Sunday, January 13, 2013
ಮುಂಬಯಿಯಲ್ಲಿ ‘ರಿನೋ ’ ಮ್ಯಾಜಿಕ್ !
ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್‌ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಈಗ ಬಣ್ಣದ ಲೋಕದ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಫುಟ್ಬಾಲ್ ಎಂದಾಕ್ಷಣ ಬ್ರೆಜಿಲ್ ದೇಶದ ನಕಾಶೆ ಕಣ್ಣ ಮುಂದೆ ಸುಳಿದು ಬಿಡುತ್ತದೆ. ಬ್ರೆಜಿಲ್‌ನ ನರನಾಡಿಯಲ್ಲಿ ಫುಟ್ಬಾಲ್ ಆಟ ಮಿಲಿತಗೊಂಡಿದೆ. ಇಲ್ಲಿನ ಪ್ರತಿಯೊಬ್ಬರು ಫುಟ್ಬಾಲ್ ಆಟ ಎಂದಾಕ್ಷಣ ಕಾಲ ಬುಡದಲ್ಲಿ ಫುಟ್ಬಾಲ್ ಹುಡುಕಾಡಲು ಆರಂಭ ಮಾಡುತ್ತಾರೆ. ಇಂತಹ ನಾಡಿನಲ್ಲಿ ಬೆಳೆದವರು ರಿನೋ ಅರ್ಥಾತ್ ರೊನಾಲ್ಡಿನೋ ತೀರಾ ಇತ್ತೀಚೆಗೆ ಮುಂಬಯಿಗೆ ಬಂದು ಇಳಿದಿದ್ದರು. ಮುಂಬಯಿಯ ಗಲ್ಲಿ ಗಲ್ಲಿಯಲ್ಲೂ ಕಣ್ಣಾಡಿಸಿಕೊಂಡು ಹೋದ ರೊನಾಲ್ಡಿನೋಗೆ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ ಎನ್ನೋದು ಬಹುತೇಕ ಮಂದಿಗೆ ಗೊತ್ತೇ ಇಲ್ಲ.
ಭಾರತಕ್ಕೆ ಈ ಹಿಂದೆ ರಿನೋ ಬಂದಿದ್ದಾಗ ವರ್ಷದಲ್ಲಿ ಒಂದೆರಡು ಬಾರಿಯಾದರೂ ಇಲ್ಲಿಗೆ ಬಂದು ನಿಲ್ಲಬೇಕು ಎನ್ನುವ ಕನಸ್ಸುಗಳಿತ್ತು. ತನ್ನ ನೆಚ್ಚಿನ ಫುಟ್ಬಾಲ್ ಆಟವನ್ನು ಭಾರತದಲ್ಲೂ ಭರ್ಜರಿಯಾಗಿ ನಿಲ್ಲುವಂತೆ ಮಾಡಬೇಕು ಎನ್ನುವ ಕಿಚ್ಚು ಮೊಳೆದಿತ್ತು. ಮುಂಬಯಿಯ ಗಲ್ಲಿಯಲ್ಲಿ ಎದ್ದು ನಿಂತ ಬೃಹತ್ ಗಾತ್ರದ ಸಿನಿಮಾ ಕಟೌಟ್‌ಗಳನ್ನು ನೋಡಿ ತಾನು ಕೂಡ ಇದೇ ಮಾದರಿಯಲ್ಲಿ ನಿಲ್ಲಬೇಕು ಎನ್ನುವ ಬಯಕೆ ಹುಟ್ಟಿಕೊಂಡಿತ್ತು ಎಂದು ಖುದ್ದು ರಿನೋ ಮಾಧ್ಯಮಗಳಲ್ಲಿ ಈ ಹಿಂದೆ ಬಂದಾಗ ಹೇಳಿಕೊಂಡಿದ್ದರು. ಈಗ ಇದೆಲ್ಲವೂ ದಿಟವಾಗಿದೆ.
ಹೌದು.. ಈಗ ರಿನೋ ಬಾಲಿವುಡ್ ಅಂಗಳದಲ್ಲಿ ಹೀರೋ ಆಗುವ ಕನಸ್ಸಿನ ಮೇಲೆ ಇಲ್ಲಿಗೆ ಬಂದಿದ್ದಾರೆ. ಫುಟ್ಬಾಲ್ ಲೋಕದ ಧ್ರುವತಾರೆ ರಿನೋ ಬಾಲಿವುಡ್ ಬೇಸ್ಡ್ ಆನಿಮೇಷನ್ ಚಿತ್ರವೊಂದರಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನೋದು ಹೊರ ಬಂದ ಮಾಹಿತಿ.
ಅಂದಹಾಗೆ ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್‌ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಬಣ್ಣದ ಲೋಕ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ.
ಇದಕ್ಕೆ ಉತ್ತರ ಇಲ್ಲಿದೆ...ಭಾರತೀಯ ಮೂಲದ ಖ್ಯಾತ ಪೌಲ್ಡ್ರಿ ಕಂಪನಿ ವೆಂಕಿ ರಿನೋಗಾಗಿ ಆನಿಮೇಷನ್ ಚಿತ್ರವೊಂದನ್ನು ಸಿದ್ಧಪಡಿಸುತ್ತಿದ್ದಾರೆ. ವೆಂಕಿ ಈ ಹಿಂದೆ ಕೂಡ ರಿನೋನ ಫುಟ್ಬಾಲ್ ಆಟಕ್ಕೆ ಸಹಾಯ ಹಸ್ತ ನೀಡುತ್ತಾ ಬಂದಿದೆ. ಇದೇ ಸಲುಗೆಯಲ್ಲಿ ವೆಂಕಿ ಕಂಪನಿಗೆ ಕಟ್ಟಿಬಿದ್ದು ರಿನೋ ಆನಿಮೇಷನ್ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಹೊರ ಬಂದ ಮಾತು.
‘ರೊನಾಲ್ಡಿನೋ ವರ್ಸಸ್ ಏಲಿಯನ್ಸ್ ’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಚಿತ್ರದ ಮೂಲ ಕತೆಯೇ ಬಾಹ್ಯಾಕಾಶದ ಟ್ರಾಫಿಕ್ ಸಮಸ್ಯೆಗಳ ಕುರಿತಾಗಿ ಅನ್ಯಗ್ರಹದ ಜೀವಿಗಳು ಹಾಗೂ ರಿನೋ ಜತೆ ನಡೆಯುವ ಕತೆಯೇ ಚಿತ್ರದ ಮುಖ್ಯ ಪಾಯಿಂಟ್. ಚಿತ್ರದಲ್ಲಿ ರಿನೋ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಿಮೇಷನ್ ಚಿತ್ರವಾಗಿದ್ದರ ಪರಿಣಾಮ ರಿನೋ ನಟನೆಗಿಂತ ಹೆಚ್ಚಾಗಿ ಧ್ವನಿಗೆ ಜಾಸ್ತಿ ಮಹತ್ವ ಸಿಗಲಿದೆ.
ಅದರಲ್ಲೂ ಮುಖ್ಯವಾಗಿ ಫುಟ್ಬಾಲ್ ರಂಗದಲ್ಲಿ ಎರಡು ಬಾರಿ ಫಿಫಾ ವರ್ಷದ ಆಟಗಾರನಾಗಿ ಹೊರಬಂದ ರಿನೋ ಮೊದಲ ಬಾರಿಗೆ ಆನಿಮೇಷನ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ನಿರೀಕ್ಷೆಯ ಮೂಟೆಯಂತೂ ಇದ್ದೇ ಇದೆ . ಮತ್ತೊಂದೆಡೆ ಫುಟ್ಬಾಲ್ ಆಟಗಾರ ರಿನೋ ಹೇಳುವಂತೆ ಬ್ರೆಜಿಲ್ ಈ ವರ್ಷ ವಿಶ್ವಕಪ್ ಗೆದ್ದೇ ಗೆಲ್ಲುತ್ತೇ..ಅದರಲ್ಲಿ ನಾನು ಕೂಡ ಆಡಬೇಕು ಎನ್ನುವ ಹಂಬಲವಿದೆ. ಅಂದಹಾಗೆ ಭಾರತ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ನನ್ನ ಹೊಸ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ನಂಬಿಕೆ ಇದೆ ಎಂದು ಮಾಧ್ಯಮಗಳಿಗೆ ಮಾತು ಬಿಟ್ಟಿದ್ದಾರೆ. ಅಂದಹಾಗೆ ಹೊಸ ವರ್ಷದಲ್ಲಿ ರಿನೋ ಚಿತ್ರಕ್ಕೆ ಕಾದು ಕುಳಿತುಕೊಳ್ಳುವ ಸರದಿಯಂತೂ ರಿನೋ ಅಭಿಮಾನಿಗೆ ಬಂದು ಬಿಡಬಹುದು.
( vk lvk published dis article 0n 7.1.2013)
Subscribe to:
Post Comments (Atom)
No comments:
Post a Comment