Sunday, January 13, 2013

ಬಾಲಿವುಡ್‌ನ ‘ಡಬ್ಬೂ ’ ಕ್ಯಾಲೆಂಡರ್

ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ. * ಸ್ಟೀವನ್ ರೇಗೊ, ದಾರಂದಕುಕ್ಕು
ಡಬ್ಬೂ ರತ್ನಾನಿ. ಇದು ಪ್ರತಿ ವರ್ಷದ ಆರಂಭದಲ್ಲಿ ಸುದ್ದಿಯಾಗುತ್ತಿರುವ ವ್ಯಕ್ತಿ. ಅಂದಹಾಗೆ ಇಡೀ ಬಾಲಿವುಡ್‌ನಲ್ಲಿ ಈತನ ಮಾತಿಗೆ ಒಂದು ಗತ್ತು ಇದೆ. ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಬೆಂಡ್ ಮಾಡುವ ಧೈರ್ಯವಿದೆ. ಎಲ್ಲಕ್ಕೂ ಮುಖ್ಯವಾಗಿ ‘ಡಬ್ಬೂ ’ ಎನ್ನುವ ಮಾಸ್ಟರ್ ಫೀಸ್ ಮುಂದೆ ನಟ-ನಟಿಯರು ಸಿಕ್ಕಾಪಟ್ಟೆ ಬೋಲ್ಡ್‌ನೆಸ್‌ಗೆ ಮಾರು ಹೋಗುತ್ತಾರೆ. ಇದು ಡಬ್ಬೂ ರತ್ನಾನಿ ಎನ್ನುವ ಕ್ಯಾಮೆರಾಕಣ್ಣಿನ ಹೀರೋನ ಕತೆ. ಜತೆಗೆ ಪ್ರತಿ ವರ್ಷ ಆತ ಹೊರ ತರುವ ‘ಡಬ್ಬೂ ರತ್ನಾನಿ ಕ್ಯಾಲೆಂಡರ್’ ಎನ್ನುವ ಕನಸ್ಸಿನ ಕತೆ. ಅಂದಹಾಗೆ ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ. ೯೦ರ ದಶಕದಲ್ಲಿ ಮುಂಬಯಿಯ ಫ್ಯಾಶನ್ ಲೋಕದಲ್ಲಿ ಬಹಳ ಕೇಳಿಸಿಕೊಳ್ಳುತ್ತಿದ್ದ ಸುಮಿತ್ ಚೋಪ್ರಾ ಎನ್ನುವ ಫ್ಯಾಶನ್ ಫೋಟೋಗ್ರಾಫರ್ ನ ಹಿಂದೆ ಬಿದ್ದು ಫೋಟೋಗ್ರಾಫಿಯನ್ನು ಬಹಳ ಸಿರೀಯಸ್ ಆಗಿ ಅಧ್ಯಯನ ಮಾಡಿಕೊಂಡು ಹೊರಬಂದ ಡಬ್ಬೂ ನಂತರ ಗುರುವನ್ನು ಮೀರಿಸುವ ಶಿಷ್ಯನಾದ . ೯೪ರ ಹೊತ್ತಿಗೆ ಡಬ್ಬೂ ತನ್ನದೇ ಪುಟ್ಟ ಛಾಯಾಚಿತ್ರದ ಅಂಗಡಿ ತೆರೆದಿಟ್ಟ. ಬಾಲಿವುಡ್ ಸಿನಿಮಾಗಳ ಕಾರ‍್ಯಕ್ರಮಗಳಲ್ಲಿ ಡಬ್ಬೂ ರತ್ನಾನಿ ಎನ್ನುವ ಛಾಯಾಗ್ರಾಹಕನ ತಲೆ ಕಾಣಿಸಿಕೊಂಡ ನಂತರವಂತೂ ಬಾಲಿವುಡ್ ಬಣ್ಣದ ಸಿನಿಮಾಗಳಲ್ಲಿ ಡಬ್ಬೂ ಇಲ್ಲದೇ ಏನೂ ಇಲ್ಲ ಎನ್ನುವ ಮಟ್ಟ ಮುಟ್ಟಿನಿಂತಿತ್ತು. ಅದೇ ಡಬ್ಬೂ ಎನ್ನುವ ಕಲಾತ್ಮಕ ಹಾಗೂ ಗ್ಲಾಮರ್ ಲೋಕದ ಎರಡು ಶೇಡ್‌ಗಳ ಜತೆಯಲ್ಲಿ ಆಟವಾಡಿ ಪ್ರತಿ ವರ್ಷನೂ ಡಬ್ಬೂ ಕ್ಯಾಲೆಂಡರ್ ತರುವ ಯೋಜನೆಗೆ ಕೈ ಹಾಕಿ ಗೆದ್ದು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾನೆ. ಬಾಲಿವುಡ್‌ನ್ನು ಮಲಗಿಸುವ ಕ್ಯಾಲೆಂಡರ್ : ಅದು ೨೦೦೪ ಬಾಲಿವುಡ್ ಅಂಗಳದಲ್ಲಿ ಮೊದಲ ಬಾರಿಗೆ ಡಬ್ಬೂ ಕ್ಯಾಲೆಂಡರ್ ಹೊರಬಂತು. ಈ ಮೊದಲು ಚಿಕ್ಕಪುಟ್ಟ ಗಿಮಿಕ್‌ಗಳ ಮೂಲಕವೇ ಹೆಸರುಗಳಿಸಿ ಉಳಿಸಿಕೊಂಡಿದ್ದ ಡಬ್ಬೂ ಈ ಕ್ಯಾಲೆಂಡರ್ ಮೂಲಕ ಬಣ್ಣದ ಲೋಕದಲ್ಲಿ ಹೊಸ ಕ್ರೇಜ್ ಹುಟ್ಟಿ ಹಾಕಿದ. ಮೊಡೆಲ್‌ಗಳ ಜತೆಯಲ್ಲಿ ಆಟಹಾಡಿಕೊಂಡಿದ್ದ ಡಬ್ಬೂ ೨೦೦೪ ರ ಬಳಿಕ ಬಾಲಿವುಡ್ ನಟ- ನಟಿಯರ ಜತೆಯಲ್ಲಿ ಆಟಕ್ಕೆ ಕೂತು ಬಿಟ್ಟ. ಈ ಹೊಸ ಪ್ರಯತ್ನ ಕ್ಲಿಕ್ ಆಗಿ ಹೋಯಿತು. ೨೦೦೪ರಲ್ಲಿ ಬಾಲಿವುಡ್‌ನ ಟಾಪ್ ತಾರೆಯನ್ನು ಒಟ್ಟು ಸೇರಿಸಿಕೊಂಡು ಕ್ಯಾಲೆಂಡರ್ ಹೊರ ತಂದ. ಅದರಲ್ಲಿ ಹಿರಿಯ ನಟರ ಜತೆಯಲ್ಲಿ ಬಾಲಿವುಡ್‌ನಲ್ಲಿ ಕಾಣಿಸಿಕೊಂಡ ಹೊಸಪ್ರತಿಭೆಗೂ ಜಾಗ ಮಾಡಿಕೊಟ್ಟ. ಬಾಲಿವುಡ್ ನಟ- ನಟಿಯರನ್ನು ಒಂದೇ ಪ್ಯಾಕೇಜ್‌ನಡಿಯಲ್ಲಿ ತಮ್ಮ ಅಭಿಮಾನಿಗಳ ಕೈ ಸೇರುವಂತೆ ಕ್ಯಾಲೆಂಡರ್ ತಯಾರಿಸಿಕೊಟ್ಟ ಡಬ್ಬೂ ತನ್ನ ಕ್ಯಾಲೆಂಡರ್‌ಗಳಲ್ಲಿ ೨೪ ಬಾಲಿವುಡ್ ಸೆಲೆಬ್ರಿಟಿಗಳನ್ನು ತಮ್ಮ ಕ್ಯಾಲೆಂಡರ್‌ಗಳಲ್ಲಿ ತೋರಿಸುತ್ತಾರೆ. ಡಬ್ಬೂ ರತ್ನಾನಿಯ ಕ್ಯಾಲೆಂಡರ್‌ಗಳಲ್ಲಿ ಕಾಯಂ ಜಾಗ ಪಡೆಯುವ ಮಂದಿಯಲ್ಲಿ ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರೂಕ್ ಖಾನ್ ಸೇರಿಕೊಂಡಿರುತ್ತಾರೆ. ೨೦೧೦ರ ನಂತರ ತಂದ ಡಬ್ಬೂ ಕ್ಯಾಲೆಂಡರ್ ಗಳ ಶೂಟಿಂಗ್ ಚಿತ್ರವನ್ನು ಡಬ್ಬೂ ಯೂ ಟ್ಯೂಬ್‌ನಲ್ಲಿ ತುಂಬಿಸಿ ಬಿಡುವ ಪರಂಪರೆ ಆರಂಭ ಮಾಡಿದರು. ಬಾಲಿವುಡ್ ಪಾಲಿಗೆ ಡಬ್ಬೂ ಕ್ಯಾಲೆಂಡರ್‌ಗಳಷ್ಟು ಚರ್ಚೆಯಾಗುವಷ್ಟು ವಿಚಾರ ಬೇರೆ ಇಲ್ಲ ಎನ್ನುವ ಮಾತಿದೆ. ಡಬ್ಬೂ ಎನ್ನುವ ಕ್ರಿಯೇಟರ್: ಅಂದಹಾಗೆ ೨೦೧೩ರ ಡಬ್ಬೂ ಕ್ಯಾಲೆಂಡರ್ ಹೊರಬಂದಿದೆ. ಕಳೆದ ವರ್ಷದ ಡರ್ಟಿ ಹುಡುಗಿ ವಿದ್ಯಾಬಾಲನ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡ ಹೊಸ ತಾರೆ ವರುಣ್ ಧವನ್ ಡಬ್ಬೂ ಕ್ಯಾಲೆಂಡರ್‌ನಲ್ಲಿ ಈ ವರ್ಷದಲ್ಲಿ ಪ್ಲಸ್ ಆಗುವ ಐಟಂಗಳು. ಉಳಿದಂತೆ ಶಾರೂಕ್ ಖಾನ್, ಹೃತಿಕ್ ರೋಷನ್, ಕಾಜೋಲ್, ಬಾಲಿವುಡ್ ನಿರ್ದೇಶಕರಾದ ಅಬ್ಬಾಸ್- ಮಸ್ತಾನ್, ಅಲಿಯಾ ಭಟ್, ಮಧುರ್ ಭಂಡಾರ್‌ಕರ್, ಅಫ್ತಾಬ್ ಶಿವದಾಸನಿ, ಅರ್ಜುನ್ ರಾಂಪಾಲ್‌ನಂತಹ ನಟರು ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ವರ್ಷ ಡಬ್ಬೂ ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ವಿಶೇಷತೆ ಏನಪ್ಪಾ ಅಂದರೆ ಕ್ಯಾಲೆಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ಹೊಸ ಪ್ರತಿಭೆಗಳು ಇಡೀ ವರ್ಷ ಸಕ್ಸಸ್ ರೇಟಿನಲ್ಲಿರುತ್ತಾರೆ. ಕಳೆದ ವರ್ಷ ಹಾಟ್ ಆಗಿ ಕಾಣಿಸಿಕೊಂಡ ವಿದ್ಯಾ ಬಾಲನ್ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಮೂಲಕ ಸಿಕ್ಕಾಪಟ್ಟೆ ಕ್ಲಿಕ್ ಆಗಿದ್ದಳು. ಈ ಬಾರಿಯ ಹೊಸ ಕ್ಯಾಲೆಂಡರ್‌ನಲ್ಲಿ ವರುಣ್ ಹಾಗೂ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ವರ್ಷ ಬಾಲಿವುಡ್ ರಂಗದಲ್ಲಿ ಈ ತಾರೆಗಳು ಮಿಂಚಲಿದೆ ಎನ್ನುವ ಅಭಿಪ್ರಾಯ ಮೂಡಿದೆ. .......................... vk lvk published dis article

No comments:

Post a Comment