Wednesday, December 4, 2013
ಪದವಿ ಶಿಕ್ಷಣದಲ್ಲಿ ಕೊಂಕಣಿಗೆ ರಾಜಮರ್ಯಾದೆ
* ಸ್ಟೀವನ್ ರೇಗೊ, ದಾರಂದಕುಕ್ಕು
ಕೊಂಕಣಿ ಭಾಷೆ ಈಗ ಮತ್ತೊಂದು ಸಲ ಸದ್ದು ಮಾಡಿದೆ. ಬರೀ ಸಾಹಿತ್ಯ, ಆಡು ಭಾಷೆಯಲ್ಲಿಯೇ ಗಟ್ಟಿಯಾಗಿ ಬೆಳೆಯುತ್ತಿರುವ ಕೊಂಕಣಿ ಈಗ ಪದವಿ ಶಿಕ್ಷಣ ರಂಗದಲ್ಲಿ ಭರ್ಜರಿ ಎಂಟ್ರಿ ಪಡೆದುಕೊಂಡಿದೆ. ರಾಜ್ಯ ಸರಕಾರ ಈ ಹಿಂದೆ ಅಂದರೆ ೨೦೦೭ರಿಂದ ರಾಜ್ಯದ ಶಾಲೆಗಳಲ್ಲಿ ೬ನೇ ತರಗತಿಯಿಂದ ತೃತೀಯ ಐಚ್ಛಿಕ ಭಾಷೆಯಾಗಿ ಕೊಂಕಣಿಯನ್ನು ಕಲಿಯಲು ಅವಕಾಶ ಮಾಡಿ ಕೊಟ್ಟಿತ್ತು. ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ ಸಾವಿರಾರು ಮಕ್ಕಳು ಕೊಂಕಣಿಯನ್ನು ಕಲಿತರು.
ಕಳೆದ ಮೂರು ವರ್ಷಗಳಿಂದ ೧೦ನೇ ತರಗತಿಯ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಕೊಂಕಣಿಗೆ ಆದ್ಯತೆ ನೀಡಿದ್ದಾರೆ. ಈಗ ಮತ್ತೊಂದು ಹೆಜ್ಜೆಯಾಗಿ ಮಂಗಳೂರು ವಿವಿಯ ಅಡಿಯಲ್ಲಿ ಕಾರ‍್ಯ ನಿರ್ವಹಣೆ ಮಾಡುತ್ತಿರುವ ಮಂಗಳೂರಿನ ರೊಜಾರಿಯೊ, ನಂತೂರಿನ ಪಾದುವಾ ಮತ್ತು ಐಕಳದ ಪೊಂಪೈ ಕಾಲೇಜಿನ ಮುಖ್ಯಸ್ಥರು ತಮ್ಮ ಕಾಲೇಜುಗಳಲ್ಲಿರುವ ಪದವಿ ಶಿಕ್ಷಣದಲ್ಲಿ ಕೊಂಕಣಿಯನ್ನು ಸೇರಿಸಿಕೊಳ್ಳುತ್ತಿದ್ದಾರೆ.
ಪದವಿ ಹಂತದಲ್ಲಿ ದ್ವಿತೀಯ ಭಾಷೆಯಾಗಿ ಕೊಂಕಣಿ ಕಲಿಕೆಗೆ ಈಗಾಗಲೇ ಅವಕಾಶವಿದ್ದು, ಮಂಗಳೂರಿನ ಸಂತ. ಅಲೋಶಿಯಸ್ ಕಾಲೇಜಿನಲ್ಲಿ ಕಳೆದ ೨೦ ವರ್ಷಗಳಿಂದ ಕೊಂಕಣಿಯನ್ನು ಕಲಿಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಆದೇಶದ ಪ್ರಕಾರ ಅಲೋಶಿಯಸ್ ಕಾಲೇಜಿನಲ್ಲಿ ಈಗ ಇರುವ ಕೊಂಕಣಿ ಪಠ್ಯಗಳ ಆಧಾರದಲ್ಲಿಯೇ ಈ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ನಾಲ್ಕು ಸೆಮಿಸ್ಟರ್‌ಗಳಾಗಿ ಬಿ.ಎ., ಬಿ.ಕಾಂ, ಬಿ.ಎಸ್ಸಿ. ಇತ್ಯಾದಿ ವಿಭಾಗಗಳಲ್ಲಿ ಕೊಂಕಣಿಯನ್ನು ಕಲಿಯಲು ಸಿಗಲಿದೆ.
ಕೊಂಕಣಿ ಭಾಷೆಗೊಂದು ಹೊಸ ಮುನ್ನುಡಿ:
ಮಂಗಳೂರು ವಿವಿಯ ಅಧೀನದಲ್ಲಿರುವ ಕಾಲೇಜುಗಳಲ್ಲಿ ಕೊಂಕಣಿಯನ್ನು ದ್ವಿತೀಯ ಭಾಷೆಯಾಗಿ ಕಲಿಸಲು ಮೂರು ಕಾಲೇಜುಗಳು ಮುಂದೆ ಬಂದಿದೆ. ಇನ್ನೂ ಒಂದೆರಡು ಕಾಲೇಜುಗಳು ಮುಂದೆ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ೨೦೧೪-೧೫ರ ನೂತನ ಶೈಕ್ಷಣಿಕ ವರ್ಷದಲ್ಲಿ ಈ ಕೊಂಕಣಿ ಭಾಷೆಯನ್ನು ಕಲಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಕೊಂಕಣಿ ಪ್ರಚಾರ್ ಸಂಚಾಲನದ ಪ್ರಮುಖರಲ್ಲಿ ಒಬ್ಬರಾದ ವಿಕ್ಟರ್ ಕಾರ್ಕಳ ಅವರು.
ಕೊಂಕಣಿ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಇಂತಹ ಪ್ರಯತ್ನಗಳು ಅಗತ್ಯವಾಗಿ ನಡೆಯಬೇಕು. ಕರಾವಳಿಯ ಇತರ ಭಾಷೆಗಳಿಗೂ ಇದು ವಿಸ್ತಾರಗೊಂಡು ಮುಂದುವರಿದರೆ ಉತ್ತಮ ಎನ್ನುತ್ತಾರೆ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೋನ್ ಕ್ಲೇರಾನ್ಸ್ ಮಿರಾಂದಾ ಅವರು. ಈಗಾಗಲೇ ಮಂಗಳೂರು ವಿವಿಗೆ ಈ ವಿಚಾರದಲ್ಲಿ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಈ ಬಳಿಕ ವಿವಿಯ ತಂಡವೊಂದು ಕಾಲೇಜಿಗೆ ಬಂದು ತನಿಖೆ ನಡೆಸಿದ ನಂತರ ಅನುಮತಿ ನೀಡುತ್ತದೆ. ಬರುವ ವರ್ಷದಿಂದ ಕೊಂಕಣಿಯನ್ನು ಕಲಿಸಲು ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಅವರು.
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣದಲ್ಲಂತೂ ಕೊಂಕಣಿಯನ್ನು ಕಲಿಸಲು ಯಾವುದೇ ಅಡ್ಡಿ ಆತಂಕಗಳು ಬರುತ್ತಿಲ್ಲ. ಆದರೆ ಈಗ ಸರಕಾರಿ ಆದೇಶವಿಲ್ಲದ ಕಾರಣ ಪಿಯುಸಿಯಲ್ಲಿ ಕೊಂಕಣಿ ಕಲಿಕೆಗೆ ಅವಕಾಶವಿಲ್ಲ. ಸರಕಾರವು ಕೂಡಲೇ ಆದೇಶ ಹೊರಡಿಸಿ ಕೊಂಕಣಿ ಕಲಿಕೆಯನ್ನು ಸಂಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು ಎನ್ನುತ್ತಾರೆ ಪ್ರಚಾರ ಸಂಚಾಲನದ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಅವರು.
ಕೊಂಕಣಿ ಕಲಿಸುವವರು ಯಾರು:
ಕೊಂಕಣಿ ಭಾಷೆಯನ್ನು ಪದವಿಯಲ್ಲಿ ಕಲಿಸಲು ಯಾವುದೇ ದೊಡ್ಡ ಆತಂಕಗಳು ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಕೊಂಕಣಿ ಭಾಷೆಯಲ್ಲಿ ಕರ್ನಾಟಕದ ಯಾವುದೇ ವಿವಿಗಳು ಪದವಿ ಆರಂಭಿಸಿಲ್ಲ. ಪದವಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿದವರಿಗೆ ಮಣೆ ಇರುವ ಕಾರಣ ಕೊಂಕಣಿ ಭಾಷೆಯನ್ನು ಕಲಿಸಲು ತೊಡಕು ಉಂಟಾಗುವ ಸಾಧ್ಯತೆಗಳು ಇವೆ ಎನ್ನುವುದು ಮಾತು. ಆದರೆ ಕೊಂಕಣಿ ಪ್ರಚಾರ ಸಂಚಾಲನ ಮುಖ್ಯಸ್ಥರು ಹೇಳುವ ಮಾತು ಹೀಗೆ: ಕೊಂಕಣಿ ಮಾತೃ ಭಾಷೆಯನ್ನು ಹೊಂದಿರುವವರು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ ಸಾಕು. ಅವರು ಕೊಂಕಣಿ ಭಾಷೆ ಕಲಿಸಲು ಯೋಗ್ಯರಾಗುತ್ತಾರೆ. ಇದೇ ರೀತಿ ಕೊಂಕಣಿ ಭಾಷೆ ಮುಂದೆ ಸಾಗಿ ಸ್ನಾತಕೋತ್ತರ ಹಂತಕ್ಕೆ ಮುಟ್ಟುತ್ತದೆ ಎನ್ನುವುದು ಅವರ ಅಭಿಮತ.
( vijyakaranataka daily published dis article on 4.12.2013)
Subscribe to:
Post Comments (Atom)
No comments:
Post a Comment