Monday, April 11, 2011

ಪ್ರೇಕ್ಷಕ ಮೂಕ ವಿ‘ಸ್ಮಿತಾ’



ಬಾಲಿವುಡ್ ನಿರ್ದೇಶಕಿ ಕಿರಣ್‌ರಾವ್ ನಿರ್ದೇಶನದ ‘ಧೋಬಿ ಘಾಟ್’ ಚಿತ್ರ ನೋಡಿದ ನಂತರ ಅನ್ನಿಸಿದ್ದು ಆ ಹೊಸ ಹುಡುಗ ಅವರ ಮಗ ಅಲ್ವಾ...? ಅದೇ ಮುಖ, ಕಣ್ಣು, ಮೂಗು, ನಟನೆ ಸೇಮ್ ಟೂ ಸೇಮ್ ಖ್ಯಾತ ನಟಿ ಸ್ಮಿತಾ ಪಾಟೀಲ್ ಹೊಳಪು ಒಂದ್ ಸಾರಿ ಬಂದು ಮರೆಯಾಯಿತು.

ಬಾಲಿವುಡ್ ನಟ ಅಮೀರ್ ಖಾನ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದ ‘ಧೋಬಿ ಘಾಟ್’ ಚಿತ್ರ ಯಾಕೋ ಕಮರ್ಷಿಯಲ್ ಪಾಯಿಂಟ್ ಆಫ್ ರೇಟಿಂಗ್‌ನಲ್ಲಿ ವೀಕ್ ಅನ್ನಿಸಿದರೂ ಅಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಪ್ರತಿಕ್ ರಾಜ್ ಬಬ್ಬರ್ ಮಾತ್ರ ಬಹಳಷ್ಟು ಸಿನಿ ವಿಮರ್ಶಕರಿಂದ ಶಹಬ್ಬಾಸ್‌ಗಿರಿ ಪಡೆದಿದ್ದರು. ಹೊಸ ಹುಡುಗ ಬಾಲಿವುಡ್‌ನಲ್ಲಿ ಬೆಳೆದು ನಿಲ್ಲುತ್ತಾನೆ ಎಂದು ಭವಿಷ್ಯ ಹೇಳಿದ್ದರು. ಎಲ್ಲ ರೀತಿಯಿಂದಲೂ ಬಾಲಿವುಡ್‌ನ ರಂಗೀನ್ ದುನಿಯಾದಲ್ಲಿ ಹೊಸ ಹುಡುಗ ಬಂದ ಅಂತಾ ಖುಶಿ ಪಟ್ಟುಕೊಂಡಿದ್ದರು. ಆದರೆ ಈ ಹುಡುಗ ಮಾತ್ರ ಬಾಲಿವುಡ್‌ನ ಖ್ಯಾತ ನಟಿ ಸ್ಮಿತಾ ಪಾಟೀಲ್‌ರ ಸುಪುತ್ರ ಅಂತಾ ಬಹಳಷ್ಟು ಮಂದಿಗೆ ಗೊತ್ತೇ ಇರಲಿಕ್ಕಿಲ್ಲ. ಆದರೆ ಇದು ಮಾತ್ರ ದಿಟ ಕಣ್ರಿ.
ಸ್ಮಿತಾ ಪಾಟೀಲ್ ಹಾಗೂ ರಾಜ್ ಬಬ್ಬರ್‌ರ ಪುತ್ರ ಪ್ರತಿಕ್ ಬಬ್ಬರ್ ಧೋಬಿ ಘಾಟ್ ನಂತರ ಈಗ ‘ಧಮ್ ಮಾರೋ ಧಮ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಏಪ್ರಿಲ್ ೨೨ರಂದು ತೆರೆಯ ಮೇಲೆ ಬರುವ ಸೂಚನೆ ಈಗಾಗಲೇ ನೀಡಿದೆ. ಈ ಚಿತ್ರದ ನಂತರ ‘ಅಕ್ರೋಶ್’ ಮತ್ತು ‘ ಮೈ ಫ್ರೆಂಡ್ ಪಿಂಟೋ ’ ಚಿತ್ರೀಕರಣದ ಹಾದಿಯಲ್ಲಿದೆ. ಟೋಟಲಿ ಪ್ರತಿಕ್ ಬಬ್ಬರ್, ತಾಯಿಯ ಹಾದಿಯಲ್ಲಿ ನಡೆಯುತ್ತಿದ್ದಾನೋ ಎನ್ನುವ ಸಂದೇಹದ ಮೇಲೆ ಸ್ಮಿತಾ ಪಾಟೀಲ್‌ರ ಬಣ್ಣದ ಲೋಕದ ಪುಟಗಳನ್ನು ಒಂದ್ ಸಲ ಬಿಚ್ಚಿಟ್ಟುಕೊಂಡು ನೋಡಿದಾಗ ಅನ್ನಿಸಿದ್ದು ಇಷ್ಟೇ : ಅವನು ಸ್ಮಿತಾ ಪಾಟೀಲ್‌ರ ಹೆಮ್ಮೆಯ ಸುಪುತ್ರನೇ ಖರೇ ಕಣ್ರಿ.
ಮರಾಠಿ ಭಾಷೆಯ ಚಾನೆಲ್‌ವೊಂದರಲ್ಲಿ ಟಿವಿ ನಿರೂಪಕಿಯಾಗಿದ್ದ ಚೆಲುವೆಯನ್ನು ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಪ್ರೇಕ್ಷಕರ ಮುಂದೆ ತಂದು ಬಿಟ್ಟಿದ್ದರು. ಹೌದು. ಇದು ಸ್ಮಿತಾ ಪಾಟೀಲ್ ಎನ್ನುವ ಬಾಲಿವುಡ್ ನಟಿಯ ಕತೆ. ಚೂಪಾದ ಮೂಗು, ಮನಸೆಳೆದು ಬಿಡುವ ದೇಹ ಸೌಂದರ್ಯ ಜತೆಗಿಷ್ಟು ಮುದ್ದಾದ ಮಾತುಗಳು. ಅಂದಕಾಲತ್ತಿಲ್‌ನ ಚೆಲುವೆ ಸ್ಮಿತಾ ಪಾಟೀಲ್ ನೆನಪಿಗೆ ಬಂದು ಬಿಡುತ್ತದೆ. ೧೯೭೦ರ ಅಸುಪಾಸಿನಲ್ಲಿ ಖ್ಯಾತ ನಿರ್ದೇಶಕ ಬೆನೆಗಲ್, ಗೋವಿಂದ ನಿಹಲಾನಿ ಹಾಗೂ ಮೃಣಾಲ್ ಸೇನ್‌ನಂತಹ ಗರಡಿಯಲ್ಲಿ ಪಳಗಿದ ಹುಡುಗಿ. ಇಡೀ ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನ ವಿಶೇಷ ನಟನೆಯ ಮೂಲಕ ಛಾಪು ಮೂಡಿಸಿಕೊಂಡಿದ್ದರು ಸ್ಮಿತಾ ಪಾಟೀಲ್.
ಶ್ಯಾಮ್ ಬೆನೆಗಲ್ ನಿರ್ದೇಶನದ ‘ಚರಣ್‌ದಾಸ್ ಚೋರ್’ಚಿತ್ರ ಸ್ಮಿತಾರ ಪಾಲಿಗೆ ಸಿನಿಮಾರಂಗಕ್ಕೆ ಗೇಟ್‌ಪಾಸ್ ಆಯಿತು. ಅವರ ನಿರ್ದೇಶನದ ‘ಮಂಥನ್’, ‘ಭೂಮಿಕಾ’ ‘ಅಕ್ರೋಶ್" ‘ಚಕ್ರ’ ಹಾಗೂ ‘ಮಿರ್ಚ್ ಮಸಾಲ’ ಎಲ್ಲವೂ ಕಲಾತ್ಮಕ ಹಾಗೂ ಕಮರ್ಷಿಯಲ್ ದೃಷ್ಟಿಯಿಂದಲೂ ಹೆಸರು ಮಾಡಿದ ಚಿತ್ರಗಳಲ್ಲಿ ಸ್ಮಿತಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಂದಹಾಗೆ ಸಿನಿಮಾ ರಂಗಕ್ಕೂ ಬರುವ ಮುಂಚೆ ಸ್ಮಿತಾ ಪಾಟೀಲ್ ಒಬ್ಬ ಮರಾಠಿ ರಂಗಭೂಮಿ ಕಲಾವಿದೆ. ಅಗೊಮ್ಮೆ ಈಗೊಮ್ಮೆ ಮರಾಠಿ ವಾಹಿನಿಯೊಂದರಲ್ಲಿ ವಾರ್ತಾವಾಚಕಿ ಕೆಲಸ ಮಾಡುತ್ತಿದ್ದರು. ಮಧ್ಯಮ ವರ್ಗದ ಮಹಿಳೆಯರ ಬದುಕು, ಬವಣೆಗಳ ಬಗ್ಗೆ ಅತೀವ ಕಾಳಜಿ ಇದ್ದ ಹೋರಾಟಗಾರ್ತಿಯಾಗಿ ಮೆರೆದು ನಿಂತವರು. ಮಹಾರಾಷ್ಟ್ರದ ಖ್ಯಾತ ರಾಜಕಾರಣಿ ಶಿವರಾಜಿ ರಾವ್ ಪಾಟೀಲ್‌ರ ಮುದ್ದು ಮಗಳು ಸ್ಮಿತಾ ಪಾಟೀಲ್ ಸರಿಸುಮಾರು ೭೫ಕ್ಕಿಂತ ಹೆಚ್ಚಿನ ಹಿಂದಿ ಹಾಗೂ ಮರಾಠಿ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದ ಸಾಧ ಗಾಗಿ ಎರಡು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ೧೯೮೫ರಲ್ಲಿ ಪದ್ಮಶ್ರೀ ಅವಾರ್ಡ್ ಕೂಡ ಸ್ಮಿತಾರ ಮಡಿಲು ತುಂಬಿತು.
ಆ ಕಾಲದಲ್ಲಿ ಸಿನಿಮಾ ರಂಗದಲ್ಲಿ ತನ್ನ ವಿಶಿಷ್ಟ ಅಭಿನಯದ ಮೂಲಕ ಗಮನಸೆಳೆಯುತ್ತಿದ್ದ ಬಾಲಿವುಡ್ ನಟ ರಾಜ್ ಬಬ್ಬರ್‌ರ ಜತೆ ಪ್ರೇಮಾಂಕುರವಾಗಿ ಸ್ಮಿತಾ ಕೊನೆಗೆ ಬಬ್ಬರ್‌ರ ಎರಡನೇ ಪತ್ನಿಯಾಗಿ ಉಳಿದು ಹೋದರು. ಆದರೂ ಸಿನಿಮಾ ರಂಗದ ಜತೆಗಿನ ನಂಟು ಮಾತ್ರ ಕಳಚಿಕೊಂಡಿರಲಿಲ್ಲ. ೧೯೮೬ರಲ್ಲಿ ಸ್ಮಿತಾ ಗರ್ಭಿಣಿಯಾಗಿ ಆಸ್ಪತ್ರೆ ಸೇರಿಕೊಂಡರು. ಆದರೆ ಡೆಲಿವರಿಯ ಸಮಯದಲ್ಲಿ ನಡೆದ ತೊಂದರೆಯಿಂದ ಸ್ಮಿತಾ ಪಾಟೀಲ್ ಎಲ್ಲರನ್ನು ಬಿಟ್ಟು ಹೋದರು. ಸ್ಮಿತಾ ಹೋದಾಗ ಅವರ ೧೦ ಚಿತ್ರಗಳು ತೆರೆಗೆ ಬರಲು ಕಾಯುತ್ತಿತ್ತು.
೩೧ರ ಹರೆಯದಲ್ಲಿ ದೂರವಾದ ಸ್ಮಿತಾ ಪಾಟೀಲ್ ಒಬ್ಬ ಪ್ರತಿಭಾವಂತ ನಟ ಪ್ರತಿಕ್ ಬಬ್ಬರ್‌ರನ್ನು ಬಿಟ್ಟು ಹೋಗಿದ್ದಾರೆ. ಪ್ರತಿಕ್ ನೋಡಿದಾಗ ಅದೇ ಸ್ಮಿತಾರ ಚೂಪಾದ ಮೂಗು, ಸೆಳೆಯುವ ಕಣ್ಣುಗಳು, ನಟನೆ ಎಲ್ಲವೂ ಸೇಮ್ ಟೂ ಸೇಮ್ ಅನ್ನಿಸಿಬಿಡುತ್ತದೆ ಗ್ಯಾರಂಟಿ. ಅಂದಹಾಗೆ ಪ್ರತಿಕ್ ಬಬ್ಬರ್‌ನನ್ನು ನೀವು ಸರಿಯಾಗಿ ನೋಡಿಲ್ಲವಾದರೆ ಒಂದ್ ಸಾರಿ ಧಮ್ ಮಾರೋ ಧಮ್ ಸಿನಿಮಾ ನೋಡಿ ಬಂದು ಬಿಡಿ. ಸ್ಮಿತಾ ಪಾಟೀಲ್‌ರ ಹೊಳಪು ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

Saturday, April 9, 2011

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ..

ಬೆಕ್ಕಿಗೂ ಮಕ್ಕಳಿಗೂ ಮಡಿ ಮೈಲಿಗೆಯ ಹಂಗಿಲ್ಲ ಎನ್ನುವುದು ಮಡಿವಂತರ ಗಾದೆ. ಆದ್ದರಿಂದ ಬೆಕ್ಕಮ್ಮ ಮುಸುರೆ ಪಾತ್ರೆಗೆ ಬಾಲ ಸೋಕಿಸಿ ಅನಂತರ ಹಾಲಿನ ಪಾತ್ರೆಯತ್ತ ಕೊಂಚವೇ ಬಗ್ಗಿ ನೋಡಿದರೂ ಒಕೆ. ಆ ಹಾಲು ದೇವರಿಗೆ ವರ್ಜ್ಯವಲ್ಲ. ಅಂದಮೇಲೆ ಗೊತ್ತಾಯಿತಲ್ಲ ಬೆಕ್ಕಿನ ಮಹಾತ್ಮೆ ಏನು ಅಂತ. ಆದರೆ ಮಕ್ಕಳು ಬೆಕ್ಕಿನಿಂದ ದೂರ ಇರುವುದು ಆರೋಗ್ಯಕರ ಎನ್ನುವುದು ಕಿವಿ ಮಾತು.

ಮೈಸೂರರಸನ ಅರಮನೆಯೊಳಗೆ,
ರಾಜನ ಸಂಗಡ ರಾಣಿಯು ಇದ್ದಳು
ಅಂತಪುರದೊಳಗೆ...
ಅಂಥಾ ಅಂತಪುರದೊಳಗೆ ಪ್ರವೇಶಿಸುವ ಮುದ್ದಿನ ಬೆಕ್ಕಿಗೆ ನಿಷೇಧಗಳೇ ಇಲ್ಲ ! ಕಿಲಾಡಿ ಮಾರ್ಜಾಲ ಕಾರ್ಯ ಸಾಧು. ಅಂದ ಹಾಗೆ ಬೆಕ್ಕನ್ನು ಎಷ್ಟೇ ಎತ್ತರದಿಂದ ಕೆಳಕ್ಕೆ ಹಾಕಿದರೂ ಅದು ನಾಲ್ಕು ಕಾಲೂರಿ ನಿಲ್ಲುತ್ತದೆ ಎನ್ನುವುದು ಅದರ ಕೆಪಾಸಿಟಿ. ಆದರೆ ಪಾಪ, ಸರಸರನೆ ಮರ ಏರುವ ಬೆಕ್ಕಿಗೆ ಇಳಿಯಲಿಕ್ಕೆ ಬರುವುದಿಲ್ಲ.
ಮನೆಯಲ್ಲಿ ನಿರ್ಭಿತಿಯಿಂದ ಓಡಾಡಿಕೊಂಡಿರುವ ಬೆಕ್ಕುಗಳು ಮುದ್ದು ಮುದ್ದು. ಸೂಕ್ಷ್ಮ ಕಣ್ಣುಗಳಿಂದ ತನ್ನ ಬೇಟೆಯತ್ತ ನೋಡುವ ಬೆಕ್ಕೆಂದರೆ ಪ್ರೀತಿ. ಪುಟಾಣಿ ಮಕ್ಕಳಿಗೆ ಬೆಕ್ಕು, ಅದರ ಮರಿಗಳ ಚಿನ್ನಾಟ ನಿತ್ಯ ಮನರಂಜನೆ. ಮನೆಯ ಸದಸ್ಯರಂತೆಯೇ ಅದಕ್ಕೊಂದು ಸ್ಥಾನ ಇರುತ್ತದೆ. ಅದಕ್ಕೊಂದು ಹಾಲಿನ ಬಟ್ಟಲು, ಮಲಗೋಕೆ ಸುಪ್ಪತ್ತಿಗೆ, ಮರಿ ಹಾಕಿದರೆ ಆರೈಕೆ. ಮನೆಯೊಡತಿಯೊಂದಿಗೆ ಸಂಭಾಷಣೆಯ ಭಾಗ್ಯವೂ ಬೆಕ್ಕಿಗೆ ಸಿಗುತ್ತದೆ. ನಂಬಿಕೆ ನಿಷ್ಠ ನಾಯಿಗಿಂತಲೂ ಮನೆಯಲ್ಲಿ ಮರೆಗುಳಿ ಬೆಕ್ಕೇ ಹೆಚ್ಚು ಪ್ರೀತಿ ಪಡೆಯುವುದುಂಟು. ಗಮನಿಸಿದ್ದೀರಾ, ಮನೆಯಲ್ಲಿರುವ ಎಲ್ಲ ಬೆಕ್ಕುಗಳೂ ಇಲಿ ಹಿಡಿಯುವುದಿಲ್ಲ. ಪುಷ್ಕಳವಾಗಿ ಹಾಲು ಮೀನು ತಿಂದುಕೊಂಡು, ತನ್ನ ತಾ ನೆಕ್ಕುತಾ ಇರುತ್ತವೆ ಫ್ಯಾಶನ್ ಪ್ರಿಯ ಸೋಂಬೇರಿ ಬೆಕ್ಕುಗಳು.
ಒಂದೆಡೆ ಬೆಕ್ಕು ರಸ್ತೆ ದಾಟುವಾಗ ಹಾದು ಹೋದ್ರೆ ಅದು ಅಪಶಕುನ ಎನ್ನುವ ನಂಬಿಕೆ ಒಂದು ಕಡೆ. ಜತೆಯಲ್ಲಿ ಬೆಕ್ಕುಗಳಿದ್ದರೆ ಅದು ಮನೆಗೆ ಸಂಪತ್ತು ಎನ್ನುವರು ಮತ್ತೊಂದೆಡೆ. ಬೆಕ್ಕುಗಳ ಕುರಿತು ಹರಡಿಕೊಂಡಿರುವ ಮೂಢನಂಬಿಕೆಗಳ ಜತೆಯಲ್ಲೇ ಬೆಕ್ಕಿನಿಂದ ಒಳ್ಳೆದಾಗುತ್ತದೆ ಎಂದು ನಂಬಿದವರ ದಂಡೇ ಇದೆ. ಭಾರತೀಯರಲ್ಲಿ ಬೆಕ್ಕೆಂದರೆ ಮೂಗು ಮುರಿಯುವವರು ಇದ್ದರೂ, ಬೆಕ್ಕು ಅಪಶಕುನ ಎನ್ನುವುದಕ್ಕೆ ಭಾರೀ ಪುರಾವೆ ಏನಿಲ್ಲ. ಪೂಜಾ ಕಾರ್ಯದಲ್ಲಿ ಅದನ್ನು ಕೊಂಚ ದೂರ ಇರಿಸುವುದುಂಟು. ಉಳಿದಂತೆ ಬೆಕ್ಕುಗಳು ಕ್ಯಾಂವ್ ಕ್ಯಾಂವ್ ಎಂದು ಜಗಳಾಡುವುದು ಬರಲಿರುವ ಕದನದ ಸಂಕೇತ. ವಾಮಾಚಾರ,ದೆವ್ವ ಪಿಶಾಚಿಗಳ ಲೋಕದಲ್ಲಿ ಮಾತ್ರ ಕಪ್ಪು ಬೆಕ್ಕಿನ ಪಾತ್ರ ಅಶುಭವೇ.
ಬೆಕ್ಕೆಂದರೆ ಬೇಸರವೇಕೆ..
ಕೆಲವರ ಮನೆಯಲ್ಲಿ ಕಪ್ಪು ಬೆಕ್ಕಿಗೆ ಮಾತ್ರ ಆಯುಸ್ಸು. ಮನೆಗೆ ಏಳಿಗೆ. ಮತ್ತೆ ಕೆಲವರಿಗೆ ಕಪ್ಪು ಬೆಕ್ಕು ಮನೆಯಲ್ಲಿದ್ದರೆ ಶುಭ.
ಎಲ್ಲ ಬೆಕ್ಕು ಅದರಲ್ಲೂ ಕಪ್ಪು ಬೆಕ್ಕಿನ ಕುರಿತು ಈಜಿಪ್ಟ್ ನಾಗರಿಕರಿಗೆ ಪೂಜನೀಯ ಭಾವನೆ ಇದೆ. ಬೆಕ್ಕಿನ ಮಾಲೀಕರು ಸತ್ತಾಗ ಅವರ ಜತೆಯಲ್ಲಿಯೇ ಈ ಬೆಕ್ಕುಗಳನ್ನು ಹೂಳಲಾಗುತ್ತದೆ. ಸತ್ತ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತೆ ಅಂತಾ ಈಜಿಪ್ಟ್ ನಾಗರಿಕರ ನಂಬಿಕೆ.
ಕಪ್ಪು ಬೆಕ್ಕುಗಳನ್ನು ಸಾಕುವುದೆಂದರೆ ಅದು ಸಂಪತ್ತು ತಂದುಕೊಡುತ್ತದೆ. ಅದರಲ್ಲೂ ಕಪ್ಪು ಬೆಕ್ಕಿನಲ್ಲಿರುವ ಒಂದೇ ಒಂದು ಕೂದಲಬನ್ನು ಬೆಕ್ಕಿಗೆ ಗಾಯವಾಗದಂತೆ ತೆಗೆದು ಬಿಟ್ರೆ ಅವರಿಗೆ ಸಂಪತ್ತು, ಪ್ರೇಮ, ಅದೃಷ್ಟ ಹರಿದು ಬರುತ್ತದೆ.
ಬ್ರಿಟನ್ ಮೀನುಗಾರರ ನಂಬಿಕೆಯಂತೆ ಅವರ ಮನೆಗೆ ಕಪ್ಪು ಬೆಕ್ಕು ಬಂದರೆ ಅಂದು ಅವರ ಮನೆಗೆ ಅತಿಥಿಗಳು ಬರುತ್ತಾರಂತೆ.
ಮನೆ ಮುಂದೆ ಬೆಕ್ಕು ತಲೆಬಾಚುತ್ತಾ ಕುಳಿತರೆ ನೆಂಟರು ಬರುತ್ತಾರೆ ಎನ್ನುವುದು ಭಾರತೀಯರ ನಂಬಿಕೆ.
ಇಂಗ್ಲೆಂಡ್‌ನ ವರ್ತಕರಲ್ಲಿ ಕಪ್ಪು ಬೆಕ್ಕಿಗೆ ವಿಶೇಷ ರಾಜ ಮರ್ಯಾದೆ. ಬೆಕ್ಕು ಜೊತೆಗಿದ್ದರೆ ಇದ್ದರೆ ಸಮುದ್ರ ವ್ಯಾಪಾರದಲ್ಲಿ ಅವರಿಗೆ ಯಾವುದೇ ಅಪಾಯಗಳು ಬರುವುದಿಲ್ಲ.
ಕಪ್ಪು ಬೆಕ್ಕು ಮನೆಯಲ್ಲಿದ್ದರೆ ಮನೆಯಲ್ಲಿರುವ ಹುಡುಗಿಗೆ ಬೇಗನೆ ಮದುವೆಯಾಗುತ್ತದೆ. ಅನಾಮಿಕ ಹೆಣ್ಣು ಬೆಕ್ಕೊಂದು ಮನೆ ಸೇರಿಕೊಂಡರೆ ಆ ಮನೆಯಲ್ಲಿ ಮದುವೆ ಖಚಿತ ಅಂತೆ.
ವಿದ್ಯಾರ್ಥಿಗಳು ಶಾಲೆಗೆ ಹೋಗುವ ದಾರಿಯಲ್ಲಿ ಬಿಳಿ ಬೆಕ್ಕು ಕಾಣಿಸಿಕೊಂಡರೆ, ಒಂದು ರೌಂಡ್ ತಿರುಗಿ ಬರಬೇಕು ಅಥವಾ ಉಗುಳಿ ಮುಂದಿನ ದಾರಿ ಹಿಡಿಯಬೇಕು ಎನ್ನುವುದು ಮತ್ತೊಂದು ಫಾರಿನ್ ನಂಬಿಕೆ.
ಬೆಕ್ಕು ತನ್ನ ಕಿವಿಯನ್ನು ನಾಲಗೆಯಿಂದ ಸ್ವಚ್ಛ ಮಾಡುತ್ತಿದ್ದಾರೆ ಅಂದು ಜೋರಾಗಿ ಮಳೆಯಾಗುತ್ತದೆ.
ಮದುಮಗಳ ಪಕ್ಕದಲ್ಲಿ ಬಂದು ಬೆಕ್ಕು ಕೂಗಿದರೆ ಅವಳ ವೈವಾಹಿಕ ಬದುಕು ಸಂತೋಷದಿಂದ ಕೂಡಿರುತ್ತದೆ.
ಟಾಮ್ ಟಾಮ್
ಕಾರ್ಟೂನ್ ವರ್ಲ್ಡ್ ಚಾನೆಲ್‌ನಲ್ಲಿ ‘ಟಾಮ್ ಆಂಡ್ ಜೆರ್ರಿ’ ಕಾರ್ಟೂನ್‌ನನ್ನು ವಿಶ್ವ ಪ್ರಸಿದ್ಧ, ದೊಡ್ಡವರು ಚಿಕ್ಕವರೆನ್ನುವ ಭೇದ ಇಲ್ಲದೆ ಈ ಕಾರ್ಟೂನ್ ನೋಡುವ ದೊಡ್ಡ ವರ್ಗ ಇದೆ. ವಿಲಿಯೆಮ್ ಹನ್ನಾ ಮತ್ತು ಜೋಸೆಫ್ ಬಾರ್‌ಬೆರಾ ಈ ಸರಣಿಯ ಹರಿಕಾರರು. ಟಾಮ್ ಪಾತ್ರ ಬ್ರಿಟನ್ ಮೂಲದ್ದು. ಉದ್ದಕೂದಲಿನ ನೀಲಿ ಕಂದು ಮಿಶ್ರಿತ ಟಾಮ್ ಸಖತ್ ಕಾಮಿಡಿ ಬೆಕ್ಕು. ಅದರಲ್ಲೂ ಜೆರ್ರಿ ಎಂಬ ಪುಟ್ಟ ಇಲಿಯನ್ನು ಕೊಂದು ತಿನ್ನಲು ಟಾಮ್ ಮಾಡುವ ಕಸರತ್ತುಗಳು, ಜೆರ್ರಿ ಬದುಕಲು ಮಾಡುವ ಸಾಹಸ ಕಾರ್ಟೂನ್ ಪ್ರೇಮಿಗಳನ್ನು ಏಕ್ ದಂ ನಗಿಸಿ ಬಿಡುತ್ತದೆ. ೧೯೪೦ರಿಂದಲೂ ಕಾರ್ಟೂನ್ ದುನಿಯಾದಲ್ಲಿ ರಾಜ್ಯಭಾರ ಮಾಡುತ್ತಿರುವ ‘ಟಾಮ್ ಆಂಡ್ ಜೆರ್ರಿ’ ಟೈಮ್ ಪತ್ರಿಕೆ ನಡೆಸಿದ ಸಮೀಕ್ಷೆಯೊಂದರಲ್ಲಿ ಮೊದಲ ಸ್ಥಾನದಲ್ಲಿದೆ. ‘ಪೂಸಿ ಗೆಟ್ ದೀ ಬೂಟ್’ಎಂದು ಮೊದಲ ‘ಟಾಮ್ ಆಂಡ್ ಜೆರ್ರಿ’ಯನ್ನು ಕರೆಯಲಾಗಿತ್ತು. ನಂತರ ಈ ಹೆಸರು ಬದಲಾಗಿ ‘ಟಾಮ್ ಆಂಡ್ ಜೆರ್ರಿ’ಯಾಗಿ ಬದಲಾವಣೆಗೊಂಡಿತು. ಅಂದಾಹಾಗೆ ಟಾಮ್‌ನ ಒರಿಜಿನಲ್ ಹೆಸರು ‘ಜಾಸ್‌ಫರ್’

Friday, April 8, 2011

ಮಕ್ಕಳ ಸಾಹಿತ್ಯ ಲೋಕದ ಹಿರಿ ಜೀವ ಪಳಕಳ




ಈ ವರ್ಷನೂ ನ.೧೪ರಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಲವಲವಿಕೆ ಈ ಬಾರಿ ಮಕ್ಕಳ ಸಾಹಿತ್ಯಕ್ಕಾಗಿ ಅವಿರತವಾಗಿ
ದುಡಿಯುತ್ತಿರುವ ಕರಾವಳಿ ಪುಟ್ಟ ಊರಿನ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆಯನ್ನು ತೆರೆದು ಇಟ್ಟಿದೆ. ಮಕ್ಕಳ ಸಾಹಿತಿಯೊಬ್ಬರ ಜತೆ ಸಿಂಪಲ್ ಮಾತುಕತೆ ನಿಮ್ಮ ಮುಂದೆ ಹಾಜರು...

ಮೂಡುಬಿದರೆಯಿಂದ ಬರೋಬರಿ ಐದು ಕಿ.ಮೀ ದೂರದಲ್ಲಿದೆ ಪಳಕಳ ಎನ್ನುವ ಪುಟ್ಟ ಹಸಿರಿನ ಮಡಿಲು. ಅಡಕೆ, ತೆಂಗು, ಭತ್ತದ ನಡುವೆ ದೊಡ್ಡದಾದ ಒಂದು ಹಂಚಿನ ಮನೆ. ಇದೇ ಮನೆಯಲ್ಲಿರುವ ಒಂದು ಹಿರಿಯ ಜೀವ ಮಕ್ಕಳ ಸಾಹಿತ್ಯಕ್ಕಾಗಿ ಹಗಲಿರುಳು ದುಡಿಯುತ್ತಿದೆ. ತನ್ನೆಲ್ಲ ಬದುಕನ್ನು ಅದಕ್ಕಾಗಿ ಮೀಸಲಿಟ್ಟಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಬರೀ ಒಂದೇ ಒಂದು ಕೃತಿಯ ಮುದ್ರಣ, ಮಾರಾಟ ಎಂದರೆ ಅದೊಂದು ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯನ್ನು ವಿದ್‌ಔಟ್ ಆಕ್ಸಿಜನ್ ಇಲ್ಲದೇ ಏರಿ ಬಂದ ಸಾಹಸ. ಅದರಲ್ಲೂ ಕನ್ನಡ ಸಾಹಿತ್ಯ ಲೋಕ ಎಂದಿಗೂ ಸರಿಯಾದ ಗೌರವ ಕೊಡದಿರುವ ಮಕ್ಕಳ ಸಾಹಿತ್ಯ ರಚನೆ ಎಂದರೆ ಯಾರಿಗೆ ತಾನೇ ಇಷ್ಟವಿದೆ.
ಮಕ್ಕಳ ಸಾಹಿತ್ಯನಾ..? ಎಂದು ಉಡಾಫೆಯ ಮಾತನ್ನು ಆಡಿ ಮೂಗು ಮುರಿಯುವ ಮಂದಿನೇ ರಾಜ್ಯದಲ್ಲಿ ಜಾಸ್ತಿ ಇದ್ದಾರೆ. ಆಂಗ್ಲ ಭಾಷೆಯ ಪ್ರಭಾವ, ಎಲೆಕ್ಟ್ರಾನಿಕ್ ಮಾಧ್ಯಮಗಳ ಕರಾಮತ್ತು, ಓದು- ಬರಹ, ಕಲ್ಚರಲ್ ಪ್ರೋಗ್ರಾಂಗಳ ನಡುವೆ ಇಂದಿನ ಮಕ್ಕಳು ನಲುಗಿ ಹೋಗುವಾಗ ಮಕ್ಕಳ ಸಾಹಿತ್ಯ ಓದಲು ಟೈಮ್ ಎಲ್ಲಿದೆ ..?ಎನ್ನುವ ಕಾಲಘಟ್ಟದಲ್ಲಿ ಪಳಕಳ ಸೀತಾರಾಮ ಭಟ್ಟರು ಟೋಟಲಿ ಡಿಫರೆಂಟ್ ಆಗಿ ನಮ್ಮ ಮುಂದೆ ಬರುತ್ತಾರೆ.
ನಾನಾ ವಯೋಮಾನದ ಮಕ್ಕಳಿಗಾಗಿ ಕಳೆದ ೬೦ ವರ್ಷಗಳಿಂದ ನಿರಂತರವಾಗಿ ಮಕ್ಕಳ ಕತೆ, ಕವನ, ಚುಟುಕು ಅಂತಾ ಬರೋಬರಿ ನೂರಕ್ಕಿಂತ ಅಕ ಕೃತಿಗಳನ್ನು (೧೨೫ ಕೃತಿಗಳು) ಹೊರ ತಂದಿದ್ದಾರೆ. ಸಂಪರ್ಕಗಳು ಸರಿಯಾಗಿ ಟಚ್ ಆಗದ ಪಳಕಳ ಎಂಬ ಪುಟ್ಟ ಊರಿನಲ್ಲಿ ನಿಂತು ಸೀತಾರಾಮ ಭಟ್ಟರು ಮಾಡುವ ಸಾಹಿತ್ಯ ಕ್ರಾಂತಿ ಇದೆಯಲ್ಲ ಅದು ಕನ್ನಡ ಸಾಹಿತ್ಯ ಲೋಕಕ್ಕೆ ಗೊತ್ತುಂಟೋ ಗೊತ್ತಿಲ್ಲ. ಆದರೆ ಇಡೀ ಸಾಹಿತ್ಯ ಲೋಕ ಅವರನ್ನುಂತು ಸಿರೀಯಸ್ ಆಗಿ ಗುರುತಿಸಿಲ್ಲ. ಆದರೆ ಸೀತಾರಾಮ ಭಟ್ಟರಿಗಂತೂ ಈ ವಿಚಾರದ ಮೇಲೆ ಯಾವುದೇ ಬೇಸರವಿಲ್ಲ. ಮಕ್ಕಳ ಸಾಹಿತ್ಯ ಎಂದರೆ ತನ್ನ ಪ್ರಾಣವೇ ಅಂತಾ ಪುಟ್ಟ ಊರಿನ ಮಡಿಲಿನಲ್ಲಿ ಬೆಚ್ಚಗೆ ಕೂತಿದ್ದಾರೆ.
ಮಕ್ಕಳ ಸಾಹಿತ್ಯ ಎಂದಾಗ ೮೦ರ ಹರೆಯದ ಸೀತಾರಾಮ ಭಟ್ರು ಅರ್ಧ ಬರ್ದ ನಡುಗುವ ಕೈಗಳಿಂದ ಪೆನ್ನು ಹಿಡಿದು ಟೇಬಲ್ ಮೇಲೆ ಕೂತು ಬರವಣಿಗೆ ಆರಂಭ ಮಾಡಿದ್ದಾರೆ ಎಂದಾದರೆ ಅಲ್ಲೊಂದು ಪುಟ್ಟದಾದ ಕೃತಿ ರೆಡಿಯಾಯಿತು ಅಂತ ಅರ್ಥ ಬರುತ್ತದೆ. ಇಂತಹ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆಯ ಹುಡುಕಾಟದಲ್ಲಿ ಲವಲವಿಕೆಯ ತಂಡ ಪಳಕಳರ ದೊಡ್ಡ ಮನೆಗೆ ಪುಟ್ಟದಾಗಿ ಭೇಟಿ ಕೊಟ್ಟಿತ್ತು. ಪಳಕಳರ ಮಕ್ಕಳ ಸಾಹಿತ್ಯ ಲೋಕದ ಓಟದಲ್ಲಿ ನಿಂತು ಅವರನ್ನು ಮಾತನಾಡಿಸಿತು. ಆಗ ಕಂಡದ್ದು ಬರೀ ಮಗು ಮನಸಿನ ಸಾಹಿತ್ಯ ಲೋಕ ಮಾತ್ರ. ಪಳಕಳರ ಉಳಿದೆಲ್ಲ ವಿಚಾರಗಳು ಬದಿಗೆ ಸರಿದು ನಿಂತಿತ್ತು.
ದುಡಿದದ್ದು ಎಲ್ಲವೂ ಸಾಹಿತ್ಯಕ್ಕೆ ಸುರಿದೆ...
ಮಕ್ಕಳ ಸಾಹಿತ್ಯ ಎಂದರೆ ನನ್ನ ಪ್ರಾಣ. ಅದಕ್ಕಾಗಿ ನಾನು ಏನೂ ಮಾಡಲು ಸಿದ್ದ. ಅದರ ಮೇಲಿನ ಪ್ರೀತಿಯಿಂದ ಇಂದಿಗೂ ಬರೆಯುತ್ತಿದ್ದೇನೆ. ಕೈಯಲ್ಲಿ ಪೆನ್ನು ಹಿಡಿಯಲು ತಾಕತ್ತು ಇರುವ ವರೆಗೂ ಬರೆಯುತ್ತೇನೆ. ಸರಿಸುಮಾರು ೩೬ ವರ್ಷಗಳ ಕಾಲ ಶಿಕ್ಷಕನಾಗಿ ಮೂಡುಬಿದರೆ, ಅಸುಪಾಸಿನ ಶಾಲೆಗಳಲ್ಲಿ ದುಡಿದಿದ್ದೇನೆ. ೫೦ ವರ್ಷಗಳ ಹಿಂದೆ ನನ್ನ ತಿಂಗಳ ಸಂಬಳ ೪೦ ರೂ. ಪ್ಲಸ್ ೨೧ ಭತ್ಯೆಯಾಗಿತ್ತು. ನಿವೃತ್ತನಾಗುವ ಮೊದಲು ನಾಲ್ಕು ಸಾವಿರಕ್ಕೆ ಬಂತು. ಈ ಸಂಬಳದ ಹಣದಿಂದಲೇ ನಾನು ಇಷ್ಟೊಂದು ಕೃತಿಗಳನ್ನು ಬರೆಯಲು ಸಾಧ್ಯವಾಯಿತು. ಕುಟುಂಬಕ್ಕಾಗಿ ದೊಡ್ಡ ತೋಟವಿತ್ತು. ಅದರಿಂದ ಬಂದ ಹಣವೆಲ್ಲವೂ ಕುಟುಂಬ ನಿರ್ವಹಣೆ, ಐವರು ಮಕ್ಕಳ ಪೋಷಣೆಗೆ ಅಂತ ಸಂದಾಯವಾಗುತ್ತಿತ್ತು. ನನ್ನ ಸಂಬಳ ಎಲ್ಲವೂ ಸಾಹಿತ್ಯ ಲೋಕಕ್ಕೆ ವಿನಿಯೋಗವಾಗುತ್ತಿತ್ತು. ಆದರೆ ಕುಟುಂಬದವರು ಈ ವಿಚಾರದಿಂದ ಒಂದು ಚೂರು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ ತಮ್ಮಾ.. ಅಂತಾ ಜಗುಲಿಯಲ್ಲಿ ಕೂತ ಪಳಕಳರು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಬಿಟ್ಟಿದ್ದರು.
ಪಳಕಳ ಭಟ್ಟರು ಎಂದರೆ ಹಾಂಗೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಮನೆಗೆ ಹೋಗಿ ನಿಮ್ಮ ಮುಂದಿನ ಬದುಕಿಗಾಗಿ ಗ್ರಾಜ್ಯುವೇಟಿ ಹಾಗೂ ಪಿಎಫ್ ಹಣ ಅಂತಾ ೨ ಲಕ್ಷ ರೂ. ಕೊಟ್ಟು ಬಿಡುತ್ತೇವೆ ಎಂದಾಗ ಪಳಕಳರ ಮನಸ್ಸಿನಲ್ಲಿ ಬಂದ ಐಡಿಯಾ ಏನೂ ಗೊತ್ತಾ..? ನಮ್ಮ ಊರಿನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಈ ಹಣ ವಿನಿಯೋಗವಾಗಬೇಕು. ಬಡವರ ವೈದ್ಯಕೀಯ ಖರ್ಚು ಹಾಗೂ ಮಕ್ಕಳ ಸಾಹಿತ್ಯಕ್ಕಾಗಿ ಇನ್ನಷ್ಟೂ ಕೆಲಸ ಮಾಡಬೇಕು ಎಂದುಕೊಂಡು ೨ ಲಕ್ಷಕ್ಕೆ ಮತ್ತೊಂದು ಲಕ್ಷ ಸೇರಿಸಿಕೊಂಡು ಪಳಕಳ ಪ್ರತಿಷ್ಠಾನ(ರಿ) ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡು ಈಗಲೂ ಈ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಅವಿಭಜಿತ ಕರಾವಳಿ ಜಿಲ್ಲೆಯ ಎಲ್ಲ ಮಕ್ಕಳ ಸಾಹಿತಿಗಳನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಲು ಹೋಗಿ ಪಳಕಳ ಹಾಗೂ ಅವರ ಸ್ನೇಹಿತರ ವರ್ಗ ಸೇರಿಕೊಂಡು ದಕ್ಷಿಣ ಕನ್ನಡ ಮಕ್ಕಳ ಸಾಹಿತ್ಯ ಸಂಗಮ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದರು.
ಮಕ್ಕಳ ಸಾಹಿತ್ಯಕ್ಕೆ ಯಾಕೆ ಬಂದ್ರು..
ಪಳಕಳರು ಮೂಡುಬಿದರೆಯ ಜೈನ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಹಾಗೂ ಸಮಾಜಶಾಸ್ತ್ರ ವಿಚಾರಗಳನ್ನು ಭೋದಿಸುತ್ತಿದ್ದಾಗ ಅವರಿಗೊಂದು ಕತೆ ಹೇಳುವ ಪಾಠವಿತ್ತು. ಮನೆಯಲ್ಲಿ ಅವರ ಸೋದರತ್ತೆ ಚೆನ್ನಮ್ಮ ಹೇಳುತ್ತಿದ್ದ ಕತೆಗಳಿಂದ ಸೀತಾರಾಮರು ಈ ಹಿಂದೆಯೇ ಪ್ರೇರಿತಗೊಂಡಿದ್ದರು. ಪಳಕಳದ ಊರಿನಿಂದ ಶಾಲೆಗೆ ನಡೆದುಕೊಂಡು ಬರುವ ಹಾದಿಯಲ್ಲಿ ಪುಟ್ಟ ಪುಟ್ಟ ಕವನ, ಕತೆಗಳು ರಸ್ತೆಯಲ್ಲಿ ಹುಟ್ಟಿಕೊಳ್ಳುತ್ತಿದ್ದವು. ಅವುಗಳನ್ನು ಪುಟ್ಟದಾದ ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದರು.
ತಮ್ಮದೇ ಪ್ರಕಾಶನ ಸಂಸ್ಥೆ ಶಿಶು ಸಾಹಿತ್ಯ ಮಾಲೆ ಹಾಗೂ ಕಿನ್ನಿಗೋಳಿಯ ಯುಗಪುರುಷ ಪ್ರಕಾಶನದ ಮೂಲಕ ಈ ಎಲ್ಲ ಕತೆ, ಕವನಗಳು ಪುಸ್ತಕ ರೂಪದಲ್ಲಿ ಬಂದು ಹೋದವು.. ಎಲ್ಲರೂ ಮಕ್ಕಳ ಸಾಹಿತ್ಯವನ್ನು ಉಪೇಕ್ಷೆ ದೃಷ್ಟಿಯಿಂದ ನೋಡುತ್ತಿದ್ದಾಗ ಪಳಕಳ ಮಾತ್ರ ಮಕ್ಕಳ ಸಾಹಿತ್ಯವನ್ನು ತನ್ನ ಬದುಕಿನಷ್ಟೇ ಪ್ರೀತಿಸ ತೊಡಗಿದರು. ಇಡೀ ಸಾಹಿತ್ಯದಲ್ಲಿಯೇ ಬದುಕು ಕಟ್ಟ ತೊಡಗಿದರು. ಸಾಹಿತ್ಯ ಜತೆಗೆ ತಮ್ಮ ಊರಿನ ಅತೀ ಬಡವ ಕುಟುಂಬಗಳನ್ನು ಹುಡುಕಿ ತನ್ನ ಜಮೀನಿನಿಂದ ೫ ಸೆಂಟ್ಸ್ ಜಾಗವನ್ನು ಕೊಟ್ಟು ಅವರಿಗೆ ಬದುಕಲು ಹೇಳಿ ಕೊಟ್ಟಿದ್ದಾರೆ.
ಅಂದಹಾಗೆ ಪಳಕಳರ ಕತೆ -ಕವನಗಳನ್ನು ಸಿರೀಯಸ್ ಆಗಿ ಓದುವ ಅಭಿಮಾನಿಗಳ ಬಳಗ ಕೂಡ ಬಹಳ ದೊಡ್ಡದಿದೆ. ಪಳಕಳರ ಸಾಹಿತ್ಯವನ್ನು ನೋಡಿದ ಮಣಿಪಾಲದ ವಿದ್ಯಾರ್ಥಿಯೊಬ್ಬರು ಈಗ ‘ಪಳಕಳ ಸೀತಾರಾಮ ಭಟ್ಟರ ಬದುಕು- ಬರಹ ’ಎಂಬ ವಿಚಾರದಲ್ಲಿ ಪಿಎಚ್‌ಡಿ ಪ್ರಬಂಧ ಮಾಡುತ್ತಿದ್ದಾರೆ. ಹತ್ತಾರು ಪ್ರಶಸ್ತಿಗಳನ್ನು ನೀಡಿ ಹಲವಾರು ಸಂಘ ಸಂಸ್ಥೆಗಳು ಅವರನ್ನು ಗೌರವದಿಂದ ನೋಡಿಕೊಂಡಿದೆ. ಪತ್ನಿ ವಸಂತಿಯ ಜತೆಗೆ ಐವರು ಮಕ್ಕಳೊಂದಿಗೆ ಸೀತಾರಾಮರು ಕಾಂಕ್ರೀಟಿಕರಣನದ ನಗರದಿಂದ ದೂರ ಉಳಿದು ನೆಮ್ಮದಿ ಕಾಣುತ್ತಿದ್ದಾರೆ. ಪಳಕಳರು ಕೊನೆದಾಗಿ ಹೇಳುವುದು ಇಷ್ಟೇ..‘ ಮಕ್ಕಳಿಗೆ ಒಳ್ಳೆಯ ಸಾಹಿತ್ಯದ ರುಚಿ ಹತ್ತಿಸಿಬಿಡಿ. ಮಕ್ಕಳು ಆಟದ ಸಾಮಗ್ರಿಗಳಿಗೆ ಹಟ ಹಿಡಿಯುವಂತೆ.. ಸಾಹಿತ್ಯ ಓದುವ ಚಟ ಹಿಡಿಸಿ..ಇದು ಮಕ್ಕಳ ಸಾಹಿತ್ಯ ಲೋಕಕ್ಕೆ ಹೆತ್ತವರು ಮಾಡುವ ಪುಟ್ಟ ಕೆಲಸ.. ಮಕ್ಕಳ ದಿನಾಚರಣೆ ಸಮಯದಲ್ಲಾದರೂ ಮನೆಗೊಂದು ಒಳ್ಳೆಯ ಮಕ್ಕಳ ಸಾಹಿತ್ಯದ ಕೃತಿಯನ್ನು ಮಕ್ಕಳಿಗೆ ಕೊಟ್ಟು ಬಿಡಿ. ಇದರಿಂದ ಸಾಹಿತ್ಯ ಉಳಿಯುತ್ತದೆ ಜತೆಗೆ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಳ್ಳುತ್ತಾರೆ’ ಇಡೀ ಮಾತುಕತೆಯಲ್ಲಿ ಪಳಕಳ ಮಾತನಾಡಿದ್ದು ಬರೀ ಮಕ್ಕಳ ಸಾಹಿತ್ಯ ಮಾತ್ರ.. ಇಂತಹ ವ್ಯಕ್ತಿಯನ್ನು ಮಕ್ಕಳ ದಿನಾಚರಣೆಯ ಟೈಮ್‌ನಲ್ಲಿ ನೆನೆಯುವುದರಲ್ಲಿ ಏನಿದೆ ತಪ್ಪು..?

Thursday, April 7, 2011

ಸ್ಯಾಂಡಲ್‌ವುಡ್‌ನಲ್ಲಿ ಕುಸಲ್

ತುಳು ರಂಗಭೂಮಿಯಲ್ಲಿ ಹೊರಳಾಡಿಕೊಂಡಿದ್ದ ಕುಸಲ್ದರಸೆ ನವೀನ್ ಡಿ ಪಡೀಲ್ ಈಗ ಸ್ಯಾಂಡಲ್‌ವುಡ್ ಪಡಸಾಲೆಯಲ್ಲಿ ಬಂದು ನಿಂತಿದ್ದಾರೆ. ಇತ್ತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಂತರ ಸ್ಯಾಂಡಲ್‌ವುಡ್‌ನಲ್ಲಿ ನವೀನ್ ಬಣ್ಣ ಹಾಕುತ್ತಿದ್ದಾರೆ. ಕರಾವಳಿಗೆ ಸೀಮಿತವಾಗಿದ್ದ ಇಬ್ಬರ ಜುಗಲ್ ಬಂ... ಇನ್ನೂ ಮುಂದೆ ಸ್ಯಾಂಡಲ್‌ವುಡ್‌ನಲ್ಲೂ ಕಾಣಬಹುದು.

ತುಳು ರಂಗಭೂಮಿ ಈಗ ಮತ್ತೆ ಸುದ್ದಿಯಲ್ಲಿದೆ. ತುಳು ರಂಗಭೂಮಿಯಲ್ಲಿ ಹೊರಳಾಡಿಕೊಂಡಿದ್ದ ಕುಸಲ್ದರಸೆ ನವೀನ್ ಡಿ ಪಡೀಲ್ ಈಗ ಸ್ಯಾಂಡಲ್‌ವುಡ್ ಪಡಸಾಲೆಯಲ್ಲಿ ಬಂದು ನಿಂತಿದ್ದಾರೆ. ರಂಗವೇದಿಕೆಯ ಮೇಲೆ ನಿಂತು ತನ್ನದೇ ಕಾಮಿಡಿ ಟ್ರೆಂಡಿನಿಂದ ಲಕ್ಷಾಂತರ ಪ್ರೇಕ್ಷಕರ ಮನಸ್ಸು ಗೆದ್ದ ಚೋರ ನವೀನ್ ಈಗ ಕನ್ನಡದ ಮೂರು ಚಿತ್ರಗಳಿಗೆ ಸೆಲೆಕ್ಟ್ ಆಗಿದ್ದಾರೆ. ನಿರ್ದೇಶಕ ಅಭಯ ಸಿಂಹರ ‘ಶಿಕಾರಿ’ ಶಶಾಂಕ್ ನಿರ್ದೇಶನದ ಜರಾಸಂಧ ಹಾಗೂ ಹಿಮಾಯತ್ ಖಾನ್ ನಿರ್ದೇಶನದ ಅಚ್ಚುಮೆಚ್ಚು ಚಿತ್ರಗಳಲ್ಲಿ ನವೀನ್ ಹಾಸ್ಯ ನಟನಾಗಿ ಕಂಗೊಳಿಸಲಿದ್ದಾರೆ. ಈ ಮೂರು ಚಿತ್ರಗಳ ಚಿತ್ರೀಕರಣ ಭಾಗ ಪೂರ್ಣಗೊಂಡಿದ್ದು ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಮೂಲಕ ಕರಾವಳಿಯ ಪ್ರತಿಭೆಗಳನ್ನು ಬದಿಗೊತ್ತಿ ಮೆರೆಯುತ್ತಿದ್ದ ಗಾಂನಗರದಲ್ಲಿ ಕರಾವಳಿಯ ಪ್ರತಿಭೆಗಳು ಇಣುಕಾಡಲು ಆರಂಭ ಮಾಡಿದ್ದಂತಾಗಿದೆ.
ಇತ್ತೀಚೆಗಷ್ಟೇ ತುಳು ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ನಂತರ ನವೀನ್ ಡಿ ಪಡೀಲ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡಿರೋದು ಮಾತ್ರ ವಿಶೇಷ ಆಸಕ್ತಿ ಮೂಡಿಸಿದೆ. ಈ ಹಿಂದೆ ನವೀನ್ ಡಿ ಪಡೀಲ್ ತುಳು ರಂಗಭೂಮಿಯ ನಿರ್ದೇಶಕ ದೇವದಾಸ್ ಕಾಪಿಕಾಡ್‌ರ ‘ಚಾಪರ್ಕ’ ಟೀಮ್‌ನ ಸದಸ್ಯರಾಗಿದ್ದವರು. ದೇವ್ ಪ್ಲಸ್ ನವೀನ್ ಕಾಂಬೀನೇಷನ್‌ನಲ್ಲಿ ಮೂಡಿ ಬಂದ ನಾಟಕಗಳು ಸೂಪರ್ ಹಿಟ್ ಅನ್ನಿಸಿಕೊಂಡಿತ್ತು. ಇಬ್ಬರ ನಟನೆಯ ಜುಗಲ್‌ಬಂ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿಬಿಟ್ಟಿತ್ತು. ನವೀನ್ ಚಾಪರ್ಕ ತಂಡದಲ್ಲಿ ಬೆಳೆಯುತ್ತಾ ಹೋದಂತೆ ಇತ್ತ ತಂಡದಲ್ಲಿ ಬಿರುಕು ಮೂಡಲಾರಂಭಿಸಿತು. ನವೀನ್ ತಂಡದಿಂದ ಹೊರಬಿದ್ದರು. ದೇವದಾಸ್‌ಗೆ ಪೈಪೋಟಿ ನೀಡಲು ನವೀನ್ ಮತ್ತೊಂದು ನಾಟಕ ತಂಡಕ್ಕೆ ಭರ್ತಿಯಾದರು. ನಂತರ ಇಬ್ಬರ ನಡುವೆ ಮುಸುಕಿನ ಗುದ್ದಾಟಕ್ಕೆ ಕಹಳೆ ಮೊಳಗಿತ್ತು.
ನವೀನ್ ನಾಟಕಗಳ ಜತೆಗೆ ಕೋಸ್ಟಲ್‌ವುಡ್‌ನಲ್ಲಿ ‘ಬಿರ್ಸೆ’ ತುಳು ಸಿನಿಮಾ, ತುಳು ಸಿರೀಯಲ್‌ನಲ್ಲಿ ಬ್ಯುಸಿಯಾಗಿದ್ದಾಗ ಇತ್ತ ದೇವದಾಸ್ ಕಾಪಿಕಾಡ್ ನಿರ್ದೇಶಕ ರಮೇಶ್ ಅರವಿಂದ್‌ರ ‘ವೆಂಕಟ ಇನ್ ಸಂಕಟ’ದ ಹಾಸ್ಯ ಪಾತ್ರಕ್ಕೆ ಸೆಲೆಕ್ಟ್ ಆಗಿ ಹೋದರು. ಇತ್ತೀಚೆಗೆ ಬಂದು ಹೋದ ‘ಕಾರ್ತಿಕ್’ ಹಾಗೂ ಇನ್ನೂ ಬಿಡುಗಡೆಯಾಗದ ಸ್ಮೈಲ್ ಸೀನು ನಿರ್ದೇಶನದ ‘ತೂಫಾನ್’ನಲ್ಲೂ ದೇವದಾಸ್ ಇಣುಕಾಡಿದ್ದಾರೆ. ಆದರೆ ಕರಾವಳಿಯ ನಾಟಕಗಳಲ್ಲಿ ಮಿಂಚಿದ ದೇವದಾಸ್ ಕನ್ನಡದ ಪ್ರೇಕ್ಷಕರ ಎದುರು ಮಾತ್ರ ಬೋರಲಾಗಿ ಬಿದ್ದಿದ್ದಾರೆ ಎನ್ನುವ ಮಾತಿದೆ. ಸ್ಯಾಂಡಲ್‌ವುಡ್ ಸಿನ್ಮಾ ಜಗತ್ತಿನಲ್ಲಿ ತನ್ನ ನಿಜವಾದ ಒರಿಜಿನಾಲಿಟಿಯನ್ನು ಬಿಚ್ಚಿಡುವಲ್ಲಿ ದೇವದಾಸ್ ಸೋತು ಹೋಗಿದ್ದಾರೆ ಎನ್ನುವ ಮಾತು ಕೂಡ ಕರಾವಳಿ ತುಂಬಾ ಹರಡಿ ಬಿಟ್ಟಿದೆ. ಮೂರು ಚಿತ್ರಗಳ ನಂತರ ದೇವದಾಸ್ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿ ಮಲಗುತ್ತಿಲ್ಲ. ಸಿನ್ಮಾ ಬೇಡ ರಂಗಭೂಮಿಯೇ ಸಾಕು ಬಿಡಿ ಎಂದು ದೇವದಾಸ್ ನಗುತ್ತಾ ಹೇಳುತ್ತಿದ್ದಾರೆ. ಇತ್ತ ಕಡೆ ಕುಸಲ್ದರಸೆ ನವೀನ್ ಡಿ ಪಡೀಲ್ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ದೇವು ಕಳೆದು ಹೋದ ಹಾಗೇ ನವೀನ್ ಕಳೆದು ಹೋಗುತ್ತಾರಾ ಕಾಲವೇ ನಿಂತು ಉತ್ತರ ಹೇಳಬೇಕು. ಟೋಟಲಿ ಇಬ್ಬರು ಘಟಾನುಘಟಿ ರಂಗಭೂಮಿ ನಟರ ನಡುವೆ ಕೋಲ್ಡ್ ವಾರ್ ಮತ್ತೆ ಆರಂಭವಾಗುವ ಸೂಚನೆಯಂತೂ ಬಂದಿದೆ ಗ್ಯಾರಂಟಿ.

Tuesday, April 5, 2011

ವರ್ಲ್ಡ್ ಫೇಮಸ್ ಕಪ್‌ನಲ್ಲಿ ಕಲ್ಲಡ್ಕ ಟೀ



ಕಲ್ಲಡ್ಕದ ಸಣ್ಣ ಊರಿನ ಸಣ್ಣ ಹೋಟೆಲ್‌ನಲ್ಲಿ ತಯಾರಾಗುವ ಕೆ.ಟಿ ಈಗ ವಿಶ್ವದ ಮೂಲೆ ಮೂಲೆಯಲ್ಲೂ ಫೇಮಸ್. ಯಾಕೆ ಅಂತೀರಾ ಪುಟ್ಟ ಊರಿನ ಈ ಕೆ.ಟಿ. ಗೂಗಲ್ ಸರ್ಚ್‌ನಲ್ಲಿ ಅತೀ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆ. ಏನಪ್ಪಾ ಅಂತ ಕೆ.ಟಿಯ ಸ್ಟೈಲ್.

‘ವ್ಹಾವ್ ಕ್ಯಾ ಭಾತ್ ಹೈ...ಕೆ.ಟೀ.ಕಾ ಸ್ಟೈಲ್ ಯೀ ಬಹುತೀ ಅಲಗ್ ಹೈ’ ಎಂದು ಬಾಯಿ ಚಪ್ಪರಿಸಿಕೊಂಡು ಎನ್‌ಡಿಟಿವಿ ಗುಡ್ ಟೈಮ್ಸ್‌ನ“ಹೈವೇ ಆನ್ ಮೈ ಪ್ಲೇಟ್’ಕಾರ್‍ಯಕ್ರಮ ನಿರೂಪಕರಾದ ರಾಕಿ ಸಿಂಗ್ ಆಂಡ್ ಮಯೂರ್ ಶರ್ಮ ಹೇಳುತ್ತಿದ್ದಾಗ ನಿಜಕ್ಕೂ ಅವರು ಹೇಳಿದ್ದು ನೂರಕ್ಕೆ ನೂರರಷ್ಟು ಮಾತು ನಿಜ ಅನ್ನಿಸಿಬಿಡ್ತು. ಅರ್ಧ ಟೀ ಅರ್ಧ ಹಾಲು ಇದು ಕೆ.ಟೀ. ಸ್ಪೆಶಲ್ಲೂ... ಕೆ.ಟೀ.ಯ ಕುರಿತು ಬರೀ ಕರಾವಳಿ ಯಾಕೆ ಇಡೀ ದೇಶವೇ ಮಾತನಾಡುತ್ತದೆ. ವಿಶ್ವದ ಮಾಹಿತಿಯ ಕಣಜ ಎಂದೇ ಬಿಂಬಿತ ಗೂಗಲ್ ಸರ್ಚ್‌ನಲ್ಲಿ ಕೆ.ಟೀ.ಯ ಕುರಿತು ಹುಡುಕಾಡಿ ನೋಡಿ. ಕೆ.ಟೀಯ ಮೇಲಿನ ಹತ್ತಾರು ಪುಟಗಳು ಏಕ್‌ದಂ ತೆರೆದು ಕೂರುತ್ತೆ. ಬ್ಲಾಗ್‌ಗಳ ಮೇಲೆ ಹತ್ತಾರು ಬರಹಗಳು ಓಡಾಡುತ್ತಿರುತ್ತದೆ. ಅದೇ ಕೆ.ಟೀಗೆ ಇರುವ ಗತ್ತು, ಗಮ್ಮತ್ತು ..!!
ಅಂದಹಾಗೆ ಕೆ.ಟೀ ಬಗ್ಗೆ ಇನ್ನೂ ಕಪ್‌ಗೆ ಇಳಿದು ಮಾತನಾಡೋಣ. ಮಂಗಳೂರು ಟು ಮಾಣಿಯ ರಸ್ತೆಯಲ್ಲಿ ಟ್ರಾವೆಲ್ ಮಾಡುತ್ತಿರುವಾಗ ಕಲ್ಲಡ್ಕ ಎಂಬ ಪುಟ್ಟ ಊರೊಂದು ಥಟ್ ಅಂತಾ ಕಾಣಿಸಿಕೊಳ್ಳುತ್ತದೆ. ಇದೇ ಊರಿನಲ್ಲಿ ಶ್ರೀ ಲಕ್ಷ್ಮಿ ನಿವಾಸ್ ಹೋಟೆಲ್ ನಾಮ ಫಲಕ ಎದುರುಗೊಳ್ಳುತ್ತದೆ. ೬೦ರ ದಶಕದಲ್ಲಿ ಲಕ್ಷ್ಮಿ ನಾರಾಯಣ ಹೊಳ್ಳ ಹಾಗೂ ಅವರ ಪುತ್ರ ನರಸಿಂಹ ಹೊಳ್ಳ ಈ ಕೆ.ಟೀಯ ಜನ್ಮದಾತರು. ಅಂದಿನಿಂದ ಈ ಕೆ.ಟೀಗೆ ಅದೇ ಟೇಸ್ಟ್... ಅದೇ ಸ್ಟೈಲ್,ಲುಕ್ ಇದೆ ಎಂದರೆ ಎಲ್ಲರೂ ನಂಬಬೇಕು. ಹೊಳ್ಳರ ಇಡೀ ಕುಟುಂಬ ಈ ಕೆ.ಟೀಯಲ್ಲಿ ಮುಳುಗಿ ಎದ್ದೇಳುತ್ತಿದೆ. ನರಸಿಂಹ ಹೊಳ್ಳರ ಹಿರಿಯ ಪುತ್ರ ರಾಜೇಂದ್ರ ಹೊಳ್ಳ, ಶಿವರಾಮ ಹೊಳ್ಳ, ಶ್ರೀನಿವಾಸ ಹೊಳ್ಳ ಎಲ್ಲರೂ ಇದೇ ಕೆ.ಟೀಯ ಕಿಚನ್‌ನಲ್ಲಿದ್ದಾರೆ.
ಹೆಸರು ಹೇಗೆ ಬಂತು:
ಕಲ್ಲಡ್ಕದಲ್ಲಿ ತಯಾರಾಗುವ ಟೀಯನ್ನು ಕೆ.ಟೀ ಅಂತ ಕರೆಯುವುದು ಟು ಕಾಮನ್ ಬಿಡಿ. ಆದರೆ ಈ ಹೆಸರಿನ ಹಿಂದೆ ಬಹಳ ದೊಡ್ಡ ರಹಸ್ಯ ಇದೆ. ಲಕ್ಷ್ಮಿನಾರಾಯಣ ಹೊಳ್ಳರು ೬೦ರ ದಶಕದಲ್ಲಿ ಶ್ರೀ ಲಕ್ಷ್ಮಿ ನಿವಾಸ್ ಹೋಟೆಲ್ ತೆರೆದಾಗ ಅಲ್ಲಿ ಕೆ.ಟೀ ಇರಲಿಲ್ಲ. ಆದರೆ ಇದೇ ಸಮಯದಲ್ಲಿ ಕೊಡಗಿನಿಂದ ಬರುತ್ತಿದ್ದ ಕೆಳಗೂರು ಟೀಯನ್ನು ಬಳಸುತ್ತಿದ್ದಾಗ ಅಲ್ಲಿಗೆ ಬಂದ ಹಿರಿಯ ಗ್ರಾಹಕರೊಬ್ಬರು ‘ಕಲ್ಲಡ್ಕ ಸ್ಪೆಶಲ್ ಟೀ’ ಅಂತಾ ಹೆಸರು ಕೊಟ್ಟರಂತೆ. ಅದೇ ಮುಂದೆ ಕೆ.ಟೀ ಅಂತಾ ಬದಲಾವಣೆಗೊಂಡಿತು. ಕೆಳಗೂರು ಟೀಗೂ ಕೆ.ಟಿಗೂ ಬಹಳ ಹತ್ತಿರದ ನಂಟಿತ್ತು.
ಆದರೆ ಮಂಗಳೂರಿನ ಟೀ ಏಜೆಂಟ್‌ರೊಬ್ಬರು ಕೆಳಗೂರು ಟೀಯ ಏಜೆಂಟ್‌ಶಿಫ್‌ನ್ನು ಬಿಟ್ಟು ಹೋದ ನಂತರ ಅಲ್ಲಿಗೆ ದೇವಗಿರಿ ಟೀ ಬಂತು. ಆದರೂ ಕೆ.ಟೀಯಲ್ಲಿ ಯಾವುದೇ ಚೇಂಜ್ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಶ್ರೀಲಕ್ಷ್ಮಿ ನಿವಾಸ್‌ನ ಮಾಲೀಕ ಶಿವರಾಮ ಹೊಳ್ಳ. ಕೆ.ಟೀಯ ಜತೆಯಲ್ಲಿ ರಿಮ್‌ಜಿಮ್ ಕಾಫಿ ಕೂಡ ಅಷ್ಟೇ ಫೇಮಸ್. ಕಲ್ಲಡ್ಕದಲ್ಲಿ ಮಾಡುವ ಡಿಫರೆಂಟ್ ಕಾಫಿಯನ್ನು ಕುಡಿದ ನಂತರ ಗ್ರಾಹಕನೊಬ್ಬ ‘ಜುಮ್’ ಆಯಿತು ಎಂದನಂತೆ. ಅಲ್ಲಿಂದ ಕಲ್ಲಡ್ಕದ ಕಾಫಿ ‘ರಿಮ್‌ಜಿಮ್ ಕಾಫಿ’ ಆಯಿತು ಎನ್ನುತ್ತದೆ ಶ್ರೀಲಕ್ಷ್ಮಿ ನಿವಾಸ್‌ನ ಹಿಸ್ಟರಿ ಬುಕ್.
ಕೆ.ಟೀಯ ಹಿಂದಿನ ಕೈ:
ಕರಾವಳಿಯ ಕೆ.ಟೀಯ ಕುರಿತು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ಮಾತನಾಡುತ್ತಾರೆ ಬಿಡಿ. ‘ಅದರ ಟೇಸ್ಟ್‌ಯೇ ಬೇರೆ... ಅದನ್ನು ಕುಡಿಯುವ ಸ್ಟೈಲೇ ಬೇರೆ ಕಣ್ರಿ ’ಎಂದು ರೆಬೆಲ್‌ಸ್ಟಾರ್ ಅಂಬರೀಷ್ ಕಲ್ಲಡ್ಕಕ್ಕೆ ಬಂದಿದ್ದಾಗ ಕೆ.ಟೀ ಕುಡಿದು ಮಾತನಾಡಿದರಂತೆ. ಕನ್ನಡ ಚಿತ್ರರಂಗದ ನಟ ದರ್ಶನ್, ನಟಿ ರಾಕಾ ಎಲ್ಲರೂ ಕೆ.ಟೀಯ ಟೇಸ್ಟ್‌ನ್ನು ಚೆಕ್ ಮಾಡಿ ಹೊಗಳಿ ಹೋದವರು ಎನ್ನುತ್ತಾರೆ ಶಿವರಾಮ ಹೊಳ್ಳರು. ನಟಿ ರಾಕಾವಂತೂ ಕರಾವಳಿಗೆ ಭೇಟಿ ನೀಡಿದಾಗ ಇಲ್ಲಿಗೆ ಬಂದೇ ಹೋಗುತ್ತಾರೆ.ರಾಜಕಾರಣಿಗಳಾದ ಆಸ್ಕರ್ ಫೆರ್ನಾಂಡೀಸ್, ಡಾ.ವಿ.ಎಸ್. ಆಚಾರ್ಯ, ರಮಾನಾಥ ರೈ ಎಲ್ಲರೂ ಶ್ರೀ ಲಕ್ಷ್ಮಿ ನಿವಾಸ್‌ನ ಬೇಜುಗಳಲ್ಲಿ ಕೂತು ಕೆ..ಟೀ ವಿದ್ ಗೋಳಿಬಜ್ಜೆ ತಿಂದು ಹೋಗುತ್ತಾರೆಯಂತೆ.
ಕೆ.ಟೀಯ ಫೇಮಸ್‌ಗಿರಿಯನ್ನು ನೋಡಿ ಇದರ ನಕಲಿ ಟೀ, ಕಾಫಿ ಶಾಪ್‌ಗಳು ಕರಾವಳಿ ಹಾಗೂ ಇತರ ಭಾಗದಲ್ಲಿ ತಲೆ ಎತ್ತಿದೆ. ಆದರೆ ಇಲ್ಲಿನ ಒರಿಜಿನಾಲಿಟಿ ಮಾತ್ರ ಎಲ್ಲೂ ಸಿಗುವುದಿಲ್ಲ . ಇಲ್ಲಿನ ಭೌಗೋಳಿಕ ಲಕ್ಷಣ ಹಾಗೂ ದೇವಿಯ ಮಹಿಮೆ ಕೆ.ಟೀ.ಯ ಒರಿಜಿನಾಲಿಟಿ ಉಳಿದುಕೊಳ್ಳಲು ಕಾರಣ ಎನ್ನೋದು ಶಿವರಾಮ ಹೊಳ್ಳರು ನೀಡುವ ಸಾಬೂಬು. ಕಳೆದ ೨೦ ವರ್ಷಗಳಿಂದ ಶ್ರೀಲಕ್ಷ್ಮಿ ನಿವಾಸ್‌ನಲ್ಲಿ ದುಡಿಯುತ್ತಿರುವ ವಿಠಲ್ ಈಗ ಕೆ.ಟೀಯ ಕಿಚನ್ ಉಸ್ತುವಾರಿ ನೋಡುವವರು. ಇದಕ್ಕಿಂತ ಮೊದಲು ಲಕ್ಷ್ಮಿ ನಾರಾಯಣ ಹೊಳ್ಳರ ಕಾಲದಲ್ಲಿ ಸುಬ್ರಾಯ ಪ್ರಭುಗಳಿದ್ದರೂ ನಂತರ ನರಸಿಂಹ ಹೊಳ್ಳರ ಕಾಲದಲ್ಲಿ ರಾಮಚಂದ್ರ ಆಚಾರ್ ಇಲ್ಲಿ ಕೆ.ಟೀ ಮಾಡಿಕೊಡುತ್ತಿದ್ದರು. ಎಲ್ಲರೂ ಕಲ್ಲಡ್ಕದವರು ಹಾಗೂ ಸುದೀರ್ಘ ಕಾಲದವರೆಗೂ ಇಲ್ಲಿ ದುಡಿದವರು.
ತಯಾರು ಮಾಡೋದು ಹೇಗೆ:
ಕೆ.ಟೀ ಕುಡಿಯೋದು ಗೊತ್ತಾ ಆದರೆ ಮಾಡೋದು ಹೆಂಗೆ ಮಾರಾಯ್ರೆ ಅಂತಾ ಕೇಳಬಹುದು. ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಹೀಗಿವೆ. ದಪ್ಪ ಹಾಲು ಅದು ಊರಿನ ಹಾಲಿರಬಹುದು ಅಥವಾ ನಂದಿನಿಯ ಹಾಲು ಕೂಡ ಉತ್ತಮ. ಆದರೆ ಅದಕ್ಕೆ ಹಾಕುವ ನೀರಿನ ಪ್ರಮಾಣ ಕಡಿಮೆ ಇರಬೇಕು. ದಪ್ಪ ಡಿಕ್ಕಷನ್ ಹಾಗೂ ಸಕ್ಕರೆ ಇದ್ದಾರೆ ಸಾಕು ಬಿಡಿ. ಬುರುಬುರು ನೊರೆಯ ಅರ್ಧ ಹಾಲಿನ ಅರ್ಧ ಟೀಯ ಸಖತ್ ಕೆ.ಟೀ ರೆಡಿಯಾಗುತ್ತದೆ. ಬರೀ ಒಂದು ಲೋಟಕ್ಕೆ ೮ ರೂ. ಮಾತ್ರ. ಅದು ರಿಮ್‌ಜಿಮ್‌ಗೂ ಕೂಡಾ ಸೇಮ್ ರೇಟ್ ಬಿಡಿ. ಅಂದಹಾಗೆ ಕಲ್ಲಡ್ಕಕ್ಕೆ ಬಂದಾಗ ಕೆ.ಟೀ ಕುಡಿಯೋದನ್ನು ಮರೆಯಬೇಡಿ. ಶ್ರೀಲಕ್ಷ್ಮಿನಿವಾಸ್ ಬೆಳಗ್ಗೆ ೫.೩೦ರಿಂದ ೮ರವರೆಗೆ ನಿಮಗಾಗಿ ಬಾಗಿಲು ತೆರೆದು ಕೂತಿರುತ್ತದೆ. ಕಾಲ್ ಮಾಡಿ: ೦೮೨೫೫-೨೭೫೩೫೯

Monday, April 4, 2011

ತೆಲಿಕೆದ ಅರಸ ದೇವದಾಸ



ಗುಂಗುರು ಕೂದಲಿನ ವಿಚಿತ್ರ ಹೇರ್ ಸ್ಟೈಲ್. ಹಾಸ್ಯಕ್ಕಾಗಿಯೇ ಹುಟ್ಟಿ ಬಂದಿದ್ದಾರೆ ಎನ್ನುವುದಕ್ಕೆ ಮುಖದಲ್ಲಿ ತುಂಬಿ ತುಳುಕುವ ನಗು. ಇದು ಕರಾವಳಿಯ ಬ್ರಾಂಡ್ ಅಂಬಾಸೀಡರ್ ಎಂದೇ ಗುರುತಿಸಲಾಗುವ ಕಲಾವಿದ, ನಿರ್ದೇಶಕ ಹೀಗೆ ಹತ್ತಾರು ನೇಮ್ ಪ್ಲೇಟ್‌ಗಳನ್ನು ತೂಗು ಹಾಕಿದ ಕಾಪಿಕಾಡಿನ ದೇವದಾಸ್‌ರ ಶಾರ್ಟ್ ಇಂಟರ್‌ಡಕ್ಷನ್.

ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಭಾಷೆಯ ದೊಡ್ಡ ಚಿತ್ರವೊಂದು ರಿಲೀಸ್ ಆಗುತ್ತೆ ಎನ್ನುವ ಸುದ್ದಿ ಬಂದ ಕೂಡಲೇ ಇತರ ಭಾಷೆಯ ಚಿತ್ರಗಳು ಬದಿಗೆ ಸರಿದು ನಿಂತು ನಿಲ್ಲುತ್ತದೆ. ದೊಡ್ಡ ಚಿತ್ರಗಳ ಮುಂದೆ ತಮ್ಮ ಚಿತ್ರ ಎಲ್ಲಿ ಕಳೆದು ಹೋಗುತ್ತೋ ಎನ್ನುವ ಸಣ್ಣ ಭಯ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಾಡುತ್ತಿರುತ್ತದೆ. ಆದರೆ ತುಳುನಾಡು ಮಾತ್ರ ಟೋಟಲಿ ಡಿಫರೆಂಟ್. ಇಲ್ಲಿ ತುಳುನಾಟಕಗಳು ಬಂದರೆ ಸಾಕು ಸಿನಿಮಾ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿರುತ್ತದೆ. ಸಿನಿಮಾಗಳು ಸೆಂಚುರಿ ಬಾರಿಸದೇ ಇರಬಹುದು ಆದರೆ ತುಳುನಾಟಕಗಳಂತೂ ಸೆಂಚುರಿ ಮೇಲೆ ಸೆಂಚುರಿ ಪ್ರದರ್ಶನ ಕಾಣಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ನಿಂದ ಚಿತ್ರ ಗೆಲ್ಲಬಹುದು. ಆದರೆ ಇಲ್ಲಿ ಅದ್ಯಾವುದೋ ಇಲ್ಲ...ಜಸ್ಟ್ ಫಾರ್ ಕಾಮಿಡಿ ಪ್ಲಸ್ ಮೆಸೇಜ್ ಇದ್ರೆ ಸಾಕು. ನಾಟಕ ಸೂಪರ್ ಹಿಟ್ ! ಇದು ತುಳು ರಂಗಭೂಮಿಗೆ ಇರುವ ಕೆಪಾಸಿಟಿ .
ಇಂತಹ ಒಂದು ರಂಗಭೂಮಿಯಲ್ಲಿ ಆಳ್ವಿಕೆ ಮಾಡುತ್ತಿರುವವರು ತೆಲಿಕೆದ ಅರಸ ( ನಗುವಿನ ಅರಸ) ದೇವದಾಸ ಕಾಪಿಕಾಡು. ಗುಂಗುರು ಕೂದಲಿನ ವಿಚಿತ್ರ ಹೇರ್ ಸ್ಟೈಲ್. ಹಾಸ್ಯಕ್ಕಾಗಿಯೇ ಹುಟ್ಟಿ ಬಂದಿದ್ದಾರೆ ಎನ್ನುವುದಕ್ಕಾಗಿ ಮುಖದಲ್ಲಿ ತುಂಬಿ ತುಳುಕುವ ನಗು. ಇದು ದೇವದಾಸ ಕಾಪಿಕಾಡ್‌ನ ಇಂಟರ್‌ಡಕ್ಷನ್. ಅಂದಹಾಗೆ ಕರಾವಳಿಯ ಮಂದಿಗೆ ದೇವದಾಸರ ಪರಿಚಯ ನೀಡುವ ಅಗತ್ಯವೇ ಬೀಳುವುದಿಲ್ಲ. ಅದು ಕರಾವಳಿಯ ಬ್ರಾಂಡ್ ಅಂಬಾಸೀಡರ್ ! ಕಳೆದ ೨೫ ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಭಿನ್ನ ರೀತಿಯ ನಲವತ್ತಕ್ಕಿಂತ ಜಾಸ್ತಿ ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶನ ಮಾಡಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ತುಳು ರಂಗಭೂಮಿಯ ಜತೆಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಹಾಸ್ಯ ಕಲಾವಿದರಾಗಿ ಡಿಮ್ಯಾಂಡ್ ಗಳಿಸಿಕೊಂಡಿದ್ದಾರೆ.
ರಮೇಶ್ ಅರವಿಂದರ ‘ವೆಂಕಟ ಇನ್ ಸಂಕಟ’ ಇನ್ನೂ ಬರುವ ‘ಕಾರ್ತಿಕ್’, ‘ತೂಫಾನ್’ನಲ್ಲಿ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸ್ಟಾರ್ ಸೂರ್ಯ ಅಭಿನಯದ ಕಾಲಿವುಡ್‌ನ ಒಂದೆರಡು ಚಿತ್ರಗಳಿಗೂ ಆಫರ್‌ಗಳು ಬಂದಿತ್ತು. ಕನ್ನಡದಲ್ಲಿ ಸಾಧಾರಣ ಓಟ ಆರಂಭಿಸಿದ ಯೋಗರಾಜ್ ಭಟ್ಟರ ‘ಪಂಚರಂಗಿ’ಗೂ ಆಫರ್ ಬಂದಿತ್ತು. ಆದರೆ ತುಳು ರಂಗಭೂಮಿ ಮೇಲಿರುವ ಅಭಿಮಾನದಿಂದ ಸಿನಿಮಾರಂಗದಿಂದ ದೂರಕ್ಕೆ ನಿಂತಿದ್ದರು. ದೇವದಾಸ್‌ರ ಸೂಪರ್ ಹಿಟ್ ನಾಟಕಗಳ ಪಟ್ಟಿ ಅವರ ಕೇರಿಯರ್ ಅಷ್ಟೇ ದೊಡ್ಡದಿದೆ. ಅದರಲ್ಲೂ ೬೦೦ ಪ್ರದರ್ಶನ ಕಂಡ ಅವರ ‘ಪುದರ್ ದೀ ತೀಜಿ’ ಒಂದು ಹಿಸ್ಟರಿ ಕ್ರಿಯೇಟ್ ಮಾಡಿದೆ. ‘ ಮಾಮು’ ‘ಬಲೇ ಚಾ ಪರ್‍ಕ’, ‘ಗಂಟೆ ಏತಾಂಡ್’, ‘ಈರ್ ದೂರ’ , ‘ವೈವಾಟ್ ವಸಂತೆ’, ‘ಮೊಬೈಲ್ ಮಾಧವೆ’, ‘ಕೆಬಿ ಪಿತ್ತಲೆ’ ‘ಈರ್ ಉಂಡರಾ?’ ಈಗ ‘ಗೋಪಾಲ ಈ ಪಾರ್‌ಬಲ....’ ಟೋಟಲಿ ಕತೆ, ಸಂಭಾಷಣೆ, ಗೀತೆರಚನೆ, ಹಿನ್ನೆಲೆ ಗಾಯನ, ನಿರ್ದೇಶನದ ಮೂಲಕ ಕರಾವಳಿ ಸೇರಿದಂತೆ ಮುಂಬಯಿ, ಕೊಲ್ಲಿ ರಾಷ್ಟ್ರಗಳಲ್ಲಿಯೂ ದೇವದಾಸ್ ಕಾಪಿಕಾಡು ಸಿಲೆಬ್ರಿಟಿ ಆಗಿ ಹೊರ ಬಂದಿದ್ದಾರೆ. ‘ಬಲೇ ಚಾ ಪರ್‍ಕ ’ನಾಟಕದ ಯಶಸ್ಸಿನಿಂದ ಅದೇ ತಂಡವನ್ನು ಕಟ್ಟಿಕೊಂಡು ತುಳು ರಂಗಭೂಮಿಯಲ್ಲಿ ಹೆಸರು ಮಾಡುತ್ತಿದ್ದಾರೆ.
ಕಾಡಿನಿಂದ ಬಂದ ದೇವದಾಸ :
ದೇವದಾಸರ ಊರು ನಿಜಕ್ಕೂ ಬಂಟ್ವಾಳದ ಸಜಿಪ ಪಡು. ಆದರೆ ತಂದೆ ನಾರಾಯಣ್ ಸಾಲ್ಯಾನ್ ಕಾಪಿಕಾಡಿನಲ್ಲಿ ಪುಟ್ಟ ಬೀಡಿಯ ಬ್ರ್ಯಾಂಚ್‌ನ್ನು ಇಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ಇಡೀ ಕುಟುಂಬ ಕಾಪಿಕಾಡಿಗೆ ಶಿಫ್ಟ್ ಆಯಿತು. ಮಂಗಳೂರಿನ ಕೆನರಾ ಶಾಲೆಗೆ ದೇವದಾಸ್ ಸೇರಿಕೊಂಡರು. ಶಾಲಾ ದಿನಗಳಲ್ಲಿಯೇ ಮಂಗಳೂರು ಆಕಾಶವಾಣಿಯಲ್ಲಿ ದೇವದಾಸ ಕತೆ ಓದುತ್ತಿದ್ದರು. ಬರೀ ದೇವದಾಸ ಬದಲು ಊರಿನ ಹೆಸರು ಕೂಡ ಜತೆಗೆ ಬಂತು. ಅಲ್ಲಿಂದ ದೇವದಾಸ್ ಕಾಪಿಕಾಡು ಆಗಿ ಬದಲಾದರು. ಅಂದಹಾಗೆ ಒಂದು ಬಾರಿ ಶಾಲೆಯ ಶಿಕ್ಷಕರೊಬ್ಬರು ಎಲ್ಲ ವಿದ್ಯಾರ್ಥಿಗಳಲ್ಲಿ ಊರಿನ ಹೆಸರು ಕೇಳುತ್ತಿದ್ದಾಗ ನನ್ನ ಗುಂಗುರು ಕೂದಲನ್ನು ನೋಡಿ ನೀನು ಯಾವ ಕಾಡಿನಿಂದ ಬಂದಿದ್ದೀಯಾ..? ಎಂದು ಪ್ರಶ್ನಿಸಿದರು. ನಾನು ಕಾಪಿಕಾಡಿನಿಂದ ಎಂದಾಗ ನನ್ನ ಮರುತ್ತರಕ್ಕೆ ಸಿಟ್ಟಾಗಿ ಶಿಕ್ಷಕರು ತಂದೆಯನ್ನು ಕರೆದುಕೊಂಡು ಬರಲು ಹೇಳಿದರು. ನಾನು ಕರೆದುಕೊಂಡು ಬಂದೆ ತಂದೆ ವಿವರ ನೀಡಿದಾಗ ನಿಜಕ್ಕೂ ನನ್ನ ಊರು ‘ಕಾಪಿಕಾಡು’ ಎಂದು ತಿಳಿದ ನಂತರ ಶಿಕ್ಷಕ ನನ್ನ ಜತೆ ತುಂಬಾ ಸಲುಗೆಯಿಂದ ವರ್ತಿಸಿದರು ಎಂದು ದೇವದಾಸ್ ಜೋರಾಗಿ ನಕ್ಕು ಬಿಟ್ಟರು.
ಹಂಪನಕಟ್ಟೆಯ ಕಾಲೇಜು ದಿನಗಳಲ್ಲಿ ಫೈನ್ ಆರ್ಟ್ಸ್‌ನ ಯಾವುದೇ ಕಾರ್‍ಯಕ್ರಮಗಳಿರಲಿ ಅಲ್ಲಿ ನಮ್ಮ ತಂಡಕ್ಕೆ ಬಹುಮಾನ ಬಂದು ಬಿಡುತ್ತಿತ್ತು. ಅಲ್ಲಿ ಓದುತ್ತಿದ್ದ ಮಾಧವ್ ಶಕ್ತಿನಗರ್ ಜತೆಗೂಡಿ ಪದವು ಫ್ರೆಂಡ್ಸ್ ಕ್ಲಬ್‌ನ ಆಶ್ರಯದಲ್ಲಿ ನಾಟಕ ಮಾಡಿಕೊಂಡು ಬರುತ್ತಿದ್ದೇವು. ಅಲ್ಲಿಂದಲೇ ನಾಟಕ ರಂಗಕ್ಕೆ ಎಂಟ್ರಿ. ‘ಯಾನ್ ಮಲ್ಲಾಯೇ ಯಾನೇ ಮಲ್ಲಾಯೇ’ ನಾನು ಬರೆದ ಮೊದಲ ನಾಟಕ. ಕಾಶಿನಾಥ್ ಅವರ ‘ಅನುಭವ’ ಚಿತ್ರಕ್ಕಿಂತ ಮೊದಲು ನಾವು ಅರ್ಧ ಗಂಟೆಯ ಇದೇ ‘ಅನುಭವ’ವನ್ನು ನಾಟಕ ರಂಗಕ್ಕೆ ತಂದಿದ್ದೇವು... ನಾಟಕ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಹಾಸ್ಯ ನಾಟಕಗಳ ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಬಹುದು ಎನ್ನುವ ಟ್ರೇಡ್ ಸಿಕ್ರೇಟ್ ಗೊತ್ತಾಯಿತು. ತದನಂತರ ನಾನು ರಂಗಭೂಮಿಯನ್ನು ಬಿಟ್ಟಿಲ್ಲ ಎನ್ನುತ್ತಾರೆ ಕಾಪಿಕಾಡು.
‘ಶಾಲೆಯ ದಿನಗಳಲ್ಲಿ ‘ನಾರದ ಗರ್ವಭಂಗ’ ಎನ್ನುವ ಪುಟ್ಟ ನಾಟಕ ರೆಡಿಯಾಗಿತ್ತು. ಅಲ್ಲಿ ‘ನಾರದ’ನ ಪಾತ್ರ ನನಗೆ ಸಿಕ್ಕಿತ್ತು. ಆದರೆ ಗ್ಯಾಲರಿಯಲ್ಲಿ ತುಂಬಿದ್ದ ಜನರನ್ನು ನೋಡಿ ನಾನು ಕಂಗಾಲು. ನನಗೆ ನೀಡಿದ ಸಂಭಾಷಣೆ ಬಿಟ್ಟು ಜೋರಾಗಿ ಹಾಡಲು ಆರಂಭ ಮಾಡಿದೆ. ಸಂಗೀತದ ಕುರಿತು ಕೊಂಚ ಜ್ಞಾನ ಇತ್ತು. ಆದರೆ ನಾಟಕದ ಸೆಕೆಂಡ್ ಸೀನ್ ಬಂದಾಗ ಸುಧಾರಿಸಿಕೊಂಡು ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಇದು ನನ್ನ ರಂಗಭೂಮಿ ವೃತ್ತಿಯಲ್ಲಿ ಮರೆಯಲಾಗದ ಕ್ಷಣ. ಇಂತಹ ಸಿಹಿ- ಕಹಿ ಘಟನೆಗಳು ಬಹಳಷ್ಟು ನಡೆದಿದೆ ಅದೆಲ್ಲವೂ ನನ್ನ ವೃತ್ತಿ ರಂಗಭೂಮಿಯನ್ನು ಗಟ್ಟಿ ಮಾಡಿದೆ ಎನ್ನುತ್ತಾರೆ ದೇವದಾಸ್.
ಲವ್‌ಗೆ ಬಿದ್ದ ದೇವದಾಸ:
ದೇವದಾಸ ಕಾಪಿಕಾಡು ಮದುವೆಯಾಗಿರೋದು ಶರ್ಮಿಳಾ ಡಿ. ಕಾಪಿಕಾಡು ಅವರನ್ನು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಮದುವೆ ಹಿಂದಿನ ಸಿಕ್ರೇಟ್ ಏನಪ್ಪಾ ಅಂದರೆ ಇಬ್ಬರೂ ಲವ್ ಮಾಡಿ ಮದುವೆಯಾಗಿರುವವರು. ಹಂಪನಕಟ್ಟೆ ಕಾಲೇಜಿನ ಪಿಯುಸಿಯಲ್ಲಿ ಓದುತ್ತಿದ್ದ ಶರ್ಮಿಳಾ ಡಿಗ್ರಿ ಓದುತ್ತಿದ್ದ ದೇವದಾಸರ ಹಾಸ್ಯ ಪ್ರವೃತ್ತಿಗೆ ಸೋತು ಹೋಗಿದ್ದರು. ಫೈನ್ ಆರ್ಟ್ಸ್‌ನಲ್ಲಿ ಬಹುಮಾನಗಳ ಕೊಳ್ಳೆ ಹೊಡೆಯುತ್ತಿದ್ದ ದೇವದಾಸ್ ನಿಧಾನವಾಗಿ ಶರ್ಮಿಳಾರ ಸುತ್ತಮುತ್ತ ಗಿರಕಿ ಹೊಡೆಯಲು ಆರಂಭಿಸಿದರು. ಲವೇರಿಯಾ ಜೋರಾಗಿ ವಿವಾಹದಲ್ಲಿ ಅಂತ್ಯಕಂಡಿತ್ತು. ದೇವದಾಸ್‌ರ ಪ್ರತಿಯೊಂದು ಯಶಸ್ಸಿನ ಹಿಂದೆ ಶರ್ಮಿಳಾ ನಿಂತಿದ್ದಾರೆ ಎನ್ನುವುದು ನಿಜ. ದೇವದಾಸ್‌ರೇ ಹೇಳುವಂತೆ ಒಂದು ಕಾಲದಲ್ಲಿ ಆರ್ಥಿಕವಾಗಿ ಕುಸಿದು ಕೂತಿದ್ದೆ. ನಾಟಕಗಳನ್ನು ಬಿಟ್ಟು ಕೆಲಸವೊಂದಕ್ಕೆ ಸೇರಿಕೊಂಡಿದ್ದೆ. ಆದರೆ ಶರ್ಮಿಳಾ ನನಗೆ ಉತ್ಸಾಹದ ಚಿಲುಮೆಯಾಗಿ ಬಂದರು. ಈಗ ಈ ಉನ್ನತ ಮಟ್ಟದಲ್ಲಿರಲು ಶರ್ಮಿಳಾರೇ ಕಾರಣ ಎನ್ನುತ್ತಾರೆ ಅವರು. ದೇವದಾಸರ ‘ಬಲೇ ಚಾ ಪರ್‍ಕ’ ತಂಡದ ಸಂಪೂರ್ಣ ಉಸ್ತುವಾರಿಯನ್ನು ಶರ್ಮಿಳಾ ಕಾಪಿಕಾಡು ನೋಡಿಕೊಳ್ಳುತ್ತಿದ್ದಾರೆ. ದೇವದಾಸರ ಪುತ್ರ ಅರ್ಜುನ್ ಎಂಬಿಎ ಓದುತ್ತಿದ್ದಾರೆ. ಅರ್ಜುನ್‌ಗಾಗಿ ತುಳುವಿನಲ್ಲಿ ಚಿತ್ರವೊಂದು ತಯಾರಿಸಲು ದೇವದಾಸ್ ಹೊರಟ್ಟಿದ್ದಾರೆ. ಸದ್ಯಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ. ಎಲ್ಲ ರೀತಿಯಿಂದಲೂ ದೇವದಾಸ್ ಕಾಪಿಕಾಡ್ ತಮ್ಮ ನಾಟಕಗಳ ಮೂಲಕ ತುಳುವರ ಪಾಲಿನ ‘ ಚಾರ್ಲಿ ಚಾಪ್ಲಿನ್’ ಎನ್ನುವುದರಲ್ಲಿ ನೋ ಡೌಟ್..!!

Sunday, April 3, 2011

ವೀ ಆರ್ ದೀ ಚಾಂಪಿಯನ್ಸ್


೨೮ ವರ್ಷಗಳ ತಪಸ್ಸು ಈಗ ಮುಗಿದಿದೆ. ಅಂತೂ ಇಂತೂ ಭಾರತ ವಿಶ್ವ ವಿಜೇತವಾಗಿ ಮೂಡಿ ಬಂದಿದೆ. ಧೋನಿ ಪಡೆ ಮುಂಬಯಿಯ ವಾಂಖೆಡೆ ಮೈದಾನದಲ್ಲಿ ಮಾಡಿದ ಕ್ರಾಂತಿ ಮಾತ್ರ ವರ್ಣಿಸಲು ಅಸಾಧ್ಯ. ಆದರೂ ವಿಶ್ವ ಕ್ರಿಕೆಟ್ ದುನಿಯಾದಲ್ಲಿ ನಾವು ನಂಬರ್ ವನ್ ಪಟ್ಟಕ್ಕೆ ಬಂದು ನಿಂತಿದ್ದೇವೆ. ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಇದಾಗಿದ್ದು , ಮುಂಬರುವ ವಿಶ್ವಕಪ್‌ನಲ್ಲಿ ಸಿಡಿಲಮರಿಯ ಅಬ್ಬರದ ಹೊಡೆತಗಳಿಲ್ಲ ಎನ್ನುವುದು ಕೂಡ ಈಗ ಗ್ಯಾರಂಟಿಯಾಗಿದೆ. ವಿಶ್ವಕಪ್ ಫೈನಲ್ ತುಂಬಾನೇ ರೋಚಕ ವಿಜಯಲಕ್ಷ್ಮೀ ಯಾರಿಗೆ ಒಳಿದು ಬಿಡುತ್ತಾಳೆ ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳಾದ ಎಲ್ಲರಿಗೂ ಇರುತ್ತದೆ. ಅದರಲ್ಲೂ ಭಾರತ-ಶ್ರೀಲಂಕಾದ ಮ್ಯಾಚ್ ತುಂಬಾನೇ ರೋಚಕ. ಭಾರತದ ಆರಂಭಿಕ ಆಟಗಾರರಾದ ಸೆಹೆವಾಗ್ ಹಾಗೂ ಸಚಿನ್‌ರ ವಿಕೆಟ್ ಬೇಗನೆ ಉರುಳಿ ಹೋಗಿದ್ದು, ಇನ್ನೇನೂ ವಿಶ್ವಕಪ್ ಶ್ರೀಲಂಕಾದ ಪಾಲಾಯಿತು ಎನ್ನುವಷ್ಟರಲ್ಲಿ ಗಂಭೀರ್ ಹಾಗೂ ವಿರಾಟ್‌ನ ಮಧ್ಯಮ ಕ್ರಮಾಂಕಿತ ಆಟ. ಧೋನಿಯ ಜವಾಬ್ದಾರಿಯುತ ಆಟ ಮತ್ತೆ ಭಾರತ ಗೆಲ್ಲುವ ಕಿರಣ ಮೂಡಿಸಿದ್ದು ಎಲ್ಲವೂ ಹಾಸಿಗೆ ಮೇಲೆ ಮಲಗಿ ಕೊಂಡಿದ್ದ ಭಾರತೀಯರ ಕನಸ್ಸು ನನಸ್ಸಾಯಿತು. ಶ್ರೀಲಂಕಾ ಗೆದ್ದು ಬಿಡುತ್ತದೆ ಎನ್ನುವ ಭ್ರಮೆಯಲ್ಲಿದ್ದಾಗ ನನ್ನ ಇಮೇಲ್‌ಗೆ ನನ್ನ ಹಿರಿಯ ಗೆಳೆಯ ಹಾಗೂ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ‘ಇಲ್ಲ ಮಾರಾಯ್ರೆ ಕಪ್ ನಮಗೆ ಬರುತ್ತದೆ. ನೋಡು ನಿಮಗೊಂದು ಕಾರ್ಟೂನ್ ಕಳುಹಿಸುತ್ತೇನೆ’ ಎಂದು ವಿಶ್ವಕಪ್ ಎತ್ತುವ ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಅದು ಕೂಡ ಭಾರತದ ಪ್ರಮುಖ ಎರಡು ವಿಕೆಟ್‌ಗಳು ಉರುಳಿ ಹೋದ ನಂತರ ನಿಜಕ್ಕೂ ಪ್ರಕಾಶ್ ನಿನ್ನೆ ಮಟ್ಟಿಗೆ ಜ್ಯೋತಿಷಿ ಆಗಿ ಹೋದರು. ಕಾರ್ಟೂನ್ ನೋಡಿ ಎಂಜಾಯ್ ಮಾಡಿ ಬಿಡಿ.

* ಸ್ಟೀವನ್ ರೇಗೊ, ದಾರಂದಕುಕ್ಕು