Sunday, April 17, 2011

ಗಾಂ...ನಗರದ ‘ಕತೆ’ ಕುಲಗೆಟ್ಟಿದೆ !


ಥಿಯೇಟರ್‌ಗಳಲ್ಲಿ ಬಾಡಿಗೆ ದರಗಳು ಕಡಿಮೆಯಾಗುತ್ತಿಲ್ಲ. ವಿಐಪಿಗಳು ಸಿನಿಮಾಕ್ಕೆ ಬರದಿದ್ದರೂ ಅಡ್ಡಿಯಿಲ್ಲ. ಶ್ರೀಸಾಮಾನ್ಯರೂ ಬಂದು ಸಿನಿಮಾ ನೋಡಬೇಕು. ಅಂತಹ ವ್ಯವಸ್ಥೆ ನಡೆದರೆ ಮಾತ್ರ ಸಿನಿಮಾ ಉದ್ಯಮ ಬದುಕುತ್ತದೆ. ನಮ್ಮಂತಹ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತೇವೆ ಎನ್ನೋದು ವಿನೋದ್ ರಾಜ್ ಮಾತು.

ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಯಾವುದೇ ಸಿನ್ಮಾಗಳು ಓಡುತ್ತಿಲ್ಲ. ನಟರ ಹೆಸರು ಉಳಿಸುವ ಭರದಲ್ಲಿ ಚಿತ್ರಗಳನ್ನು ಓಡಿಸಲಾಗುತ್ತಿದೆ. ಗಾಂ...ನಗರದ ಕತೆನೇ ಈಗ ಬದಲಾಗುತ್ತಿದೆ. ಥಿಯೇಟರ್ ಬಾಡಿಗೆಯಲ್ಲೂ ಯಾವುದೇ ಬದಲಾವಣೆಯಾಗುತ್ತಿಲ್ಲ. ಪ್ರೇಕ್ಷಕ ವರ್ಗ ಕನ್ನಡ ಸಿನ್ಮಾಗಳ ಮೇಲೆ ವ್ಯಾಮೋಹ ತೋರಿಸುತ್ತಿಲ್ಲ. ಗಾಂ...ನಗರದಲ್ಲಿ ಬಡವ- ಶ್ರೀಮಂತ ಎನ್ನುವ ಕೇಟಗರಿ ಕ್ರಿಯೇಟ್ ಆಗಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನ್ಮಾ ಮಾಡೋದು ಆದ್ರೂ ಹೇಗೆ ಮಾರಾಯ್ರೆ ಅಂತಾ ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಕನ್ನಡ ಚಿತ್ರರಂಗದ ಕುರಿತು ಪ್ರಶ್ನೆ ಎತ್ತಿ ಕೂತಿದ್ದರು. ಇತ್ತೀಚೆಗೆ ತಮ್ಮ ತಾಯಿ ಎಂ. ಲೀಲಾವತಿಯ ಜತೆಯಲ್ಲಿ ಮಂಗಳೂರಿನ ತಮ್ಮ ಮೂಲಮನೆಯ ದೈವ ಸ್ಥಳಗಳಿಗೆ ಭೇಟಿ ನೀಡುವಾಗ ವಿನೋದ್ ಲವಲವಿಕೆಯ ಜತೆ ಕೊಂಚ ಹೊತ್ತು ಸಿನ್ಮಾ ಉದ್ಯಮದ ಕುರಿತು ಮಾತಿಗೆ ಕುಳಿತಿದ್ದರು.
ಗಾಂನಗರದ ಕುಲಗೆಟ್ಟ ಜನರ ಬಗ್ಗೆ ನೇರ ನುಡಿಯಲ್ಲಿ ಮಾತನಾಡಿದ ವಿನೋದ್ ಹೇಳುವುದಿಷ್ಟು: ಸ್ಯಾಂಡಲ್‌ವುಡ್ ಇಂಡಸ್ಟ್ರಿ ಈಗ ಮೊದಲಿನ ರೀತಿ ಉಳಿದಿಲ್ಲ. ಇಲ್ಲಿ ಈಗ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಬದಲಾಗಿ ಸೂಪರ್ ಹಿಟ್ ಆಯಿತು ಎನ್ನುವ ಮಾದರಿಯಲ್ಲಿ ಫೋಕಸ್ ಮಾಡಲಾಗುತ್ತಿದೆ. ಓಡುವ ಚಿತ್ರಗಳ ಬದಲಾಗಿ ಸ್ಯಾಂಡಲ್‌ವುಡ್‌ನಲ್ಲಿ ಓಡಿಸುವ ಚಿತ್ರಗಳು ಹುಟ್ಟಿ ಕೊಳ್ಳಲಾರಂಭಿಸಿದೆ. ಇಂತಹ ಓಡಿಸುವ ಚಿತ್ರಗಳಿಂದ ಯಾರಿಗೂ ಲಾಭವಿಲ್ಲ. ಬರೀ ದೊಡ್ಡವರು ಎನ್ನಿಸಿಕೊಂಡವರು ಉದ್ಯಮದಲ್ಲಿ ಉಳಿದು ಬಿಡುತ್ತಾರೆ. ಉಳಿದವರು ಸುದ್ದಿ ಇಲ್ಲದೇ ಮರೆಯಾಗಿ ಬಿಡುತ್ತಾರೆ ಎನ್ನುವುದು ದಿಟ.
ನಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಯಾರದು?’ ಹಾಗೂ ‘ಕನ್ನಡದ ಕಂದ’ ನಂತರ ಸಿನ್ಮಾ ಇಂಡಸ್ಟ್ರಿಯಿಂದ ದೂರಕ್ಕೆ ಯಾಕೆ ಹೋದ್ರಿ ಅಂತಾ ಕೇಳಿದ್ರೆ. ಅಮ್ಮ( ಎಂ.ಲೀಲಾವತಿ) ಹಾಗೂ ನಾನು ಯಾವತ್ತಿಗೂ ಸಿನ್ಮಾ ಇಂಡಸ್ಟ್ರಿಯಿಂದ ದೂರಕ್ಕೆ ಹೋದವರೇ ಅಲ್ಲ. ಉದ್ಯಮ ನಮಗೊಂದು ಬದುಕು, ಗೌರವ ಎಲ್ಲವೂ ತಂದುಕೊಟ್ಟಿದೆ. ಅಂತಹ ಇಂಡಸ್ಟ್ರಿಯನ್ನು ಮರೆಯಲು ಹೇಗೆ ತಾನೇ ಸಾಧ್ಯ. ಆದರೆ ಉದ್ಯಮದವರು ಮಾತ್ರ ನಮ್ಮನ್ನು ಮರೆತಿದ್ದಾರೆ. ಅದು ಅವರ ತಪ್ಪಲ್ಲ. ನಮ್ಮ ತಪ್ಪಲ್ಲ. ಯಾರ ತಪ್ಪು ಅಂತಾ ತಿಳೀತಾ ಇಲ್ಲ ಎಂದು ಮೌನದ ಮೋಡದಲ್ಲಿ ಜಾರಿ ಹೋದರು ವಿನೋದ್‌ರಾಜ್.
ಮತ್ತೆ ಐದು ನಿಮಿಷಗಳ ಕಾಲ ನೀರವ ಮೌನ. ಕೇಳುವ ಪ್ರಶ್ನೆಗಳು ಎಲ್ಲೋ ಕಳೆದು ಹೋಗಿ ಬಿಡುತ್ತದೆ ಎನ್ನುವ ಭೀತಿ. ಮತ್ತೆ ವಿನೋದ್‌ರಾಜ್ ಮಾತಿನ ಹಳಿಗೆ ಬಂದು ನಿಂತರು. ಕನ್ನಡ ಸಿನಿಮಾಗಳು ಯಾಕೆ ಓಡುತ್ತಿಲ್ಲ ಮಾರಾಯ್ರೆ ಎಂದಾಗ ಥಿಯೇಟರ್‌ಗಳಲ್ಲಿ ಬಾಡಿಗೆ ದರಗಳು ಕಡಿಮೆಯಾಗುತ್ತಿಲ್ಲ. ವಿಐಪಿಗಳು ಸಿನಿಮಾಕ್ಕೆ ಬರದಿದ್ದರೂ ಅಡ್ಡಿಯಿಲ್ಲ. ಶ್ರೀಸಾಮಾನ್ಯರೂ ಬಂದು ಸಿನಿಮಾ ನೋಡಬೇಕು. ಅಂತಹ ವ್ಯವಸ್ಥೆ ನಡೆದರೆ ಮಾತ್ರ ಸಿನಿಮಾ ಉದ್ಯಮ ಬದುಕುತ್ತದೆ. ನಮ್ಮಂತಹ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತಾರೆ . ಕಳೆದ ಎರಡು ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳಿ ‘ಅಪ್ತರಕ್ಷಕ’ ಯಾವುದೇ ಗಿಮಿಕ್ ಇಲ್ಲದೇ ಗೆದ್ದಿದೆ. ಉಳಿದಂತೆ ಯಾವುದು ಕೂಡ ಸೂಪರ್ ಹಿಟ್ ಅಲ್ವೇ ಅಲ್ಲ. ಎಲ್ಲವೂ ಸಾಧಾರಣ ಎನ್ನುವುದು ವಿನೋದ್‌ರ ವಾದ.
ತುಳುವಿನಲ್ಲಿ ಚಿತ್ರ:
ಈ ವರ್ಷದ ಮೇ- ಜೂನ್ ಹೊತ್ತಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ಕರಾವಳಿಯ ಹೊಸ ಕಲಾವಿದರನ್ನು ಹಾಕಿ ಮಾಡಬೇಕು ಎನ್ನೋದು ನಮ್ಮ ಕನಸು. ತಾಯಿ ಕೂಡ ಒಂದು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ. ನಾನು ಬರೀ ನಿರ್ಮಾಪಕನ ಕುರ್ಚಿಯಲ್ಲಿ ಕಾಣ ಸಿಗುತ್ತೇನೆ. ಕತೆ, ಬಜೆಟ್, ನಿರ್ದೇಶಕರು ಯಾರು ಎನ್ನುವ ಕುರಿತು ಯಾವುದೇ ಡಿಟೇಲ್ ಸಧ್ಯಕ್ಕೆ ಕೊಡುವುದಿಲ್ಲ. ಚಿತ್ರದ ತಂಡದಲ್ಲಿ ಕರಾವಳಿಯ ಮಂದಿಗೆ ಜಾಸ್ತಿ ಒತ್ತು ನೀಡುತ್ತೇವೆ. ಎರಡು- ಮೂರು ನಿರ್ದೇಶಕರು ನಮ್ಮ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ತುಳು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ಮಾಡುತ್ತೇವೆ. ಹೊಸ ನಟ- ನಟಿಯರು, ಕತೆಗಾರರು, ನಿರ್ದೇಶಕರು ಇದ್ದಾರೆ ನಮ್ಮನ್ನು ಸಂಪರ್ಕಿಸಬಹುದು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಪಕ್ಕಾವಾಗಿ ನಿಮ್ಮ ಮುಂದೆ ಬಂದೇ ಬರುತ್ತೇವೆ ಎನ್ನುತ್ತಾರೆ ವಿನೋದ್ ರಾಜ್.

Saturday, April 16, 2011

ನನ್ನ ಅಣ್ಣ ಮಮ್ಮಾ ಕುಂಞಿ !


ಕೇಂದ್ರ ಸರಕಾರ ಕಡೆಗೂ ಬಾಲ ಸಾಹಿತ್ಯದ ಮೇಲೆ ಕರುಣೆ ತೋರಿಸಿದೆ. ಖ್ಯಾತ ಕತೆಗಾರ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಪಾಪು ಗಾಂ.. ಬಾಪು ಗಾಂ.. ಆದ ’ಕತೆಗೆ ಬಾಲ ಸಾಹಿತ್ಯ ಪುರಸ್ಕಾರ ನೀಡಿದೆ. ಬೊಳುವಾರು ಅವರ ಸಹೋದರ ಐಕೆ ಬೊಳುವಾರು ಅಣ್ಣನ ಇನ್‌ಸೈಡ್ ಸ್ಟೋರಿಯನ್ನು ಲವಲವಿಕೆಗೆ ನೀಡಿದ್ದಾರೆ.


ಹಮಾರಾ ಟ್ರಾನ್ಸ್‌ಲೇಟರ್ ಜನರಲ್ ಕಾ ಹಾ ಹೈ... ಹರಿಜನ ಉದ್ದಾರ ಪ್ರಚಾರಕ್ಕಾಗಿ ಮೈಸೂರು ರಾಜ್ಯದ(ಕರ್ನಾಟಕ ಎಂದು ನಾಮಕರಣ ಆಗುವ ಮೊದಲು) ಪುತ್ತೂರಿಗೆ ಬಂದಿದ್ದ ಗಾಂ...ಜಿ ಪೇಟೆ ಬೀದಿಯಲ್ಲಿ ಸಾರ್ವಜನಿಕ ಸಭೆ ಆರಂಭಿಸುವ ಮೊದಲು ತಮ್ಮ ಪಕ್ಕದಲ್ಲಿ ಕುಳಿತಿದ್ದ ವಕೀಲ ಸದಾಶಿವರಾಯರನ್ನು ಪ್ರಶ್ನೆ ಕೇಳಿದಾಗ ವಕೀಲರು ಕಕ್ಕಾಬಿಕ್ಕಿ. ಗಾಂ...ಜಿಯ ಹಿಂಬದಿಯಲ್ಲಿ ಮೀರಾಬೆನ್ ಜತೆಯಲ್ಲಿ ಮಾತನಾಡುತ್ತಿದ್ದ ಲೇಖಕ ಶಿವರಾಮ ಕಾರಂತರಿಗೆ ಗಾಂಜಿಯ ಪ್ರಶ್ನೆ ಕೇಳಿಸಿತು. ಸದಾಶಿವರಾಯರ ಗಡಿಬಿಡಿಯೂ ಕಾಣಿಸಿತು.
ವಕೀಲರ ಬೆನ್ನಿಗೆ ಬೆರಳಿನಿಂದ ತಿವಿದು ಎಚ್ಚರಿಸಿದ ಕಾರಂತರು ವೇದಿಕೆಯ ಕೆಳಗೆ ಕುಕ್ಕುರು ಕಾಲಿನಲ್ಲಿ ಕುಳಿತು ಗ್ಯಾಸ್ ಲೈಟ್‌ಗೆ ‘ಟುಸ್‌ಕ್.. ಟುಸ್‌ಕ್‘ ಗಾಳಿ ಹೊಡೆಯುತ್ತಿದ್ದ ನಾರಾಯಣ ಕಿಲ್ಲೆ ಅವರತ್ತ ಬೊಟ್ಟು ಮಾಡಿ ಟ್ರಾನ್ಸ್‌ಲೇಟರ್ ಜನರಲ್ ಅವರೇ ಎಂದು ಸಂಞೆ ಮಾಡಿದರು. ವಕೀಲರ ಮುಖ ಊರಾಗಲವಾಯಿತು. ಇದು ಕತೆಗಾರ ಬೊಳುವಾರು ಬರೆಯುವ ಸ್ಟೈಲ್. ‘ಪಾಪು ಗಾಂ ಬಾಪು ಗಾಂ ಆದ ಕತೆ’ಯಲ್ಲಿ ಇದನ್ನೇ ಬರೆದುಕೊಂಡಿದ್ದಾರೆ ಎಂದು ಪುತ್ತೂರಿನ ಬೊಳುವಾರಿನಿಂದ ಎರಡು ಸ್ಟಾಪ್ ಮುಂದೆ ಇರುವ ಮನೆಯಲ್ಲಿ ಕೂತು ಟಿವಿಯಲ್ಲಿ ಬರುತ್ತಿದ್ದ ಅಣ್ಣನ ಸುದ್ದಿ ನೋಡಿ ಖ್ಯಾತ ಮಕ್ಕಳ ರಂಗಭೂಮಿ ನಿರ್ದೇಶಕ ಐಕೆ ಬೊಳುವಾರು ದೂರವಾಣಿ ಮೂಲಕ ಲವಲವಿಕೆಗೆ ಹೇಳಿದ ಮೊದಲ ಮಾತು.
ಸುಮಾರು ಮುಕ್ಕಾಲು ಗಂಟೆಯ ಕಾಲ ಬೊಳುವಾರು ಮಹಮ್ಮದ್ ಕುಂಞಿ ಅವರು ಯಾರಿಗೂ ಹೇಳಿರದ ಅವರ ಸಹೋದರ ಐಕೆ ಅವರಲ್ಲಿ ಹಂಚಿಕೊಂಡಿದ್ದ ಇನ್‌ಸೈಡ್ ಸ್ಟೋರಿಯನ್ನು ಲವಲವಿಕೆಗೆ ಹೇಳುತ್ತಾ ಹೋಗುತ್ತಿದ್ದರು. ‘ಬಾಲ್ಯದಲ್ಲಿ ತುಂಬಾ ಬಡತನವಿತ್ತು. ತಂದೆ ಅಬ್ಬಾಸ್ ಹಾಗೂ ತಾಯಿ ಕುಲ್ಸುಬೀ ಐದು ಮಕ್ಕಳು ಶಿಕ್ಷಣ ಮುಗಿಸುವರೆಗೂ ಬೀಡಿ ಉದ್ಯಮವನ್ನು ಬಿಟ್ಟು ನಿಂತಿರಲಿಲ್ಲ. ಈ ಸಮಯದಲ್ಲಿ ಮುಸ್ಲಿಂ ಸಮುದಾಯವರು ಸಣ್ಣ ವಯಸ್ಸಿನಲ್ಲಿಯೇ ಮೀನು ವ್ಯಾಪಾರ ಇತರ ಕೆಲಸಗಳಿಗೆ ಹೋಗುವುದು ಜಾಸ್ತಿಯಾಗಿತ್ತು. ಆದರೆ ನಮ್ಮ ತಂದೆಯ ಒಲವು ಶಿಕ್ಷಣದ ಕಡೆಗೆ ಇತ್ತು. ಮಕ್ಕಳು ಓದಿ ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ಹೊಟ್ಟೆಗೆ ಸರಿಯಾಗಿ ಹಿಟ್ಟು ಇಲ್ಲದಿದ್ದರೂ ಶಾಲೆಗೆ ಮಾತ್ರ ಕಳುಹಿಸದೇ ಬಿಡುತ್ತಿರಲಿಲ್ಲ. ತಂದೆಯ ಈ ಕೆಲಸ ಮೀನು ಮಾರುಕಟ್ಟೆಯಲ್ಲಿ ಇರಬೇಕಾದ ಹುಡುಗರು ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದಾರೆ ’ಎಂದು ಐಕೆ ತಂದೆಯ ನೆನಪುಗಳನ್ನು ಕೆದಕಿದರು.
ಮಹಮ್ಮದ್‌ರ ಕ್ರಿಕೆಟ್ ಪ್ರೀತಿ:
ಬೊಳುವಾರು ಮಹಮ್ಮದ್ ಕುಂಞಿ ಕನ್ನಡ ಸಾಹಿತ್ಯ ರಂಗದಲ್ಲಿ ಅದರಲ್ಲೂ ಸಣ್ಣ ಕತೆ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಎನ್ನುವುದು ಎಲ್ಲರಿಗೂ ಗೊತ್ತು ಬಿಡಿ. ಆದರೆ ಬೊಳುವಾರಿನಲ್ಲಿರುವ ಅವರ ಬಹುತೇಕ ಗೆಳೆಯರಿಗೆ ಅವರೊಬ್ಬ ಸಾಹಿತಿಗಿಂತ ಹೆಚ್ಚಾಗಿ ‘ಕ್ರಿಕೆಟ್ ಆಟಗಾರ ’ಎಂದೇ ಪರಿಚಿತ. ಮಹಮ್ಮದ್ ಓದುತ್ತಿದ್ದ ಬೊಳುವಾರು ಪ್ರಾಥಮಿಕ ಶಾಲೆ ಇರಲಿ ಖ್ಯಾತ ಬೋರ್ಡ್ ಹೈಸ್ಕೂಲ್‌ನ ಕ್ರಿಕೆಟ್ ತಂಡದಲ್ಲಿ ಅವರು ಇಲ್ಲದೇ ಹೋದರೆ ಟೀಮ್ ತುಂಬಾನೇ ವೀಕ್ ಆಗಿಬಿಡುತ್ತಿತ್ತು. ವಿನ್ ಆಗುವ ಚಾನ್ಸ್‌ಯೇ ಕಡಿಮೆ ಇರುತ್ತಿತ್ತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಹಮ್ಮದ್ ‘ಎ’ ವನ್ ಪ್ಲೇಯರ್ ಎಂದು ಗೆಳೆಯರ ಸಮೂಹದಿಂದ ಕರೆಸಿಕೊಂಡಿದ್ದರು. ಟೈಮ್ ಸಿಕ್ಕಿದಾಗಲೆಲ್ಲಾ ಬೋರ್ಡ್ ಹೈಸ್ಕೂಲ್‌ನ ಮೈದಾನದಲ್ಲಿ ಮಹಮ್ಮದ್ ಠಿಕಾಣಿ ಹೂಡುತ್ತಿದ್ದರು. ಅವರ ಸಹೋದರರು ಕ್ರಿಕೆಟ್ ಬಗ್ಗೆ ಆಸಕ್ತಿ ತಮಗಿಲ್ಲ ಎಂದಾಗಲೆಲ್ಲ ಅವರ ಜತೆ ‘ಕುಟ್ಟಿ ದೊಣ್ಣೆ ’ ಆಡಲು ಬರುತ್ತಿದ್ದರು. ಅಲ್ಲೂ ಇಲ್ಲೂ ಮಹಮ್ಮದ್ ಗೆಲ್ಲುವ ಕುದುರೆ ಎಂದೇ ಎಲ್ಲರಿಗೂ ಗೊತ್ತಿತ್ತು.
ಏಕಾಂಗಿತನ ಕಳೆಯಲು ಕತೆ ಬರೆದರು:
ಬೊಳುವಾರು ಮಹಮ್ಮದ್ ಕುಂಞಿ ಬರೆದ ಸಣ್ಣ ಕತೆಗಳ ಲೆಕ್ಕಚಾರವನ್ನು ಸ್ವತಃ ಅವರೇ ಇಟ್ಟುಕೊಂಡಿಲ್ಲ. ಆದರೆ ಐಕೆ ಅದರ ಲೆಕ್ಕಚಾರವನ್ನು ಪಕ್ಕವಾಗಿ ಇಟ್ಟುಕೊಳ್ಳುತ್ತಾರೆ. ಮಹಮ್ಮದ್ ಶಿಕ್ಷಣ ಮುಗಿಸಿಕೊಂಡು ಸಿಂಡಿಕೇಟ್ ಬ್ಯಾಂಕ್‌ನ ಗುಲ್ಬರ್ಗ ಶಾಖೆಗೆ ಕ್ಲರ್ಕ್ ಆಗಿ ಸೇರಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿಯೇ ಹೊಸ ಜಾಗ ಹೊಸ ಜನರ ನಡುವೆ ಹೊಂದಾಣಿಕೆಯ ಸಮಸ್ಯೆ, ಏಕಾಂಗಿತನ ಕಾಡುತ್ತಿದ್ದಾಗ ಮಹಮ್ಮದ್ ಆಯ್ಕೆ ಮಾಡಿಕೊಂಡದ್ದು ಸಾಹಿತ್ಯ ಕ್ಷೇತ್ರ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ನವ ಭಾರತ’ದಲ್ಲಿ ಮೊತ್ತ ಮೊದಲ ಬಾರಿಗೆ ‘ನಿರೀಕ್ಷೆ’ ಎಂಬ ಸಣ್ಣ ಕತೆ ಮುದ್ರಣವಾಗುತ್ತಿದ್ದಂತೆಯೇ ಮಹಮ್ಮದ್ ಎಂಬ ಹೊಸ ಪೀಳಿಗೆಯ ಕತೆಗಾರ ೧೯೮೦ರ ವರೆಗೂ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸುತ್ತಾರೆ. ೧೯೮೦ರ ನಂತರ ಅವರ ಕತೆಗಳಲ್ಲಿ ಮಾನವೀಯ ಅಂಶಗಳು, ತಮಾಷೆ, ಕುತೂಹಲ ಮೊದಲಾದ ಅಂಶಗಳು ಜಾಗ ಪಡೆದುಕೊಂಡು ಮಹಮ್ಮದ್‌ರ ಕತೆಗಳು ಟೋಟಲಿ ಡಿಫರೆಂಟ್ ಎನ್ನುವ ಮಾತು ಆರಂಭವಾಗಿ ಬಿಡುತ್ತದೆ ಎನ್ನುತ್ತಾರೆ ಅವರ ಸಹೋದರ ಐಕೆ ಬೊಳುವಾರು.
ಮುತ್ತುಪಾಡಿ ಎಂಬ ಊರು:
ಖ್ಯಾತ ಕತೆಗಾರ ಆರ್.ಕೆ. ನಾರಾಯಣ್ ಅವರ ಕಲ್ಪನೆಯ ಊರು ‘ಮಾಲ್ಗುಡಿ’ ಇದ್ದ ರೀತಿಯಲ್ಲಿ ಮಹಮ್ಮದ್‌ರ ಊರು ‘ಮುತ್ತು ಪಾಡಿ’. ಅವರ ಎಲ್ಲ ಸಣ್ಣ ಕತೆಗಳಲ್ಲಿ ‘ಮುತ್ತುಪಾಡಿ’ ಎಂಬ ಊರಿಗೆ ಖಾಯಂ ಜಾಗ ಇದ್ದೇ ಇದೆ. ಅಂದಹಾಗೆ ‘ಮುತ್ತುಪಾಡಿ’ ಮಹಮ್ಮದ್‌ರ ಕಲ್ಪನೆಯ ಊರಲ್ಲ. ಇಂದಿಗೂ ಈ ಊರುಗಳು ಪುತ್ತೂರಿನ ಅಸುಪಾಸಿನಲ್ಲಿ ಇದೆ. ಕೋಡಿಂಬಾಡಿ, ನೆಕ್ಕಿಲಾಡಿ, ಬೆಳ್ಳಿಪಾಡಿ ಹೀಗೆ ಪಾಡಿ ಬರುವ ಊರುಗಳು ‘ಮುತ್ತುಪಾಡಿ’ ಎಂಬ ಆಧಾರದಲ್ಲಿ ಮಹಮ್ಮದ್ ಸಣ್ಣ ಕತೆಗಳಲ್ಲಿ ಹೇಳುತ್ತಾ ಸಾಗುತ್ತಾರೆ. ಈ ಎಲ್ಲ ಊರಿನಲ್ಲಿ ಮಹಮ್ಮದ್‌ರ ಖಾಸಾ ದೋಸ್ತ್‌ಗಳು ಇದ್ದಾರೆ. ಪುತ್ತೂರಿನ ಬೊಳುವಾರಿಗೆ ಬಂದಾಗ ಈ ಎಲ್ಲ ದೋಸ್ತ್‌ಗಳ ಮನೆಯಲ್ಲಿಯೇ ಜಾಸ್ತಿ ಹೊತ್ತು ಕಳೆಯುತ್ತಾರೆ. ಅವರ ಹೆಚ್ಚಿನ ಕತೆಗಳಲ್ಲಿ ಈ ದೋಸ್ತ್‌ಗಳೇ ಜೀವಾಳ. ಆದರೆ‘ ‘ಪಾಪು ಗಾಂ... ಬಾಪು ಗಾಂ... ಆದ ಕತೆ’ಯಲ್ಲಿ ಮಾತ್ರ ಈ ಊರಿನ ಉಲ್ಲೇಖ ಇಲ್ಲ. ಈ ಕೃತಿಯಲ್ಲಿ ಪುತ್ತೂರಿನ ನಿಜವಾದ ಊರುಗಳೇ ಜಾಗ ಪಡೆದುಕೊಂಡಿದೆ.
ಬಾಲಸಾಹಿತ್ಯದಲ್ಲಿ ಆಸಕ್ತಿ:
ಮಹಮ್ಮದ್ ಮಣಿಪಾಲದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ಗೆ ವರ್ಗಾವಾದಾಗ ಅವರ ಮನೆಯ ಪಕ್ಕದಲ್ಲಿಯೇ ಶಿವರಾಮ ಕಾರಂತರ ಮನೆ ಇತ್ತು. ಸಾಹಿತ್ಯ ಗೀಳಿದ್ದ ಮಹಮ್ಮದ್ ಹೆಚ್ಚು ಒತ್ತು ಶಿವರಾಮ ಕಾರಂತರ ಮನೆಯಲ್ಲಿ ಕಳೆಯುತ್ತಿದ್ದರು. ಅಲ್ಲಿಯೇ ಅವರಿಗೆ ಬಾಲ ಸಾಹಿತ್ಯದ ಕುರಿತು ಒಲವು ಮೂಡಿ ಬಂತು. ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯತ್ನ ಎನ್ನುವ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಂಬ ಕೃತಿಯನ್ನು ಸಂಪಾದನೆ ಮಾಡಿರುವುದು ಬೊಳುವಾರು ಅವರ ಹೆಗ್ಗಳಿಕೆ. ೧೦೦ ಕವಿಗಳ ಕವನಗಳು ಈ ಕೃತಿಯ ಹೈಲೇಟ್. ‘೧೨ ಮಕ್ಕಳ ನಾಟಕಗಳ ಸಂಪಾದನೆ,’ ‘ಸಂತಮ್ಮನ’ ಕವನ ಸಂಕಲನ ಸಂಪಾದನೆ ಜತೆಗೆ ಈಗ ‘ಪಾಪು ಗಾಂ... ಬಾಪು ಗಾಂ... ಆದ ಕತೆ’ ಕಾದಂಬರಿ ವರೆಗೆ ಅವರ ಮಕ್ಕಳ ಸಾಹಿತ್ಯ ಸೇವೆ ಮುಂದುವರಿದಿದೆ.
ಬೊಳುವಾರು ಮಹಮ್ಮದ್ ಒಬ್ಬ ವಿಶಿಷ್ಟ ಜೀವಿ. ಅವರ ವೈಯಕ್ತಿವಾಗಲಿ ಅಥವಾ ಸಾರ್ವಜನಿಕವಾಗಲಿ ಫೋಟೋ ತೆಗೆಸಿಕೊಳ್ಳುವ ಪರಿಪಾಟ ಇಟ್ಟುಕೊಂಡಿಲ್ಲ. ಅದರಲ್ಲೂ ಐಕೆ ಬೊಳುವಾರು ಕೂಡ ಅದೇ ದಾರಿಯನ್ನು ಹಿಡಿದವರು. ‘ಫೋಟೋ ತೆಗೆಯುತ್ತೇನೆ ಸ್ವಾಮಿ ಒಂದ್ ಸಾರಿ ಮುಖ ತೋರಿಸಿ’ ಎಂದಾಗ ಮಹಮ್ಮದ್ ಯಾರಿಗೂ ಹೇಳದೇ ಮರೆಯಾಗುವ ಐವತ್ತು ದಾಟಿದ ಪುಟ್ಟ ಮಗು ಎಂದೇ ಅವರ ಆಪ್ತರ ವಲಯ ಹೇಳುವ ಮಾತಿದೆ. ಟೋಟಲಿ ಕೇಂದ್ರ ಸರಕಾರ ಮಹಮ್ಮದ್‌ರ ಬಾಲ ಸಾಹಿತ್ಯಕ್ಕೆ ಪುರಸ್ಕಾರ ನೀಡುತ್ತಿರುವುದು ಮಾತ್ರ ಖುಷಿಯ ವಿಚಾರ.

ಚಕ್ ಧೂಮ್ ಧೂಮ್ ಶೆಫ್ ಮಗ ಡ್ಯಾನ್ಸರ್ !



ಕುಡ್ಲದ ಖ್ಯಾತ ಚೈನೀಸ್ ಫುಡ್ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿರುವ ‘ಹವೋ ಹವೋ’ ಹಾಗೂ ‘ಹವೋ ಮಿನ್’ ರೆಸ್ಟೋರೆಂಟ್‌ಗಳಲ್ಲಿ ಶೆಫ್ ಆಂಡ್ ಓನರ್ ಆಗಿರುವ ಲೂಯಿಸ್ ವಾಂಗ್ ಹಾಗೂ ರೋಸಿ ವಾಂಗ್‌ರಿಗೆ ಸೈರಸ್ ಆಂಡ್ ಪುತ್ರಿ ಮೆಲೇಷಿ ವಾಂಗ್ ಇಬ್ಬರು ಮಕ್ಕಳು. ಈಗ ನಿಮ್ಮ ಮುಂದೆ ಸೈರಸ್ ವಾಂಗ್....

ಸೈರಸ್ ವಾಂಗ್ ಮ್ಯಂಗಲೂರ್. ಸಿವೈಆರ್ ಸ್ಪೇಸ್ ಕೊಟ್ಟು ೫೬೮೮೨ಗೆ ಸೆಂಡ್ ಮಾಡಿ ಎಂದಾಗ ಟಿವಿ ಪರದೆಯ ಮುಂದೆ ಕೂತ ಕುಡ್ಲದ ಪ್ರೇಕ್ಷಕರಿಗೊಂದು ಅಚ್ಚರಿ. ಈ ಹಿಂದೆ ಮಂಗಳೂರು ಎಂದಾಗ ನ್ಯಾಷನಲ್ ಟಿವಿ ಚಾನೆಲ್‌ಗಳಲ್ಲಿ ಬಿಂಬಿತವಾದ ರೀತಿ ಮಾತ್ರ ಕೊಂಚ ವಿಚಿತ್ರವಾಗಿತ್ತು. ಕೆಟ್ಟ ವಿಚಾರಗಳಿಂದಲೇ ಮಂಗಳೂರು ಶೈನ್ ಆಗಿತ್ತು ಬಿಡಿ.
ಈಗ ಕಾಲ ಬದಲಾಗಿದೆ. ಮಂಗಳೂರಿನ ಟ್ಯಾಲೆಂಟ್ ಯೂತ್ ನ್ಯಾಷನಲ್ - ಇಂಟರ್ ನ್ಯಾಷನಲ್ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ. ಅದಕ್ಕೊಂದು ತಾಜಾ ಐಟಂ ಖ್ಯಾತ ಕಲರ್‍ಸ್ ಚಾನೆಲ್‌ನ ‘ಚಕ್ ಧೂಮ್ ಧೂಮ್’ ಮಕ್ಕಳಿಗಾಗಿ ಇರುವ ರಿಯಾಲಿಟಿ ಡ್ಯಾನ್ಸ್ ಶೋ. ಒಂದು ಲೆಕ್ಕಚಾರದ ಪ್ರಕಾರ ಈ ರಿಯಾಲಿಟಿ ಡ್ಯಾನ್ಸ್ ಶೋಗೆ ಭರ್ಜರಿ ಖರ್ಚಾಗಿದೆ. ಖರ್ಚಿನ ವಿಚಾರದಲ್ಲಿ ಇಂತಹ ಪ್ರಯತ್ನ ನಿಜಕ್ಕೂ ಮೊದಲು ಎನ್ನುವುದು ಕಲರ್‍ಸ್ ಚಾನೆಲ್‌ನ ಅಭಿಮತ.
ಅದೆಲ್ಲ ಈಗ ಬಿಟ್ಟು ಬಿಡಿ. ಅಪ್ಪಟ ಕುಡ್ಲದ ಡ್ಯಾನ್ಸಿಂಗ್ ಪ್ರತಿಭೆ ಸೈರಸ್ ವಾಂಗ್ ಈಗ ಎಂಟರ ಘಟ್ಟ ಮುಟ್ಟಿ ಡೇಂಜರ್ ಝೋನ್‌ನೊಳಗೆ ಬಿದ್ದಿದ್ದಾನೆ. ಕುಡ್ಲದ ಖ್ಯಾತ ಚೈನೀಸ್ ಫುಡ್ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿರುವ ‘ಹವೋ ಹವೋ’ ಹಾಗೂ ‘ಹವೋ ಮಿನ್’ ರೆಸ್ಟೋರೆಂಟ್‌ಗಳಲ್ಲಿ ಶೆಫ್ ಆಂಡ್ ಓನರ್ ಆಗಿರುವ ಲೂಯಿಸ್ ವಾಂಗ್ ಹಾಗೂ ರೋಸಿ ವಾಂಗ್‌ರಿಗೆ ಸೈರಸ್ ಹಾಗೂ ಪುತ್ರಿ ಮೆಲೇಷಿ ವಾಂಗ್ ಇಬ್ಬರು ಮಕ್ಕಳು. ತಂದೆ ಲೂಯಿಸ್ ವಾಂಗ್ ಕಿಚನ್ ರೂಂನಲ್ಲಿ ಬ್ಯುಸಿಯಾಗಿದ್ದಾರೆ. ತಾಯಿ ರೋಸಿ ವಾಂಗ್ ಕಿಚನ್ ವಿದ್ ಪುತ್ರನ ಡ್ಯಾನ್ಸ್ ಕೇರಿಯರ್‌ನಲ್ಲಿ ಫುಲ್ ಬ್ಯುಸಿ.
ಹೃತಿಕ್‌ನ ಪಕ್ಕಾ ಅಭಿಮಾನಿ:
‘ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ಮಾಡುತ್ತಿದ್ದ ಸ್ಟೆಪ್ ನೋಡಿ ಸೈರಸ್ ಬಾಲ್ಯದಲ್ಲಿಯೇ ಕುಣಿತ ಆರಂಭಿಸಿದ. ಮೂರು ವರ್ಷದಲ್ಲಿಯೇ ಅವನಿಗೆ ಡ್ಯಾನ್ಸ್ ಮೇಲೆ ವಿಶೇಷ ಮೋಹ ಬೆಳೆಯಿತು. ಟಿವಿಯಲ್ಲಿ ಯಾವುದೇ ಡ್ಯಾನ್ಸ್ ಕಾರ್‍ಯಕ್ರಮಗಳು ಬರಲಿ ತಕ್ಷಣ ಎದ್ದು ನಿಂತು ಡ್ಯಾನ್ಸ್ ಮಾಡುತ್ತಾನೆ. ಅದಕ್ಕಾಗಿ ಅವನನ್ನು ಸಂದೇಶ್ ಜಾನ್ವಿ ಅವರ ‘ಮಂಗಳೂರು ಎಕ್ಸ್‌ಲೆಂಟ್ ಡ್ಯಾನ್ಸಿಂಗ್ ಅಕಾಡೆಮಿ’ಗೆ ಸೇರಿಸಿದೆ ಎನ್ನುತ್ತಾರೆ ಸೈರಸ್‌ನ ತಾಯಿ ರೋಸಿ ವಾಂಗ್.
‘ಸೈರಸ್ ಬರೀ ಡ್ಯಾನ್ಸ್ ಕಲಿತಿಲ್ಲ. ಅದರ ಜತೆಯಲ್ಲಿ ಈಜುವುದರಲ್ಲೂ ಇದ್ದಾನೆ. ಕರಾಟೆ, ಮಾರ್ಷಲ್ ಆರ್ಟ್ಸ್ ಬಗ್ಗೆನೂ ಕೊಂಚ ನಾಲೆಡ್ಜ್ ಇದೆ. ಮನೆಯಲ್ಲಿ ತುಂಬಾ ತಂಟೆ ಮಾಡ್ತಾನೆ. ಸಹೋದರಿ ಮೆಲೇಷಿ ವಾಂಗ್ ಜತೆಯಲ್ಲಿ ಆಡುವುದು ಎಂದರೆ ಅವನಿಗೆ ಬಹಳ ಖುಶಿ. ಸೈರಸ್ ನಿಜಕ್ಕೂ ನಮ್ಮ ಪಾಲಿನ ಲಕ್ಕಿ ಬಾಯ್‌ಎನ್ನುತ್ತಾರೆ ರೋಸಿ.
‘ಕುಡ್ಲದ ಬೆಂದುರ್ ವೆಲ್‌ನ ತೆರೇಸಾ ಶಾಲೆಯಲ್ಲಿ ಏಳನೇ ತರಗತಿ ಓದುವ ಸೈರಸ್ ಎವರೇಜ್ ಹುಡ್ಗ. ಶಾಲೆಯ ಮುಖ್ಯೋಪಾಧ್ಯಾಯರ ಜತೆಯಲ್ಲಿ ಶಿಕ್ಷಕರು ಅವನ ಡ್ಯಾನ್ಸಿಂಗ್ ಕೇರಿಯರ್‌ಗೆ ಬಹಳ ಪ್ರೋತ್ಸಾಹ ಕೊಡ್ತಾರೆ. ಒಂದೊಂದು ತಿಂಗಳು ರಜೆ ಹಾಕಿ ಈಗ ನಾವು ಮುಂಬಯಿಯ ಕಲರ್‍ಸ್ ಚಾನೆಲ್‌ನ ಸ್ಪರ್ಧೆಗೆ ಎಂಟ್ರಿಯಾಗಿದ್ದೇವೆ. ಈ ಸಮಯದಲ್ಲಿ ಶಾಲೆಯ ಪ್ರೋತ್ಸಾಹ ಬಹಳಷ್ಟಿದೆ’ ಎನ್ನುತ್ತಾರೆ ರೋಸಿ ವಾಂಗ್.
ಎಲ್ಲಕ್ಕೂ ‘ಸೈ ’ಸೈರಸ್:
ಕಂಕನಾಡಿಯಲ್ಲಿರುವ ಮಂಗಳೂರು ಎಕ್ಸ್‌ಲೆಂಟ್ ಡ್ಯಾನ್ಸ್ ಅಕಾಡೆಮಿಯ ಕೋರಿಯೋಗ್ರಾಫರ್‌ಗಳಾದ ಚರಣ್‌ರಾಜ್ ಗಟ್ಟಿ, ನೀತು ಮರೋಳಿ, ಜೀವನ್, ಸಂತೋಷ್ ಎಲ್ಲರ ಮೆಚ್ಚಿನ ಶಿಷ್ಯ ಸೈರಸ್ ಅಂತೆ. ಯಾವುದೇ ಬಾಲಿವುಡ್, ಹಿಪ್‌ಹಾಪ್, ಪಾಪ್, ಸಾಲ್ಸಾ ಐಟಂಗಳಲ್ಲಿ ಸೈರಸ್ ಸೈ ಎನ್ನಿಸಿ ಬಿಡುತ್ತಾನೆ ಎನ್ನೋದು ಗುರುಗಳ ಮಾತು.‘ಸೈರಸ್ ತುಂಬಾನೇ ಆಕ್ಟಿವ್. ಮೊಬೈಲ್‌ನಲ್ಲಿ ಚಾರ್ಜ್ ಇಲ್ಲದೇ ಹೋಗಬಹುದು.ಆದರೆ ಸೈರಸ್ ಯಾವಾಗಲೂ ಚಾರ್ಜ್‌ನಲ್ಲಿರುತ್ತಾನೆ. ಯಾವುದೇ ಐಟಂಗಳನ್ನು ನಾವು ಹೇಳಿಕೊಟ್ಟ ತಕ್ಷಣ ಮಾಡಿ ಮುಗಿಸುವ ಪೋರ ಸೈರಸ್ ’ಎಂದು ಶಿಷ್ಯನ ಬಗ್ಗೆ ಮೆಚ್ಚು ನುಡಿ ಸುರಿಸುತ್ತಾರೆ ಚರಣ್ ರಾಜ್ ಗಟ್ಟಿ. ‘ಶಾಲೆಯವರು ನೀಡಿದ ಹೋಮ್ ವರ್ಕ್ ಸಂಪೂರ್ಣ ಮುಗಿಸಿದ ನಂತರ ಡ್ಯಾನ್ಸ್ ಅಕಾಡೆಮಿಗೆ ಬರುತ್ತಾನೆ. ಸಂಜೆ ೭ರಿಂದ ೮ರ ತನಕ ಫುಲ್ ಜೋಶ್‌ನಿಂದ ಡ್ಯಾನ್ಸ್ ಮಾಡ್ತಾನೆ ’ಎನ್ನುತ್ತಾರೆ ಕೋರಿಯೋಗ್ರಾಫರ್ ನೀತು ಮರೋಳಿ.
ಸೈರಸ್ ‘ಗುಡ್ ಡೇಟಾ’:
ಹನ್ನೊಂದರ ಹರೆಯದ ಸೈರಸ್ ವಾಂಗ್. ಸೋನಿ ಟಿವಿಯ ‘ಬೂಗಿ ವೂಗಿ ’ಡ್ಯಾನ್ಸ್ ಸ್ಪರ್ಧೆಯಲ್ಲೂ ಗೆದ್ದು ಬಂದವ. ೨೦೦ಕ್ಕಿಂತ ಹೆಚ್ಚು ಡ್ಯಾನ್ಸ್ ಶೋಗಳಲ್ಲಿ ಕಾಣಿಸಿಕೊಂಡ ಪ್ರತಿಭೆ. ಝೀ ಕನ್ನಡದ ‘ಕುಣಿಯೋಣ ಬಾರಾ’ದಲ್ಲೂ ಪ್ರದರ್ಶನ ನೀಡಿದ ಪೋರ ಸೈರಸ್ ರಾಷ್ಟ್ರ ಮಟ್ಟದ ಅನೇಕ ಡ್ಯಾನ್ಸ್ ಸ್ಪರ್ಧೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾನೆ.
ಅಂದಹಾಗೆ ಸೈರಸ್ ತನ್ನ ಬಗ್ಗೆ ಏನೂ ಹೇಳುತ್ತಿದ್ದಾನೆ ಕೇಳಿ....‘ನಿಜಕ್ಕೂ ವಂಡರ್ ಫುಲ್ ಅನುಭವ. ನನಗೆ ಇಲ್ಲಿ ಗೆಲ್ಲೋದಕ್ಕಿಂತ ಹೆಚ್ಚಾಗಿ ಖ್ಯಾತ ಕೋರಿಯೋಗ್ರಾಫರ್ ಜತೆಯಲ್ಲಿ ಇರುವ ಖುಶಿ ಬಹಳ ದೊಡ್ಡದು. ಗೆಲ್ಲಬೇಕೆಂದು ಕುಡ್ಲದಿಂದ ಬಂದಿದ್ದಾನೆ. ಅಲ್ಲಿನ ಜನ ನನ್ನ ಕೈ ಬಿಡೋದಿಲ್ಲ ಎಂಬ ಧೈರ್ಯ ಇದೆ’ ಎಂದು ಹೇಳಿ ನಕ್ಕ. ಕುಡ್ಲದ ಪ್ರತಿಭೆಯೊಂದು ಈ ರೀತಿಯಲ್ಲಿ ಕಲರ್‍ಸ್‌ನಲ್ಲಿ ಶೈನಿಂಗ್ ಆಗುತ್ತಿರೋದು ಹೆಮ್ಮೆಯ ವಿಚಾರ ಅಲ್ವಾ..?
ಚಕ್ ಧೂಮ್ ಧೂಮ್ ಏನಿದು..?
‘ಚಕ್ ಧೂಮ್ ಧೂಮ್’ ಡ್ಯಾನ್ಸ್ ರಿಯಾಲಿಟಿ ಶೋ ಕಲರ್‍ಸ್ ಚಾನೆಲ್‌ನಲ್ಲಿ ಪ್ರತಿ ಶುಕ್ರವಾರ ಹಾಗೂ ಶನಿವಾರ ರಾತ್ರಿ ೯ರಿಂದ ೧೦ ಗಂಟೆಗೆ ಪ್ರಸಾರವಾಗುತ್ತಿದೆ. ಈಗಾಗಲೇ ಸೈರಸ್ ವಾಂಗ್ ೨೦ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದಾನೆ. ಈ ರಿಯಾಲಿಟಿ ಶೋವಿನ ಜಡ್ಜ್‌ನ ಸ್ಥಾನದಲ್ಲಿ ಖ್ಯಾತ ಬಾಲಿವುಡ್‌ನ ಕೋರಿಯೋಗ್ರಾಫರ್ ಸರೋಜ್ ಖಾನ್, ಅಹಮದ್ ಖಾನ್ ಇದ್ದಾರೆ. ರಿಯಾಲಿಟಿ ಶೋವಿನಲ್ಲಿರುವ ಪುಟಾಣಿಗಳಿಗೆ ಕೋರಿಯೋಗ್ರಾಫರ್ ಬೊಸ್ಕೊ ಹಾಗೂ ಸೀಜರ್ ಟ್ರೈನಿಂಗ್ ನೀಡುತ್ತಿದ್ದಾರೆ. ಪುಟಾಣಿ ಡ್ಯಾನ್ಸರ್‌ಗಳ ಮಧ್ಯೆ ಪೈಪೋಟಿಯಂತೂ ಬಹಳ ಮಜಬೂತಾಗಿದೆ. ಬೇಕಾದರೆ ಒಂದು ಸಾರಿ ಟಿವಿಯಲ್ಲಿ ನೋಡಿಬಿಡಿ.

Friday, April 15, 2011

ಬಿಜೆಪಿ ಭಿನ್ನ ಮತ ಮತ್ತು ಕಾರ್ಟೂನ್ !


ಖ್ಯಾತ ಅಂತಾರಾಷ್ಟ್ರೀಯ ಕಾರ್ಟೂನಿಸ್ಟ್ ಈಗ ಮಾಧ್ಯಮದಂತಹ ಮುಖ್ಯವಾಹಿನಿಯ ಕಡೆ ಮುಖ ಮಾಡಿದ್ದಾರೆ. ಕಳೆದ ಕೆಲವು ವಿಚಾರಗಳ ಮೇಲೆ ಸಿರೀಯಸ್ ಆಗಿ ಪ್ರಕಾಶಣ್ಣ ಕಾರ್ಟೂನ್ ಮಾಡಿ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಪದೇ ಪದೇ ಬೆಂಕಿಯಂತೆ ಕಾಣಿಸಿಕೊಳ್ಳುತ್ತಿರುವ ಭಿನ್ನಮತ ಈ ರೀತಿಯಲ್ಲೂ ಸೃಷ್ಟಿಯಾಗಬಹುದು ಎನ್ನುವ ಊಹೆಯ ಮೇಲೆ ನಿಂತು ಪ್ರಕಾಶ್ ಶೆಟ್ಟಿ ಕಾರ್ಟೂನ್ ಮಾಡಿ ಕಳುಹಿಸಿದ್ದಾರೆ. ಒಂದ್ ಸಾರಿ ನೋಡಿ ಬಿಡಿ.

* ಸ್ಟೀವನ್ ರೇಗೊ, ದಾರಂದಕುಕ್ಕು

Wednesday, April 13, 2011

ರಾಕ್ ಆನ್ ಸುನೀದಿ ಜವಾನಿ




ಹಾಡುಗಳು ಹೈ ನೋಟ್‌ನಲ್ಲಿ ಇದ್ದರೂ ಒಂಚೂರು ಟೋನ್‌ನಲ್ಲಿ ವ್ಯತ್ಯಾಸ ಮಾಡದೇ ಅದೇ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಛಾತಿ ಇರೋದು ಸುನೀದಿಗೆ ಮಾತ್ರ ಎನ್ನೋದು ಬಾಲಿವುಡ್‌ನ ಬಹುತೇಕ ಸಂಗೀತ ನಿರ್ದೇಶಕರ ಗಟ್ಟಿ ಮಾತು. ಇಂತಹ ಹೈಪವರ್ ಹುಡುಗಿ ಸುನೀದಿ ಚೌವಾನ್ ಲವಲವಿಕೆಯ ಜತೆ ಕೂತು ಚಿಟ್‌ಚಾಟ್ ಮಾಡಿದ್ದಾರೆ.

ಈ ವರ್ಷದ ಬಾಲಿವುಡ್‌ನ ಸೂಪರ್ ಡೂಪರ್ ಹಿಟ್ ಸಾಂಗ್ ‘ಶೀಲಾ ಕೀ ಜವಾನಿ..’ ಯಾರಿಗೆ ತಾನೇ ಗೊತ್ತಿಲ್ಲ. ಮದುವೆ, ಮುಂಜಿ ಏನೇ ನಡೆಯಲಿ ಅಲ್ಲಿ ಶೀಲಾ ಬಂದು ಕುಣಿವಷ್ಟು ಜೋರಾಗಿತ್ತು ಆ ಹಾಡು. ಅದರ ಹಿಂದೆ ಇದ್ದ ಗಾಯಕಿ ಸುನೀದಿ ಚೌವಾನ್. ಹಾಡುಗಳು ಹೈ ನೋಟ್‌ನಲ್ಲಿ ಇದ್ದರೂ ಒಂಚೂರು ಟೋನ್‌ನಲ್ಲಿ ವ್ಯತ್ಯಾಸ ಮಾಡದೇ ಅದೇ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಛಾತಿ ಇರೋದು ಭವಿಷ್ಯ ಸುನೀದಿಗೆ ಮಾತ್ರ ಎನ್ನೋದು ಬಾಲಿವುಡ್‌ನ ಬಹುತೇಕ ಸಂಗೀತ ನಿರ್ದೇಶಕರ ಗಟ್ಟಿ ಮಾತು. ಅದಕ್ಕಾಗಿಯೇ ಸುನೀದಿಯನ್ನು ಹೈಪಿಚ್ ಹಾಗೂ ಪಾಪ್ ಸಂಗೀತಗಳಿಗೆ ಹೇಳಿ ಮಾಡಿಸಿದ ಕಂಠ ಎಂದು ವಿಮರ್ಶಕರು ಹೇಳುವುದಿದೆ. ೨೦೦೭ರಲ್ಲಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ‘ಓಂಕಾರ’ದ ‘ಬೀಡಿ ಜಲಾಯೀ ದೇ...’ ಹಾಡಿನಿಂದ ತಾನು ಅಷ್ಟು ಚೆನ್ನಾಗಿ ಕುಣಿಯಲು ಸಾಧ್ಯವಾಯಿತು ಎಂದು ಈ ಹಾಡಿಗೆ ಕುಣಿದಿದ್ದ ನಟಿ ಬಿಪಾಷ ಬಸು ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದರು. ಇದು ಸುನೀದಿಯ ಹಾಡಿನ ಪವರ್ ಆಗಿತ್ತು. ಸುನೀದಿಯನ್ನು ಬಹಳಷ್ಟು ಜನರು ಲತಾರ ಮುಂದುವರಿದ ಭಾಗ ಎಂದೇ ಪರಿಗಣಿಸುತ್ತಾರೆ.
ನಾಲ್ಕರ ಹರೆಯದಲ್ಲಿ ದಿಲ್ಲಿಯ ದೇವಸ್ಥಾನದ ಮುಂದೆ ಸುನೀದಿ ಹಾಡಿದ್ದು ಈಗಲೂ ಭರ್ಜರಿಯಾಗಿ ಸಂಗೀತದಲ್ಲಿ ಮುಂದುವರಿಯುತ್ತಿದ್ದಾರೆ. ಇದರ ನಂತರ ೧೯೯೬ರಲ್ಲಿ ದೂರದರ್ಶನ್‌ದಲ್ಲಿ ಬಂದ ಸಂಗೀತ ರಿಯಾಲಿಟಿ ಶೋ ‘ಮೇರಿ ಅವಾಜ್ ಸುನೋ’ದಲ್ಲಿ ಆಯ್ಕೆಯಾಗಿದ್ದರು. ೧೯೯೬ನಲ್ಲಿ ‘ಶಾಸ್ತ್ರಾ ’ ಚಿತ್ರಕ್ಕೆ ಹಿನ್ನೆಲೆಗಾಯಕಿಯಾಗಿ ಸುನೀದಿಗೆ ಸಂಗೀತ ನಿರ್ದೇಶಕ ಅದೇಶ್ ಶ್ರೀವಾಸ್ತವ್ ಚಾನ್ಸ್ ಕೊಟ್ಟಿದ್ದರು. ಆದರೆ ಈ ಚಿತ್ರದ ಹಾಡು ಬಾಲಿವುಡ್ ಚಿತ್ರ ರಸಿಕರಿಗೆ ಇಷ್ಟವಾಗಲಿಲ್ಲ. ನಂತರ ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ ನಿರ್ದೇಶನದ ‘ಮಸ್ತ್’ನ ಹಾಡು ಸುನೀದಿಯ ಲೈಫ್‌ನ್ನು ಲಿಫ್ಟ್ ಮಾಡಿತು. ಈ ಮೊದಲು ಸಂದೀಪ್‌ಗೆ ಗಾಯಕ ಸೋನು ನಿಗಮ್ ಸುನೀದಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಅದಕ್ಕಾಗಿ ಇಂದಿಗೂ ಸುನೀದಿ ಸೋನು ನಿಗಮ್‌ರನ್ನು ನೆನಪು ಮಾಡುತ್ತಾರೆ.
೨೦೦೮ರ ವರ್ಷ ಸುನೀದಿ ಪಾಲಿಗೆ ಸೂಪರ್ ಹಿಟ್ ವರ್ಷ. ಹಾಡಿದ ಬಹುತೇಕ ಹಾಡುಗಳು ಸಿನಿ ಪ್ರೇಮಿಗಳ ಬಾಯಿಯಲ್ಲಿ ಮಂತ್ರಗಳಂತೆ ಉದುರಿತು. ‘ತಾಷನ್’, ‘ದೋಸ್ತಾನಾ’, ‘ರೇಸ್’, ‘ರಬ್ ದೇ ಬನಾದೇ ಜೋಡಿ’ಯ ಹಿಟ್ ಹಾಡುಗಳು ಈಗಲೂ ಸಂಗೀತ ಆರಾಧಕರ ರೇಟಿಂಗ್‌ನಲ್ಲಿ ಟಾಪ್‌ನಲ್ಲಿ ಉಳಿದುಕೊಂಡಿವೆ. ಸುನೀದಿ ಈ ವರೆಗೆ ೩ ಸಾವಿರದಷ್ಟು ಹಾಡುಗಳನ್ನು ಹಾಡಿದ್ದಾರೆ. ಹದಿನಾಲ್ಕು ಬಾರಿ ಫಿಲ್ಮ್‌ಪೇರ್ ಅವಾರ್ಡ್‌ಗೆ ನಾಮಕಿಂತಗೊಂಡಿದ್ದಾರೆ. ಅದರಲ್ಲಿ ಮೂರು ಬಾರಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಸುನೀದಿ ಚೌವಾನ್ ಲವಲವಿಕೆಯ ಜತೆ ಕೂತು ಚಿಟ್‌ಚಾಟ್ ಮಾಡಿದ್ದಾರೆ. ಬನ್ನಿ ಓವರ್ ಟು ಸುನೀದಿ ಚೌವಾನ್.
ಬದುಕು ಕಟ್ಟಿದ ಹುಡುಗಿ
ಸುನೀದಿ ಮೂಲತಃ ದಿಲ್ಲಿಯ ಬೆಡಗಿ. ರಂಗಭೂಮಿ ಹಿನ್ನೆಲೆಯಿಂದ ಬಂದ ಸುನೀದಿ ನಂತರ ದಿನಗಳಲ್ಲಿ ದಿಲ್ಲಿ ಬಿಟ್ಟು ಮುಂಬಯಿ ಸೇರಿಕೊಂಡರು. ೧೮ರ ಹರೆಯದಲ್ಲಿ ಬಾಲಿವುಡ್‌ನ ಖ್ಯಾತ ಮ್ಯೂಸಿಕ್ ವಿಡಿಯೋ ನಿರ್ದೇಶಕ ಕಮ್ ಕೋರಿಯೋಗ್ರಾಫರ್ ಬಾಬಿ ಖಾನ್ ಜತೆಯಲ್ಲಿ ವಿವಾಹವಾಗಿದ್ದರು. ‘ಪಹೇಲಾ ನಾಷಾ’ ಮ್ಯೂಸಿಕ್ ವಿಡಿಯೋನಿಂದ ಇಬ್ಬರ ಜತೆ ಸ್ನೇಹವಾಗಿ ನಂತರ ಅದು ಪ್ರೇಮಕ್ಕೆ ನಾಂದಿ ಹಾಡಿತು ಎನ್ನುವ ಮಾತಿದೆ. ಆದರೆ ಯಾಕೋ ಗೊತ್ತಿಲ್ಲ ವಿವಾಹ ಮಾತ್ರ ಬಹಳ ಗುಪ್ತವಾಗಿ ನಡೆದಿತ್ತು. ತಮ್ಮ ಹತ್ತಿರದ ಬಂಧುಗಳಿಗೆ ಮಾತ್ರ ಆಹ್ವಾನವಿತ್ತು. ವಿವಾಹವಾದ ಒಂದು ವರ್ಷದಲ್ಲಿಯೇ ಇಬ್ಬರ ನಡುವೆ ಮನಸ್ತಾಪ ಜೋರಾಯಿತು. ಇಬ್ಬರು ನಾನೊಂದು ತೀರಾ ನೀನೊಂದು ತೀರ ಎಂದು ಬಿಟ್ಟರು. ಸುನೀದಿ ಬಾಬಿಯನ್ನು ಬಿಟ್ಟು ಹೆತ್ತವರ ಜತೆಯಲ್ಲಿ ಮತ್ತೆ ಸೇರಿಕೊಂಡರು. ಎರಡು ಮೂರು ವರ್ಷಗಳ ಕಾಲ ಕಾನೂನಿನ ಮೂಲಕ ವಿಚ್ಛೇದನ ಪಡೆದು ಕೊಂಡದ್ದು ಆಯಿತು. ಈಗ ಪುರುಷ ಮೃಗಗಳನ್ನು ಕಂಡಾಗ ಸುನೀದಿ ಬೆಂಕಿ ಉಂಡೆಯಾಗುತ್ತಾರೆ.
* ನಿಮ್ಮ ಹೊಸ ಪ್ರಾಜೆಕ್ಟ್‌ಗಳ ಕತೆ ಏನು?
- ಶೀಲಾ ಕೀ ಜವಾನಿ...ಹಿಟ್ ನಂತರ ಈಗ ಹತ್ತಾರು ಪ್ರಾಜೆಕ್ಟ್‌ಗಳು ಕೈಯಲ್ಲಿದೆ. ಈ ವರ್ಷನೂ ಮತ್ತೊಂದು ಸೂಪರ್ ಹಾಡು ಕೊಡಬೇಕು ಎನ್ನೋದು ನನ್ನ ಬಯಕೆ.
* ನೀವು ಗುರು ಇಲ್ಲದ ಶಿಷ್ಯೆಯಂತೆ ?
- ಹೌದು. ನಾನು ಲತಾಜೀ ಹಾಗೂ ಆಶಾಜೀಗಳ ಹಾಡುಗಳನ್ನು ಕೇಳಿ ಯೇ ಸಂಗೀತ ಜ್ಞಾನ ಕಲಿತಿದ್ದೇನೆ. ಅವರ ಹಾಡುಗಳೇ ನನ್ನ ಇಂದಿನ ದಾರಿಗೆ ಪ್ರೇರಕ ಶಕ್ತಿಗಳು. ಉಳಿದಂತೆ ಸಂಗೀತವನ್ನು ಯಾವ ಗುರುಗಳಿಂದಲೂ ಕಲಿತಿಲ್ಲ.
* ನಿಮ್ಮ ಹತ್ತಿರದ ಪ್ರತಿರ್ಸ್ಪ ಯಾರು?
-ನಾನು ನನ್ನ ಪ್ರತಿರ್ಸ್ಪಗಳ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ. ಇತ್ತೀಚೆಗೆ ಸಂಗೀತ ಲೋಕಕ್ಕೆ ಹೊಸ ಗಾಯಕಿಯರು ಬರುತ್ತಿದ್ದಾರೆ. ಅದು ಹೆಮ್ಮೆ ಪಡುವ ವಿಷ್ಯಾ. ಸಂಗೀತದಲ್ಲಿ ಪೈಪೋಟಿ ಇದ್ರೆ ತಾನೇ ಗುಣಮಟ್ಟ ಹೆಚ್ಚಾಗೋದು....
*ತುಂಬಾ ಟ್ಯಾಲೆಂಟ್ ಇರುವ ನೀವು ನಟನೆಗೆ ಯಾಕೆ ಹೋಗ್ತಿಲ್ಲ?
- ಕಳೆದ ಎರಡು ಮೂರು ವರ್ಷಗಳಿಂದ ಹತ್ತಾರು ಸಿನಿಮಾ ನಿರ್ದೇಶಕರು ನನ್ನನ್ನು ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ನನಗೆ ನನ್ನದೇ ಕನಸ್ಸಿನ ಪಾತ್ರಗಳಿವೆ ಅಂತಹ ಪಾತ್ರಗಳು ಬಂದರೆ ಸಿನಿಮಾದಲ್ಲಿ ನಟಿಸುವುದು ಗ್ಯಾರಂಟಿ.
*ಹೊಸ ಅಲ್ಬಂ ತರುವ ಕೆಲಸ ಎಲ್ಲಿಗೆ ಬಂತು?
- ಆಲ್ಬಂ ತರುವ ಪ್ಲ್ಯಾನ್‌ವೊಂದು ಇತ್ತು. ಆದರೆ ಈಗ ಸಿನಿಮಾಗಳು ಜಾಸ್ತಿ ಬರುತ್ತಿದೆ. ಆಲ್ಬಂಗೆ ಟೈಮ್ ಸಿಗ್ತಿಲ್ಲ. ಈ ವರ್ಷ ಖಂಡಿತ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಆಲ್ಬಂ ತರುವ ಪ್ರಯತ್ನ ಮಾಡುತ್ತೇನೆ.
* ನಿಮ್ಮ ಪ್ರಕಾರ ಒಳ್ಳೆಯ ಹಾಗೂ ಬಹಳ ಕೆಟ್ಟ ಸಂಗೀತ ನಿರ್ದೇಶಕ ಯಾರು?
-ತುಂಬಾನೇ ಕಠಿಣ ಸವಾಲಿದು. ಒಂದ್ ಸಲ ಒಂದು ಸ್ಟುಡಿಯೋದಲ್ಲಿ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಮೂರು ಗಂಟೆಗಳ ಕಾಲ ರೆಕಾರ್ಡಿಂಗ್ ಮಾಡಿಸದೇ ಕೂರಿಸಿದರು. ನನ್ನ ವೃತ್ತಿ ಬದುಕಿನಲ್ಲಿ ಅವರೊಬ್ಬರೇ ಬಹಳ ಕೆಟ್ಟ ನಿರ್ದೇಶಕರು ಎಂದು ನಿರ್ಧಾರ ಮಾಡಿದೆ. ಆದರೆ ಹೆಸರು ಹೇಳಲು ಇಷ್ಟಪಡುವುದಿಲ್ಲ. ಉಳಿದಂತೆ ಎಲ್ಲರೂ ವೃತ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ.
* ದಿಲ್ಲಿ ಹುಡುಗನ ಜತೆ ಮದುವೆ ಇದೆ ಎನ್ನುವ ಮಾತಿದೆಯಲ್ಲ?
- ಇದೆಲ್ಲ ಮಾಧ್ಯಮಗಳು ಕಟ್ಟಿ ನಿಲ್ಲಿಸಿದ ಕತೆ. ಮದುವೆ ಎನ್ನೋದು ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಸಿನಿಮಾ ಬದುಕಿನಲ್ಲಿ ಇಂತಹ ಲಿಂಕ್ ಆಪ್ ಗಾಸಿಪ್‌ಗಳು ಪದೇ ಪದೇ ಬರುತ್ತದೆ. ನಾನು ಈ ವಿಚಾರದಲ್ಲಿ ಗಾಂಜಿಯ ಮೂರು ಮಂಗನಂತೆ ಇರುತ್ತೇನೆ.
* ಬಾಬಿ ಮತ್ತೆ ನಿಮ್ಮ ಬದುಕಿನಲ್ಲಿ ಎಂಟ್ರಿಯಾಗುತ್ತಾರಾ..?
- ಇಲ್ಲವೇ ಇಲ್ಲ. ಮದುವೆ ಎನ್ನುವ ಪದ ಈಗ ಬೋರ್ ಹೊಡಿಸುತ್ತಿದೆ. ಅವರು ತಮ್ಮ ಬದುಕಿನಲ್ಲಿ ಖುಷಿಯಾಗಿದ್ದಾರೆ. ನಾನು ನನ್ನ ಬದುಕಿನಲ್ಲಿ ಹ್ಯಾಪಿಯಾಗಿದ್ದೇನೆ. ಕಾನೂನು ಮೂಲಕ ನಾವು ಹೋಗಿದ್ದರ ಪರಿಣಾಮ ಎಂದಿಗೂ ನಾವು ಜತೆ ಸೇರಲಾರೆವು. ಒಂದ್ ಮಾತು ಹೇಳಬಲ್ಲೆ.. ಅವರಿಗೆ ಆಲ್ ದೀ ಬೆಸ್ಟ್.

Tuesday, April 12, 2011

ನಾಟ್ಯ ಮಯೂರಿ ಶೋಭನಾ


ಸಿನ್ಮಾಗಳ ಮೇಲೆ ಸಿನ್ಮಾ ನಿರ್ದೇಶಕರು ಶೋಭನಾರ ಕಾಲ್‌ಶೀಟ್‌ಗಾಗಿ ದುಂಬಾಲು ಬಿದ್ದಾಗಲೂ ಬಹಳಷ್ಟು ಚ್ಯುಸಿಯಾಗಿ ಚಿತ್ರಗಳನ್ನು ಆಯ್ಕೆಮಾಡಿಕೊಂಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡವರು. ಅದು ದಕ್ಷಿಣ ಭಾರತದ ಖ್ಯಾತ ನಟಿ ಶೋಭನಾ ಮೇಡಂರ ತಾಕತ್ತು. ಗಟ್ಟಿಯಾಗಿ ಹೇಳುವುದಾದರೆ ಅದೊಂದು ನಾಟ್ಯ ಕ್ಷೇತ್ರದ ಅಮೂಲ್ಯ ಆಸ್ತಿ.
ಅದು ಬರಿಯ ಹೆಸರಲ್ಲ. ಹಿರಿತೆರೆಯಲ್ಲಿ ನೋಡಿ ಮರೆತು ಬಿಡುವ ಮುಖನೂ ಅಲ್ಲ. ಬಣ್ಣದ ಲೋಕದಲ್ಲಿ ಚಾನ್ಸ್ ಇಲ್ಲ ಎಂದು ಮೂಲೆಗೆ ಸೇರಿ ಬಿಡುವ ನಾಯಕಿಯರನ್ನು ಬಹಳಷ್ಟು ಕಾಣಬಹುದು. ಆದರೆ ದಕ್ಷಿಣ ಭಾರತದ ನಾಯಕಿಯರ ರ್‍ಯಾಕಿಂಗ್ ಪಟ್ಟಿಯಲ್ಲಿ ನಟಿ ಶೋಭನಾ ನಂಬರ್ ವನ್ ಇದ್ದಾಗಲೇ ಭರತನಾಟ್ಯದ ಮೇಲೆ ಮನಸು ಮಾಡಿದವರು. ಸಿನ್ಮಾಗಳ ಮೇಲೆ ಸಿನ್ಮಾ ನಿರ್ದೇಶಕರು ಅವರ ಕಾಲ್‌ಶೀಟ್‌ಗಾಗಿ ದುಂಬಾಲು ಬಿದ್ದಾಗಲೂ ಬಹಳಷ್ಟು ಚ್ಯುಸಿಯಾಗಿ ಚಿತ್ರಗಳನ್ನು ಆಯ್ಕೆಮಾಡಿಕೊಂಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡವರು. ಅದು ದಕ್ಷಿಣ ಭಾರತದ ಖ್ಯಾತ ನಟಿ ಶೋಭನಾ ಮೇಡಂರ ತಾಕತ್ತು. ಗಟ್ಟಿಯಾಗಿ ಹೇಳುವುದಾದರೆ ಅದೊಂದು ನಾಟ್ಯ ಕ್ಷೇತ್ರದ ಅಮೂಲ್ಯ ಆಸ್ತಿ.
ಸ್ಯಾಂಡಲ್‌ವುಡ್‌ನಲ್ಲಿ ಬಂದ ‘ಆಪ್ತಮಿತ್ರ’ ಸಿನಿಮಾ ಯಾರಿಗೆ ಗೊತ್ತಿಲ್ಲ . ನಾಗವಲ್ಲಿಯಾಗಿ ಸೌಂದರ್ಯ ನಟಿಸಿದ ಈ ಚಿತ್ರದ ಮೂಲ ಮಲಯಾಳಂನ ‘ಮಣಿಚಿತ್ರತ್ತಾಳ್’. ಫಾಝಿಲ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಇಡೀ ಚಿತ್ರರಂಗವೇ ಅಚ್ಚರಿಪಡುವಂತೆ ನಟಿಸಿದ್ದು ಶೋಭನಾ. ನೃತ್ಯವೇ ಈ ಚಿತ್ರದ ಹೈಲೇಟ್ ವಿಚಾರವಾಗಿತ್ತು. ಅಂದಹಾಗೆ ನೃತ್ಯದಲ್ಲಿ ಶೋಭನಾ ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆ.
ಬಣ್ಣದ ಬದುಕು:
೧೮ನೇ ವಯಸ್ಸಿನಲ್ಲಿ ಮೊದಲ ಬಾರಿ ಶೋಭನಾ ಕ್ಯಾಮರಾ ಫೇಸ್ ಮಾಡಿದ್ದಳು. ನಂತರ ‘ಕನಮಾರಾಯತು’ನಲ್ಲಿ ಮಮ್ಮುಟ್ಟಿಗೆ ನಾಯಕಿ. ತೆಲುಗಿನ ಜನಪ್ರಿಯ ನಟ ನಾಗಾರ್ಜುನ ಮೊದಲ ಬಾರಿ ನಾಯಕನಾದ ‘ವಿಕ್ರಮ್’ ಚಿತ್ರಕ್ಕೆ ನಾಯಕಿಯಾಗಿ ಸಿಕ್ಕಿದ್ದು ಇದೇ ಶೋಭನಾ. ಫಾಜಿಲ್ ಅವರ ‘ಮಣಿಚಿತ್ರತ್ತಾಳ್’ಗೆ ೧೯೯೪ರಲ್ಲಿ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟರೆ ರೇವತಿ ಅವರ ‘ಮಿತ್ರ್ ಮೈ ಫ್ರೆಂಡ್ ’೨೦೦೩ರಲ್ಲಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಗೌರವ ತಂದಿತು. ೨೦೦೬ರಲ್ಲಿ ಪದ್ಮಶ್ರೀ ಗೌರವವೂ ಒಲಿದು ಬಂತು. ಸಿನಿಮಾ ರಂಗದಲ್ಲಿ ಇಷ್ಟೊಂದು ಜನಪ್ರಿಯತೆ ಇದ್ದರೂ ಅದೆಲ್ಲವನ್ನೂ ಪಕ್ಕದಲ್ಲಿಟ್ಟು ಶೋಭನಾ ಬೆನ್ನು ಹತ್ತಿದ್ದು ನೃತ್ಯವನ್ನು. ನೃತ್ಯದಲ್ಲಿ ಪ್ರಖ್ಯಾತರಾದ ತೃವಾಂಕೂರ್ ಸಹೋದರಿಯರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಅವರ ಸೊಸೆ ಶೋಭನಾ. ಭರತನಾಟ್ಯದ ದಂತಕಥೆಗಳಾದ ಚಿತ್ರ ವಿಶ್ವೇಶ್ವರನ್ ಮತ್ತು ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ.
ನಿರ್ದೇಶಕ ಮಣಿರತ್ನಂರ ಪ್ರಖ್ಯಾತ ಸ್ಟೇಜ್ ಶೋ ‘ನೆಹ್ರೂ ಇಂಡ್ರು, ನಾಳೈ’ಯಲ್ಲಿ ಪಾಲ್ಗೊಂಡಿದ್ದರು. ಶೋಭನಾ ೧೯೯೪ರಲ್ಲಿ ಚೆನ್ನೈಯಲ್ಲಿ ‘ಕಲಾರ್ಪಣ’ ಎನ್ನುವ ನಾಟ್ಯ ಶಾಲೆಯನ್ನು ಆರಂಭ ಮಾಡಿದರು. ಅಲ್ಲಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಜಗತ್ತಿನಾದ್ಯಂತ ನೃತ್ಯ ಪ್ರದರ್ಶನ ನೀಡಿದ್ದಾರೆ. ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವುದು, ಅಶಕ್ತ ಕಲಾವಿದರಿಗೆ ನೆರವಾಗುವುದು ಮತ್ತು ಪರಿಸರ ರಕ್ಷಣೆಗೆ ಪ್ರೋತ್ಸಾಹ ಇದು ಅವರ ಶಾಲೆಯ ಮುಖ್ಯ ಉದ್ದೇಶ.
ಶೋಭನಾ ಅವರ ಮಾಯಾ ರಾವಣ-ಜಾಗತಿಕ ಮತ್ತು ಭಾರತೀಯ ಸಂಗೀತದ ಅಪೂರ್ವ ಮಿಶ್ರಣ ಹೊಂದಿರುವ ದೃಶ್ಯಕಾವ್ಯರೂಪಕ. ಎರಡೂವರೆ ವರ್ಷದಲ್ಲಿ ೫೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಸಂಗೀತ ಮತ್ತು ನೃತ್ಯದ ಮೂಲಕ ಪ್ರಕಟಗೊಳ್ಳುವ ಈ ವೈಭವದಲ್ಲಿ ರಾವಣನ ಪಾತ್ರ ಶೋಭನಾ ಅವರದ್ದು. ಈ ಕಥಾನಕದ ಇಂಗ್ಲಿಷ್ ವಿವರಣೆಯನ್ನು ನಾಸಿರುದ್ದೀನ್ ಷಾ, ಜಾಕಿ ಶ್ರಾಫ್, ಮಿಲಿಂದ್ ಸೋಮನ್, ಸುಹಾಸಿನಿ, ರೇವತಿ, ರೋಹಿಣಿ, ಟಬು, ಸಮೀರ್ ಸೋನಿ ಮತ್ತು ಮೋಹನ್‌ಲಾಲ್ ಧ್ವನಿ ನೀಡಿದ್ದಾರೆ. ಇಂತಹ ಶೋಭನಾ ಇತ್ತೀಚೆಗೆ ಮಿಜಾರಿನ ಎಡಪದವಿನಲ್ಲಿ ನಡೆದ ಭೂತನಾಥೇಶ್ವರ ಕ್ರೀಡೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ನೃತ್ಯ ಪ್ರದರ್ಶನದ ನಂತರ ಲವಲವಿಕೆಯ ಜತೆಯಲ್ಲಿ ಶೋಭನಾ ಚಿಟ್ ಚಾಟ್ ಮಾಡಿದ್ದಾರೆ. ಓವರ್ ಟು ಶೋಭನಾ.
* ಶೋಭನಾ ಪದದ ಅರ್ಥವೇನು?
- ಶೋಭನಾ ಎನ್ನುವುದು ದೇವಿ ಪಾರ್ವತಿಯ ಮತ್ತೊಂದು ಹೆಸರು. ಮನೆಗೆ ಶೋಭೆ ತರುವ ಹುಡುಗಿ ಶೋಭನಾ ಎನ್ನಬಹುದು.
* ಸಿನ್ಮಾ ಮತ್ತು ಭರತನಾಟ್ಯ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡ್ತೀರಾ..?
-- ಒಂದ್ ಕಾಲದಲ್ಲಿ ಎರಡು ನನ್ನ ಕಣ್ಣಾಗಿತ್ತು. ಈಗ ಸಿನ್ಮಾ ಕಡಿಮೆ ಮಾಡಿದ್ದೇನೆ. ನೃತ್ಯಕ್ಕೆ ಜಾಸ್ತಿ ಮಹತ್ವ ಬಂದಿದೆ.
* ‘ಮಣಿಚಿತ್ರತ್ತಾಳ್’ ನಂತರ ‘ನಾಗವಲ್ಲಿ’ಯ ಪಾತ್ರ ಮಾಡಿಲ್ಲ ಯಾಕೆ?
-ನನಗೆ ತುಂಬಾ ಇಷ್ಟವಾದ ಪಾತ್ರ ‘ನಾಗವಲ್ಲಿ’ . ನಂತರ ಬೇರೆ ಭಾಷೆಯಲ್ಲಿ ಬಂದ ಚಿತ್ರದ ನಿರ್ದೇಶಕರು ನನಗೆ ಆಫರ್ ಕೊಟ್ಟಿರಲಿಲ್ಲ. ಕೊಟ್ಟಿದ್ದಾರೆ ನಂತರ ನಾಗವಲ್ಲಿಯಾಗುತ್ತಿದ್ದೆ.
* ನಾಗವಲ್ಲಿಯ ಪಾತ್ರ ತುಂಬಾನೇ ಡೇಂಜರಸ್ ಅಂತೆ ?
- ನಾಗವಲ್ಲಿ ಸಿನ್ಮಾದ ಒಂದು ಪಾತ್ರವಷ್ಟೇ. ಉಳಿದ ಯಾವುದೇ ವಿಚಾರ ನನಗೆ ಗೊತ್ತಿಲ್ಲ. ಕೆಲವರಿಗೆ ಅದೊಂದು ಡೇಂಜರಸ್ ಪಾತ್ರ ಅನ್ನಿಸಿರಬಹುದು. ನನಗೆ ಅದು ಚಾಲೇಂಜಿಂಗ್ ಪಾತ್ರ ಅನ್ನಿಸಿತ್ತು.
*‘ಮಾಯಾ ರಾವಣ್’ ಕಲ್ಪನೆ ಹೇಗೆ ಬಂತು ?
- ಬಾಲ್ಯದಲ್ಲಿ ರಾಮಾಯಣದ ಬಗ್ಗೆ ಬಹಳ ಕುತೂಹಲ. ಜತೆಗೆ ರಾವಣ ಪಾತ್ರ ಕೂಡ ರಾಮನಿಗಿಂತ ಜಾಸ್ತಿ ಇಷ್ಟವಾಗುತ್ತಿತ್ತು. ನೃತ್ಯದಲ್ಲಿ ರಾಮಾಯಣ ಭಾಗವನ್ನು ಪಡಿಮೂಡಿಸಿದರೆ ಹೇಗೆ ಎನ್ನುವ ಯೋಚನೆಯ ಮುಂದೆ ‘ಮಾಯಾ ರಾವಣ್ ’ ಹುಟ್ಟಿಕೊಂಡಿತ್ತು. ಬಾಲಿವುಡ್‌ನ ಬಹಳ ಸ್ನೇಹಿತರು ಈ ಕಲ್ಪನೆಗೆ ಸಾಥ್ ನೀಡಿದ್ದಾರೆ.
* ಕರಾವಳಿ ಜನ, ಸಂಸ್ಕೃತಿ, ಕಲೆ ಹೇಗೆನ್ನಿಸಿತು ?
- ಇದು ಕರಾವಳಿ ತೀರದ ಊರಿಗೆ ಎರಡನೇ ಭೇಟಿ. ನಾನು ಮಲಯಾಳಿ ಕರಾವಳಿ ನನ್ನ ಮನೆ ಇದ್ದಾಗೆ. ಇಲ್ಲಿನ ಜನ, ಸಂಸ್ಕೃತಿ, ಕಲೆ ಇಷ್ಟವಾಯಿತು. ಅವಕಾಶ ಕೊಟ್ಟರೆ ಮತ್ತೊಂದು ಬಾರಿ ಬರುತ್ತೇನೆ.
* ‘ಕಲಾರ್ಪಣ’ ಸಂಸ್ಥೆಯ ಬಗ್ಗೆ ಏನೂ ಹೇಳುತ್ತೀರಿ?
- ಅದು ನನ್ನ ಮತ್ತೊಂದು ಕನಸ್ಸು. ಈಗಾಗಲೇ ನಾನಾ ರಾಜ್ಯಗಳ ೯೦ ವಿದ್ಯಾರ್ಥಿಗಳು ‘ಕಲಾರ್ಪಣ’ ಸಂಸ್ಥೆಯ ಅಡಿಯಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. ಬಹಳಷ್ಟು ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಎಲ್ಲರೂ ಬಹಳ ಶ್ರೀಮಂತರಲ್ಲ. ಆದರೆ ಒಳ್ಳೆಯ ಪ್ರತಿಭಾವಂತರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳಕಿಗೆ ತರೋದು ನನ್ನ ಹಾಗೂ ಸಂಸ್ಥೆಯ ಮುಖ್ಯ ಉದ್ದೇಶ.
* ಚಿತ್ರ ನಾಯಕಿಯರು ನಿವೃತ್ತಿಯ ನಂತರ ಜಾಸ್ತಿ ಭರತನಾಟ್ಯಕ್ಕೆ ಬರುತ್ತಾರಲ್ಲ?
- ಹಾಗೇನೂ ಇಲ್ಲ. ಕೆಲವರು ಇರಬಹುದು. ಕ್ಲಾಸಿಕಲ್ ನೃತ್ಯ ಬಹಳಷ್ಟು ನಾಯಕಿಯರ ಬದುಕು ರೂಪಿಸಿದೆ. ನಿವೃತ್ತಿಯ ನಂತರ ನಾಯಕಿಯರು ಭರತನಾಟ್ಯವನ್ನು ವೃತ್ತಿಯಾಗಿ ಪರಿಗಣಿಸಿರಬಹುದು.

ಭ್ರಷ್ಟಚಾರದ ವಿರುದ್ಧ ಪ್ರಕಾಶಣ್ಣನ ಪಂಚ್


ಜನಲೋಕಪಾಲ್ ವಿಧೇಯಕ್ಕಾಗಿ ಸಿರೀಯಸ್ ಆಗಿ ದುಡಿಯುತ್ತಿರುವ ‘ಅಣ್ಣಾ ಹಜಾರೆ ’ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಹಳ ಗೊಂದಲ ಮೂಡಿಸಿದ್ದು ಮಾತ್ರ ನಿಜ. ‘ಗಾಂಜಿ ಬದುಕಿದ್ದಾರೆ ಅವರು ಕೂಡ ಭ್ರಷ್ಟಚಾರಕ್ಕೆ ಗುರಿಯಾಗುತ್ತಿದ್ದರು’ ಎನ್ನುವ ಹೇಳಿಕೆ ನೀಡಿದ ಕುಮಾರಸ್ವಾಮಿ ಅಣ್ಣಾ ಹಜಾರೆಗೆ ಗೇಲಿ ಮಾಡಿದ್ದಾರೆ ಎಂದು ಸಿರೀಯಸ್ ಆಗಿ ಯೋಚಿಸಿದ ಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಕಾರ್ಟೂನ್‌ವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಕುಮಾರಣ್ಣ ಹೇಳಿಕೆ ತೀವ್ರತೆ ಹಾಗೂ ಅಣ್ಣಾ ಹಜಾರೆ ಅವರ ವ್ಯಕ್ತಿತ್ವ ಎರಡು ಈ ವ್ಯಂಗ್ಯಚಿತ್ರದಲ್ಲಿ ಮೂಡಿ ಬಂದಿದೆ. ಕಾರ್ಟೂನ್ ನೋಡಿ ನಗುವ ಬದಲು ಒಂದ್ ಸಾರಿ ಭ್ರಷ್ಟಚಾರದ ವಿರುದ್ಧ ಕೈ ಎತ್ತಿ ಎಂದು ಪ್ರಕಾಶಣ್ಣ ತಮ್ಮ ಕಾರ್ಟೂನ್ ಮೂಲಕ ಜಾಗೃತಿ ಮಾಡುತ್ತಿದ್ದಾರೆ.

ಸ್ಟೀವನ್ ರೇಗೊ, ದಾರಂದಕುಕ್ಕು