪವನ್ ಕಲ್ಯಾಣ ಇನ್ನೂ ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರಾ ಎನ್ನುವುದು ಪ್ರಶ್ನೆಯಾಗಿ ಕಾಡಲು ಆರಂಭವಾಗಿದೆ. ಇದೇ ಕಾರಣದಿಂದ ಗಬ್ಬರ್ ಸಿಂಗ್-೨ ಮತ್ತಷ್ಟೂ ತಡವಾಗಿ ಬರುವ ಸಾಧ್ಯತೆಯೇ ಜಾಸ್ತಿಯಾಗಿದೆ. ಟೋಟಲಿ ಹಿಂದಿ ಭಾಷೆಯಲ್ಲಿ ಕೊಂಚ ಪಳಗಿದರೇ ಸಾಕಿತ್ತು ಪ್ರಣೀತಾ ಬಾಲಿವುಡ್ ಎಂಟ್ರಿ ಗ್ಯಾರಂಟಿಯಾಗಿ ಉಳಿದುಬಿಡುತ್ತಿತ್ತು ಎನ್ನುವ ಮಾತುಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.

No comments:

Post a Comment