Tuesday, February 21, 2012

ಕೋಸ್ಟಲ್‌ವುಡ್‌ನಲ್ಲಿ ‘ಅಸಲಿ’ ಕ್ರಾಂತಿ

ಒಂದು ಕಾಲದಲ್ಲಿ ‘ತುಳು ಸಿನಿಮಾ ನಾ...’ಎಂದುಕೊಂಡು ಮೂಗು ಮುರಿಯುವವರ ಸಂಖ್ಯೆನೇ ಜಾಸ್ತಿ ಇತ್ತು. ಬರೀ ಅವಾರ್ಡ್, ಸಬ್ಸಿಡಿ, ಹೆಸರಿಗಾಗಿ ಲಕ್ಷಾಂತರ ರೂ. ಹಣ ಸುರಿದು ಚಿತ್ರ ಮಾಡಿಕೊಳ್ಳುತ್ತಿದ್ದ ನಿರ್ದೇಶಕ, ನಿರ್ಮಾಪಕರು ಈಗ ಕಮರ್ಷಿಯಲ್ ದೃಷ್ಟಿಯಿಂದಲೂ ತುಳು ಚಿತ್ರಗಳನ್ನು ನಿರ್ಮಾಣ, ನಿರ್ದೇಶನ ಮಾಡುವಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಟೋಟಲಿ ಕೋಸ್ಟಲ್‌ವುಡ್‌ನಲ್ಲಿ ಸಂಭ್ರಮದ ಲಹರಿಯೊಂದು ಮೂಡುತ್ತಿದೆ.

ಅಬ್ಬಾ ..ನಲವತ್ತು. ಇದು ವ್ಯಕ್ತಿಯೊಬ್ಬನ ಬರೋಬರಿ ಅರ್ಧ ಆಯಸ್ಸು. ಇಂತಹ ಅರ್ಧ ಆಯಸ್ಸಿಗೆ ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಬಂದು ಕೂತು ಬಿಟ್ಟಿದೆ. ಪುಟ್ಟ ಮಗುವಿನಂತೆ ಓಡಾಡಿಕೊಂಡು ಕಣ್ಣು ಮಿಟಿಕಿಸುತ್ತಿದ್ದ ಕರಾವಳಿಯ ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಈಗ ಓಟಕ್ಕೆ ನಿಂತು ಬಿಟ್ಟಿದೆ. ವರ್ಷಕ್ಕೆ ಅರ್ಧನೋ ಒಂದೋ ಚಿತ್ರ ಬರುತ್ತಿದ್ದ ಕೋಸ್ಟಲ್‌ವುಡ್‌ನಲ್ಲಿ ಈಗ ವರ್ಷಕ್ಕೆ ಒಂದೆರಡು ಸಿನ್ಮಾ ಮಾಡುವ ತಾಕತ್ತು ಬಂದು ಬಿಟ್ಟಿದೆ. ಹೊಸ ವರ್ಷದಲ್ಲಂತೂ ಬರೋಬರಿ ೮ ಚಿತ್ರಗಳ ಟೈಟಲ್‌ಗಳು ನೋಂದಣಿಯಾಗಿದೆ ಎನ್ನುವ ಸುದ್ದಿನೂ ಕೋಸ್ಟಲ್‌ವುಡ್‌ನಿಂದ ಬಂದು ತಲುಪಿದೆ.
ಒಂದು ಕಾಲದಲ್ಲಿ ‘ತುಳು ಸಿನಿಮಾ ನಾ...’ಎಂದುಕೊಂಡು ಮೂಗು ಮುರಿಯುವವರ ಸಂಖ್ಯೆನೇ ಜಾಸ್ತಿ ಇತ್ತು. ಬರೀ ಅವಾರ್ಡ್, ಸಬ್ಸಿಡಿ, ಹೆಸರಿಗಾಗಿ ಲಕ್ಷಾಂತರ ರೂ. ಹಣ ಸುರಿದು ಚಿತ್ರ ಮಾಡಿಕೊಳ್ಳುತ್ತಿದ್ದ ನಿರ್ದೇಶಕ, ನಿರ್ಮಾಪಕರು ಈಗ ಕಮರ್ಷಿಯಲ್ ದೃಷ್ಟಿಯಿಂದಲೂ ತುಳು ಚಿತ್ರಗಳನ್ನು ನಿರ್ಮಾಣ, ನಿರ್ದೇಶನ ಮಾಡುವಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ತಮಿಳು, ಹಿಂದಿ, ತೆಲುಗು, ಕನ್ನಡ, ಇಂಗ್ಲಿಷ್ ಚಿತ್ರಗಳ ನಡುವೆ ಇತ್ತೀಚೆಗೆ ತುಳು ಚಿತ್ರಗಳನ್ನು ನೋಡುವವರ ಸಂಖ್ಯೆನೂ ಬೆಳೆದುಕೊಂಡು ಬರುತ್ತಿದೆ. ಈ ಮೂಲಕ ಕೋಸ್ಟಲ್‌ವುಡ್ ಸಿನ್ಮಾಗಳ ಮಾರುಕಟ್ಟೆ ನಿಧಾನವಾಗಿ ಗರಿಕೆದರಿಕೊಳ್ಳುತ್ತಿದೆ.
ಅದರಲ್ಲೂ ಈ ವರ್ಷ ಕೋಸ್ಟಲ್‌ವುಡ್ ಸಿನ್ಮಾ ನಗರಿಯಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಓಡುತ್ತಿರುವ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ನಿರ್ಮಾಣದ ‘ಒರಿಯರ್ದೊರಿ ಅಸಲ್’ ಚಿತ್ರದ ನಂತರ ಕೋಸ್ಟಲ್‌ವುಡ್‌ನಲ್ಲಿ ತುಳು ಚಿತ್ರ ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚುತ್ತಾ ಬಂದಿದೆ. ‘ಅಸಲ್’ ಸಿನಿಮಾ ಈಗಾಗಲೇ ೨೦೦ ದಿನಗಳನ್ನು ಪೂರೈಸುವತ್ತಾ ಕಾಲು ನೆಟ್ಟಿದೆ. ಇಡೀ ವರ್ಷ ಕರಾವಳಿ ತುಂಬಾ ‘ಅಸಲ್’ ಓಡುವ ಎಲ್ಲ ಸಾಧ್ಯತಗಳು ಕಾಣಲಾರಂಭಿಸಿದೆ.
ಸುಮಾರು ೪೦ ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಎರಡು ಸಿನಿಮಾ ಮಂದಿರಗಳಲ್ಲಿ ಶತ ದಿನಗಳನ್ನು ಪೂರೈಸಿರುವ ಅಸಲ್. ಕರಾವಳಿ ಮಾತ್ರವಲ್ಲದೇ ತೀರ್ಥಹಳ್ಳಿ, ಕೊಪ್ಪ, ಬೆಂಗಳೂರು ಮುಂತಾದೆಡೆಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಮುಂಬಯಿಯಲ್ಲಿ ಎಟ್ ಎ ಟೈಮ್ ೮ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಓಡುತ್ತಿದೆ. ದೇಶದ ಗಡಿ ದಾಟಿ ಕೊಲ್ಲಿಯಲ್ಲೂ ಪ್ರದರ್ಶನ ಮಾಡಿಸುವ ಕೆಲಸ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್‌ರಿಂದ ನಡೆಯುತ್ತಿದೆ. ಕೋಸ್ಟಲ್‌ವುಡ್‌ನ ಹಿಂದಿನ ಸಿನ್ಮಾಗಳ ರೆಕಾರ್ಡ್‌ಗಳನ್ನು ಮುರಿದಿರುವ ‘ಒರಿಯರ್ದೊರಿ ಅಸಲ್’ನ ಭರ್ಜರಿ ಯಶಸ್ಸಿನ ಕಾರಣದಿಂದಾಗಿ ಇನ್ನಷ್ಟು ತುಳು ಸಿನಿಮಾಗಳು ಕೋಸ್ಟಲ್‌ವುಡ್ ಸಿನ್ಮಾ ನಗರಿಗೆ ಎಂಟ್ರಿಯಾಗುವ ಸಾಧ್ಯತೆಗಳು ಕಾಣಲಾರಂಭಿಸಿದೆ.
ತುಳು ನಾಟಕಗಳ ಗೈರತ್ತು:
ಕಲಾಸಂಗಮದ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರು ತನ್ನ ಹಿಂದಿನ ಸೂಪರ್‌ಹಿಟ್ ನಾಟಕವೊಂದನ್ನೇ ಸಿನಿಮಾ ಮಾಡಿ ಭರ್ಜರಿ ಪ್ರಚಾರ, ಪ್ರತಿಷ್ಠೆ ಮತ್ತು ಹಣ ಗಳಿಸಿರುವುದು ಇನ್ನಷ್ಟು ನಾಟಕಗಳಿಗೆ ಸಿನಿಮಾ ಆಗುವ ಯೋಗ ಒಂದಿದೆ. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ತನ್ನ ‘ಮದಿಮೆ’(ಮದುವೆ) ನಾಟಕವನ್ನು ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆ.
ಮತ್ತೊಂದೆಡೆ ತೆಲಿಕೆದ ಬೊಳ್ಳಿ ಬಿರುದಾಂಕಿತ ದೇವದಾಸ್ ಕಾಪಿಕಾಡ್ ಅವರು ಕೂಡ ತನ್ನ ೮೦ರ ದಶಕದ ಸೂಪರ್ ಹಿಟ್ ನಾಟಕ ‘ಗಂಟೇತಾಂಡ್’(ಗಂಟೆಯೆಷ್ಟಾಯಿತು..?) ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಅವರು ‘ಬಲೇ ಚಾ ಪರ‍್ಕ’ (ಬನ್ನಿ ಚಾ ಕುಡಿಯೋಣ) ನಾಟಕವು ‘ಸತ್ಯ ಓಲುಂಡು’(ಸತ್ಯ ಎಲ್ಲಿದೆ..?) ಹೆಸರಿನಲ್ಲಿ ಸಿನಿಮಾ ಆಗಿದೆ. ‘ಗಂಟೇತಾಂಡ್’ ನಾಟಕ ಈಗ ಒಂದಷ್ಟು ಬದಲಾವಣೆಯೊಂದಿಗೆ ‘ತೆಲಿಕೆದ ಬೊಳ್ಳಿ’ ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತ, ಈ ಚಿತ್ರವನ್ನು ‘ಪಂಚಮವೇದ’ ಖ್ಯಾತಿಯ ಪಿ.ಎಚ್.ವಿಶ್ವನಾಥ್ ನಿರ್ದೇಶಿಸುತ್ತಿದ್ದಾರೆ.
ರಾಮ್ ಶೆಟ್ಟರು ಬಂದರು:
ಬಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ರಾಮ್ ಶೆಟ್ಟಿ ೩೦ ವರ್ಷಗಳ ನಂತರ ತುಳು ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಿಂದಿಯಲ್ಲಿ ಖತರ್‌ನಾಕ್, ಮರಾಠಿಯಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿದ್ದ ಇವರು ತುಳುವಿನಲ್ಲಿ ‘ಬದ್ಕೆರೆ ಬುಡ್ಲೆ ’ ಹಾಗೂ ‘ದಾರೆದ ಸೀರೆ’ ಸಿನಿಮಾ ನಿರ್ಮಿಸಿದ್ದರು. ಇದೀಗ ಅವರು ‘ಬಂಗಾರ‍್ದ ಕುರಲ್’ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ರಾಮ್ ಶೆಟ್ಟಿಯ ಪುತ್ರ ಆನಂದ್ ರಾಮ್‌ಶೆಟ್ಟಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಭೋಜ್‌ಪುರಿ ನಾಯಕಿ ಪಾಕೀ ಹೆಗ್ಡೆ ಚಿತ್ರದ ನಾಯಕಿ. ಚಿತ್ರಕ್ಕೆ ವಿ.ಮನೋಹರ್ ಸಂಗೀತವಿದೆ. ಮಚ್ಚೇಂದ್ರನಾಥ್ ಪಾಂಡೇಶ್ವರ್ ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ಏಳು ಹಾಡುಗಳ ಧ್ವನಿ ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ಡಿ. ೧೪ರಂದು ಚಿತ್ರದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಮುಂಬಯಿಯ ರಾಜು ಕೆ.ಜಿ. ಚಿತ್ರಕ್ಕೆ ಛಾಯಾಗ್ರಾಹಣ ಮಾಡಲಿದ್ದು, ರಾಮ್ ಶೆಟ್ಟಿಯವರ ಸಹೋದರ ಹರೀಶ್ ಶೆಟ್ಟಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ಹೆಬ್ರಿ , ಕಾರ್ಕಳ , ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರಲಾಗುವುದೆಂದು ನಿರ್ದೇಶಕ ರಾಮ್‌ಶೆಟ್ಟಿ ಅವರ ಅಭಿಪ್ರಾಯ.
ಹೊಸ ಟೈಟಲ್ಲೂ ಹೊಸ ಸಿನಿಮಾ:
ಈ ವರ್ಷ ಹೊಸ ಟೈಟಲ್‌ಗಳು ತುಳುವಿನಲ್ಲಿ ನೋಂದಣಿಯಾಗಿದೆ. ಡಾ.ರಿಚಾರ್ಡ್ ಕ್ಯಾಸ್ತಲಿನೋ ‘ಲವ್ ಇನ್ ಸಿಂಗಾಪುರ’ ಸಿನಿಮಾ ಮಾಡಲಿದ್ದಾರೆ. ಮಲೇಶ್ಯಾ, ಸಿಂಗಾಪೂರ್ ಮುಂತಾದೆಡೆ ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮುಂಬಯಿಯ ರಂಜಿತ್ ಶೆಟ್ಟಿ ‘ಅಮೈಟ್ ಅಸಲ್ ಈಮೈಟ್ ಕುಸಲ್’ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ‘ಪರ್ಬ’, ‘ಕಂಬುಲ’ ಟೈಟಲ್ ಕೂಡ ತುಳುವಿನಲ್ಲಿ ಈಗಾಗಲೇ ನೋಂದಣಿಯಾಗಿದೆ.
ಕೃಷ್ಣ ಎಂಬವರು ‘ದಿಬ್ಬಣ’ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಗಂಗಾಧರ ಶೆಟ್ಟಿ ‘ಒರಿಯನ್ ತೂಂಡ ಒರಿಯಗಾಪುಜಿ’ ಸಿನಿಮಾದ ಕೆಲಸದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಸ್ಥಗಿತಗೊಂಡಿರುವ ‘ಬೀರೆ ದೇವು ಪೂಂಜ’ ಚಿತ್ರಕ್ಕೆ ಮರುಜೀವ ಕೊಡಲು ಧನ್‌ರಾಜ್ ಒದ್ದಾಟ ನಡೆಸುತ್ತಿದ್ದಾರೆ. ಎನ್. ಆರ್.ಕೆ. ವಿಶ್ವನಾಥ್ ‘ಜಾತ್ರೆ’ ಎಂಬ ಟೈಟಲ್‌ವನ್ನು ನೋಂದಣಿ ಮಾಡಿದ್ದಾರೆ. ಇವೆಲ್ಲವನ್ನು ಗಮನಿಸುವಾಗ ಮುಂದಿನ ಒಂದು ವರ್ಷದಲ್ಲಿ ಹಲವು ತುಳು ಸಿನಿಮಾಗಳು ತೆರೆ ಕಾಣಲಿವೆ ಎಂಬ ನಿರೀಕ್ಷೆ ಹುಟ್ಟು ಹಾಕಿದೆ.
ತುಳು ಎಂದರೆ ಕೇವಲ ಸಂಸ್ಕೃತಿ ಆಧಾರಿತವಾಗಿ ಇರುವ ಅಗತ್ಯವಿಲ್ಲ. ಅಲ್ಲಿ ಮನೋರಂಜನೆ, ಹಾಸ್ಯ, ಗುಣಮಟ್ಟ ಮುಂತಾದವುಗಳಿಗೆ ಪ್ರೇಕ್ಷಕರು ಮಣೆ ಹಾಕುತ್ತಾರೆ ಎಂಬುದಕ್ಕೆ ವಿಜಯ ಕುಮಾರ್ ಕೊಡಿಯಾಲ್ ಬೈಲ್‌ರ ‘ಒರಿಯರ್ದೊರಿ ಅಸಲ್’ನ ಯಶಸ್ಸು ಸಾಕ್ಷಿಯಾಗುತ್ತದೆ. ಕೇವಲ ಪ್ರಶಸ್ತಿ ಉದ್ದೇಶಕ್ಕೆ ಮಾತ್ರವೇ ಪ್ರಾದೇಶಿಕ ಚಿತ್ರ ಮಾಡಬೇಕಾಗಿಲ್ಲ.
ಉತ್ತಮ ಗುಣಮಟ್ಟ ಕಾಪಿಟ್ಟುಕೊಂಡರೆ ತುಳು ಚಿತ್ರದಿಂದ ಉತ್ತಮ ಆದಾಯಗಳಿಸಲೂ ಸಾಧ್ಯ ಎಂಬ ಸತ್ಯ ಈಗ ಓಪನ್ ಸಿಕ್ರೇಟ್ ಆಗಿದೆ. ತುಳು ಚಿತ್ರರಂಗಕ್ಕೆ ಉತ್ತಮ ಅಡಿಪಾಯ ಈವರೆಗೂ ಸಿಕ್ಕಿರಲಿಲ್ಲ. ಸಂಕುಚಿತ ಚಿಂತನೆಗಳಿಂದ ಈ ಹಿಂದೆ ಸಿನಿಮಾ ಮಾಡಲಾಗಿತ್ತು. ಭವಿಷ್ಯದ ತುಳು ಚಿತ್ರ ನಿರ್ಮಾಪಕ, ನಿರ್ದೇಶಕರೆಲ್ಲರೂ ಗುಣಮಟ್ಟ ಕಾಪಾಡಿಕೊಂಡು ಪ್ರೇಕ್ಷಕರ ಹೃದಯ ಗೆಲ್ಲುವುದನ್ನು ಕಲಿತುಕೊಳ್ಳುವ ಅಗತ್ಯವಂತೂ ತಕ್ಷಣಕ್ಕೆ ಇದ್ದೇ ಇದೆ.
(vk lvk puravani published dis aritcle on 17.02.2012)

No comments:

Post a Comment