Monday, February 13, 2012

ಬಾಲಿವುಡ್‌ನಲ್ಲಿ ಓಡುವ ಇಲಿ


ಟಾಲಿವುಡ್ ಸ್ಟಾರ್ ಇಲಿಯಾನಾ ಈಗ ಬಾಲಿವುಡ್‌ನಲ್ಲಿ ಒಂದೆರಡು ಚಿತ್ರಗಳಿಗೆ ಬುಕ್ ಆಗಿಲ್ಲ ಬರೋಬರಿ ಐದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನಾಯಕಿಯರ ರೇಟಿಂಗ್ ಪಟ್ಟಿಯಲ್ಲಿ ಇಲಿ ಕೂಡ ಓಡುವ ಸಾಧ್ಯತೆ ದಟ್ಟವಾಗಿದೆ.

ಅದೃಷ್ಟ ಅಂದರೆ ಇದೇ ಕಣ್ರಿ. ಟಾಲಿವುಡ್‌ನಲ್ಲಿ ಓಡುತ್ತಿದ್ದ ಇಲಿಯನ್ನು ತಂದು ಕಾಲಿವುಡ್‌ಗೆ ಬಿಡಲಾಯಿತು. ಅಲ್ಲಿಂದ ಈಗ ಬಾಲಿವುಡ್‌ನಲ್ಲಿ ಓಡುತ್ತಿದೆ ಎಂದು ಟಾಲಿವುಡ್ ಪಡಸಾಲೆಯಲ್ಲಿ ಕೂತು ಮಸಾಲೆ ಹರಿಯುವ ಮಂದಿ ಮಾತಿಗೆ ಇಳಿಯುತ್ತಾರೆ. ಅಂದಹಾಗೆ ಟಾಲಿವುಡ್ ಸ್ಟಾರ್ ಇಲಿಯಾನಾ ಈಗ ಬಾಲಿವುಡ್‌ನಲ್ಲಿ ಒಂದು ಎರಡು ಚಿತ್ರಗಳಿಗೆ ಬುಕ್ ಆಗಿಲ್ಲ ಬರೋಬರಿ ಐದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನಾಯಕಿಯರ ರೇಟಿಂಗ್ ಪಟ್ಟಿಯಲ್ಲಿ ಇಲಿ ಕೂಡ ಓಡುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತು ದಿಟವಾಗುವ ದಿನಗಳು ದೂರವಿಲ್ಲ.
ಅಂದಹಾಗೆ ಟಾಲಿವುಡ್ ನಟಿ ಇಲಿಯಾನಾ ಡಿ ಕ್ರೂಸ್ ಬಾಲಿವುಡ್‌ನಲ್ಲಿ ಹೇಗೆ ಚಾನ್ಸ್ ಪಡೆದುಕೊಂಡರು ಅಂತಾ ಕೇಳ್ತೀರಾ..? ಎಲ್ಲವೂ ‘ನನ್ಬನ್’ ಚಿತ್ರದ ಮ್ಯಾಜಿಕ್ ವರ್ಕ್. ಹಿಂದಿಯಲ್ಲಿ ಮೂಡಿ ಬಂದ ತ್ರಿ ಇಡಿಯಟ್ಸ್ ಚಿತ್ರವನ್ನು ಕಾಲಿವುಡ್‌ನ ಖ್ಯಾತ ಚಿತ್ರ ನಿರ್ದೇಶಕ ಶಂಕರ್ ಎತ್ತಿಕೊಂಡು ‘ನನ್ಬನ್’ ಎನ್ನುವ ಚಿತ್ರ ಮಾಡಿ ಗಲ್ಲಾಪೆಟ್ಟಿಗೆಯನ್ನು ದೋಚಿದ ಕತೆಯಲ್ಲಿಯೇ ಇಲಿಯಾನಾ ಕತೆ ಕೂಡ ಅಡಗಿ ಕೂತಿದೆ. ಹಿಂದಿಯಲ್ಲಿ ಕರೀನಾ ಮಾಡಿದ ಪಾತ್ರವನ್ನು ಇಲ್ಲಿ ಇಲಿಯಾನಾ ಮಾಡಿ ಪ್ರೇಕ್ಷಕ ವರ್ಗದ ಮನ ಗೆದ್ದಿದ್ದಾರೆ. ಇದೇ ಒಂದು ಪ್ರೇಕ್ಷಕರ ಪ್ರೀತಿಯ ಕಾರ್ಡ್ ಹಿಂದಿಯ ನಿರ್ದೇಶಕರ ಕಣ್ಣಿಗೆ ಬಿದ್ದು ಬಿಟ್ಟಿದೆ.
ಈಗಾಗಲೇ ಅನುರಾಗ್ ಬಸು ನಿರ್ದೇಶನದ ರಣಬೀರ್ ಕಪೂರ್ ಅಭಿನಯದ ಮೋಸ್ಟ್ ವೈಟೇಟ್ ಚಿತ್ರ ‘ಬರ್ಫಿ’ಯಲ್ಲಿ ಪ್ರಿಯಾಂಕಾಳಿಗೆ ಸಮಾನವಾದ ಪಾತ್ರವನ್ನು ಇಲಿಯಾನಾಗೂ ಕೊಡಲಾಗಿದೆ. ಮಿಲಾನ್ ತೂತ್ರಿಯಾ ನಿರ್ದೇಶನದ ‘ವನ್ಸ್ ಆಫನ್ ಎ ಟೈಮ್ ಇನ್ ಮುಂಬಯಿ-೨’ಯಲ್ಲಿ ಇಲಿಯಾನಾ ಖ್ಯಾತ ನಟಿ ಮಂದಾಕಿನಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಆಶೀಶ್ ಆರ್. ಮೋಹನ್ ನಿರ್ದೇಶನದ ಕಿಲಾಡಿ೭೮೬ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಲೀಡ್ ನಾಯಕಿಯಾಗಿ ಇಲಿ ಬಣ್ಣ ಹಚ್ಚಿಕೊಳ್ಳಲಿದ್ದಾರೆ.
ಇದರ ಜತೆಯಲ್ಲಿ ಇಮ್ರಾನ್ ಖಾನ್ ಹಾಗೂ ರಣಬೀರ್ ಕಪೂರ್‌ರ ಒಂದೊಂದು ಚಿತ್ರಗಳಿಗೆ ಈಗಾಗಲೇ ಇಲಿ ಬುಕ್ ಆಗಿದ್ದಾಳೆ. ಆದರೆ ಈ ಎರಡು ಚಿತ್ರಗಳಿಗೆ ಇನ್ನೂ ಕೂಡ ಚಿತ್ರೀಕರಣದ ಡೇಟ್ಸ್‌ಗಳು ಸ್ಪರ್ಧೆ ಕೊಡುತ್ತಿರುವುದರಿಂದ ೨೦೧೩ರಲ್ಲಿ ಚಿತ್ರದ ಚಿತ್ರೀಕರಣ ನಡೆಯುವ ಸಾಧ್ಯತೆಗಳು ಇವೆ ಎನ್ನೋದು ಇಲಿಯ ಆಪ್ತರ ಮಾತು. ಅದರಲ್ಲೂ ಇಲಿ ಟಾಲಿವುಡ್, ಕಾಲಿವುಡ್‌ಗಳಲ್ಲಿ ಒಪ್ಪಿಕೊಂಡ ಒಂದೆರಡು ಚಿತ್ರಗಳು ಬಾಕಿ ಉಳಿದಿದೆ. ಟೋಟಲಿ ಇಲಿ ಎಲ್ಲಕಡೆಗೂ ಸಲ್ಲುವ ನಟಿಮಣಿಯಾಗಿದ್ದಾರೆ ಎಂಬ ಮಾತು ಎಲ್ಲ ಕಡೆಯಿಂದಲೂ ಕಿವಿಗೆ ಬಡಿಯುವ ದಿನಗಳು ದೂರವಂತೂ ಉಳಿದಿಲ್ಲ.
ಈಗಾಗಲೇ ಕಾಲಿವುಡ್‌ನಲ್ಲಿ ನಟಿಸಿದ ‘ನನ್ಬನ್’ ಚಿತ್ರದ ಸಕ್ಸಸ್ ರೇಟ್ ದುಪ್ಪಟ್ಟು ವೇಗದಲ್ಲಿ ಹೋಗುತ್ತಿರುವುದರಿಂದ ಕಾಲಿವುಡ್‌ನಲ್ಲೂ ಇಲಿಗೆ ಬೇಡಿಕೆ ಹೆಚ್ಚಾಗಿದೆ. ವಿಕ್ರಂ, ಜೀವಾ, ಸೂರ್ಯರ ಚಿತ್ರಗಳಿಗೆ ಇಲಿಯೇ ಬೇಕು ಎಂದು ನಿರ್ದೇಶಕರು ತುದಿ ಕಾಲಿನಲ್ಲಿ ನಿಂತು ಬಿಟ್ಟಿದ್ದಾರೆ ಎನ್ನುವ ಮಾಹಿತಿ ಕಾಲಿವುಡ್ ಗಲ್ಲಿಯಿಂದ ಹೊರ ಬರುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಸಮಾನವಾಗಿ ಪೈಪೋಟಿ ನೀಡಬಲ್ಲ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಇಲಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವ ಜತೆಯಲ್ಲಿ ಬಾಲಿವುಡ್‌ನಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ನಿಂತು ಬಿಟ್ಟಿದ್ದಾಳೆ.
ಅನುರಾಗ್ ಬಸು ನಿರ್ದೇಶನದ ‘ಬರ್ಫಿ’ ಚಿತ್ರ ಒಂದೆರಡು ತಿಂಗಳಲ್ಲಿ ಥಿಯೇಟರ್‌ಗೆ ಬಂದು ಬೀಳಲಿದೆ. ಚಿತ್ರದಲ್ಲಿ ರಣ್‌ಬೀರ್ ಹಾಗೂ ಪ್ರಿಯಾಂಕಾ ಮಾನಸಿಕ ರೋಗಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಇಡೀ ಚಿತ್ರವನ್ನು ಓಡಿಸುವ ಕೀಲಿ ಕೈ ಇಲಿಯ ಪಾಲಿಗೆ ಬಂದಿದೆ. ಬಾಲಿವುಡ್‌ನಲ್ಲಿ ಇಲಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದ್ದರಿಂದ ಇಲಿಯ ಅಭಿನಯ ಹಾಗೂ ಹಾಟ್‌ನೆಸ್‌ನ್ನು ಪ್ರೇಕ್ಷಕ ಮಹಾಪ್ರಭು ಯಾವ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವ ಪ್ರಶ್ನೆ ಕೂಡ ಮಜಬೂತಾಗಿ ಎದುರುಗೊಳ್ಳಲಿದೆ. ಬರ್ಫಿಯಲ್ಲಿ ಇಲಿಯ ಅಭಿನಯ ವರ್ಕ್ ಆಯಿತು ಎಂದಾದರೆ ಎರಡು ವರ್ಷಕ್ಕಂತೂ ಇಲಿ ಸ್ಟಾರ್ ಪಟ್ಟದಿಂದ ಇಳಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಮಾತು ಕೂಡ ಜತೆಯಲ್ಲಿ ಹರಡಿ ಕೂತಿದೆ.
(vk lvk puravani published dis article on 10.2.2012)

No comments:

Post a Comment