Saturday, December 28, 2013

ಮದುವೆಯಾಗುತ್ತಿದ್ದೇನೆ ಮರೆಯದೇ ಬನ್ನಿ

ಹೊಸ ವರ್ಷ ಓಡೋಡಿ ಬರುತ್ತಿದೆ. ಗೋಡೆಯಲ್ಲಿ ತೂಗಿಸಿಟ್ಟ ಹಳೆಯ ಕ್ಯಾಲೆಂಡರ್ ವೊಂದು ಕಸದ ಬುಟ್ಟಿ ಸೇರುತ್ತಿದ್ದಂತೆಯೇ ಹೊಸ ಕ್ಯಾಲೆಂಡರ್ ಜನವರಿ ತಿಂಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಟ್ಟಿದೆ. ನನ್ನ ಪಾಲಿಗೆ ಜನವರಿ ಎಂದಾಕ್ಷಣ ಒಂದು ಹೊಸ ಹುರುಪು, ಉಲ್ಲಾಸ ಜತೆಗೆ ಇನ್ನಷ್ಟು ದುಡಿಯಬೇಕು ಎನ್ನುವ ಚಟ ಗೊತ್ತಿಲ್ಲದೇ ನನ್ನೋಳಗೆ ಗಟ್ಟಿಯಾಗುತ್ತದೆ. ಇದು ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಆದರೆ ಈ ವರ್ಷ ಅದರಲ್ಲೂ 2014 ಜನವರಿ 12 ನನ್ನ ಪಾಲಿಗಂತೂ ವಿಶೇಷ ದಿನ. ಕಾರಣ ಇಷ್ಟೇ ಅಂದೇ ನಾನು ಮದುವೆಯಾಗುತ್ತಿದ್ದೇನೆ.
ತುಂಬಾನೇ ಸರಳ ಹಾಗೂ ನನ್ನ ಪತ್ರಿಕೋದ್ಯಮ ವೃತ್ತಿ, ಭಾವನೆ, ಕುಟುಂಬದ ಎಲ್ಲರನ್ನು ಅಪ್ಪಿಕೊಳ್ಳಲು ಮುಂದೆ ಬರುತ್ತಿರುವ ನನ್ನ ಹುಡುಗಿಯ ಕೈ ಹಿಡಿಯುತ್ತಿದ್ದೇನೆ. ಅದರಲ್ಲೂ ನಾನು ಅತೀ ಹೆಚ್ಚುವ ಅಭಿಮಾನದಿಂದ ನೋಡುವ ನನ್ನ ಮಾದರಿ ವ್ಯಕ್ತಿ ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬದ ದಿನವೇ ನನ್ನ ಮದುವೆ ನಡೆಯುತ್ತಿದೆ. ನಾನಾ ಊರುಗಳಲ್ಲಿ ತುಂಬಿರುವ ನನ್ನ ಪ್ರೀತಿಯ ಗೆಳೆಯರಿಗೆ ಮದುವೆಯ ಆಮಂತ್ರಣವನ್ನು ನೀಡಬೇಕು ಎನ್ನೋದು ನನ್ನ ಹೆಬ್ಬಯಕೆಯಾಗಿತ್ತು. ಆದರೆ ಮದುವೆ, ವೃತ್ತಿ ಕೆಲಸದ ಒತ್ತಡ ಜತೆಗೆ ಸಮಯದ ಅಭಾವ ನನ್ನನ್ನು ಬಹಳವಾಗಿ ಕಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಯಾಕೋ ಏನೋ ಜನವರಿ 11ರೊಳಗೆ ನಿಮ್ಮ ಬಳಿಗೆ ನನ್ನ ಮದುವೆ ಆಮಂತ್ರಣ ಪತ್ರ ತಲುಪದೇ ಇರಬಹುದು. ಆದರೆ ಇದೇ ಕಾರಣ ಇಟ್ಟುಕೊಂಡು ನಾನು ಆಮಂತ್ರಣ ಪತ್ರ ನೀಡಿಲ್ಲ ಎಂದು ಬೇಸರಿಸಬೇಡಿ. ತುಂಬಾ ಹತ್ತಿರ ಇದ್ದ ಹುಡುಗ ಮದುವೆಗೇ ಹೇಳಿಯೇ ಇಲ್ಲ ಮಾರಾಯ್ರೆ ಎನ್ನಬೇಡಿ. ನನ್ನ ಹಾಗೂ ನನ್ನ ಪ್ರೀತಿಯ ಹುಡುಗಿಯ ಬದುಕಿನಲ್ಲಿ ಇದೊಂದು ದೊಡ್ಡ ಸಂಭ್ರಮ. ಮದುವೆಗೆ ಹೇಳದೇ ಮರೆತು ಹೋಗಿರುವ ಗೆಳೆಯರಿಗೆ ಹಾಗೂ ಹೇಳಿಕೂಡ ಮರೆದು ಬಿಡುವ ಗೆಳೆಯರಿಗೆ ಇದೇ ಮದುವೆಯ ಆಮಂತ್ರಣ ಪತ್ರ ಎಂದು ತಿಳಿದುಕೊಂಡು ನಮ್ಮಿಬ್ಬರನ್ನು ಪ್ರೀತಿಯಿಂದ ಹರಸಲು ಬನ್ನಿ...
ಅಂದಹಾಗೆ ಜನವರಿ ತಿಂಗಳ ಮೊದಲ ಎರಡು ವಾರ ನನ್ನ ಬದುಕಿನಲ್ಲಿ ಸಂಭ್ರಮದ ಕ್ಷಣಗಳಿಂದಲೇ ತುಂಬಿದೆ. ಜನವರಿ 5ರಂದು ನನ್ನ ಹಾಗೂ ನನ್ನ ಹುಡುಗಿಯ ನಿಶ್ಚಿತಾರ್ಥ, ಜನವರಿ 10ರಂದು ರೋಸ್ ಅರ್ಥಾತ್ ಮದರಂಗಿ ಕಾರ್ಯಕ್ರಮ ಹಾಗೂ ಜನವರಿ 12ರಂದು ಮದುವೆಯ ಸುವರ್ಣ ಕ್ಷಣ. ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವು ಬರಬೇಕು. ಅದರಲ್ಲೂ ಮೂರರಲ್ಲಿ ಒಂದು ಕಾರ್ಯಕ್ರಮದಲ್ಲಾದರೂ ಭಾಗವಹಿಸಲೇ ಬೇಕು ಎನ್ನುವುದು ನನ್ನ ವಿನಂತಿ. ಪ್ರೀತಿ ಇಟ್ಟುಕೊಂಡು ಮದುವೆಗೆ ಬನ್ನಿ... ನಿಮ್ಮ ಮನೆಯ ಹುಡುಗ ಸ್ಟೀವನ್ ರೇಗೊ, ದಾರಂದಕುಕ್ಕು

1 comment:

  1. Thanks for inviting....

    Jovial Congratulations... Will definitely attend on your marriage..


    Regards,
    Sharath Alva

    ReplyDelete