ಸ್ಟೀವನ್ ರೇಗೊ, ದಾರಂದಕುಕ್ಕು ಮಂಗಳೂರು
ವಿದ್ಯುತ್ ಸಮಸ್ಯೆಯಿಂದ ನಗರಗಳು ಕಂಗೆಟ್ಟಿದ್ದರೆ, ಇದರ ಗೊಡವೆಯೇ ಇಲ್ಲದೆ ಕರಾವಳಿಯ ಗ್ರಾಮಗಳಲ್ಲಿ ಮನೆಗಳಿಗೆ ಬೆಳಕು ಕೊಡುವ ಕೆಲಸವನ್ನು ಆರು ಮಂದಿ ಇಂಜಿನೀಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಮಾಡುತ್ತಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ಕೊಡುವಷ್ಟು ಬೃಹತ್ ವಿದ್ಯುತ್‌ಗಾರ, ಕಿರು ವಿದ್ಯುತ್ ಘಟಕಗಳನ್ನು ಹೊಂದಿರುವ ಕರಾವಳಿಯಲ್ಲೇ ವಿದ್ಯುತ್ ಸಂಪರ್ಕವೇ ಕಾಣದ ಮನೆಗಳಿನ್ನೂ ಅಂಧಕಾರದಲ್ಲಿವೆ. ಬೀದಿ ದೀಪಗಳನ್ನು ಕಂಡು ಕಣ್ಣೆವೆ ತುಂಬಿಕೊಳ್ಳುತ್ತಿದ್ದ ಈ ಚಿಮಣಿ ದೀಪದ ಬಡವರಿಗೆ ಬೆಳಕು ಕೊಡುವ ಕೊಡುಗೆ ಈ ಯುವಕರದ್ದು.
ಸ್ಟ್ರೀ (ಸಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎನ್ನುವ ಸಂಸ್ಥೆಯೊಂದನ್ನು ಹುಟ್ಟುಹಾಕಿಕೊಂಡು ತಮ್ಮದೇ ಮೂಲ ಸಂಪನ್ಮೂಲಗಳನ್ನು ಹುಟ್ಟುಹಾಕಿಕೊಂಡು ಗ್ರಾಮಾಂತರ ಪ್ರದೇಶದಲ್ಲಿರುವ ಅದರಲ್ಲೂ ಬಡತನ ರೇಖೆಗಿಂತಲೂ ಕೆಳಗಿರುವ ಮನೆಗಳನ್ನು ಹುಡುಕಾಡಿಕೊಂಡು ಸೌರಶಕ್ತಿಯ ಮೂಲಕ ಬೆಳಕು ನೀಡುವ ಕೆಲಸವನ್ನು ಯುವಕರು ತೆರೆಮರೆಯಲ್ಲಿ ಮಾಡುತ್ತಿದ್ದಾರೆ.
ಹಾಸ್ಟೆಲ್‌ನಲ್ಲಿ ಹುಟ್ಟಿದ ಸಂಸ್ಥೆ: ನಾಲ್ಕು ವರ್ಷಗಳ ಹಿಂದೆ ಮೂಡುಬಿದಿರೆಯ ಆಳ್ವಾಸ್ ಹಾಸ್ಟೆಲ್‌ನ ನಾನಾ ರೂಮ್‌ಗಳಲ್ಲಿ ತಂಗಿದ್ದ ಯುವಕರ ತಂಡವೊಂದು ಬಡವರಿಗೆ ಬೆಳಕು ಕೊಡಲು ಯೋಜನೆ ರೂಪಿಸಿದ್ದರು. ಅಲ್ಲಿಯೇ ದುಡಿಯುತ್ತಿದ್ದ ಕೆಲಸದಾಳುಗಳ ಮನೆಗಳಿಗೆ ತಮ್ಮ ಪಾಕೆಟ್ ಮನಿಯನ್ನು ಜೋಡಿಸಿಕೊಂಡು ಸೌರಶಕ್ತಿಯ ಮೂಲಕ ಬೆಳಕು ಕೊಟ್ಟರು. ನಂತರ ಇಂತಹ ನಾನಾ ಕುಟುಂಬಗಳ ಹುಡುಕಾಟ ಆರಂಭವಾಯಿತು. ಅಲ್ಲಿಯೇ ಹುಟ್ಟಿದ್ದು ಸ್ಟ್ರೀ (ಸಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎಂಜಿನಿಯರ್ ವಿದ್ಯಾರ್ಥಿಗಳಾದ ಮೈಸೂರಿನ ಅಖಿಲ್, ಪವನ್, ವಿಶಾಲ್, ಶಾಶ್ವತ್, ಪುತ್ತೂರಿನ ಸಾಯಿಗಣೇಶ್, ನಿಂತಿಕಲ್ಲಿನ ಶೌಕತ್ ಎಲ್ಲರೂ ಸೇರಿಕೊಂಡು ಈ ಸಂಸ್ಥೆಯನ್ನು ಕಟ್ಟಿಬೆಳೆಸಿದರು.
ಕರಾವಳಿಯಲ್ಲೇ ಐದು ಪ್ರಾಜೆಕ್ಟ್: ಎಂಜಿನಿಯರಿಂಗ್ ಕಲಿಯುತ್ತಿರುವ ಆರು ಮಂದಿ ಯುವಕರು ತಮ್ಮ ರಜಾ ಅವಧಿಯಲ್ಲೇ ಇಂತಹ ಸೌರಶಕ್ತಿಯ ಪ್ರಾಜೆಕ್ಟ್‌ಗೆ ಇಳಿಯುತ್ತಾರೆ. ಕರಾವಳಿಯಲ್ಲಿರುವ ತೀರಾ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಬಿಪಿಎಲ್ ಕಾರ್ಡ್‌ದಾರರನ್ನು ಹುಡುಕಾಡಿ ವಿದ್ಯುತ್ ಸಂಪರ್ಕ ಇದೆಯೇ ಇಲ್ಲವೇ ಎನ್ನುವ ಖಾತರಿ ಪಡಿಸಿಕೊಂಡು ಯುವಕರು ಯೋಜನೆ ರೂಪಿಸುತ್ತಾರೆ. ಮುಖ್ಯವಾಗಿ ಬಿಪಿಎಲ್ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.
ಆರಂಭದಲ್ಲಿ ಮೂಡುಬಿದರೆಯ ಎರಡು ಮನೆಗಳಿಗೆ ಸೌರಶಕ್ತಿ ಮೂಲಕ ಬೆಳಕು ಕೊಟ್ಟರು. ಈ ಬಳಿಕ ಪುತ್ತೂರಿನ ಕುಂಬುರ್ಗ, ಬೀರಹ್ನಿತ್ಲುನ ಆರು ಮನೆಗಳು, ಸವಣೂರಿನ ಆರು ಮನೆಗಳು, ಮೈಸೂರು ಎಚ್.ಡಿ ಕೋಟೆ ಪಂಜದಲ್ಲಿರುವ ಬಳ್ಪ ಗ್ರಾಮದ ೩೦ ಮನೆಗಳಿಗೆ ಸೌರಶಕ್ತಿಯಿಂದ ಬೆಳಕು ನೀಡಿದ್ದಾರೆ. ಮುಂದೆ ಕುಂದಾಪುರದಲ್ಲಿರುವ ಇಡೀ ಗ್ರಾಮಕ್ಕೆ ಬೆಳಕು ನೀಡುವ ಯೋಜನೆ ರೂಪಿಸಿದ್ದಾರೆ.
ಬೆಳಕು ನೋಡದ ಮುಖದಲ್ಲಿ ಅರಳಿದ ಸಂತಸ: ಪಂಜದಿಂದ ಸ್ವಲ್ಪ ದೂರದಲ್ಲಿರುವ ಬಳ್ಪಗ್ರಾಮದ ಕೇನ್ಯಾ ಪ್ರದೇಶದ ನೇಲ್ಯಡ್ಕ, ಐನಡ್ಕ, ಕಣ್‌ಕಾಲಿನ ೩೦ ಬಿಪಿಎಲ್ ಪಟ್ಟಿಯಲ್ಲಿರುವ ಮನೆಗಳು ಎಂದಿಗೂ ಚಿಮಣಿ ದೀಪದಿಂದ ಹೊರಬಂದವರಲ್ಲ. ಬೀದಿ ದೀಪಗಳನ್ನೇ ನೋಡಿ ಮನದಲ್ಲಿ ಸಂತಸ ತುಂಬಿಕೊಂಡಿದ್ದರು. ಬೆಳಕು ಎನ್ನೋದು ಶ್ರೀಮಂತರಿಗೆ ಮಾತ್ರ ಇರುವ ಸವಲತ್ತು ಎಂದುಕೊಂಡೇ ತಮ್ಮ ಮಕ್ಕಳಿಗೆ ಚಿಮಣಿ ದೀಪಗಳನ್ನು ತೋರಿಸಿ ಮಲಗಿಸುತ್ತಿದ್ದರು. ಆದರೆ ಈಗ ಕೇನ್ಯಾದ ಚಿಮಣಿ ದೀಪಗಳು ನಂದಿ ಹೋಗಿದೆ. ಅವುಗಳ ಜಾಗದಲ್ಲಿ ಪಳಪಳ ಹೊಳೆಯುವ ಸೌರಶಕ್ತಿಯ ಬಲ್ಬ್‌ಗಳು ಜಾಗಪಡೆದುಕೊಂಡಿದೆ. ಈ ಯುವಕರು ೩೦ ಮನೆಗಳ ಮುಂಭಾಗದಲ್ಲಿ ಸೋಲಾರ್ ಪ್ಯಾನೆಲ್ ಹಾಕಿಕೊಂಡು ಮನೆಯೊಳಗೆ ಬಲ್ಬ್ ಹೊತ್ತಿಸುತ್ತಿದ್ದಾರೆ. ಒಂದು ಬಲ್ಬ್, ಸೋಲಾರ್ ಪ್ಯಾನೆಲ್, ಬ್ಯಾಟರಿ ಕೊಟ್ಟು ಮನೆಯ ಮೂಲೆಯಲ್ಲಿರುವ ಮಗು ಈಗ ಬೆಳಕು ನೋಡಿ ಕುಣಿಯುವಂತಾಗಿದೆ.

ಅಂದಹಾಗೆ ೩೦ ಮನೆಗಳಿಗೆ ಬೆಳಕು ನೀಡಲು ಧನ ಸಹಾಯ ಮಾಡಿದವರು ಮೈಸೂರಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಿ.ಸಿ. ರಾಜು ಎನ್ನುವವರು. ಹೀಗೆ ಕರಾವಳಿಯ ಕುಗ್ರಾಮದಲ್ಲಿರುವ ಒಂದು ಪುಟ್ಟ ಮನೆಯಲ್ಲಿ ಬೆಳಕು ಕೊಡಲು ಮೈಸೂರಿನ ಮಂದಿ ತಮ್ಮ ಉದಾರತೆಯನ್ನು ಮೆರೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಪ್ರಾಜೆಕ್ಟ್‌ಗಳನ್ನು ಮಾಡಿದ್ದೇವೆ. ಆರು ತಿಂಗಳಿಗೊಮ್ಮೆ ಈ ಯೋಜನೆ ರೂಪಿಸಿದ ಹಳ್ಳಿಗಳಿಗೆ ಹೋಗಿ ಬ್ಯಾಟರಿ ಚೆಕ್ ಮಾಡಿಕೊಂಡು ಅವರಿಗೆ ಮತ್ತೊಂದು ಬಲ್ಬ್ ಹಾಗೂ ಮೊಬೈಲ್ ಚಾರ್ಜರ್ ಕೊಟ್ಟು ಬರುತ್ತೇವೆ. ಕರಾವಳಿಯಲ್ಲಿ ಇಂತಹ ಯೋಜನೆ ರೂಪಿಸಿದಾಗ ಹೊರ ಜಿಲ್ಲೆಯವರೇ ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತಾರೆ ತಂಡದ ಸದಸ್ಯ ಶೌಕತ್.
ಪಕ್ಕದ ಮನೆಯಲ್ಲಿರುವಂತೆ ನಮ್ಮ ಮನೆಯಲ್ಲೂ ಟಿವಿ ನೋಡಬೇಕು. ಬಲ್ಬ್‌ನ ಅಡಿಯಲ್ಲಿ ಕೂತು ಪಾಠ ಓದಬೇಕು. ಚಿಮಣಿ ದೀಪ ನೋಡಿದಾಗಲೆಲ್ಲ ನಿದ್ದೆ ಬಂದು ಬಿಡುತ್ತದೆ ಎಂದು ಎರಡನೇ ತರಗತಿ ಗಣೇಶ ಹೇಳಿದ ಮಾತು. ಕುಗ್ರಾಮದಲ್ಲಿರುವ ಬಡವರ ಮನೆಗಳಿಗೆ ಬೆಳಕು ಕೊಟ್ಟು ಹುಡುಗರು ತಮ್ಮ ಸಾಧನೆ ಮೆರೆದಿದ್ದಾರೆ ಎನ್ನೋದು ಈ ಮೂಲಕ ಖಾತರಿ ಆಗುತ್ತದೆ.
* ಇಡೀ ರಾಜ್ಯದಲ್ಲಿ ಇಂತಹ ಸೌರ ಶಕ್ತಿಯ ಯೋಜನೆಯನ್ನು ರೂಪಿಸಬೇಕು ಎನ್ನೋದು ನಮ್ಮ ತಂಡದ ಕನಸ್ಸು. ರಾಜ್ಯದ ನಾನಾ ಕಡೆ ಇರುವ ಪರ್ಯಾಯ ಇಂಧನಗಳ ಶಕ್ತಿಗಳಾದ ಪವನ ಶಕ್ತಿ, ಹೈಡ್ರೋವನ್ನು ಬಳಕೆ ಮಾಡಿಕೊಂಡು ಬಡವರಿಗೆ ಬೆಳಕು ನೀಡಬೇಕು ಎನ್ನುವ ಯೋಜನೆ ಇದೆ. ಈ ಮೂಲಕ ವಿದ್ಯುತ್ ಕೊರತೆಯ ಸಮಯದಲ್ಲೂ ಇತತ ಇಂಧನಗಳಿಗೆ ಮೊರೆ ಹೋಗಬಹುದು.
-ಅಖಿಲ್, ಸ್ಟ್ರೀ ತಂಡದ ಮುಖ್ಯಸ್ಥ .
* ಬದುಕಿನಲ್ಲಿ ನಮ್ಮ ಮನೆಯಲ್ಲಿ ಬೆಳಕು ನೋಡುತ್ತೇವೆ ಎನ್ನುವ ಕನಸಿನಲ್ಲೂ ಇರಲಿಲ್ಲ. ಬೆಳಕು ಎನ್ನೋದು ಉಳ್ಲವರಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದೆ. ಆದರೆ ಈ ಹುಡುಗರು ರಾತ್ರಿ- ಹಗಲು ದುಡಿದು ನಮಗೆಲ್ಲ ನಿಜವಾದ ಬೆಳಕು ಕೊಟ್ಟಿದ್ದಾರೆ.
-
ಚೋಮ, ನೇಲ್ಯಡ್ಕ ಗ್ರಾಮ ನಿವಾಸಿ.
...
(vk student eddition on-5.02.2013)and vk nammkarvali edition on-6.02.2013)