Tuesday, January 7, 2014

ಕ್ಯಾಂಪಸ್ ಯುವಜನತೆಯನ್ನು ಮೋಡಿ ಮಾಡಲು ಸ್ಟೈಲ್ ಮಂತ್ರ!

*ಸ್ಟೀವನ್ ರೇಗೊ, ದಾರಂದಕುಕ್ಕು ಕುಡ್ಲದ ಯೂತ್ ಬ್ರಿಗೇಡ್ ಮತ್ತೆ ರಾಕಿಂಗ್ ಮೂಡ್‌ಗೆ ತಲುಪುವ ಸುದ್ದಿಯೊಂದು ಕುಡ್ಲದ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಅದರಲ್ಲೂ ಕಾಲೇಜು ಮೆಟ್ಟಿಲು ಹತ್ತಿದ ಬರೋಬರಿ ೧೮ರಿಂದ ೨೮ರ ಅಸುಪಾಸಿನ ವಿದ್ಯಾರ್ಥಿಗಳಿಗಂತೂ ಈ ಸ್ಟೈಲ್ ಮಂತ್ರದಲ್ಲಿ ತಮ್ಮ ಚಮಕ್‌ಗಿರಿ ತೋರಿಸುವ ಚಾನ್ಸ್ ಇದೆ. ಈಗಾಗಲೇ ಮಿಕ್ಸಿಂಗ್ ಕಲ್ಚರ್‌ನಲ್ಲಿ ತಲೆತೂಗುತ್ತಿರುವ ಕುಡ್ಲ ಫ್ಯಾಶನ್ ಹಬ್ ಆಗಿ ಬದಲಾಗುತ್ತಿದೆ. ಈಗಾಗಲೇ ನಗರದಲ್ಲಿ ಫ್ಯಾಶನ್ ಪರೇಡ್‌ಗಳು, ಮೊಡೆಲ್ ಗಳ ರ‍್ಯಾಂಪ್‌ವಾಕ್ ಎಲ್ಲವೂ ಫ್ಯಾಶನ್ ಲೋಕದ ಮಬ್ಬು ಕವಿಸಿದೆ. ಇದರ ಜತೆ ಜತೆಗೆ ರಾಜ್ಯದಲ್ಲಿ ಮೊದಲ ಫ್ಯಾಶನ್ ಟ್ರೈನಿಂಗ್ ಸಂಸ್ಥೆ ಕೂಡ ಮಂಗಳೂರಿನಲ್ಲಿ ಹುಟ್ಟಿಕೊಂಡು ರೂಪದರ್ಶಿಗಳನ್ನು ತಯಾರು ಮಾಡುತ್ತಿದೆ. ಇದೆಲ್ಲವನ್ನು ಕೌಂಟ್ ಲೀಸ್ಟ್‌ನಲ್ಲಿ ತೂಗಿ ಹಾಕುವಾಗ ಕುಡ್ಲದ ಯೂತ್ ಬ್ರಿಗೇಡ್ ಸ್ಟೈಲ್ ಮಂತ್ರಕ್ಕೆ ಶರಣಾಗುತ್ತಿದೆ ಎನ್ನುವುದು ಸ್ವಷ್ಟವಾಗುತ್ತಿದೆ. ಏನಿದು ಸ್ಟೈಲ್ ಮಂತ್ರ: ಸ್ಟೈಲ್ ಮಂತ್ರ ಇದೊಂದು ನಾನಾ ಪದಗಳ ಸಮ್ಮಿಲನ. ಈ ಪದಗಳ ಪುಂಜಗಳು ಜತೆಗೂಡಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸುವುದೇ ಈ ಸ್ಟೈಲ್ ಮಂತ್ರದ ಹೊಸ ವ್ಯಾಖ್ಯೆ. ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶೈಲಿಯ ಕುರಿತಾಗಿ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಪಡೆದು ತಮ್ಮ ಡ್ರೆಸಿಂಗ್ ಸ್ಟೈಲ್, ಹಾವಭಾವಗಳ ಕುರಿತು ಬಿಂದಾಸ್ ಆಗಿ ಹೇಳುವುದು ಈ ಸ್ಟೈಲ್ ಮಂತ್ರದ ಹಕೀಕತ್ತು. ಅಂದಹಾಗೆ ಇದರಲ್ಲಿ ಗೆದ್ದವರಿಗೆ ನಾನಾ ಬಹುಮಾನಗಳ ಜತೆಗೆ ಮೂರು ದಿನಗಳ ಪ್ರವಾಸ ಹಾಗೂ ಮಿಸ್ಟರ್ ಆಂಡ್ ಮಿಸ್ಸಿ ೨೦೧೪ ಸ್ಪರ್ಧೆಗೆ ನೇರ ಪ್ರವೇಶ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ ಫ್ಯಾಶನ್ ಎಬಿಸಿಡಿ ಮೊದಲ ಮಹಡಿ, ಎಂಪಾಯರ್ ಮಾಲ್, ಎಂ.ಜಿ. ರೋಡ್ ಮಂಗಳೂರು ಇವರನ್ನು ಸಂಪರ್ಕಿಸಬಹುದು. ಕೋಟ್ ಕಾರ್ನರ್ ‘ಮಂಗಳೂರಿನ ಯುವಜನತೆ ತಮ್ಮದೇ ಸ್ಟೈಲ್ ಮಂತ್ರಗಳನ್ನು ಹೊಂದಿದ್ದಾರೆ. ಆದರೆ ಅವರಿಗೊಂದು ವೇದಿಕೆಯ ಕೊರತೆ ಇದ್ದೇ ಇದೆ. ತಮ್ಮ ಬದುಕಿನ ಶೈಲಿ, ಟ್ರೆಂಡ್ ಸೆಟ್ಟಿಂಗ್ ವಿಚಾರಗಳಿಂದ ಯುವಜನತೆ ಫ್ಯಾಶನ್ ದುನಿಯಾದಲ್ಲಿ ಹೊಂದಿರುವ ಆಸಕ್ತಿಯನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ’ ಅನುಪಮ ಸುವರ್ಣ, ಮುಖ್ಯಸ್ಥರು ಫ್ಯಾಶನ್ ಎಬಿಸಿಡಿ, ಮಂಗಳೂರು. (vk nammakarvali magazine carried on 8.1.2014)

Sunday, December 29, 2013

ಮಲಾನಿ ಬಾಲಿವುಡ್‌ನಲ್ಲಿ ಹೊಸ ಕಹಾನಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸಂದೀಪ್ ಮಲಾನಿ ಬಾಲಿವುಡ್ ಅಂಗಳದಲ್ಲಿ ಸೈಲೆಂಟ್ ವರ್ಕ್‌ರ್ ಎಂದೇ ಕರೆಸಿಕೊಂಡವರು. ಬಾಲಿವುಡ್ ಅಂಗಳದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸದಾ ಕಾಲ ಬ್ಯುಸಿಯಾಗಿರುವ ಮಂಗಳೂರು ಮೂಲದ ಸಂದೀಪ್ ಮಲಾನಿ ಈಗ ಹೊಸ ಕಹಾನಿಯೊಂದನ್ನು ರೆಡಿ ಮಾಡಿದ್ದಾರೆ. ಅದೇನಪ್ಪಾ ಅಂದರೆ ಅತ್ತ ಕಮರ್ಷಿಯಲ್ ಆಂಗಲ್‌ನಲ್ಲೂ ಇಲ್ಲದ ಇತ್ತ ಆರ್ಟ್ ಕೆಟಗರಿಗೂ ಸೇರದಂತಹ ಮೂರು ಕತೆಗಳನ್ನು ಇಟ್ಟುಕೊಂಡು ಮೂರು ಚಿತ್ರಗಳನ್ನು ಮಾಡಲು ಭರ್ಜರಿ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
‘ಐ ಲವ್ ಹೃತಿಕ್’ ಎನ್ನುವ ಚಿತ್ರದಲ್ಲಿ ಬಾಲಕನ ಮುಗ್ದ ಜಗತ್ತಿನ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುವ ಯೋಜನೆ ಮಲಾನಿ ತಲೆಗೆ ಬಂದಿದೆ. ಇದರ ಜತೆಯಲ್ಲಿ ‘ಓ ಮೈ ಡಾಗ್’ ಅನ್ಯ ಕೋಮಿನ ಯುವಕ -ಯುವತಿಯ ಪ್ರಣಯ ಕತೆಯನ್ನು ಚಿತ್ರದ ಮೂಲಕ ಹೊರತರುವ ಕೆಲಸ ಕೂಡ ಮಲಾನಿ ಕೈಗೆತ್ತಿಕೊಂಡಿದ್ದಾರೆ. ಹಾಹಾ.. ಹ್ಹೀ ಹ್ಹೀ ಎನ್ನುವ ಹಾಸ್ಯ ಚಿತ್ರ ಮಲಾನಿ ಬಾಣಲೆಯಲ್ಲಿ ಸಿದ್ಧವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ಈ ಎಲ್ಲ ಚಿತ್ರಗಳು ಚಿತ್ರೀಕರಣಗೊಂಡು ತೆರೆಗೆ ತರುವ ಕೆಲಸ ಮಲಾನಿಯಿಂದ ನಡೆಯಲಿದೆ. ಈ ಮೂರು ಚಿತ್ರಗಳನ್ನು ಮಲಾನಿ ತಮ್ಮ ಹೋಮ್ ಬ್ಯಾನರ್ ಮಲಾನಿ ಟಾಕೀಸ್ ಮೂಲಕ ಹೊರ ತರುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ತಮ್ಮ ಕುಟುಂಬದ ಸಮೇತರಾಗಿ ಮಂಗಳೂರಿನ ಮನೆಗೆ ಬಂದಿದ್ದಾಗ ನಿರ್ದೇಶಕ ಕಮ್ ಕತೆಗಾರ ಮಲಾನಿ ಲವಲವಿಕೆಯ ಜತೆಯಲ್ಲಿ ತಮ್ಮ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ೨೦೧೩ ನನ್ನ ಪಾಲಿಗೆ ವಿಶೇಷವಾಗಿತ್ತು. ೯ ಸಂಗೀತ ಪ್ರದಾನವಾದ ಡಾಕ್ಯುಮೆಂಟರಿಗಳನ್ನು ಸಿದ್ಧಪಡಿಸಿದ್ದೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಯಶ್‌ರಾಜ್ ಅವರ ನೆನಪಿಗಾಗಿ ‘ಯಶ್‌ರಾಜ್ ಹೀರೋಯಿನ್ಸ್ ದೇ ಜಾಯೆಂಗೆ’ ಹಾಗೂ ಬಾಲಿವುಡ್ ನಟಿ ಶ್ರೀದೇವಿಯ ೫೦ನೇ ಹುಟ್ಟುಹಬ್ಬಕ್ಕಾಗಿ ಶ್ರೀದೇವಿಯ ಬಾಲಿವುಡ್ ಪ್ರಯಾಣ ಕುರಿತಾದ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಡಾಕ್ಯುಮೆಂಟರಿಗಳನ್ನು ಸಿದ್ಧ ಪಡಿಸಿದ್ದೇನೆ ಎಂದರು. ೧೦೦ರ ಸಿನಿಮಾಕ್ಕೆ ಎರಡು ಡಾಕ್ಯುಮೆಂಟರಿ: ಭಾರತೀಯ ಸಿನಿಮಾ ರಂಗ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಎರಡು ಸಂಗೀತ ಡಾಕ್ಯುಮೆಂಟರಿಗಳಾದ ‘ಫಿಲ್ಮ್‌ಮಲಾನಿ’ ಹಾಗೂ ‘ಮಲಾನಿಯೀಸ್ ಚಿತ್ರಹಾರ್’ ೫ ಗಂಟೆಗಳ ಸಂಗೀತ ಕಲೆಕ್ಷನ್‌ಗಳನ್ನು ಸಂದೀಪ್ ಮಲಾನಿ ಹೊರ ತಂದಿದ್ದಾರೆ. ಇದರ ಜತೆಯಲ್ಲಿ ಕೊಂಕಣಿ ಹಾಗೂ ತುಳು ಎರಡು ಭಾಷೆಗಳನ್ನು ಒಂದೇ ಚಿತ್ರದಲ್ಲಿ ಜೋಡಿಸಿಕೊಂಡು ತುಳು ಚಿತ್ರವೊಂದನ್ನು ಮಾಡುತ್ತಿದ್ದಾರೆ. ೨೦೧೪ರ ಕೊನೆ ಭಾಗದಲ್ಲಿ ಈ ಚಿತ್ರವನ್ನು ಕೋಸ್ಟಲ್‌ವುಡ್ ಮಾರುಕಟ್ಟೆಯಲ್ಲಿ ಬಿಡುವ ಕುರಿತು ಮಲಾನಿ ಚಿಂತನೆ ಮಾಡುತ್ತಿದ್ದಾರೆ. ಮಲಾನಿ ದಿಡೀರ್ ಸಿನಿಮಾ ಎಂಟ್ರಿ: ರೋಮನ್ ಕೆಥೋಲಿಕ್ ಕುಟುಂಬದಲ್ಲಿ ೧೯೭೧ರಲ್ಲಿ ಮುಂಬೈನಲ್ಲಿ ಜನಿಸಿದ ಸಂದೀಪ್ ಮಲಾನಿ ಬೆಳದದ್ದು ಮಾತ್ರ ನಮ್ಮ ನಾಡಿನ ಕಡಲ ಕಿನಾರೆ ಮಂಗಳೂರಿನಲ್ಲಿ. ತಂದೆ ಸಿನಿಮಾ ಹಂಚಿಕೆದಾರರಾಗಿದ್ದ ಕಾರಣ ಸದಾ ಮನೆಯಲ್ಲಿ ಸಿನಿಮಾಗಳ ಕುರಿತು ಚರ್ಚೆ ನಡೆಯುತ್ತಿತ್ತು. ಅಂಥಹಾ ಚರ್ಚೆಗಳೇ ಸಂದೀಪ್ ಮಲಾನಿಯನ್ನು ಇಂದು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಮುಟ್ಟಿಸಿ ಮುನ್ನಡೆಸಲು ಕಾರಣವಾಯಿತು. ಬಾಲ್ಯದಿಂದ ಹಿಡಿದು ತರುಣಾವಸ್ತೆ ತಲುಪುವ ತನಕವೂ ಸಂದೀಪ್ ಚಿತ್ರದಲ್ಲಿ ಚಲನಚಿತ್ರಗಳೇ ತುಂಬಿ ತುಳುಕಿದ ಪರಿಣಾಮ ಮುಂದೆಯೂ ಸಿನಿಮಾ ಹುಚ್ಚು ಹಿಡಿದು ನಿರ್ದೇಶಕನಾಗುವ ಹಂತಕ್ಕೆ ಬಂದು ತಲುಪಿತು ! ಓದಿದ್ದು ಒಂದು ಆಗಿದ್ದು ಇನ್ನೊಂದು: ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಪೂರೈಸಿದ ಸಂದೀಪ್ ಪತ್ರಿಕೋದ್ಯಮದತ್ತ ಒಲವು ತೋರಿ ಅಭ್ಯಾಸ ಮಾಡಿದರು. ಮಂಗಳೂರಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದರು. ಹುಡುಗಾಟದಿಂದಲೇ ಪಾಶ್ಚಾತ್ಯ ನೃತ್ಯದಲ್ಲೂ ಸಾಧನೆ ಮಾಡಿದ್ದ ಇವರು ಎರಿಕ್ ತಂಡದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ನಂತರ ಬೆಂಗಳೂರಿಗೆ ಬಂದು ಆಂಗ್ಲ ದೈನಿಕವೊಂದರಲ್ಲಿ ಸ್ವಲ್ಪಕಾಲ ಪತ್ರಕರ್ತರಾದ ಇವರು ಕ್ರಮೇಣ ಕನ್ನಡ ಚಿತ್ರಗಳಿಗೆ ಕತೆ ಬರೆಯಲು ಇಳಿದರು. ಒಂದು ಹಂತದಲ್ಲಿ ಪೂರ್ಣವಾಗಿ ಚಿತ್ರರಂಗದತ್ತ ವಾಲಿದ ಸಂದೀಪ್ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾದರು. ಇದು ಸಂದೀಪ್ ಮಲಾನಿ ಎನ್ನ್ನುವ ಕ್ರಿಯೇಟಿವ್ ನಿರ್ದೇಶಕನ ಬ್ಯಾಕ್ ಗ್ರೌಂಡ್ ಸ್ಟೋರಿ... ............

Saturday, December 28, 2013

ಮದುವೆಯಾಗುತ್ತಿದ್ದೇನೆ ಮರೆಯದೇ ಬನ್ನಿ

ಹೊಸ ವರ್ಷ ಓಡೋಡಿ ಬರುತ್ತಿದೆ. ಗೋಡೆಯಲ್ಲಿ ತೂಗಿಸಿಟ್ಟ ಹಳೆಯ ಕ್ಯಾಲೆಂಡರ್ ವೊಂದು ಕಸದ ಬುಟ್ಟಿ ಸೇರುತ್ತಿದ್ದಂತೆಯೇ ಹೊಸ ಕ್ಯಾಲೆಂಡರ್ ಜನವರಿ ತಿಂಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಟ್ಟಿದೆ. ನನ್ನ ಪಾಲಿಗೆ ಜನವರಿ ಎಂದಾಕ್ಷಣ ಒಂದು ಹೊಸ ಹುರುಪು, ಉಲ್ಲಾಸ ಜತೆಗೆ ಇನ್ನಷ್ಟು ದುಡಿಯಬೇಕು ಎನ್ನುವ ಚಟ ಗೊತ್ತಿಲ್ಲದೇ ನನ್ನೋಳಗೆ ಗಟ್ಟಿಯಾಗುತ್ತದೆ. ಇದು ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಆದರೆ ಈ ವರ್ಷ ಅದರಲ್ಲೂ 2014 ಜನವರಿ 12 ನನ್ನ ಪಾಲಿಗಂತೂ ವಿಶೇಷ ದಿನ. ಕಾರಣ ಇಷ್ಟೇ ಅಂದೇ ನಾನು ಮದುವೆಯಾಗುತ್ತಿದ್ದೇನೆ.
ತುಂಬಾನೇ ಸರಳ ಹಾಗೂ ನನ್ನ ಪತ್ರಿಕೋದ್ಯಮ ವೃತ್ತಿ, ಭಾವನೆ, ಕುಟುಂಬದ ಎಲ್ಲರನ್ನು ಅಪ್ಪಿಕೊಳ್ಳಲು ಮುಂದೆ ಬರುತ್ತಿರುವ ನನ್ನ ಹುಡುಗಿಯ ಕೈ ಹಿಡಿಯುತ್ತಿದ್ದೇನೆ. ಅದರಲ್ಲೂ ನಾನು ಅತೀ ಹೆಚ್ಚುವ ಅಭಿಮಾನದಿಂದ ನೋಡುವ ನನ್ನ ಮಾದರಿ ವ್ಯಕ್ತಿ ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬದ ದಿನವೇ ನನ್ನ ಮದುವೆ ನಡೆಯುತ್ತಿದೆ. ನಾನಾ ಊರುಗಳಲ್ಲಿ ತುಂಬಿರುವ ನನ್ನ ಪ್ರೀತಿಯ ಗೆಳೆಯರಿಗೆ ಮದುವೆಯ ಆಮಂತ್ರಣವನ್ನು ನೀಡಬೇಕು ಎನ್ನೋದು ನನ್ನ ಹೆಬ್ಬಯಕೆಯಾಗಿತ್ತು. ಆದರೆ ಮದುವೆ, ವೃತ್ತಿ ಕೆಲಸದ ಒತ್ತಡ ಜತೆಗೆ ಸಮಯದ ಅಭಾವ ನನ್ನನ್ನು ಬಹಳವಾಗಿ ಕಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಯಾಕೋ ಏನೋ ಜನವರಿ 11ರೊಳಗೆ ನಿಮ್ಮ ಬಳಿಗೆ ನನ್ನ ಮದುವೆ ಆಮಂತ್ರಣ ಪತ್ರ ತಲುಪದೇ ಇರಬಹುದು. ಆದರೆ ಇದೇ ಕಾರಣ ಇಟ್ಟುಕೊಂಡು ನಾನು ಆಮಂತ್ರಣ ಪತ್ರ ನೀಡಿಲ್ಲ ಎಂದು ಬೇಸರಿಸಬೇಡಿ. ತುಂಬಾ ಹತ್ತಿರ ಇದ್ದ ಹುಡುಗ ಮದುವೆಗೇ ಹೇಳಿಯೇ ಇಲ್ಲ ಮಾರಾಯ್ರೆ ಎನ್ನಬೇಡಿ. ನನ್ನ ಹಾಗೂ ನನ್ನ ಪ್ರೀತಿಯ ಹುಡುಗಿಯ ಬದುಕಿನಲ್ಲಿ ಇದೊಂದು ದೊಡ್ಡ ಸಂಭ್ರಮ. ಮದುವೆಗೆ ಹೇಳದೇ ಮರೆತು ಹೋಗಿರುವ ಗೆಳೆಯರಿಗೆ ಹಾಗೂ ಹೇಳಿಕೂಡ ಮರೆದು ಬಿಡುವ ಗೆಳೆಯರಿಗೆ ಇದೇ ಮದುವೆಯ ಆಮಂತ್ರಣ ಪತ್ರ ಎಂದು ತಿಳಿದುಕೊಂಡು ನಮ್ಮಿಬ್ಬರನ್ನು ಪ್ರೀತಿಯಿಂದ ಹರಸಲು ಬನ್ನಿ...
ಅಂದಹಾಗೆ ಜನವರಿ ತಿಂಗಳ ಮೊದಲ ಎರಡು ವಾರ ನನ್ನ ಬದುಕಿನಲ್ಲಿ ಸಂಭ್ರಮದ ಕ್ಷಣಗಳಿಂದಲೇ ತುಂಬಿದೆ. ಜನವರಿ 5ರಂದು ನನ್ನ ಹಾಗೂ ನನ್ನ ಹುಡುಗಿಯ ನಿಶ್ಚಿತಾರ್ಥ, ಜನವರಿ 10ರಂದು ರೋಸ್ ಅರ್ಥಾತ್ ಮದರಂಗಿ ಕಾರ್ಯಕ್ರಮ ಹಾಗೂ ಜನವರಿ 12ರಂದು ಮದುವೆಯ ಸುವರ್ಣ ಕ್ಷಣ. ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವು ಬರಬೇಕು. ಅದರಲ್ಲೂ ಮೂರರಲ್ಲಿ ಒಂದು ಕಾರ್ಯಕ್ರಮದಲ್ಲಾದರೂ ಭಾಗವಹಿಸಲೇ ಬೇಕು ಎನ್ನುವುದು ನನ್ನ ವಿನಂತಿ. ಪ್ರೀತಿ ಇಟ್ಟುಕೊಂಡು ಮದುವೆಗೆ ಬನ್ನಿ... ನಿಮ್ಮ ಮನೆಯ ಹುಡುಗ ಸ್ಟೀವನ್ ರೇಗೊ, ದಾರಂದಕುಕ್ಕು

Monday, December 16, 2013

ಕರಾವಳಿಯಲ್ಲಿ ಕ್ರಿಸ್ ಮಸ್ ‘ಕುಸ್ವಾರ್’

* ಸ್ಟೀವನ್ ರೇಗೊ, ದಾರಂದಕುಕ್ಕು
ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಕ್ರಿಸ್‌ಮಸ್ ಹಬ್ಬ್ಬದ ಸಡಗರ ಗಟ್ಟಿಯಾಗುತ್ತದೆ. ಗಡಗಡ ನಡುಗಿಸುವ ಚಳಿಯೊಂದಿಗೇ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಹಬ್ಬಕ್ಕೆ ಕೆಲ ದಿನಗಳ ಮುನ್ನವೇ ಅಲ್ಲಲ್ಲಿ ಶುರುವಾಗುವ ಕೇಕ್ ಮಿಕ್ಸಿಂಗ್‌ನ ಮೋಜೂ ಹಬ್ಬಕ್ಕೆ ಮುನ್ನುಡಿಯಾಗುತ್ತದೆ. ಈಗಾಗಲೇ ಎಲ್ಲೆಲ್ಲೂ ಸಾಂತಾಕ್ಲಾಸ್ ವೇಷಧಾರಿಗಳ ಸಿದ್ಧತೆಯೂ ಭರದಿಂದಲೇ ನಡೆದಿದೆ. ಕ್ರಿಸ್‌ಮಸ್ ಟ್ರೀ ಜತೆಗೆ ನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಮಾರಾಟ, ದೇವಲೋಕದ ಸೃಷ್ಟಿಗೆ ಬೇಕಿರುವ ನಕ್ಷತ್ರಗಳ ಮಾರಾಟದ ಭರಾಟೆ ಕೂಡ ಜೋರು. ದೇವಕನ್ಯೆಯರು, ಮಾತೆ ಮೇರಿ, ಬಾಲ ಏಸು ಇಲ್ಲದೇ ಹಬ್ಬ ಪೂರ್ಣಗೊಳ್ಳುವುದೇ ಇಲ್ಲ... ಈ ಕೊರತೆ ನೀಗಿಸಲೆಂದೇ ಪ್ರತಿ ಮನೆಯಲ್ಲೂ ಗೋದಲಿಗಳ ಸೃಷ್ಟಿಯಾಗುತ್ತದೆ. ಆದರೆ ಕರಾವಳಿಯಲ್ಲಿ ಮಾತ್ರ ಇವೆಲ್ಲಕ್ಕಿಂತ ಕೊಂಚ ಭಿನ್ನವಾದ ಕ್ರಿಸ್‌ಮಸ್ ಆಚರಣೆ ನಡೆಯುತ್ತದೆ. ಕರಾವಳಿಯಲ್ಲಿ ಕ್ರಿಸ್‌ಮಸ್ ಎಂದಾಕ್ಷಣ ಕುಸ್ವಾರ್(ತಿಂಡಿ ತಿನಸು)ಗಳ ಮಾತು ಬರುತ್ತದೆ. ಇಲ್ಲಿ ಕೇಕ್‌ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ ಕುಸ್ವಾ ರ್‌ಗಳಿಗಂತೂ ಬೇಡಿಕೆ ಇದ್ದೇ ಇದೆ. ಕರಾವಳಿಯ ಪಕ್ಕಾ ಕಥೋಲಿಕ್ ಬಂಧುಗಳು ಕುಸ್ವಾ ರ್ ಇಲ್ಲದೇ ಕ್ರಿಸ್ ಮಸ್ ಹಬ್ಬವನ್ನು ಸರಿಯಾಗಿ ಆಚರಣೆಯೇ ಮಾಡೋದಿಲ್ಲ. ಇಂತಹ ವಿಶಿಷ್ಟ ಬೆಳವಣಿಗೆ ದೇಶ- ವಿದೇಶದ ಯಾವುದೇ ಮೂಲೆಯಲ್ಲೂ ಕಾಣ ಸಿಗೋದಿಲ್ಲ. ಕುಟುಂಬದ ಸದಸ್ಯರು ಜತೆಗೂಡಿಕೊಂಡು ಗುಳಿಯೊ, ಕಿಡಿಯೊ, ಕುಲ್‌ಕುಲ್, ಗಜ್ಜೆಯಿ, ಅಕ್ಕಿ ಲಾಡು, ತುಕ್‌ಡಿ, ಚಕ್ಕುಲಿ, ಖಾರಕಡ್ಡಿ ಹೀಗೆ ಹತ್ತಾರು ಐಟಂಗಳು ಕರಾವಳಿಯ ಕ್ರಿಸ್‌ಮಸ್ ಕುಸ್ವಾರ್ ಪಟ್ಟಿಯಲ್ಲಿ ಜಾಗ ಪಡೆದುಕೊಳ್ಳುತ್ತದೆ. ಆಧುನಿಕ ಬದುಕಿನ ಒದ್ದಾಟದಲ್ಲಿ ಕುಸ್ವಾರ್ ಕಳೆಗುಂದಿದೆ: ಕ್ಯಾಲೆಂಡರ್ ಪುಟದಲ್ಲಿ ನವೆಂಬರ್ ತಿಂಗಳು ಕಳೆದು ಡಿಸೆಂಬರ್ ಬಂದಾಕ್ಷಣ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಾ ಬರುತ್ತದೆ. ಮುಖ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಕುಸ್ವಾರ್ ಗಳ ಕಚ್ಚಾ ಸಾಮಗ್ರಿಗಳು ಬಂದು ಮನೆಯ ಮೂಲೆಯಲ್ಲಿ ಬಿದ್ದು ಬಿಡುತ್ತದೆ. ನಂತರ ಡಿಸೆಂಬರ್ ೨೦ ದಾಟುತ್ತಿದ್ದಂತೆ ಕುಸ್ವಾರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುತ್ತಾರೆ. ಆಧುನಿಕ ಕಾಲದಲ್ಲಿ ಕೆಲಸದ ಒತ್ತಡ ಹಾಗೂ ಸಮಯದ ಅಭಾವಗಳು ಎರಡು ಕೂಡ ಕಾಡುತ್ತಿರುವುದರಿಂದ ಇಂತಹ ಕುಸ್ವಾರ್ ತಿಂಡಿಗಳನ್ನು ಮನೆಯ ಸದಸ್ಯರು ಕೂಡಿಕೊಂಡು ಮಾಡುವುದಕ್ಕಿಂತ ಹೆಚ್ಚಾಗಿ ಬೇಕರಿಗಳಿಗೆ ಮೊರೆ ಹೋಗುತ್ತಾರೆ. ಕರಾವಳಿಯ ಖ್ಯಾತ ಬೇಕರಿಗಳು ಈ ತಿಂಡಿ ತಿನಸುಗಳನ್ನು ಮಾರಾಟ ಮಾಡುತ್ತಾ ಬರುತ್ತಿದೆ.
ಕುಸ್ವಾರ್ ಮೂಲತಃ ಗೋವಾ ರಾಜ್ಯದಿಂದ ಬಂದ ಪದ್ದತಿಗಳಲ್ಲಿ ಒಂದು ಎನ್ನುವುದು ಕರಾವಳಿಯ ಬಹುತೇಕ ಕಥೋಲಿಕ್ ಬಂಧುಗಳು ನಂಬಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗೋವಾದಿಂದ ಕರಾವಳಿ ಕಡೆಗೆ ಹರಿದು ಬಂದ ಕ್ರೈಸ್ತರು ಅಲ್ಲಿಂದ ಕೆಲವೊಂದು ಸಂಪ್ರದಾಯ, ಆಚರಣೆ, ಆಹಾರ ಪದ್ಧತಿಗಳನ್ನು ತಂದರು ಎನ್ನುತ್ತಾರೆ ಕೊಂಕಣಿ ಪ್ರಚಾರ ಸಂಚಾಲನ ಸಮಿತಿಯ ಕಾರ್‍ಯದರ್ಶಿ ವಿತೋರಿ ಕಾರ್ಕಳ ಅವರು. ಕುಸ್ವಾ ರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುವ ಮೂಲಕ ಕುಟುಂಬದ ಸದಸ್ಯರ ಏಕತೆಯ ಸಂಕೇತ ಇಮ್ಮಡಿಗೊಳ್ಳುತ್ತದೆ. ಮನೆಮಂದಿಯೆಲ್ಲಾ ತಯಾರಿಸಿದ ’ಕುಸ್ವಾರ್’ ಕ್ರಿಸ್‌ಮಸ್‌ನ ಪ್ರೀತಿಯ ಸಂಕೇತವಾಗಿ ನೆರೆಮನೆಯ ಬಾಂಧವರಿಗೆ, ಜಾತಿ ಮತ ಭೇದವಿಲ್ಲದೆ ವಿತರಿಸುತ್ತಾರೆ. ಈ ಸಂಪ್ರದಾಯ ಇಂದಿಗೂ ಕ್ರೈಸ್ತಬಾಂದವರಲ್ಲಿ ಚಾಲ್ತಿಯಲ್ಲಿದೆ ಎನ್ನೋದು ಕ್ರಿಸ್ ಮಸ್ ಸಮಯದಲ್ಲಿ ಖುಷಿ ಕೊಡುವ ವಿಷ್ಯಾ.

Tuesday, December 10, 2013

ತುಳು ನಾಟಕಕ್ಕೆ ಬಂತು ಸಿನಿಮಾದ ಮೆರಗು

ಸ್ಟೀವನ್ ರೇಗೊ, ದಾರಂದಕುಕ್ಕು
ಕರಾವಳಿಯ ಕೋಸ್ಟಲ್‌ವುಡ್ ಮತ್ತೇ ಚಿಗುರಿಕೊಂಡಿದೆ. ಈ ವರ್ಷ ಒಂದೆರಡು ಸಿನಿಮಾಗಳು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟರೆ ಉಳಿದಂತೆ ೪೦ಕ್ಕೂ ಅಧಿಕ ಸಿನಿಮಾಗಳು ಸಿನಿಮಾ ಲ್ಯಾಂಡ್ ನೋಂದಣಿ ಪಡೆದುಕೊಂಡು ಚಿತ್ರೀಕರಣಕ್ಕೆ ದಿನ ನಿಗದಿ ಮಾಡಿಕೊಳ್ಳುತ್ತಿದೆ. ಕೋಸ್ಟಲ್‌ವುಡ್ ನ ಇತಿಹಾಸದಲ್ಲಿಯೇ ಇದೊಂದು ಭರ್ಜರಿಯಾದ ಫಸಲು ಎನ್ನುವ ವಿಚಾರದಲ್ಲಿ ಯಾವುದೇ ಗೊಂದಲ ಉಳಿಯುವುದಿಲ್ಲ. ಕೋಸ್ಟಲ್ ವುಡ್‌ನಲ್ಲಿ ಹೊಸ ನಾಯಕರು, ಹೊಸ ನಾಯಕಿಯರು, ಹೊಸ ನಿರ್ದೇಶಕರ ಜತೆಗೆ ಹೊಸ ನಿರ್ಮಾಪಕರು ತಮ್ಮ ಅದೃಷ್ಟ ಪರೀಕ್ಷೆಯಾಟದಲ್ಲಿ ಗೆಲ್ಲುತ್ತಾರಾ ಎನ್ನುವ ಪ್ರಶ್ನೆಯೊಂದು ಎದುರುಗೊಂಡಿದೆ. ಈಗ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಿನಿಮಾಗಳಿಗೆ ಏನೂ ಬರವಿಲ್ಲ. ಆದರೆ ಈಗ ನಿಜಕ್ಕೂ ಇರೋದು ಚಿತ್ರಕತೆಯ ವಿಚಾರದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಲಕ್ಷಣಗಳು ಕಾಣಿಸಿಕೊಂಡಿದೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಪುಟ್ಟ ಕತೆಯನ್ನು ಇಟ್ಟುಕೊಂಡು ಅದನ್ನು ಚಿತ್ರಕ್ಕೆ ಬೇಕಾದಂತೆ ಪೋಣಿಸಿಕೊಂಡು ಚಿತ್ರ ಮಾಡುವ ಕಾಲವೊಂದು ಗಟ್ಟಿಯಾಗಿತ್ತು. ಈಗ ತುಳು ಸಿನಿಮಾದಲ್ಲಿ ನಾಟಕದ ಕತೆಗಳೇ ಮೂಲ ಬಂಡವಾಳ ಅದರ ಜತೆಗೆ ಚಿತ್ರಕ್ಕೆ ಬೇಕಾದ ಸಾಮಗ್ರಿಗಳನ್ನು ಒಟ್ಟು ಸೇರಿಸುವ ಪರಂಪರೆ ಹುಟ್ಟಿಕೊಂಡಿದೆ. ತುಳು ರಂಗಭೂಮಿಯಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡ ನಾಟಕಗಳು ಸಿನಿಮಾಗಳಾಗಿ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಒಂದಲ್ಲ ಎರಡಲ್ಲ ಬರೋಬರಿ ೨೫ ವರ್ಷಕ್ಕಿಂತ ಹಳೆಯ ನಾಟಕವೊಂದು ಸಿನಿಮಾಕ್ಕೆ ಅಣಿಯಾಗುವ ಯೋಜನೆಯೊಂದು ರೂಪುಗೊಂಡಿದೆ. ಕರಾವಳಿಯ ಹಿರಿಯ ನಾಟಕ ತಂಡ: ಕರಾವಳಿಯಲ್ಲಿ ೧೯೭೪ರಲ್ಲಿ ನಾಟಕಗಳನ್ನು ಕಮರ್ಷಿಯಲ್ ಆಂಗಲ್‌ಗೆ ತಂದುಕೊಟ್ಟ ಹಿರಿಯ ನಾಟಕ ತಂಡ ಎ. ಗಂಗಾಧರ್ ನೇತೃತ್ವದ ಚಿತ್ರಕಲಾ ಆರ್ಟ್ಸ್, ಮಂಗಳೂರು ತನ್ನ ಬೇಡಿಕೆಯ ನಾಟಕವಾದ ‘ಒರಿಯನ್ ತೂಂಡ ಒರಿಗಾಪುಜಿ’ಯನ್ನು ಬೆಳ್ಳಿ ತೆರೆಗೆ ಇಳಿಸುತ್ತಿದ್ದಾರೆ. ೮೦ ಹಾಗೂ ೯೦ರ ದಶಕದಲ್ಲಿ ನೂರಾರು ಪ್ರದರ್ಶನಗಳನ್ನು ಕಾಣುತ್ತಾ ಕರಾವಳಿಯ ರಂಗಭೂಮಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ನಾಟಕದಿಂದಾಗಿ ಕರಾವಳಿಯ ಖ್ಯಾತ ಕಲಾವಿದರಾದ ಮಾಧವ ಶಕ್ತಿ ನಗರ, ರೋಹಿದಾಸ್ ಕದ್ರಿ, ಸರೋಜಿನಿ ಶೆಟ್ಟಿ, ನವೀನ್ ಡಿ ಪಡೀಲ್ ಎನ್ನುವ ಅಪ್ಪಟ ಕಲಾವಿದರನ್ನು ಕರಾವಳಿ ರಂಗಭೂಮಿಗೆ ನೀಡಿತ್ತು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಸೇರಿದಂತೆ ಕನ್ನಡದ ಪ್ರಜ್ಯು ಪೂವಯ್ಯ,ರೇಖಾದಾಸ್, ಭವ್ಯಾ ಕರಾವಳಿಯ ರಂಗಭೂಮಿ ಕಲಾವಿದರಾದ ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಗಂಗಾಧರ್ ಶೆಟ್ಟಿ, ಸಾಯಿ ಕೃಷ್ಣ ಇದ್ದಾರೆ. ಸಂಗೀತದಲ್ಲಿ ವಿ. ಮನೋಹರ್, ಕ್ಯಾಮೆರಾದಲ್ಲಿ ನಾಗೇಶ್ ಆಚಾರ್ಯ ಉಡುಪಿ, ಸಹ ನಿರ್ದೇಶಕರಾಗಿ ರಾಮದಾಸ್ ಸಸಿಹಿತ್ಲು, ರಂಜೀತ್ ಸುವರ್ಣ ಇದ್ದಾರೆ. ನಿರ್ಮಾಪಕರಾಗಿ ಬಿ. ಅಶೋಕ್ ಕುಮಾರ್ ಹಾಗೂ ಎ. ಗಂಗಾಧರ್ ಶೆಟ್ಟಿ ವಹಿಸಿದ್ದಾರೆ. ಕನ್ನಡದ ನಿರ್ದೇಶಕ ಹ.ಸೂ.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಮುಹೂರ್ತ: ಡಿ.೧೧ರಂದು ಮಂಗಳೂರಿನ ಶ್ರೀಮಂಗಳಾದೇವಿಯಲ್ಲಿ ಬೆಳಗ್ಗೆ ೧೦ಕ್ಕೆ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗ್ಡೆ, ಆನಂದ್ ಕೆ, ಬಂಟರ ಯಾನೆ ನಾಡವರ ಮಾತೃ ಸಂಘದ ಅಜಿತ್ ಕುಮಾರ್ ಮಾಲಾಡಿ, ಡಾ. ಶಿವಶರಣ್ ಶೆಟ್ಟಿ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿರುವರು. (vijyakarnataka daily published dis news on: 12.12.2013)

ತುಳು ಚಿತ್ರದಲ್ಲಿ ಸುಂದರನಾಥ್ ಕುಸುರಿ

ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದ ‘ಬಂಗಾರ ಪಟ್ಲೇರ್’ ಚಿತ್ರದ ಸುಂದರ ಕ್ಯಾಮೆರಾ ವರ್ಕ್ ಕುಸುರಿ ಕೆಲಸದಲ್ಲಿ ಸಂದರನಾಥ್ ಸುವರ್ಣ ಅವರ ಕೈಚಳಕವಿತ್ತು ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೋ. ೧೯೯೩ರಲ್ಲಿ ೧೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಂಗಾರ ಪಟ್ಲೇರ್ ಸಿನಿಮಾದ ಪ್ರತಿಯೊಂದು ದೃಶ್ಯಗಳಲ್ಲೂ ಸುವರ್ಣ ಕೈಚಳಕವಿದೆ. ಮುಖ್ಯವಾಗಿ ತುಳು ಸಂಸ್ಕೃತಿಯನ್ನು ಚಿತ್ರದಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದರು ಸುವರ್ಣ. ಮಂಗಳೂರಿನ ಖ್ಯಾತ ಸಾಹಿತಿ ನಾರಾಯಣ ಶೆಟ್ಟಿ ಅವರ ‘ಸತ್ಯ ಬತ್ತಲೆ’ ಎನ್ನುವ ನಾಟಕ ಆಧರಿಸಿ ಕಟ್ಟಿದ ಸಿನಿಮಾದ ಪ್ರಧಾನ ಆಧಾರ ಸ್ತಂಭವೇ ಸುವರ್ಣರು. ಯಾಕೆಂದರೆ ಆ ತಂಡದಲ್ಲಿ ಹೆಸರು ಸಂಪಾದಿಸಿದ ಸಾಧಕ ಅವರೊಬ್ಬರೇ. ಸಂಭಾಷಣೆಯಲ್ಲಿ ದುಡಿದ ರಾಮಣ್ಣ ರೈ, ಹಿನ್ನೆಲೆ ಸಂಗೀತ ನೀಡಿದ ಚರಣ್‌ಕುಮಾರ್, ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ ರಿಚರ್ಡ್ ಕ್ಯಾಸ್ಟಲಿನೋ ಎಲ್ಲರಿಗೂ ಸುವರ್ಣ ಪ್ರೋತ್ಸಾಹದ ಚಿಲುಮೆಯಾಗಿದ್ದರು ಎನ್ನುತ್ತಾರೆ ‘ಬಂಗಾರ್ ಪಟ್ಲೇರ್’ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷಣ. ‘ಬಂಗಾರ್ ಪಟ್ಲೇರ್’ ಚಿತ್ರದ ದೃಶ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ೧೯೯೨-೯೩ರ ಸಾಲಿನಲ್ಲಿ ರಾಜ್ಯ ಸರಕಾರದಿಂದ ವಿಶೇಷ ಪ್ರಾಂತೀಯ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾದ ನಂತರ ಬಂಗಾರ್ ಪಟ್ಲೇರ್ ಚಿತ್ರವನ್ನು ಕೋಲ್ಕೊತ್ತಾದಲ್ಲಿ ಈ ಸಮಯದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಮಾರ್ಕೆಟಿಂಗ್ ವಿಭಾಗದಲ್ಲಿ ಆಯ್ಕೆಯಾದಾಗ ಚಿತ್ರವನ್ನು ಅದರ ದೃಶ್ಯ, ಕತೆ ಹಾಗೂ ಸಂಗೀತವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರಶಸ್ತಿ ನೀಡುವ ಜ್ಯೂರಿ ಸ್ಥಳೀಯ ವಸ್ತು ಗಳನ್ನು ಹೇಗೆ ಬಳಸಿ ಕೊಂಡು ಚಿತ್ರ ಮಾಡ ಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುವ ಮಾತನ್ನು ಆಡಿತ್ತು ಎನ್ನುತ್ತಾರೆ ಕ್ಯಾಸ್ಟಲಿನೋ. ‘ಬಂಗಾರ್ ಪಟ್ಲೇರ್’ ಚಿತ್ರ ಕೋಸ್ಟಲ್‌ವುಡ್‌ನಲ್ಲಿ ಹಿಟ್ ಆದ ಕೂಡಲೇ ರಿಚರ್ಡ್ ಹಾಗೂ ಸುಂದರನಾಥ್ ಸುವರ್ಣ ಮತ್ತೆ ಜತೆಗೂಡಿದರು. ೧೯೯೩ರ ಸೆ.೮ರಂದು ಒಂದೇ ದಿನ ಇಪ್ಪತ್ತಮೂರುವರೆ ಗಂಟೆ ಅವಧಿಯಲ್ಲಿ ಚಿತ್ರೀಕರಣ ಮಾಡುವ ಯೋಜನೆಯ ಹಿಂದೆ ಇದ್ದವರು ಸುಂದರ್‌ನಾಥ್ ಸುವರ್ಣ. ಚಿತ್ರದ ಕತೆಯನ್ನು ರಿಚರ್ಡ್ ಸುವರ್ಣರಿಗೆ ಹೇಳುವಾಗ ಅವರು ಒಂದೇ ದಿನದಲ್ಲಿ ಶೂಟಿಂಗ್ ಮಾಡಿ ಮುಗಿಸೋಣ ಎನ್ನುವ ಒಂದು ಐಡಿಯಾ ಕೊಟ್ಟಿದ್ದರು. ರಿಚರ್ಡ್ ಕೂಡ ಆರಂಭದಲ್ಲಿ ಹಿಂದೆ ಮುಂದೆ ಅಲೋ ಚನೆ ಮಾಡಿದರು. ಆದರೆ ಸುಂದರ್‌ನಾಥ್ ಸುವರ್ಣ ನಾನಿದ್ದೇನೆ ಎಲ್ಲವನ್ನು ಮಾಡಿ ಮುಗಿಸಬಹುದು. ತುಳು ಚಿತ್ರದಲ್ಲಿ ಇದೊಂದು ಹೊಸ ದಾಖಲೆಯಾಗುತ್ತದೆ. ಚಿತ್ರ ಆರಂಭಕ್ಕೆ ಮೊದಲು ಸುವರ್ಣ ಅವರು ಚಿತ್ರದ ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇಡೀ ಚಿತ್ರದ ಫ್ರೇಮ್ ಟು ಫ್ರೇಮ್‌ನಲ್ಲಿ ಸುವರ್ಣ ಅವರ ಕೆಲಸ ಕಾಣುತ್ತದೆ. ಅದಕ್ಕೂ ಮಿಗಿಲಾಗಿ ಹಿರಿಯ ಸಾಹಿತಿ ಶಿವರಾಮ ಕಾರಂತ ಅವರನ್ನು ಸೆಪ್ಟೆಂಬರ್ ೮ರಲ್ಲಿ ಟೇಕ್ ಮೇಲೆ ಟೇಕ್ ತೆಗೆದುಕೊಂಡು ಕಾರಂತರನ್ನು ಇಳಿ ವಯಸ್ಸಿನಲ್ಲಿ ದುಪ್ಪಟ್ಟು ಕೆಲಸ ಮಾಡುವಂತೆ ಮಾಡಿದ್ದರು ಎನ್ನುತ್ತಾರೆ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು. ತುಳು ರಂಗಭೂಮಿಯಲ್ಲಿ ಇರುವ ಮಂದಿಯನ್ನು ಹುಡುಕಿಕೊಂಡು ಅವಕಾಶ ನೀಡುತ್ತಿದ್ದರು. ಅದರಲ್ಲೂ ಆರಂಭ, ನೀ ನಮ್ಮ ದೈವ,ಟೈಗರ್ ಗಂಡು, ಕಿಲಾಡಿ ತಾತ ಚಿತ್ರ ಸೇರಿದಂತೆ ಅವರು ನಿರ್ದೇಶನ ಮಾಡಿದ ಚಿತ್ರಗಳಲ್ಲಿ ತುಳುವರಿಗೆ ಅವಕಾಶ ಕೊಡುತ್ತಾ ಬಂದಿದ್ದರು. ವಿಟ್ಲ ಮನೋಹರ್ ಅವರನ್ನು ತಮ್ಮ ಎಲ್ಲ ಚಿತ್ರದ ಸಂಗೀತದಲ್ಲಿ ಬಳಸಿಕೊಂಡು ಕನ್ನಡದ ನಟ ಕಾಶೀನಾಥ್‌ರಿಗೆ ಪರಿಚಯ ಮಾಡಿಕೊಟ್ಟು ‘ಅನುಭವ’ದಲ್ಲಿ ಕೆಲಸ ಸಿಗುವಂತೆ ನೋಡಿಕೊಂಡರು. ತಮ್ಮ ಇಬ್ಬರು ಸಹೋದರಾದ ನವೀನ್, ಪ್ರದೀಪ್ ಇಬ್ಬರನ್ನು ತಮ್ಮ ಜತೆಯಲ್ಲಿಯೇ ಕ್ಯಾಮೆರಾ ಕೆಲಸ ಕಲಿಸಿ ಕನ್ನಡ ಸಿನಿಮಾದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದಾರೆ ಎನ್ನುತ್ತಾರೆ ಅವರ ಜತೆಯಲ್ಲಿ ಐದಾರು ಚಿತ್ರದಲ್ಲಿ ದುಡಿದ ತಮ್ಮ ಲಕ್ಷ್ಮಣ ಅವರು. .... ‘ನನಗೆ ಆರೋಗ್ಯ ಹದಗೆಟ್ಟಿದೆ ಎನ್ನುವ ವಿಚಾರ ತಿಳಿದ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ನನ್ನನ್ನು ನೋಡಲು ಬಂದಿದ್ದರು. ಕೈಯಲ್ಲಿ ಒಂದೆರಡು ಚಿತ್ರಗಳಿವೆ ಅದನ್ನು ಅದಷ್ಟೂ ಬೇಗ ಮುಗಿಸಿದ ನಂತರ ತುಳುವಿನಲ್ಲೊಂದು ಸಿನಿಮಾ ಮಾಡಬೇಕು ಎನ್ನುವ ಕನಸ್ಸು ಕಂಡಿದ್ದರು. ೧೯೯೩ರ ಬಂಗಾರ್ ಪಟ್ಲೇರ್ ಹಾಗೂ ಸೆಪ್ಟೆಂಬರ್ ೮ ನನ್ನೆರಡು ತುಳು ಚಿತ್ರ ಬಿಟ್ಟರೆ ಉಳಿದ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಇನ್ನೂ ತುಳು ಚಿತ್ರಕ್ಕೆ ನಾನೇ ಬರುತ್ತೇನೆ ಎನ್ನುತ್ತಿದ್ದರು. ರಿಚರ್ಡ್ ಕ್ಯಾಸ್ಟಲಿನೋ, ಚಿತ್ರ ನಿರ್ದೇಶಕ (vijaykarnataka daily published on 11.12.2014)

ಇದು ಹೊಸ ಬ್ಯುಸಿನೆಸ್: ಬಾಡಿಗೆಗೆ ಇದೆ ಎಲೆಕ್ಟ್ರಾನಿಕ್ ಗೂಡ್ಸ್

ಸ್ಟೀವನ್ ರೇಗೊ, ದಾರಂದಕುಕ್ಕು
ರಾಜ್ಯದ ನಗರಗಳು ಸಖತ್ ಆಗಿ ಬೆಳೆಯುತ್ತಿದೆ. ಇಂತಹ ಬೆಳೆಯುವ ನಗರದಲ್ಲಿ ಒಂದು ಸೆಂಟ್ಸ್ ಜಾಗಕ್ಕೂ ಲಕ್ಷದ ಲೆಕ್ಕಚಾರ. ಶ್ರೀಸಾಮಾನ್ಯನಿಗೆ ಕಾಸು ಕೂಡಿಟ್ಟುಕೊಂಡು ಮನೆ ಕಟ್ಟುವ ಅಲೋಚನೆಯಂತೂ ಬಂದು ಬಿಟ್ಟರೆ ದಿನದ ಜಮೀನು ರೇಟು ಷೇರು ಪೇಟೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಲಗ್ಗೆ ಹಾಕುತ್ತಾ ಓಡುತ್ತಿರುತ್ತದೆ. ಇದಕ್ಕಿಂತ ಬಾಡಿಗೆ ಮನೆಯೇ ಲೇಸು ಎನ್ನುವ ಸ್ಥಿತಿಗೆ ಶ್ರೀಸಾಮಾನ್ಯ ತಲುಪಿ ಬಿಡುತ್ತಾನೆ. ಆದರೂ ಇಲ್ಲೊಂದು ಎಡವಟ್ಟು ಬಾಡಿಗೆ ಮನೆ ಎಂದರೆ ಬರೀ ಒಂದು ವರ್ಷದ ಒಪ್ಪಂದ. ಜಾಸ್ತಿ ಸಮಯ ಬಾಡಿಗೆ ಮನೆಯಲ್ಲಿ ಉಳಿಯುವ ಖಯಾಲಿಗೆ ಬಾಡಿಗೆ ಮನೆಯ ಮಾಲೀಕನೇ ಬ್ರೇಕ್ ಹಾಕಿ ಬಿಡುತ್ತಾನೆ. ಒಂದು ವರ್ಷದ ಅವಧಿಯಲ್ಲಿ ಅವನು ಬಾಡಿಗೆ ಮನೆಗೆ ತರುವ ಮಂಚ, ಫ್ರಿಡ್ಜ್, ಟಿವಿ, ಎಸಿ, ಹೀಟರ್, ಗ್ಯಾಸ್ ಕನೆಕ್ಷನ್ ಹೀಗೆ ಹತ್ತಾರು ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಮುಟ್ಟಿಸಲು ಸಾವಿರಾರು ಖರ್ಚು ಮಾಡುತ್ತಾನೆ. ಇದರ ಜತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳು ತುಂಬಾ ಜೋಪಾನ ಅಂತೂ ಇಂತೂ ಬಾಡಿಗೆ ಮನೆ ಮುಟ್ಟಿದಾಗ ಕೆಟ್ಟು ಹೋದರೆ ಮತ್ತೆ ಖರ್ಚು. ಹೀಗೆ ಹತ್ತಾರು ಇಂತಹ ಜಂಜಾಟದಲ್ಲಿ ಬಾಡಿಗೆ ಮನೆಯಲ್ಲಿ ಬದುಕು ಕಟ್ಟುವ ಲಕ್ಷಾಂತರ ಮಂದಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನಪ್ಪಾ ಅಂದರೆ ಬಾಡಿಗೆಗೆ ಸಿಗುತ್ತೆ ಎಲೆಕ್ಟ್ರಾನಿಕ್ ಗೂಡ್ಸ್. ಇದು ರಾಜ್ಯದ ಮಟ್ಟಿಗೆ ಹೊಸ ಬ್ಯುಸಿನೆಸ್. ಆದರೆ ದೇಶದ ಕೆಲವೊಂದು ನಗರದಲ್ಲಿ ಇದು ಚಾಲ್ತಿಗೆ ಬಂದು ವರ್ಷಗಳೇ ಸಂದಿದೆ. ಮೆಟ್ರೋ ನಗರದಲ್ಲಿ ಬದುಕು ಕಟ್ಟುವ ಮಂದಿಗಂತೂ ಈ ವ್ಯಾಪಾರದ ಗುಟ್ಟು ಗೊತ್ತೇ ಇದೆ. ಇದರಲ್ಲಿಯೇ ಬದುಕು ಕಟ್ಟುತ್ತಾ ಸಮಾಜದ ಚೌಕಟ್ಟಿನಲ್ಲಿ ತಾವು ಕೂಡ ಶ್ರೀಮಂತರು ಎನ್ನುವ ಮುದ್ರೆ ಬೀಳುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಹೊಸದಾಗಿ ನೀವು ಮದುವೆಯಾಗುತ್ತೀರಿ ಅಥವಾ ನಿಮ್ಮ ಉದ್ಯೋಗದಿಂದ ಬರುವ ವರಮಾನ ಕೂಡ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುವುದು ತೀರಾ ಕಷ್ಟ. ಆದರೂ ಇಂತಹ ಸಾಮಗ್ರಿಗಳು ಮನೆಗೆ ತೀರಾನೇ ಅವಶ್ಯಕ ಎನ್ನಿಸಿಬಿಡುತ್ತದೆ. ಇಂತಹ ಸಮಯದಲ್ಲಿ ಮುಂದೆ ಬರುವವರೇ ಈ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕರು. ಎಲೆಕ್ಟ್ರಾನಿಕ್ ಗೂಡ್ಸ್ ವ್ಯಾಪಾರ ಹೇಗೆ: ನಗರ ಪ್ರದೇಶಕ್ಕೆ ನೆಲೆ ನಿಲ್ಲಲು ಬರುವ ಸತಿಪತಿಗಳಿಗೆ ಮುಖ್ಯವಾಗಿ ಬೇಕಾಗಿರುವುದು ಮಲಗಲು ಮಂಚ, ಆಹಾರ ಪದಾರ್ಥಗಳನ್ನು ಜೋಪಾನವಾಗಿಡಲು ಫ್ರಿಡ್ಜ್(ಶೀತಲಯಂತ್ರ), ಬೋರ್ ಅನ್ನಿಸಿದಾಗ ನೋಡಲು ಟಿವಿ, ಅಡುಗೆ ಮಾಡಲು ಬೇಕಾದ ಸ್ಟೌವ್, ಸ್ನಾನ ಮಾಡಲು ಬೇಕಾದ ಹೀಟರ್ ವ್ಯವಸ್ಥೆ ಹೀಗೆ ಹತ್ತಾರು ವಸ್ತಗಳು ದೈನಂದಿನ ಬದುಕಿನಲ್ಲಿ ತೀರಾ ಅಗತ್ಯ ಅನ್ನಿಸಿ ಬಿಡುತ್ತದೆ. ಈ ಸಮಯದಲ್ಲಿ ಇಂತಹ ವಸ್ತುಗಳನ್ನು ಬಾಡಿಗೆಗೆ ಕೊಡುವ ಮಂದಿ ಸಿಗುತ್ತಾರೆ. ವರ್ಷದ ಆಧಾರದಲ್ಲಿ ಇಂತಹ ವಸ್ತುಗಳಿಗೆ ತಿಂಗಳ ಲೆಕ್ಕಚಾರದಲ್ಲಿ (ಉದಾ: ಮಂಚಕ್ಕೆ 100ರಿಂದ 200 ರೂಪಾಯಿ) ಒಪ್ಪಂದ ಪತ್ರವನ್ನು ಸಿದ್ಧ ಪಡಿಸಲಾಗುತ್ತದೆ. ಬಾಡಿಗೆ ಮನೆಯ ಕರಾರು ಒಂದೇ ವರ್ಷದ ಅವಧಿಯಲ್ಲಿರುವುದರಿಂದ ಎಲೆಕ್ಟ್ರಾನಿಕ್ ಗೂಡ್ಸ್ ಗಳಲ್ಲಿ ವರ್ಷದ ಲೆಕ್ಕಚಾರಕ್ಕೆ ಇಳಿಯಲಾಗುತ್ತದೆ. ಈ ಸಮಯದಲ್ಲಿ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾನಿಯಾದರೇ ಯಾರು ಬಾಡಿಗೆಗೆ ಪಡೆದುಕೊಂಡಿರುತ್ತಾನೋ ಅವನೇ ನಷ್ಟ ಭರಿಸಬೇಕಾಗುತ್ತದೆ. ಜತೆಗೆ ಬಾಡಿಗೆದಾರ ಯಾವ ಮನೆಯಲ್ಲಿ ವಾಸವಾಗಿರುತ್ತಾನೋ ಅಲ್ಲಿಗೆ ಈ ಸಾಮಗ್ರಿಗಳನ್ನು ತಂದು ಕೊಡುವ ಜವಾಬ್ದಾರಿ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನಾಗಿರುತ್ತದೆ. ಸಾಮಗ್ರಿಗಳು ಎಲ್ಲಿಂದ ಅಂತೀರಾ: ಅಷ್ಟಕ್ಕೂ ಈ ಸಾಮಗ್ರಿಗಳು ಎಲ್ಲಿಂದ ಬರುತ್ತದೆ ಎನ್ನುವ ಕುತೂಹಲ ಮೊಳಕೆಯೊಡೆಯುವುದು ಸರ್ವೆ ಸಾಮಾನ್ಯ. ಆದರೆ ಕೆಲವು ಮೂಲಗಳ ಪ್ರಕಾರ ನಗರದಲ್ಲಿ ದುಡಿಯುವ ಐಟಿ, ಬಿಟಿ ಸೆಂಟರ್ ಉದ್ಯೋಗಿಗಳು ತಾವು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವಲಸೆ ಹೋದಾಗ ಈ ಸಾಮಗ್ರಿಗಳನ್ನು ಮತ್ತೊಂದು ಊರಿಗೆ ಸಾಗಾಟ ಮಾಡಲು ಕಷ್ಟ. ಈ ಸಮಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮತ್ತೊಂದು ಊರಿಗೆ ಗಂಟುಮೂಟೆ ಕಟ್ಟುತ್ತಾರೆ. ಇದೇ ಸಮಯದಲ್ಲಿ ಮನೆ ಹುಡುಕುವ ಬ್ರೋಕರ್ ಗಳು ಇದನ್ನು ಖರೀದಿ ಮಾಡಿಕೊಂಡು ಇಂತಹ ಸಾಮಗ್ರಿಗಳ ಬಾಡಿಗೆ ದಂಧೆಗೆ ಇಳಿಯುತ್ತಾರೆ. ಇದೇ ರೀತಿಯಲ್ಲಿ ಕೆಲವೊಂದು ಬ್ರೋಕರ್ ಗಳು ತಾವೇ ಸಾಮಗ್ರಿಗಳನ್ನು ಖರೀದಿಸಿಕೊಂಡು ಬಾಡಿಗೆಗೆ ನೀಡುತ್ತಾರೆ. ಒಂದೆರಡು ವರ್ಷ ಮುಗಿಯುತ್ತಾ ಹೋದಂತೆ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾಕಿದ ಬಂಡವಾಳ ವಾಪಾಸು ಬಂದು ಮುಟ್ಟುತ್ತದೆ. ಮತ್ತೆ ಉಳಿದ ಹಣ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನ ಕೀಸೆ ಸೇರಿಕೊಳ್ಳುತ್ತದೆ. ಇದು ಹೊಸ ಬ್ಯುಸಿನೆಸ್ ನ ಮುನ್ನುಡಿ ಅಧ್ಯಾಯ. ... ಕೋಟ್ ಕಾರ್ನರ್ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಸಿಸ್ಟಂ ಇತ್ತೀಚೆಗೆ ಎಲ್ಲ ಊರುಗಳಲ್ಲಿಯೂ ಆರಂಭವಾಗಿದೆ. ಹೊಸದಾಗಿ ಬದುಕು ಕಟ್ಟುವವರಿಗೆ ದೊಡ್ಡ ಮಾದರಿಯಲ್ಲಿ ಬದುಕು ಕಟ್ಟಲು ಸಾಧ್ಯವಿಲ್ಲ. ಅವರ ವರಮಾನ ಜತೆಗೆ ಆರ್ಥಿಕ ಲೆಕ್ಕಚಾರಗಳು ಕೂಡ ಉಲ್ಟಾ- ಪಲ್ಟಾ ಹೊಡೆಯುವ ಸಾಧ್ಯತೆಗಳು ಜಾಸ್ತಿಯಾಗಿರುತ್ತದೆ. ಇಂತಹ ಸಮಯದಲ್ಲಿ ಬಾಡಿಗೆಗೆ ಸಿಗುವ ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ತೃಪ್ತಿ ಹೊಂದಬಹುದು. ಪ್ರಸಾದ್, ಮಂಗಳೂರು ಕಳೆದ ಐದಾರು ವರ್ಷಗಳಿಂದ ಿಂತಹ ಬಾಡಿಗೆ ಕೊಡುವ ದಂಧೆಯಲ್ಲಿ ಇರುವವರು. (vijaykarnataka namma karvali article on 11.12.2014)