Sunday, April 3, 2011

ಯುಗ ಯುಗಾದಿ...


ಯುಗಾದಿ ಹಬ್ಬ ಮತ್ತೆ ಬಂದು ನಿಂತಿದೆ. ಹೊಸ ಹುರುಪು, ಹೊಸ ಭರವಸೆಗಳ ಮೂಟೆಯನ್ನು ತಂದು ನಮ್ಮ ಮುಂದೆ ಇಟ್ಟಿದೆ. ಕನ್ನಡಿಗರ ನಂಬರ್ ವನ್ ದಿನಪತ್ರಿಕೆ ವಿಜಯ ಕರ್ನಾಟಕ ಯುಗಾದಿಗಾಗಿ ಹೊಸ ವಿಶೇಷಾಂಕವನ್ನು ತಂದು ಮಾರುಕಟ್ಟೆಗೆ ಬಿಟ್ಟಿದೆ. ಒಂದ್ ಸಲ ತಪ್ಪದೇ ವಿಜಯ ಕರ್ನಾಟಕದ ಯುಗಾದಿ ವಿಶೇಷಾಂಕವನ್ನು ನೋಡಿ ಬಿಡಿ. ಮಾರುಕಟ್ಟೆಯಲ್ಲಿ ಈಗಾಗಲೇ ಸೋಲ್ಡ್ ಔಟ್ ಎನ್ನುವ ಬೋರ್ಡ್ ಬೀಳುವ ಸೂಚನೆಯೊಂದು ಮಾರುಕಟ್ಟೆಯ ಮೂಲದಿಂದ ಬಂದಿದೆ. ಯುಗಾದಿ ವಿಶೇಷಾಂಕದಲ್ಲಿ ಛಾಯಾಚಿತ್ರಕಾರ ರಾಜ್ ಗೋಪಾಲ್ ಕ್ಲಿಕ್ ಮಾಡಿದ ಕನ್ನಡದ ಗ್ಲಾಮರ್ ಗೊಂಬೆ ರಾಗಿಣಿ ದ್ವಿವೇದಿಯ ಚಿತ್ರ ಇಲ್ಲಿ ಹಾಕಲಾಗಿದೆ. ಈ ಬಾರಿಯ ಯುಗಾದಿಗೆ ಬಂಪರ್ ಕೊಡುಗೆ ಎಂದುಕೊಂಡು ಬಿಡಿ.

Saturday, April 2, 2011

‘ಪಾನ್ ಸಿಂಗ್ ತೋಮರ್’ ಓಡುವ ಚಿತ್ರ


ದೇಶದಲ್ಲಿ ಕ್ರಿಕೆಟ್ ಬಿಟ್ಟು ಉಳಿದ ಕ್ರೀಡೆಗಳು ಉಸಿರಾಡುತ್ತದೆ ಅಂತಾ ಬಹಳ ಮಂದಿಗೆ ತೋರಿಸುವ ಯತ್ನ ಚಿತ್ರ ನಿರ್ದೇಶಕ ಟಿಂಗ್‌ಮಾನ್‌ಸೋ ದೌಲಿಯಾ ಮಾಡಲು ಹೋಗಿದ್ದು ಬಹಳ ಹಳೆಯ ಹಿಸ್ಟರಿ. ಈಗ ಅವರು ಓಡುವ ಚಿತ್ರವೊಂದನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.

ಬಾಲಿವುಡ್‌ನ ಬುದ್ದಿವಂತ ನಿರ್ದೇಶಕರು ‘ಲಗಾನ್’ ಮೂಲಕ ಕ್ರಿಕೆಟ್‌ನ್ನು ಟಚ್ ಮಾಡಿದರು. ‘ಚಕ್ ದೇ ಇಂಡಿಯಾ’ ಮೂಲಕ ಸೈಡ್‌ಗೆ ಹೋಗಿದ್ದ ಮಹಿಳೆಯರ ‘ಹಾಕಿ’ಗೂ ಬಲ ಕೊಟ್ಟರು. ಈಗ ಅಥ್ಲೀಟ್ ಕ್ಷೇತ್ರದಲ್ಲೂ ಸಿನ್ಮಾ ಒಂದು ಸೈಲೆಂಟ್ ಆಗಿ ಬರುತ್ತಿದೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಈ ಸಿನ್ಮಾ ತಯಾರಿ ಯಾರಿಗೂ ಗೊತ್ತಿಲ್ಲದೇ ನಡೆಯುತ್ತಿತ್ತು. ಭಾರತೀಯ ಅಥ್ಲೀಟ್ ರಂಗದಲ್ಲಿ ಇದೊಂದು ಬಹಳ ಗಂಭೀರವಾದ ಚಿತ್ರವಾಗಲಿದೆ. ಜತೆಗೆ ಅಥ್ಲೀಟ್‌ನಲ್ಲಿ ಯಾಕೆ ಭಾರತದ ಹಿಂದೆ ಉಳಿದುಕೊಂಡಿದೆ ಎಂಬುವುದರ ರಹಸ್ಯವನ್ನು ಭೇದಿಸುವ ಪ್ರಯತ್ನ ಇದಾಗಲಿದೆ ಎನ್ನೋದು ಚಿತ್ರದ ನಿರ್ದೇಶಕ ಟಿಂಗ್‌ಮಾನ್‌ಸೋ ದೌಲಿಯಾ ಅವರ ಬಲವಾದ ನಂಬಿಕೆ.
ಅಂದಹಾಗೆ ‘ಪಾನ್ ಸಿಂಗ್ ತೋಮರ್’ ಅಂತಾ ಚಿತ್ರದ ಹೆಸರು. ಇಲ್ಲಿ ಒಬ್ಬ ಸೈನಿಕ ತನ್ನ ವೃತ್ತಿಗೆ ಸೈನ್ ಔಟ್ ಕೊಟ್ಟು ನಂತರ ಅಥ್ಲೀಟ್ ರಂಗವನ್ನು ಪ್ರವೇಶ ಮಾಡುವುದು ಇಡೀ ಚಿತ್ರದ ಮುಖ್ಯ ಬೇಸ್ ಪಾಯಿಂಟ್. ಖ್ಯಾತ ನಟ ಇರ್ಫಾನ್ ಖಾನ್ ಈ ಸೈನಿಕ ಹಾಗೂ ಅಥ್ಲೀಟ್ ಇಬ್ಬರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಧ್ಯಪ್ರದೇಶದ ಸಣ್ಣ ಹಳ್ಳಿಯಲ್ಲಿ ಬೆಳೆದು ಏಳು ವರ್ಷಗಳಿಂದ ನಿರಂತರವಾಗಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಪಾನ್ ಸಿಂಗ್ ತೋಮರ್ ಎಂಬ ಕ್ರೀಡಾಪಟುವಿನ ಮೇಲೆ ಈ ಚಿತ್ರ ಬರಲಿದೆ. ಈಗಲೂ ಭಾರತದ ಅಥ್ಲೀಟ್ ರಂಗದಲ್ಲಿ ಪಾನ್‌ಸಿಂಗ್ ತೋಮರ್‌ರ ಸಾಧನೆ ಮುಟ್ಟಲು ಕೂಡ ಸಾಧ್ಯವಾಗಿಲ್ಲವಂತೆ..!!
ಅಥ್ಲೀಟ್‌ನಿಂದ ಪಾನ್ ಸಿಂಗ್ ತೋಮರ್ ಭಾರತದ ಸೈನ್ಯಕ್ಕೆ ಸೆಲೆಕ್ಟ್ ಆಗುತ್ತಾನೆ. ಅಲ್ಲಿಂದ ನಿವೃತ್ತಿಯಾಗುತ್ತಾ ತನ್ನ ಊರಿಗೆ ಮರಳುತ್ತಾನೆ. ಅಲ್ಲಿನ ಅನ್ಯಾಯವನ್ನು ಗಮನಿಸುತ್ತಾ ಪಾನ್‌ಸಿಂಗ್ ಚಂಬಲ್ ಕಣಿವೆ ದರೋಡೆಕೋರರ ಜತೆಯಲ್ಲಿ ಸೇರಿಕೊಳ್ಳುತ್ತಾನೆ. ಮುಂದೆ ಪೊಲೀಸ್ ಶೂಟ್ ಔಟ್‌ನಲ್ಲಿ ಕೊನೆಯುಸಿರು ಎಳೆಯುತ್ತಾನೆ. ಇದು ಪಾನ್ ಸಿಂಗ್ ತೋಮರ್‌ನ ಟೂ ಒರಿಜಿನಾಲ್ ಸ್ಟೋರಿ ಈಗ ಚಿತ್ರದ ಮೂಲಕ ಬೆಳ್ಳಿ ತೆರೆಗೂ ಅಪ್ಪಳಿಸಲಿದೆ. ಈ ಚಿತ್ರವನ್ನು ಬಾಲಿವುಡ್‌ನ ಬಿಗ್ ಬ್ಯಾನರ್ ಯುಟಿವಿ ಪಿಕ್ಚರ್ ತೆರೆಗೆ ತರುವ ಸಾಹಸ ಮಾಡುತ್ತಿದೆ.
ನಿರ್ದೇಶಕನ ಕಣ್ಣಿನಿಂದ..
ಭಾರತದಲ್ಲಿ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳ ಜತೆಯಲ್ಲಿ ಅಥ್ಲೀಟ್ ಕ್ಷೇತ್ರನೂ ಇದೆ ಅಂತಾ ಗೊತ್ತಾಗುತ್ತಿಲ್ಲ. ಅಥ್ಲೀಟ್ ಕ್ಷೇತ್ರದಲ್ಲಿ ಇಂದಿಗೂ ಯಾವುದೇ ಬದಲಾವಣೆಗಳು ಆಗಿಲ್ಲ. ನಾವು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಯಾಕೆ ಹೊಡೆಯುತ್ತಿಲ್ಲ ಎಂದರೆ ಈ ಕ್ಷೇತ್ರದಲ್ಲಿ ನಮ್ಮ ಕಳಪೆ ಗುಣಮಟ್ಟ. ಈ ವಿಚಾರದ ಜತೆಯಲ್ಲಿ ಪಾನ್ ಸಿಂಗ್ ತೋಮರ್ ಎಂಬ ಕ್ರೀಡಾಪಟುವನ್ನು ಹೈಲೇಟ್ ಮಾಡುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಟಿಂಗ್‌ಮಾನ್‌ಸೋ ದೌಲಿಯಾ ಹೇಳುತ್ತಾರೆ.
ಈ ಚಿತ್ರ ಬಹಳಷ್ಟು ಜನರಿಗೆ ಪ್ರೇರಣೆ ನೀಡಲಿದೆ. ಭಾರತೀಯ ಸಿನಿಮಾ ರಂಗದಲ್ಲಿ ಬಂದ ಕ್ರೀಡಾ ಚಿತ್ರಗಳಿಗಿಂತ ಸಂಪೂರ್ಣ ಭಿನ್ನವಾದ ಕತೆಯನ್ನು ಹೊಂದಿದೆ. ಅಥ್ಲೀಟ್‌ಗಳಿಗೆ ಇಲ್ಲೊಂದು ಒಳ್ಳೆಯ ಮೆಸೇಜ್ ಕೂಡ ಇಟ್ಟಿರುವುದು ನಿಜಕ್ಕೂ ಸಕ್ಸಸ್ ಪಾಯಿಂಟ್ ರೀಚ್ ಆಗುತ್ತದೆ ಎನ್ನುವ ನಂಬಿಕೆ ನನ್ನದು ಎನ್ನುವುದು ನಿರ್ದೇಶಕರ ಮಾತು.
ಈ ಚಿತ್ರವನ್ನು ಉತ್ತರಖಂಡದ ಕಾಡುಗಳಲ್ಲಿ ಹಾಗೂ ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿ ಶೂಟ್ ಮಾಡಿದ್ದೇವೆ. ೨೦೦೮ರ ಡಿಸೆಂಬರ್‌ನಲ್ಲಿ ಚಿತ್ರವನ್ನು ಆರಂಭ ಮಾಡಿಕೊಂಡಿದ್ದೇವು, ಆಗಸ್ಟ್ ತಿಂಗಳ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಕುರಿತು ಮಾತುಕತೆ ನಡೆದಿದೆ. ಖ್ಯಾತ ದೂರ ಓಟಗಾರ ಹಾಗೂ ನ್ಯಾಷನಲ್ ಅಥ್ಲೀಟ್ ಕೋಚ್ ಸತ್ಪಾಲ್ ಸಿಂಗ್ ಇರ್ಫಾನ್ ಖಾನ್‌ರಿಗೆ ಓಡುವ ಕುರಿತು ತರಬೇತಿ ನೀಡಿದ್ದಾರೆ. ಎರಡು ಮೂರು ದೃಶ್ಯಗಳಲ್ಲಿ ಸಿಂಗ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಂಬಲ್ ಕಣಿವೆಯಲ್ಲಿ ಶೂಟ್ ಆದ ಇದು ಸೆಕೆಂಡ್ ಚಿತ್ರ ಅಂತ ನೆನಪಿರಲಿ. ಮೊದಲ ಚಿತ್ರ ಶೇಖರ್ ಕಪೂರ್‌ರ ‘ಬ್ಯಾಂಡಿಟ್ ಕ್ವೀನ್’ ಬಾಕ್ಸಾಫೀಸ್‌ನಲ್ಲಿ ಹಣದ ಮಳೆಯನ್ನು ತಂದಿತ್ತು.

ಬಾಲಿವುಡ್‌ಗೆ ಹಾರುವ ಸಿಖ್ !


ಕ್ರೀಡಾಂಗಣದಲ್ಲಿ ಓಡಿಕೊಂಡು ಸುಸ್ತಾಗಿದ್ದ ಮಿಲ್ಕಾ ಸಿಂಗ್ ಈ ಬಾರಿ ಬಾಲಿವುಡ್‌ನಲ್ಲಿ ತನ್ನ ಓಡುವ ಸರದಿಯನ್ನು ಮುಂದುವರಿಸಿದ್ದಾರೆ. ‘ಭಾಗ್ ಮಿಲ್ಕಾ ಭಾಗ್’ ಚಿತ್ರವೊಂದು ಬರಲಿದೆ ಎಂಬ ಸೂಚನೆ ಬಂದಿದೆ.

ಇದು ತುಂಬಾನೇ ದೊಡ್ಡ ಬ್ರೇಕಿಂಗ್ ನ್ಯೂಸ್..ಲೆಜೆಂಡ್ ಅಥ್ಲೀಟ್ ಮಿಲ್ಕಾ ಸಿಂಗ್ ದೊಡ್ಡ ಸುದ್ದಿಯಾಗುತ್ತಿದ್ದಾರೆ. ಅವರು ಮತ್ತೇ ಕಾಲಿಗೆ ಸ್ಪೈಕ್ ಶೂ ಹಾಕಿಕೊಂಡು ಕ್ರೀಡಾಂಗಣಕ್ಕೆ ಇಳಿಯುತ್ತಿಲ್ಲ ಬಿಡಿ. ಅವರ ಬದುಕನ್ನು ಇಡೀಯಾಗಿ ಅಥವಾ ಬಿಡಿ ಬಿಡಿಯಾಗಿ ಚಿತ್ರದ ಮೂಲಕ ಬಾಲಿವುಡ್ ಬಿಗ್ ತೆರೆಗೆ ತರುವ ದೊಡ್ಡ ಸ್ಕೀಮ್‌ವೊಂದು ಮುಂಬಯಿಯ ಮಸಾಲ ಅರೆಯುವ ಪಡಸಾಲೆಯಲ್ಲಿ ನಿರ್ದೇಶಕರೊಬ್ಬರು ಕೈಗೆತ್ತಿಕೊಂಡಿದ್ದಾರೆ.
‘ಹಾರುವ ಸಿಖ್’ ಎಂದೇ ಭಾರತೀಯ ಕ್ರೀಡಾರಂಗದಲ್ಲಿ ಕರೆಯಲಾಗುವ ಮಿಲ್ಕಾ ಸಿಂಗ್‌ರ ಆತ್ಮಕತೆಯನ್ನು ಇಟ್ಟುಕೊಂಡು ಈ ಚಿತ್ರ ಮೂಡಿಬರಲಿದೆ. ಮಿಲ್ಕಾ ಸಿಂಗ್‌ರ ಕ್ರೀಡಾ ಬದುಕಿನ ಜತೆಯಲ್ಲಿ ಕ್ರೀಡೆಯ ಕುರಿತು ಭಾರತೀಯ ಸಮಾಜದ ನಿಲುವುಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಬಾಲಿವುಡ್‌ನಲ್ಲಿ ಯುವಜನತೆಗೆ ಹೊಸ ವೇದಿಕೆಯನ್ನು ಸೃಷ್ಟಿಸಿಕೊಟ್ಟ‘ ರಂಗ್ ದೇ ಬಸಂತಿ’ ಫೇಮ್ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಈ ಚಿತ್ರದ ನಿರ್ದೇಶಕ. ‘ಭಾಗ್ ಮಿಲ್ಕಾ ಭಾಗ್’ ಎಂದು ಚಿತ್ರದ ಟೈಟಲ್ ಕಾರ್ಡ್ ಈಗಾಗಲೇ ನಿರ್ದೇಶಕರು ಚ್ಯೂಸ್ ಮಾಡಿದ್ದಾರೆ.
ಈ ಚಿತ್ರ ಬರೀ ಒಂದು ಕ್ರೀಡಾ ಪಟುವಿನ ಬದುಕು ಹಾಗೂ ಪದಕಗಳ ಕುರಿತು ಚರ್ಚೆ ಹುಟ್ಟು ಹಾಕುವ ಸಿನಿಮಾ ಅಲ್ಲ ಎಂದು ಸಿನಿಮಾ ನಿರ್ದೇಶಕರು ಚಿತ್ರ ತೆಗೆಯುವ ಮೊದಲೇ ಬುಡುಬುಡುಕೆಯ ಭವಿಷ್ಯ ನುಡಿದಿದ್ದರು. ಇದಕ್ಕಾಗಿ ಚಂಡಿಗಡದಲ್ಲಿರುವ ಮಿಲ್ಕಾ ಸಿಂಗ್ ಮನೆಯಲ್ಲಿರುವ ಪಡಸಾಲೆಯಲ್ಲಿ ಕೂತು ಮೆಹ್ರಾ ಸ್ಟೋರಿ ಕುರಿತು ಆಳವಾಗಿ ಚರ್ಚೆಗೆ ಇಳಿದಿದ್ದರು. ಗೀತೆ ರಚನೆಗಾರ ಪ್ರಸೂನ್ ಜೋಶಿ ಕೂಡ ಮಿಲ್ಕಾ ಸಿಂಗ್‌ರ ಮನೆಯಲ್ಲಿ ಟೆಂಟ್ ಹಾಕಿ ಚಿತ್ರದ ಗೀತೆಗಳ ಹಾಗೂ ಚಿತ್ರಕತೆಯ ಕುರಿತು ಸ್ಕೆಚ್ ಹಾಕಿ ಹೊರಬಂದಿದ್ದಾರೆ.
ಮಿಲ್ಕಾ ಸಿಂಗ್ ಈ ಹಿಂದೆ ತನ್ನ ಆತ್ಮಕತೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವ ಕುರಿತು ಯಾವೊಬ್ಬ ಚಿತ್ರ ನಿರ್ದೇಶಕರಿಗೂ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಮಿಲ್ಕಾ ಸಿಂಗ್‌ರ ಪುತ್ರ ಗಾಲ್ ಆಟಗಾರ ಜೀವಾ ಮಿಲ್ಕಾ ಸಿಂಗ್‌ರನ್ನು ಓಲೈಕೆ ಮಾಡಿಕೊಂಡಿದ್ದ ಮೆಹ್ರಾ ಸಾಹೇಬ್ರು ಮಿಲ್ಕಾ ಸಿಂಗ್‌ರನ್ನು ಬಹಳ ಸುಲಭವಾಗಿ ಒಪ್ಪಿಸಿಕೊಂಡು ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ.
ಒಂದು ರೂಪಾಯಿ ಸಾಕು:
‘ಭಾಗ್ ಮಿಲ್ಕಾ ಭಾಗ್’ ಚಿತ್ರಕ್ಕಾಗಿ ಮಿಲ್ಕಾ ಸಿಂಗ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ? ಈ ವಿಚಾರ ಕೇಳಿದರೆ ಒಂದು ಸಾರಿ ದಂಗಾಗಿ ಹೋಗಬಹುದು. ಬರೀ ಒಂದು ರೂಪಾಯಿ ಮಾತ್ರ ಮೆಹ್ರಾ ಅವರಿಂದ ಮಿಲ್ಕಾ ಸಿಂಗ್ ಪಡೆದುಕೊಂಡಿದ್ದಾರೆ. ಈ ಕುರಿತು ಮಿಲ್ಕಾ ಸಿಂಗ್‌ರನ್ನು ಕೇಳಿದರೆ ಈ ಚಿತ್ರದಿಂದ ನಾನು ಪಡೆಯುವ ಸಂಭಾವನೆ ಮುಖ್ಯವಲ್ಲ. ಚಿತ್ರ ಬಿಡುಗಡೆ ಕಂಡ ನಂತರ ಪ್ರೇಕ್ಷಕರು ಅದರಿಂದ ಸ್ವಲ್ಪ ತಿಳಿದುಕೊಂಡರೆ ಸಾಕು. ಹಳ್ಳಿ ಹುಡುಗನೊಬ್ಬ ಏನೂ ಇಲ್ಲದೇ ಸಾಸಿದ ವಿಕ್ರಮ ಮಾಡಿದರೆ ಉಳಿದವರು ಯಾಕೆ ಮಾಡಲು ಸಾಧ್ಯವಿಲ್ಲ ಎಂಬುವುದೇ ನನ್ನ ಪ್ರಶ್ನೆಯಾಗಿದೆ ಎಂದರು.
ಇದು ಪರ್‌ಫೆಕ್ಟ್ ತಂಡ :
ಈ ಚಿತ್ರ ಭಾರತದ ಕೆಲವೊಂದು ಪ್ರವಾಸಿ ತಾಣಗಳ ಜತೆಯಲ್ಲಿ, ಜಪಾನ್, ಪಾಕಿಸ್ತಾನ ಹಾಗೂ ಯುರೋಪಿಯನ್ ದೇಶಗಳಲ್ಲಿ ಚಿತ್ರ ಶೂಟಿಂಗ್ ಕಾರ್‍ಯ ಮುಂಬರುವ ದಿನಗಳಲ್ಲಿ ನಡೆಯಲಿದೆ. ಮೆಹ್ರಾ ಅವರು ತುಂಬಾಪರ್‌ಫೆಕ್ಟ್ ರೀತಿಯಲ್ಲಿ ತನ್ನ ತಂಡವನ್ನು ಕಟ್ಟುತ್ತಾರೆ. ಚಿತ್ರ ನಿರ್ದೇಶನದ ಜತೆಯಲ್ಲಿ ಎಲ್ಲ ವಿಭಾಗದಲ್ಲೂ ಅವರು ಕೈಯಾಡಿಸುತ್ತಾರೆ ಎನ್ನುತ್ತಾರೆ ಪ್ರಸೂನ್ ಜೋಶಿ.
ಕಳೆದ ನಾಲ್ಕು ತಿಂಗಳುಗಳಿಂದ ಮಿಲ್ಕಾ ಸಿಂಗ್‌ರನ್ನು ಈ ಚಿತ್ರ ಕ್ಕಾಗಿ ಬಹಳಷ್ಟು ಪರಿಶ್ರಮ ಪಟ್ಟಿದ್ದೇವೆ, ಬಹಳಷ್ಟು ಹೋಮ್ ವರ್ಕ್ ಮಾಡಿಕೊಂಡು ನಾವು(ಮೆಹ್ರಾ) ಸಿಂಗ್‌ರಲ್ಲಿ ಮಾತುಕತೆ ನಡೆಸಿಕೊಂಡು ಬಂದಿರುವ ಕಾರಣ ಕೊನೆಗೂ ಮಿಲ್ಕಾ ಸಿಂಗ್ ಗ್ರೀನ್ ಸಿಗ್ನಲ್ ದಯಾಪಾಲಿಸಿದ್ದಾರೆ. ಚಿತ್ರ ಖಂಡಿತವಾಗಿಯೂ ಉತ್ತಮ ರೀತಿಯಲ್ಲಿ ಮೂಡಿಬರಲಿದೆ ಎನ್ನೋದು ನನ್ನ ನಂಬಿಕೆ ಎನ್ನುತ್ತಾರೆ ಪ್ರಸೂನ್ ಜೋಶಿ.

ಬಾಲಿವುಡ್‌ನ ಫೈಟರ್ ಶೆಟ್ಟಿ !


ತೆರೆಯಲ್ಲಿ ಕಾಣದ ತೆರೆಮರೆಯ ಕಲಾವಿದರು ಸುದ್ದಿಗೆ ಬರೋದಿಲ್ಲ. ಬಣ್ಣದ ಲೋಕದಲ್ಲಿ ಇವರಿಗೊಂದು ಆಸ್ತಿತ್ವ ಹಾಗೂ ಅವರದೇ ಆದ ಕತೆಗಳಿವೆ. ಅದರಲ್ಲೂ ಬಾಲಿವುಡ್‌ನ ದಿಗ್ಗಜರೊಂದಿಗೆ ಫೈಟ್ ಮಾಡಿದ ಕಟೀಲಿನ ಜಯರಾಮ್ ಶೆಟ್ಟಿ ಅವರ ಕತೆನೇ ಕೊಂಚ ಭಿನ್ನ.. ಬನ್ನಿ ಅವರ ಕತೆ ಏನ್ ಕೇಳೋಣ...

ಓದು ಬರಹ ಎನ್ನುವುದು ನಿಜಕ್ಕೂ ತಲೆಗೆ ಹೋಗದ ವಿದ್ಯೆ. ಅಂತೂ ಇಂತೂ ಏಳನೇ ಕ್ಲಾಸ್‌ನಲ್ಲಿ ಮೂರು ವರ್ಷ ಕೂತು ಪಾಸ್ ಮಾಡಿದಾಗ ಸಿವಿಲ್ ಸರ್ವಿಸ್ ಎಕ್ಸಾಮ್‌ನಲ್ಲಿ ರ್‍ಯಾಂಕ್ ಬಂದ ಅನುಭವವಾಯಿತು. ಅಲ್ಲಿಂದ ಶಾಲೆ ಬಿಟ್ಟು ಮುಂಬಯಿಯಲ್ಲಿ ಚಿಕ್ಕ ಕ್ಯಾಂಟೀನ್ ಆರಂಭ ಮಾಡಿದೆ. ಬ್ಯುಸಿನೆಸ್ ಬಹಳ ಒಳ್ಳೆದಿತ್ತು. ಆದರೆ ಕ್ಯಾಂಟೀನ್‌ಗೆ ಬಂದ ಒಬ್ಬ ಗುಜರಾತಿ ನನ್ನನ್ನು ಬಣ್ಣದ ಬದುಕಿಗೆ ಪ್ರವೇಶ ಮಾಡಿಸಿ ಕೊಟ್ಟ . ನಂತರ ಬಣ್ಣದ ಲೋಕ ನನ್ನನ್ನು ಸಂಪೂರ್ಣ ಎಳೆದುಕೊಂಡು ಬಿಟ್ಟಿತು ಎಂದು ಕಟೀಲಿನ ಜಯರಾಮ್ ಶೆಟ್ಟಿ ಅನುಭವಗಳ ಗಣಿಯೊಳಗೆ ಇಳಿದು ಬಾಲಿವುಡ್‌ನಲ್ಲಿ ತಾನು ಕಂಡ ಬದುಕಿನ ಪುಟಗಳನ್ನು ತೆರೆದು ಕೂತರು.
ಅಂದಹಾಗೆ ಜಯರಾಮ್ ಶೆಟ್ಟಿ ಬಾಲಿವುಡ್‌ನ ಆಕ್ಷನ್ ಫೀಲ್ಡ್‌ನಲ್ಲಿ ಬಹಳ ಫೇಮಸ್ ಫೈಟರ್. ೧೯೭೦ರಿಂದ ಹಿಡಿದು ೧೯೯೦ ವರೆಗೂ ಬಾಲಿವುಡ್‌ನ ಸ್ಟಾರ್‌ಗಳ ಡ್ಯೂಪ್ ಫೈಟರ್ ಆಗಿ ಮಿಂಚಿ ಬಂದವರು. ನಟ ಮಿಥುನ್ ಚಕ್ರವರ್ತಿಯಿಂದ ಹಿಡಿದು ಬಿಗ್ ಬಿ ಅಮಿತಾಭ್ ಬಚ್ಚನ್, ಶತ್ರುಘ್ನಾ ಸಿನ್ಹಾರಿಂದ ಸಲ್ಮಾನ್ ಖಾನ್‌ವರೆಗೂ ಸ್ಟಾರ್ ನಟರಿಗೆ ಆಕ್ಷನ್ ಹೀರೋಗಳ ಇಮೇಜ್ ತಂದು ಕೊಟ್ಟವರಲ್ಲಿ ಕಟೀಲಿನ ಜಯರಾಮ್ ಶೆಟ್ಟಿ ಬಹಳ ಪ್ರದಾನ ಪಾತ್ರವಹಿಸಿತ್ತಾರೆ.
ಸಿನಿಮಾಗಳಲ್ಲಿ ಆಕ್ಷನ್ ಸಿಕ್ವೇನ್ಸ್ ಬಂದಾಗ ಥಿಯೇಟರ್‌ನಲ್ಲಿ ಕೂತ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಾರೆ. ಸ್ಟಾರ್‌ರೊಬ್ಬರು ಮೂರನೇ ಮಹಡಿಯಿಂದ ಜಿಗಿದಾಗ ಚಪ್ಪಾಳೆಗಳ ಸುರಿಮಳೆ ಸುರಿಯುತ್ತದೆ. ಆದರೆ ನಿಜಕ್ಕೂ ಪ್ರೇಕ್ಷಕರು ನೋಡಿರದ ಬಹಳಷ್ಟು ಸತ್ಯಗಳು ಅಲ್ಲಿ ನಡೆದಿರುತ್ತದೆ. ಇಂತಹ ಆಕ್ಷನ್ ಸೀನ್‌ನಿಂದ ಬದುಕಿಗೆ ರಿಸ್ಕ್ ಇದೆ ಎಂದು ಗೊತ್ತಾದ ಕೂಡಲೇ ಸ್ಟಾರ್‌ಗಳು ಹಿಂದೆ ಸರಿದು ಬಿಡುತ್ತಾರೆ. ನಂತರ ಡ್ಯೂಪ್ ಆರ್ಟಿಸ್ಟ್‌ಗಳಿಂದ ಈ ಸೀನ್‌ಗಳನ್ನು ಮಾಡಿಸಲಾಗುತ್ತದೆ. ನಿಜಕ್ಕೂ ಸ್ಟಾರ್‌ಗಳು ತೆರೆಯ ಮೇಲೆ ಮಿಂಚಿ ಬಂದರೆ ಡ್ಯೂಪ್ ಆರ್ಟಿಸ್ಟ್‌ಗಳು ತೆರೆ ಹಿಂದೆ ನಿಂತು ಮಿಂಚುತ್ತಾರೆ. ಆದರೆ ತೆರೆಯ ಹಿಂದಿರುವ ಕಲಾವಿದರು ಮಾತ್ರ ಯಾರಿಗೂ ಕಾಣಿಸುವುದಿಲ್ಲ ಎನ್ನುತ್ತಿದ್ದಾಗ ಜಯರಾಮ್ ಶೆಟ್ಟಿ ಅವರ ಮಾತಿನ ಹಿಂದಿರುವ ನೋವು ಕಾಣುತ್ತಿತ್ತು.
‘ಬಣ್ಣದ ಬದುಕಿನ ಕತೆ ತುಂಬಾನೇ ಡಿಫರೆಂಟ್. ಇಲ್ಲಿ ಸೋಲು ಖಚಿತ.. ಗೆಲುವು ಅನಿರೀಕ್ಷಿತ ! ಅದರಲ್ಲೂ ಸಿನಿಮಾದಲ್ಲಿ ಸ್ಟಂಟ್ ಮಾಸ್ಟರ್, ಫೈಟರ್ ಎಂದರೆ ಬದುಕಿನ ಆಶೆ ಬಿಟ್ಟು ಕೆಲಸ ಮಾಡುವಂತದ್ದು, ಬಹಳಷ್ಟು ರಿಸ್ಕ್ ಸಿಕ್ವೇನ್ಸ್‌ನಲ್ಲಿ ಜೀವ ಕಳೆದುಕೊಂಡು ಬಿಟ್ಟವರು ಬಹಳಷ್ಟು ಮಂದಿ ಇದ್ದಾರೆ. ಈ ಆಕ್ಷನ್ ಫೀಲ್ಡ್‌ನಲ್ಲಿ ಇದ್ದವರು ಯಾರು ಕೂಡ ನೆಟ್ಟಗೆ ಮನೆಗೆ ಹೋದವರಿಲ್ಲ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಗಾಯ ಮಾಡಿಕೊಂಡು ಫೀಲ್ಡ್ ಬಿಟ್ಟುವರೇ ಜಾಸ್ತಿ ಎನ್ನುತ್ತಾರೆ ಜಯರಾಮ್ ಶೆಟ್ಟಿ.
ಬಣ್ಣ ಬಣ್ಣದ ಬದುಕು:
‘ಭಯಾನಕ್’ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಅವರೊಂದಿಗೆ ಅರ್ಧ ಗಂಟೆ ಕೆಸರಿನಲ್ಲಿ ಹೊಡೆದಾಟದ ಸೀನ್ ನನಗೆ ಈಗಲೂ ತುಂಬಾ ಇಷ್ಟವಾದ ಫೈಟ್. ಹೊಡೆದಾಟ ಕೊನೆಯಾದಾಗ ನಿಜಕ್ಕೂ ಮಿಥುನ್ ಗಾಯಗೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆಗುವಾಗ ಅರ್ಧ ಗಂಟೆಯ ಈ ಹೊಡದಾಟ ಬರೀ ಐದು ನಿಮಿಷದಲ್ಲಿ ಮುಗಿದು ಹೋಗಿತ್ತು ಎನ್ನುವುದು ಬೇಸರ ಹುಟ್ಟಿಸಿತು. ಅಮಿತಾಭ್ ಬಚ್ಚನ್‌ರ ಚಿತ್ರವೊಂದರಲ್ಲಿ ತಲ್ವಾರ್ ಫೈಟ್ ಸೀನ್ ನಡೆಯುತ್ತಿದ್ದಾಗ ಅವರು ಬೀಸಿದ ತಲ್ವಾರ್ ನನ್ನ ಮೂಗನ್ನು ಒರೆಸಿ ಹೋಗಿತ್ತು. ಅದಕ್ಕಾಗಿ ಬಿಗ್ ಬಿ ತುಂಬಾ ಮರುಕ ಪಟ್ಟಿದ್ದರು. ಅವರು ಕೊಟ್ಟ ಮಾರ್ಕ್ ಈಗಲೂ ಇದೆ ಎನ್ನುತ್ತಾ ಮೂಗಿನ ಮಾರ್ಕ್ ತೋರಿಸಿ ಬಿಟ್ಟರು ಜಯರಾಮ್ ಶೆಟ್ಟಿ. ತುಳುವಿನ ‘ಬದ್ಕೇರೆ ಬುಡ್ಲೆ’, ‘ದಾರೆದ ಸೀರೆ’ ಹಾಗೂ ಕನ್ನಡದ ಬಹುತೇಕ ಚಿತ್ರಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿದ ಅವರು ಪ್ರಾಸೆಸ್ಸಿಂಗ್, ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿರುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ.
ಹಿಂದಿಯ ಖ್ಯಾತ ಚಿತ್ರ ‘ಖತರ್‌ನಾಕ್’ನಲ್ಲಿ ಕಾರು ಬಾಂಬ್ ಸ್ಪೋಟದ ದೃಶ್ಯ ಸೆರೆ ಹಿಡಿಯುವ ವೇಳೆ ತನ್ನ ಬದಲಾಗಿ ಸ್ಟಂಟ್‌ಫೈಟರ್ ಆಗಿದ್ದ ಮನ್ಸೂರ್ ಧಗಧಗನೆ ಉರಿವ ಬೆಂಕಿಯಲ್ಲಿ ಉರಿದು ಜೀವಚ್ಛವವಾಗಿ ವಾರದ ಬಳಿಕ ಇಹಲೋಕ ತ್ಯಜಿಸಿದ್ದು ಈಗಲೂ ಮರೆಯಲಾಗುತ್ತಿಲ್ಲ. ಭೂತ-ಪ್ರೇತಗಳ ಚಿತ್ರಗಳಿಗೇ ಖ್ಯಾತರಾಗಿದ್ದ ರಾಮ್ ಸಿ. ಅವರ ಚಿತ್ರವೊಂದರ ಫೈಟಿಂಗ್ ದೃಶ್ಯದಲ್ಲಿ ಎಸೆಯಲ್ಪಟ್ಟು ಮರದ ಚೂಪಾದ ಮುರಿದ ಗೆಲ್ಲಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿ ಅನುಭವಿಸಿದ್ದು, ಪಾಕಿಸ್ತಾನದ ಕಚ್‌ಬಾರ್ಡರ್‌ನಲ್ಲಿ ಶೂಟಿಂಗ್ ವೇಳೆ ದೋಣಿ ನೀರಿನಲ್ಲಿ ಮುಳುಗಿ ಈಜು ಬರುವವರು ಮಾತ್ರ ಬದುಕುಳಿದು ಉಳಿದವರು ಕಣ್ಮರೆಯಾದದ್ದು ನನ್ನ ವೃತ್ತಿ ಬದುಕಿನ ಮರೆಯಲಾಗದ ಕ್ಷಣಗಳು ಎನ್ನುತ್ತಾರೆ ಜಯರಾಮ್ ಶೆಟ್ಟಿ.
ಸ್ಟಂಟ್ ಫೈಟರ್ ಆಗಿ ಸಿನಿಮಾಗಳಲ್ಲಿ ನಟಿಸಿದರೂ ತೆರೆ ಮರೆಯ ಕಲಾವಿದರಾಗಿರುವ ಜಯರಾಮ್ ಶೆಟ್ಟಿ ಮದುವೆಯ ಬಳಿಕ ಮಾಯಾನಗರಿಯಿಂದ ದೂರದ ದೇಗುಲದ ಊರಿಗೆ ಬಂದು ಕೃಷಿ ತೋಟದ ಕೆಲಸದಲ್ಲಿ ನೆಮ್ಮದಿಯನ್ನು ಕಂಡವರು. ತನ್ನ ಇಬ್ಬರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟವರು. ಈಗಲೂ ಫೈಟಿಂಗ್ ಎಂದಾಗ ಖುಶಿಯಿಂದ ಮುಂದೆ ಬರುತ್ತಾರೆ. ಜಯರಾಮ್‌ರಂತಹ ತೆರೆಮರೆಯ ಕಲಾವಿದರರ ಸುದ್ದಿ ಇಲ್ಲದೇ ಹುದುಗಿ ಹೋದ ಕತೆಗಳು ಬಣ್ಣದ ಲೋಕದಲ್ಲಿ ಹುಡುಕಾಡಿದರೆ ಬಹಳಷ್ಟು ಸಂಖ್ಯೆಯಲ್ಲಿ ಸಿಗಬಹುದು.

Wednesday, March 30, 2011

ಕುಡ್ಲದ ಕಂಠಕ್ಕೆ ‘ದಾದಾ ಫಾಲ್ಕೆಯ’ ಕಿರೀಟ !


‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ....’ ಈ ಜಾಹೀರಾತು ಸ್ಲೋಗನ್ ಕೇಳಿರದ ಮಂದಿ ಯಾರು ಇಲ್ಲ ಬಿಡಿ. ಇಂತಹ ಸಾವಿರಾರು ಜಾಹೀರಾತು... ಫಿಲ್ಮ್ ಡಿವಿಷನ್ ನಿರ್ಮಾಣದ ಹತ್ತಾರು ಸಾವಿರ ಡಾಕ್ಯುಮೆಂಟರಿಗಳ ಹಿಂದೆ ಕುಡ್ಲದ ವಾಯ್ಸ್ ಇದೆ ಅಂತಾ ಎಷ್ಟು ಮಂದಿಗೆ ಗೊತ್ತು...ಈ ಅಪರೂಪದ ಕಂಠಕ್ಕೆ ಈಗ ಮಹಾರಾಷ್ಟ್ರ ಸರಕಾರದ ‘ದಾದಾ ಸಾಹೇಬ್ ಫಾಲ್ಕೆ ’ ಬಂದಿದೆ. ಆದರೆ ಕನ್ನಡಿಗರಿಗೆ ಈ ವಾಯ್ಸ್ ಗೊತ್ತೇ ಇಲ್ಲ ಬಿಡಿ...

ಕಳೆದ ೪೦ ವರ್ಷಗಳಿಂದ ದೃಶ್ಯ, ಶ್ರವ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಓಡಾಡುತ್ತಿರುವ ‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ....’ ಜಾಹೀರಾತು ಕೇಳಿರದ ಮಂದಿ ಯಾರು ಇರಲಿಕ್ಕಿಲ್ಲ ಬಿಡಿ. ಅಂದಿನಿಂದ ಇಂದಿನವರೆಗೂ ಈ ಜಾಹೀರಾತು ತನ್ನ ವರಸೆಯನ್ನು ಮುಂದುವರಿಸಿಕೊಂಡು ಹೋಗಿದೆ. ಈ ಜಾಹೀರಾತು ಸ್ಲೋಗನ್ ಹಿಂದೆ ಇರುವ ವಾಯ್ಸ್ ಪಡುಬಿದ್ರಿಯ ಫಲಿಮಾರಿನ ಶಿವರಾಜ್ ಸುವರ್ಣ ಅಂತಾ ಬಹುತೇಕ ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ಕೋಲ್ಗೇಟ್ ಟೂಥ್ ಪೇಸ್ಟ್‌ನಿಂದ ಹಿಡಿದು ಫೋರ್ ವಿಲರ್‍ಸ್‌ವರೆಗೆ ಇತರ ಭಾಷೆಗಳಿಂದ ಕನ್ನಡ ಭಾಷೆಗೆ ಈ ಕಮರ್ಷಿಯಲ್ ಜಾಹೀರಾತುಗಳು ಡಬ್ ಆಗಬೇಕಾದರೆ ಅಲ್ಲಿ ಶಿವರಾಜ್ ಸುವರ್ಣ ಇರಬೇಕು. ಅವರೊಬ್ಬರೇ ಇದ್ದಾರೆ ಸಾಲದು ಕಂಪನಿಯ ಪ್ರಾಡಕ್ಟ್‌ಗಳನ್ನು ಪ್ರಮೋಶನ್ ಮಾಡಲು ಅವರ ಧ್ವನಿ ಕೂಡ ಸಾಥ್ ಕೊಡಬೇಕು.
ಪಡುಬಿದ್ರಿಯ ತನ್ನ ಅಜ್ಜಿಯ ಮನೆಯಲ್ಲಿ ಶಿವರಾಜ್ ಸುವರ್ಣ ಬಾಲ್ಯದ ದಿನಗಳನ್ನು ಕಳೆದದ್ದು, ಸರಿಸುಮಾರು ೧೨ ವರ್ಷಗಳ ವರೆಗೆ ಪಡುಬಿದ್ರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡಿದ್ದ ಪ್ರತಿಭಾವಂತ ಶಿವರಾಜ್ ಸುವರ್ಣ ನಂತರ ತನ್ನ ತಂದೆಯೊಂದಿಗೆ ಮುಂಬಯಿಯ ಪಡಸಾಲೆಯ ಮೇಲೆ ನಡೆಯಲಾರಂಭಿಸಿದರು. ಅಲ್ಲಿಂದಲೇ ಅವರ ಕಂಠದಾನ ಕಲಾವಿದನಾಗಿ ವೃತ್ತಿಯನ್ನು ಆರಂಭ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಕಂಠದಾನ ಕಲಾವಿದನಾಗಿ ಮುಂದುವರಿದಿದ್ದಾರೆ. ಆದರೆ ಕರ್ನಾಟಕ ರಾಜ್ಯ ಸರಕಾರ ಇವರನ್ನು ಗುರುತಿಸುವ ಬದಲಾಗಿ ಮಹಾರಾಷ್ಟ್ರ ಸರಕಾರ ಏ.೩೦ ರಂದು ೧೪೧ನೇ ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮಾದಿನಾಚರಣೆಯ ಸಂದರ್ಭದಲ್ಲಿ ಕಂಠದಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶಿವರಾಜ್ ಸುವರ್ಣ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿದೆ.
ಹುಲಿಯ ಹೊಟ್ಟೆಯಲ್ಲಿ....
ಶಿವರಾಜ್ ಸುವರ್ಣ ಅವರ ತಂದೆ ಪಡುಬಿದ್ರಿಯ ಫಲಿಮಾರು ಕರ್ನಿರೆಯ ಕೆ.ಕೆ. ಸುವರ್ಣ ರಂಗಭೂಮಿ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಕೋಲ್ಗೇಟ್ ಟೂಥ್ ಪೌಡರ್ ಜಾಹೀರಾತಿನಲ್ಲಿ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡ ಮೊಡೆಲ್ ಕೂಡ ಇವರೇ ಆಗಿದ್ದಾರೆ. ಮುಂಬಯಿಯಲ್ಲಿರುವ ಖ್ಯಾತ ಸಭಾಂಗಣ ಷಣ್ಮುಗಾನಂದದ ಮ್ಯಾನೇಜರ್ ಆಗಿದ್ದವರು. ಈ ಷಣ್ಮುಗಾನಂದ ಸಭಾಂಗಣ ಅಂದಿನ ಕಾಲದಲ್ಲಿ ಬಹಳಷ್ಟು ಖ್ಯಾತಿ ಪಡೆದ ಸಭಾಂಗಣವಾಗಿತ್ತು. ಈಗಲೂ ಅದರ ಇಮೇಜ್ ಕೊಂಚನೂ ಕಡಿಮೆಯಾಗಿಲ್ಲ ಬಿಡಿ. ದಕ್ಷಿಣ ಭಾರತದ ಖ್ಯಾತ ಕಾರ್‍ಯಕ್ರಮಗಳು , ಸಿನಿಮಾ ಅವಾರ್ಡ್ ಕಾರ್‍ಯಕ್ರಮಗಳು ಇಲ್ಲಿಯೇ ನಡೆಯುತ್ತಿದೆ. ಈ ಸಭಾಂಗಣದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ ಟಾಟಾ ಸಂಸ್ಥೆಯವರು ಇವರನ್ನು ಅವರು ನಡೆಸುತ್ತಿರುವ ಎನ್‌ಸಿಪಿಎ( ರಾಷ್ಟ್ರೀಯ ನಾಟ್ಯಕಲಾ ಕೇಂದ್ರ) ಗೆ ಸಹಾಯಕ ನಿರ್ದೇಶಕರಾಗಿ ಸೇರಿಸಿಕೊಂಡರು. ಹಲವಾರು ವರ್ಷಗಳ ಕಾಲ ಅಲ್ಲಿ ದುಡಿದ ಅವರು ನಿರ್ದೇಶಕರಾಗಿ ನಿವೃತ್ತರಾದವರು. ಹಲವಾರು ಜಾಹೀರಾತು ಹಾಗೂ ಡಾಕ್ಯುಮೆಂಟರಿಗಳಿಗೆ ಧ್ವನಿ ಗೂಡಿಸಿಕೊಂಡು ಸೈ ಎನ್ನಿಸಿದ್ದರು. ಈಗ ಅವರ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಕೂಡಾ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಅದರಲ್ಲೂ ಶಿವರಾಜ್ ಸುವರ್ಣ ಫುಲ್‌ಟೈಂ ವೃತ್ತಿಯಾಗಿ ಅದನ್ನು ನೆಚ್ಚಿಕೊಂಡಿದ್ದಾರೆ.
ಕತ್ತೆಗೆ ಕೊಟ್ಟ ಕಂಠ:
ಶಿವರಾಜ್ ಸುವರ್ಣ ಮೊತ್ತ ಮೊದಲ ಬಾರಿಗೆ ಫಿಲ್ಮ್ ಡಿವಿಷನ್ ನಿರ್ಮಾಣದ ಮಕ್ಕಳ ಚಿತ್ರವೊಂದಕ್ಕೆ ಬರೀ ೧೨ರ ವಯಸ್ಸಿನಲ್ಲಿ ಕತ್ತೆಗೆ ಕಂಠವನ್ನು ದಾನ ಮಾಡಿದ್ದರು. ಈ ಚಿತ್ರ ಕೂಡ ಹಲವಾರು ಪ್ರಶಸ್ತಿಗಳನ್ನು ಅಂದು ಬಾಚಿಕೊಂಡಿತು. ಹಿಂದಿ, ಇಂಗ್ಲೀಷ್, ಗುಜರಾತಿ, ಮರಾಠಿ, ತುಳು, ಕನ್ನಡ ಹೀಗೆ ಹತ್ತಾರು ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಸಾಸಿಕೊಂಡ ಶಿವರಾಜ್ ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್ ಅವರ ಸಂಸ್ಕೃತ ಭಾಷೆಯ ‘ಭಗವದ್ಗೀತಾ’ವನ್ನು ಹಿಂದಿಗೆ ಡಬ್ಬಿಂಗ್ ಸೇರಿದಂತೆ ಬಹುತೇಕ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳಿಗೆ ಕಂಠದಾನ ಕೊಟ್ಟಿದ್ದಾರೆ. ಬಾಲಿವುಡ್ ಮೆಗಾ ಸ್ಟಾರ್‌ಗಳಿಗೆ ಕಂಠದಾನ ಕಲಾವಿದರಾಗಿ ದುಡಿದಿರುವ ಶಿವರಾಜ್ ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಕುರಿತಾಗಿ ಡಾಕ್ಯುಮೆಂಟರಿಯೊಂದನ್ನು ದೇಶದ ೧೪ ಭಾಷೆಗಳಿಗೆ ಡಬ್ಬಿಂಗ್ ಮಾಡಿ ಎಲ್ಲರ ಕೈಯಿಂದಲೂ ಭೇಷ್ ಎನ್ನಿಸಿಕೊಂಡಿದ್ದಾರೆ. ರೇಡಿಯೋದ ಸ್ಪಾಟ್ ಜಾಹೀರಾತು, ಜಿಂಗಲ್ಸ್, ರೇಡಿಯೋ ನಾಟಕಗಳು ಹೀಗೆ ಕಂಠದಾನ ಕಲಾವಿದರಾಗಿ ಶಿವರಾಜ್ ಸುವರ್ಣ ದುಡಿದದ್ದು ಬಹಳಷ್ಟಿದೆ ಎಂದು ಅವರ ಪತ್ನಿ ಪ್ರೊ. ಸುಮತಿ ಶಿವರಾಜ್ ಸುವರ್ಣ ಹೇಳುತ್ತಾರೆ. ಮುಂಬಯಿಯ ಅಂಧೇರಿಯಲ್ಲಿ ಶಿವರಾಜ್ ಸುವರ್ಣ ತನ್ನ ಪತ್ನಿಯೊಂದಿಗೆ ಪಡುಬಿದ್ರಿಗೆ ಆಗಾಗ ಬಂದು ಹೋಗುತ್ತಾ ಇರುತ್ತಾರೆ.
ಈಗ ಕೊಂಚ ಸುಲಭ:
‘ನಾನು ಈ ಕಂಠದಾನ ಕ್ಷೇತ್ರಕ್ಕೆ ಕಲಾವಿದನಾಗಿ ಬರುವ ಹೊತ್ತಲ್ಲಿ ತಾಂತ್ರಿಕತೆ ಅಷ್ಟೊಂದು ಫಾಸ್ಟ್ ಆಗಿರಲಿಲ್ಲ. ಒಂದು ಜಾಹೀರಾತಿಗೆ ಕಂಠ ಕೊಡಬೇಕಾದರೆ ೨ರಿಂದ ೩ ದಿನಗಳು ಬೇಕಾಗಿತ್ತು. ಈಗ ಬರೀ ಅರ್ಧ ಗಂಟೆಯೊಳಗೆ ಒಂದು ಜಾಹೀರಾತು ತಯಾರು ಮಾಡಿಕೊಡಬಹುದು. ಹಿಂದಿನ ಟೈಮ್‌ನಲ್ಲಿ ಜಾಹೀರಾತು ಅಥವಾ ಡಾಕ್ಯುಮೆಂಟರಿಗಳಿಗೆ ಕಂಠದಾನ ನೀಡಬೇಕಾದರೆ ಯಾರು ಮುಂದೆ ಬರುತ್ತಿರಲಿಲ್ಲ. ಈ ಕ್ಷೇತ್ರದಲ್ಲಿ ತಾಳ್ಮೆ ಅತೀ ಅವಶ್ಯಕವಾಗಿರುತ್ತದೆ. ಭಾವನೆಗಳು, ಉದ್ವೇಗ ಎಲ್ಲವೂ ಜಾಹೀರಾತಿಗೆ ಬೇಕಾದಂತೆ ಅಳವಡಿಸಿಕೊಳ್ಳೋದು ಅಷ್ಟೊಂದು ಸಲೀಸಲ್ಲ. ಇಂದಿನ ಕಂಠದಾನ ಕ್ಷೇತ್ರದಲ್ಲಿ ತಾಂತ್ರಿಕತೆ ಬಹಳಷ್ಟು ಕೆಲಸ ಮಾಡಿದೆ. ಈ ಕ್ಷೇತ್ರವನ್ನು ಈಗ ಮೆಚ್ಚುವವರು ಕೂಡ ಬಹಳಷ್ಟು ಮಂದಿ ಇದ್ದಾರೆ ಎಂದು ಶಿವರಾಜ್ ಸುವರ್ಣ ಅನುಭವದ ಮೂಸೆಯೊಳಗೆ ಇಳಿದು ಹೋದರು.
ಇಷ್ಟು ವರ್ಷಗಳ ಕಾಲ ನಿಮ್ಮ ಪರಿಚಯ ಕನ್ನಡಿಗರಿಗೆ ಯಾಕೆ ಆಗಿಲ್ಲ ಎಂದು ಲವಲವಿಕೆಯ ತಂಡ ಪ್ರಶ್ನೆ ಎತ್ತಿದಾಗ..‘ಯಾವುದೇ ಕ್ಷೇತ್ರವಾಗಿರಬಹುದು ಅಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದೇ ಬರೀ ಆ ಕ್ಷೇತ್ರದ ಹಿಂದೆ ನಿಂತು ಕೆಲಸ ಮಾಡುವ ಮಂದಿ ಜಾಸ್ತಿ ಸಂಖ್ಯೆಯಲ್ಲಿರುತ್ತಾರೆ. ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿ ಅಥವಾ ಮಾಧ್ಯಮಗಳನ್ನು ಗಣನೆಗೆ ತೆಗೆದುಕೊಂಡಾಗ ಈ ವಿಚಾರ ಸರಿ ಎನ್ನಿಸಿಬಿಡಬಹುದು. ಸಿನಿಮಾದಲ್ಲಿ ಬರೀ ಹೀರೋ, ನಿರ್ದೇಶಕ ಹೀಗೆ ಕೆಲವರು ಮಾತ್ರ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ. ಆದರೆ ಅದರ ಹಿಂದೆ ಒಬ್ಬ ಲೈಟ್ ಬಾಯ್‌ನಿಂದ ಹಿಡಿದು ಎಡಿಟಿಂಗ್ ರೂಂನ ವರೆಗೂ ಕಾಣದ ಕೈಗಳು ಕೆಲಸ ಮಾಡುತ್ತದೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಕಂಠದಾನ ಕ್ಷೇತ್ರ ಕೂಡ ಅದೇ ರೀತಿಯಲ್ಲಿದೆ. ಕಂಠದ ಪರಿಚಯ ಎಲ್ಲರಿಗೂ ಇರುತ್ತೇ ಆದರೆ ಮುಖದ ಪರಿಚಯ ಇರುವುದೇ ಇಲ್ಲ. ಇದು ನಮ್ಮ ಕ್ಷೇತ್ರದ ಒಂದು ವೀಕ್ ಪಾಯಿಂಟ್ ಎಂದು ಶಿವರಾಜ್ ಸುವರ್ಣ ಕಂಠದಾನ ಕ್ಷೇತ್ರದ ವೀಕ್‌ನೆಸ್ ಪಾಯಿಂಟ್‌ಗಳನ್ನು ಹೆಕ್ಕುತ್ತಾ ಹೋದರು.
‘ಮಹಾರಾಷ್ಟ್ರದ ಸರಕಾರ ವಿವಿಧ ಭಾಷೆಗಳ ಸಿನಿಮಾದಲ್ಲಿ ದುಡಿಯುವ ಮಂದಿಯನ್ನು ಗುರುತಿಸಿ ನೀಡುವ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಬಂದಾಗ ಶಿವರಾಜ್ ಸುವರ್ಣ ಬಹಳಷ್ಟು ಖುಶಿ ಪಟ್ಟರು. ಕಂಠದಾನ ಕ್ಷೇತ್ರದಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದ ಹಿರಿಯರನ್ನು ಮಹಾರಾಷ್ಟ್ರ ಸರಕಾರ ಗುರುತಿಸಿ ಪ್ರೋತ್ಸಾಹಿಸುವುದರಿಂದಲೇ ಇಲ್ಲಿನ ಸಿನಿಮಾ ಇಂಡಸ್ಟ್ರಿ ಈ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬಯಿಯಲ್ಲಿ ನೆಲೆನಿಂತಿರುವ ಕಾರಣ ನಮ್ಮ ಕುರಿತು ಕರ್ನಾಟಕದ ಸಿನಿಮಾ ಅಥವಾ ಇತರರಿಗೆ ಅಷ್ಟೊಂದು ಪರಿಚಯ ಇರಲು ಸಾಧ್ಯವಿಲ್ಲ ಎಂದು ಅವರ ಪ್ರೊ.ಸುಮತಿ ಶಿವರಾಜ್ ಸುವರ್ಣ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಅಂದಾಹಾಗೆ ಕಂಠದಾನ ಕಲಾವಿದ ಶಿವರಾಜ್ ಸುವರ್ಣರಿಗೆ ಒಂದು ಬೆಸ್ಟ್ ಆಫ್ ಲಕ್ ಹೇಳಬೇಕಾದರೆ ಅವರಿಗೊಂದು ಇ-ಮೇಲ್ ಮಾಡಿ - shivrajsuvarna@gmail.com.

Tuesday, March 29, 2011

ಕೆಬಿಸಿಯಲ್ಲಿ ಅಮೀರ್


ಮಿಸ್ಟರ್ ಪರ್‌ಫೆಕ್ಷನ್ ಅಮೀರ್ ಖಾನ್ ಈಗ ೨೪ ಇಂಚಿನ ಟಿವಿಯೊಳಗೆ ಇಳಿಯಲಿದ್ದಾರೆ. ಬೆಳ್ಳಿತೆರೆಯಲ್ಲಿ ಅಮೀರ್ ಮಾಡುತ್ತಿರುವ ಮ್ಯಾಜಿಕ್ ಇನ್ನೂ ಮುಂದೆ ಕಿರುತೆರೆಯಲ್ಲಿ ಮುಂದುವರಿಯಲಿದೆ. ಹಾಟ್‌ಸೀಟ್‌ನಲ್ಲಿ ಇನ್ನೂ ಮುಂದೆ ಅಮೀರ್ ಬರುತ್ತಿದ್ದಾರೆ.. ಜಾಗ ಬಿಡಿ..

ಕೆಲವು ವರ್ಷಗಳ ಹಿಂದೆ ಅಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಕೂತಿದ್ರು.... ನಂತರ ಶಾರುಕ್ ಖಾನ್ ಕೂತಿದ್ರು.. ಆದರೆ ಈಗ ಅದೇ ಹಾಟ್ ಸೀಟ್‌ನಲ್ಲಿ ಅನ್ಸರ್‌ಗಳನ್ನು ಲಾಕ್ ಮಾಡಲು ‘ಮಿಸ್ಟರ್ ಪರ್‌ಫೆಕ್ಷನ್’ ಅಮೀರ್ ಖಾನ್ ಬರುತ್ತಿದ್ದಾರೆ. ಖಾಸಗಿ ವಾಹಿನಿ ಸ್ಟಾರ್ ಪ್ಲಸ್‌ನಲ್ಲಿ ಕೆಬಿಸಿಯ ಮೂರನೇಯ ಆವೃತ್ತಿ ಆರಂಭವಾಗುವ ಸೂಚನೆ ಬಂದಿದೆ. ಈಬಾರಿ ಈ ಕೆಬಿಸಿಯ ಚುಕ್ಕಾಣಿ ಹಿಡಿದವರು ನಟ ಅಮೀರ್ ಖಾನ್. ಕೆಬಿಸಿಯ ಕಾರ್‍ಯಕ್ರಮಕ್ಕಾಗಿ ಸಂಯೋಜಕರು ಈಗಾಗಲೇ ಅಮೀರ್ ಖಾನ್ ಜತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ.
ಆದರೆ ಅಮೀರ್ ಖಾನ್ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ನಂತರ ಈ ಹಾಟ್ ಸೀಟ್‌ನಲ್ಲಿ ಕೂರುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದು ಅವರ ಮೂಲಗಳು ತಿಳಿಸಿದೆ. ಈಗಾಗಲೇ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಶಾರುಕ್ ಖಾನ್ ಪಡೆದುಕೊಂಡಿರುವ ಸಂಭಾವಣೆಗಿಂತ ಈ ಬಾರಿಯ ಕೆಬಿಸಿಯ ಹಾಟ್ ಸೀಟ್ ಸಂಭಾವಣೆ ಜಾಸ್ತಿ ಇರಲಿದೆ. ಅಮೀರ್ ಖಾನ್ ಬರೀ ಒಂದು ಎಪಿಸೋಡ್‌ಗೆ ಬರೋಬರಿ ೭೫ ಲಕ್ಷ ರೂ. ಡಿಮ್ಯಾಂಡ್ ಇಟ್ಟಿದ್ದಾರೆ. ಈ ಡೀಲ್‌ಗೆ ಕೆಬಿಸಿ ಸಂಯೋಜಕರು ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟರೆ ಅಮೀರ್ ಖಾನ್ ಹಾಟ್ ಸೀಟ್‌ನಲ್ಲಿ ಕೂರುವ ಕುರಿತು ಯಾವುದೇ ಡೌಟ್ ಇರೋದಿಲ್ಲ.
ಈಗಾಗಲೇ ಅಮೀರ್ ಖಾನ್‌ರ ಬತ್ತಳಿಕೆಯಲ್ಲಿ ಎರಡು ಚಿತ್ರಗಳು ಬಿದ್ದುಕೊಂಡಿದೆ. ಈ ಚಿತ್ರಗಳಲ್ಲಿ ಒಂದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ಇದರ ನಡುವೆ ಈ ಕೆಬಿಸಿಯ ಮೂರನೇ ಆವೃತ್ತಿಯ ಕಾರ್‍ಯಕ್ರಮಗಳಿಗೆ ಶೂಟಿಂಗ್ ನಡೆಯುವ ಸೂಚನೆ ಕೂಡ ಬಂದಿದೆ. ಎರಡಕ್ಕೂ ಟೈಮಿಂಗ್ ಹೊಂದಾಣಿಕೆ ನಡೆಸಲು ಅಮೀರ್ ಖಾನ್‌ಗೆ ಕೊಂಚ ಕಷ್ಟವಾಗಲಿದೆ ಎನ್ನೋದು ಅವರ ಆಪ್ತರ ವಲಯದ ಮಾತು. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಹಿಂದೆ ಹಾಟ್‌ಸೀಟ್‌ನಲ್ಲಿದ್ದ ಅಮಿತಾಭ್ ಬಚ್ಚನ್ ಹಾಗೂ ಶಾರುಕ್ ಖಾನ್‌ರ ಅದೇ ಓಲ್ಡ್ ಡೈಲಾಗ್‌ಗಳಾದ ‘ಲಾಕ್ ಕೀಯಾ ಜಾಯೇ’ ‘ಫ್ರೇಜ್ ಕಿಯಾ ಜಾಯೇ’ ಗುಡ್ ಬಾಯ್ ಹೇಳುವ ಮಾತು ಅಮೀರ್ ಖಾನ್ ಆಡಿದ್ದಾರೆ. ಈ ಕೆಬಿಸಿಯಲ್ಲಿ ಹೊಸ ಪದದ ಆವಿಷ್ಕಾರಕ್ಕಾಗಿ ಸಂಯೋಜಕರು ಹುಡುಕಾಡುತ್ತಿದ್ದಾರೆ ಎಂಬ ಮಾತು ಹೊರ ಬಂದಿದೆ.
ಈ ಬಾರಿಯ ಹಾಟ್ ಸೀಟ್‌ನಲ್ಲೂ ಬಹಳಷ್ಟು ಬದಲಾವಣೆಗಳು ದಾಖಲಾಗುವ ಚಾನ್ಸ್‌ಗಳು ಜಾಸ್ತಿಯಿದೆ. ಅಮೀರ್ ಖಾನ್‌ರ ಹೊಸ ಗೆಟಪ್, ಹೊಸ ಸಂಭಾಷಣೆಗಳು, ಅನ್ಸರ್‌ಗಳನ್ನು ಲಾಕ್ ಮಾಡುವ ಶೈಲಿ ಎಲ್ಲವೂ ಡಿಫರೆಂಟ್ ಆಗಿರಲಿದೆ ಎನ್ನೋದು ಕೆಬಿಸಿಯ ಮೂಲಗಳು ಹೇಳುವ ಮಾತು. ಈ ವರ್ಷದ ಮಧ್ಯ ಭಾಗದಲ್ಲಿ ಕೆಬಿಸಿಯ ಮೂರನೇ ಆವೃತ್ತಿ ಸ್ಟಾರ್ ಪ್ಲಸ್‌ನಲ್ಲಿ ಹೊಸ ದುನಿಯಾವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಸಾಧ್ಯತೆ ಇದೆ ಎಂದು ಕೆಬಿಸಿಯ ಸಂಯೋಜಕರಲ್ಲಿ ಒಬ್ಬರಾಗಿರುವ ಸಿದ್ಧಾರ್ಥ್ ಬಸು ಮಾಧ್ಯಮಗಳಿಗೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

Monday, March 28, 2011

ಮುಂಗಾರು ಹುಡುಗಿ ಸೂಳೆ ಸಿದ್ದು !


ಕರಾವಳಿಯಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಬಂದ ‘ಬೀರೆ ದೇವು ಪೂಂಜೆ’ ಈಗ ಸಿನಿಮಾ ಆಗಲಿದೆ. ಅದರಲ್ಲೂ ಮುಂಗಾರು ಹುಡುಗಿ ಪೂಜಾ ನಟಿಸುತ್ತಿದ್ದಾರೆ. ಸಕ್ಸಸ್ ಚಿತ್ರಗಳಿಲ್ಲದೇ ಒದ್ದಾಟ ಮಾಡುತ್ತಿರುವ ಪೂಜಾ ಸಕ್ಸಸ್‌ಗಾಗಿ ಡಿಫರೆಂಟ್ ಪಾತ್ರ ಮಾಡುತ್ತಿದ್ದಾರೆ.

ಸೂಳೆ ಸಿದ್ದು !
ಇದು ಮುಂಗಾರು ಹುಡುಗಿ ಪೂಜಾ ಲೇಟೆಸ್ಟ್ ಪಾತ್ರ ! ‘ಚಾಮೇಲಿ’ಯಲ್ಲಿ ಕರೀನಾ ‘ಚಾಂದಿನಿ ಬಾರ್’ನಲ್ಲಿ ಟಬು,‘ರಕ್ತ ಕಣ್ಣೀರು’ನಲ್ಲಿ ರಮ್ಯಕೃಷ್ಣ ಈಗ ಅದೇ ಸಾಲಿನಲ್ಲಿ ಮುಂಗಾರು ಹುಡುಗಿ ಬಂದು ನಿಂತಿದ್ದಾಳೆ. ‘ಮುಂಗಾರು ಮಳೆ ’ ಹಿಟ್ ಚಿತ್ರದ ನಂತರ ಪೂಜಾ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಹೇಳಿಕೊಳ್ಳುವಂತೆ ಓಡಿಲ್ಲ ಎನ್ನುವುದು ಮುಂಗಾರು ಹುಡುಗಿಗೆ ಮನದಟ್ಟಗಿದೆ.
ಸಿಕ್ಕಿ ಸಿಕ್ಕಿದ ಚಿತ್ರಗಳನ್ನು ಒಪ್ಪಿಕೊಂಡು ಬೇಡಿಕೆ ಕಳೆದುಕೊಂಡು ಮೂಲೆ ಸೇರುವ ಹುಡುಗಿ ಈಗ ‘ಬೀರೆ ದೇವು ಪೂಂಜೆ’ಯಲ್ಲಿ ‘ಸೂಳೆ ಸಿದ್ದು’ ಪಾತ್ರದಲ್ಲಿ ವೀಳ್ಯದೆಲೆ ಜಗಿಯಲಿದ್ದಾರೆ. ‘ಕೋಟಿ ಚೆನ್ನಯ’ ಐತಿಹಾಸಿಕ ಚಿತ್ರ ನಿರ್ಮಿಸಿದ ಆರ್.ಧನರಾಜ್ ಈ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ. ಸರಿಸುಮಾರು ೪೫೦ ವರ್ಷಗಳ ಹಿಂದಿನ ಕತೆಯನ್ನು ಅಗೆದು ಬಗೆದು ಚಿತ್ರ ಮಾಡುತ್ತಿದ್ದಾರೆ. ಕರಾವಳಿ ಬಂಟ ಸಮಾಜದ ವೀರ ಪುರುಷ ‘ದೇವು ಪೂಂಜ’ನ ಕತೆ ತುಳುನಾಡಿನಲ್ಲಿ ಬಹಳ ಫೇಮಸ್.
ದಂಡನಾಯಕನಾಗಿರುವ ದೇವು ಪೂಂಜನಿಗೆ ಕರಾವಳಿ ಜುಮಾದಿ ದೈವದ ಬೆಂಬಲ ಇರುತ್ತದೆ. ಯಾವ ಯುದ್ಧದಲ್ಲೂ ದೇವು ಪೂಂಜನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದ ನಂದಾವರ ಅರಸ ಯುಕ್ತಿಯಿಂದ ಗೆಲ್ಲುವ ಯೋಜನೆಯೊಂದಕ್ಕೆ ಸಿದ್ದನಾಗುತ್ತಾನೆ. ನಂದಾವರ ಅರಸನ ನೃತ್ಯಗಾರ್ತಿ(ವೇಶ್ಯೆ) ‘ಸೂಳೆ ಸಿದ್ದು’ವನ್ನು ಈ ಕೆಲಸಕ್ಕೆ ನಿಯೋಜಿಸಿ ಬಿಡುತ್ತಾನೆ. ದೇವು ಪೂಂಜ ಹಾಗೂ ಸೂಳೆ ಸಿದ್ದುವಿನ ಚೆನ್ನೆಮಣೆಯಾಟ...ಸೋಲು- ಗೆಲುವು, ಸಾವು ಹೀಗೆ ಪೂಜಾ ಗಾಂ ಇಡೀ ಚಿತ್ರ ಕತೆಯ ಸೆಂಟರ್ ಪಾಯಿಂಟ್‌ನಲ್ಲಿ ಮಿಂಚುತ್ತಾರೆ.
ಸೆ.೨೨ರಿಂದ ಚಿತ್ರಕ್ಕೆ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ತುಳು ಸೇರಿದಂತೆ ಕನ್ನಡ ಭಾಷೆಯಲ್ಲೂ ‘ಬೀರೆ ದೇವು ಪೂಂಜೆ ’ ತೆರೆ ಕಾಣುವ ಸಾಧ್ಯತೆ ಇದೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸುಮಧುರ ಸಂಗೀತವಿದೆ. ಉಳಿದಂತೆ ಆರ್. ಸಿದ್ಧಾರ್ಥ್ ‘ದೇವು ಪೂಂಜ’ನ ಪಾತ್ರಕ್ಕೆ ಇಳಿದಿದ್ದಾರೆ. ನಟಿ ವಿನಯಪ್ರಕಾಶ್ ಹಾಗೂ ತುಳು ರಂಗಭೂಮಿಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತುಳುವಿನಲ್ಲಿ ದೊಡ್ಡ ಬಜೆಟ್ ಹಾಗೂ ಐತಿಹಾಸಿಕ ಚಿತ್ರ ಎನ್ನಲಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಬಂದ ‘ಬೀರೆ ದೇವು ಪೂಂಜೆ’ ಸೂಪರ್ ಹಿಟ್ ಆಗಿತ್ತು. ಯಕ್ಷಗಾನದ ಕೋಲ್ಯಾರು ರಾಮಚಂದ್ರ ರಾವ್ ‘ಸೂಳೆ ಸಿದ್ದು’ವಿನ ಪಾತ್ರವನ್ನು ಹೈ ಕ್ಲಾಸ್ ಮಾದರಿಯಲ್ಲಿ ಮಾಡಿ ಪ್ರೇಕ್ಷಕರ ಮನಸು ಗೆಲ್ಲುತ್ತಿದ್ದರು. ಆದರೆ ಪೂಜಾಳಿಗೆ ಈ ಪಾತ್ರ ಎಷ್ಟರ ಮಟ್ಟಿಗೆ ಸಕ್ಸಸ್ ತಂದು ಕೊಡುತ್ತದೆ ಎನ್ನೋದು ಈಗ ಉಳಿದಿರುವ ಡಾಲರ್ ಪ್ರಶ್ನೆ. ಟೋಟಲಿ ಚಿತ್ರ ಬಿಡುಗಡೆ ವರೆಗೂ ಕಾದು ನೋಡಲೇ ಬೇಕು.