Sunday, December 29, 2013

ಮಲಾನಿ ಬಾಲಿವುಡ್‌ನಲ್ಲಿ ಹೊಸ ಕಹಾನಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸಂದೀಪ್ ಮಲಾನಿ ಬಾಲಿವುಡ್ ಅಂಗಳದಲ್ಲಿ ಸೈಲೆಂಟ್ ವರ್ಕ್‌ರ್ ಎಂದೇ ಕರೆಸಿಕೊಂಡವರು. ಬಾಲಿವುಡ್ ಅಂಗಳದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸದಾ ಕಾಲ ಬ್ಯುಸಿಯಾಗಿರುವ ಮಂಗಳೂರು ಮೂಲದ ಸಂದೀಪ್ ಮಲಾನಿ ಈಗ ಹೊಸ ಕಹಾನಿಯೊಂದನ್ನು ರೆಡಿ ಮಾಡಿದ್ದಾರೆ. ಅದೇನಪ್ಪಾ ಅಂದರೆ ಅತ್ತ ಕಮರ್ಷಿಯಲ್ ಆಂಗಲ್‌ನಲ್ಲೂ ಇಲ್ಲದ ಇತ್ತ ಆರ್ಟ್ ಕೆಟಗರಿಗೂ ಸೇರದಂತಹ ಮೂರು ಕತೆಗಳನ್ನು ಇಟ್ಟುಕೊಂಡು ಮೂರು ಚಿತ್ರಗಳನ್ನು ಮಾಡಲು ಭರ್ಜರಿ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
‘ಐ ಲವ್ ಹೃತಿಕ್’ ಎನ್ನುವ ಚಿತ್ರದಲ್ಲಿ ಬಾಲಕನ ಮುಗ್ದ ಜಗತ್ತಿನ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುವ ಯೋಜನೆ ಮಲಾನಿ ತಲೆಗೆ ಬಂದಿದೆ. ಇದರ ಜತೆಯಲ್ಲಿ ‘ಓ ಮೈ ಡಾಗ್’ ಅನ್ಯ ಕೋಮಿನ ಯುವಕ -ಯುವತಿಯ ಪ್ರಣಯ ಕತೆಯನ್ನು ಚಿತ್ರದ ಮೂಲಕ ಹೊರತರುವ ಕೆಲಸ ಕೂಡ ಮಲಾನಿ ಕೈಗೆತ್ತಿಕೊಂಡಿದ್ದಾರೆ. ಹಾಹಾ.. ಹ್ಹೀ ಹ್ಹೀ ಎನ್ನುವ ಹಾಸ್ಯ ಚಿತ್ರ ಮಲಾನಿ ಬಾಣಲೆಯಲ್ಲಿ ಸಿದ್ಧವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ಈ ಎಲ್ಲ ಚಿತ್ರಗಳು ಚಿತ್ರೀಕರಣಗೊಂಡು ತೆರೆಗೆ ತರುವ ಕೆಲಸ ಮಲಾನಿಯಿಂದ ನಡೆಯಲಿದೆ. ಈ ಮೂರು ಚಿತ್ರಗಳನ್ನು ಮಲಾನಿ ತಮ್ಮ ಹೋಮ್ ಬ್ಯಾನರ್ ಮಲಾನಿ ಟಾಕೀಸ್ ಮೂಲಕ ಹೊರ ತರುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ತಮ್ಮ ಕುಟುಂಬದ ಸಮೇತರಾಗಿ ಮಂಗಳೂರಿನ ಮನೆಗೆ ಬಂದಿದ್ದಾಗ ನಿರ್ದೇಶಕ ಕಮ್ ಕತೆಗಾರ ಮಲಾನಿ ಲವಲವಿಕೆಯ ಜತೆಯಲ್ಲಿ ತಮ್ಮ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ೨೦೧೩ ನನ್ನ ಪಾಲಿಗೆ ವಿಶೇಷವಾಗಿತ್ತು. ೯ ಸಂಗೀತ ಪ್ರದಾನವಾದ ಡಾಕ್ಯುಮೆಂಟರಿಗಳನ್ನು ಸಿದ್ಧಪಡಿಸಿದ್ದೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಯಶ್‌ರಾಜ್ ಅವರ ನೆನಪಿಗಾಗಿ ‘ಯಶ್‌ರಾಜ್ ಹೀರೋಯಿನ್ಸ್ ದೇ ಜಾಯೆಂಗೆ’ ಹಾಗೂ ಬಾಲಿವುಡ್ ನಟಿ ಶ್ರೀದೇವಿಯ ೫೦ನೇ ಹುಟ್ಟುಹಬ್ಬಕ್ಕಾಗಿ ಶ್ರೀದೇವಿಯ ಬಾಲಿವುಡ್ ಪ್ರಯಾಣ ಕುರಿತಾದ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಡಾಕ್ಯುಮೆಂಟರಿಗಳನ್ನು ಸಿದ್ಧ ಪಡಿಸಿದ್ದೇನೆ ಎಂದರು. ೧೦೦ರ ಸಿನಿಮಾಕ್ಕೆ ಎರಡು ಡಾಕ್ಯುಮೆಂಟರಿ: ಭಾರತೀಯ ಸಿನಿಮಾ ರಂಗ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಎರಡು ಸಂಗೀತ ಡಾಕ್ಯುಮೆಂಟರಿಗಳಾದ ‘ಫಿಲ್ಮ್‌ಮಲಾನಿ’ ಹಾಗೂ ‘ಮಲಾನಿಯೀಸ್ ಚಿತ್ರಹಾರ್’ ೫ ಗಂಟೆಗಳ ಸಂಗೀತ ಕಲೆಕ್ಷನ್‌ಗಳನ್ನು ಸಂದೀಪ್ ಮಲಾನಿ ಹೊರ ತಂದಿದ್ದಾರೆ. ಇದರ ಜತೆಯಲ್ಲಿ ಕೊಂಕಣಿ ಹಾಗೂ ತುಳು ಎರಡು ಭಾಷೆಗಳನ್ನು ಒಂದೇ ಚಿತ್ರದಲ್ಲಿ ಜೋಡಿಸಿಕೊಂಡು ತುಳು ಚಿತ್ರವೊಂದನ್ನು ಮಾಡುತ್ತಿದ್ದಾರೆ. ೨೦೧೪ರ ಕೊನೆ ಭಾಗದಲ್ಲಿ ಈ ಚಿತ್ರವನ್ನು ಕೋಸ್ಟಲ್‌ವುಡ್ ಮಾರುಕಟ್ಟೆಯಲ್ಲಿ ಬಿಡುವ ಕುರಿತು ಮಲಾನಿ ಚಿಂತನೆ ಮಾಡುತ್ತಿದ್ದಾರೆ. ಮಲಾನಿ ದಿಡೀರ್ ಸಿನಿಮಾ ಎಂಟ್ರಿ: ರೋಮನ್ ಕೆಥೋಲಿಕ್ ಕುಟುಂಬದಲ್ಲಿ ೧೯೭೧ರಲ್ಲಿ ಮುಂಬೈನಲ್ಲಿ ಜನಿಸಿದ ಸಂದೀಪ್ ಮಲಾನಿ ಬೆಳದದ್ದು ಮಾತ್ರ ನಮ್ಮ ನಾಡಿನ ಕಡಲ ಕಿನಾರೆ ಮಂಗಳೂರಿನಲ್ಲಿ. ತಂದೆ ಸಿನಿಮಾ ಹಂಚಿಕೆದಾರರಾಗಿದ್ದ ಕಾರಣ ಸದಾ ಮನೆಯಲ್ಲಿ ಸಿನಿಮಾಗಳ ಕುರಿತು ಚರ್ಚೆ ನಡೆಯುತ್ತಿತ್ತು. ಅಂಥಹಾ ಚರ್ಚೆಗಳೇ ಸಂದೀಪ್ ಮಲಾನಿಯನ್ನು ಇಂದು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಮುಟ್ಟಿಸಿ ಮುನ್ನಡೆಸಲು ಕಾರಣವಾಯಿತು. ಬಾಲ್ಯದಿಂದ ಹಿಡಿದು ತರುಣಾವಸ್ತೆ ತಲುಪುವ ತನಕವೂ ಸಂದೀಪ್ ಚಿತ್ರದಲ್ಲಿ ಚಲನಚಿತ್ರಗಳೇ ತುಂಬಿ ತುಳುಕಿದ ಪರಿಣಾಮ ಮುಂದೆಯೂ ಸಿನಿಮಾ ಹುಚ್ಚು ಹಿಡಿದು ನಿರ್ದೇಶಕನಾಗುವ ಹಂತಕ್ಕೆ ಬಂದು ತಲುಪಿತು ! ಓದಿದ್ದು ಒಂದು ಆಗಿದ್ದು ಇನ್ನೊಂದು: ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಪೂರೈಸಿದ ಸಂದೀಪ್ ಪತ್ರಿಕೋದ್ಯಮದತ್ತ ಒಲವು ತೋರಿ ಅಭ್ಯಾಸ ಮಾಡಿದರು. ಮಂಗಳೂರಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದರು. ಹುಡುಗಾಟದಿಂದಲೇ ಪಾಶ್ಚಾತ್ಯ ನೃತ್ಯದಲ್ಲೂ ಸಾಧನೆ ಮಾಡಿದ್ದ ಇವರು ಎರಿಕ್ ತಂಡದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ನಂತರ ಬೆಂಗಳೂರಿಗೆ ಬಂದು ಆಂಗ್ಲ ದೈನಿಕವೊಂದರಲ್ಲಿ ಸ್ವಲ್ಪಕಾಲ ಪತ್ರಕರ್ತರಾದ ಇವರು ಕ್ರಮೇಣ ಕನ್ನಡ ಚಿತ್ರಗಳಿಗೆ ಕತೆ ಬರೆಯಲು ಇಳಿದರು. ಒಂದು ಹಂತದಲ್ಲಿ ಪೂರ್ಣವಾಗಿ ಚಿತ್ರರಂಗದತ್ತ ವಾಲಿದ ಸಂದೀಪ್ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾದರು. ಇದು ಸಂದೀಪ್ ಮಲಾನಿ ಎನ್ನ್ನುವ ಕ್ರಿಯೇಟಿವ್ ನಿರ್ದೇಶಕನ ಬ್ಯಾಕ್ ಗ್ರೌಂಡ್ ಸ್ಟೋರಿ... ............

Saturday, December 28, 2013

ಮದುವೆಯಾಗುತ್ತಿದ್ದೇನೆ ಮರೆಯದೇ ಬನ್ನಿ

ಹೊಸ ವರ್ಷ ಓಡೋಡಿ ಬರುತ್ತಿದೆ. ಗೋಡೆಯಲ್ಲಿ ತೂಗಿಸಿಟ್ಟ ಹಳೆಯ ಕ್ಯಾಲೆಂಡರ್ ವೊಂದು ಕಸದ ಬುಟ್ಟಿ ಸೇರುತ್ತಿದ್ದಂತೆಯೇ ಹೊಸ ಕ್ಯಾಲೆಂಡರ್ ಜನವರಿ ತಿಂಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಟ್ಟಿದೆ. ನನ್ನ ಪಾಲಿಗೆ ಜನವರಿ ಎಂದಾಕ್ಷಣ ಒಂದು ಹೊಸ ಹುರುಪು, ಉಲ್ಲಾಸ ಜತೆಗೆ ಇನ್ನಷ್ಟು ದುಡಿಯಬೇಕು ಎನ್ನುವ ಚಟ ಗೊತ್ತಿಲ್ಲದೇ ನನ್ನೋಳಗೆ ಗಟ್ಟಿಯಾಗುತ್ತದೆ. ಇದು ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಆದರೆ ಈ ವರ್ಷ ಅದರಲ್ಲೂ 2014 ಜನವರಿ 12 ನನ್ನ ಪಾಲಿಗಂತೂ ವಿಶೇಷ ದಿನ. ಕಾರಣ ಇಷ್ಟೇ ಅಂದೇ ನಾನು ಮದುವೆಯಾಗುತ್ತಿದ್ದೇನೆ.
ತುಂಬಾನೇ ಸರಳ ಹಾಗೂ ನನ್ನ ಪತ್ರಿಕೋದ್ಯಮ ವೃತ್ತಿ, ಭಾವನೆ, ಕುಟುಂಬದ ಎಲ್ಲರನ್ನು ಅಪ್ಪಿಕೊಳ್ಳಲು ಮುಂದೆ ಬರುತ್ತಿರುವ ನನ್ನ ಹುಡುಗಿಯ ಕೈ ಹಿಡಿಯುತ್ತಿದ್ದೇನೆ. ಅದರಲ್ಲೂ ನಾನು ಅತೀ ಹೆಚ್ಚುವ ಅಭಿಮಾನದಿಂದ ನೋಡುವ ನನ್ನ ಮಾದರಿ ವ್ಯಕ್ತಿ ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬದ ದಿನವೇ ನನ್ನ ಮದುವೆ ನಡೆಯುತ್ತಿದೆ. ನಾನಾ ಊರುಗಳಲ್ಲಿ ತುಂಬಿರುವ ನನ್ನ ಪ್ರೀತಿಯ ಗೆಳೆಯರಿಗೆ ಮದುವೆಯ ಆಮಂತ್ರಣವನ್ನು ನೀಡಬೇಕು ಎನ್ನೋದು ನನ್ನ ಹೆಬ್ಬಯಕೆಯಾಗಿತ್ತು. ಆದರೆ ಮದುವೆ, ವೃತ್ತಿ ಕೆಲಸದ ಒತ್ತಡ ಜತೆಗೆ ಸಮಯದ ಅಭಾವ ನನ್ನನ್ನು ಬಹಳವಾಗಿ ಕಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಯಾಕೋ ಏನೋ ಜನವರಿ 11ರೊಳಗೆ ನಿಮ್ಮ ಬಳಿಗೆ ನನ್ನ ಮದುವೆ ಆಮಂತ್ರಣ ಪತ್ರ ತಲುಪದೇ ಇರಬಹುದು. ಆದರೆ ಇದೇ ಕಾರಣ ಇಟ್ಟುಕೊಂಡು ನಾನು ಆಮಂತ್ರಣ ಪತ್ರ ನೀಡಿಲ್ಲ ಎಂದು ಬೇಸರಿಸಬೇಡಿ. ತುಂಬಾ ಹತ್ತಿರ ಇದ್ದ ಹುಡುಗ ಮದುವೆಗೇ ಹೇಳಿಯೇ ಇಲ್ಲ ಮಾರಾಯ್ರೆ ಎನ್ನಬೇಡಿ. ನನ್ನ ಹಾಗೂ ನನ್ನ ಪ್ರೀತಿಯ ಹುಡುಗಿಯ ಬದುಕಿನಲ್ಲಿ ಇದೊಂದು ದೊಡ್ಡ ಸಂಭ್ರಮ. ಮದುವೆಗೆ ಹೇಳದೇ ಮರೆತು ಹೋಗಿರುವ ಗೆಳೆಯರಿಗೆ ಹಾಗೂ ಹೇಳಿಕೂಡ ಮರೆದು ಬಿಡುವ ಗೆಳೆಯರಿಗೆ ಇದೇ ಮದುವೆಯ ಆಮಂತ್ರಣ ಪತ್ರ ಎಂದು ತಿಳಿದುಕೊಂಡು ನಮ್ಮಿಬ್ಬರನ್ನು ಪ್ರೀತಿಯಿಂದ ಹರಸಲು ಬನ್ನಿ...
ಅಂದಹಾಗೆ ಜನವರಿ ತಿಂಗಳ ಮೊದಲ ಎರಡು ವಾರ ನನ್ನ ಬದುಕಿನಲ್ಲಿ ಸಂಭ್ರಮದ ಕ್ಷಣಗಳಿಂದಲೇ ತುಂಬಿದೆ. ಜನವರಿ 5ರಂದು ನನ್ನ ಹಾಗೂ ನನ್ನ ಹುಡುಗಿಯ ನಿಶ್ಚಿತಾರ್ಥ, ಜನವರಿ 10ರಂದು ರೋಸ್ ಅರ್ಥಾತ್ ಮದರಂಗಿ ಕಾರ್ಯಕ್ರಮ ಹಾಗೂ ಜನವರಿ 12ರಂದು ಮದುವೆಯ ಸುವರ್ಣ ಕ್ಷಣ. ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವು ಬರಬೇಕು. ಅದರಲ್ಲೂ ಮೂರರಲ್ಲಿ ಒಂದು ಕಾರ್ಯಕ್ರಮದಲ್ಲಾದರೂ ಭಾಗವಹಿಸಲೇ ಬೇಕು ಎನ್ನುವುದು ನನ್ನ ವಿನಂತಿ. ಪ್ರೀತಿ ಇಟ್ಟುಕೊಂಡು ಮದುವೆಗೆ ಬನ್ನಿ... ನಿಮ್ಮ ಮನೆಯ ಹುಡುಗ ಸ್ಟೀವನ್ ರೇಗೊ, ದಾರಂದಕುಕ್ಕು

Monday, December 16, 2013

ಕರಾವಳಿಯಲ್ಲಿ ಕ್ರಿಸ್ ಮಸ್ ‘ಕುಸ್ವಾರ್’

* ಸ್ಟೀವನ್ ರೇಗೊ, ದಾರಂದಕುಕ್ಕು
ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಕ್ರಿಸ್‌ಮಸ್ ಹಬ್ಬ್ಬದ ಸಡಗರ ಗಟ್ಟಿಯಾಗುತ್ತದೆ. ಗಡಗಡ ನಡುಗಿಸುವ ಚಳಿಯೊಂದಿಗೇ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಹಬ್ಬಕ್ಕೆ ಕೆಲ ದಿನಗಳ ಮುನ್ನವೇ ಅಲ್ಲಲ್ಲಿ ಶುರುವಾಗುವ ಕೇಕ್ ಮಿಕ್ಸಿಂಗ್‌ನ ಮೋಜೂ ಹಬ್ಬಕ್ಕೆ ಮುನ್ನುಡಿಯಾಗುತ್ತದೆ. ಈಗಾಗಲೇ ಎಲ್ಲೆಲ್ಲೂ ಸಾಂತಾಕ್ಲಾಸ್ ವೇಷಧಾರಿಗಳ ಸಿದ್ಧತೆಯೂ ಭರದಿಂದಲೇ ನಡೆದಿದೆ. ಕ್ರಿಸ್‌ಮಸ್ ಟ್ರೀ ಜತೆಗೆ ನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಮಾರಾಟ, ದೇವಲೋಕದ ಸೃಷ್ಟಿಗೆ ಬೇಕಿರುವ ನಕ್ಷತ್ರಗಳ ಮಾರಾಟದ ಭರಾಟೆ ಕೂಡ ಜೋರು. ದೇವಕನ್ಯೆಯರು, ಮಾತೆ ಮೇರಿ, ಬಾಲ ಏಸು ಇಲ್ಲದೇ ಹಬ್ಬ ಪೂರ್ಣಗೊಳ್ಳುವುದೇ ಇಲ್ಲ... ಈ ಕೊರತೆ ನೀಗಿಸಲೆಂದೇ ಪ್ರತಿ ಮನೆಯಲ್ಲೂ ಗೋದಲಿಗಳ ಸೃಷ್ಟಿಯಾಗುತ್ತದೆ. ಆದರೆ ಕರಾವಳಿಯಲ್ಲಿ ಮಾತ್ರ ಇವೆಲ್ಲಕ್ಕಿಂತ ಕೊಂಚ ಭಿನ್ನವಾದ ಕ್ರಿಸ್‌ಮಸ್ ಆಚರಣೆ ನಡೆಯುತ್ತದೆ. ಕರಾವಳಿಯಲ್ಲಿ ಕ್ರಿಸ್‌ಮಸ್ ಎಂದಾಕ್ಷಣ ಕುಸ್ವಾರ್(ತಿಂಡಿ ತಿನಸು)ಗಳ ಮಾತು ಬರುತ್ತದೆ. ಇಲ್ಲಿ ಕೇಕ್‌ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ ಕುಸ್ವಾ ರ್‌ಗಳಿಗಂತೂ ಬೇಡಿಕೆ ಇದ್ದೇ ಇದೆ. ಕರಾವಳಿಯ ಪಕ್ಕಾ ಕಥೋಲಿಕ್ ಬಂಧುಗಳು ಕುಸ್ವಾ ರ್ ಇಲ್ಲದೇ ಕ್ರಿಸ್ ಮಸ್ ಹಬ್ಬವನ್ನು ಸರಿಯಾಗಿ ಆಚರಣೆಯೇ ಮಾಡೋದಿಲ್ಲ. ಇಂತಹ ವಿಶಿಷ್ಟ ಬೆಳವಣಿಗೆ ದೇಶ- ವಿದೇಶದ ಯಾವುದೇ ಮೂಲೆಯಲ್ಲೂ ಕಾಣ ಸಿಗೋದಿಲ್ಲ. ಕುಟುಂಬದ ಸದಸ್ಯರು ಜತೆಗೂಡಿಕೊಂಡು ಗುಳಿಯೊ, ಕಿಡಿಯೊ, ಕುಲ್‌ಕುಲ್, ಗಜ್ಜೆಯಿ, ಅಕ್ಕಿ ಲಾಡು, ತುಕ್‌ಡಿ, ಚಕ್ಕುಲಿ, ಖಾರಕಡ್ಡಿ ಹೀಗೆ ಹತ್ತಾರು ಐಟಂಗಳು ಕರಾವಳಿಯ ಕ್ರಿಸ್‌ಮಸ್ ಕುಸ್ವಾರ್ ಪಟ್ಟಿಯಲ್ಲಿ ಜಾಗ ಪಡೆದುಕೊಳ್ಳುತ್ತದೆ. ಆಧುನಿಕ ಬದುಕಿನ ಒದ್ದಾಟದಲ್ಲಿ ಕುಸ್ವಾರ್ ಕಳೆಗುಂದಿದೆ: ಕ್ಯಾಲೆಂಡರ್ ಪುಟದಲ್ಲಿ ನವೆಂಬರ್ ತಿಂಗಳು ಕಳೆದು ಡಿಸೆಂಬರ್ ಬಂದಾಕ್ಷಣ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಾ ಬರುತ್ತದೆ. ಮುಖ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಕುಸ್ವಾರ್ ಗಳ ಕಚ್ಚಾ ಸಾಮಗ್ರಿಗಳು ಬಂದು ಮನೆಯ ಮೂಲೆಯಲ್ಲಿ ಬಿದ್ದು ಬಿಡುತ್ತದೆ. ನಂತರ ಡಿಸೆಂಬರ್ ೨೦ ದಾಟುತ್ತಿದ್ದಂತೆ ಕುಸ್ವಾರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುತ್ತಾರೆ. ಆಧುನಿಕ ಕಾಲದಲ್ಲಿ ಕೆಲಸದ ಒತ್ತಡ ಹಾಗೂ ಸಮಯದ ಅಭಾವಗಳು ಎರಡು ಕೂಡ ಕಾಡುತ್ತಿರುವುದರಿಂದ ಇಂತಹ ಕುಸ್ವಾರ್ ತಿಂಡಿಗಳನ್ನು ಮನೆಯ ಸದಸ್ಯರು ಕೂಡಿಕೊಂಡು ಮಾಡುವುದಕ್ಕಿಂತ ಹೆಚ್ಚಾಗಿ ಬೇಕರಿಗಳಿಗೆ ಮೊರೆ ಹೋಗುತ್ತಾರೆ. ಕರಾವಳಿಯ ಖ್ಯಾತ ಬೇಕರಿಗಳು ಈ ತಿಂಡಿ ತಿನಸುಗಳನ್ನು ಮಾರಾಟ ಮಾಡುತ್ತಾ ಬರುತ್ತಿದೆ.
ಕುಸ್ವಾರ್ ಮೂಲತಃ ಗೋವಾ ರಾಜ್ಯದಿಂದ ಬಂದ ಪದ್ದತಿಗಳಲ್ಲಿ ಒಂದು ಎನ್ನುವುದು ಕರಾವಳಿಯ ಬಹುತೇಕ ಕಥೋಲಿಕ್ ಬಂಧುಗಳು ನಂಬಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗೋವಾದಿಂದ ಕರಾವಳಿ ಕಡೆಗೆ ಹರಿದು ಬಂದ ಕ್ರೈಸ್ತರು ಅಲ್ಲಿಂದ ಕೆಲವೊಂದು ಸಂಪ್ರದಾಯ, ಆಚರಣೆ, ಆಹಾರ ಪದ್ಧತಿಗಳನ್ನು ತಂದರು ಎನ್ನುತ್ತಾರೆ ಕೊಂಕಣಿ ಪ್ರಚಾರ ಸಂಚಾಲನ ಸಮಿತಿಯ ಕಾರ್‍ಯದರ್ಶಿ ವಿತೋರಿ ಕಾರ್ಕಳ ಅವರು. ಕುಸ್ವಾ ರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುವ ಮೂಲಕ ಕುಟುಂಬದ ಸದಸ್ಯರ ಏಕತೆಯ ಸಂಕೇತ ಇಮ್ಮಡಿಗೊಳ್ಳುತ್ತದೆ. ಮನೆಮಂದಿಯೆಲ್ಲಾ ತಯಾರಿಸಿದ ’ಕುಸ್ವಾರ್’ ಕ್ರಿಸ್‌ಮಸ್‌ನ ಪ್ರೀತಿಯ ಸಂಕೇತವಾಗಿ ನೆರೆಮನೆಯ ಬಾಂಧವರಿಗೆ, ಜಾತಿ ಮತ ಭೇದವಿಲ್ಲದೆ ವಿತರಿಸುತ್ತಾರೆ. ಈ ಸಂಪ್ರದಾಯ ಇಂದಿಗೂ ಕ್ರೈಸ್ತಬಾಂದವರಲ್ಲಿ ಚಾಲ್ತಿಯಲ್ಲಿದೆ ಎನ್ನೋದು ಕ್ರಿಸ್ ಮಸ್ ಸಮಯದಲ್ಲಿ ಖುಷಿ ಕೊಡುವ ವಿಷ್ಯಾ.

Tuesday, December 10, 2013

ತುಳು ನಾಟಕಕ್ಕೆ ಬಂತು ಸಿನಿಮಾದ ಮೆರಗು

ಸ್ಟೀವನ್ ರೇಗೊ, ದಾರಂದಕುಕ್ಕು
ಕರಾವಳಿಯ ಕೋಸ್ಟಲ್‌ವುಡ್ ಮತ್ತೇ ಚಿಗುರಿಕೊಂಡಿದೆ. ಈ ವರ್ಷ ಒಂದೆರಡು ಸಿನಿಮಾಗಳು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟರೆ ಉಳಿದಂತೆ ೪೦ಕ್ಕೂ ಅಧಿಕ ಸಿನಿಮಾಗಳು ಸಿನಿಮಾ ಲ್ಯಾಂಡ್ ನೋಂದಣಿ ಪಡೆದುಕೊಂಡು ಚಿತ್ರೀಕರಣಕ್ಕೆ ದಿನ ನಿಗದಿ ಮಾಡಿಕೊಳ್ಳುತ್ತಿದೆ. ಕೋಸ್ಟಲ್‌ವುಡ್ ನ ಇತಿಹಾಸದಲ್ಲಿಯೇ ಇದೊಂದು ಭರ್ಜರಿಯಾದ ಫಸಲು ಎನ್ನುವ ವಿಚಾರದಲ್ಲಿ ಯಾವುದೇ ಗೊಂದಲ ಉಳಿಯುವುದಿಲ್ಲ. ಕೋಸ್ಟಲ್ ವುಡ್‌ನಲ್ಲಿ ಹೊಸ ನಾಯಕರು, ಹೊಸ ನಾಯಕಿಯರು, ಹೊಸ ನಿರ್ದೇಶಕರ ಜತೆಗೆ ಹೊಸ ನಿರ್ಮಾಪಕರು ತಮ್ಮ ಅದೃಷ್ಟ ಪರೀಕ್ಷೆಯಾಟದಲ್ಲಿ ಗೆಲ್ಲುತ್ತಾರಾ ಎನ್ನುವ ಪ್ರಶ್ನೆಯೊಂದು ಎದುರುಗೊಂಡಿದೆ. ಈಗ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಿನಿಮಾಗಳಿಗೆ ಏನೂ ಬರವಿಲ್ಲ. ಆದರೆ ಈಗ ನಿಜಕ್ಕೂ ಇರೋದು ಚಿತ್ರಕತೆಯ ವಿಚಾರದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಲಕ್ಷಣಗಳು ಕಾಣಿಸಿಕೊಂಡಿದೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಪುಟ್ಟ ಕತೆಯನ್ನು ಇಟ್ಟುಕೊಂಡು ಅದನ್ನು ಚಿತ್ರಕ್ಕೆ ಬೇಕಾದಂತೆ ಪೋಣಿಸಿಕೊಂಡು ಚಿತ್ರ ಮಾಡುವ ಕಾಲವೊಂದು ಗಟ್ಟಿಯಾಗಿತ್ತು. ಈಗ ತುಳು ಸಿನಿಮಾದಲ್ಲಿ ನಾಟಕದ ಕತೆಗಳೇ ಮೂಲ ಬಂಡವಾಳ ಅದರ ಜತೆಗೆ ಚಿತ್ರಕ್ಕೆ ಬೇಕಾದ ಸಾಮಗ್ರಿಗಳನ್ನು ಒಟ್ಟು ಸೇರಿಸುವ ಪರಂಪರೆ ಹುಟ್ಟಿಕೊಂಡಿದೆ. ತುಳು ರಂಗಭೂಮಿಯಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡ ನಾಟಕಗಳು ಸಿನಿಮಾಗಳಾಗಿ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಒಂದಲ್ಲ ಎರಡಲ್ಲ ಬರೋಬರಿ ೨೫ ವರ್ಷಕ್ಕಿಂತ ಹಳೆಯ ನಾಟಕವೊಂದು ಸಿನಿಮಾಕ್ಕೆ ಅಣಿಯಾಗುವ ಯೋಜನೆಯೊಂದು ರೂಪುಗೊಂಡಿದೆ. ಕರಾವಳಿಯ ಹಿರಿಯ ನಾಟಕ ತಂಡ: ಕರಾವಳಿಯಲ್ಲಿ ೧೯೭೪ರಲ್ಲಿ ನಾಟಕಗಳನ್ನು ಕಮರ್ಷಿಯಲ್ ಆಂಗಲ್‌ಗೆ ತಂದುಕೊಟ್ಟ ಹಿರಿಯ ನಾಟಕ ತಂಡ ಎ. ಗಂಗಾಧರ್ ನೇತೃತ್ವದ ಚಿತ್ರಕಲಾ ಆರ್ಟ್ಸ್, ಮಂಗಳೂರು ತನ್ನ ಬೇಡಿಕೆಯ ನಾಟಕವಾದ ‘ಒರಿಯನ್ ತೂಂಡ ಒರಿಗಾಪುಜಿ’ಯನ್ನು ಬೆಳ್ಳಿ ತೆರೆಗೆ ಇಳಿಸುತ್ತಿದ್ದಾರೆ. ೮೦ ಹಾಗೂ ೯೦ರ ದಶಕದಲ್ಲಿ ನೂರಾರು ಪ್ರದರ್ಶನಗಳನ್ನು ಕಾಣುತ್ತಾ ಕರಾವಳಿಯ ರಂಗಭೂಮಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ನಾಟಕದಿಂದಾಗಿ ಕರಾವಳಿಯ ಖ್ಯಾತ ಕಲಾವಿದರಾದ ಮಾಧವ ಶಕ್ತಿ ನಗರ, ರೋಹಿದಾಸ್ ಕದ್ರಿ, ಸರೋಜಿನಿ ಶೆಟ್ಟಿ, ನವೀನ್ ಡಿ ಪಡೀಲ್ ಎನ್ನುವ ಅಪ್ಪಟ ಕಲಾವಿದರನ್ನು ಕರಾವಳಿ ರಂಗಭೂಮಿಗೆ ನೀಡಿತ್ತು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಸೇರಿದಂತೆ ಕನ್ನಡದ ಪ್ರಜ್ಯು ಪೂವಯ್ಯ,ರೇಖಾದಾಸ್, ಭವ್ಯಾ ಕರಾವಳಿಯ ರಂಗಭೂಮಿ ಕಲಾವಿದರಾದ ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಗಂಗಾಧರ್ ಶೆಟ್ಟಿ, ಸಾಯಿ ಕೃಷ್ಣ ಇದ್ದಾರೆ. ಸಂಗೀತದಲ್ಲಿ ವಿ. ಮನೋಹರ್, ಕ್ಯಾಮೆರಾದಲ್ಲಿ ನಾಗೇಶ್ ಆಚಾರ್ಯ ಉಡುಪಿ, ಸಹ ನಿರ್ದೇಶಕರಾಗಿ ರಾಮದಾಸ್ ಸಸಿಹಿತ್ಲು, ರಂಜೀತ್ ಸುವರ್ಣ ಇದ್ದಾರೆ. ನಿರ್ಮಾಪಕರಾಗಿ ಬಿ. ಅಶೋಕ್ ಕುಮಾರ್ ಹಾಗೂ ಎ. ಗಂಗಾಧರ್ ಶೆಟ್ಟಿ ವಹಿಸಿದ್ದಾರೆ. ಕನ್ನಡದ ನಿರ್ದೇಶಕ ಹ.ಸೂ.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಮುಹೂರ್ತ: ಡಿ.೧೧ರಂದು ಮಂಗಳೂರಿನ ಶ್ರೀಮಂಗಳಾದೇವಿಯಲ್ಲಿ ಬೆಳಗ್ಗೆ ೧೦ಕ್ಕೆ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗ್ಡೆ, ಆನಂದ್ ಕೆ, ಬಂಟರ ಯಾನೆ ನಾಡವರ ಮಾತೃ ಸಂಘದ ಅಜಿತ್ ಕುಮಾರ್ ಮಾಲಾಡಿ, ಡಾ. ಶಿವಶರಣ್ ಶೆಟ್ಟಿ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿರುವರು. (vijyakarnataka daily published dis news on: 12.12.2013)

ತುಳು ಚಿತ್ರದಲ್ಲಿ ಸುಂದರನಾಥ್ ಕುಸುರಿ

ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದ ‘ಬಂಗಾರ ಪಟ್ಲೇರ್’ ಚಿತ್ರದ ಸುಂದರ ಕ್ಯಾಮೆರಾ ವರ್ಕ್ ಕುಸುರಿ ಕೆಲಸದಲ್ಲಿ ಸಂದರನಾಥ್ ಸುವರ್ಣ ಅವರ ಕೈಚಳಕವಿತ್ತು ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೋ. ೧೯೯೩ರಲ್ಲಿ ೧೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಂಗಾರ ಪಟ್ಲೇರ್ ಸಿನಿಮಾದ ಪ್ರತಿಯೊಂದು ದೃಶ್ಯಗಳಲ್ಲೂ ಸುವರ್ಣ ಕೈಚಳಕವಿದೆ. ಮುಖ್ಯವಾಗಿ ತುಳು ಸಂಸ್ಕೃತಿಯನ್ನು ಚಿತ್ರದಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದರು ಸುವರ್ಣ. ಮಂಗಳೂರಿನ ಖ್ಯಾತ ಸಾಹಿತಿ ನಾರಾಯಣ ಶೆಟ್ಟಿ ಅವರ ‘ಸತ್ಯ ಬತ್ತಲೆ’ ಎನ್ನುವ ನಾಟಕ ಆಧರಿಸಿ ಕಟ್ಟಿದ ಸಿನಿಮಾದ ಪ್ರಧಾನ ಆಧಾರ ಸ್ತಂಭವೇ ಸುವರ್ಣರು. ಯಾಕೆಂದರೆ ಆ ತಂಡದಲ್ಲಿ ಹೆಸರು ಸಂಪಾದಿಸಿದ ಸಾಧಕ ಅವರೊಬ್ಬರೇ. ಸಂಭಾಷಣೆಯಲ್ಲಿ ದುಡಿದ ರಾಮಣ್ಣ ರೈ, ಹಿನ್ನೆಲೆ ಸಂಗೀತ ನೀಡಿದ ಚರಣ್‌ಕುಮಾರ್, ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ ರಿಚರ್ಡ್ ಕ್ಯಾಸ್ಟಲಿನೋ ಎಲ್ಲರಿಗೂ ಸುವರ್ಣ ಪ್ರೋತ್ಸಾಹದ ಚಿಲುಮೆಯಾಗಿದ್ದರು ಎನ್ನುತ್ತಾರೆ ‘ಬಂಗಾರ್ ಪಟ್ಲೇರ್’ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷಣ. ‘ಬಂಗಾರ್ ಪಟ್ಲೇರ್’ ಚಿತ್ರದ ದೃಶ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ೧೯೯೨-೯೩ರ ಸಾಲಿನಲ್ಲಿ ರಾಜ್ಯ ಸರಕಾರದಿಂದ ವಿಶೇಷ ಪ್ರಾಂತೀಯ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾದ ನಂತರ ಬಂಗಾರ್ ಪಟ್ಲೇರ್ ಚಿತ್ರವನ್ನು ಕೋಲ್ಕೊತ್ತಾದಲ್ಲಿ ಈ ಸಮಯದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಮಾರ್ಕೆಟಿಂಗ್ ವಿಭಾಗದಲ್ಲಿ ಆಯ್ಕೆಯಾದಾಗ ಚಿತ್ರವನ್ನು ಅದರ ದೃಶ್ಯ, ಕತೆ ಹಾಗೂ ಸಂಗೀತವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರಶಸ್ತಿ ನೀಡುವ ಜ್ಯೂರಿ ಸ್ಥಳೀಯ ವಸ್ತು ಗಳನ್ನು ಹೇಗೆ ಬಳಸಿ ಕೊಂಡು ಚಿತ್ರ ಮಾಡ ಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುವ ಮಾತನ್ನು ಆಡಿತ್ತು ಎನ್ನುತ್ತಾರೆ ಕ್ಯಾಸ್ಟಲಿನೋ. ‘ಬಂಗಾರ್ ಪಟ್ಲೇರ್’ ಚಿತ್ರ ಕೋಸ್ಟಲ್‌ವುಡ್‌ನಲ್ಲಿ ಹಿಟ್ ಆದ ಕೂಡಲೇ ರಿಚರ್ಡ್ ಹಾಗೂ ಸುಂದರನಾಥ್ ಸುವರ್ಣ ಮತ್ತೆ ಜತೆಗೂಡಿದರು. ೧೯೯೩ರ ಸೆ.೮ರಂದು ಒಂದೇ ದಿನ ಇಪ್ಪತ್ತಮೂರುವರೆ ಗಂಟೆ ಅವಧಿಯಲ್ಲಿ ಚಿತ್ರೀಕರಣ ಮಾಡುವ ಯೋಜನೆಯ ಹಿಂದೆ ಇದ್ದವರು ಸುಂದರ್‌ನಾಥ್ ಸುವರ್ಣ. ಚಿತ್ರದ ಕತೆಯನ್ನು ರಿಚರ್ಡ್ ಸುವರ್ಣರಿಗೆ ಹೇಳುವಾಗ ಅವರು ಒಂದೇ ದಿನದಲ್ಲಿ ಶೂಟಿಂಗ್ ಮಾಡಿ ಮುಗಿಸೋಣ ಎನ್ನುವ ಒಂದು ಐಡಿಯಾ ಕೊಟ್ಟಿದ್ದರು. ರಿಚರ್ಡ್ ಕೂಡ ಆರಂಭದಲ್ಲಿ ಹಿಂದೆ ಮುಂದೆ ಅಲೋ ಚನೆ ಮಾಡಿದರು. ಆದರೆ ಸುಂದರ್‌ನಾಥ್ ಸುವರ್ಣ ನಾನಿದ್ದೇನೆ ಎಲ್ಲವನ್ನು ಮಾಡಿ ಮುಗಿಸಬಹುದು. ತುಳು ಚಿತ್ರದಲ್ಲಿ ಇದೊಂದು ಹೊಸ ದಾಖಲೆಯಾಗುತ್ತದೆ. ಚಿತ್ರ ಆರಂಭಕ್ಕೆ ಮೊದಲು ಸುವರ್ಣ ಅವರು ಚಿತ್ರದ ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇಡೀ ಚಿತ್ರದ ಫ್ರೇಮ್ ಟು ಫ್ರೇಮ್‌ನಲ್ಲಿ ಸುವರ್ಣ ಅವರ ಕೆಲಸ ಕಾಣುತ್ತದೆ. ಅದಕ್ಕೂ ಮಿಗಿಲಾಗಿ ಹಿರಿಯ ಸಾಹಿತಿ ಶಿವರಾಮ ಕಾರಂತ ಅವರನ್ನು ಸೆಪ್ಟೆಂಬರ್ ೮ರಲ್ಲಿ ಟೇಕ್ ಮೇಲೆ ಟೇಕ್ ತೆಗೆದುಕೊಂಡು ಕಾರಂತರನ್ನು ಇಳಿ ವಯಸ್ಸಿನಲ್ಲಿ ದುಪ್ಪಟ್ಟು ಕೆಲಸ ಮಾಡುವಂತೆ ಮಾಡಿದ್ದರು ಎನ್ನುತ್ತಾರೆ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು. ತುಳು ರಂಗಭೂಮಿಯಲ್ಲಿ ಇರುವ ಮಂದಿಯನ್ನು ಹುಡುಕಿಕೊಂಡು ಅವಕಾಶ ನೀಡುತ್ತಿದ್ದರು. ಅದರಲ್ಲೂ ಆರಂಭ, ನೀ ನಮ್ಮ ದೈವ,ಟೈಗರ್ ಗಂಡು, ಕಿಲಾಡಿ ತಾತ ಚಿತ್ರ ಸೇರಿದಂತೆ ಅವರು ನಿರ್ದೇಶನ ಮಾಡಿದ ಚಿತ್ರಗಳಲ್ಲಿ ತುಳುವರಿಗೆ ಅವಕಾಶ ಕೊಡುತ್ತಾ ಬಂದಿದ್ದರು. ವಿಟ್ಲ ಮನೋಹರ್ ಅವರನ್ನು ತಮ್ಮ ಎಲ್ಲ ಚಿತ್ರದ ಸಂಗೀತದಲ್ಲಿ ಬಳಸಿಕೊಂಡು ಕನ್ನಡದ ನಟ ಕಾಶೀನಾಥ್‌ರಿಗೆ ಪರಿಚಯ ಮಾಡಿಕೊಟ್ಟು ‘ಅನುಭವ’ದಲ್ಲಿ ಕೆಲಸ ಸಿಗುವಂತೆ ನೋಡಿಕೊಂಡರು. ತಮ್ಮ ಇಬ್ಬರು ಸಹೋದರಾದ ನವೀನ್, ಪ್ರದೀಪ್ ಇಬ್ಬರನ್ನು ತಮ್ಮ ಜತೆಯಲ್ಲಿಯೇ ಕ್ಯಾಮೆರಾ ಕೆಲಸ ಕಲಿಸಿ ಕನ್ನಡ ಸಿನಿಮಾದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದಾರೆ ಎನ್ನುತ್ತಾರೆ ಅವರ ಜತೆಯಲ್ಲಿ ಐದಾರು ಚಿತ್ರದಲ್ಲಿ ದುಡಿದ ತಮ್ಮ ಲಕ್ಷ್ಮಣ ಅವರು. .... ‘ನನಗೆ ಆರೋಗ್ಯ ಹದಗೆಟ್ಟಿದೆ ಎನ್ನುವ ವಿಚಾರ ತಿಳಿದ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ನನ್ನನ್ನು ನೋಡಲು ಬಂದಿದ್ದರು. ಕೈಯಲ್ಲಿ ಒಂದೆರಡು ಚಿತ್ರಗಳಿವೆ ಅದನ್ನು ಅದಷ್ಟೂ ಬೇಗ ಮುಗಿಸಿದ ನಂತರ ತುಳುವಿನಲ್ಲೊಂದು ಸಿನಿಮಾ ಮಾಡಬೇಕು ಎನ್ನುವ ಕನಸ್ಸು ಕಂಡಿದ್ದರು. ೧೯೯೩ರ ಬಂಗಾರ್ ಪಟ್ಲೇರ್ ಹಾಗೂ ಸೆಪ್ಟೆಂಬರ್ ೮ ನನ್ನೆರಡು ತುಳು ಚಿತ್ರ ಬಿಟ್ಟರೆ ಉಳಿದ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಇನ್ನೂ ತುಳು ಚಿತ್ರಕ್ಕೆ ನಾನೇ ಬರುತ್ತೇನೆ ಎನ್ನುತ್ತಿದ್ದರು. ರಿಚರ್ಡ್ ಕ್ಯಾಸ್ಟಲಿನೋ, ಚಿತ್ರ ನಿರ್ದೇಶಕ (vijaykarnataka daily published on 11.12.2014)

ಇದು ಹೊಸ ಬ್ಯುಸಿನೆಸ್: ಬಾಡಿಗೆಗೆ ಇದೆ ಎಲೆಕ್ಟ್ರಾನಿಕ್ ಗೂಡ್ಸ್

ಸ್ಟೀವನ್ ರೇಗೊ, ದಾರಂದಕುಕ್ಕು
ರಾಜ್ಯದ ನಗರಗಳು ಸಖತ್ ಆಗಿ ಬೆಳೆಯುತ್ತಿದೆ. ಇಂತಹ ಬೆಳೆಯುವ ನಗರದಲ್ಲಿ ಒಂದು ಸೆಂಟ್ಸ್ ಜಾಗಕ್ಕೂ ಲಕ್ಷದ ಲೆಕ್ಕಚಾರ. ಶ್ರೀಸಾಮಾನ್ಯನಿಗೆ ಕಾಸು ಕೂಡಿಟ್ಟುಕೊಂಡು ಮನೆ ಕಟ್ಟುವ ಅಲೋಚನೆಯಂತೂ ಬಂದು ಬಿಟ್ಟರೆ ದಿನದ ಜಮೀನು ರೇಟು ಷೇರು ಪೇಟೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಲಗ್ಗೆ ಹಾಕುತ್ತಾ ಓಡುತ್ತಿರುತ್ತದೆ. ಇದಕ್ಕಿಂತ ಬಾಡಿಗೆ ಮನೆಯೇ ಲೇಸು ಎನ್ನುವ ಸ್ಥಿತಿಗೆ ಶ್ರೀಸಾಮಾನ್ಯ ತಲುಪಿ ಬಿಡುತ್ತಾನೆ. ಆದರೂ ಇಲ್ಲೊಂದು ಎಡವಟ್ಟು ಬಾಡಿಗೆ ಮನೆ ಎಂದರೆ ಬರೀ ಒಂದು ವರ್ಷದ ಒಪ್ಪಂದ. ಜಾಸ್ತಿ ಸಮಯ ಬಾಡಿಗೆ ಮನೆಯಲ್ಲಿ ಉಳಿಯುವ ಖಯಾಲಿಗೆ ಬಾಡಿಗೆ ಮನೆಯ ಮಾಲೀಕನೇ ಬ್ರೇಕ್ ಹಾಕಿ ಬಿಡುತ್ತಾನೆ. ಒಂದು ವರ್ಷದ ಅವಧಿಯಲ್ಲಿ ಅವನು ಬಾಡಿಗೆ ಮನೆಗೆ ತರುವ ಮಂಚ, ಫ್ರಿಡ್ಜ್, ಟಿವಿ, ಎಸಿ, ಹೀಟರ್, ಗ್ಯಾಸ್ ಕನೆಕ್ಷನ್ ಹೀಗೆ ಹತ್ತಾರು ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಮುಟ್ಟಿಸಲು ಸಾವಿರಾರು ಖರ್ಚು ಮಾಡುತ್ತಾನೆ. ಇದರ ಜತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳು ತುಂಬಾ ಜೋಪಾನ ಅಂತೂ ಇಂತೂ ಬಾಡಿಗೆ ಮನೆ ಮುಟ್ಟಿದಾಗ ಕೆಟ್ಟು ಹೋದರೆ ಮತ್ತೆ ಖರ್ಚು. ಹೀಗೆ ಹತ್ತಾರು ಇಂತಹ ಜಂಜಾಟದಲ್ಲಿ ಬಾಡಿಗೆ ಮನೆಯಲ್ಲಿ ಬದುಕು ಕಟ್ಟುವ ಲಕ್ಷಾಂತರ ಮಂದಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನಪ್ಪಾ ಅಂದರೆ ಬಾಡಿಗೆಗೆ ಸಿಗುತ್ತೆ ಎಲೆಕ್ಟ್ರಾನಿಕ್ ಗೂಡ್ಸ್. ಇದು ರಾಜ್ಯದ ಮಟ್ಟಿಗೆ ಹೊಸ ಬ್ಯುಸಿನೆಸ್. ಆದರೆ ದೇಶದ ಕೆಲವೊಂದು ನಗರದಲ್ಲಿ ಇದು ಚಾಲ್ತಿಗೆ ಬಂದು ವರ್ಷಗಳೇ ಸಂದಿದೆ. ಮೆಟ್ರೋ ನಗರದಲ್ಲಿ ಬದುಕು ಕಟ್ಟುವ ಮಂದಿಗಂತೂ ಈ ವ್ಯಾಪಾರದ ಗುಟ್ಟು ಗೊತ್ತೇ ಇದೆ. ಇದರಲ್ಲಿಯೇ ಬದುಕು ಕಟ್ಟುತ್ತಾ ಸಮಾಜದ ಚೌಕಟ್ಟಿನಲ್ಲಿ ತಾವು ಕೂಡ ಶ್ರೀಮಂತರು ಎನ್ನುವ ಮುದ್ರೆ ಬೀಳುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಹೊಸದಾಗಿ ನೀವು ಮದುವೆಯಾಗುತ್ತೀರಿ ಅಥವಾ ನಿಮ್ಮ ಉದ್ಯೋಗದಿಂದ ಬರುವ ವರಮಾನ ಕೂಡ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುವುದು ತೀರಾ ಕಷ್ಟ. ಆದರೂ ಇಂತಹ ಸಾಮಗ್ರಿಗಳು ಮನೆಗೆ ತೀರಾನೇ ಅವಶ್ಯಕ ಎನ್ನಿಸಿಬಿಡುತ್ತದೆ. ಇಂತಹ ಸಮಯದಲ್ಲಿ ಮುಂದೆ ಬರುವವರೇ ಈ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕರು. ಎಲೆಕ್ಟ್ರಾನಿಕ್ ಗೂಡ್ಸ್ ವ್ಯಾಪಾರ ಹೇಗೆ: ನಗರ ಪ್ರದೇಶಕ್ಕೆ ನೆಲೆ ನಿಲ್ಲಲು ಬರುವ ಸತಿಪತಿಗಳಿಗೆ ಮುಖ್ಯವಾಗಿ ಬೇಕಾಗಿರುವುದು ಮಲಗಲು ಮಂಚ, ಆಹಾರ ಪದಾರ್ಥಗಳನ್ನು ಜೋಪಾನವಾಗಿಡಲು ಫ್ರಿಡ್ಜ್(ಶೀತಲಯಂತ್ರ), ಬೋರ್ ಅನ್ನಿಸಿದಾಗ ನೋಡಲು ಟಿವಿ, ಅಡುಗೆ ಮಾಡಲು ಬೇಕಾದ ಸ್ಟೌವ್, ಸ್ನಾನ ಮಾಡಲು ಬೇಕಾದ ಹೀಟರ್ ವ್ಯವಸ್ಥೆ ಹೀಗೆ ಹತ್ತಾರು ವಸ್ತಗಳು ದೈನಂದಿನ ಬದುಕಿನಲ್ಲಿ ತೀರಾ ಅಗತ್ಯ ಅನ್ನಿಸಿ ಬಿಡುತ್ತದೆ. ಈ ಸಮಯದಲ್ಲಿ ಇಂತಹ ವಸ್ತುಗಳನ್ನು ಬಾಡಿಗೆಗೆ ಕೊಡುವ ಮಂದಿ ಸಿಗುತ್ತಾರೆ. ವರ್ಷದ ಆಧಾರದಲ್ಲಿ ಇಂತಹ ವಸ್ತುಗಳಿಗೆ ತಿಂಗಳ ಲೆಕ್ಕಚಾರದಲ್ಲಿ (ಉದಾ: ಮಂಚಕ್ಕೆ 100ರಿಂದ 200 ರೂಪಾಯಿ) ಒಪ್ಪಂದ ಪತ್ರವನ್ನು ಸಿದ್ಧ ಪಡಿಸಲಾಗುತ್ತದೆ. ಬಾಡಿಗೆ ಮನೆಯ ಕರಾರು ಒಂದೇ ವರ್ಷದ ಅವಧಿಯಲ್ಲಿರುವುದರಿಂದ ಎಲೆಕ್ಟ್ರಾನಿಕ್ ಗೂಡ್ಸ್ ಗಳಲ್ಲಿ ವರ್ಷದ ಲೆಕ್ಕಚಾರಕ್ಕೆ ಇಳಿಯಲಾಗುತ್ತದೆ. ಈ ಸಮಯದಲ್ಲಿ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾನಿಯಾದರೇ ಯಾರು ಬಾಡಿಗೆಗೆ ಪಡೆದುಕೊಂಡಿರುತ್ತಾನೋ ಅವನೇ ನಷ್ಟ ಭರಿಸಬೇಕಾಗುತ್ತದೆ. ಜತೆಗೆ ಬಾಡಿಗೆದಾರ ಯಾವ ಮನೆಯಲ್ಲಿ ವಾಸವಾಗಿರುತ್ತಾನೋ ಅಲ್ಲಿಗೆ ಈ ಸಾಮಗ್ರಿಗಳನ್ನು ತಂದು ಕೊಡುವ ಜವಾಬ್ದಾರಿ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನಾಗಿರುತ್ತದೆ. ಸಾಮಗ್ರಿಗಳು ಎಲ್ಲಿಂದ ಅಂತೀರಾ: ಅಷ್ಟಕ್ಕೂ ಈ ಸಾಮಗ್ರಿಗಳು ಎಲ್ಲಿಂದ ಬರುತ್ತದೆ ಎನ್ನುವ ಕುತೂಹಲ ಮೊಳಕೆಯೊಡೆಯುವುದು ಸರ್ವೆ ಸಾಮಾನ್ಯ. ಆದರೆ ಕೆಲವು ಮೂಲಗಳ ಪ್ರಕಾರ ನಗರದಲ್ಲಿ ದುಡಿಯುವ ಐಟಿ, ಬಿಟಿ ಸೆಂಟರ್ ಉದ್ಯೋಗಿಗಳು ತಾವು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವಲಸೆ ಹೋದಾಗ ಈ ಸಾಮಗ್ರಿಗಳನ್ನು ಮತ್ತೊಂದು ಊರಿಗೆ ಸಾಗಾಟ ಮಾಡಲು ಕಷ್ಟ. ಈ ಸಮಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮತ್ತೊಂದು ಊರಿಗೆ ಗಂಟುಮೂಟೆ ಕಟ್ಟುತ್ತಾರೆ. ಇದೇ ಸಮಯದಲ್ಲಿ ಮನೆ ಹುಡುಕುವ ಬ್ರೋಕರ್ ಗಳು ಇದನ್ನು ಖರೀದಿ ಮಾಡಿಕೊಂಡು ಇಂತಹ ಸಾಮಗ್ರಿಗಳ ಬಾಡಿಗೆ ದಂಧೆಗೆ ಇಳಿಯುತ್ತಾರೆ. ಇದೇ ರೀತಿಯಲ್ಲಿ ಕೆಲವೊಂದು ಬ್ರೋಕರ್ ಗಳು ತಾವೇ ಸಾಮಗ್ರಿಗಳನ್ನು ಖರೀದಿಸಿಕೊಂಡು ಬಾಡಿಗೆಗೆ ನೀಡುತ್ತಾರೆ. ಒಂದೆರಡು ವರ್ಷ ಮುಗಿಯುತ್ತಾ ಹೋದಂತೆ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾಕಿದ ಬಂಡವಾಳ ವಾಪಾಸು ಬಂದು ಮುಟ್ಟುತ್ತದೆ. ಮತ್ತೆ ಉಳಿದ ಹಣ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನ ಕೀಸೆ ಸೇರಿಕೊಳ್ಳುತ್ತದೆ. ಇದು ಹೊಸ ಬ್ಯುಸಿನೆಸ್ ನ ಮುನ್ನುಡಿ ಅಧ್ಯಾಯ. ... ಕೋಟ್ ಕಾರ್ನರ್ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಸಿಸ್ಟಂ ಇತ್ತೀಚೆಗೆ ಎಲ್ಲ ಊರುಗಳಲ್ಲಿಯೂ ಆರಂಭವಾಗಿದೆ. ಹೊಸದಾಗಿ ಬದುಕು ಕಟ್ಟುವವರಿಗೆ ದೊಡ್ಡ ಮಾದರಿಯಲ್ಲಿ ಬದುಕು ಕಟ್ಟಲು ಸಾಧ್ಯವಿಲ್ಲ. ಅವರ ವರಮಾನ ಜತೆಗೆ ಆರ್ಥಿಕ ಲೆಕ್ಕಚಾರಗಳು ಕೂಡ ಉಲ್ಟಾ- ಪಲ್ಟಾ ಹೊಡೆಯುವ ಸಾಧ್ಯತೆಗಳು ಜಾಸ್ತಿಯಾಗಿರುತ್ತದೆ. ಇಂತಹ ಸಮಯದಲ್ಲಿ ಬಾಡಿಗೆಗೆ ಸಿಗುವ ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ತೃಪ್ತಿ ಹೊಂದಬಹುದು. ಪ್ರಸಾದ್, ಮಂಗಳೂರು ಕಳೆದ ಐದಾರು ವರ್ಷಗಳಿಂದ ಿಂತಹ ಬಾಡಿಗೆ ಕೊಡುವ ದಂಧೆಯಲ್ಲಿ ಇರುವವರು. (vijaykarnataka namma karvali article on 11.12.2014)

Saturday, December 7, 2013

ಪುತ್ತೂರಿನಲ್ಲಿ ರಂಗೇರಿಸಲು ಸಿದ್ಧವಾದ ಹ್ಹಾ..ಶೋ

ಸ್ಟೀವನ್ ರೇಗೊ, ದಾರಂದಕುಕ್ಕು
ಕಿವಿಗೆ ಅಪ್ಪಳಿಸಿ ಪ್ರೇಕ್ಷಕರನ್ನು ಕುಣಿಯಲು ಅಣಿ ಮಾಡುವಂತಹ ಸಂಗೀತ. ಬಹಳ ಹೊತ್ತಿನಿಂದ ಸಂಗೀತ ಕೇಳಿ ಬೋರ್ ಆಗುತ್ತಾ ತಕ್ಷಣ ಹಾಸ್ಯದ ಟಾನಿಕ್. ಇದು ಕೂಡ ಸಾಕು ಅನ್ನಿಸುತ್ತಾ ಸ್ಯಾಂಡಲ್ ವುಡ್ ಚಿತ್ರ ತಾರೆಗಳ ಮಸ್ತಿ, ಮಾತು, ಡೈಲಾಗ್ಸ್ ಡೆಲಿವರಿ ಎಲ್ಲಕ್ಕೂ ಮಿಗಿಲಾಗಿ ದೇಶದ ನಾನಾ ಸ್ಟೇಜ್ ಶೋಗಳಲ್ಲಿ ಮಿಂಚಿದ ಖ್ಯಾತ ಹಿನ್ನೆಲೆ ಗಾಯಕ- ಗಾಯಕಿಯರ ಸಂಗೀತದ ಜೋಶ್, ಬಾಲಿವುಡ್ ರೇಂಜ್ ನ ಹಾಸ್ಯ ಕಲಾವಿದರು, ಸ್ಟಂಟ್ ಸೀನ್ ಗಳು ಎಲ್ಲರೂ ಬಂದು ಬೀಳುವುದು ಈ ಬಾರಿ ಪುತ್ತೂರಿನ ಕೆಮ್ಮಿಂಜೆಯ ದೇವಳದ ಗದ್ದೆಗೆ ಎನ್ನೋದು ಮರೆಯಬೇಡಿ. ಹೌದು. ಇದು “ಹ್ಹಾ.. ಶೋ’ ಯಾವಾಗಲೂ ತಮ್ಮ ಕಾರ್ಯಕ್ರಮಗಳ ಮೂಲಕ ತಾವು ಭಿನ್ನ ಎನ್ನುವ ಟ್ಯಾಗ್ ಲೈನ್ ಹೊತ್ತಿಕೊಂಡಿರುವ ರಾಜ್ಯದ ಖ್ಯಾತ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಹಾಗೂ ತನ್ನದೇ ಕೂಲ್ ಹಾಗೂ ಹಾಟ್ ಐಡಿಯಾಗಳ ‘ಟೈಮ್ ಆಂಡ್ ಟೈಡ್’ ಪ್ರಾಯೋಜಕತ್ವದಲ್ಲಿ ಡಿ.೮ರಂದು ಸಂಜೆ 6.30ಕ್ಕೆ ಪುತ್ತೂರಿನ ಕೆಮ್ಮಿಂಜೆಯ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ದೇವಳದ ವಾರ್ಷಿಕ ಜಾತ್ರೆ ಹಾಗೂ ಷಷ್ಠಿಯ ಪ್ರಯುಕ್ತ ‘ಹ್ಹಾ.. ಶೋ’ವಿನೂತನ ಮಾದರಿಯ ಮೆಗಾ ಶೋ ನಡೆಯಲಿದೆ. ಕರಾವಳಿಯ ಪ್ರಸಿದ್ಧ ದೇವಳಗಳ ಸಾಲಿನಲ್ಲಿ ನಿಲುಕಾಡುವ ಕೆಮ್ಮಿಂಜೆ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಳದ ಷಷ್ಠಿಯಲ್ಲಿ ಪ್ರತಿ ವರ್ಷನೂ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ. ಅದರಲ್ಲೂ ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಊರುಗಳಿಂದ ಭಕ್ತರು ದೇವರ ದರ್ಶನ ಪಡೆಯಲು ತುದಿ ಕಾಲಲ್ಲಿ ನಿಂತು ಬಿಡುತ್ತಾರೆ. ಇದೇ ಸಮಯದಲ್ಲಿ ಟೈಮ್ ಆ್ಯಂಡ್ ಟೈಡ್ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಮೆಗಾ ಮ್ಯೂಸಿಕಲ್ ಶೋವೊಂದಕ್ಕೆ ಅಡಿಪಾಯ ಹಾಕಿದೆ. ‘ಹ್ಹಾ.. ಶೋ’ವಿನೂತನ ಪ್ರಯತ್ನ: ಬಾಲಿವುಡ್ ಸಂಗೀತ ಅಂಗಳದಲ್ಲಿ ಸದಾ ಕಾಲ ಬ್ಯುಸಿಯಾಗಿರುವ ಹಿನ್ನೆಲೆ ಗಾಯಕಿ ಹೈದರಾಬಾದ್ ಮೂಲದ ಭಾರ್ಗವಿ ಪಿಳ್ಳೈ ‘ಹ್ಹಾ.. ಶೋ’ನ ಮುಖ್ಯ ಆಕರ್ಷಣೆಯಲ್ಲೊಬ್ಬರು. ಸಂಗೀತ ದಿಗ್ಗಜರಲ್ಲಿ ಒಬ್ಬರಾದ ಎ. ಆರ್. ರೆಹಮಾನ್ ಅವರ ಗರಡಿಯಲ್ಲಿರುವ ಭಾರ್ಗವಿ ದೇಶದ ನಾನಾ ಭಾಷೆಗಳಲ್ಲಿ ಬಂದಿರುವ ಸಿನಿಮಾ ಹಾಡುಗಳಿಗೆ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ದೇಶದ ಖ್ಯಾತ ಸಂಗೀತ ಸ್ಟೇಜ್ ಶೋ ಗಳಲ್ಲಿ ಲೀಡ್ ಸಿಂಗರ್ ಆಗಿರುವ ಭಾರ್ಗವಿ ಇದೇ ಮೊದಲ ಬಾರಿಗೆ ಪುತ್ತೂರಿನ ಕೆಮ್ಮಿಂಜೆಯ ದೇವರ ಗದ್ದೆಯಲ್ಲಿ ನಡೆಯುವ ಸಂಗೀತ ಮಹೋತ್ಸವದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ ಜತೆಗೆ ಡ್ಯಾನ್ಸಿಂಗ್ ನಲ್ಲೂ ಕಿಕ್ ಕೊಡುವ ಭಾರ್ಗವಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ.
ಇದರ ಜತೆಯಲ್ಲಿ ಮುಂಬಯಿ ಮೂಲದ ಕಾಮೆಡಿ ಕಾ ಬಾದ್ ಷಾ ಎಂದೇ ಕರೆಸಿಕೊಳ್ಳುವ ವಿನೋದ್ ಕುಮಾರ್ ಮತ್ತೊಂದು ಆಕರ್ಷಣೆಯ ಕೇಂದ್ರ ಬಿಂದು. ಹಾಸ್ಯ ಕಲಾವಿದನಾಗಿ ಮಿಂಚಿರುವ ಜತೆಗೆ 1,500ಕ್ಕೂ ಅಧಿಕ ಸ್ಟೇಜ್ ಶೋಗಳನ್ನು ನೀಡಿರುವ ಖ್ಯಾತಿ ಇದೆ. ಹಿಂದಿಯ ಖ್ಯಾತ ಖಾಸಗಿ ವಾಹಿನಿಗಳಾದ ಸ್ಟಾರ್, ಸಹಾರಾ, ಕಲರ್ಸ್, ಸಬ್, ಎನ್ ಡಿ ಟಿವಿ ಇಮ್ಯಾಜೀನ್, ಝೂಮ್, ಝೀ ಇತ್ಯಾದಿಗಳಲ್ಲಿ ನಡೆಯುವ ಹಾಸ್ಯ ಕಾರ್ಯಕ್ರಮಗಳಲ್ಲಿ ಮಿಂಚಿರುವ ಪ್ರತಿಭೆ. ಬಾಲಿವುಡ್ ಜತೆಗೆ ತಮಿಳು, ಕನ್ನಡ, ತೆಲುಗು, ಇಂಗ್ಲೀಷ್ ನೊಂದಿಗೆ ಸಖತ್ ಹೋಲ್ಡ್ ಇಟ್ಟುಕೊಂಡಿರುವ ಬೆಂಗಳೂರಿನ ಅವಿನಾಶ್ ಚಬ್ಬಿ, ದೇಶ- ವಿದೇಶದ ಖ್ಯಾತ ಕ್ಲಾಸಿಕಲ್ ಮ್ಯೂಸಿಕ್ ಕಲಾವಿದ ಗಣೇಶ್ ಪಾಟೀಲ್ ಅವರ ಸಂಗೀತ ಪ್ರೇಕ್ಷಕರನ್ನು ನಿಂತಲ್ಲೇ ಕುಣಿಸಿ ಬಿಡುತ್ತದೆ. ಇವುಗಳ ಜತೆಗೆ ಸ್ಯಾಂಡಲ್ ವುಡ್ ನಗರಿಯ ಸಿನಿ ತಾರೆಯರ ಮೋಡಿ ಮಾತುಗಳು, ಡೈಲಾಗ್ ಡೆಲಿವರಿಗಳು, ಕ್ಯಾಲಿಕಟ್ ಮೂಲದ ಪ್ರತಿಜಾನ್ ಎನ್ ಆರ್ ಅವರ ವಿಶೇಷ ಸೌಂಡ್ ಮ್ಯಾಜಿಕ್ ಸ್ಪೆಶಲ್ ಟ್ರೀಟ್ ಕೂಡ ಕಾಣ ಸಿಗಲಿದೆ. ಬೆಂಕಿ ಜತೆಗೆ ಸರಸಾಟದಲ್ಲಿಯೇ ದಾಖಲೆ ಬರೆದ ವಿಶ್ವ ದಾಖಲೆಯ ಚೆನ್ನೈ ಮೂಲದ ತಿರಿಲ್ ವೀರಾ ಅವರ ಕುತೂಹಲದ ತುದಿ ಘಟ್ಟದಲ್ಲಿ ನಿಲ್ಲಿಸಿ ಬಿಡುವ ಬೆಂಕಿ ಜತೆಗಿನ ಸಾಹಸ ಕಲೆಗಳು, ಜಿಲ್ಲೆಯ ಹಾಗೂ ರಾಜ್ಯದ ಹೆಸರಾಂತ ಸಂಗೀತ ಕಲಾವಿದರು ‘ಹ್ಹಾ.. ಶೋ’ ನಲ್ಲಿ ಮೋಡಿ ಮಾಡುತ್ತಾರೆ. ಇದರ ಜತೆಯಲ್ಲಿ ಬೆಂಗಳೂರು ಮೂಲದ ವಿಶಿಷ್ಟ ಲೈಟಿಂಗ್ಸ್ ಸಿಸ್ಟಂ, ವೇದಿಕೆ ಸಜ್ಜು ಹಾಗೂ ಮಂಗಳೂರಿನ ಖ್ಯಾತ ಡ್ಯಾನ್ಸ್ ತಂಡ ಬಾಯ್ ಝೋನ್ ಹಾಗೂ ಓಶಿಯನ್ ಕಿಡ್ಸ್ ತಂಡಗಳ ವಿಶಿಷ್ಟವಾದ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿದೆ. ಮಂಗಳೂರು ಸ್ಪಂದನ ಪ್ರಾಡಕ್ಷನ್ ಹೌಸ್ ನಿಂದ ವಿಶಿಷ್ಟ ಮಾದರಿಯ ಬೆಳಕಿನಾಟಗಳು ಕೂಡ ಕಾಣ ಸಿಗಲಿದೆ. ರಾಜ್ಯದ ನಂಬರ್ ವನ್ ಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಟೈಮ್ಸ್ ಸಂಸ್ಥೆಯ ಹೆಮ್ಮೆಯ ರೇಡಿಯೋ ವಾಹಿನಿ ರೇಡಿಯೋ ಮಿರ್ಚಿ ಕಾರ್ಯಕ್ರಮದ ಮಾಧ್ಯಮ ಪ್ರಾಯೋಜಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರ ಜತೆಯಲ್ಲಿ ರಾಜ್ಯದ ಪ್ರಮುಖ ಸ್ಯಾಟಲೈಟ್ ಟಿವಿ ವಾಹಿನಿಗಳಲ್ಲಿ ಈ ಕಾರ್ಯಕ್ರಮದ ಪ್ರಸಾರ ಕೂಡ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಬರಲು ಇಚ್ಚಿಸುವವರು ಸಹಾಯವಾಣಿಯ ನೆರವುವನ್ನು ಪಡೆಯಬಹುದು ಎಂದು ಟೈಮ್ ಆ್ಯಂಡ್ ಟೈಡ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಪುತ್ತೂರಿನಲ್ಲೇ ಇದು ವಿಶಿಷ್ಟ ಆಟ: ‘ಹ್ಹಾ.. ಶೋ’ಮೆಗಾ ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ಬರೋಬರಿ 50 ಸಾವಿರಕ್ಕೂ ಅಧಿಕ ಮಂದಿ ಜಮಾಯಿಸುವ ಅಂದಾಜು ಇಟ್ಟುಕೊಳ್ಳಲಾಗಿದೆ. ಮುಕ್ತ ಪ್ರವೇಶದ ಜತೆಯಲ್ಲಿ ಕುಳಿತುಕೊಳ್ಳಲು ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಐಪಿ ಪಾಸ್ ಗಳನ್ನು ಹೊಂದಿರುವವರಿಗೆ ವಿಶೇಷ ಆಸನದ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ದೊಡ್ಡ ಕಾರ್ಯಕ್ರಮ ಇರುವ ಕಾರಣ ವಿಶೇಷ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಟೈಮ್ ಆ್ಯಂಡ್ ಟೈಡ್ ಮಾಲೀಕ ಸುರೇಶ್ ರಾವ್ ಕೊಕ್ಕಡ ತಿಳಿಸಿದ್ದಾರೆ.

Wednesday, December 4, 2013

ಪದವಿ ಶಿಕ್ಷಣದಲ್ಲಿ ಕೊಂಕಣಿಗೆ ರಾಜಮರ್ಯಾದೆ

* ಸ್ಟೀವನ್ ರೇಗೊ, ದಾರಂದಕುಕ್ಕು
ಕೊಂಕಣಿ ಭಾಷೆ ಈಗ ಮತ್ತೊಂದು ಸಲ ಸದ್ದು ಮಾಡಿದೆ. ಬರೀ ಸಾಹಿತ್ಯ, ಆಡು ಭಾಷೆಯಲ್ಲಿಯೇ ಗಟ್ಟಿಯಾಗಿ ಬೆಳೆಯುತ್ತಿರುವ ಕೊಂಕಣಿ ಈಗ ಪದವಿ ಶಿಕ್ಷಣ ರಂಗದಲ್ಲಿ ಭರ್ಜರಿ ಎಂಟ್ರಿ ಪಡೆದುಕೊಂಡಿದೆ. ರಾಜ್ಯ ಸರಕಾರ ಈ ಹಿಂದೆ ಅಂದರೆ ೨೦೦೭ರಿಂದ ರಾಜ್ಯದ ಶಾಲೆಗಳಲ್ಲಿ ೬ನೇ ತರಗತಿಯಿಂದ ತೃತೀಯ ಐಚ್ಛಿಕ ಭಾಷೆಯಾಗಿ ಕೊಂಕಣಿಯನ್ನು ಕಲಿಯಲು ಅವಕಾಶ ಮಾಡಿ ಕೊಟ್ಟಿತ್ತು. ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ ಸಾವಿರಾರು ಮಕ್ಕಳು ಕೊಂಕಣಿಯನ್ನು ಕಲಿತರು. ಕಳೆದ ಮೂರು ವರ್ಷಗಳಿಂದ ೧೦ನೇ ತರಗತಿಯ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಕೊಂಕಣಿಗೆ ಆದ್ಯತೆ ನೀಡಿದ್ದಾರೆ. ಈಗ ಮತ್ತೊಂದು ಹೆಜ್ಜೆಯಾಗಿ ಮಂಗಳೂರು ವಿವಿಯ ಅಡಿಯಲ್ಲಿ ಕಾರ‍್ಯ ನಿರ್ವಹಣೆ ಮಾಡುತ್ತಿರುವ ಮಂಗಳೂರಿನ ರೊಜಾರಿಯೊ, ನಂತೂರಿನ ಪಾದುವಾ ಮತ್ತು ಐಕಳದ ಪೊಂಪೈ ಕಾಲೇಜಿನ ಮುಖ್ಯಸ್ಥರು ತಮ್ಮ ಕಾಲೇಜುಗಳಲ್ಲಿರುವ ಪದವಿ ಶಿಕ್ಷಣದಲ್ಲಿ ಕೊಂಕಣಿಯನ್ನು ಸೇರಿಸಿಕೊಳ್ಳುತ್ತಿದ್ದಾರೆ. ಪದವಿ ಹಂತದಲ್ಲಿ ದ್ವಿತೀಯ ಭಾಷೆಯಾಗಿ ಕೊಂಕಣಿ ಕಲಿಕೆಗೆ ಈಗಾಗಲೇ ಅವಕಾಶವಿದ್ದು, ಮಂಗಳೂರಿನ ಸಂತ. ಅಲೋಶಿಯಸ್ ಕಾಲೇಜಿನಲ್ಲಿ ಕಳೆದ ೨೦ ವರ್ಷಗಳಿಂದ ಕೊಂಕಣಿಯನ್ನು ಕಲಿಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಆದೇಶದ ಪ್ರಕಾರ ಅಲೋಶಿಯಸ್ ಕಾಲೇಜಿನಲ್ಲಿ ಈಗ ಇರುವ ಕೊಂಕಣಿ ಪಠ್ಯಗಳ ಆಧಾರದಲ್ಲಿಯೇ ಈ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ನಾಲ್ಕು ಸೆಮಿಸ್ಟರ್‌ಗಳಾಗಿ ಬಿ.ಎ., ಬಿ.ಕಾಂ, ಬಿ.ಎಸ್ಸಿ. ಇತ್ಯಾದಿ ವಿಭಾಗಗಳಲ್ಲಿ ಕೊಂಕಣಿಯನ್ನು ಕಲಿಯಲು ಸಿಗಲಿದೆ. ಕೊಂಕಣಿ ಭಾಷೆಗೊಂದು ಹೊಸ ಮುನ್ನುಡಿ: ಮಂಗಳೂರು ವಿವಿಯ ಅಧೀನದಲ್ಲಿರುವ ಕಾಲೇಜುಗಳಲ್ಲಿ ಕೊಂಕಣಿಯನ್ನು ದ್ವಿತೀಯ ಭಾಷೆಯಾಗಿ ಕಲಿಸಲು ಮೂರು ಕಾಲೇಜುಗಳು ಮುಂದೆ ಬಂದಿದೆ. ಇನ್ನೂ ಒಂದೆರಡು ಕಾಲೇಜುಗಳು ಮುಂದೆ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ೨೦೧೪-೧೫ರ ನೂತನ ಶೈಕ್ಷಣಿಕ ವರ್ಷದಲ್ಲಿ ಈ ಕೊಂಕಣಿ ಭಾಷೆಯನ್ನು ಕಲಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಕೊಂಕಣಿ ಪ್ರಚಾರ್ ಸಂಚಾಲನದ ಪ್ರಮುಖರಲ್ಲಿ ಒಬ್ಬರಾದ ವಿಕ್ಟರ್ ಕಾರ್ಕಳ ಅವರು. ಕೊಂಕಣಿ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಇಂತಹ ಪ್ರಯತ್ನಗಳು ಅಗತ್ಯವಾಗಿ ನಡೆಯಬೇಕು. ಕರಾವಳಿಯ ಇತರ ಭಾಷೆಗಳಿಗೂ ಇದು ವಿಸ್ತಾರಗೊಂಡು ಮುಂದುವರಿದರೆ ಉತ್ತಮ ಎನ್ನುತ್ತಾರೆ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೋನ್ ಕ್ಲೇರಾನ್ಸ್ ಮಿರಾಂದಾ ಅವರು. ಈಗಾಗಲೇ ಮಂಗಳೂರು ವಿವಿಗೆ ಈ ವಿಚಾರದಲ್ಲಿ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಈ ಬಳಿಕ ವಿವಿಯ ತಂಡವೊಂದು ಕಾಲೇಜಿಗೆ ಬಂದು ತನಿಖೆ ನಡೆಸಿದ ನಂತರ ಅನುಮತಿ ನೀಡುತ್ತದೆ. ಬರುವ ವರ್ಷದಿಂದ ಕೊಂಕಣಿಯನ್ನು ಕಲಿಸಲು ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಅವರು. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣದಲ್ಲಂತೂ ಕೊಂಕಣಿಯನ್ನು ಕಲಿಸಲು ಯಾವುದೇ ಅಡ್ಡಿ ಆತಂಕಗಳು ಬರುತ್ತಿಲ್ಲ. ಆದರೆ ಈಗ ಸರಕಾರಿ ಆದೇಶವಿಲ್ಲದ ಕಾರಣ ಪಿಯುಸಿಯಲ್ಲಿ ಕೊಂಕಣಿ ಕಲಿಕೆಗೆ ಅವಕಾಶವಿಲ್ಲ. ಸರಕಾರವು ಕೂಡಲೇ ಆದೇಶ ಹೊರಡಿಸಿ ಕೊಂಕಣಿ ಕಲಿಕೆಯನ್ನು ಸಂಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು ಎನ್ನುತ್ತಾರೆ ಪ್ರಚಾರ ಸಂಚಾಲನದ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಅವರು. ಕೊಂಕಣಿ ಕಲಿಸುವವರು ಯಾರು: ಕೊಂಕಣಿ ಭಾಷೆಯನ್ನು ಪದವಿಯಲ್ಲಿ ಕಲಿಸಲು ಯಾವುದೇ ದೊಡ್ಡ ಆತಂಕಗಳು ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಕೊಂಕಣಿ ಭಾಷೆಯಲ್ಲಿ ಕರ್ನಾಟಕದ ಯಾವುದೇ ವಿವಿಗಳು ಪದವಿ ಆರಂಭಿಸಿಲ್ಲ. ಪದವಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿದವರಿಗೆ ಮಣೆ ಇರುವ ಕಾರಣ ಕೊಂಕಣಿ ಭಾಷೆಯನ್ನು ಕಲಿಸಲು ತೊಡಕು ಉಂಟಾಗುವ ಸಾಧ್ಯತೆಗಳು ಇವೆ ಎನ್ನುವುದು ಮಾತು. ಆದರೆ ಕೊಂಕಣಿ ಪ್ರಚಾರ ಸಂಚಾಲನ ಮುಖ್ಯಸ್ಥರು ಹೇಳುವ ಮಾತು ಹೀಗೆ: ಕೊಂಕಣಿ ಮಾತೃ ಭಾಷೆಯನ್ನು ಹೊಂದಿರುವವರು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ ಸಾಕು. ಅವರು ಕೊಂಕಣಿ ಭಾಷೆ ಕಲಿಸಲು ಯೋಗ್ಯರಾಗುತ್ತಾರೆ. ಇದೇ ರೀತಿ ಕೊಂಕಣಿ ಭಾಷೆ ಮುಂದೆ ಸಾಗಿ ಸ್ನಾತಕೋತ್ತರ ಹಂತಕ್ಕೆ ಮುಟ್ಟುತ್ತದೆ ಎನ್ನುವುದು ಅವರ ಅಭಿಮತ. ( vijyakaranataka daily published dis article on 4.12.2013)

ಕುಡ್ಲದ ಫ್ಯಾಶನ್ ಪರೇಡ್‌ನಲ್ಲಿ ಪುಟಾಣಿಗಳ ಮಿಂಚು

ಸ್ಟೀವನ್ ರೇಗೊ, ದಾರಂದಕುಕ್ಕು
ಮಿರಿಮಿರಿ ಮಿನುಗುವ ಬೆಳಕು ಜತೆಗಿಷ್ಟು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ರ‍್ಯಾಂಪ್ ಮೇಲೆ ನಡೆದಾಡುವ ಎಳೆಯ ವಯಸ್ಸಿನ ಮೊಡಲ್‌ಗಳು. ಇದು ಕುಡ್ಲದ ಫ್ಯಾಶನ್ ಪರೇಡ್‌ಗೆ ಹೊಸ ಮುನ್ನುಡಿ. ಹೌದು. ಕುಡ್ಲದಲ್ಲಿ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಅದರಲ್ಲೂ ಫ್ಯಾಶನ್ ಎಂದಾಕ್ಷಣವೇ ಕಣ್ಣು ಕೆಂಪಾಗೆ ಮಾಡಿಕೊಂಡು ನೋಡುವ ದುನಿಯಾದಲ್ಲಿ ಎಳೆಯ ಮೊಡಲ್‌ಗಳು ಹೊಸ ರಂಗು ಮೂಡಿಸಿದರು. ಅಂದಹಾಗೆ ಫ್ಯಾಶನ್ ಎನ್ನುವ ರಂಗೀನ್ ದುನಿಯಾದಲ್ಲಿ ಬ್ಯಾರಿಕೇಡ್‌ಗಳೇ ಇಲ್ಲ. ಅದರಲ್ಲೂ ಕೇವಲ ಯುವಕ -ಯುವತಿಯರಿಗೆ ಮಾತ್ರ ಈ ಫೀಲ್ಡ್ ಸಖತ್ ಕಿಕ್ ಕೊಡುತ್ತದೆ ಎನ್ನುವ ಮಾತು ಓಡಾಡುತ್ತಿತ್ತು. ಆದರೆ ಕುಡ್ಲದ ಫ್ಯಾಶನ್ ವರ್ಲ್ಡ್‌ನ ದಾಖಲೆಯಲ್ಲಿ ಮತ್ತೊಂದು ಗರಿ ಮೂಡಿಬಂತು. ಬರೀ ಯುವಕ- ಯುವತಿಯರ ಕಣ್ಮನ ಸೆಳೆಯುವ ಕ್ಯಾಟ್‌ವಾಕ್‌ಗಳನ್ನು ನೋಡಿ ಬೇಸತ್ತು ಕೂತ ಕಣ್ಣುಗಳಿಗೆ ಹಬ್ಬದೂಟ ಭಾನುವಾರ ಮಂಗಳೂರಿನ ಪ್ರಸಿದ್ಧ ಗೇಟ್ ವೇಯಲ್ಲಿ ಇತ್ತು. ರಾಜ್ಯದ ಖ್ಯಾತ ಮೊಡೆಲಿಂಗ್ ಟ್ರೈನಿಂಗ್ ಸೆಂಟರ್ ‘ಫ್ಯಾಶನ್ ಎಬಿಸಿಡಿ‘ ಪ್ರಾಯೋಜಕತ್ವದಲ್ಲಿ ೬ರಿಂದ ೧೦ ಹಾಗೂ ೧೦ ರಿಂದ ೧೫ ವಯಸ್ಸಿನ ಎರಡು ಕೆಟಗರಿಯ ಮಕ್ಕಳು ಬಣ್ಣದ ಮಿರುಗುವ ಸ್ಟೇಜ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಇಂತಹ ರ‍್ಯಾಂಪ್‌ವಾಕ್ ನಲ್ಲಿ ಫ್ಯಾಶನ್ ಎಬಿಸಿಡಿಯ ತರಬೇತುದಾರರು ಈ ಪುಟಾಣಿ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನ, ಮಾತನಾಡುವ ಕಲೆ, ಪ್ರೇಕ್ಷಕರನ್ನು ಸೆಳೆಯುವ ತಾಕತ್ತು, ಮೈಕ್ ಹಾಗೂ ರ‍್ಯಾಂಪ್ ಮೇಲೆ ನಡೆಯುವ ಕುರಿತು ತರಬೇತಿಯನ್ನು ನೀಡಿ ಹೊಸ ಫ್ಯಾಶನ್ ಲೋಕಕ್ಕೆ ಎಳೆಯ ಮೊಡೆಲ್ ಪರಿಚಯ ಮಾಡಿದರು. ಗೆದ್ದವರಿಗೆ ಭರ್ಜರಿ ಬಹುಮಾನ: ಇಲ್ಲಿ ಗೆದ್ದು ಬಂದವರಿಗೆ ದೇಶದ ಪ್ರತಿಷ್ಠಿತ ಪುಟಾಣಿಗಳ ಫ್ಯಾಶನ್ ರ‍್ಯಾಂಪ್ ಶೋಗಳಲ್ಲಿ ಒಂದಾದ ’ಗ್ಲ್ಯಾಡ್‌ರ‍್ಯಾಗ್ಸ್‘ ಲಿಟಲ್ ಮಿಸ್ ಹಾಗೂ ಮಾಸ್ಟರ್ ಇಂಡಿಯ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದಾರೆ. ಇಲ್ಲಿ ಆಯ್ಕೆಯಾದ ಮಿಸ್ಸಿ ಆಂಡ್ ಮಾಸ್ಟರ್ ಮಂಗಳೂರು ವಿಜೇತ ಹಾಗೂ ರನ್ನರ್ ಆಪ್‌ಗಳಿಗೆ ದೇಶದ ನಾನಾ ಕಡೆ ೨ ದಿನ ಪ್ರವಾಸ ಮಾಡುವ ಜತೆಗೆ ಮೊಡೆಲಿಂಗ್‌ನಲ್ಲಿ ಅವಕಾಶ ಲಭ್ಯವಾಗಿದೆ. ‘ಇಂತಹ ಕಲ್ಪನೆ ತೀರಾ ಹೊಸತು. ಮಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪುಟಾಣಿಗಳಿಗೆ ಸೀಮಿತವಾದ ರ‍್ಯಾಂಪ್ ಶೋಗಳಿಲ್ಲ. ಮಕ್ಕಳು ಎಂದಾಕ್ಷಣ ಅವರಲ್ಲಿ ತುಂಟಾಟ ಇದ್ದೇ ಇರುತ್ತದೆ. ಅವರನ್ನು ನಿಭಾಯಿಸಿಕೊಂಡು ಪ್ರೀತಿಯಿಂದ ಹೇಳಿಕೊಟ್ಟು ರ‍್ಯಾಂಪ್‌ವಾಕ್ ಮಾಡುವ ಕೆಲಸ ತರಬೇತುದಾರರಿಗೆ ತೀರಾ ಕಷ್ಟ. ಆದರೂ ಇದೊಂದು ವಿಭಿನ್ನ ಪ್ರಯೋಗ ಖ್ಯಾತ ಫ್ಯಾಶನ್ ಕೋರಿಯೋಗ್ರಾಫರ್ ಸಮೀರ್ ಖಾನ್ ಮಾತು. ದೇಶದ ನಾನಾ ಕಡೆಗಳಲ್ಲಿ ನಡೆಯುವ ಫ್ಯಾಶನ್ ವೀಕ್‌ಗಳಿಗೆ ನಾನು ಹೋಗಿದ್ದೇನೆ. ಆದರೆ ಮಕ್ಕಳಿಗಾಗಿ ನಡೆಯುವ ಫ್ಯಾಶನ್ ವೀಕ್ ತೀರಾ ಕಡಿಮೆ. ಭಾರತದಲ್ಲಿ ತೀರಾ ವಿರಳವಾಗಿ ನಡೆಯುತ್ತಿರುತ್ತದೆ. ಅದನ್ನು ಮಂಗಳೂರಿನಲ್ಲೂ ಮಾಡಬೇಕು. ಇಲ್ಲಿಯ ಪುಟಾಣಿ ಮಕ್ಕಳಲ್ಲಿ ಫ್ಯಾಶನ್ ಕ್ರೇಜ್ ಹುಟ್ಟು ಹಾಕಬೇಕು ಎನ್ನುವ ಉದ್ದೇಶದಿಂದಲೇ ನಾವು ಈ ಮಿಸ್ಸಿ ಆಂಡ್ ಮಾಸ್ಟರ್ ಮಂಗಳೂರು ಬ್ಯೂಟಿ ಕಾನ್ಟೆಸ್ಟ್ ಫಾರ್ ಕಿಡ್ಸ್ ೨೦೧೩ ಎನ್ನುವ ಟ್ಯಾಗ್‌ಲೈನ್‌ನಲ್ಲಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆ, ರಾಜ್ಯಗಳ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ಅಲೋಚನೆ ಇದೆ ಎನ್ನುತ್ತಾರೆ ಫ್ಯಾಶನ್ ಎಬಿಸಿಡಿಯ ಮುಖ್ಯ ಸ್ಥೆ ಅನುಪಮ ಸುವರ್ಣ ಅವರ ಮಾತು. ಕುಡ್ಲದಲ್ಲಿ ಭರ್ಜರಿ ೧೫೦ ಮೊಡಲ್‌ಗಳು: ನಗರದ ಎಂಪಾರ್‌ಮಾಲ್‌ನಲ್ಲಿ ನಡೆದ ಆಡಿಷನ್‌ನಲ್ಲಿ ಮಂಗಳೂರು, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ೧೫೦ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ೧೮ ಮೊಡೆಲ್‌ಗಳನ್ನು ಆಯ್ಕೆ ಮಾಡಿಕೊಂಡು ರ‍್ಯಾಂಪ್ ಮೇಲೆ ನಡೆಯುವ ಅವಕಾಶ ಪಡೆದುಕೊಂಡರು. ಮಿಸ್ಸಿ ಮಂಗಳೂರು ಆಗಿ ವಿನ್ಸಿಟಾ ಡಾಯಸ್, ಫಸ್ಟ್ ರನ್ನರ್ ಆಪ್ ಆಗಿ ದೀಕ್ಷಿತಾ ಕರ್ಕೆರಾ, ಸೆಕೆಂಡ್ ರನ್ನರ್ ಆಪ್ ಆಗಿ ಅಕಾಂಕ್ಷಾ ಹಾಗೂ ಕೆಟಗರಿ೧ನಲ್ಲಿ ಮಿಸ್ಸಿ ಮಂಗಳೂರು ಜೂನಿಯರ್ ವಿಭಾಗದಲ್ಲಿ ಅದ್ವಿಕಾ ಶೆಟ್ಟಿ, ಫಸ್ಟ್ ರನ್ನರ್ ಆಪ್ ಶ್ರೇಯಾ ಡಾಯಸ್ ಹಾಗೂ ಸೆಕೆಂಡ್ ರನ್ನರ್ ಆಪ್ ಆಗಿ ರೀತೂ ನೊರೊನ್ಹಾ. ಬಾಲಕರ ವಿಭಾಗದಲ್ಲಿ ಮಾಸ್ಟರ್ ಮಂಗಳೂರು ಆಗಿ ಕುನಾಲ್ ಶಾನೇ, ಫಸ್ಟ್ ರನ್ನರ್ ಆಪ್ ಆಗಿ ಅಹಾನ್ ಆಳ್ವ ಹಾಗೂ ಸೆಕೆಂಡ್ ರನ್ನರ್ ಆಪ್ ನಿಹಾಲ್ ಕಿರಣ್ ಬಹುಮಾನ ಗೆದ್ದುಕೊಂಡರು. (vijyakarnataka daily mangalore ediition namma karavali published dis article on 5.12.2013)