Friday, February 21, 2014

ಬಾಹುಬಲಿ ಪ್ರಭಾಸ್ ಬಾಡಿ!

* ಸ್ಟೀವನ್ ರೇಗೊ, ದಾರಂದಕುಕ್ಕು ಟಾಲಿವುಡ್ ಸಿನಿಮಾ ಜಗತ್ತು ಈಗ ಒಂದೇ ಮಾತಿಗೆ ಇಳಿದಿದೆ. ಕಾರಣ ಇಷ್ಟೇ ‘ಬಾಹುಬಲಿ’ ಚಿತ್ರದ ಮೇಕಿಂಗ್ ಮಾತು ಒಂದೆಡೆ ಹರಿದಾಡುತ್ತಿದ್ದಾರೆ. ಮತ್ತೊಂದೆಡೆ ಈ ಚಿತ್ರದ ಬಿಡುಗಡೆ ಯಾವಾಗ ಎನ್ನುವ ನಿರೀಕ್ಷೆಗಳು ಮೂಡಿಬರುತ್ತಿದೆ. ಅಂದಹಾಗೆ ಟಾಲಿವುಡ್ ಸಿನಿಮಾ ಜಗತ್ತಿನಲ್ಲಿ ಇದೊಂದು ಬಹುಕೋಟಿ ವೆಚ್ಚದ ಪ್ರಾಜೆಕ್ಟ್ . ಬರೋಬರಿ ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಬರುತ್ತಿರುವ ‘ಬಾಹುಬಲಿ’ಯಲ್ಲಿ ಈಗ ಪ್ರಭಾಸ್ ಬಾಡಿಯದ್ದೇ ಮಾತು.
ಅಂದಹಾಗೆ ೨೦ ಕೆ.ಜಿ. ಇದು ತೆಲುಗು ನಟ ಪ್ರಭಾಸ್ ‘ಬಾಹುಬಲಿ’ ಚಿತ್ರಕ್ಕಾಗಿ ಬೆಳೆಸಿಕೊಂಡ ದೇಹಸಿರಿ. ಬಾಹುಬಲಿಯ ಲೀಡ್ ರೋಲ್‌ನಲ್ಲಿರುವ ಪ್ರಭಾಸ್ ಚಿತ್ರದ ಆರಂಭದಿಂದಲೂ ದೇಹಸಿರಿಯ ಬೆಳವಣಿಗೆಯ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಇಂದಿನವರೆಗೂ ಟಾಲಿವುಡ್‌ನ ಯಾವುದೇ ನಾಯಕ ನಟರು ಈ ಪಾಟಿ ದೇಹಸಿರಿಯ ಕಡೆ ಗಮನಕೊಟ್ಟಿಲ್ಲ ಎನ್ನುವುದು ಹರಿದಾಡುತ್ತಿರುವ ಮಾತು. ‘ಬಾಹುಬಲಿ’ ಚಿತ್ರಕ್ಕಾಗಿ ಪ್ರಭಾಸ್ ಕಳೆದ ಆರು ತಿಂಗಳುಗಳಿಂದ ವರ್ಕ್ ಔಟ್ ಮಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ನಟ ಪ್ರಭಾಸ್ ಭೇಟಿಕೊಟ್ಟಾಗ ಅಲ್ಲಿ ‘ಡಬ್ಲ್ಯೂಡಬ್ಲ್ಯೂಎಫ್’ನ ಕಾರ‍್ಯಕ್ರಮವೊಂದಕ್ಕೆ ಹೋಗಿದ್ದರು. ಯಾವ ರೀತಿಯಲ್ಲಿ ಈ ಪಟುಗಳು ಹೊಡೆದಾಡಿಕೊಳ್ಳುತ್ತಾರೆ. ಅದರಲ್ಲೂ ಈ ಪಟುಗಳು ಮಾಡುವ ವರ್ಕ್ ಔಟ್ ಎಲ್ಲವೂ ಕಲಿತುಕೊಂಡು ಪ್ರಭಾಸ್ ಭಾರತಕ್ಕೆ ಬಂದರು. ಅಲ್ಲಿಂದ ನಿರಂತರವಾಗಿ ಪ್ರಭಾಸ್ ಅವರ ವರ್ಕ್ ಔಟ್‌ಗಳನ್ನು ತಮ್ಮ ಜಿಮ್‌ನಲ್ಲಿ ಮಾಡಲು ಆರಂಭಿಸಿದರು ಎನ್ನುವುದು ನಟ ಪ್ರಭಾಸ್‌ನ ಆಪ್ತ ಮೂಲಗಳು ಹೇಳುತ್ತಿದೆ. ಬಾಡಿಗಾಗಿ ಮನೆ ಬದಲಾಯಿಸಿದ ಪ್ರಭಾಸ್: ನಟ ಪ್ರಭಾಸ್ ಈ ಹಿಂದೆ ಇದ್ದ ಮನೆಯನ್ನು ಈಗ ಬದಲಾಯಿಸಿಕೊಂಡಿದ್ದಾರೆ. ೧.೫ ಕೋಟಿ ರೂಪಾಯಿ ವೆಚ್ಚದ ನೂತನ ಮನೆಯೊಂದಕ್ಕೆ ಶಿಫ್ಟ್ ಆಗಿರುವ ಪ್ರಭಾಸ್ ಮನೆ ಬದಲಾವಣೆಯ ಹಿಂದೆ ಇರುವ ರಹಸ್ಯ ಇಷ್ಟೇ.. ತನ್ನ ಹಿಂದಿನ ಮನೆಯಲ್ಲಿ ಬೇಕಾದ ರೀತಿಯ ಜಿಮ್ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ಬರೀ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಕಾರಣಕ್ಕೆ ಮನೆ ಬದಲಾಯಿಸಿಕೊಂಡಿದ್ದಾರೆ. ಬರೀ ಮನೆ ಬದಲಾವಣೆಯ ಜತೆಗೆ ಹೊಸದಾದ ಜಿಮ್‌ವೊಂದನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹೊರಬಂದಿದೆ. ಈಗಾಗಲೇ ಟಾಲಿವುಡ್‌ನ ನಟ ಮಹೇಶ್ ಬಾಬು ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ ಭಾರತೀಯ ಫಿಟ್ನ್‌ನೆಸ್ ಟ್ರೈನರ್ ಅನ್ನು ನೇಮಕ ಮಾಡಿಕೊಂಡಿರುವ ವಿಷ್ಯಾ ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಮಾತ್ರ ಭಾರತೀಯರ‍್ನನು ಬಿಟ್ಟು ವಿದೇಶಿ ಟ್ರೈನರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ. ದಿನದ ಆರು ಗಂಟೆಗಳ ಕಾಲ ಜಿಮ್‌ನಲ್ಲಿರುವ ಪ್ರಭಾಸ್ ದಿನವೊಂದಕ್ಕೆ ೪೦ ಅರೆಬೆಂದ ಮೊಟ್ಟೆಗಳನ್ನು ತಿನ್ನುತ್ತಾ ವರ್ಕ್ ಔಟ್ ಮಾಡುತ್ತಿದ್ದಾರೆ. ಇದರ ಜತೆಗೆ ಊಟದಲ್ಲೂ ಸಾಕಷ್ಟು ಕಾಳಜಿ ಹೊತ್ತುಕೊಂಡಿರುವ ಪ್ರಭಾಸ್ ಬಾಹುಬಲಿ ಚಿತ್ರವೊಂದಕ್ಕೆ ಮಾಡುತ್ತಿರುವ ವರ್ಕ್ ಔಟ್‌ಗಳಂತೂ ನಿಜಕ್ಕೂ ಚಿತ್ರದ ಕುರಿತು ಪ್ರಭಾಸ್ ಹೊತ್ತುಕೊಂಡಿರುವ ಕಾಳಜಿ ಅವರಿಗೆ ಬರುತ್ತದೆ.

Wednesday, February 19, 2014

ಆಮೀರ್ ಹೇಳ ಹೊರಟ ಸತ್ಯ

* ಸ್ಟೀವನ್ ರೇಗೊ, ದಾರಂದಕುಕ್ಕು ಅದೊಂದು ಬೆಟ್ಟದಷ್ಟು ನಿರೀಕ್ಷೆ. ಯಾವುದೋ ಒಂದು ಸಮಸ್ಯೆಗೆ ಆತನಿಂದಲೇ ಪರಿಹಾರ ಸಿಗುತ್ತದೆ ಎನ್ನುವ ಭಾವನೆ. ಎಲ್ಲದರ ಜತೆಗೆ ಬೇಗನೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತೇನೆ ಎನ್ನುವ ಧೈರ್ಯದ ಮಾತುಗಳು. ಅಂದಹಾಗೆ ಬಾಲಿವುಡ್ ನಟ ಆಮೀರ್ ಖಾನ್ ಮತ್ತೆ ಬರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀರಾ ಇತ್ತೀಚೆಗೆ ಧೂಮ್-೩ಯ ಮೂಲಕ ಹಿರಿತೆರೆಯಲ್ಲಿ ಮಿಂಚಿದ ಪರಿಯಲ್ಲೇ ಕಿರಿತೆರೆಯಲ್ಲೂ ಕಮಾಲ್ ಮಾಡುತ್ತಾರೆ ಎನ್ನುವ ಸತ್ಯ ಈಗ ಹೊರ ಬರುತ್ತಿದೆ. ಹೌದು. ಇದು ಆಮೀರ್ ಖಾನ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡಲಿರುವ ‘ಸತ್ಯಮೇವ ಜಯತೇ’ ಕಾರ‍್ಯಕ್ರಮದ ಮಾತು.
ಆಮೀರ್ ಖಾನ್ ಈ ಮೊದಲು ಖಾಸಗಿ ವಾಹಿನಿಯಲ್ಲಿ ನಡೆಸಿಕೊಟ್ಟ ‘ಸತ್ಯಮೇವ ಜಯತೇ’ ಕಿರಿ ತೆರೆಯಲ್ಲಿ ಹೊಸ ಸಂಚಲನ ಮಾಡಿತ್ತು. ಅದಕ್ಕೂ ಮುಖ್ಯವಾಗಿ ನಮ್ಮ- ನಿಮ್ಮ ನಡುವಿನಲ್ಲೇ ಇದ್ದ ಸಮಸ್ಯೆಗಳನ್ನು ಮನಮುಟ್ಟುವಂತೆ ಆಮೀರ್ ನಿರೂಪಣೆ ಮಾಡಿ ಸಮಸ್ಯೆಗಳನ್ನು ಪರಿಹಾರದ ಹಂತಕ್ಕೆ ತಂದು ನಿಲ್ಲಿಸುತ್ತಿದ್ದ ಪರಿಯನ್ನು ನೋಡಿದ ಪ್ರೇಕ್ಷಕ ಮಹಾಶಯ ಕೂಡ ಬೆರಗಾಗಿ ಹೋಗಿದ್ದ ಎನ್ನುವುದು ಬಟಬಯಲಾದ ಸತ್ಯ. ಸಮಾಜದಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮಕ್ಕಳ ಮೇಲಿನ ಹಿಂ, ಆತ್ಯಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ತಂದ ಆಮೀರ್ ಈ ಬಾರಿ ಏನೂ ತರುತ್ತಿದ್ದಾರೆ ಎನ್ನುವ ಕುತುಹೂಲ ಪ್ರತಿಯೊಬ್ಬ ಪ್ರೇಕ್ಷಕನ ಮನದಲ್ಲಿ ಮೂಡಿದೆ. ಮಾರ್ಚ್ ೨ರಿಂದ ಖಾಸಗಿ ವಾಹಿನಿಯಲ್ಲಿ ಮೂಡಿಬರಲಿರುವ ‘ಸತ್ಯಮೇವ ಜಯತೇ’ ಬರೀ ಐದು ಎಪಿಸೋಡುಗಳಲ್ಲಿಯೇ ತನ್ನ ಅಂತಿಮ ಗೀತೆಯನ್ನು ಹಾಡಲಾಗುತ್ತದೆ ಎನ್ನುವುದು ಈಗ ಹೊರಬರುತ್ತಿರುವ ಸತ್ಯ.ಅಂದರೆ ಒಂದು ತಿಂಗಳ ಮಟ್ಟಿಗೆ ಆಮೀರ್ ಖಾನ್ ತನ್ನ ಕಾರ‍್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಂದಹಾಗೆ ೧೩ ಎಪಿಸೋಡುಗಳನ್ನು ಈಗಾಗಲೇ ಸತ್ಯಮೇವ ಜಯತೇ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಸರಣಿಯಲ್ಲಿ ೫ ಎಪಿಸೋಡುಗಳು ಪ್ರಸಾರವಾಗಲಿದೆ. ಉಳಿದ ೮ ಎಪಿಸೋಡುಗಳನ್ನು ನಂತರ ಪ್ರಸಾರ ಮಾಡುವ ಯೋಜನೆ ಇದೆ . ದೇಶದ ಕಾಳಜಿ ಹೊತ್ತ ಆಮೀರ್: ಆಮೀರ್ ಖಾನ್ ಈ ಬಾರಿ ಬರೀ ಐದು ಎಪಿಸೋಡು(ಸಂಚಿಕೆ)ಗಳಲ್ಲಿ ಕೊನೆಗೊಳಿಸಲಿರುವ ‘ಸತ್ಯಮೇವ ಜಯತೇ’ಯಲ್ಲಿ ಏನಿದೆ ಎನ್ನುವುದು ಖುದ್ದು ಆಮೀರ್ ‘ಸತ್ಯಮೇವ ಜಯತೇ’ಯ ಜಾಹೀರಾತುಗಳಲ್ಲಿಯೇ ಬಿಚ್ಚಿಟ್ಟಿದ್ದಾರೆ. ಹೌದು. ‘ಜೀನೇ ದೇಶ್ ಕೀ ಫಿಕರ್ ಹೈ’(ಯಾರಿಗೆ ದೇಶದ ಕುರಿತು ಕಾಳಜಿ ಇದೆ) ಎನ್ನುವ ಮೂಲಕ ದೇಶದ ಕುರಿತು ಕಾಳಜಿ ಪಡುವಂತಹ ಸರಣಿಗಳನ್ನೇ ಕೊಡುತ್ತಾರೆ ಎನ್ನೋದು ಕಾರ‍್ಯಕ್ರಮದ ಸಿಕ್ರೇಟ್. ಒಂದೆರಡು ತಿಂಗಳಲ್ಲಿ ಬರುವ ಮಹಾ ಚುನಾವಣೆ, ಭ್ರಷ್ಟಾಚಾರ, ಮತದಾನ, ದೇಶದ ಪ್ರಗತಿ ಹೀಗೆ ಎರಡು ಮೂರು ಕಾನ್ಸೆಪ್ಟ್‌ಗಳನ್ನು ಹೊತ್ತುಕೊಂಡು ಆಮೀರ್ ಸತ್ಯಮೇವ ಜಯತೇಯ ಕಣಕ್ಕೆ ಇಳಿಯಲಿದ್ದಾರೆ ಎನ್ನೋದು ಹೊರಬಂದ ಮಾತು. ಟೋಟಲಿ ಆಮೀರ್ ಖಾನ್ ನಡೆಸುವ ‘ಸತ್ಯಮೇವ ಜಯತೇ’ ನಿಜಕ್ಕೂ ನೋಡಲು ಪ್ರೇಕ್ಷಕ ವರ್ಗವಂತೂ ತುದಿಕಾಲಲ್ಲಿ ನಿಂತಿರೋದು ಗ್ಯಾರಂಟಿಯಾಗಿದೆ. ....

Tuesday, February 18, 2014

ಕನ್ನಡಕ್ಕೊಬ್ಬ ಬಂದ ಹೊಸ ಹುಡ್ಗ

* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ನಲ್ಲಿ ಬೌಲಿಂಗ್, ಬ್ಯಾಟಿಂಗ್ ಮಾಡಲು ಹೊಸ ಹುಡ್ಗನೊಬ್ಬ ಎಂಟ್ರಿಯಾಗಿದ್ದಾನೆ. ಹೊಸತನ ಬಯಸುವ ಈ ಸಿನಿಮಾ ಬದುಕಿನಲ್ಲಿ ಹುಡುಗ ಬದಲಾವಣೆಯನ್ನು ಹೊತ್ತು ತರುತ್ತಾನೆ ಎನ್ನೋದು ಅವನ ಸುತ್ತಮುತ್ತ ಇರುವವರ ಮಾತು. ಕಾರಣ ಇಷ್ಟೇ ಸ್ಪುರದ್ರೂಪಿ ಹುಡುಗ ಬರೀ ನೋಡಲು ಮಾತ್ರ ಸಖತ್ ಆಗಿಲ್ಲ. ಬದಲಾಗಿ ಸಿಕ್ಸ್ ಪ್ಯಾಕ್ ಎನ್ನುವ ಕಾನ್ಸೆಪ್ಟ್‌ನಲ್ಲೂ ಹುಡುಗ ಮಿಂಚಿದ್ದಾನೆ. ಅಂದಹಾಗೆ ವಿಜೇಶ್ ಶೆಟ್ಟಿ. ಕಡಲ ತಡಿಯ ಊರು ಪುತ್ತೂರಿನಿಂದ ಹೊರ ಬಂದ ಪ್ರತಿಭೆ. ರಂಗಭೂಮಿಯ ಜತೆಗೆ ವಿಶೇಷ ವ್ಯಾಮೋಹ ಇಟ್ಟುಕೊಂಡಿರುವ ಹುಡುಗ ಅವಕಾಶಕ್ಕಾಗಿ ಬಾಗಿಲು ಬಡಿಯಲು ಆರಂಭಿಸಿದ್ದು ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಯನ್ನು ಎನ್ನುವುದು ವಿಶೇಷ. ತುಳುನಾಡಿನಲ್ಲಿ ಅಬ್ಬರದಲ್ಲಿ ಬೆಳೆಯುತ್ತಿರುವ ಕೋಸ್ಟಲ್‌ವುಡ್ ಸಿನಿಮಾಗಳನ್ನು ಬಿಟ್ಟು ಏಕ್‌ದಂ ಸ್ಯಾಂಡಲ್‌ವುಡ್ ಕಡೆ ದೃಷ್ಟಿ ಹಾಕಿದಾಗಲೇ ಹುಡುಗ ಬೆಳೆಯುವ ಲಕ್ಷಣಗಳು ಗೋಚರವಾಗುತ್ತಿದೆ. ಕೋಸ್ಟಲ್‌ವುಡ್‌ನಲ್ಲಿ ಎರಡು- ಮೂರು ಸಿನಿಮಾಗಳಿಗೆ ನಾಯಕನಾಗಿ ಬುಕ್ ಆಗಿದ್ದ ಹುಡುಗ ವಿಜೇಶ್ ಶೆಟ್ಟಿ ಈಗ ಕನ್ನಡದಲ್ಲಿ ಬರುತ್ತಿರುವ ತ್ರಿಕೋನ ಪ್ರೇಮಕತೆಯ ಹಂದರವಿರುವ ‘ನಾನು ಹೇಮಂತ್ ಅವಳು ಸೇವಂತಿ’ ಚಿತ್ರದ ಲೀಡ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ೯೦ ಭಾಗ ಚಿತ್ರೀಕರಣ ಮುಗಿಸಿಕೊಂಡು ಚಿತ್ರಗಳ ಹಾಡುಗಳ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ನಿರ್ದೇಶಕ ಸುಧಾಕರ ಬನ್ನಂಜೆಯ ಜತೆಯಲ್ಲಿ ಇತರ ಗೆಳೆಯರು ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಈ ಚಿತ್ರ ಹೊಸ ಮಾದರಿಯಲ್ಲಿ ಪ್ರೇಮ ಕತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಮಾತು. ತನ್ನ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಇಡೀ ಕತೆಯೇ ನನ್ನ ಪಾತ್ರದ ಮೂಲಕ ಆರಂಭವಾಗುವುದರಿಂದ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆ ಇದೆ. ಮುಖ್ಯವಾಗಿ ಹೊಸಬರ ತಂಡ ಇರುವ ಕಾರಣ ಚಿತ್ರದಲ್ಲಿ ಹೆಚ್ಚಿನ ಲವಲವಿಕೆ ಹಾಗೂ ಕತೆಯಲ್ಲೂ ವಿಭಿನ್ನತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಶೆಟ್ಟಿಯ ಮಾತು. ಫಿಟ್ನೇಸ್ ಟ್ರೈನರ್ ನಟನೆಗೆ ಇಳಿದ ಕತೆ: ಪುತ್ತೂರಿನಲ್ಲಿ ತನ್ನದೇ ಫಿಟ್ನೇಸ್ ಸೆಂಟರ್ ಇಟ್ಟುಕೊಂಡಿರುವ ವಿಜೇಶ್ ಶೆಟ್ಟಿಗೆ ಬಾಡಿ ಫಿಟ್ನೇಸ್‌ನಲ್ಲಿಯೇ ಆಸಕ್ತಿ ಹೆಚ್ಚು. ಹೆಚ್ಚು ಸಮಯ ಜಿಮ್‌ನಲ್ಲಿಯೇ ಕಳೆಯುವ ವಿಜೇಶ್‌ಗೆ ನಟನೆ ಗೀಳು ಬಂದದ್ದು ಮಾತ್ರ ವಿಶೇಷ. ಫಿಟ್ನೇಸ್ ತನ್ನದೇ ವೃತ್ತಿ ಎಂದುಕೊಂಡು ಬೆಳೆಯುತ್ತಿದ್ದಾಗ ನಟನೆ ಒಂದು -ಶನ್ ರೀತಿಯಲ್ಲಿ ಕಾಣಿಸಿಕೊಂಡಿತು ಎನ್ನುವುದು ವಿಜೇಶ್ ಮಾತು. ಬೆಂಗಳೂರಿನಲ್ಲಿದ್ದಾಗ ಅಭಿನಯ ತರಂಗದಲ್ಲಿ ನಟನೆಯ ಕುರಿತು ಕೋರ್ಸ್ ಮಾಡಿಕೊಂಡು ಹೊರಬಂದ ಹುಡುಗ ನಂತರ ಮೊಡೆಲಿಂಗ್, ಡ್ರಾಮಾ, ಶಾರ್ಟ್ ಮೂವಿಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ನಟನೆಯ ಜತೆಗೆ ಫಿಟ್ನೇಸ್ ಸೆಂಟರ್‌ಗಳನ್ನು ರಾಜ್ಯದ ತುಂಬಾ ತೆರೆಯಬೇಕು ಎನ್ನುವ ಕನಸ್ಸು ಹೊತ್ತುಕೊಂಡಿರುವ ವಿಜೇಶ್ ಶೆಟ್ಟಿಗೆ ನಟನೆಯಲ್ಲೂ ಮುಂದುವರಿಯಬೇಕು ಎನ್ನುವ ಹಂಬಲವಿದೆ. ಟೋಟಲಿ ಬಹಳ ವರ್ಷಗಳ ನಂತರ ಕರಾವಳಿಯ ಹುಡುಗನೊಬ್ಬ ನಾಯಕನಾಗಿ ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ಗೆ ಇಳಿದುಬಿಟ್ಟಿದ್ದಾರೆ. ಅವರ ಮುಂದಿನ ಆಟ ಸಿನಿಮಾ ಥಿಯೇಟರ್‌ಗೆ ಬಂದ ನಂತರವೇ ತಿಳಿಯಬೇಕು.

Monday, February 17, 2014

ಬಾಲಿವುಡ್ ನೋ ಮ್ಯಾರೇಜ್ ನಟಿಯರು

* ಸ್ಟೀವನ್ ರೇಗೊ, ದಾರಂದಕುಕ್ಕು ಹೆಸರು, ಹಣ ಹೀಗೆ ಸೂಪರ್ ಬದುಕಿಗೆ ಲಯಾಕ್ ಎನ್ನುವಂತಹ ಎಲ್ಲ ಐಟಂಗಳು ಇದ್ದರೂ ಕೂಡ ಅವರಿಗೆ ಮದುವೆಯೊಂದು ಬೇಡ. ಯಾಕೋ ಗೊತ್ತಿಲ್ಲ. ಬಾಲಿವುಡ್ ಪಡಸಾಲೆಯಲ್ಲಿ ಮಿಂಚಿದ ಕೆಲವೊಂದು ನಟಿಯರು ಮದುವೆಯ ಬಗ್ಗೆ ಎಂದಿಗೂ ಯೋಚನೆಯೇ ಮಾಡಿಕೊಂಡಿಲ್ಲ ಎನ್ನುವುದೇ ಸ್ವಾರಸ್ಯ ಮಾತು. ಅಷ್ಟಕ್ಕೂ ಬಾಲಿವುಡ್ ಅಂಗಳದ ಏಣಿ ಏರಿದ ಹುಡುಗಿಯರು ಯಾಕೆ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎನ್ನುವುದಕ್ಕೆ ಯಾವುದೇ ಉತ್ತರವಿಲ್ಲ. ನೋ ಮ್ಯಾರೇಜ್ ಕಾರ್ಡ್ ಎನ್ನುವುದೇ ಅವರ ಬದುಕಿನ ಮಂತ್ರ.
ಅಂದಹಾಗೆ ಬಾಲಿವುಡ್ ಪಡಸಾಲೆಯಲ್ಲಿರುವ ಇಂತಹ ನಾಯಕಿಯರು ಯಾರು ಅಂತೀರಾ..?ನಟಿ ತಬು, ಸುಶ್ಮಿತಾ ಸೇನ್, ರಾಣಿ ಮುಖರ್ಜಿ, ಪ್ರೀತಿ ಝಿಂಟಾ, ಬಿಪಾಸ ಬಸು, ಪ್ರಿಯಾಂಕಾ ಚೋಪ್ರಾ. ಇದೇ ಕೆಲವು ಹೆಸರುಗಳಲ್ಲ.. ಇನ್ನಷ್ಟೂ ಹೆಸರುಗಳು ಬಾಲಿವುಡ್ ಅಂಗಳದಲ್ಲಿ ಕಾಣ ಸಿಗುತ್ತದೆ. ಆದರೆ ಇವರು ಮಾತ್ರ ಬಾಲಿವುಡ್ ಅಂಗಳದಲ್ಲಿ ಬೆಳೆದವರು ಹಾಗೂ ಉಳಿದವರ ಸಾಲಿನಲ್ಲಿ ಸಿಗುವವರು. ತಬು: ಬಾಲಿವುಡ್ ಶಾಲೆಯಲ್ಲಿ ಇವರ ಹೆಸರು ಆಗಾಗ ಕೇಳಿಸಿಕೊಳ್ಳುತ್ತಿದೆ. ಅವರು ತಮ್ಮ ನಟನೆಗಾಗಿ ಎರಡು ಬಾರಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಆಪ್- ಬೀಟ್ ಪಾತ್ರಗಳಿಂದಾಗಲೇ ಗುರುತಿಸಿಕೊಂಡ ತಬು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಣೆ ಒಳ್ಳೆಯ ಹೆಸರುಗಳಿಸಿಕೊಂಡಿದ್ದಾರೆ. ೪೨ರ ಹರೆಯದ ತಬು ಈಗಲೂ ವಿವಾಹದ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ಸುಶ್ಮಿತಾ ಸೇನ್: ೯೪ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ತಲೆ ಮೇಲೆ ಮೂಡಿಸಿಕೊಂಡಾಗ ಸುಶ್ಮಿತಾ ಸೇನ್ ಹಲವು ಯುವಕರು ಫಿದಾ ಆಗಿದ್ದರು. ರಣದೀಪ್ ಹೂಡಾ ಜತೆಯಲ್ಲಿ ಒಂದು ಬ್ರೇಕ್ ಆಪ್ ಮ್ಯಾಟರ್ ಬಿಟ್ಟರೆ ಸೇನ್ ಗಾಸಿಪ್ ಲೋಕದಲ್ಲಿ ಕಾಣಿಸಿಕೊಂಡಿದ್ದು ಬಹಳ ವಿರಳ. ಕೆಲವೊಮ್ಮೆ ನಿರ್ದೇಶಕ ವಿಕ್ರಂ ಭಟ್ಟರ ಹೆಸರಿನ ಜತೆಯಲ್ಲಿ ತಾಳೆ ಹಾಕಿಕೊಂಡ ಸೇನ್ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಬಿಪಾಸ ಬಸು: ಬಾಲಿವುಡ್ ಅಂಗಳದ ಕೃಷ್ಣ ಸುಂದರಿ ಬಿಪಾಸ ಬಸು ನಟ ಜಾನ್ ಅಬ್ರಾಹಂ ಜತೆಗಿನ ಒಂದು ಬ್ರೇಕ್ ಆಪ್‌ನಿಂದಾಗಿ ಮದುವೆಯ ಮೇಲಿನ ವ್ಯಾಮೋಹವನ್ನೇ ಬಿಟ್ಟು ಬಿಟ್ಟಿದ್ದಾರೆ. ೩೩ರ ಹರೆಯದ ಬಸು ತಮ್ಮದೇ ಪ್ರಾಡಕ್ಟ್ ಎಂಡೋರೇಸ್‌ಮೆಂಟ್, -ಶನ್ ವೀಕ್, ಬ್ರಾಂಡ್ -ಕಸ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆದರೆ ಈಗ ನಟ ಹರ್ಮನ್ ಬೇವಾಜಾ ಜತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಗಟ್ಟಿಯಾಗಿ ಕೇಳಿಸಿಕೊಳ್ಳುತ್ತಿದೆ. ಪ್ರಿಯಾಂಕಾ ಚೋಪ್ರಾ: ಮಿಸ್ ವರ್ಲ್ಡ್ ಹಾಗೂ ಮಿಸ್ ಇಂಡಿಯಾ ಎರಡು ಕಿರೀಟಗಳನ್ನು ಬಾಚಿಕೊಂಡ ಗ್ಲ್ಯಾಮ್ ಡೀವಾ ಪ್ರಿಯಾಂಕಾ ಚೋಪ್ರಾ ನಟನೆ ಜತೆಯಲ್ಲಿ ಹಾಡುಗಾರಿಕೆಯಲ್ಲೂ ಸಖತ್ ಮಿಂಚಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಜತೆಗೆ ಪ್ರೇಕ್ಷಕರನ್ನು ಮೋಡಿ ಮಾಡುವ ತಾಕತ್ತು ಪ್ರಿಯಾಂಕಾಳಿಗೆ ಇದೆ ಎನ್ನೋದು ಬಾಲಿವುಡ್ ಅಂಗಳದಲ್ಲಿರುವ ಮಾತು. ‘ಇನ್ ಮೈ ಸಿಟಿ’ ಮ್ಯೂಸಿಕಲ್ ಆಲ್ಬಂನ ಪಾಸಿಟಿವ್ ವೇವ್‌ನಿಂದಾಗಿ ಚೋಪ್ರಾ ಬತ್ತಳಿಕೆಯಿಂದ ಇನ್ನಷ್ಟೂ ಮ್ಯೂಸಿಕಲ್ ಆಲ್ಬಂ ಹೊರ ಬರುವ ಸಾಧ್ಯತೆ ದಟ್ಟವಾಗಿದೆ. ೩೧ರ ಹರೆಯ ಚೋಪ್ರಾ ಮೇರಿ ಕೋಮ್ ಅವರ ಆತ್ಮಕತೆಯಲ್ಲಿ ನಟಿಸುತ್ತಿದ್ದಾರೆ. ಆದರೆ ಮದುವೆ ಎನ್ನುವ ಸಂಬಂಧದಿಂದ ದೂರಕ್ಕೆ ಉಳಿದುಬಿಟ್ಟಿದ್ದಾರೆ. ಪ್ರೀತಿ ಝಿಂಟಾ: ಬಾಲಿವುಡ್ ಅಂಗಳದ ಚಿಗರೆ ಪ್ರೀತಿ ಝಿಂಟಾ ಚಿತ್ರಗಳ ನಟನೆಯ ಜತೆಯಲ್ಲಿ ಐಪಿಎಲ್ ತಂಡದ ಉಸ್ತುವಾರಿಯಲ್ಲೂ ಕೈಯಾಡಿಸಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್‌ನ ಮೂಲಕ ಬಾಲಿವುಡ್ ನಲ್ಲಿ ಹೊಸ ಹೊಸ ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಝಿಂಟಾ ಉದ್ಯಮಿ ನೆಸ್ ವಾಡಿಯಾ ಜತೆ ಲೀವಿಂಗ್ ಲೈ-ನಲ್ಲಿ ಕಾಲದೂಡುತ್ತಿದ್ದಾರೆ. ೩೮ ಹರೆಯದ ಪ್ರೀತಿ ಝಿಂಟಾ ಮದುವೆ ಬೇಡವೇ ಬೇಡ ಎನ್ನುವುದು ಅವರ ಮಾತು. ರಾಣಿ ಮುಖರ್ಜಿ: ತನ್ನ ಪ್ರಬುದ್ಧ ನಟನೆಯ ಮೂಲಕವೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಕತ್ತು ಇರುವ ನಟಿಯರ ಸಾಲಿನಲ್ಲಿ ರಾಣಿ ಮುಖರ್ಜಿಯ ಹೆಸರು ನಿಲುಕಾಡುತ್ತದೆ. ಬಾಲಿವುಡ್ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಜತೆಗಿನ ಆ-ರ್‌ಗಳು ರಾಣಿಯನ್ನು ಪದೇ ಪದೇ ಮಾಧ್ಯಮಗಳು ಕೆಣಕುತ್ತಿದ್ದವು. ೩೦ ದಾಟಿದರೂ ಮದುವೆಯ ಬಗ್ಗೆ ರಾಣಿ ನೋ ಎನ್ನೋದು ಜಾಸ್ತಿ.

Saturday, February 15, 2014

ಪ್ರಿಯಾದರ್ಶನ್ ಬದುಕಿನಲ್ಲಿ ಬಿರುಗಾಳಿ !

* ಸ್ಟೀವನ್ ರೇಗೊ, ದಾರಂದಕುಕ್ಕು ಇದು ಪಕ್ಕಾ ಪ್ರೇಮಿಗಳಿಬ್ಬರ ಮಾತು. ಯಾಕೋ ಗೊತ್ತಿಲ್ಲ ೨೪ ವರ್ಷದ ಸುಮಧುರ ದಾಂಪತ್ಯ ಗೀತೆಯೇ ಈಗ ಮುಗಿದು ಹೋಗುವ ಹಂತಕ್ಕೆ ಬಂದು ತಲುಪಿದೆಯಾ ಎನ್ನುವ ಸಂದೇಹ ಮೂಡಿಬಂದಿದೆ. ಹೌದು ಇದು ಖ್ಯಾತ ನಿರ್ದೇಶಕ ಪ್ರಿಯಾದರ್ಶನ್ ಹಾಗೂ ಅವರ ಪತ್ನಿ ನಟಿ ಲಿಜಿ ಅವರ ಖಾಸ್‌ಬಾತ್. ಆದರೆ ಮನೆಯೊಳಗೆ ಇದ್ದ ಈ ಮಾತು ಈಗ ಹೊರ ಪ್ರಪಂಚದಲ್ಲಿ ತೇಲಾಡುತ್ತಿದೆ. ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದು ಮುಟ್ಟಿದ್ದಾರೆ ಎನ್ನುವ ಮಾತು ಮಲಯಾಳಂ ಚಿತ್ರರಂಗದ ಗಲ್ಲಿಯಿಂದ ಹರಿದುಬಂದಿದೆ. ಪ್ರೇಮಿಗಳ ದಿನದಂದು ಈ ಇಬ್ಬರು ಜತೆಯಾಗಿದ್ದರು.
ಆದರೆ ಇದೇ ಪ್ರೇಮಿಗಳ ದಿನದಂದು ಈ ಇಬ್ಬರು ಬೇರೆಯಾಗುವ ವಿಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾತು ಬಂದಿದೆ. ಈಗಾಗಲೇ ನಟಿ ಲಿಜಿ ಕಾನೂನು ಮೆಟ್ಟಿಲು ಏರಿಕೊಂಡು ಡೈವೋರ್ಸ್‌ಗೆ ಅರ್ಜಿ ಗುಜರಾಯಿಸಿದ್ದಾರೆ. ಮತ್ತೊಂದೆಡೆ ಪ್ರಿಯಾದರ್ಶನ್ ಕೂಡ ಮಾಧ್ಯಮಗಳಿಂದ ಕಣ್ಣು ತಪ್ಪಿಸಿಕೊಂಡು ಓಡಾಟ ಆರಂಭಿಸಿದ್ದಾರೆ. ನಟಿ ಲಿಜಿ ಕೂಡ ಮಾಧ್ಯಮದ ಮುಂದೆ ಬಂದು ‘ದಯವಿಟ್ಟು ಇದೊಂದು ಕೌಟುಂಬಿಕ ವಿಚಾರ ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿಕೊಂಡು ಮರೆಯಾಗಿದ್ದಾರೆ. ಮತ್ತೊಂದೆಡೆ ಕೋರ್ಟ್ ಕಟ್ಟಳೆಯಲ್ಲಿ ಇಬ್ಬರಿಗೂ ಬುಲಾವ್ ಬಂದಿದೆ. ಈ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೆಳೆದ ಇಬ್ಬರು ಪ್ರೇಮಿಗಳು ದೂರವಾಗುವ ಕಾಲ ಬಂದಿದೆ ಎನ್ನಲಾಗುತ್ತಿದೆ. ಪ್ರಿಯಾ ಬದುಕಿನಲ್ಲಿ ಲಿಜಿಯಾಟ: ೧೯೮೪ರಲ್ಲಿ ಮಲಯಾಳಂನ ‘ಅಲಾರಿಯಂ’ ಚಿತ್ರವೊಂದರಿಂದ ಹೊರ ಬಂದ ನಟಿ ಲಿಜಿ ತಿರುವನಂತಪುರದಲ್ಲಿ ಚಿತ್ರವೊಂದರ ಸೆಟ್‌ನಲ್ಲಿ ಪ್ರಿಯಾದರ್ಶನ್‌ಗೆ ಭೇಟಿಯಾಗುತ್ತಾರೆ. ಈ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಇಲ್ಲಿಂದ ಇಬ್ಬರ ಸಿನಿ ಬದುಕು ಕೂಡ ಆರಂಭವಾಗುತ್ತದೆ. ನಿರ್ದೇಶಕ ಪ್ರಿಯಾದರ್ಶನ್ ನಿರ್ದೇಶನ ಮಾಡಿದ ೨೨ ಚಿತ್ರಗಳಲ್ಲಿ ಲಿಜಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ೧೯೯೦ರಲ್ಲಿ ಇಬ್ಬರು ವಿವಾಹ ಬಂಧನದಲ್ಲಿ ಬಂಽಯಾಗುತ್ತಾರೆ. ಈ ಬಳಿಕ ಲಿಜಿ ತನ್ನ ಸಿನಿಮಾ ಬದುಕಿನ ಹೆಸರನ್ನು ಲಕ್ಷ್ಮಿ ಎಂದು ಬದಲಾಯಿಸಿಕೊಂಡರು. ಇಬ್ಬರಿಗೆ ಕಲ್ಯಾಣಿ ಹಾಗೂ ಸಿದ್ದಾರ್ಥ್ ಎನ್ನುವ ಮಕ್ಕಳಿದ್ದಾರೆ. ಇಬ್ಬರು ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿಯೇ ನೆಲೆ ನಿಂತಿದ್ದಾರೆ. ಪ್ರಿಯಾ ಬದುಕಿನಲ್ಲಿ ಲಿಜಿ ಬಹಳ ಮುಖ್ಯವಾದ ಪಾತ್ರವಹಿಸಿದ್ದಾರೆ. ಎರಡು ಕಂಪನಿಗಳ ಮಾಲೀಕರಾಗಿರುವ ಲಿಜಿ ಸಿಸಿಎಲ್‌ನಲ್ಲೂ ತಮ್ಮ ಆಸ್ತಿತ್ವವನ್ನು ಇಟ್ಟುಕೊಂಡಿದ್ದರು. ಈ ಎಲ್ಲವೂಗಳ ನಡುವೆ ಇಬ್ಬರು ಬೇರೆಯಾಗಲು ಇರುವ ಕಾರಣ ಏನೂ ಎನ್ನೋದು ಇಬ್ಬರು ಎಲ್ಲಿಯೂ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಆದರೆ ಚಿತ್ರರಂಗದ ಮಾಹಿತಿಯ ಪ್ರಕಾರ ನಾಯಕಿ ನಟಿಯೊಬ್ಬಳು ಇಬ್ಬರ ನಡುವೆ ವಿರಸ ಮೂಡಲು ಕಾರಣ ಎನ್ನಲಾಗುತ್ತಿದೆ. ನಿಜಕ್ಕೂ ಇಬ್ಬರ ನಡುವೆ ನಡೆದದ್ದು ಏನೂ ಎನ್ನೋದು ಮುಂಬರುವ ದಿನಗಳೇ ಹೇಳಬೇಕು.

Tuesday, February 11, 2014

‘ನಿರೆಲ್’ ಚಿತ್ರಕ್ಕೆ ದುಬಾಯಿ ಮಾರ್ಕೆಟ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಕೋಸ್ಟಲ್‌ವುಡ್ ಸಿನಿಮಾ ಲ್ಯಾಂಡ್ ಏಕ್‌ದಂ ಎದ್ದು ಕೂತಿದೆ. ವರ್ಷವಿಡೀ ಚಿತ್ರೀಕರಣ ಮಾಡಿಕೊಂಡು ಚಿತ್ರ ಮಂದಿರಕ್ಕೆ ನುಗ್ಗಲು ರೆಡಿಯಾದ ಹತ್ತಕ್ಕೂ ಅಧಿಕ ಚಿತ್ರಗಳ ಜತೆ ಜತೆಗೆ ಭರ್ಜರಿ ವೆಚ್ಚದಲ್ಲಿ ನಿರ್ಮಾಣವಾದ ‘ನಿರೆಲ್’( ನೆರಳು) ತುಳು ಚಿತ್ರ ಮೊದಲ ಬಾರಿಗೆ ದುಬಾಯಿಯ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಾಣುವ ಯೋಗ್ಯತೆಯನ್ನು ಗಳಿಸಿಕೊಂಡಿದೆ. ಅಂದಹಾಗೆ ನಿರೆಲ್ ಚಿತ್ರ ತನ್ನ ಮೇಕಿಂಗ್‌ಗಾಗಿಯೇ ಈ ಹಿಂದೆ ಬಹಳ ಸುದ್ದಿಯಾಗಿತ್ತು. ಇಡೀ ಚಿತ್ರವೇ ದುಬಾಯಿಯಲ್ಲಿ ಚಿತ್ರೀಕರಣಗೊಂಡಿದ್ದು ಮಾತ್ರವಲ್ಲ ಅದಕ್ಕೂ ಮುಖ್ಯವಾಗಿ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ರಮೇಶ್ ಅರವಿಂದ್ ಕೂಡ ಈ ಚಿತ್ರದಲ್ಲಿ ಪಾತ್ರ ಮಾಡುವ ಮೂಲಕ ತುಳು ಸಿನಿಮಾದಲ್ಲಿ ಕನ್ನಡದ ನಟರ ಆಗಮನಕ್ಕೆ ಮುನ್ನುಡಿ ಬರೆದು ಹಾಕಿದ್ದರು. ಕರಾವಳಿಯಲ್ಲಿ ಬೆಳೆದ ನಟ- ನಟಿಯರನ್ನು ಸೇರಿಸಿಕೊಂಡು ದುಬಾಯಿಯಲ್ಲಿ ಸೇರಿಸಿಕೊಂಡು ಚಿತ್ರ ಮಾಡಿದ್ದು ‘ನಿರೆಲ್’ನ ವಿಶೇಷತೆಗಳಲ್ಲಿ ಒಂದಾಗಿದೆ. ಕೆಲಸದ ಜತೆಯಲ್ಲಿ ಚಿತ್ರ ಮಾಡಿದರು: ಕರಾವಳಿಯಲ್ಲಿ ಹುಟ್ಟಿ ಬೆಳೆದ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಚಿತ್ರ ಮಾಡುವ ಕನಸ್ಸು ಕಂಡರು. ಬರೀ ಕನಸ್ಸಿನ ಜತೆಯಲ್ಲಿ ದುಬಾಯಿಯಲ್ಲಿ ವಾಸವಾಗಿರುವ ಕರಾವಳಿ ಮೂಲದ ಶೋಧನ್ ಪ್ರಸಾದ್ ಚಿತ್ರ ನಿರ್ಮಾಣ ಮಾಡುವ ಯೋಜನೆಗೆ ಬೆಂಬಲ ಕೊಟ್ಟಾಗ ‘ನಿರೆಲ್’ ಸಿನಿಮಾ ಹುಟ್ಟಿಬಂತು ಎನ್ನುತ್ತದೆ ನಿರೆಲ್ ಚಿತ್ರದ ಹಿಂದಿನ ಕತೆ. ಹೀಗೆ ವಾರವಿಡೀ ದುಡಿದು ಉಳಿದ ವೀಕೇಂಡ್ ದಿನಗಳಲ್ಲಿ ಈ ಯುವಕರು ಸಿನಿಮಾಕ್ಕೆ ಇಳಿದರು. ಅದುವೇ ಈಗ ಸಿನಿಮಾ ಆಗಿ ಮುಂದೆ ನಿಂತಿದೆ, ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ನಿರೆಲ್ ಚಿತ್ರ ಅನೇಕ ರೀತಿಯಲ್ಲಿ ದಾಖಲೆಗಳನ್ನು ಒತ್ತಿದೆ. ಮೊದಲ ಅಂತಾರಾಷ್ಟ್ರೀಯ ಮಟ್ಟದ ತುಳು ಚಿತ್ರ ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ ಮೊದಲ ಬಾರಿಗೆ ಕನ್ನಡದ ನಟರೊಬ್ಬರನ್ನು ತಂದು ತುಳು ಸಿನಿಮಾಕ್ಕೆ ತಂದು ನಟಿಸುವಂತೆ ಮಾಡಿದ್ದು ಕೂಡ ಒಂದು ದಾಖಲೆ. ಅದರಲ್ಲೂ ನಾನಾ ಭಾಷೆಗಳ ಚಿತ್ರಗಳ ನಡುವೆ ದುಬಾಯಿಯಲ್ಲಿ ಸಿನಿಮಾ ತೆರೆ ಕಾಣುತ್ತಿರುವುದು ಕೂಡ ಒಂದು ದಾಖಲೆಯಾಗಿ ನಿಂತಿದೆ. ಪ್ರತಿಭಾವಂತ ಹುಡುಗನ ಕೈಚಳಕ:
‘ನಿರೆಲ್’ ಚಿತ್ರ ಎಂದಾಕ್ಷಣ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ. ಮೂಲತಃ ಮಂಗಳೂರಿನ ಬಜಪೆಯ ಯುವಕನೊಬ್ಬ ದುಬಾಯಿ ಕೇಬಲ್ ಕಂಪನಿಯಲ್ಲಿ ಪ್ಲಾನ್ನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಹುಟ್ಟಿಕೊಂಡ ಕತೆಯೇ ಈ ನಿರೆಲ್ ಚಿತ್ರಕ್ಕೆ ಷರಾ ಬರೆಯಿತು. ನಿರೆಲ್ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಸಿನಿಮಾ ಲ್ಯಾಂಡ್‌ಗೆ ಬಂದ ಕತೆಯನ್ನು ಈ ರೀತಿ ಹೇಳುತ್ತಾರೆ: ನನ್ನ ತಂದೆಯವರು ಯಕ್ಷಗಾನ ಪ್ರಿಯರಾಗಿದ್ದರು. ಅವರೊಂದಿಗೆ ಆಕಾಶವಾಣಿಯಲ್ಲಿ ಪ್ರತಿ ಬುಧವಾರ ಪ್ರಸಾರವಾಗುವ ಯಕ್ಷಗಾನ ಕೇಳುತ್ತಿದ್ದೆ. ಅಷ್ಟೇ ಅಲ್ಲದೆ ನನ್ನ ಅಣ್ಣ ನಾಟಕದಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡುತ್ತಿದ್ದರು. ಇವೆಲ್ಲ ನನ್ನಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸಿತು. ಮೊದಲಿನಿಂದಲೂ ಚಲನ ಚಿತ್ರಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಆದರೆ ಚಲನ ಚಿತ್ರ ನಿರ್ದೇಶಕನಾಗುವೆ ಎಂದು ಯಾವತ್ತು ಕನಸು ಕಂಡಿರಲಿಲ್ಲ. ಕನ್ನಡ ಚಿತ್ರ ರಂಗದ ಬಗೆ ಅತೀವ ಅಭಿಮಾನ ಇತ್ತು. ಕನ್ನಡದ ಯೋಗರಾಜ್ ಭಟ್, ಪವನ್ ಕುಮಾರ್, ಸೂರಿ ಇವರ ಚಿತ್ರಗಳು ನನಗೆ ಪ್ರೇರಣೆ ನೀಡಿತು. ದುಬಾಯಿ ಗೆ ಬಂದ ನಂತರ ಇಲ್ಲಿ ಗೆಳೆಯರ ಜೊತೆ ಸೇರಿ ಕನ್ನಡ ಮತ್ತು ತುಳು ವಿಡಿಯೋ ಆಲ್ಬಂ ಮಾಡಲು ಪ್ರಾರಂಭಿಸಿದೆ. ಫೇಸ್ ಬುಕ್ ಮೂಲಕ ಕೆಲವು ಸಮಾನ ಮನಸ್ಕ ಗೆಳೆಯರ ಪರಿಚಯವೂ ಅಯಿತು. ಹೀಗೆ ಚಲನ ಚಿತ್ರ ನಿರ್ದೇಶಕನಾಗ ಬೇಕೆಂಬ ತುಡಿತ ಪ್ರಾರಂಭವಾಯಿತು. ದುಬಾಯಿಯಲ್ಲಿ ನಮ್ಮ ತುಳುವೆರ್ ಸಂಘಟನೆಯು ‘ತುಳು ಪರ್ಬ’ ಆಯೋಜಿಸಿದ್ದಾಗ, ನನ್ನ ಗೆಳೆಯರಾದ ಸಾನ್ ಪೂಜಾರಿ, ರಜನೀಶ್ ಅಮೀನ್ ಮತ್ತು ಸಚಿನ್ ಪಡೀಲ್ ಸೇರಿ ಒಂದು ಕಿರು ಚಿತ್ರ ಮಾಡಲು ಯೋಚಿಸಿದ್ದೆವು, ಅದಕ್ಕೆ ಶೋಧನ ಪ್ರಸಾದ್ ಇವರ ಬೆಂಬಲವೂ ಇತ್ತು. ಗೆಳೆಯ ಸಾನ್ ಪೂಜಾರಿ ಇವರ ಒತ್ತಾಸೆಯೇ, ಕಿರು ಚಿತ್ರದ ಯೋಜನೆ ಪೂರ್ಣ ಪ್ರಮಾಣದ ಚಲನ ಚಿತ್ರ ಮಾಡಲು ಪ್ರೇರೇಪಿಸಿತು. ಹಾಗೆ ನಿರೆಲ್ ಸಿದ್ಧವಾಯಿತು ಎನ್ನುವುದು ರಂಜೀತ್ ಅವರ ಮಾತು. ಟೋಟಲಿ ತುಳುವಿನಲ್ಲೂ ಮೊದಲ ಬಾರಿಗೆ ಬಿಗ್ ಬಜೆಟ್ ಚಿತ್ರದ ಜತೆಯಲ್ಲಿ ದುಬಾಯಿ ಮಾರುಕಟ್ಟೆಯಲ್ಲೂ ತುಳು ಭಾಷೆಯೊಂದು ಲಗ್ಗೆ ಹಾಕಿದೆ ಎನ್ನುವ ಹೆಮ್ಮೆ ಕೂಡ ಬಗಲಿಗೆ ನಿಂತಿದೆ. ಕೋಟ್ ಕಾರ್ನರ್ ‘ನಿರೆಲ್‌ನ ಫಲಿತಾಂಶದ ಬಗ್ಗೆ ತುಂಬಾ ಆತ್ಮ ವಿಶ್ವಾಸ ಇದೆ. ತುಳುವರು ಗುಣಮಟ್ಟಕ್ಕೆ ಯಾವುತ್ತೂ ಬೆಲೆ ಕೊಡುತ್ತಾರೆ. ಪ್ರಾಮಾಣಿಕರಾಗಿ ಈ ಚಿತ್ರ ಮಾಡಿದ್ದೇವೆ. ಈ ಚಿತ್ರದ ಫಲಿತಾಂಶ ಚಿತ್ರರಂಗದಲ್ಲಿ ಬದಲಾವಣೆಗೆ ನಾಂದಿಯಾಗುತ್ತದೆ ಎಂದು ನಂಬಿಕೆ ಇದೆ’ - ರಂಜೀತ್ ಬಜಪೆ, ನಿರೆಲ್ ಚಿತ್ರದ ನಿರ್ದೇಶಕ. ............

ಕೋಸ್ಟಲ್‌ವುಡ್‌ನಲ್ಲಿ ‘ಹುಲಿ’ ಓಡಾಟ !

* ಸ್ಟೀವನ್ ರೇಗೊ, ದಾರಂದಕುಕ್ಕು ಕೋಸ್ಟಲ್‌ವುಡ್ ಸಿನಿಮಾದ ಹಿಸ್ಟರಿ ಪುಟದಲ್ಲಿ ಇದು ಮೊದಲ ಪ್ರಯತ್ನ ಎನ್ನುವುದು ಸಿನಿಮಾ ಗಲ್ಲಿಯಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರು ಹೇಳುವ ಮಾತು. ಯಾಕ್ ಅಂತೀರಾ ‘ಹುಲಿ’ಯ ಕತೆಯನ್ನೇ ಇಟ್ಟುಕೊಂಡು ತುಳುವಿನಲ್ಲಿ ಚಿತ್ರವೊಂದು ಹೊರಬರುತ್ತಿದೆ. ಕೋಸ್ಟಲ್‌ವುಡ್ ಸಿನಿಮಾ ಫೀಲ್ಡ್‌ನಲ್ಲಿ ಇಷ್ಟರ ವರೆಗೆ ಬರೀ ಪ್ರೇಮಕತೆ, ಕೌಟುಂಬಿಕ ವಿಚಾರ ಹಾಗೂ ನಾಟಕಗಳ ಕತೆಯನ್ನು ಮೂಲವಾಗಿಟ್ಟುಕೊಂಡು ಚಿತ್ರಗಳು ಹೊರ ಬರುತ್ತಿತ್ತು. ಆದರೆ ಕೋಸ್ಟಲ್ ವುಡ್‌ನಲ್ಲಿ ‘ರೌಡಿಸಂ’ಗೆ ಮುನ್ನುಡಿ ಬರೆದ ಚಿತ್ರವೊಂದು ತೆರೆಗೆ ಬರುವುದು ಅಪರೂಪ. ಯುವ ನಿರ್ದೇಶಕ ಭರತ್‌ಕೃಷ್ಣ ನಿರ್ದೇಶನದ‘ ಬರ್ಕೆ’ ಸಿನಿಮಾ ಎಲ್ಲವೂ ರೌಡಿಸಂ ಕಥಾ ಹಂದರವನ್ನು ಇಟ್ಟುಕೊಂಡಿರುವ ಚಿತ್ರ. ಮಂಗಳೂರಿನ ‘ಬರ್ಕೆ’ ಎನ್ನುವ ಪ್ರದೇಶ ಈಗಾಗಲೇ ಹುಲಿಗಳಿಗೆ ಖ್ಯಾತಿ ಗಳಿಸಿತ್ತು. ನವರಾತ್ರಿಯ ಸಮಯದಲ್ಲಿ‘ ಬರ್ಕೆ’ಯಲ್ಲಿ ನಾನಾ ಹುಲಿ ವೇಷಧಾರಿಗಳು ತಂಡ ಕಟ್ಟಿಕೊಂಡು ಕರಾವಳಿಯ ಸುತ್ತಮುತ್ತ ಹುಲಿ ಕುಣಿತ ಮಾಮಾಲಿಯಾಗಿತ್ತು. ಇದೇ ಒಂದೇ ಪಾಯಿಂಟ್ ಇಟ್ಟುಕೊಂಡು ಭರತ್‌ಕೃಷ್ಣ ಹುಲಿಗಳ ಜತೆಯಲ್ಲಿ ಮಂಗಳೂರು ಭೂಗತ ಲೋಕವನ್ನು ಕೂಡ ಟಚ್ ಮಾಡಿದ್ದಾರೆ. ಟೋಟಲಿ ಇಡೀ ಚಿತ್ರದಲ್ಲಿ ಯುವಜನತೆ ಯಾವ ರೀತಿಯಲ್ಲಿ ಭೂಗತ ಲೋಕವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದರ ಜತೆಯಲ್ಲಿ ಚಿತ್ರದ ತುಂಬಾ ಸ್ಪೆಸ್ಪನ್ಸ್ ಹಾಗೂ ಲೋಕಲ್ ಭಾಷೆಯಲ್ಲಿ ಮುದ ನೀಡುವ ಡೈಲಾಗ್‌ಗಳು ಈ ಚಿತ್ರವನ್ನು ಮತ್ತಷ್ಟೂ ಗರಿಬಿಚ್ಚುವಂತೆ ಮಾಡಿದೆ. ಕರಾವಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಚಿತ್ರೀಕರಿಸಲಾಗಿರುವ ‘ಬರ್ಕೆ’ ಫೆ.೧೪ರಂದು ಕರಾವಳಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಬರ್ಕೆ ಚಿತ್ರದಲ್ಲಿ ಕರಾವಳಿಯ ಹೊಸ ಪ್ರತಿಭೆಗಳಿಗೆ ಮೊದಲ ಮಣೆ ನೀಡಲಾಗಿದೆ. ಈಗಾಗಲೇ ಹತ್ತಾರು ಡಾಕ್ಯುಮೆಂಟರಿಗಳಲ್ಲಿ ಹೆಸರು ಉಳಿಸಿಕೊಂಡ ಭರತ್‌ಕೃಷ್ಣ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಬರುತ್ತಿದ್ದಾರೆ. ಕೋಟ್ ಕಾರ್ನರ್: ‘ ಇದೊಂದು ಹೊಸ ಪ್ರಯತ್ನ. ವಿನೂತನ ರೀತಿಯ ಸಂಭಾಷಣೆ ಜತೆಗೆ ಡೈಲಾಗ್ ಡೆಲಿವರಿ ಚಿತ್ರದ ಮುಖ್ಯ ಪ್ಲಸ್ ಪಾಯಿಂಟ್ ಎನ್ನಬಹುದು. ಅದಕ್ಕೂ ಮುಖ್ಯವಾಗಿ ಕರಾವಳಿಯ ಸಿನಿಮಾ ಇತಿಹಾಸದಲ್ಲಿ ಯಾರು ಕೂಡ ಮಂಗಳೂರು ಭೂಗತ ಲೋಕವನ್ನು ಟಚ್ ಮಾಡಿರಲಿಲ್ಲ. ಈ ಚಿತ್ರದ ಮೂಲಕ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಹುಲಿಗಳ ಕುರಿತು ಹೇಳಲಾಗಿದೆ. ಅದಕ್ಕೂ ಮುಖ್ಯವಾಗಿ ರೌಡಿಸಂನ ಕರಾಳ ಮುಖಗಳು ಚಿತ್ರದ ಮೂಲಕ ಅನಾವರಣಗೊಳ್ಳಲಿದೆ.’ - ಭರತ್ ಕೃಷ್ಣ, ಚಿತ್ರದ ನಿರ್ದೇಶಕರು.