Saturday, December 7, 2013

ಪುತ್ತೂರಿನಲ್ಲಿ ರಂಗೇರಿಸಲು ಸಿದ್ಧವಾದ ಹ್ಹಾ..ಶೋ

ಸ್ಟೀವನ್ ರೇಗೊ, ದಾರಂದಕುಕ್ಕು
ಕಿವಿಗೆ ಅಪ್ಪಳಿಸಿ ಪ್ರೇಕ್ಷಕರನ್ನು ಕುಣಿಯಲು ಅಣಿ ಮಾಡುವಂತಹ ಸಂಗೀತ. ಬಹಳ ಹೊತ್ತಿನಿಂದ ಸಂಗೀತ ಕೇಳಿ ಬೋರ್ ಆಗುತ್ತಾ ತಕ್ಷಣ ಹಾಸ್ಯದ ಟಾನಿಕ್. ಇದು ಕೂಡ ಸಾಕು ಅನ್ನಿಸುತ್ತಾ ಸ್ಯಾಂಡಲ್ ವುಡ್ ಚಿತ್ರ ತಾರೆಗಳ ಮಸ್ತಿ, ಮಾತು, ಡೈಲಾಗ್ಸ್ ಡೆಲಿವರಿ ಎಲ್ಲಕ್ಕೂ ಮಿಗಿಲಾಗಿ ದೇಶದ ನಾನಾ ಸ್ಟೇಜ್ ಶೋಗಳಲ್ಲಿ ಮಿಂಚಿದ ಖ್ಯಾತ ಹಿನ್ನೆಲೆ ಗಾಯಕ- ಗಾಯಕಿಯರ ಸಂಗೀತದ ಜೋಶ್, ಬಾಲಿವುಡ್ ರೇಂಜ್ ನ ಹಾಸ್ಯ ಕಲಾವಿದರು, ಸ್ಟಂಟ್ ಸೀನ್ ಗಳು ಎಲ್ಲರೂ ಬಂದು ಬೀಳುವುದು ಈ ಬಾರಿ ಪುತ್ತೂರಿನ ಕೆಮ್ಮಿಂಜೆಯ ದೇವಳದ ಗದ್ದೆಗೆ ಎನ್ನೋದು ಮರೆಯಬೇಡಿ. ಹೌದು. ಇದು “ಹ್ಹಾ.. ಶೋ’ ಯಾವಾಗಲೂ ತಮ್ಮ ಕಾರ್ಯಕ್ರಮಗಳ ಮೂಲಕ ತಾವು ಭಿನ್ನ ಎನ್ನುವ ಟ್ಯಾಗ್ ಲೈನ್ ಹೊತ್ತಿಕೊಂಡಿರುವ ರಾಜ್ಯದ ಖ್ಯಾತ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಹಾಗೂ ತನ್ನದೇ ಕೂಲ್ ಹಾಗೂ ಹಾಟ್ ಐಡಿಯಾಗಳ ‘ಟೈಮ್ ಆಂಡ್ ಟೈಡ್’ ಪ್ರಾಯೋಜಕತ್ವದಲ್ಲಿ ಡಿ.೮ರಂದು ಸಂಜೆ 6.30ಕ್ಕೆ ಪುತ್ತೂರಿನ ಕೆಮ್ಮಿಂಜೆಯ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ದೇವಳದ ವಾರ್ಷಿಕ ಜಾತ್ರೆ ಹಾಗೂ ಷಷ್ಠಿಯ ಪ್ರಯುಕ್ತ ‘ಹ್ಹಾ.. ಶೋ’ವಿನೂತನ ಮಾದರಿಯ ಮೆಗಾ ಶೋ ನಡೆಯಲಿದೆ. ಕರಾವಳಿಯ ಪ್ರಸಿದ್ಧ ದೇವಳಗಳ ಸಾಲಿನಲ್ಲಿ ನಿಲುಕಾಡುವ ಕೆಮ್ಮಿಂಜೆ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಳದ ಷಷ್ಠಿಯಲ್ಲಿ ಪ್ರತಿ ವರ್ಷನೂ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ. ಅದರಲ್ಲೂ ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಊರುಗಳಿಂದ ಭಕ್ತರು ದೇವರ ದರ್ಶನ ಪಡೆಯಲು ತುದಿ ಕಾಲಲ್ಲಿ ನಿಂತು ಬಿಡುತ್ತಾರೆ. ಇದೇ ಸಮಯದಲ್ಲಿ ಟೈಮ್ ಆ್ಯಂಡ್ ಟೈಡ್ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಮೆಗಾ ಮ್ಯೂಸಿಕಲ್ ಶೋವೊಂದಕ್ಕೆ ಅಡಿಪಾಯ ಹಾಕಿದೆ. ‘ಹ್ಹಾ.. ಶೋ’ವಿನೂತನ ಪ್ರಯತ್ನ: ಬಾಲಿವುಡ್ ಸಂಗೀತ ಅಂಗಳದಲ್ಲಿ ಸದಾ ಕಾಲ ಬ್ಯುಸಿಯಾಗಿರುವ ಹಿನ್ನೆಲೆ ಗಾಯಕಿ ಹೈದರಾಬಾದ್ ಮೂಲದ ಭಾರ್ಗವಿ ಪಿಳ್ಳೈ ‘ಹ್ಹಾ.. ಶೋ’ನ ಮುಖ್ಯ ಆಕರ್ಷಣೆಯಲ್ಲೊಬ್ಬರು. ಸಂಗೀತ ದಿಗ್ಗಜರಲ್ಲಿ ಒಬ್ಬರಾದ ಎ. ಆರ್. ರೆಹಮಾನ್ ಅವರ ಗರಡಿಯಲ್ಲಿರುವ ಭಾರ್ಗವಿ ದೇಶದ ನಾನಾ ಭಾಷೆಗಳಲ್ಲಿ ಬಂದಿರುವ ಸಿನಿಮಾ ಹಾಡುಗಳಿಗೆ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ದೇಶದ ಖ್ಯಾತ ಸಂಗೀತ ಸ್ಟೇಜ್ ಶೋ ಗಳಲ್ಲಿ ಲೀಡ್ ಸಿಂಗರ್ ಆಗಿರುವ ಭಾರ್ಗವಿ ಇದೇ ಮೊದಲ ಬಾರಿಗೆ ಪುತ್ತೂರಿನ ಕೆಮ್ಮಿಂಜೆಯ ದೇವರ ಗದ್ದೆಯಲ್ಲಿ ನಡೆಯುವ ಸಂಗೀತ ಮಹೋತ್ಸವದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ ಜತೆಗೆ ಡ್ಯಾನ್ಸಿಂಗ್ ನಲ್ಲೂ ಕಿಕ್ ಕೊಡುವ ಭಾರ್ಗವಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ.
ಇದರ ಜತೆಯಲ್ಲಿ ಮುಂಬಯಿ ಮೂಲದ ಕಾಮೆಡಿ ಕಾ ಬಾದ್ ಷಾ ಎಂದೇ ಕರೆಸಿಕೊಳ್ಳುವ ವಿನೋದ್ ಕುಮಾರ್ ಮತ್ತೊಂದು ಆಕರ್ಷಣೆಯ ಕೇಂದ್ರ ಬಿಂದು. ಹಾಸ್ಯ ಕಲಾವಿದನಾಗಿ ಮಿಂಚಿರುವ ಜತೆಗೆ 1,500ಕ್ಕೂ ಅಧಿಕ ಸ್ಟೇಜ್ ಶೋಗಳನ್ನು ನೀಡಿರುವ ಖ್ಯಾತಿ ಇದೆ. ಹಿಂದಿಯ ಖ್ಯಾತ ಖಾಸಗಿ ವಾಹಿನಿಗಳಾದ ಸ್ಟಾರ್, ಸಹಾರಾ, ಕಲರ್ಸ್, ಸಬ್, ಎನ್ ಡಿ ಟಿವಿ ಇಮ್ಯಾಜೀನ್, ಝೂಮ್, ಝೀ ಇತ್ಯಾದಿಗಳಲ್ಲಿ ನಡೆಯುವ ಹಾಸ್ಯ ಕಾರ್ಯಕ್ರಮಗಳಲ್ಲಿ ಮಿಂಚಿರುವ ಪ್ರತಿಭೆ. ಬಾಲಿವುಡ್ ಜತೆಗೆ ತಮಿಳು, ಕನ್ನಡ, ತೆಲುಗು, ಇಂಗ್ಲೀಷ್ ನೊಂದಿಗೆ ಸಖತ್ ಹೋಲ್ಡ್ ಇಟ್ಟುಕೊಂಡಿರುವ ಬೆಂಗಳೂರಿನ ಅವಿನಾಶ್ ಚಬ್ಬಿ, ದೇಶ- ವಿದೇಶದ ಖ್ಯಾತ ಕ್ಲಾಸಿಕಲ್ ಮ್ಯೂಸಿಕ್ ಕಲಾವಿದ ಗಣೇಶ್ ಪಾಟೀಲ್ ಅವರ ಸಂಗೀತ ಪ್ರೇಕ್ಷಕರನ್ನು ನಿಂತಲ್ಲೇ ಕುಣಿಸಿ ಬಿಡುತ್ತದೆ. ಇವುಗಳ ಜತೆಗೆ ಸ್ಯಾಂಡಲ್ ವುಡ್ ನಗರಿಯ ಸಿನಿ ತಾರೆಯರ ಮೋಡಿ ಮಾತುಗಳು, ಡೈಲಾಗ್ ಡೆಲಿವರಿಗಳು, ಕ್ಯಾಲಿಕಟ್ ಮೂಲದ ಪ್ರತಿಜಾನ್ ಎನ್ ಆರ್ ಅವರ ವಿಶೇಷ ಸೌಂಡ್ ಮ್ಯಾಜಿಕ್ ಸ್ಪೆಶಲ್ ಟ್ರೀಟ್ ಕೂಡ ಕಾಣ ಸಿಗಲಿದೆ. ಬೆಂಕಿ ಜತೆಗೆ ಸರಸಾಟದಲ್ಲಿಯೇ ದಾಖಲೆ ಬರೆದ ವಿಶ್ವ ದಾಖಲೆಯ ಚೆನ್ನೈ ಮೂಲದ ತಿರಿಲ್ ವೀರಾ ಅವರ ಕುತೂಹಲದ ತುದಿ ಘಟ್ಟದಲ್ಲಿ ನಿಲ್ಲಿಸಿ ಬಿಡುವ ಬೆಂಕಿ ಜತೆಗಿನ ಸಾಹಸ ಕಲೆಗಳು, ಜಿಲ್ಲೆಯ ಹಾಗೂ ರಾಜ್ಯದ ಹೆಸರಾಂತ ಸಂಗೀತ ಕಲಾವಿದರು ‘ಹ್ಹಾ.. ಶೋ’ ನಲ್ಲಿ ಮೋಡಿ ಮಾಡುತ್ತಾರೆ. ಇದರ ಜತೆಯಲ್ಲಿ ಬೆಂಗಳೂರು ಮೂಲದ ವಿಶಿಷ್ಟ ಲೈಟಿಂಗ್ಸ್ ಸಿಸ್ಟಂ, ವೇದಿಕೆ ಸಜ್ಜು ಹಾಗೂ ಮಂಗಳೂರಿನ ಖ್ಯಾತ ಡ್ಯಾನ್ಸ್ ತಂಡ ಬಾಯ್ ಝೋನ್ ಹಾಗೂ ಓಶಿಯನ್ ಕಿಡ್ಸ್ ತಂಡಗಳ ವಿಶಿಷ್ಟವಾದ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿದೆ. ಮಂಗಳೂರು ಸ್ಪಂದನ ಪ್ರಾಡಕ್ಷನ್ ಹೌಸ್ ನಿಂದ ವಿಶಿಷ್ಟ ಮಾದರಿಯ ಬೆಳಕಿನಾಟಗಳು ಕೂಡ ಕಾಣ ಸಿಗಲಿದೆ. ರಾಜ್ಯದ ನಂಬರ್ ವನ್ ಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಟೈಮ್ಸ್ ಸಂಸ್ಥೆಯ ಹೆಮ್ಮೆಯ ರೇಡಿಯೋ ವಾಹಿನಿ ರೇಡಿಯೋ ಮಿರ್ಚಿ ಕಾರ್ಯಕ್ರಮದ ಮಾಧ್ಯಮ ಪ್ರಾಯೋಜಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರ ಜತೆಯಲ್ಲಿ ರಾಜ್ಯದ ಪ್ರಮುಖ ಸ್ಯಾಟಲೈಟ್ ಟಿವಿ ವಾಹಿನಿಗಳಲ್ಲಿ ಈ ಕಾರ್ಯಕ್ರಮದ ಪ್ರಸಾರ ಕೂಡ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಬರಲು ಇಚ್ಚಿಸುವವರು ಸಹಾಯವಾಣಿಯ ನೆರವುವನ್ನು ಪಡೆಯಬಹುದು ಎಂದು ಟೈಮ್ ಆ್ಯಂಡ್ ಟೈಡ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಪುತ್ತೂರಿನಲ್ಲೇ ಇದು ವಿಶಿಷ್ಟ ಆಟ: ‘ಹ್ಹಾ.. ಶೋ’ಮೆಗಾ ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ಬರೋಬರಿ 50 ಸಾವಿರಕ್ಕೂ ಅಧಿಕ ಮಂದಿ ಜಮಾಯಿಸುವ ಅಂದಾಜು ಇಟ್ಟುಕೊಳ್ಳಲಾಗಿದೆ. ಮುಕ್ತ ಪ್ರವೇಶದ ಜತೆಯಲ್ಲಿ ಕುಳಿತುಕೊಳ್ಳಲು ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಐಪಿ ಪಾಸ್ ಗಳನ್ನು ಹೊಂದಿರುವವರಿಗೆ ವಿಶೇಷ ಆಸನದ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ದೊಡ್ಡ ಕಾರ್ಯಕ್ರಮ ಇರುವ ಕಾರಣ ವಿಶೇಷ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಟೈಮ್ ಆ್ಯಂಡ್ ಟೈಡ್ ಮಾಲೀಕ ಸುರೇಶ್ ರಾವ್ ಕೊಕ್ಕಡ ತಿಳಿಸಿದ್ದಾರೆ.

No comments:

Post a Comment