Sunday, December 29, 2013
ಮಲಾನಿ ಬಾಲಿವುಡ್‌ನಲ್ಲಿ ಹೊಸ ಕಹಾನಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಸಂದೀಪ್ ಮಲಾನಿ ಬಾಲಿವುಡ್ ಅಂಗಳದಲ್ಲಿ ಸೈಲೆಂಟ್ ವರ್ಕ್‌ರ್ ಎಂದೇ ಕರೆಸಿಕೊಂಡವರು. ಬಾಲಿವುಡ್ ಅಂಗಳದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸದಾ ಕಾಲ ಬ್ಯುಸಿಯಾಗಿರುವ ಮಂಗಳೂರು ಮೂಲದ ಸಂದೀಪ್ ಮಲಾನಿ ಈಗ ಹೊಸ ಕಹಾನಿಯೊಂದನ್ನು ರೆಡಿ ಮಾಡಿದ್ದಾರೆ. ಅದೇನಪ್ಪಾ ಅಂದರೆ ಅತ್ತ ಕಮರ್ಷಿಯಲ್ ಆಂಗಲ್‌ನಲ್ಲೂ ಇಲ್ಲದ ಇತ್ತ ಆರ್ಟ್ ಕೆಟಗರಿಗೂ ಸೇರದಂತಹ ಮೂರು ಕತೆಗಳನ್ನು ಇಟ್ಟುಕೊಂಡು ಮೂರು ಚಿತ್ರಗಳನ್ನು ಮಾಡಲು ಭರ್ಜರಿ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
‘ಐ ಲವ್ ಹೃತಿಕ್’ ಎನ್ನುವ ಚಿತ್ರದಲ್ಲಿ ಬಾಲಕನ ಮುಗ್ದ ಜಗತ್ತಿನ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುವ ಯೋಜನೆ ಮಲಾನಿ ತಲೆಗೆ ಬಂದಿದೆ. ಇದರ ಜತೆಯಲ್ಲಿ ‘ಓ ಮೈ ಡಾಗ್’ ಅನ್ಯ ಕೋಮಿನ ಯುವಕ -ಯುವತಿಯ ಪ್ರಣಯ ಕತೆಯನ್ನು ಚಿತ್ರದ ಮೂಲಕ ಹೊರತರುವ ಕೆಲಸ ಕೂಡ ಮಲಾನಿ ಕೈಗೆತ್ತಿಕೊಂಡಿದ್ದಾರೆ. ಹಾಹಾ.. ಹ್ಹೀ ಹ್ಹೀ ಎನ್ನುವ ಹಾಸ್ಯ ಚಿತ್ರ ಮಲಾನಿ ಬಾಣಲೆಯಲ್ಲಿ ಸಿದ್ಧವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ಈ ಎಲ್ಲ ಚಿತ್ರಗಳು ಚಿತ್ರೀಕರಣಗೊಂಡು ತೆರೆಗೆ ತರುವ ಕೆಲಸ ಮಲಾನಿಯಿಂದ ನಡೆಯಲಿದೆ. ಈ ಮೂರು ಚಿತ್ರಗಳನ್ನು ಮಲಾನಿ ತಮ್ಮ ಹೋಮ್ ಬ್ಯಾನರ್ ಮಲಾನಿ ಟಾಕೀಸ್ ಮೂಲಕ ಹೊರ ತರುತ್ತಿದ್ದಾರೆ.
ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ತಮ್ಮ ಕುಟುಂಬದ ಸಮೇತರಾಗಿ ಮಂಗಳೂರಿನ ಮನೆಗೆ ಬಂದಿದ್ದಾಗ ನಿರ್ದೇಶಕ ಕಮ್ ಕತೆಗಾರ ಮಲಾನಿ ಲವಲವಿಕೆಯ ಜತೆಯಲ್ಲಿ ತಮ್ಮ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ೨೦೧೩ ನನ್ನ ಪಾಲಿಗೆ ವಿಶೇಷವಾಗಿತ್ತು. ೯ ಸಂಗೀತ ಪ್ರದಾನವಾದ ಡಾಕ್ಯುಮೆಂಟರಿಗಳನ್ನು ಸಿದ್ಧಪಡಿಸಿದ್ದೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಯಶ್‌ರಾಜ್ ಅವರ ನೆನಪಿಗಾಗಿ ‘ಯಶ್‌ರಾಜ್ ಹೀರೋಯಿನ್ಸ್ ದೇ ಜಾಯೆಂಗೆ’ ಹಾಗೂ ಬಾಲಿವುಡ್ ನಟಿ ಶ್ರೀದೇವಿಯ ೫೦ನೇ ಹುಟ್ಟುಹಬ್ಬಕ್ಕಾಗಿ ಶ್ರೀದೇವಿಯ ಬಾಲಿವುಡ್ ಪ್ರಯಾಣ ಕುರಿತಾದ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಡಾಕ್ಯುಮೆಂಟರಿಗಳನ್ನು ಸಿದ್ಧ ಪಡಿಸಿದ್ದೇನೆ ಎಂದರು.
೧೦೦ರ ಸಿನಿಮಾಕ್ಕೆ ಎರಡು ಡಾಕ್ಯುಮೆಂಟರಿ:
ಭಾರತೀಯ ಸಿನಿಮಾ ರಂಗ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಎರಡು ಸಂಗೀತ ಡಾಕ್ಯುಮೆಂಟರಿಗಳಾದ ‘ಫಿಲ್ಮ್‌ಮಲಾನಿ’ ಹಾಗೂ ‘ಮಲಾನಿಯೀಸ್ ಚಿತ್ರಹಾರ್’ ೫ ಗಂಟೆಗಳ ಸಂಗೀತ ಕಲೆಕ್ಷನ್‌ಗಳನ್ನು ಸಂದೀಪ್ ಮಲಾನಿ ಹೊರ ತಂದಿದ್ದಾರೆ. ಇದರ ಜತೆಯಲ್ಲಿ ಕೊಂಕಣಿ ಹಾಗೂ ತುಳು ಎರಡು ಭಾಷೆಗಳನ್ನು ಒಂದೇ ಚಿತ್ರದಲ್ಲಿ ಜೋಡಿಸಿಕೊಂಡು ತುಳು ಚಿತ್ರವೊಂದನ್ನು ಮಾಡುತ್ತಿದ್ದಾರೆ. ೨೦೧೪ರ ಕೊನೆ ಭಾಗದಲ್ಲಿ ಈ ಚಿತ್ರವನ್ನು ಕೋಸ್ಟಲ್‌ವುಡ್ ಮಾರುಕಟ್ಟೆಯಲ್ಲಿ ಬಿಡುವ ಕುರಿತು ಮಲಾನಿ ಚಿಂತನೆ ಮಾಡುತ್ತಿದ್ದಾರೆ.
ಮಲಾನಿ ದಿಡೀರ್ ಸಿನಿಮಾ ಎಂಟ್ರಿ:
ರೋಮನ್ ಕೆಥೋಲಿಕ್ ಕುಟುಂಬದಲ್ಲಿ ೧೯೭೧ರಲ್ಲಿ ಮುಂಬೈನಲ್ಲಿ ಜನಿಸಿದ ಸಂದೀಪ್ ಮಲಾನಿ ಬೆಳದದ್ದು ಮಾತ್ರ ನಮ್ಮ ನಾಡಿನ ಕಡಲ ಕಿನಾರೆ ಮಂಗಳೂರಿನಲ್ಲಿ. ತಂದೆ ಸಿನಿಮಾ ಹಂಚಿಕೆದಾರರಾಗಿದ್ದ ಕಾರಣ ಸದಾ ಮನೆಯಲ್ಲಿ ಸಿನಿಮಾಗಳ ಕುರಿತು ಚರ್ಚೆ ನಡೆಯುತ್ತಿತ್ತು. ಅಂಥಹಾ ಚರ್ಚೆಗಳೇ ಸಂದೀಪ್ ಮಲಾನಿಯನ್ನು ಇಂದು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಮುಟ್ಟಿಸಿ ಮುನ್ನಡೆಸಲು ಕಾರಣವಾಯಿತು. ಬಾಲ್ಯದಿಂದ ಹಿಡಿದು ತರುಣಾವಸ್ತೆ ತಲುಪುವ ತನಕವೂ ಸಂದೀಪ್ ಚಿತ್ರದಲ್ಲಿ ಚಲನಚಿತ್ರಗಳೇ ತುಂಬಿ ತುಳುಕಿದ ಪರಿಣಾಮ ಮುಂದೆಯೂ ಸಿನಿಮಾ ಹುಚ್ಚು ಹಿಡಿದು ನಿರ್ದೇಶಕನಾಗುವ ಹಂತಕ್ಕೆ ಬಂದು ತಲುಪಿತು !
ಓದಿದ್ದು ಒಂದು ಆಗಿದ್ದು ಇನ್ನೊಂದು:
ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಪೂರೈಸಿದ ಸಂದೀಪ್ ಪತ್ರಿಕೋದ್ಯಮದತ್ತ ಒಲವು ತೋರಿ ಅಭ್ಯಾಸ ಮಾಡಿದರು. ಮಂಗಳೂರಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದರು. ಹುಡುಗಾಟದಿಂದಲೇ ಪಾಶ್ಚಾತ್ಯ ನೃತ್ಯದಲ್ಲೂ ಸಾಧನೆ ಮಾಡಿದ್ದ ಇವರು ಎರಿಕ್ ತಂಡದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ನಂತರ ಬೆಂಗಳೂರಿಗೆ ಬಂದು ಆಂಗ್ಲ ದೈನಿಕವೊಂದರಲ್ಲಿ ಸ್ವಲ್ಪಕಾಲ ಪತ್ರಕರ್ತರಾದ ಇವರು ಕ್ರಮೇಣ ಕನ್ನಡ ಚಿತ್ರಗಳಿಗೆ ಕತೆ ಬರೆಯಲು ಇಳಿದರು. ಒಂದು ಹಂತದಲ್ಲಿ ಪೂರ್ಣವಾಗಿ ಚಿತ್ರರಂಗದತ್ತ ವಾಲಿದ ಸಂದೀಪ್ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾದರು. ಇದು ಸಂದೀಪ್ ಮಲಾನಿ ಎನ್ನ್ನುವ ಕ್ರಿಯೇಟಿವ್ ನಿರ್ದೇಶಕನ ಬ್ಯಾಕ್ ಗ್ರೌಂಡ್ ಸ್ಟೋರಿ...
............
Subscribe to:
Post Comments (Atom)
No comments:
Post a Comment