Monday, December 16, 2013
ಕರಾವಳಿಯಲ್ಲಿ ಕ್ರಿಸ್ ಮಸ್ ‘ಕುಸ್ವಾರ್’
* ಸ್ಟೀವನ್ ರೇಗೊ, ದಾರಂದಕುಕ್ಕು
ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಕ್ರಿಸ್‌ಮಸ್ ಹಬ್ಬ್ಬದ ಸಡಗರ ಗಟ್ಟಿಯಾಗುತ್ತದೆ. ಗಡಗಡ ನಡುಗಿಸುವ ಚಳಿಯೊಂದಿಗೇ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಹಬ್ಬಕ್ಕೆ ಕೆಲ ದಿನಗಳ ಮುನ್ನವೇ ಅಲ್ಲಲ್ಲಿ ಶುರುವಾಗುವ ಕೇಕ್ ಮಿಕ್ಸಿಂಗ್‌ನ ಮೋಜೂ ಹಬ್ಬಕ್ಕೆ ಮುನ್ನುಡಿಯಾಗುತ್ತದೆ. ಈಗಾಗಲೇ ಎಲ್ಲೆಲ್ಲೂ ಸಾಂತಾಕ್ಲಾಸ್ ವೇಷಧಾರಿಗಳ ಸಿದ್ಧತೆಯೂ ಭರದಿಂದಲೇ ನಡೆದಿದೆ.
ಕ್ರಿಸ್‌ಮಸ್ ಟ್ರೀ ಜತೆಗೆ ನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಮಾರಾಟ, ದೇವಲೋಕದ ಸೃಷ್ಟಿಗೆ ಬೇಕಿರುವ ನಕ್ಷತ್ರಗಳ ಮಾರಾಟದ ಭರಾಟೆ ಕೂಡ ಜೋರು. ದೇವಕನ್ಯೆಯರು, ಮಾತೆ ಮೇರಿ, ಬಾಲ ಏಸು ಇಲ್ಲದೇ ಹಬ್ಬ ಪೂರ್ಣಗೊಳ್ಳುವುದೇ ಇಲ್ಲ... ಈ ಕೊರತೆ ನೀಗಿಸಲೆಂದೇ ಪ್ರತಿ ಮನೆಯಲ್ಲೂ ಗೋದಲಿಗಳ ಸೃಷ್ಟಿಯಾಗುತ್ತದೆ. ಆದರೆ ಕರಾವಳಿಯಲ್ಲಿ ಮಾತ್ರ ಇವೆಲ್ಲಕ್ಕಿಂತ ಕೊಂಚ ಭಿನ್ನವಾದ ಕ್ರಿಸ್‌ಮಸ್ ಆಚರಣೆ ನಡೆಯುತ್ತದೆ.
ಕರಾವಳಿಯಲ್ಲಿ ಕ್ರಿಸ್‌ಮಸ್ ಎಂದಾಕ್ಷಣ ಕುಸ್ವಾರ್(ತಿಂಡಿ ತಿನಸು)ಗಳ ಮಾತು ಬರುತ್ತದೆ. ಇಲ್ಲಿ ಕೇಕ್‌ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ ಕುಸ್ವಾ ರ್‌ಗಳಿಗಂತೂ ಬೇಡಿಕೆ ಇದ್ದೇ ಇದೆ. ಕರಾವಳಿಯ ಪಕ್ಕಾ ಕಥೋಲಿಕ್ ಬಂಧುಗಳು ಕುಸ್ವಾ ರ್ ಇಲ್ಲದೇ ಕ್ರಿಸ್ ಮಸ್ ಹಬ್ಬವನ್ನು ಸರಿಯಾಗಿ ಆಚರಣೆಯೇ ಮಾಡೋದಿಲ್ಲ. ಇಂತಹ ವಿಶಿಷ್ಟ ಬೆಳವಣಿಗೆ ದೇಶ- ವಿದೇಶದ ಯಾವುದೇ ಮೂಲೆಯಲ್ಲೂ ಕಾಣ ಸಿಗೋದಿಲ್ಲ. ಕುಟುಂಬದ ಸದಸ್ಯರು ಜತೆಗೂಡಿಕೊಂಡು ಗುಳಿಯೊ, ಕಿಡಿಯೊ, ಕುಲ್‌ಕುಲ್, ಗಜ್ಜೆಯಿ, ಅಕ್ಕಿ ಲಾಡು, ತುಕ್‌ಡಿ, ಚಕ್ಕುಲಿ, ಖಾರಕಡ್ಡಿ ಹೀಗೆ ಹತ್ತಾರು ಐಟಂಗಳು ಕರಾವಳಿಯ ಕ್ರಿಸ್‌ಮಸ್ ಕುಸ್ವಾರ್ ಪಟ್ಟಿಯಲ್ಲಿ ಜಾಗ ಪಡೆದುಕೊಳ್ಳುತ್ತದೆ.
ಆಧುನಿಕ ಬದುಕಿನ ಒದ್ದಾಟದಲ್ಲಿ ಕುಸ್ವಾರ್ ಕಳೆಗುಂದಿದೆ:
ಕ್ಯಾಲೆಂಡರ್ ಪುಟದಲ್ಲಿ ನವೆಂಬರ್ ತಿಂಗಳು ಕಳೆದು ಡಿಸೆಂಬರ್ ಬಂದಾಕ್ಷಣ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಾ ಬರುತ್ತದೆ. ಮುಖ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಕುಸ್ವಾರ್ ಗಳ ಕಚ್ಚಾ ಸಾಮಗ್ರಿಗಳು ಬಂದು ಮನೆಯ ಮೂಲೆಯಲ್ಲಿ ಬಿದ್ದು ಬಿಡುತ್ತದೆ. ನಂತರ ಡಿಸೆಂಬರ್ ೨೦ ದಾಟುತ್ತಿದ್ದಂತೆ ಕುಸ್ವಾರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುತ್ತಾರೆ.
ಆಧುನಿಕ ಕಾಲದಲ್ಲಿ ಕೆಲಸದ ಒತ್ತಡ ಹಾಗೂ ಸಮಯದ ಅಭಾವಗಳು ಎರಡು ಕೂಡ ಕಾಡುತ್ತಿರುವುದರಿಂದ ಇಂತಹ ಕುಸ್ವಾರ್ ತಿಂಡಿಗಳನ್ನು ಮನೆಯ ಸದಸ್ಯರು ಕೂಡಿಕೊಂಡು ಮಾಡುವುದಕ್ಕಿಂತ ಹೆಚ್ಚಾಗಿ ಬೇಕರಿಗಳಿಗೆ ಮೊರೆ ಹೋಗುತ್ತಾರೆ. ಕರಾವಳಿಯ ಖ್ಯಾತ ಬೇಕರಿಗಳು ಈ ತಿಂಡಿ ತಿನಸುಗಳನ್ನು ಮಾರಾಟ ಮಾಡುತ್ತಾ ಬರುತ್ತಿದೆ.
ಕುಸ್ವಾರ್ ಮೂಲತಃ ಗೋವಾ ರಾಜ್ಯದಿಂದ ಬಂದ ಪದ್ದತಿಗಳಲ್ಲಿ ಒಂದು ಎನ್ನುವುದು ಕರಾವಳಿಯ ಬಹುತೇಕ ಕಥೋಲಿಕ್ ಬಂಧುಗಳು ನಂಬಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗೋವಾದಿಂದ ಕರಾವಳಿ ಕಡೆಗೆ ಹರಿದು ಬಂದ ಕ್ರೈಸ್ತರು ಅಲ್ಲಿಂದ ಕೆಲವೊಂದು ಸಂಪ್ರದಾಯ, ಆಚರಣೆ, ಆಹಾರ ಪದ್ಧತಿಗಳನ್ನು ತಂದರು ಎನ್ನುತ್ತಾರೆ ಕೊಂಕಣಿ ಪ್ರಚಾರ ಸಂಚಾಲನ ಸಮಿತಿಯ ಕಾರ್‍ಯದರ್ಶಿ ವಿತೋರಿ ಕಾರ್ಕಳ ಅವರು. ಕುಸ್ವಾ ರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುವ ಮೂಲಕ ಕುಟುಂಬದ ಸದಸ್ಯರ ಏಕತೆಯ ಸಂಕೇತ ಇಮ್ಮಡಿಗೊಳ್ಳುತ್ತದೆ. ಮನೆಮಂದಿಯೆಲ್ಲಾ ತಯಾರಿಸಿದ ’ಕುಸ್ವಾರ್’ ಕ್ರಿಸ್‌ಮಸ್‌ನ ಪ್ರೀತಿಯ ಸಂಕೇತವಾಗಿ ನೆರೆಮನೆಯ ಬಾಂಧವರಿಗೆ, ಜಾತಿ ಮತ ಭೇದವಿಲ್ಲದೆ ವಿತರಿಸುತ್ತಾರೆ. ಈ ಸಂಪ್ರದಾಯ ಇಂದಿಗೂ ಕ್ರೈಸ್ತಬಾಂದವರಲ್ಲಿ ಚಾಲ್ತಿಯಲ್ಲಿದೆ ಎನ್ನೋದು ಕ್ರಿಸ್ ಮಸ್ ಸಮಯದಲ್ಲಿ ಖುಷಿ ಕೊಡುವ ವಿಷ್ಯಾ.
Subscribe to:
Post Comments (Atom)
No comments:
Post a Comment