Tuesday, December 10, 2013
ತುಳು ನಾಟಕಕ್ಕೆ ಬಂತು ಸಿನಿಮಾದ ಮೆರಗು
ಸ್ಟೀವನ್ ರೇಗೊ, ದಾರಂದಕುಕ್ಕು
ಕರಾವಳಿಯ ಕೋಸ್ಟಲ್‌ವುಡ್ ಮತ್ತೇ ಚಿಗುರಿಕೊಂಡಿದೆ. ಈ ವರ್ಷ ಒಂದೆರಡು ಸಿನಿಮಾಗಳು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟರೆ ಉಳಿದಂತೆ ೪೦ಕ್ಕೂ ಅಧಿಕ ಸಿನಿಮಾಗಳು ಸಿನಿಮಾ ಲ್ಯಾಂಡ್ ನೋಂದಣಿ ಪಡೆದುಕೊಂಡು ಚಿತ್ರೀಕರಣಕ್ಕೆ ದಿನ ನಿಗದಿ ಮಾಡಿಕೊಳ್ಳುತ್ತಿದೆ. ಕೋಸ್ಟಲ್‌ವುಡ್ ನ ಇತಿಹಾಸದಲ್ಲಿಯೇ ಇದೊಂದು ಭರ್ಜರಿಯಾದ ಫಸಲು ಎನ್ನುವ ವಿಚಾರದಲ್ಲಿ ಯಾವುದೇ ಗೊಂದಲ ಉಳಿಯುವುದಿಲ್ಲ. ಕೋಸ್ಟಲ್ ವುಡ್‌ನಲ್ಲಿ ಹೊಸ ನಾಯಕರು, ಹೊಸ ನಾಯಕಿಯರು, ಹೊಸ ನಿರ್ದೇಶಕರ ಜತೆಗೆ ಹೊಸ ನಿರ್ಮಾಪಕರು ತಮ್ಮ ಅದೃಷ್ಟ ಪರೀಕ್ಷೆಯಾಟದಲ್ಲಿ ಗೆಲ್ಲುತ್ತಾರಾ ಎನ್ನುವ ಪ್ರಶ್ನೆಯೊಂದು ಎದುರುಗೊಂಡಿದೆ.
ಈಗ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಿನಿಮಾಗಳಿಗೆ ಏನೂ ಬರವಿಲ್ಲ. ಆದರೆ ಈಗ ನಿಜಕ್ಕೂ ಇರೋದು ಚಿತ್ರಕತೆಯ ವಿಚಾರದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಲಕ್ಷಣಗಳು ಕಾಣಿಸಿಕೊಂಡಿದೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಪುಟ್ಟ ಕತೆಯನ್ನು ಇಟ್ಟುಕೊಂಡು ಅದನ್ನು ಚಿತ್ರಕ್ಕೆ ಬೇಕಾದಂತೆ ಪೋಣಿಸಿಕೊಂಡು ಚಿತ್ರ ಮಾಡುವ ಕಾಲವೊಂದು ಗಟ್ಟಿಯಾಗಿತ್ತು. ಈಗ ತುಳು ಸಿನಿಮಾದಲ್ಲಿ ನಾಟಕದ ಕತೆಗಳೇ ಮೂಲ ಬಂಡವಾಳ ಅದರ ಜತೆಗೆ ಚಿತ್ರಕ್ಕೆ ಬೇಕಾದ ಸಾಮಗ್ರಿಗಳನ್ನು ಒಟ್ಟು ಸೇರಿಸುವ ಪರಂಪರೆ ಹುಟ್ಟಿಕೊಂಡಿದೆ. ತುಳು ರಂಗಭೂಮಿಯಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡ ನಾಟಕಗಳು ಸಿನಿಮಾಗಳಾಗಿ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಒಂದಲ್ಲ ಎರಡಲ್ಲ ಬರೋಬರಿ ೨೫ ವರ್ಷಕ್ಕಿಂತ ಹಳೆಯ ನಾಟಕವೊಂದು ಸಿನಿಮಾಕ್ಕೆ ಅಣಿಯಾಗುವ ಯೋಜನೆಯೊಂದು ರೂಪುಗೊಂಡಿದೆ.
ಕರಾವಳಿಯ ಹಿರಿಯ ನಾಟಕ ತಂಡ:
ಕರಾವಳಿಯಲ್ಲಿ ೧೯೭೪ರಲ್ಲಿ ನಾಟಕಗಳನ್ನು ಕಮರ್ಷಿಯಲ್ ಆಂಗಲ್‌ಗೆ ತಂದುಕೊಟ್ಟ ಹಿರಿಯ ನಾಟಕ ತಂಡ ಎ. ಗಂಗಾಧರ್ ನೇತೃತ್ವದ ಚಿತ್ರಕಲಾ ಆರ್ಟ್ಸ್, ಮಂಗಳೂರು ತನ್ನ ಬೇಡಿಕೆಯ ನಾಟಕವಾದ ‘ಒರಿಯನ್ ತೂಂಡ ಒರಿಗಾಪುಜಿ’ಯನ್ನು ಬೆಳ್ಳಿ ತೆರೆಗೆ ಇಳಿಸುತ್ತಿದ್ದಾರೆ. ೮೦ ಹಾಗೂ ೯೦ರ ದಶಕದಲ್ಲಿ ನೂರಾರು ಪ್ರದರ್ಶನಗಳನ್ನು ಕಾಣುತ್ತಾ ಕರಾವಳಿಯ ರಂಗಭೂಮಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ನಾಟಕದಿಂದಾಗಿ ಕರಾವಳಿಯ ಖ್ಯಾತ ಕಲಾವಿದರಾದ ಮಾಧವ ಶಕ್ತಿ ನಗರ, ರೋಹಿದಾಸ್ ಕದ್ರಿ, ಸರೋಜಿನಿ ಶೆಟ್ಟಿ, ನವೀನ್ ಡಿ ಪಡೀಲ್ ಎನ್ನುವ ಅಪ್ಪಟ ಕಲಾವಿದರನ್ನು ಕರಾವಳಿ ರಂಗಭೂಮಿಗೆ ನೀಡಿತ್ತು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಸೇರಿದಂತೆ ಕನ್ನಡದ ಪ್ರಜ್ಯು ಪೂವಯ್ಯ,ರೇಖಾದಾಸ್, ಭವ್ಯಾ ಕರಾವಳಿಯ ರಂಗಭೂಮಿ ಕಲಾವಿದರಾದ ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಗಂಗಾಧರ್ ಶೆಟ್ಟಿ, ಸಾಯಿ ಕೃಷ್ಣ ಇದ್ದಾರೆ. ಸಂಗೀತದಲ್ಲಿ ವಿ. ಮನೋಹರ್, ಕ್ಯಾಮೆರಾದಲ್ಲಿ ನಾಗೇಶ್ ಆಚಾರ್ಯ ಉಡುಪಿ, ಸಹ ನಿರ್ದೇಶಕರಾಗಿ ರಾಮದಾಸ್ ಸಸಿಹಿತ್ಲು, ರಂಜೀತ್ ಸುವರ್ಣ ಇದ್ದಾರೆ. ನಿರ್ಮಾಪಕರಾಗಿ ಬಿ. ಅಶೋಕ್ ಕುಮಾರ್ ಹಾಗೂ ಎ. ಗಂಗಾಧರ್ ಶೆಟ್ಟಿ ವಹಿಸಿದ್ದಾರೆ. ಕನ್ನಡದ ನಿರ್ದೇಶಕ ಹ.ಸೂ.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ.
ಚಿತ್ರಕ್ಕೆ ಮುಹೂರ್ತ: ಡಿ.೧೧ರಂದು ಮಂಗಳೂರಿನ ಶ್ರೀಮಂಗಳಾದೇವಿಯಲ್ಲಿ ಬೆಳಗ್ಗೆ ೧೦ಕ್ಕೆ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗ್ಡೆ, ಆನಂದ್ ಕೆ, ಬಂಟರ ಯಾನೆ ನಾಡವರ ಮಾತೃ ಸಂಘದ ಅಜಿತ್ ಕುಮಾರ್ ಮಾಲಾಡಿ, ಡಾ. ಶಿವಶರಣ್ ಶೆಟ್ಟಿ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿರುವರು.
(vijyakarnataka daily published dis news on: 12.12.2013)
Subscribe to:
Post Comments (Atom)
No comments:
Post a Comment