
ಮಹಿಳೆಯೊಬ್ಬರು ನೌಕಪಡೆಯಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ೧೪ ವರ್ಷಗಳ ಕಾಲ ದೇಶದ ಬಹುತೇಕ ಕರಾವಳಿ ತೀರದ ನೇವಲ್ ಪಡೆಯಲ್ಲಿ ಕೆಲಸ ಮಾಡಿ ರಾಜ್ಯದ ಮೊದಲ ಮಹಿಳಾ ಲೇಡಿ ಕಮಾಂಡರ್ ಇಂಧೂಪ್ರಭಾ ಲವಲವಿಕೆಯ ಮುಂದೆ ಬಂದಿದ್ದಾರೆ. ಇದು ಮಹಿಳಾ ದಿನಾಚರಣೆಗೆ ಮಹಿಳೆಯರಿಗೊಂದು ವಿಶೇಷ ಕತೆ...
ಎನ್ಸಿಸಿಯ ಆರ್ಮಿ ವಿಂಗ್ನಲ್ಲಿ ಹುಡುಗಿಯರಿಗೂ ಅವಕಾಶವಿದೆ ಎನ್ನುವ ಮಾತು ಹೇಗೋ ಗೊತ್ತಿಲ್ಲ ನನ್ನ ಕವಿಗೆ ಬಂದು ಬಿತ್ತು. ಮನೆಯ ಪಕ್ಕದಲ್ಲಿಯೇ ಇದ್ದ ಕಾಲೇಜುನ್ನು ಬಿಟ್ಟು ೨೯ ಕಿ.ಮೀ ದೂರದಲ್ಲಿದ್ದ ಎರ್ನಾಕುಲಂ ಬಿಟ್ಟು ಸಂತ. ಝೇವಿಯರ್ ಕಾಲೇಜಿಗೆ ಬಂದು ಸೇರಿಬಿಟ್ಟೆ. ಎನ್ಸಿಸಿಯಲ್ಲಿ ಕಲಿಸಿಕೊಡುತ್ತಿದ್ದ ಶಿಸ್ತಿನ ಬದುಕು, ಎನ್ಸಿಸಿ ಕ್ಯಾಪ್, ಯೂನಿಫಾರಂ ಎಲ್ಲವೂ ಹಾಕಿ ಸಾಹಸಿ ಬದುಕು ಬಾಳಬೇಕು ಎನ್ನುವ ಒಂದು ಹಂಬಲ ಗೊತ್ತಿಲ್ಲದೇ ಮನಸ್ಸಿನ ಮೂಲೆಯಲ್ಲಿ ಗರಿಕೆದರಿಕೊಂಡಿತು. ಹೆತ್ತವರು ನೀಡಿದ ಸ್ವಾತಂತ್ರ್ಯ ನನ್ನ ಇಂದಿನ ಸಾಹಸಿ ಬದುಕಿಗೆ ದಾರಿಯಾಗಿದೆ ಎಂದರು ಇಂಧೂಪ್ರಭಾ ವಿ. ಕ್ಷಮಿಸಿ. ಭಾರತದ ನೇವಿ ವಿಭಾಗದ ರಾಜ್ಯದ ಮೊತ್ತ ಮೊದಲ ಮಹಿಳಾ ಕಮಾಂಡರ್ ಇಂಧೂಪ್ರಭಾ ಎಂದರೆ ಅದೇ ಸರಿಯಾದ ಮಾತು. ಇಂಧೂಪ್ರಭಾ ಮೂಲತಃ ಮೂಲ್ಕಿಯವರು. ಇಂಧೂಪ್ರಭಾರ ತಂದೆ ಕೇಂದ್ರ ಸರಕಾರದ ಮೀನುಗಾರಿಕೆ ವಿಭಾಗದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಮೀನುಗಾರಿಕೆ ಎಂದರೆ ಇಡೀ ಭಾರತದ ಕರಾವಳಿ ತೀರದಲ್ಲಿಯೇ ಕೆಲಸ. ಹಾಗಾಗಿ ಇಂಧೂಪ್ರಭಾರ ಬಾಲ್ಯ ಎಲ್ಲವೂ ಕೇರಳದ ಕೊಚ್ಚಿನ್ನಲ್ಲಿ ಕಳೆದು ಹೋಯಿತು. ಇಂಧೂಪ್ರಭಾರ ಸಹೋದರ, ಸಹೋದರಿಯರೆಲ್ಲರೂ ವಿಜ್ಞಾನ ವಿಚಾರದಲ್ಲಿ ವ್ಯಾಸಂಗ ಮಾಡಿ ನಂತರ ಮೀನುಗಾರಿಕೆಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಇಂಧೂಪ್ರಭಾ ಮಾತ್ರ ಉಳಿದವರಿಗಿಂತ ಭಿನ್ನ. ತಾನು ಎಲ್ಲರಂತೆ ಅಲ್ಲ ಎಂದುಕೊಂಡು ಭಾರತೀಯ ಸೇನಾ ಪಡೆಗೆ ಸೇರಿಕೊಂಡರು ಎನ್ನುತ್ತಾರೆ ಅವರ ತಂದೆ ಕ್ಯಾಪ್ಟನ್ ವಾಸು ಎ.ಪುತ್ರನ್.
ಮಹಿಳೆಯೊಬ್ಬರು ನೇವಲ್( ನೌಕಪಡೆ) ವಿಭಾಗದಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ೧೪ ವರ್ಷ ದೇಶದ ಬಹುತೇಕ ಕರಾವಳಿ ತೀರದ ನೇವಲ್ ಪಡೆಯಲ್ಲಿ ಕೆಲಸ ಎಂದರೆ ಅದೊಂದು ಸಾಹಸದ ಮಾತೇ ಸರಿ ಎನ್ನುವುದು ನೇವಲ್ ವಿಭಾಗದಿಂದ ಬಂದ ಮಾತು.
ಇಂಧೂ ನೇವಿಗೆ ಸೇರಿದ್ದು ಹೇಗೆ ?
ಅದು ೧೯೯೦ರ ಮಾತು. ಎನ್ಸಿಸಿಯಲ್ಲಿದ್ದ ಕ್ರೇಜ್ ದೂರದ ಊರಿನ ಕಾಲೇಜಿಗೆ ಹೋಗುವಂತೆ ಮಾಡಿತು. ಎನ್ಸಿಸಿ ಎಂದಾಗಲೇ ಅಲ್ಲೊಂದು ದೇಶಸೇವೆಯ ಕಿಚ್ಚು ನಿಧಾನವಾಗಿ ಗೊತ್ತಿಲ್ಲದೇ ಮೊಳಕೆ ಹೊಡೆದು ಬಿಡುತ್ತದೆ. ಇದೇ ಸಮಯದಲ್ಲಿ ಕೇರಳದ ದಿನಪತ್ರಿಕೆಯೊಂದು ದೇಶದ ಸೇನಾಪಡೆಗೆ ಮಹಿಳಾ ಅಕಾರಿಗಳು ಬೇಕಾಗಿದ್ದಾರೆ ಎನ್ನುವ ಪುಟ್ಟ ಜಾಹೀರಾತು ನೀಡಿತು. ಇಂಧೂ ಅವರ ಮನಸ್ಸಿನ ಮೂಲೆಯಲ್ಲಿದ್ದ ಬಯಕೆ ಈಡೇರುವ ಜಾಹೀರಾತು ಅದಾಗಿತ್ತು. ‘ಏನೂ ಬೇಕಾದರೂ ಮಾಡಮ್ಮಾ...ಆದರೆ ನಿನ್ನ ನಿರ್ಧಾರ ಸರಿಯಾಗಿರಬೇಕು’ ಎಂದು ಹೇಳಿದ್ದನ್ನು ಇಂಧೂಪ್ರಭಾ ಈಗಲೂ ನೆನಪಿಸಿಕೊಳ್ಳುತ್ತಾರೆ. ೧೯೯೨ರಲ್ಲಿ ಭಾರತೀಯ ಸೇನಾಪಡೆಯ ನೌಕ,ವಾಯು, ಭೂಸೇನೆ ಎಲ್ಲಕ್ಕೂ ಪರೀಕ್ಷೆ ಬರೆದು ಕೂತರು. ಆದರೆ ಇಂಧೂಪ್ರಭಾ ಈ ಪರೀಕ್ಷೆಗಳ ಕುರಿತು ತುಂಬಾನೇ ಸಿರೀಯಸ್ ಆಗಿರಲಿಲ್ಲ. ಇಂಧೂಪ್ರಭಾ ಮೆರಿಟ್ ಲೀಸ್ಟ್ನಿಂದ ಆ ವರ್ಷ ಹೊರಗೆ ಉಳಿಯುವಂತಾಯಿತು. ಮರಳಿ ಯತ್ನವ ಮಾಡು ಎನ್ನುವ ಸಿದ್ಧಾಂತಕ್ಕೆ ಅಂಟಿಕೊಂಡು ನಂತರ ಎರಡನೇ ಬಾರಿ ಪರೀಕ್ಷೆ ಬರೆದರು. ಮೆರಿಟ್ ಲೀಸ್ಟ್ನಲ್ಲಿ ಈ ಬಾರಿ ಇಂಧೂಪ್ರಭಾ ಹೆಸರು ಕಾಣಿಸಿಕೊಂಡಿತು. ಪರೀಕ್ಷೆಯ ಕುರಿತು ಮಾತನಾಡಿದಾಗ ಇಂಧೂ ಹೇಳುವುದು ಹೀಗೆ ‘ ಬದುಕಿನ ಹೋರಾಟದಲ್ಲಿ ಗೆದ್ದು ಬಂದ ತೃಪ್ತಿ ಈ ಪರೀಕ್ಷೆಯಿಂದ ದೊರಕಿದೆ. ಇಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಒಂದೇ ಪರೀಕ್ಷೆ ಇತ್ತು. ಅದರಲ್ಲೂ ಮೆರಿಟ್ ಲೀಸ್ಟ್ನಲ್ಲಿ ಕಾಣಿಸಿಕೊಳ್ಳುವುದು ಎಂದರೆ ಅದು ಸುಲಭದ ಮಾತೇ ಆಗಿರಲಿಲ್ಲ. ಆದರೆ ಕೊನೆಗೆ ಸಾಸಿ ತೋರಿಸಿದೇ... ನನ್ನ ಮುಂದೆ ನೌಕ ಪಡೆಯ ಯುನಿಫಾರಂ ಇತ್ತು. ನನಗಾದ ಸಂತೋಷ ಈಗಲೂ ವರ್ಣಿಸಲು ಆಗುತ್ತಿಲ್ಲ ಎನ್ನುತ್ತಾರೆ ಅವರು.
ಮರೆಯಲಾಗದ ಅನುಭವ:ಭಾರತೀಯ ನೌಕೆ ಪಡೆಯಲ್ಲಿ ೧೪ ವರ್ಷಗಳ ಕಾಲ ಸುದೀರ್ಘ ಸೇವೆ. ಮಾತ್ರವಲ್ಲ ನಿವೃತ್ತಿಯ ನಂತರನೂ ದಿಲ್ಲಿಯಲ್ಲಿರುವ ಇಂಡೋ- ರಷ್ಯಾ ಕಂಪನಿಯೊಂದರಲ್ಲಿ ಭಾರತೀಯ ನೌಕಪಡೆಗೆ ಸಂಬಂಸಿದ ಕೆಲಸ ಮಾಡ ತ್ತಿರುವ ಇಂಧೂಪ್ರಭಾ ಸಾಹಸಿ ಬದುಕಿನ ಪೊಟ್ಟಣದಲ್ಲಿ ಮರೆಯಲಾಗದ ನೆನಪುಗಳನ್ನು ಬಚ್ಚಿಟ್ಟುಕೊಂಡಿದ್ದಾರೆ. ಇಂಧೂ ಪ್ರಭಾ ಅಸಿಸ್ಟೆಂಟ್ ಲಾಜಿಸ್ಟಿಕ್ ಆಫೀಸರ್ ಆಗಿದ್ದಾಗ ಒಂದು ನೆನಪು ಇಲ್ಲಿದೆ. ಐಎನ್ಎಸ್ ಅಂಬಾ ಎನ್ನೋದು ಭಾರತೀಯ ನೌಕಪಡೆಯ ಒಂದು ನೌಕೆ. ಅದರಲ್ಲಿ ೩೦೦ ಮಂದಿ ಪುರುಷರು ಹಾಗೂ ಇಬ್ಬರು ನೇವಲ್ ಆಫೀಸರ್ಗಳು ಇರುತ್ತಾರೆ. ಅದರಲ್ಲಿ ಒಬ್ಬರು ಇಂಧೂ ಇನ್ನೊಬ್ಬರು ವೈದ್ಯೆ. ೧೫ ದಿನಗಳ ಕಾಲ ನೀರಿನಲ್ಲಿಯೇ ಬದುಕು. ಹೊರ ಜಗತ್ತಿನ ಸಂಪರ್ಕ ಇಲ್ಲದೇ ಬದುಕ ಬೇಕಾದ ಸನ್ನಿವೇಶ. ಇದೊಂದು ಮರೆಯಲಾಗದ ಅನುಭವ ಎನ್ನೋದು ಇಂಧೂರ ಮಾತು. ಡೆಫ್ಯುಟಿ ಲಾಜಿಸ್ಟಿಕ್ಸ್ ಆಫೀಸರ್ ಆಗಿದ್ದಾಗ ಐಎನ್ಎಸ್ ಉತ್ಕೋರ್ಷನಲ್ಲಿ ಮಾಡಿದ ಕೆಲಸ ಕೂಡ ಆಗಾಗ ನೆನಪಿಗೆ ಬರುತ್ತದೆ. ಅಂಡಮಾನ್- ನಿಕೋಬರ್ನಲ್ಲಿ ಕಾಣಿಸಿಕೊಂಡ ಸುನಾಮಿ ಸಮಯವಂತೂ ಎಂದಿಗೂ ಮರೆಯಲಾಗದು ಎನ್ನುತ್ತಾರೆ ಇಂಧೂಪ್ರಭಾ. ಅಂದಹಾಗೆ ಬರೀ ದೇಶಸೇವೆಯ ಜತೆಯಲ್ಲಿಯೇ ಸ್ಕೈ ಡೈವಿಂಗ್ನಲ್ಲೂ ಇಂಧೂಪ್ರಭಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಹತೆಯನ್ನು ಪಡೆದುಕೊಂಡಿದ್ದಾರೆ. ಊರಿಗೆ ಬಂದಾಗಲೆಲ್ಲಾ ಸಮಾಜ ಸೇವೆ, ಭಾರತೀಯ ಸೇನಾ ಪಡೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ- ಮಾರ್ಗದರ್ಶನ, ಉಪನ್ಯಾಸ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಮಹಿಳೆಯರಿಗೆ ಭಾರತೀಯ ಸೇನಾ ಪಡೆಯಲ್ಲಿ ತಾರತಮ್ಯತೆ ಇದೆಯಾ ಎಂದು ಕೇಳಿದರೆ ಇಂಧೂ ಪ್ರಭಾ ಹೇಳುವುದು ಹೀಗೆ ಮಹಿಳೆ ಯಾವುದೇ ವೃತ್ತಿ ಮಾಡಲಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಮುಖ್ಯವಾಗಿ ವೃತ್ತಿಯಲ್ಲಿರುವ ಎಲ್ಲ ವಿಚಾರಗಳನ್ನು ತಿಳಿದುಕೊಂಡರೆ ಅವಳಿಗೆ ಯಾವುದೇ ತಾರತಮ್ಯತೆ ಕಾಣ ಸಿಗುವುದಿಲ್ಲ. ಪುರುಷ- ಮಹಿಳೆ ಎನ್ನುವ ಗಡಿರೇಖೆ ಮರೆಯಾಗಿ ಮಹಿಳೆಯ ಬಗ್ಗೆ ಗೌರವ ಭಾವನೆ ಬೆಳೆದು ಬಿಡುತ್ತದೆ. ಅಂತಹ ಭಾವನೆಯನ್ನು ಮಹಿಳೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಹೌದು. ಮಹಿಳೆ ಈಗ ನಾಲ್ಕು ಗೋಡೆಗಳ ಪ್ರಪಂಚದಿಂದ ದೂರಕ್ಕೆ ಬಂದು ನಿಂತಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸೇನಾ ಕ್ಷೇತ್ರಕ್ಕಂತೂ ಅವಳ ಆಗಮನ ತುಂಬಾನೇ ವಿರಳ. ಅದರಲ್ಲೂ ಉನ್ನತ ಹುದ್ದೆಯಲ್ಲಿ ಮಹಿಳೆಯೊಬ್ಬರು ಕಾಣಿಸಿಕೊಳ್ಳುವುದು ಅಪರೂಪದಲ್ಲಿಯೇ ಅಪರೂಪ. ಅಂತವರಲ್ಲಿ ಇಂಧೂಪ್ರಭಾ ಒಬ್ಬರು. ದೇಶ ಸೇವೆಯೇ ತನ್ನ ಅಂತಿಮ ಗುರಿ ಎನ್ನುವ ಇಂಧೂಪ್ರಭಾರಿಗೊಂದು ಸೆಲ್ಯುಟ್ ಹೊಡೆಯಲೇ ಬೇಕು.. ಅಲ್ವಾ...?
No comments:
Post a Comment