Friday, February 15, 2013

ಬದಲಾವಣೆಯ ಬಿರುಗಾಳಿ ಪೋಪ್ ಬೆನೆಡಿಕ್ಟ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಪೋಪ್ ಬೆನೆಡಿಕ್ಟ್ ೧೬ ತಮ್ಮ ಪೋಪ್ ಪದವಿಗೆ ರಾಜೀನಾಮೆ ನೀಡಿದ ಘಟನೆ ಬರೀ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರವಲ್ಲ ವಿಶ್ವದ ಪ್ರಮುಖ ಧರ್ಮಗಳ ಮುಖಂಡರಿಗೂ ಶಾಕಿಂಗ್ ಸುದ್ದಿ. ವಿಶ್ವದಲ್ಲಿರುವ ೧.೫ ಮಿಲಿಯನ್ ರೋಮನ್ ಕ್ಯಾತೋಲಿಕರಿಗೆ ಪೋಪ್ ರಾಜೀನಾಮೆಯ ವಿಚಾರ ಅರಗಿಸಿಕೊಳ್ಳಲಾಗದ ಕಟು ಸತ್ಯ. ಕ್ರೈಸ್ತ ಧರ್ಮ ಹಾಗೂ ಚರ್ಚ್‌ಗಳಲ್ಲಿ ಎಲ್ಲ ವಿಚಾರಗಳಿಗೂ ಪೋಪ್ ಅಂತಿಮ. ಅಂತವರು ರಾಜೀನಾಮೆ ಯಾರಿಗೆ ಕೊಡಬೇಕು ಹಾಗೂ ಅದನ್ನು ಸ್ವೀಕಾರ ಮಾಡುವವರು ಯಾರು ಎನ್ನುವ ಗೊಂದಲ ನಿರ್ಮಾಣವಾಗಿತ್ತು. ಆದರೆ ರೋಮನ್ ಕ್ಯಾತೋಲಿಕ್( ಆರ್‌ಸಿ)ಯಲ್ಲಿರುವ ಕೋಡ್ ಆಫ್ ಕ್ಯಾನೋನ್ ಲಾದಲ್ಲಿ ತಿಳಿಸಿರುವಂತೆ ಪೋಪ್ ನಿರ್ಭಯವಾಗಿ ಯಾವುದೇ ಅಡೆತಡೆಗಳಿಗೆ ಬಲಿಯಾಗದೇ ಸಮುದಾಯದ ಮುಂದೆ ಬಂದು ತಾನು ಪೋಪ್ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದರೆ ಸಾಕು. ಅದುವೇ ರಾಜೀನಾಮೆಗೆ ಇರುವ ಸೂತ್ರ ಎನ್ನುವುದು ಕ್ಯಾನೋನ್ ಲಾದಲ್ಲಿ ತಿಳಿಸಲಾಗಿದೆ. ಈಗಾಗಲೇ ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಸರಿಸುಮಾರು ೧೦ಮಂದಿ ಪೋಪ್‌ಗಳು ರಾಜೀನಾಮೆ ನೀಡಿದ್ದಾರೆ. ೬೦೦ ವರ್ಷಗಳ ಹಿಂದೆ ಪೋಪ್ ಗ್ರೆಗೋರಿ ೧೨ ಅವರ ರಾಜೀನಾಮೆಯ ನಂತರ ಇಂತಹ ಬೆಳವಣಿಗೆ ಪೋಪ್ ಬೆನೆಡಿಕ್ಟ್ ೧೬ರ ರಾಜೀನಾಮೆಯ ಮೂಲಕ ಮತ್ತೆ ನಡೆದಿದೆ. ಈ ಹಿಂದಿನ ಪೋಪ್‌ಗಳು ಅಂತರಿಕ ಕಲಹ, ರಾಜರ ಒತ್ತಡ, ರಾಜಕೀಯ ತಿರುವು, ಯುದ್ಧ ಮುಂತಾದ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದರು. ಆದರೆ ಪೋಪ್ ಬೆನೆಡಿಕ್ಟ್ ಮಾತ್ರ ತಮ್ಮ ದೈಹಿಕ ರೋಗ್ಯದ ಕುರಿತಾಗಿ ರಾಜೀನಾಮೆ ನೀಡಿದ್ದಾರೆ. ಕ್ರೈಸ್ತ ಧರ್ಮದ ಇತಿಹಾಸದಲ್ಲಿಯೇ ಪೋಪ್ ಬೆನೆಡಿಕ್ಟ್ ೧೬ ಭಿನ್ನವಾಗಿ ನಿಲ್ಲುತ್ತಾರೆ. ಅತೀ ಹಿರಿಯ ವಯಸ್ಸಿನವರು ಪೋಪ್ ಸ್ಥಾನಕ್ಕೆ ಬಂದದ್ದು, ಸಲಿಂಗ ಕಾಮ, ಕೃತಕ ಗರ್ಭ ಧಾರಣೆ, ಗಂಡು- ಹೆಣ್ಣಿನ ನಡುವೆ ಲೈಂಗಿಕತೆ ಹಾಗೂ ಕ್ರೈಸ್ತ ಧರ್ಮಗುರುಗಳು ಲೈಂಗಿಕ ಚಟುವಟಿಕೆಗಾಗಿ ಮಕ್ಕಳನ್ನು ದುರ್ಬಳಕೆ ಮಾಡುವ ಕುರಿತು ಪೋಪ್ ಬೆನೆಡಿಕ್ಟ್ ಮುಕ್ತವಾಗಿ ಮಾತನಾಡುವ ಜತೆಯಲ್ಲಿ ಆಧುನಿಕ ತಂತ್ರಜ್ಞಾನದ ಕುರಿತು ನೀಡಿದ ಒತ್ತು ಎಲ್ಲವೂ ಪೋಪ್ ಬೆನೆಡಿಕ್ಟ್ ಅವರನ್ನು ಭಿನ್ನತೆ ಸಾಲಿಗೆ ಸೇರಿಸುತ್ತದೆ. ಕ್ರೈಸ್ತ ಧರ್ಮದಲ್ಲಿ ಪೋಪ್ ಹುದ್ದೆಗೆ ತನ್ನದೇ ಆದ ಮಹತ್ವವಿದೆ. ಮುಖ್ಯವಾಗಿ ಪೋಪ್ ಹುದ್ದೆಯಲ್ಲಿ ಇರುವವರು ವ್ಯಾಟಿಕನ್ ಸಿಟಿಯ ಮುಖ್ಯಸ್ಥನಾಗುವ ಜತೆಯಲ್ಲಿ ವಿಶ್ವದ ಕ್ರೈಸ್ತ ಚರ್ಚ್‌ಗಳ ಅಧಿಪತಿಯಾಗುವ ಅವಕಾಶ ಲಭ್ಯವಾಗುತ್ತದೆ. ಅಂದಹಾಗೆ ಪೋಪ್ ಬೆನೆಡಿಕ್ಟ್ ೧೬ ಅವರ ಮೂಲ ಹೆಸರು ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್. ಜರ್ಮನಿಯ ಬವೇರಿಯಾದಲ್ಲಿ ರೆಟ್‌ಜಿಂಗರ್ ೧೬ ಏಪ್ರಿಲ್ ೧೯೨೭ರಲ್ಲಿ ಜನಿಸಿದವರು. ಕ್ರೈಸ್ತರ ಪಾಲಿಗೆ ಈ ತಿಂಗಳು ಪವಿತ್ರ ಎನ್ನಲಾಗುತ್ತದೆ. ಜರ್ಮನಿಯ ಪೊಲೀಸ್ ಅಧಿಕಾರಿಯಾಗಿದ್ದ ಜೋಸಫ್ ರೆಟ್‌ಜಿಂಗರ್ ಹಾಗೂ ಮರಿಯಾ ರೆಟ್‌ಜಿಂಗರ್ ಅವರ ಮೂವರು ಮಕ್ಕಳಲ್ಲಿ ಜೋಸೆಫ್ ಅಲೋಶಿಯಸ್ ರೆಟ್‌ಜಿಂಗರ್ ಹಿರಿಯ ಪುತ್ರ ಉಳಿದಂತೆ ಜಾರ್ಜ್ ರೆಟ್‌ಜಿಂಗರ್ ಕ್ರೈಸ್ತ ಧರ್ಮಗುರು ಹಾಗೂ ಅವಿವಾಹಿತೆ ಸಹೋದರಿ ಮರಿಯಾ ರೆಟ್‌ಜಿಂಗರ್ ಹಿರಿಯ ಸಹೋದರ ಜೋಸೆಫ್ ಅಲೋಶಿಯಸ್ ರೆಟ್‌ಜಿಂಗರ್ ಅವರ ಆಶ್ರಯದಲ್ಲಿ ಕೊನೆ ಉಸಿರು ಎಳೆದಿದ್ದಾರೆ. ೫ರ ಹರೆಯದಲ್ಲಿ ಅಲೋಶಿಯಸ್ ರೆಟ್‌ಜಿಂಗರ್ ಇತರ ಮಕ್ಕಳೊಂದಿಗೆ ಮ್ಯೂನಿಚ್‌ಗೆ ಬಂದಿದ್ದ ಕಾರ್ಡಿನಲ್‌ಗಳಿಗೆ ಹೂಗುಚ್ಛ ನೀಡುವ ತಂಡದಲ್ಲಿದ್ದರು. ಈ ಸಮಯದಲ್ಲಿ ಕಾರ್ಡಿನಲ್ ಒಬ್ಬರಿಂದ ಆಕರ್ಷಣೆಗೆ ಒಳಗಾದ ಅಲೋಶಿಯಸ್ ರೆಟ್‌ಜಿಂಗರ್ ತಮಗೂ ಕಾರ್ಡಿನಲ್ ಆಗಬೇಕು ಎಂದು ಕನಸ್ಸು ಕಂಡಿದ್ದರು. ಈ ಬಳಿಕ ಹೈಸ್ಕೂಲ್ ಶಿಕ್ಷಣ ಪೂರೈಸುತ್ತಿದ್ದಾಗ ಜರ್ಮನಿಯ ಹಿಟ್ಲರ್ ಯೂತ್ ಕ್ಲಬ್‌ನಲ್ಲಿ ಸಕ್ರೀಯ ಸದಸ್ಯನಾಗಿ ಹೋದ ಅಲೋಶಿಯಸ್ ರೆಟ್‌ಜಿಂಗರ್ ತಮ್ಮ ಸಹೋದರನಿಗೆ ನಾಜಿಗಳು ನೀಡಿದ ಕಿರುಕುಳ ಬೇಸತ್ತು ಹಿಟ್ಲರ್ ಯೂತ್ ಕ್ಲಬ್‌ಗೆ ರಾಜೀನಾಮೆ ನೀಡಿದ್ದರು. ೨೯ ಜೂನ್ ೧೯೫೧ರಲ್ಲಿ ಕ್ರೈಸ್ತ ಧರ್ಮಗುರುವಾಗಿ ದೀಕ್ಷೆ ಪಡೆದುಕೊಂಡ ಅಲೋಶಿಯಸ್ ರೆಟ್‌ಜಿಂಗರ್ ನಂತರ ನಿಧಾನವಾಗಿ ಕ್ರೈಸ್ತ ಚರ್ಚ್‌ಗಳಲ್ಲಿ ನಾನಾ ಹುದ್ದೆಯನ್ನು ಆಲಂಕರಿಸಿಕೊಂಡು ಮುನ್ನಡೆಯುತ್ತಾ ಹೋದರು. ೧೯೫೮ರಲ್ಲಿ ಮತ ಧರ್ಮಶಾಸ್ತ್ರಗಳಲ್ಲಿ ವಿಶೇಷ ಪರಿಣತಿ ಪಡೆದುಕೊಂಡು ನಂತರ ಇದೇ ವಿಚಾರದಲ್ಲಿ ಪ್ರಾಧ್ಯಾಪಕರಾಗಿ ಜರ್ಮನಿಯ ನಾನಾ ಪ್ರತಿಷ್ಠಿತ ವಿವಿಗಳಲ್ಲಿ ಮತ ಧರ್ಮಶಾಸ್ತ್ರವನ್ನು ಭೋದಿಸ ತೊಡಗಿದರು. ವಿಶ್ವದ ಖ್ಯಾತ ರೆಗೆನ್ಸ್‌ಬರ್ಗ್ ವಿವಿಯಲ್ಲಿ ಮತಧರ್ಮಶಾಸ್ತ್ರದ ಕುರಿತು ಕೊನೆಯದಾಗಿ ಉಪನ್ಯಾಸ ನೀಡಿದರು. ಇದೇ ವಿವಿಯಲ್ಲಿ ಉಪಾಧ್ಯಕ್ಷನ ಸ್ಥಾನದಲ್ಲಿ ನಿಂತು ದುಡಿದರು(೧೯೭೬-೭೭) ಈ ಬಳಿಕ ಮ್ಯೂನಿಚ್‌ಗೆ ಅರ್ಚ್ ಬಿಷಪ್‌ರಾಗಿ ನಿಯುಕ್ತಿಗೊಂಡರು. ೧೯೭೭ರಲ್ಲಿ ಪೋಪ್ ಜೋನ್ ಪೌಲ್ ೨ ಅವರಿಗೆ ಆಪ್ತರಾಗಿದ್ದ ಅಲೋಶಿಯಸ್ ರೆಟ್‌ಜಿಂಗರ್ ಕಾರ್ಡಿನಲ್ ಆಗಿ ನೇಮಕ ಗೊಂಡರು. ಕ್ರೈಸ್ತ ಧರ್ಮದಲ್ಲಿ ಅತೀ ಹೆಚ್ಚು ಕಾಲ ಕಾರ್ಡಿನಲ್ ಆಗಿ ದುಡಿದವರಲ್ಲಿ ಅಲೋಶಿಯಸ್ ರೆಟ್‌ಜಿಂಗರ್ ಮೊದಲಿಗರು. ೨೦೦೨ರ ತನಕ ಕಾರ್ಡಿನಲ್ ಕಾಲೇಜುಗಳ ಸಬ್-ಡೀನ್ ಸ್ಥಾನದಲ್ಲಿದ್ದ ಅಲೋಶಿಯಸ್ ರೆಟ್‌ಜಿಂಗರ್ ನಂತರ ಡೀನ್ ಸ್ಥಾನಕ್ಕೆ ಬಂದು ನಿಂತರು. ಪೋಪ್ ಪೌಲ್ ೪ನೇ ಅವರ ನಂತರ ಅಲೋಶಿಯಸ್ ರೆಟ್‌ಜಿಂಗರ್ ಮೊತ್ತ ಮೊದಲ ಬಾರಿಗೆ ಡೀನ್ ಸ್ಥಾನದಲ್ಲಿದ್ದ ಪೋಪ್ ಎಂದು ಗುರುತಿಸಲಾಗುತ್ತದೆ. ರೋಮ್ ಸಾಮ್ರಾಜ್ಯದಲ್ಲಿ ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್ ಅತ್ಯಂತ ಪ್ರಭಾವಶಾಲಿ ಧರ್ಮಗುರು ಎಂದು ಗುರುತಿಸಿಕೊಂಡಿದ್ದರು. ಕಾರ್ಡಿನಲ್ ಕಾಲೇಜುಗಳ ಡೀನ್ ಸ್ಥಾನದಲ್ಲಿದ್ದ ಅಲೋಶಿಯಸ್ ರೆಟ್‌ಜಿಂಗರ್ ಪೋಪ್ ಜೋನ್ ಪೌಲ್ ೨ನೇ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಪೋಪ್ ಜೋನ್ ಪೌಲ್-೨ ನಿಧನರಾದಾಗ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ತಕ್ಷಣವೇ ಕಾರ್ಡಿನಲ್‌ಗಳನ್ನು ಜತೆ ಸೇರಿಸಿಕೊಂಡು ಸಮಾವೇಶ ಕರೆದು ಒಂದು ದಿನ ಉಪವಾಸ ಮಾಡುವಂತೆ ಕರೆ ನೀಡಿದ್ದರು. ರೋಮ್ ಸಾಮ್ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಅಲೋಶಿಯಸ್ ರೆಟ್‌ಜಿಂಗರ್ ಕಾರ್ಡಿನಲ್ ಸ್ಥಾನದಲ್ಲಿದ್ದುಕೊಂಡು ವಿಶೇಷ ಗೌರವ, ಪ್ರಭಾವವನ್ನು ಬೆಳೆಸಿಕೊಂಡಿದ್ದರು. ಜರ್ಮನಿ ಮೂಲದವರಾಗಿದ್ದ ಅವರು ಫ್ರೆಂಚ್ ಮತ್ತು ಇಟಲಿ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಲ್ಯಾಟಿನ್ ಸೇರಿದಂತೆ ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ಭಾಷೆಗಳಲ್ಲೂ ಪ್ರೌಢಿಮೆ ಬೆಳೆಸಿಕೊಂಡಿದ್ದರು. ಪೋರ್ಚ್ ಗೀಸ್ ಭಾಷೆಯಲ್ಲೂ ಜ್ಞಾನ ಬೆಳೆಸಿದ್ದರು. ಹಳೆಯ ಗ್ರೀಕ್ ಹಾಗೂ ಹಿಬ್ರೂ ಭಾಷೆಯನ್ನು ಬರೆಯಲು ಹಾಗೂ ಓದಲು ಬಲ್ಲವರಾಗಿದ್ದರು. ಅನೇಕ ವೈಜ್ಞಾನಿಕ ಅಕಾಡೆಮಿಗಳಲ್ಲಿ ಸದಸ್ಯರಾಗಿ ದುಡಿದಿದ್ದರು. ಸಂಗೀತದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಅಲೋಶಿಯಸ್ ರೆಟ್‌ಜಿಂಗರ್ ಪಿಯೋನೋ ನುಡಿಸುವಿಕೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಸಾಧಿಸಿದ್ದರು. ನಾನಾ ರೀತಿಯ ಪಿಯೋನೋಗಳ ಸಂಗ್ರಹ ಹಾಗೂ ದೇಶದ ನಾನಾ ಕಡೆಯ ಬೆಕ್ಕುಗಳನ್ನು ಬೆಳೆಸುವಲ್ಲಿಯೂ ಕೂಡ ಅವರು ತಮ್ಮ ಗಮನ ಕೇಂದ್ರಿತವಾಗಿತ್ತು. ದ್ವಿತೀಯ ವ್ಯಾಟಿಕನ್ ಮಹಾಸಭೆಯಲ್ಲಿ ಅಲೋಶಿಯಸ್ ರೆಟ್‌ಜಿಂಗರ್ ಸಕ್ರೀಯ ಸದಸ್ಯರಾಗಿದ್ದವರು. ಇದೇ ಮಹಾಸಭೆಯಲ್ಲಿ ಕ್ರೈಸ್ತ ಧರ್ಮದ ಪ್ರಮುಖ ಕಾನೂನುಗಳ ಗ್ರಂಥ: ‘ದೀ ಕೋಡ್ ಆಫ್ ಕ್ಯಾನೋನ್ ಲಾ’ವನ್ನು ಹೊಸದಾಗಿ ತಿದ್ದುಪಡಿ ತಂದು ಮತ್ತಷ್ಟೂ ಬಲಿಷ್ಠ ಗೊಳಿಸುವಲ್ಲಿ ಹಾಗೂ ಕ್ರೈಸ್ತ ಚರ್ಚ್‌ಗಳ ಅಧಿಕಾರ, ಸಮಸ್ಯೆ, ಸವಾಲಿಗಳಿಗೆ ಉತ್ತರ ನೀಡುವ ಕೈ ಗನ್ನಡಿಯಂತೆ ಈ ಕಾನೂನು ಸಫಲವಾಗಲು ಅಲೋಶಿಯಸ್ ರೆಟ್‌ಜಿಂಗರ್ ದುಡಿದಿದ್ದರು. ಸಾಹಿತ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ವಿಶಿಷ್ಟ ಪ್ರತಿಭೆ ಹೊಂದಿದ್ದ ಅಲೋಶಿಯಸ್ ರೆಟ್‌ಜಿಂಗರ್ ೧೯೬೯ರಲ್ಲಿ ‘ಕೋಮಿನೋ’ ಎನ್ನುವ ಆಧ್ಯಾತ್ಮಿಕ ಪತ್ರಿಕೆಯನ್ನು ಹುಟ್ಟುಹಾಕಿದರು. ಈ ಪತ್ರಿಕೆ ಇಂದಿಗೂ ವಿಶ್ವದ ೧೭ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ಅದರಲ್ಲೂ ಇಂಗ್ಲೀಷ್, ಸ್ಪ್ಯಾನಿಷ್ ಹಾಗೂ ಜರ್ಮನಿ ಭಾಷೆಯಲ್ಲಿ ಈ ಆಧ್ಯಾತ್ಮಿಕ ಪತ್ರಿಕೆ ತನ್ನದೇ ಪ್ರಾಬಲ್ಯವನ್ನು ಹೊಂದಿದೆ. ವಿಶ್ವದ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಚೀನಾದ ಹನ್ಸ್ ಕೂಂಗ್, ಎಡ್ವರ್ಡ್ ಸಿ, ಹೆನ್ರಿ ಡೀ ಲ್ಯೂಬ್ಯಕ್, ವಾಲ್ಟರ್ ಕೆಸ್ಪರ್ ಮೊದಲಾದವರು ತಮ್ಮ ಬರವಣಿಗೆಯನ್ನು ‘ಕೋಮಿನೋ’ಗೆ ನೀಡುತ್ತಿದ್ದರು. ೨೦೦೫ರ ಜನವರಿ ೨ರಂದು ಟೈಮ್ ಮ್ಯಾಗಜೀನ್ ವ್ಯಾಟಿಕನ್ ಅನಾಮಧೇಯ ಮೂಲವೊಂದರ ಆಧಾರದಲ್ಲಿ ಪೋಪ್ ಜಾನ್ ಪೌಲ್ ೨ರ ಉತ್ತರಾಧಿಕಾರಿಯಾಗಿ ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್ ನೇಮಕವಾಗುತ್ತಾರೆ ಎಂದು ಭವಿಷ್ಯ ನುಡಿದಿತ್ತು. ಪೋಪ್ ಜೋನ್ ಪೌಲ್ ನಿಧನರಾಗಲಿ ಅಥವಾ ಪೋಪ್ ಪದವಿಯಿಂದ ಇಳಿದರು ಕೂಡ ತಮ್ಮ ಉತ್ತರಾಧಿಕಾರಿಯಾಗಿ ಅಲೋಶಿಯಸ್ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಫೈನಾನ್ಸಿಯಲ್ ಟೈಮ್ ಕೂಡ ಅಲೋಶಿಯಸ್ ರೆಟ್‌ಜಿಂಗರ್ ಅವರನ್ನು ಬೆಂಬಲಿಸಿಕೊಂಡು ಲೇಖನ ಬರೆದಿತ್ತು. ಮತ್ತೊಂದು ಲೇಖನದಲ್ಲಿ ವಿಶ್ವದ ನೂರು ಮಂದಿ ಪ್ರಭಾವಿ ವ್ಯಕ್ತಿಗಳಲ್ಲಿ ಅಲೋಶಿಯಸ್ ರೆಟ್‌ಜಿಂಗರ್‌ಗೂ ಒಂದು ಸ್ಥಾನ ನೀಡಿತ್ತು. ೨೦೦೫ರಲ್ಲಿ ಏಪ್ರಿಲ್ ತಿಂಗಳಲ್ಲಿ ಪೋಪ್ ಹುದ್ದೆಗೆ ಚುನಾವಣೆ ನಡೆಯಿತು. ೧೯ ಏಪ್ರಿಲ್ ೨೦೦೫ರಲ್ಲಿ ಜೋಸೆಫ್ ಅಲೋಶಿಯಸ್ ರೆಟ್‌ಜಿಂಗರ್ ೨೬೫ನೇ ಪೋಪ್ ಆಗಿ ಅಧಿಕಾರ ಸ್ವೀಕಾರ ಮಾಡಿದರು. ತಮ್ಮ ಮೊದಲ ಭಾಷಣದಲ್ಲಿ ಇಟಲಿ, ಫ್ರೆಂಚ್, ಸ್ಪ್ಯಾನಿಷ್, ಜರ್ಮನ್, ಇಂಗ್ಲೀಷ್ ಭಾಷೆಗಳನ್ನು ಬಳಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕ್ರೈಸ್ತ ಸಮುದಾಯದ ಜನರನ್ನು ಸೆಳೆದುಕೊಂಡರು. ಪೋಪ್ ಆಗಿ ಅಧಿಕಾರ ಸ್ವೀಕರಿಸಿದರ ನಂತರ ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್ ‘ಬೆನೆಡಿಕ್ಟ್ ’ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಲ್ಯಾಟಿನ್ ಭಾಷೆಯಲ್ಲಿ ಬೆನೆಡಿಕ್ಟ್ ಎಂದರೆ ‘ದೇವರ ಅನುಗ್ರಹ’ ಪಡೆದವರು ಎಂದಾರ್ಥ. ಇವರ ೮ ವರ್ಷದ ಅಧಿಕಾರದ ಅವಧಿಯಲ್ಲಿ ವಿಶ್ವದ ನಾನಾ ಮಂದಿಗೆ ಸಂತ ಪದವಿಯಿಂದ ಉನ್ನತಿಕರಿಸಿದ್ದಾರೆ. ‘ಗಾಡ್ ಇಸ್ ಲವ್’ ‘ಸೇವುಡ್ ಬೈ ಹೋಪ್’ ಹಾಗೂ ‘ಲವ್ ಇನ್ ಟ್ರೂತ್’ ಎನ್ನುವ ಕೃತಿಗಳನ್ನು ಹೊರ ತಂದಿರುವ ಪೋಪ್ ಬೆನೆಡಿಕ್ಟ್ ೧೬ ತಮ್ಮ ವಿಚಾರಧಾರೆಗಳ ಮೂಲಕ ಸಾಕಷ್ಟು ಮಂದಿಯನ್ನು ಆಕರ್ಷಿಸಿದರೆ ಮತ್ತೊಂದೆಡೆ ಸಾಕಷ್ಟು ವಿವಾದಗಳಿಗೂ ಗುರಿಯಾಗಿದ್ದಾರೆ. ಪೋಪ್ ಬೆನೆಡಿಕ್ಟ್ ೧೬ ಕ್ರೈಸ್ತ ಧರ್ಮದ ಜತೆಯಲ್ಲಿ ಇತರ ಧರ್ಮಗಳ ಮುಖಂಡರ ಜತೆಯಲ್ಲಿ ಒಡನಾಟ ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಯೆಹೂದಿ ಧರ್ಮದ ಮುಖಂಡರ ಜತೆ ತೀರಾ ಹತ್ತಿರ ಒಡನಾಟ ಪೋಪ್‌ಗೆ ಇತ್ತು. ಅದೇ ರೀತಿ ಇಸ್ಲಾಂ ವಿದ್ವಾಂಸಕರನ್ನು ಹಾಗೂ ಕ್ರೈಸ್ತ ಮುಖಂಡರಿಗಾಗಿ ೨೦೦೯ರಲ್ಲಿ ಮಾರ್ಚ್ ೯ರಂದು ಸಮಾವೇಶವೊಂದನ್ನು ರೋಮ್‌ನಲ್ಲಿ ಪೋಪ್ ಹಮ್ಮಿಕೊಂಡಿದ್ದರು. ಈ ಸಮಾವೇಶದಲ್ಲಿ ಪೋಪ್ ಬೆನೆಡಿಕ್ಟ್ ನೀಡಿದ ಉಪನ್ಯಾಸವೊಂದು ಇಸ್ಲಾಂ ವಿದ್ವಾಂಸಕರನ್ನು ಕೆರಳಿಸಿತ್ತು. ಪೋಪ್ ಆಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದ ಬೆನೆಡಿಕ್ಟ್ ೧೬ ಅವರನ್ನು ಶುಭ ಹಾರೈಸಲು ದಲೈ ಲಾಮಾ ರೋಮ್‌ಗೆ ಬರುವುದನ್ನು ಗಮನಿಸಿದ ಚೀನಾ ಸರಕಾರ ತಮ್ಮ ರಾಜಕೀಯ ಶಕ್ತಿ ಬಳಸಿಕೊಂಡು ಈ ಪ್ರವಾಸವನ್ನು ರದ್ದು ಮಾಡುವಂತೆ ಮಾಡಿತ್ತು. ೨೦೦೮ರಲ್ಲಿ ಅಮೆರಿಕಕ್ಕೆ ಪ್ರವಾಸಕ್ಕೆ ಹೋದ ಪೋಪ್ ಅಲ್ಲಿ ಕ್ರೈಸ್ತ ಧರ್ಮಗುರುಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳನ್ನು ಖುದ್ದಾಗಿ ಭೇಟಿ ಮಾಡಿದ್ದರು. ಈ ವಿಚಾರ ಕ್ರೈಸ್ತ ಧರ್ಮ ಗುರುಗಳಾ ಕರಾಳ ಮುಖವನ್ನು ಅನಾವರಣ ಮಾಡಿತ್ತು. ಅಮೇರಿಕಾದಲ್ಲಿರುವ ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಕೃಷ್ಣಾನ ಪ್ರತಿನಿಧಿ ರಾಧಿಕಾ ರಮಣ್ ದಾಸ್ ಅವರ ಜತೆಯಲ್ಲಿ ಮಾತುಕತೆ ನಡೆಸಿದ ಪೋಪ್ ಬೆನೆಡಿಕ್ಟ್ ಗೆ ದಾಸ್ ಓಂ ಸಂಕೇತವನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಸ್ನೇಹವನ್ನು ಗಟ್ಟಿ ಮಾಡಿದ್ದರು. ಪೋಪ್ ಆಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ಮೂರು ವರ್ಷ ಬೆನೆಡಿಕ್ಟ್ ಬರೀ ಇಟಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಪ್ರವಾಸ ಮಾಡಿದ್ದರು. ಈ ಬಳಿಕ ಎರಡು ಬರೀ ಜರ್ಮನಿಗೆ, ಪೋಲ್ಯಾಂಡ್, ಸ್ಪೇನ್, ಟರ್ಕಿ ಭೇಟಿ ನೀಡಿದ್ದರು. ಅದರಲ್ಲೂ ರೇಗೆನ್ಸ್ ಬರ್ಗ್ ವಿವಿಯಲ್ಲಿ ಬೆನೆಡಿಕ್ಟ್ ಅವರು ನೀಡಿದ ಉಪನ್ಯಾಸವೊಂದು ಇಸ್ಲಾಂ ಧಾರ್ಮಿಕರನ್ನು ಮತ್ತಷ್ಟೂ ಕೆರೆಳಿಸಿತು. ವಿಶ್ವದ ತುಂಬಾ ನಾನಾ ಕಡೆ ಬೆನೆಡಿಕ್ಟ್ ವಿರುದ್ಧ ಪ್ರತಿಭಟನೆಗಳು ನಡೆಯಿತು. ಕೊನೆಗೆ ಬೆನೆಡಿಕ್ಟ್ ಕ್ಷಮೆಯಾಚಿಸುವ ಮೂಲಕ ಈ ವಿವಾದಕ್ಕೆ ತೆರೆಬಿತ್ತು. ೨೦೦೯ರಲ್ಲಿ ಆಫ್ರಿಕಾ ದೇಶಕ್ಕೆ ಭೇಟಿ ಪೋಪ್ ನೀಡಿದಾಗ ಲೈಂಗಿಕ ವರ್ತನೆಯೇ ಆಫ್ರಿಕಾದಲ್ಲಿರುವ ಏಡ್ಸ್‌ಗೆ ಮೂಲ ಉತ್ತರ ಎನ್ನುವ ಮೂಲಕ ಸಲಿಂಗ ಕಾಮದ ಪರವಾಗಿ ಪೋಪ್ ಮಾತನಾಡಿದ್ದು ಬಹಳಷ್ಟು ಮಂದಿಯನ್ನು ಕೆರಳಿಸಿತ್ತು. ಪೋಪ್ ಹುದ್ದೆಗೆ ಇದ್ದ ಉಡುಗೆ ತೊಡುಗೆಗಳಲ್ಲೂ ಮಹತ್ತರ ಬದಲಾವಣೆಗಳನ್ನು ಬೆನೆಡಿಕ್ಟ್ ೧೬ ಮಾಡಿದ್ದರು. ಈ ಮೊದಲು ಇಂತಹ ದೊಡ್ಡ ಬದಲಾವಣೆಯ ಕುರಿತು ಬರೀ ಚರ್ಚೆ ಮಾತ್ರ ನಡೆದಿತ್ತು. ಈ ಹಿಂದೆ ಪೋಪ್‌ಗಳು ಬಳಸುತ್ತಿದ್ದ ಕೆಂಪು ಬಣ್ಣದ ಶೂಗಳನ್ನು ಬೆನೆಡಿಕ್ಟ್ ಹಾಕಲು ನಿರಾಕರಿಸಿದರು. ಈ ಕಾರಣಕ್ಕೆ ಇಟಲಿಯ ಫ್ಯಾಶನ್ ಹೌಸ್‌ವೊಂದು ಪೋಪ್‌ಗಾಗಿ ವಿಶೇಷ ಮಾದರಿ ಶೂಗಳ ತಯಾರಿಕೆಗೆ ಗುತ್ತಿಗೆ ನೀಡಲಾಯಿತು. ಚಳಿಗಾಲದಲ್ಲಿ ಮಾತ್ರ ಪೋಪ್‌ಗಳು ಬಳಸುತ್ತಿದ್ದ ಕೆಂಪು ಬಣ್ಣದ ಹ್ಯಾಟ್‌ಗಳನ್ನು ಬೆನೆಡಿಕ್ಟ್ ಮತ್ತೇ ಚಾಲ್ತಿಗೆ ತಂದರು. ೨೦೦೫ರಲ್ಲಿಯೇ ಪೋಪ್ ಬೆನೆಡಿಕ್ಟ್ ತಮ್ಮ ಆರೋಗ್ಯ ಸಂಬಂಧ ವಿಚಾರದಲ್ಲಿ ಪೋಪ್ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಒಲವು ತೋರಿಸಿದ್ದರು. ಹ್ಯೂಮರೇಜ್ ಸ್ಟ್ರೋಕ್‌ನಿಂದಾಗಿ ಪೋಪ್ ತಮ್ಮ ಕಣ್ಣಿನ ದೃಷ್ಟಿಯನ್ನು ಕೊಂಚ ಕಳೆದುಕೊಂಡಿದ್ದರು. ಅವರ ದೇಹ ಸ್ಥಿತಿ ಕೂಡ ಆಗಾಗ ಕೈ ಕೊಡುತ್ತಿತ್ತು. ರೋಮನ್ ಕ್ಯಾತೋಲಿಕ್‌ರಿಂದ ಬಿಟ್ಟು ಹೋದ ಲೆಫೆಬ್ರೆ ಎನ್ನುವ ಸಮುದಾಯವನ್ನು ೨೦೦೯ರಲ್ಲಿ ಮತ್ತೆ ಕ್ರೈಸ್ತ ಸಮುದಾಯಕ್ಕೆ ಮರಳಿ ತಂದ ಕೆಲಸ ಬೆನೆಡಿಕ್ಟ್‌ನಿಂದ ನಡೆಯಿತು. ಇದರ ಜತೆಯಲ್ಲಿ ನಾಲ್ವರು ಲೆಫೆಬ್ರೆ ಬಿಷಪ್‌ರನ್ನು ಮತ್ತೆ ಆರ್‌ಸಿಗೆ ತಂದು ಕೂರಿಸಿದರು. ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಗೆ ಅಡುಗೆ ಮಾಡಿಕೊಡುತ್ತಿದ್ದ ಗೇಬ್ರಿಯೆಲ್ ವ್ಯಾಟಿಕನ್ ಸಿಟಿಯ ದಸ್ತಾವೇಜುಗಳನ್ನು ಇಟಲಿ ಮೂಲದ ಪತ್ರಕರ್ತನಿಗೆ ನೀಡುವ ಮೂಲಕ ವ್ಯಾಟಿಕನ್ ಸಿಟಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಮಾಹಿತಿ ರವಾನೆ ಮಾಡಿದ್ದ . ಈ ಪ್ರಕರಣವನ್ನು ‘ವ್ಯಾಟಿಲಿಕ್ಸ್’ ಎನ್ನಲಾಗುತ್ತದೆ. ಈ ವಿಚಾರದಿಂದ ಪೋಪ್ ಬೆನೆಡಿಕ್ಟ್ ಬಹಳಷ್ಟು ಘಾಸಿಗೊಂಡಿದ್ದರು. ಆದರೆ ಗೇಬ್ರಿಯೆಲ್‌ನ ಕೆಲಸವನ್ನು ಕ್ಷಮಿಸುವ ಮೂಲಕ ತನ್ನ ಪೋಪ್ ಉದಾರತೆಯನ್ನು ಮೆರೆದಿದ್ದರು. ಕುಟುಂಬ ಯೋಜನೆ ಹಾಗೂ ಏಡ್ಸ್ ರೋಗದ ಕುರಿತು ಪೋಪ್ ಬೆನೆಡಿಕ್ಟ್ ೧೬ ಮುಕ್ತವಾಗಿ ಮಾತಿಗೆ ಇಳಿದಿದ್ದರು. ಏಡ್ಸ್ ರೋಗ ನಿಯಂತ್ರಣ ಹಾಗೂ ಕುಟುಂಬ ಯೋಜನೆಗಾಗಿ ಕಾಂಡೋಮ್ ಬಳಸುವುದರಿಂದ ಇನ್ನಷ್ಟೂ ಇಂತಹ ಪ್ರಕರಣಗಳು ಹೆಚ್ಚುವ ಜತೆಯಲ್ಲಿ ಮುಕ್ತ ಲೈಂಗಿಕತೆಯನ್ನು ಬೆಂಬಲ ಸೂಚಿಸಿದಂತಾಗುತ್ತದೆ ಎನ್ನುವ ಮೂಲಕ ಪೋಪ್ ಬೆನೆಡಿಕ್ಟ್ ಕಾಂಡೋಮ್ ಕಂಪನಿಗಳ ವಿರೋಧದ ಜತೆಯಲ್ಲಿ ಅಂತಾರಾಷ್‌ರೀಯ ಮಟ್ಟದಲ್ಲೂ ತೀವ್ರ ಟೀಕೆಗೆ ಗುರಿಯಾಗಿದ್ದರು. ಚರ್ಚ್‌ಗಳಲ್ಲಿರುವ ಸಲಿಂಗಕಾಮತೆಯ ಕುರಿತು ಪೋಪ್ ಬೆನೆಡಿಕ್ಟ್ ೧೬ ಅದೊಂದು ಮಾನಸಿಕ ಅಸಮತೋಲನ ಕ್ರಿಯೆ. ಆದರೆ ಇಂತಹ ಕ್ರಿಯೆಯಲ್ಲಿರುವ ವ್ಯಕ್ತಿ ಮಾತ್ರ ಪಾಪಿ ಎನ್ನುವಂತಿಲ್ಲ ಎಂದಿದ್ದರು. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ವ್ಯಾಟಿಕನ್ ಸಿಟಿಯ ಮಾಧ್ಯಮ ಪ್ರತಿನಿಧಿ ಫಾ. ಫೆಡ್ರಿಕೋ ಲೊಂಬಾರ್ಡಿ ಪೋಪ್‌ನ ಹೇಳಿಕೆ ಕುರಿತು ಸ್ವಷ್ಟನೆ ನೀಡಬೇಕಾಗಿ ಬಂತು. ವಿಶ್ವದ ಆರ್ಥಿಕತೆಯ ಕುರಿತು ನಡೆದ ಸಮಾವೇಶದಲ್ಲಿ ಪರಿಸರ, ವಲಸೆ, ಭಯೋತ್ಪಾದನೆ, ಸೆಕ್ಸ್ ಪ್ರವಾಸೋದ್ಯಮ, ಅಣುಶಕ್ತಿ, ಮುಂತಾದರ ಕುರಿತು ಪೋಪ್ ಬೆನೆಡಿಕ್ಟ್ ೧೬ ತಮ್ಮ ಸಂವಾದದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಶಾಸ್ತ್ರೀಯ ಸಂಗೀತದ ಒಲವು, ೨೦೦೯ರ ನವೆಂಬರ್ ೩೦ರಂದು ಹೊರ ತಂದ ‘ಬ್ಲೇಸ್ಡ್ ವರ್ಜಿನ್ ಮೇರಿ’ ಎನ್ನುವ ಸಂಗೀತದ ಆಲ್ಬಂ ಸಾಕಷ್ಟು ಪ್ರಚಾರ ಪಡೆದಿತ್ತು. ೨೦೦೭ರಲ್ಲಿ ಬೆಕ್ಕುಗಳ ಕುರಿತಾಗಿ ‘ಜೋಸಫ್ ಆಂಡ್ ಚಿಕೋ’ ಕೃತಿ ಪೋಪ್‌ಗೆ ಬೆಕ್ಕುಗಳ ಕುರಿತು ಇರುವ ಆಸಕ್ತಿಯನ್ನು ಬಿಂಬಿಸುತ್ತದೆ. ೨೦೧೨ರಲ್ಲಿ ಪೋಪ್ ಬೆನೆಡಿಕ್ಟ್ ಆಧುನಿಕ ಸಾಮಾಜಿಕ ತಾಣ ಟ್ವಿಟ್ಟರ್‌ನಲ್ಲಿ ಅಕೌಂಟ್ ಮಾಡಿದ್ದರು. ಅದರಲ್ಲೂ ವ್ಯಾಟಿಕನ್ ಸಿಟಿಯ ಕುರಿತು ಯೂ ಟ್ಯೂಬ್‌ನಲ್ಲಿ ಚಾನೆಲ್‌ವೊಂದನ್ನು ಆರಂಭಿಸಿದ್ದರು. ಮೊತ್ತ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಪೋಪ್ ಬೆನೆಡಿಕ್ಟ್ ೧೬ ಈ ರೀತಿ ಟ್ವಿಟ್ಟ್ ಮಾಡಿದ್ದರು: ಪ್ರಿಯ ಗೆಳೆಯರೇ, ಟ್ವಿಟ್ಟರ್ ಮೂಲಕ ನಿಮ್ಮ ಜತೆಯಲ್ಲಿ ಸ್ನೇಹ ಬೆಳೆಸಲು ಇಷ್ಟ ಪಡುತ್ತೇನೆ. ನಿಮ್ಮ ಅಭಿಪ್ರಾಯಗಳಿಗೆ ನಾನು ಋಣಿ. ಹೃದಯಪೂರ್ವಕವಾಗಿ ನಿಮಗೆ ಒಳಿತು ಬಯಸುತ್ತೇನೆ ಎಂದಿದ್ದರು. ಇದಕ್ಕೆ ವಿಶ್ವದ ೬೫ ಸಾವಿರ ಮಂದಿ ಟ್ವಿಟ್ ಮಾಡಿದ್ದರು. ಸದಾ ಬದಲಾವಣೆಗೆ ಮೈಯೊಡ್ಡುತ್ತಿರುವ ಕ್ರೈಸ್ತ ಧರ್ಮದ ಚರ್ಚ್‌ಗಳಲ್ಲಿ ಅತೀ ಸಣ್ಣ ಅಧಿಕಾರದ ಅವಧಿಯಲ್ಲಿ ಪೋಪ್ ಬೆನೆಡಿಕ್ಟ್ ೧೬ ಬದಲಾವಣೆಯನ್ನಂತೂ ತಂದಿದ್ದರು. ಅತೀ ದೀರ್ಘ ಅವಧಿಯ ಪೋಪ್‌ಗಳ ನಡುವೆ ಒಂದು ಸಣ್ಣ ಅವಧಿಯ ಪೋಪ್‌ಗಳಿರುತ್ತಾರೆ ಎನ್ನೋದು ಮಾತು. ಇದು ಪೋಪ್ ಬೆನೆಡಿಕ್ಟ್ ೧೬ಗೆ ಸರಿಯಾಗಿ ಅನ್ವಯವಾಗುತ್ತದೆ. ಅವರ ರಾಜೀನಾಮೆ ಫೆ.೨೮ರಂದು ಅಂಗೀಕೃತವಾಗುತ್ತದೆ. ಮಾರ್ಚ್ ಕೊನೆಯ ವಾರದಲ್ಲಿ ನೂತನ ಪೋಪ್‌ರ ಆಯ್ಕೆ ನಡೆದು ಹೋಗುತ್ತದೆ. ಆದರೆ ಪೋಪ್ ಬೆನೆಡಿಕ್ಟ್ ೧೬ ಮಾತ್ರ ತಮ್ಮ ಹೆಸರಿನ ಜತೆಯಲ್ಲಿ ಅಧಿಕಾರವನ್ನು ಕಳೆದುಕೊಂಡು ಬರೀ ಜೋಸಫ್ ಅಲೋಶಿಯಸ್ ರೆಟಿಜಿಂಗರ್ ಆಗಿ ಉಳಿದು ಬಿಡುತ್ತಾರೆ. ಮುಕ್ತ ಮಾತುಕತೆಗೆ ಪೋಪ್ ಬೆನೆಡಿಕ್ಟ್ ಮಾತ್ರ ಎಂದಿಗೂ ಸಲ್ಲುವ ಹೆಸರು. ( vk daily main eddtion on 16.02.2013)

No comments:

Post a Comment