Sunday, January 13, 2013
ಕುಡ್ಲ ಹುಡುಗರ ‘ಸಾದಿ’
ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ. ಸಾದಿಯ ಹಾದಿ ಹೇಗಿದೆ ನೋಡಿ...
‘ಸಾದಿ’ ಇದು ಸಾವಿನ ಕಡೆ ತೋರಿಸುವ ಹಾದಿ ಎನ್ನುವ ಟ್ಯಾಗ್‌ಲೈನ್‌ನಲ್ಲೇ ಕುಡ್ಲದ ಹುಡುಗರು ಕ್ಲಿಕ್ ಆಗಿದ್ದಾರೆ. ಕರಾವಳಿಯಲ್ಲಿ ಮಾತ್ರವಲ್ಲ ಇಡೀ ದೇಶದ ಯುವ ಪೀಳಿಗೆಯ ಕುರಿತು ಕುಡ್ಲದ ಹುಡುಗರು ಸಿರೀಯಸ್ ಆಗಿ ಸ್ಟಡಿ ಮಾಡಿದ್ದಾರೆ. ಎಲ್ಲರೂ ಅಧ್ಯಯನ ಮಾಡುವುದರಲ್ಲಿಯೇ ಕಾಲಕಳೆಯುವ ಹೊತ್ತಿಗೆ ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ.
ಕಾಲೇಜಿನ ಮೆಟ್ಟಿಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಯುವಜನತೆಯ ಹಾದಿ ತಪ್ಪುತ್ತಿದೆ ಎನ್ನುವ ಮಾತುಗಳೇ ಈಗ ಕೇಳಿಸಿಕೊಳ್ಳಲು ಆರಂಭವಾಗಿದೆ. ಮಾದಕ ದ್ರವ್ಯಗಳ ಸೇವನೆಯಿಂದ ಭವ್ಯ ಭವಿಷ್ಯದ ಪ್ರಜೆಗಳಾಗಬೇಕಾದವರೂ ಕೂಡ ಆಸ್ಪತ್ರೆಯಲ್ಲಿ ಬಂಧಿಯಾಗಿ ಚಿಕಿತ್ಸೆ ಪಡೆಯುವ ಹಂತಕ್ಕೂ ಬಂದು ತಲುಪಿದ್ದಾರೆ. ಅವರನ್ನು ಒಂದು ಹಾದಿಗೆ ತರುವ ಕೆಲಸ ನಮ್ಮಂತಹ ಯುವಕರಿಂದ ಆದರೆ ಅದು ನಮ್ಮ ಟೆಲಿಚಿತ್ರಕ್ಕೆ ಸಿಕ್ಕ ಯಶಸ್ಸು ಎಂದು ಸಾದಿಯನ್ನು ನಿರ್ದೇಶನ ಮಾಡಿದ ಯುವಕ ನಾಗರಾಜ್ ಅಂಬರ್ ಅವರ ಮಾತು.
ನಾಗರಾಜ್ ಸಾದಿಯ ಹುಟ್ಟು ಬೆಳವಣಿಗೆಯ ಕುರಿತು ಹೇಳುವ ಮಾತು ಹೀಗಿದೆ: ಕರಾವಳಿಯಲ್ಲಿ ಬಹಳಷ್ಟು ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ನನ್ನ ಸುತ್ತಮುತ್ತ ಇಂತಹ ಯುವಕರನ್ನು ಕಣ್ಣಾರೆ ಕಂಡು ಅವರ ನೋವು ನಾನು ಅನುಭವಿಸಿದ್ದೇನೆ. ಅವರನ್ನು ಬದಲಾಯಿಸುವ ಶಕ್ತಿ ನನ್ನ ಬಳಿ ಇಲ್ಲ. ಆದರೆ ಇಂತಹ ಹೊಸ ಯುವಪೀಳಿಗೆಯಂತೂ ಮತ್ತೆ ಅಂತಹ ಚಟಕ್ಕೆ ಗುರಿಯಾಗಬಾರದು ಎನ್ನುವ ಕಾಳಜಿಯಿಂದ ಈ ಟೆಲಿಚಿತ್ರ ರೂಪುಗೊಂಡಿತು ಎನ್ನೋದು ಸಾದಿಯ ಸಿಕ್ರೇಟ್ ಮಾತು.
ಸಾದಿ ಹಾದಿಗೆ ಬಂದು ನಿಂತಿತು:
ಕುಡ್ಲದ ತುಳು ಭಾಷೆಯಲ್ಲಿ ‘ಸಾದಿ’ ಎಂದರೆ ಹಾದಿ ಎನ್ನುವ ಅರ್ಥ ಬರುತ್ತದೆ. ಕರಾವಳಿಯ ಯುವಜನತೆ ಯಾವ ಪರಿಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೆ ಎನ್ನುವ ಪುಟ್ಟ ಸ್ಟ್ರೀಮ್‌ಲೈನ್ ಇಟ್ಟುಕೊಂಡು ಒಂದು ಗಂಟೆಯ ಟೆಲಿಚಿತ್ರವನ್ನು ಮಾಡಲಾಗಿದೆ. ಕರಾವಳಿಯಲ್ಲಿ ಆಗಾಗ ಮಾದಕ ವ್ಯವಸನಕ್ಕೆ ಬಿದ್ದು ಮೃತಪಡುವ ಯುವಜನತೆ ರಹಸ್ಯವನ್ನು ಭೇದಿಸಲು ಆರು ಯುವಕರ ಜತೆಗೆ ಪೊಲೀಸ್ ಇಲಾಖೆಯಿಂದ ನಡೆಯುವ ಕಾರ‍್ಯಾಚರಣೆ ಎಲ್ಲವೂ ಸಾದಿಯಲ್ಲಿರುವ ಮುಖ್ಯ ಪಾಯಿಂಟ್‌ಗಳು.
ಈಗಾಗಲೇ ‘ಸಾದಿ’ಯ ಪ್ರೋಮೋಗಾಗಿ ಈಗಾಗಲೇ ಕತ್ರಿನಾ...ಎನ್ನುವ ರಾಕ್ ಸಾಂಗ್ ಯೂಟ್ಯೂಬ್ ಅಂಗಳದಲ್ಲಿ ಕ್ಲಿಕ್ ಆಗಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ಟೆಲಿಚಿತ್ರದಲ್ಲಿ ನಾಲ್ಕು ಹಾಡುಗಳನ್ನು ನಾಲ್ಕು ವಿಭಿನ್ನ ಸಂಗೀತ ನಿರ್ದೇಶಕರಾದ ಸಂದೇಶ್, ಲಾಯ್ ವೆಲೆಂಟೈನ್, ಸಂದೀಪ್ ಬಳ್ಳಾಲ್, ವಿನೋದ್ ಸುವರ್ಣರಿಂದ ಮೂಡಿ ಬಂದಿದೆ. ಇಡೀ ಟೆಲಿ ಚಿತ್ರ ತುಳು ಭಾಷೆಯಲ್ಲಿರುವುದರಿಂದ ಕರಾವಳಿಯ ಜನತೆಗೆ ಮಾತ್ರ ಸೀಮಿತವಾಗಲಿದೆ.
ಈಗಾಗಲೇ ಯುವಜನತೆಯ ಲೋಕಲ್, ಇಂಟರ್ ನ್ಯಾಷನಲ್ ಅಡ್ಡಾ ಎಂದೇ ಗುರುತಿಸಿಕೊಳ್ಳುವ ಸಾಮಾಜಿಕ ತಾಣಗಳಲ್ಲಿ ಒಂದಾದ ಯೂ ಟ್ಯೂಬ್ ನಲ್ಲಿ ಈ ಸಾದಿ ಟೆಲಿಚಿತ್ರವನ್ನು ಹಾಕುವ ಕೆಲಸ ನಡೆಯುತ್ತಿದೆ. ಈ ಮೂಲಕ ದೇಶ- ವಿದೇಶದಲ್ಲಿರುವ ಕರಾವಳಿ ಮೂಲದ ಎಲ್ಲ ಯುವಜನತೆಯನ್ನು ತಲುಪಲು ಸಾಧ್ಯವಾಗುತ್ತದೆ ಎನ್ನುವ ಇರಾದೆ ಚಿತ್ರದ ನಿರ್ದೇಶಕ ನಾಗರಾಜ್ ಅಂಬರ ಅವರದ್ದು.
ಅಂದಹಾಗೆ ಚಿತ್ರದ ಸಿನಿಮಾಟೋಗ್ರಾಫಿ ಹಾಗೂ ಎಡಿಟಿಂಗ್ ಜಾಗದಲ್ಲಿ ಸಚಿನ್ ಶೆಟ್ಟಿ, ಸಾಹಿತ್ಯದಲ್ಲಿ ನಾಗರಾಜ್, ಕಲಾನಿರ್ದೇಶಕರಾಗಿ ಶಶಿ ನಾರ್ಣಕಜೆ, ಕೋರಿಗ್ರಾಫಿಯಲ್ಲಿ ಅವಿನಾಶ್ ಬಂಗೇರಾ, ಸಾಹಸದಲ್ಲಿ ಜಿತೇಂದ್ರ ಸಿಂಗ್ ಮಣಿಪುರ, ನಿರ್ಮಾಪಕರಾಗಿ ರೀಜು, ನಾಗರಾಜ್, ಸೂರಜ್, ಶ್ರೀಕುಮಾರ್ ಕೈ ಜೋಡಿಸಿದ್ದಾರೆ. ಜ.೧೧ರಿಂದ ಯ್ಯೂ ಟೂಬ್‌ನಲ್ಲಿ ಚಿತ್ರದ ಪ್ರೋಮೋಗಳು ಓಡುತ್ತಿದೆ. ತುಳು ರಂಗಭೂಮಿಯ ಕಲಾವಿದ ದಿನೇಶ್ ಅತ್ತಾವರ, ಲೀಲಾಧರ ಶೆಟ್ಟಿ ಕಾಪು ಸೇರಿದಂತೆ ಕುಡ್ಲದ ಯುವಕರಾದ ನಾಗರಾಜ್, ರಾಮಪ್ರಸಾದ್, ಸುಕೇಶ್, ದೀಪಕ್, ವರುಣ್, ಸೂರಜ್, ಯಶ್‌ರಾಜ್, ಶಶಿ ನಾರ್ಣಕಜೆ, ಜೀವನ್, ಸಂಶುದ್ಧೀನ್, ಪ್ರಸನ್ನ ನಟಿಸಿದ್ದಾರೆ.
ಟ್ಯಾಲೆಂಟ್ ಹುಡುಗನ ದಂಡಯಾತ್ರೆ:
ಖಾಸಗಿ ರೇಡಿಯೋ ವಾಹಿನಿಯೊಂದರಲ್ಲಿ ಆರ್‌ಜೆ ಆಗಿರುವ ನಾಗರಾಜ್ ಅಂಬರ್ ಪ್ರತಿಭಾವಂತ ಹುಡುಗ. ಮೂಲತಃ ಕಾಸರಗೋಡಿನ ನಾಗರಾಜ್ ಡ್ಯಾನ್ಸಿಂಗ್ ನಲ್ಲಿ ಎತ್ತಿ ಕೈ. ಈಗಾಗಲೇ ಸಾವಿರಕ್ಕೂ ಅಧಿಕ ನೃತ್ಯ ಪ್ರದರ್ಶನಗಳನ್ನು ನೀಡಿರುವ ನಾಗರಾಜ್ ನಾನಾ ಖಾಸಗಿ ವಾಹಿನಿಗಳ ಡ್ಯಾನ್ಸ್ ಶೋಗಳಿಂದ ಬಹುಮಾನ ಬಾಚಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಾಗರಾಜ್ ಈಗಾಗಲೇ ‘ಭಾತ್ರತ್ವ’ ಎನ್ನುವ ಪುಟ್ಟ ಟೆಲಿ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇಂಗ್ಲೀಷ್ ನಲ್ಲಿ ‘ತ್ರೀಶೇಡ್ಸ್’ ಎನ್ನುವ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಖಾಸಗಿ ರೇಡಿಯೋ ವಾಹಿನಿಯಲ್ಲಿ ಕಾರ‍್ಯಕ್ರಮ ನೀಡುವ ನಾಗರಾಜ್‌ನ ಧ್ವನಿ ಕೇಳುವ ಅಭಿಮಾನಿಗಳ ವರ್ಗವೊಂದು ಸೃಷ್ಟಿಯಾಗಿದೆ. ಟೋಟಲಿ ಯುವಜನತೆಗಾಗಿ ಏನಾದರೂ ಮಾಡಬೇಕು ಎನ್ನುವ ಸಾಹಸದ ಕೆಲಸ ಹಿರಿಯರು ಮೆಚ್ಚಲೇ ಬೇಕು ಅಲ್ವಾ..?
......
vk lvk published dis article
......
Subscribe to:
Post Comments (Atom)
No comments:
Post a Comment