Tuesday, December 10, 2013
ಇದು ಹೊಸ ಬ್ಯುಸಿನೆಸ್: ಬಾಡಿಗೆಗೆ ಇದೆ ಎಲೆಕ್ಟ್ರಾನಿಕ್ ಗೂಡ್ಸ್
ಸ್ಟೀವನ್ ರೇಗೊ, ದಾರಂದಕುಕ್ಕು
ರಾಜ್ಯದ ನಗರಗಳು ಸಖತ್ ಆಗಿ ಬೆಳೆಯುತ್ತಿದೆ. ಇಂತಹ ಬೆಳೆಯುವ ನಗರದಲ್ಲಿ ಒಂದು ಸೆಂಟ್ಸ್ ಜಾಗಕ್ಕೂ ಲಕ್ಷದ ಲೆಕ್ಕಚಾರ. ಶ್ರೀಸಾಮಾನ್ಯನಿಗೆ ಕಾಸು ಕೂಡಿಟ್ಟುಕೊಂಡು ಮನೆ ಕಟ್ಟುವ ಅಲೋಚನೆಯಂತೂ ಬಂದು ಬಿಟ್ಟರೆ ದಿನದ ಜಮೀನು ರೇಟು ಷೇರು ಪೇಟೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಲಗ್ಗೆ ಹಾಕುತ್ತಾ ಓಡುತ್ತಿರುತ್ತದೆ. ಇದಕ್ಕಿಂತ ಬಾಡಿಗೆ ಮನೆಯೇ ಲೇಸು ಎನ್ನುವ ಸ್ಥಿತಿಗೆ ಶ್ರೀಸಾಮಾನ್ಯ ತಲುಪಿ ಬಿಡುತ್ತಾನೆ.
ಆದರೂ ಇಲ್ಲೊಂದು ಎಡವಟ್ಟು ಬಾಡಿಗೆ ಮನೆ ಎಂದರೆ ಬರೀ ಒಂದು ವರ್ಷದ ಒಪ್ಪಂದ. ಜಾಸ್ತಿ ಸಮಯ ಬಾಡಿಗೆ ಮನೆಯಲ್ಲಿ ಉಳಿಯುವ ಖಯಾಲಿಗೆ ಬಾಡಿಗೆ ಮನೆಯ ಮಾಲೀಕನೇ ಬ್ರೇಕ್ ಹಾಕಿ ಬಿಡುತ್ತಾನೆ. ಒಂದು ವರ್ಷದ ಅವಧಿಯಲ್ಲಿ ಅವನು ಬಾಡಿಗೆ ಮನೆಗೆ ತರುವ ಮಂಚ, ಫ್ರಿಡ್ಜ್, ಟಿವಿ, ಎಸಿ, ಹೀಟರ್, ಗ್ಯಾಸ್ ಕನೆಕ್ಷನ್ ಹೀಗೆ ಹತ್ತಾರು ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಮುಟ್ಟಿಸಲು ಸಾವಿರಾರು ಖರ್ಚು ಮಾಡುತ್ತಾನೆ. ಇದರ ಜತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳು ತುಂಬಾ ಜೋಪಾನ ಅಂತೂ ಇಂತೂ ಬಾಡಿಗೆ ಮನೆ ಮುಟ್ಟಿದಾಗ ಕೆಟ್ಟು ಹೋದರೆ ಮತ್ತೆ ಖರ್ಚು. ಹೀಗೆ ಹತ್ತಾರು ಇಂತಹ ಜಂಜಾಟದಲ್ಲಿ ಬಾಡಿಗೆ ಮನೆಯಲ್ಲಿ ಬದುಕು ಕಟ್ಟುವ ಲಕ್ಷಾಂತರ ಮಂದಿಗೊಂದು ಗುಡ್ ನ್ಯೂಸ್ ಸಿಕ್ಕಿದೆ.
ಅದೇನಪ್ಪಾ ಅಂದರೆ ಬಾಡಿಗೆಗೆ ಸಿಗುತ್ತೆ ಎಲೆಕ್ಟ್ರಾನಿಕ್ ಗೂಡ್ಸ್. ಇದು ರಾಜ್ಯದ ಮಟ್ಟಿಗೆ ಹೊಸ ಬ್ಯುಸಿನೆಸ್. ಆದರೆ ದೇಶದ ಕೆಲವೊಂದು ನಗರದಲ್ಲಿ ಇದು ಚಾಲ್ತಿಗೆ ಬಂದು ವರ್ಷಗಳೇ ಸಂದಿದೆ. ಮೆಟ್ರೋ ನಗರದಲ್ಲಿ ಬದುಕು ಕಟ್ಟುವ ಮಂದಿಗಂತೂ ಈ ವ್ಯಾಪಾರದ ಗುಟ್ಟು ಗೊತ್ತೇ ಇದೆ. ಇದರಲ್ಲಿಯೇ ಬದುಕು ಕಟ್ಟುತ್ತಾ ಸಮಾಜದ ಚೌಕಟ್ಟಿನಲ್ಲಿ ತಾವು ಕೂಡ ಶ್ರೀಮಂತರು ಎನ್ನುವ ಮುದ್ರೆ ಬೀಳುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ.
ಹೊಸದಾಗಿ ನೀವು ಮದುವೆಯಾಗುತ್ತೀರಿ ಅಥವಾ ನಿಮ್ಮ ಉದ್ಯೋಗದಿಂದ ಬರುವ ವರಮಾನ ಕೂಡ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುವುದು ತೀರಾ ಕಷ್ಟ. ಆದರೂ ಇಂತಹ ಸಾಮಗ್ರಿಗಳು ಮನೆಗೆ ತೀರಾನೇ ಅವಶ್ಯಕ ಎನ್ನಿಸಿಬಿಡುತ್ತದೆ. ಇಂತಹ ಸಮಯದಲ್ಲಿ ಮುಂದೆ ಬರುವವರೇ ಈ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕರು.
ಎಲೆಕ್ಟ್ರಾನಿಕ್ ಗೂಡ್ಸ್ ವ್ಯಾಪಾರ ಹೇಗೆ:
ನಗರ ಪ್ರದೇಶಕ್ಕೆ ನೆಲೆ ನಿಲ್ಲಲು ಬರುವ ಸತಿಪತಿಗಳಿಗೆ ಮುಖ್ಯವಾಗಿ ಬೇಕಾಗಿರುವುದು ಮಲಗಲು ಮಂಚ, ಆಹಾರ ಪದಾರ್ಥಗಳನ್ನು ಜೋಪಾನವಾಗಿಡಲು ಫ್ರಿಡ್ಜ್(ಶೀತಲಯಂತ್ರ), ಬೋರ್ ಅನ್ನಿಸಿದಾಗ ನೋಡಲು ಟಿವಿ, ಅಡುಗೆ ಮಾಡಲು ಬೇಕಾದ ಸ್ಟೌವ್, ಸ್ನಾನ ಮಾಡಲು ಬೇಕಾದ ಹೀಟರ್ ವ್ಯವಸ್ಥೆ ಹೀಗೆ ಹತ್ತಾರು ವಸ್ತಗಳು ದೈನಂದಿನ ಬದುಕಿನಲ್ಲಿ ತೀರಾ ಅಗತ್ಯ ಅನ್ನಿಸಿ ಬಿಡುತ್ತದೆ. ಈ ಸಮಯದಲ್ಲಿ ಇಂತಹ ವಸ್ತುಗಳನ್ನು ಬಾಡಿಗೆಗೆ ಕೊಡುವ ಮಂದಿ ಸಿಗುತ್ತಾರೆ. ವರ್ಷದ ಆಧಾರದಲ್ಲಿ ಇಂತಹ ವಸ್ತುಗಳಿಗೆ ತಿಂಗಳ ಲೆಕ್ಕಚಾರದಲ್ಲಿ (ಉದಾ: ಮಂಚಕ್ಕೆ 100ರಿಂದ 200 ರೂಪಾಯಿ) ಒಪ್ಪಂದ ಪತ್ರವನ್ನು ಸಿದ್ಧ ಪಡಿಸಲಾಗುತ್ತದೆ.
ಬಾಡಿಗೆ ಮನೆಯ ಕರಾರು ಒಂದೇ ವರ್ಷದ ಅವಧಿಯಲ್ಲಿರುವುದರಿಂದ ಎಲೆಕ್ಟ್ರಾನಿಕ್ ಗೂಡ್ಸ್ ಗಳಲ್ಲಿ ವರ್ಷದ ಲೆಕ್ಕಚಾರಕ್ಕೆ ಇಳಿಯಲಾಗುತ್ತದೆ. ಈ ಸಮಯದಲ್ಲಿ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾನಿಯಾದರೇ ಯಾರು ಬಾಡಿಗೆಗೆ ಪಡೆದುಕೊಂಡಿರುತ್ತಾನೋ ಅವನೇ ನಷ್ಟ ಭರಿಸಬೇಕಾಗುತ್ತದೆ. ಜತೆಗೆ ಬಾಡಿಗೆದಾರ ಯಾವ ಮನೆಯಲ್ಲಿ ವಾಸವಾಗಿರುತ್ತಾನೋ ಅಲ್ಲಿಗೆ ಈ ಸಾಮಗ್ರಿಗಳನ್ನು ತಂದು ಕೊಡುವ ಜವಾಬ್ದಾರಿ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನಾಗಿರುತ್ತದೆ.
ಸಾಮಗ್ರಿಗಳು ಎಲ್ಲಿಂದ ಅಂತೀರಾ:
ಅಷ್ಟಕ್ಕೂ ಈ ಸಾಮಗ್ರಿಗಳು ಎಲ್ಲಿಂದ ಬರುತ್ತದೆ ಎನ್ನುವ ಕುತೂಹಲ ಮೊಳಕೆಯೊಡೆಯುವುದು ಸರ್ವೆ ಸಾಮಾನ್ಯ. ಆದರೆ ಕೆಲವು ಮೂಲಗಳ ಪ್ರಕಾರ ನಗರದಲ್ಲಿ ದುಡಿಯುವ ಐಟಿ, ಬಿಟಿ ಸೆಂಟರ್ ಉದ್ಯೋಗಿಗಳು ತಾವು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವಲಸೆ ಹೋದಾಗ ಈ ಸಾಮಗ್ರಿಗಳನ್ನು ಮತ್ತೊಂದು ಊರಿಗೆ ಸಾಗಾಟ ಮಾಡಲು ಕಷ್ಟ. ಈ ಸಮಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮತ್ತೊಂದು ಊರಿಗೆ ಗಂಟುಮೂಟೆ ಕಟ್ಟುತ್ತಾರೆ. ಇದೇ ಸಮಯದಲ್ಲಿ ಮನೆ ಹುಡುಕುವ ಬ್ರೋಕರ್ ಗಳು ಇದನ್ನು ಖರೀದಿ ಮಾಡಿಕೊಂಡು ಇಂತಹ ಸಾಮಗ್ರಿಗಳ ಬಾಡಿಗೆ ದಂಧೆಗೆ ಇಳಿಯುತ್ತಾರೆ. ಇದೇ ರೀತಿಯಲ್ಲಿ ಕೆಲವೊಂದು ಬ್ರೋಕರ್ ಗಳು ತಾವೇ ಸಾಮಗ್ರಿಗಳನ್ನು ಖರೀದಿಸಿಕೊಂಡು ಬಾಡಿಗೆಗೆ ನೀಡುತ್ತಾರೆ. ಒಂದೆರಡು ವರ್ಷ ಮುಗಿಯುತ್ತಾ ಹೋದಂತೆ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾಕಿದ ಬಂಡವಾಳ ವಾಪಾಸು ಬಂದು ಮುಟ್ಟುತ್ತದೆ. ಮತ್ತೆ ಉಳಿದ ಹಣ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನ ಕೀಸೆ ಸೇರಿಕೊಳ್ಳುತ್ತದೆ. ಇದು ಹೊಸ ಬ್ಯುಸಿನೆಸ್ ನ ಮುನ್ನುಡಿ ಅಧ್ಯಾಯ.
...
ಕೋಟ್ ಕಾರ್ನರ್
ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಸಿಸ್ಟಂ ಇತ್ತೀಚೆಗೆ ಎಲ್ಲ ಊರುಗಳಲ್ಲಿಯೂ ಆರಂಭವಾಗಿದೆ. ಹೊಸದಾಗಿ ಬದುಕು ಕಟ್ಟುವವರಿಗೆ ದೊಡ್ಡ ಮಾದರಿಯಲ್ಲಿ ಬದುಕು ಕಟ್ಟಲು ಸಾಧ್ಯವಿಲ್ಲ. ಅವರ ವರಮಾನ ಜತೆಗೆ ಆರ್ಥಿಕ ಲೆಕ್ಕಚಾರಗಳು ಕೂಡ ಉಲ್ಟಾ- ಪಲ್ಟಾ ಹೊಡೆಯುವ ಸಾಧ್ಯತೆಗಳು ಜಾಸ್ತಿಯಾಗಿರುತ್ತದೆ. ಇಂತಹ ಸಮಯದಲ್ಲಿ ಬಾಡಿಗೆಗೆ ಸಿಗುವ ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ತೃಪ್ತಿ ಹೊಂದಬಹುದು.
ಪ್ರಸಾದ್, ಮಂಗಳೂರು
ಕಳೆದ ಐದಾರು ವರ್ಷಗಳಿಂದ ಿಂತಹ ಬಾಡಿಗೆ ಕೊಡುವ ದಂಧೆಯಲ್ಲಿ ಇರುವವರು.
(vijaykarnataka namma karvali article on 11.12.2014)
Subscribe to:
Post Comments (Atom)
No comments:
Post a Comment