Tuesday, December 10, 2013
ತುಳು ಚಿತ್ರದಲ್ಲಿ ಸುಂದರನಾಥ್ ಕುಸುರಿ
ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದ ‘ಬಂಗಾರ ಪಟ್ಲೇರ್’ ಚಿತ್ರದ ಸುಂದರ ಕ್ಯಾಮೆರಾ ವರ್ಕ್ ಕುಸುರಿ ಕೆಲಸದಲ್ಲಿ ಸಂದರನಾಥ್ ಸುವರ್ಣ ಅವರ ಕೈಚಳಕವಿತ್ತು ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೋ.
೧೯೯೩ರಲ್ಲಿ ೧೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಂಗಾರ ಪಟ್ಲೇರ್ ಸಿನಿಮಾದ ಪ್ರತಿಯೊಂದು ದೃಶ್ಯಗಳಲ್ಲೂ ಸುವರ್ಣ ಕೈಚಳಕವಿದೆ. ಮುಖ್ಯವಾಗಿ ತುಳು ಸಂಸ್ಕೃತಿಯನ್ನು ಚಿತ್ರದಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದರು ಸುವರ್ಣ.
ಮಂಗಳೂರಿನ ಖ್ಯಾತ ಸಾಹಿತಿ ನಾರಾಯಣ ಶೆಟ್ಟಿ ಅವರ ‘ಸತ್ಯ ಬತ್ತಲೆ’ ಎನ್ನುವ ನಾಟಕ ಆಧರಿಸಿ ಕಟ್ಟಿದ ಸಿನಿಮಾದ ಪ್ರಧಾನ ಆಧಾರ ಸ್ತಂಭವೇ ಸುವರ್ಣರು. ಯಾಕೆಂದರೆ ಆ ತಂಡದಲ್ಲಿ ಹೆಸರು ಸಂಪಾದಿಸಿದ ಸಾಧಕ ಅವರೊಬ್ಬರೇ. ಸಂಭಾಷಣೆಯಲ್ಲಿ ದುಡಿದ ರಾಮಣ್ಣ ರೈ, ಹಿನ್ನೆಲೆ ಸಂಗೀತ ನೀಡಿದ ಚರಣ್‌ಕುಮಾರ್, ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ ರಿಚರ್ಡ್ ಕ್ಯಾಸ್ಟಲಿನೋ ಎಲ್ಲರಿಗೂ ಸುವರ್ಣ ಪ್ರೋತ್ಸಾಹದ ಚಿಲುಮೆಯಾಗಿದ್ದರು ಎನ್ನುತ್ತಾರೆ ‘ಬಂಗಾರ್ ಪಟ್ಲೇರ್’ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷಣ. ‘ಬಂಗಾರ್ ಪಟ್ಲೇರ್’ ಚಿತ್ರದ ದೃಶ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.
೧೯೯೨-೯೩ರ ಸಾಲಿನಲ್ಲಿ ರಾಜ್ಯ ಸರಕಾರದಿಂದ ವಿಶೇಷ ಪ್ರಾಂತೀಯ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾದ ನಂತರ ಬಂಗಾರ್ ಪಟ್ಲೇರ್ ಚಿತ್ರವನ್ನು ಕೋಲ್ಕೊತ್ತಾದಲ್ಲಿ ಈ ಸಮಯದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಮಾರ್ಕೆಟಿಂಗ್ ವಿಭಾಗದಲ್ಲಿ ಆಯ್ಕೆಯಾದಾಗ ಚಿತ್ರವನ್ನು ಅದರ ದೃಶ್ಯ, ಕತೆ ಹಾಗೂ ಸಂಗೀತವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರಶಸ್ತಿ ನೀಡುವ ಜ್ಯೂರಿ ಸ್ಥಳೀಯ ವಸ್ತು ಗಳನ್ನು ಹೇಗೆ ಬಳಸಿ ಕೊಂಡು ಚಿತ್ರ ಮಾಡ ಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುವ ಮಾತನ್ನು ಆಡಿತ್ತು ಎನ್ನುತ್ತಾರೆ ಕ್ಯಾಸ್ಟಲಿನೋ.
‘ಬಂಗಾರ್ ಪಟ್ಲೇರ್’ ಚಿತ್ರ ಕೋಸ್ಟಲ್‌ವುಡ್‌ನಲ್ಲಿ ಹಿಟ್ ಆದ ಕೂಡಲೇ ರಿಚರ್ಡ್ ಹಾಗೂ ಸುಂದರನಾಥ್ ಸುವರ್ಣ ಮತ್ತೆ ಜತೆಗೂಡಿದರು. ೧೯೯೩ರ ಸೆ.೮ರಂದು ಒಂದೇ ದಿನ ಇಪ್ಪತ್ತಮೂರುವರೆ ಗಂಟೆ ಅವಧಿಯಲ್ಲಿ ಚಿತ್ರೀಕರಣ ಮಾಡುವ ಯೋಜನೆಯ ಹಿಂದೆ ಇದ್ದವರು ಸುಂದರ್‌ನಾಥ್ ಸುವರ್ಣ. ಚಿತ್ರದ ಕತೆಯನ್ನು ರಿಚರ್ಡ್ ಸುವರ್ಣರಿಗೆ ಹೇಳುವಾಗ ಅವರು ಒಂದೇ ದಿನದಲ್ಲಿ ಶೂಟಿಂಗ್ ಮಾಡಿ ಮುಗಿಸೋಣ ಎನ್ನುವ ಒಂದು ಐಡಿಯಾ ಕೊಟ್ಟಿದ್ದರು. ರಿಚರ್ಡ್ ಕೂಡ ಆರಂಭದಲ್ಲಿ ಹಿಂದೆ ಮುಂದೆ ಅಲೋ ಚನೆ ಮಾಡಿದರು.
ಆದರೆ ಸುಂದರ್‌ನಾಥ್ ಸುವರ್ಣ ನಾನಿದ್ದೇನೆ ಎಲ್ಲವನ್ನು ಮಾಡಿ ಮುಗಿಸಬಹುದು. ತುಳು ಚಿತ್ರದಲ್ಲಿ ಇದೊಂದು ಹೊಸ ದಾಖಲೆಯಾಗುತ್ತದೆ. ಚಿತ್ರ ಆರಂಭಕ್ಕೆ ಮೊದಲು ಸುವರ್ಣ ಅವರು ಚಿತ್ರದ ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇಡೀ ಚಿತ್ರದ ಫ್ರೇಮ್ ಟು
ಫ್ರೇಮ್‌ನಲ್ಲಿ ಸುವರ್ಣ ಅವರ ಕೆಲಸ ಕಾಣುತ್ತದೆ. ಅದಕ್ಕೂ ಮಿಗಿಲಾಗಿ ಹಿರಿಯ ಸಾಹಿತಿ ಶಿವರಾಮ ಕಾರಂತ ಅವರನ್ನು ಸೆಪ್ಟೆಂಬರ್ ೮ರಲ್ಲಿ ಟೇಕ್ ಮೇಲೆ ಟೇಕ್ ತೆಗೆದುಕೊಂಡು ಕಾರಂತರನ್ನು ಇಳಿ ವಯಸ್ಸಿನಲ್ಲಿ ದುಪ್ಪಟ್ಟು ಕೆಲಸ ಮಾಡುವಂತೆ ಮಾಡಿದ್ದರು ಎನ್ನುತ್ತಾರೆ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು. ತುಳು ರಂಗಭೂಮಿಯಲ್ಲಿ ಇರುವ ಮಂದಿಯನ್ನು ಹುಡುಕಿಕೊಂಡು ಅವಕಾಶ ನೀಡುತ್ತಿದ್ದರು. ಅದರಲ್ಲೂ ಆರಂಭ, ನೀ ನಮ್ಮ ದೈವ,ಟೈಗರ್ ಗಂಡು, ಕಿಲಾಡಿ ತಾತ ಚಿತ್ರ ಸೇರಿದಂತೆ ಅವರು ನಿರ್ದೇಶನ ಮಾಡಿದ ಚಿತ್ರಗಳಲ್ಲಿ ತುಳುವರಿಗೆ ಅವಕಾಶ ಕೊಡುತ್ತಾ ಬಂದಿದ್ದರು.
ವಿಟ್ಲ ಮನೋಹರ್ ಅವರನ್ನು ತಮ್ಮ ಎಲ್ಲ ಚಿತ್ರದ ಸಂಗೀತದಲ್ಲಿ ಬಳಸಿಕೊಂಡು ಕನ್ನಡದ ನಟ
ಕಾಶೀನಾಥ್‌ರಿಗೆ ಪರಿಚಯ ಮಾಡಿಕೊಟ್ಟು ‘ಅನುಭವ’ದಲ್ಲಿ ಕೆಲಸ ಸಿಗುವಂತೆ ನೋಡಿಕೊಂಡರು. ತಮ್ಮ ಇಬ್ಬರು ಸಹೋದರಾದ ನವೀನ್, ಪ್ರದೀಪ್ ಇಬ್ಬರನ್ನು ತಮ್ಮ ಜತೆಯಲ್ಲಿಯೇ ಕ್ಯಾಮೆರಾ ಕೆಲಸ ಕಲಿಸಿ ಕನ್ನಡ ಸಿನಿಮಾದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದಾರೆ ಎನ್ನುತ್ತಾರೆ ಅವರ ಜತೆಯಲ್ಲಿ ಐದಾರು ಚಿತ್ರದಲ್ಲಿ ದುಡಿದ ತಮ್ಮ ಲಕ್ಷ್ಮಣ ಅವರು.
....
‘ನನಗೆ ಆರೋಗ್ಯ ಹದಗೆಟ್ಟಿದೆ ಎನ್ನುವ ವಿಚಾರ ತಿಳಿದ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ನನ್ನನ್ನು ನೋಡಲು ಬಂದಿದ್ದರು. ಕೈಯಲ್ಲಿ ಒಂದೆರಡು ಚಿತ್ರಗಳಿವೆ ಅದನ್ನು ಅದಷ್ಟೂ ಬೇಗ ಮುಗಿಸಿದ ನಂತರ ತುಳುವಿನಲ್ಲೊಂದು ಸಿನಿಮಾ ಮಾಡಬೇಕು ಎನ್ನುವ ಕನಸ್ಸು ಕಂಡಿದ್ದರು. ೧೯೯೩ರ ಬಂಗಾರ್ ಪಟ್ಲೇರ್ ಹಾಗೂ ಸೆಪ್ಟೆಂಬರ್ ೮ ನನ್ನೆರಡು ತುಳು ಚಿತ್ರ ಬಿಟ್ಟರೆ ಉಳಿದ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಇನ್ನೂ ತುಳು ಚಿತ್ರಕ್ಕೆ ನಾನೇ ಬರುತ್ತೇನೆ ಎನ್ನುತ್ತಿದ್ದರು.
ರಿಚರ್ಡ್ ಕ್ಯಾಸ್ಟಲಿನೋ, ಚಿತ್ರ ನಿರ್ದೇಶಕ
(vijaykarnataka daily published on 11.12.2014)
Subscribe to:
Post Comments (Atom)
No comments:
Post a Comment