Friday, January 25, 2013

‘ಲಿಟಲ್ ಹಾರ್ಟ್’ ಮೌನ ಒಡೆದು ಮಾತಾಯಿತು!

ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಆದರೆ ಇವು ಇಲ್ಲದೇ ಸಿನಿಮಾ ಮಾಡಬಹುದು ಎನ್ನೋದಕ್ಕೆ ಕರಾವಳಿ ಹುಡುಗರು ಇಲ್ಲಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಹೀಗೆ ಬೇಕುಗಳ ನಡುವೆ ಸಿನಿಮಾ ನಿರ್ಮಾಣವಾಗಿ ಹೊರಬರುವ ಪ್ರಸಂಗಗಳೇ ಜಾಸ್ತಿ. ಆದರೆ ವಿಪರ‍್ಯಾಸ ಎಂದರೆ ಈ ಬೇಕುಗಳಿಲ್ಲದೇ ಸಿನಿಮಾ ನಿರ್ಮಾಣ ಮಾಡಬಹುದು ಎನ್ನುವ ಸತ್ಯ ಮಾತ್ರ ಅರಿವಿಗೆ ಬರೋದು ಬಹಳ ಕಷ್ಟ. ಆದರೆ ಕರಾವಳಿಯಲ್ಲಿ ಇಂತಹ ಬೇಕುಗಳನ್ನು ಬದಿಗೊತ್ತಿದ ಯುವಕರು ಸದ್ದು ಮಾಡಿದ್ದಾರೆ. ಲಿಟಲ್ ಹಾರ್ಟ್ ಮಾತುಗಳೇ ಇಲ್ಲದ ಸುಂದರ ಚಿತ್ರವೊಂದು ಈಗಾಗಲೇ ಯೂ ಟ್ಯೂಬ್‌ನಲ್ಲಿ ಸಖತ್ ಕ್ಲಿಕ್ ಆಗುತ್ತಿದೆ. ಯುವಕರು ಮಾಡಿದ ಪುಟ್ಟ ಚಿತ್ರವೊಂದು ಬಹಳಷ್ಟು ಮಂದಿಯನ್ನು ಮೋಡಿ ಮಾಡಿದೆ ಎನ್ನುವುದಕ್ಕೆ ಕ್ಲಿಕ್ ಆಗುತ್ತಿರುವ ಸಂಖ್ಯೆಯ ಲೆಕ್ಕಚಾರವೇ ಹೇಳುತ್ತಿದೆ. ಮೌನ ಹೇಗೆ ಮಾತಾಯಿತು: ‘ಲಿಟಲ್ ಹಾರ್ಟ್’ ಬರೀ ಹನ್ನೆರಡು ನಿಮಿಷಗಳ ಪುಟ್ಟ ಚಿತ್ರ. ಅಂದಹಾಗೆ ಇಲ್ಲಿ ಮೈಲು ಉದ್ದ ಗಾತ್ರದ ಸಂಭಾಷಣೆಗಳಿಲ್ಲ. ಪ್ರೇಕ್ಷಕರನ್ನು ಕಿರಿಕಿರಿ ಮಾಡುವ ಪದ ಪ್ರಯೋಗಗಳಿಲ್ಲ. ಇಲ್ಲಿ ಇರುವುದು ಬರೀ ಮೌನ. ಚಿತ್ರದ ಜತೆಯಲ್ಲಿ ಸಾಗುವ ಹಿನ್ನೆಲೆ ಸಂಗೀತ ನೋಡುವ ಪ್ರೇಕ್ಷಕನನ್ನು ಮೋಡಿ ಮಾಡುತ್ತದೆ. ಭಿಕ್ಷುಕ ಹುಡುಗ (ಬಸಪ್ಪ) ಮತ್ತು ಸಾಮಾನ್ಯ ಮಧ್ಯಮ ವರ್ಗದ ಹುಡುಗ(ಶಾನನ್)ನ ಮುಗ್ಧತೆ ಮತ್ತು ತೀರಾ ವಿರಳ ಎನ್ನುವಂತಹ ಗೆಳೆತನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಸ್ನೇಹಕ್ಕೆ, ಮಾನವೀಯತೆಗೆ ಜಾತಿ, ಧರ್ಮ, ಹಣ, ಅಂತಸ್ತಿನ ಅಡ್ಡಿಯಿಲ್ಲ ಎನ್ನುವುದನ್ನು ಈ ಕಿರು ಚಿತ್ರ ಮತ್ತೇ ಮತ್ತೇ ಗಟ್ಟಿಯಾಗಿ ಹೇಳುವಂತಿದೆ. ಈ ಜಗತ್ತಿನಲ್ಲಿ ನಮಗೆ ಹತ್ತಿರವಾದವರು ಎಷ್ಟೇ ಜನ ಇದ್ದರೂ ಕೆಲವೊಬ್ಬರು ಮಾತ್ರ ಮರೆಯಲಾರದಷ್ಟು ಹತ್ತಿರವಾಗುತ್ತಾರೆ. ಬಹುಶಃ ಇಂತಹ ಮನಸ್ಥಿತಿ ಹೆಚ್ಚಾಗಿ ಮಕ್ಕಳಲ್ಲಿ ಮಾತ್ರ ಮೂಡಿಬರಲು ಸಾಧ್ಯ ಎನ್ನೋದು ಕಿರುಚಿತ್ರ ಹೇಳುತ್ತಿರುವ ಮಾತು. ಚಿತ್ರದಲ್ಲಿ ಬಿಜಾಪುರದ ಪ್ರಸ್ತುತ ಮಂಗಳೂರಿನಲ್ಲಿ ಹೈಸ್ಕೂಲ್ ಓದುತ್ತಿರುವ ಬಸಪ್ಪ, ಅತ್ತಾವರದ ಶಾನನ್ ವಿದ್ಯಾರ್ಥಿಗಳಾದ ಆರನ್ ಮತ್ತು ಅನುಷ್, ಚಂದ್ರಹಾಸ್,ಲತಾ, ನಿತಿನ್ ನಟಿಸಿದ್ದಾರೆ. ಚಿತ್ರವನ್ನು ಟ್ರೈಬಲ್ ಇಮ್ಯಾಜಿನೇಶನ್ ಫಿಲಂಸ್ ನಿರ್ಮಾಣ ಮಾಡಿದೆ. ಕ್ಯಾಮೆರಾದಲ್ಲಿ ಆರ್.ಕೆ .ಮಂಗಳೂರು, ಸಂಗೀತದಲ್ಲಿ ಪುಷ್ಪರಾಜ್ . ಆರ್ .ಎಸ್, ಕಲಾ ನಿರ್ದೇಶನದಲ್ಲಿ ವಿಕಾಸ್ ಮತ್ತು ಮೊನೀಶ್ ಶೆಟ್ಟಿ ಹಾಗೂ ಪ್ರಾಜೆಕ್ಟ್ ಅಂಡ್ ಟೆಕ್ನಿಕಲ್ ಹೆಡ್‌ಗಳಾಗಿ ಪ್ರದೀಪ್ ರಾಯ್ ,ಸಂತೋಷ್ ಶೆಟ್ಟಿ , ಪುಷ್ಪರಾಜ್ .ಆರ್.ಎಸ್ ಹಾಗೂ ಕಥೆ ,ಚಿತ್ರಕಥೆ ,ನಿರ್ದೇಶನದಲ್ಲಿ ನಾಗೇಶ್ ಪುತ್ತೂರು ದುಡಿದಿದ್ದಾರೆ. ನಾಗೇಶ್ ಎನ್ನುವ ಪ್ರತಿಭಾವಂತ: ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಟ್ರೈಬಲ್ ಟ್ಯಾಟೂವಿನಲ್ಲಿ ದುಡಿಯುತ್ತಿರುವ ನಾಗೇಶ್ ಪುತ್ತೂರು ಪ್ರತಿಭಾವಂತ ಹುಡುಗ. ಟ್ಯಾಟೂ ಸೇರಿದಂತೆ ೩ಡಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದಿರುವ ನಾಗೇಶ್ ಈ ಹಿಂದೆ ಕೂಡ ಇಂತಹ ಕಿರುಚಿತ್ರಗಳ ಹಾಗೂ ಚಿತ್ರಗಳ ನಿರ್ಮಾಣದಲ್ಲಿ ದುಡಿದವರು. ತಮ್ಮ ಸ್ನೇಹಿತರ ಬೆಂಬಲದಿಂದ ಕಡಿಮೆ ಖರ್ಚಿನಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯ ಅಂಗವಾಗಿ,ವಿಭಾ ಚಾರಿಟೇಬಲ್ ಟ್ರಸ್ಟ್ , ಡ್ಯುಯಲ್ ಥಾಟ್ಸ್ ನ ಸಹಯೋಗದೊಂದಿಗೆ ನಡೆದ ‘ಕಿರುಚಿತ್ರ ಸ್ಪರ್ಧೆ’ಯಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ಮಕ್ಕಳಿಗಾಗಿ ರಚಿಸಲಾದ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಬಹುಮಾನ ಲಭಿಸಿದೆ. ೫೦ ಸಾವಿರಕ್ಕೂ ಅಧಿಕ ಎಂಟ್ರಿಗಳ ನಡುವೆ ಮೊದಲ ಸುತ್ತಿನಲ್ಲಿ ೪೩ ಹಾಗೂ ಎರಡನೇ ಸುತ್ತಿನಲ್ಲಿ ೧೦ ಆಯ್ಕೆಗಳ ಜತೆಯಲ್ಲಿ ಲಿಟಲ್ ಹಾರ್ಟ್ ವಿಶೇಷ ಬಹುಮಾನ ಪಡೆದಿದೆ. ಟೋಟಲಿ ಕಡಿಮೆ ಖರ್ಚಿನಲ್ಲೂ ಸಿನಿಮಾ ಮಾಡಿ ತೋರಿಸಬಹುದು ಎನ್ನುವುದಕ್ಕೆ ಈ ಹುಡುಗರೇ ದೊಡ್ಡ ಸ್ಯಾಂಪಲ್. ...

No comments:

Post a Comment