Wednesday, October 12, 2011

ಕರಾವಳಿಯಲ್ಲಿ ಚಿನ್ನಾದಂತಹ ‘ಉಜ್ವಾಡು’


ಹೊಸ ಬೆಳಕು ಈಗ ಕೋಸ್ಟಲ್‌ವುಡ್ ಸಿನ್ಮಾ ಲ್ಯಾಂಡ್‌ನಲ್ಲೂ ಬರುತ್ತಿದೆ. ಕರಾವಳಿ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾರ ನಿರ್ದೇಶನದಲ್ಲಿ ‘ಉಜ್ವಾಡು’ ಚಿತ್ರ ಥಿಯೇಟರ್‌ಗೆ ಇಳಿಯುತ್ತಿದೆ.

ಕತ್ತಲೆಯನ್ನು ದೂರಕ್ಕೆ ಓಡಿಸಿ ಬೆರಗು ಕಣ್ಣಿನಿಂದ ನೋಡುವಂತಹ ಲೋಕವನ್ನು ಸೃಷ್ಟಿ ಮಾಡಬಲ್ಲ ಸಾಮರ್ಥ್ಯ ಇರುವ ಬೆಳಕು ಎಲ್ಲಕ್ಕೂ ಮುಖ್ಯ ಅನ್ನೋದು ಎಲ್ಲರ ಅನುಭವದ ಮಾತು. ಇದೇ ಬೆಳಕು ಈಗ ಕೋಸ್ಟಲ್‌ವುಡ್ ಸಿನ್ಮಾ ಲ್ಯಾಂಡ್‌ನಲ್ಲೂ ಬರುತ್ತಿದೆ. ಹೌದು. ಕರಾವಳಿ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾರ ನಿರ್ದೇಶನದಲ್ಲಿ ಬರುತ್ತಿರುವ ‘ಉಜ್ವಾಡು’ ಶುಕ್ರವಾರ(ಅ.೧೪)ದಂದು ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾಗೆ ಬರುತ್ತಿದೆ.
ಕಾಸರಗೋಡು ಚಿನ್ನಾ ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಕೈ ಹಾಕಿರುವುದರಿಂದ ಚಿತ್ರದ ಕುರಿತು ಕರಾವಳಿಯ ಪ್ರೇಕ್ಷಕರಿಗೆ ನಿರೀಕ್ಷೆ ಮೂಟೆ ಜಾಸ್ತಿಯಾಗಿದೆ. ಈಗಾಗಲೇ ಕರಾವಳಿಯ ರಂಗಭೂಮಿಯಲ್ಲಿ ವಿಭಿನ್ನ ಮಾದರಿಯ ಕೊಂಕಣಿ ಸೇರಿದಂತೆ ನಾನಾ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶನ ಮಾಡಿ ಹೆಸರು ಉಳಿಸಿಕೊಂಡಿರುವ ಕಾಸರಗೋಡು ಚಿನ್ನಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬೆಳೆಯುವ ಕನಸ್ಸು ಕಾಣುತ್ತಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕೊಂಕಣಿ ಭಾಷೆಯಲ್ಲಿ ಸಿನ್ಮಾಗಳು ಥಿಯೇಟರ್‌ಗೆ ಬರುವುದೇ ತೀರಾ ಅಪರೂಪ. ಸೀಮಿತ ಮಾರುಕಟ್ಟೆಯೊಳಗೆ ಕೊಂಕಣಿ ಚಿತ್ರಗಳು ಯಶಸ್ಸು ಕಾಣಲು ಸಾಧ್ಯವಿಲ್ಲ ಎನ್ನುವ ಯೋಚನೆಯಿಂದ ಯಾವ ನಿರ್ಮಾಪಕ, ನಿರ್ದೇಶಕ ಚಿತ್ರ ಮಾಡುವ ಕೆಲಸಕ್ಕೆ ಕೈ ಹಾಕೋದಿಲ್ಲ. ಅದರಲ್ಲೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಜಾಗ ಪಡೆಯಲು, ಪ್ರಶಸ್ತಿ ಬಾಚಲು ಮಾತ್ರ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಆರೋಪಗಳೇ ಜಾಸ್ತಿ.
ಆದರೆ ‘ಉಜ್ವಾಡು’ ಈ ಎಲ್ಲ ಆರೋಪಗಳಿಂದ ಮುಕ್ತವಾಗಿ ಬರೀ ಕರಾವಳಿಯ ಪ್ರೇಕ್ಷಕ ವರ್ಗವನ್ನು ಮಾತ್ರ ಸೆಳೆಯಲು ನಿರ್ಧಾರ ಮಾಡಿಕೊಂಡಿದೆ ಎನ್ನೋದು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು. ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಕಳೆದ ೩೫ ವರ್ಷಗಳಿಂದ ಕೊಂಕಣಿ ಚಿತ್ರ ಬಂದಿಲ್ಲ. ‘ಉಜ್ವಾಡು’ ಇಷ್ಟು ವರ್ಷಗಳ ನಂತರ ಥಿಯೇಟರ್‌ಗೆ ಬರುತ್ತಿದೆ ಎನ್ನೋದು ಕರಾವಳಿಯ ಕೊಂಕಣಿಗರಿಗೆ ಹೆಮ್ಮೆ ಪಡಬೇಕಾದ ವಿಷಯ ಎನ್ನುತ್ತಾರೆ ಚಿನ್ನಾ.
ಈ ಹಿಂದೆ ರಮೇಶ್ ಕಾಮತ್, ಅಮೃತ್ ಪ್ರಭು ಅವರ ‘ತಪಸ್ವಿನಿ’, ‘ಜನಮನ’ ಸಿನಿಮಾಗಳು ಹಾಗೂ ಕ್ಯಾಥೋಲಿಕ್ ಕೊಂಕಣಿ ಭಾಷೆಯಲ್ಲಿ ರಿಚರ್ಡ್ ಕ್ಯಾಸ್ಟಲಿನೊ ಅವರ ‘ಬೊಗ್ಸಾಣೆ’ ಮತ್ತು ‘ಕಾಜಾರ್’ ಚಿತ್ರ ಬಿಡುಗಡೆಗೊಂಡಿತ್ತು. ಈಗ ‘ಉಜ್ವಾಡು’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೂಲಕ ಕೊಂಕಣಿ ಸಿನ್ಮಾ ಇಂಡಸ್ಟ್ರಿಯನ್ನು ಇನ್ನಷ್ಟೂ ಶ್ರೀಮಂತ ಮಾಡಬೇಕು. ಅದರಲ್ಲೂ ಕೊಂಕಣಿ ಸಮುದಾಯದಲ್ಲಿರುವ ಸಂಸ್ಕೃತಿ, ಆಚರಣೆ, ಹೋಳಿ ಹಬ್ಬ, ಚೂಡಿ ಪೂಜೆ ಎಲ್ಲವನ್ನು ಇತರ ಸುಮುದಾಯದ ಬಂಧುಗಳಿಗೆ ತೋರಿಸಬೇಕು ಎನ್ನುವ ಕನಸ್ಸಿನಿಂದ ಚಿತ್ರ ನಿರ್ದೇಶನ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಚಿತ್ರವನ್ನು ಪ್ರಾಮಾಣಿಕವಾದ ರೀತಿಯಲ್ಲಿ ಹೊರ ತರಲು ಪ್ರಯತ್ನ ಪಟ್ಟಿರುವುದರಿಂದ ಚಿತ್ರ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎನ್ನುವ ಧೈರ್ಯದ ಮಾತುಗಳಿಂದ ಕಾಸರಗೋಡು ಚಿನ್ನಾ ನಗುತ್ತಾರೆ.
ಆರಂಭದಲ್ಲಿ ಚಿತ್ರವನ್ನು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಉಳಿದಂತೆ ಕಾರ್ಕಳದ ಥಿಯೇಟರ್‌ನಲ್ಲಿ ಡಿಟಿಎಸ್ ಅಳವಡಿಸಿದ ಬಳಿಕ ಅಲ್ಲಿ ಹಾಗೂ ಉಡುಪಿ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಕಮರ್ಷಿಯಲ್ ಸ್ಪರ್ಶ ಇಲ್ಲದೆ ಮೂಡಿ ಬಂದಿರುವ ಉಜ್ವಾಡು ಚಿತ್ರವನ್ನು ಕಾರ್ಕಳದಲ್ಲಿ ನಿರಂತರ ೧೮ ದಿನಗಳ ಕಾಲ ಹಾಗೂ ಜಿಎಸ್‌ಬಿ ಕುಲದೇವರು ಇರುವ ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಉಜ್ವಾಡು ಅಂದರೆ ಬೆಳಕು. ಸಿನಿಮಾದಲ್ಲಿ ವೃದ್ಧಾಶ್ರಮದ ಹೆಸರು ಉಜ್ವಾಡು. ವೃದ್ಧಾಶ್ರಮದಲ್ಲಿರುವ ಹಿರಿಯರ ಬದುಕೇ ಬೆಳಕು ಎಂಬುದು ಇದರ ಅರ್ಥ. ಇದು ಕೊಂಕಣಿ ಸಿನಿಮಾ ಆಗಿದ್ದರೂ ಭಾಷೆಗಿಂತ ಸಂವೇದನೆ ಮುಖ್ಯ ಎನ್ನುವುದು ಚಿನ್ನಾರ ಚಿನ್ನದಂತಹ ಮಾತು.
ಚಿನ್ನಾ ಅವರ ಜತೆ ಕಥೆ-ಚಿತ್ರಕಥೆಯಲ್ಲಿ ಸಹಕಾರ ನೀಡಿರುವ ಗೋಪಾಲಕೃಷ್ಣ ಪೈ, ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ. ಖ್ಯಾತ ಕೇರಳದ ಛಾಯಾಗ್ರಾಹಕ ಉತ್ಪಲ್ ವಿ.ನಾಯನಾರ್ ಅವರ ಛಾಯಾಗ್ರಹಣದ ಚುಂಬಕ ಶಕ್ತಿ ಚಿತ್ರದಲ್ಲಿ ಕಾಣ ಸಿಗುತ್ತದೆ. ವಿ.ಮನೋಹರ್ ಅವರ ಸುಮಧುರ ಸಂಗೀತ, ಶಶಿಧರ ಅಡಪರ ಕಲಾ ನಿರ್ದೇಶನದ ಕೈಚಳಕವಿದೆ.
ಭದ್ರಗಿರಿ ಅಚ್ಯುತದಾಸ ಮತ್ತು ಜಯಂತ ಕಾಯ್ಕಿಣಿ ಅವರ ಹಾಡುಗಳನ್ನು ಪುತ್ತೂರು ನರಸಿಂಹ ನಾಯಕ್, ಶಂಕರ್ ಶಾನುಭೋಗ್, ಸೀಮಾ ರಾಯ್ಕರ್ ಹಾಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿದೆ. ನಿರ್ಮಾಪಕರಾಗಿ ಕೆ.ಜೆ.ಧನಂಜಯ್ ಮತ್ತು ಅನುರಾಧಾ ಪಡಿಯಾರ್ ಇದ್ದಾರೆ.
ನಟವರ್ಗದಲ್ಲಿ ಸದಾಶಿವ ಬ್ರಹ್ಮಾವರ್, ನೀತು, ಉಮಾಶ್ರೀ, ಸಂಧ್ಯಾ ಪೈ, ಶಶಿಭೂಷಣ್ ಕಿಣಿ, ಪ್ರಕಾಶ್ ಶೆಣೈ, ಓಂಗಣೇಶ್, ಸತೀಶ್ ಭಟ್, ಪೂರ್ಣಿಮಾ ಸುರೇಶ್, ಸತೀಶ್ ನಾಯಕ್, ಮಂಜುನಾಥ್ ಕುಡ್ವ ಸೇರಿದಂತೆ ರಂಗಭೂಮಿಯ ೮೫ ಕಲಾವಿದರು ಅಭಿನಯಿಸಿದ್ದಾರೆ ಎನ್ನೋದು ‘ಉಜ್ವಾಡು’ ಚಿತ್ರದ ಹೈಲೇಟ್ ಆಗುವ ವಿಚಾರ. ಇನ್ನೂ ಹೆಚ್ಚಿನ ಮಾಹಿತಿಗೆ ‘ಉಜ್ವಾಡು’ ಚಿತ್ರವನ್ನು ತೆರೆ ಮೇಲೆ ನೋಡಿ ಬನ್ನಿ.

ನನ್ನ ಪತ್ರಿಕೆ ನನ್ನ ಬರಹ-26



(vk daily lvk puravani published dis article on 12.10.2011)

ನನ್ನ ಪತ್ರಿಕೆ ನನ್ನ ಬರಹ-25



(vk daily lvk puravani published dis article on 29.09.2011)

Saturday, October 8, 2011

ಮದಿರೆ ನಾಡಿನ ‘ಮಾರಿ’ಯೋ !



ಮಾರಿಯೋನ ಕ್ಯಾರಿಕೇಚರ್‌ನಲ್ಲೂ ಅದೇ ಗೋವಾದ ಫೆನ್ನಿ ಕಿಕ್‌ಯಿದೆ. ಅಂದಹಾಗೆ ವಿಶ್ವದ ಶ್ರೇಷ್ಟ ವ್ಯಂಗ್ಯ ಚಿತ್ರಕಾರ ಮಾರಿಯೋ ಅಜ್ಜ ಈಗ ೮೫ರಲ್ಲಿ ಬಂದು ನಿಂತಿದ್ದಾರೆ. ಬೆಡ್ ಮೇಲೆ ಮಲಗಿರೋ ಅಜ್ಜ ಈಗ ಸರಿಯಾಗಿ ಕಾರ್ಟೂನ್ ಮಾಡುತ್ತಿಲ್ಲ.. ಆದರೂ ಲಕ್ಷಾಂತರ ರೂ. ವಹಿವಾಟು ಅವರ ಕಾರ್ಟೂನ್‌ಗಳಿಂದ ಆಗುತ್ತಿದೆ ಎನ್ನುವ ವಿಷ್ಯಾ ಗೊತ್ತಾ..? ಮಾರಿಯೋ ಅಜ್ಜನ ಜಗುಲಿಯಲ್ಲಿ ಕೂತು ಕೇಳೋಣ ಬನ್ನಿ...

ಮಾರಿಯೋ ಮಿರಾಂಡಾ ಹೆಸರಿನ ಜತೆಯಲ್ಲಿ ಗೋವಾದ ಫ್ಲೇವರ್ ಕಾಣಿಸಿಕೊಳ್ಳುತ್ತದೆ. ಗೋವಾದ ಫೆನ್ನಿ ಎಷ್ಟು ಕಿಕ್ ಕೊಡುತ್ತೋ ಗೊತ್ತಿಲ್ಲ. ಅದಕ್ಕಿಂದ ಜಾಸ್ತಿ ಮಾರಿಯೋನ ಕ್ಯಾರಿಕೇಚರ್‌ಗಳು ಕಿಕ್ ನೀಡುತ್ತೆ ಎನ್ನೋದು ವ್ಯಂಗ್ಯಚಿತ್ರ ಲೋಕದ ರಿಯಲ್ ಮಾತು. ಇಡೀ ಗೋವಾದಲ್ಲಿ ಫೆನ್ನಿ ಬಹಳಷ್ಟು ರಾಜ್ಯಭಾರ ಮಾಡಿಕೊಂಡಿದ್ದಾರೆ. ಇತ್ತ ಮಾರಿಯೋನ ಕ್ಯಾರಿಕೇಚರ್‌ಗಳು ಗೋವಾಕ್ಕೆ ಅಷ್ಟೇ ಮರ್ಯಾದೆ ತಂದುಕೊಟ್ಟಿದೆ.
ಮಾರಿಯೋರ ಕ್ಯಾರಿಕೇಚರ್‌ಗಳಲ್ಲಿ ಅಂತಹ ವಿಷಯಗಳಿರುತ್ತದೆ. ಅವುಗಳನ್ನು ಅನುಭವಿಸಬೇಕಾದರೆ ಬರೋಬರಿ ಅರ್ಧ ಗಂಟೆ ಟೈಮ್‌ನ ಜತೆಯಲ್ಲಿ ತಾಳ್ಮೆ ಇರಬೇಕು. ಹಾಗಾದರೆ ಅದನ್ನು ರಚಿಸುವ ಮಾರಿಯೋಗೆ ಎಷ್ಟು ಟೈಮ್, ತಾಳ್ಮೆ ಬೇಕಾಗಿಲ್ಲ ?! ಮಾರಿಯೋ ಅವರ ಕುಸುರಿ ಕೆಲಸ, ವ್ಯಕ್ತಿಗಳು, ಅವರ ಹಾವಭಾವ, ಟ್ರಾಫಿಕ್, ಜನಸಂದಣಿ, ಪಾರ್ಟಿ, ಕಟ್ಟಡ, ನಾಯಿಗಳು ಅದು ಇದು ಅಂತಹ ಹೇಳಿ ಊಪ್ಸ್ ! ಪ್ರಪಂಚದಲ್ಲಿ ಇಂತಹ ತಾಳ್ಮೆ ಇರುವ ವ್ಯಂಗ್ಯಚಿತ್ರಕಾರ ಬೇರೆ ಇರಲು ಸಾಧ್ಯನೇ ಇಲ್ಲ ಅನ್ನಿಸಿಬಿಡೋದು ಇದೆ.
ಗೋವಾದಲ್ಲಿ ಒಳ್ಳೆಯ ಪೆನ್ನಿ ಸಿಗುತ್ತದೆ. ಆದರೆ ಒಳ್ಳೆಯ ವಿದ್ಯಾಭ್ಯಾಸ ಮಾತ್ರ ಸಿಗೋದಿಲ್ಲ ಹಾಗೆಂದು ಮಾರಿಯೋ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದಿದ್ದರು. ಕಾಲೇಜು ಶಿಕ್ಷಣಕ್ಕೆ ಮುಂಬಯಿ ಹೋಗಿದ್ದೇ ತಡ ಅವರಲ್ಲಿ ಅಡಗಿದ್ದ ಸೃಜನಶೀಲತೆಗೆ ರೆಕ್ಕೆ ಪುಕ್ಕಗಳು ಬೆಳೆಯಿತು.
ಎಲ್ಲರೂ ಡೈರಿಯಿಂದ ದಿನನಿತ್ಯದ ವಿಷಯಗಳನ್ನು ಬರೆದುಕೊಂಡರೆ ಮಾರಿಯೋ ಅದನ್ನೇ ವ್ಯಂಗ್ಯಚಿತ್ರದ ಮೂಲಕ ಬರೆದಿಟ್ಟುಕೊಂಡರು. ೧೯೪೭ರಿಂದ ಆರಂಭವಾಗಿ ೧೯೫೯ರ ವರೆಗೆ ಅವರು ನೈಜ ಚಿತ್ರಗಳನ್ನು ಬರೆದರು. ಆದರೆ ಅದರ ಹಾವಭಾವಗಳು ವ್ಯಂಗ್ಯತೆ ಅಡಗಿ ಕೂತಿತ್ತು.
‘ದೀ ಇಲ್ಲಸ್ಟ್ರೀಟೆಡ್ ವೀಕ್ಲಿ’ಯಲ್ಲಿ ಮೆಚ್ಚಿನ ವ್ಯಂಗ್ಯಚಿತ್ರಕಾರರಾಗಿದ್ದ ಮಾರಿಯೋ ಭಾರತದ ಗಡಿಯನ್ನು ದಾಟಿ ಬೆಳೆಯುವ ಮನಸ್ಸಾಯಿತು. ಲಂಡನ್‌ನಲ್ಲಿ ಚಿತ್ರ ರಚನೆಗಿಂತ ಹೆಚ್ಚಾಗಿ ಹೋಟೆಲ್‌ಗಳ ಪಾತ್ರೆ ತೊಳೆಯಬೇಕಾದ ಕೆಲಸಗಳನ್ನು ಮಾಡಬೇಕಾಯಿತು. ಅಮೆರಿಕದಲ್ಲಿ ಪೀನಟ್ ಖ್ಯಾತಿಯ ವ್ಯಂಗ್ಯ ಚಿತ್ರಕಾರ ಶುಲ್ಜ್‌ಗೆ ಸಹಾಯಕರಾಗಿ ದುಡಿದರು. ಅಲ್ಲೂ ಮಾರಿಯೋಗೆ ಸರಿ ಹೋಗಲಿಲ್ಲ. ವಾಪಾಸು ಮುಂಬಯಿಗೆ ಬಂದು ಇಳಿದಾಗ ಟೈಂಸ್‌ನಲ್ಲಿ ಅವಕಾಶಗಳು ಕಾದು ಕುಳಿತಿತ್ತು. ಎಕಾನಮಿಕ್, ಬ್ಯುಸಿನೆಸ್‌ನಲ್ಲಿ ಎಳ್ಳಷ್ಟೂ ಆಸಕ್ತಿ ಇಲ್ಲದೇ ಇದ್ದರೂ ‘ಎಕಾನಮಿಕ್ ಟೈಮ್ಸ್’ನಲ್ಲಿ ದಿನನಿತ್ಯ ಪಾಕೇಟ್ ಕಾರ್ಟೂನ್ ರಚಿಸತೊಡಗಿದರು.
ಅದು ಬಹಳಷ್ಟು ಜನಪ್ರಿಯವಾಯಿತು. ಈ ಜನಪ್ರಿಯತೆಯ ಹಿಂದೆ ಅವರು ರಚಿಸುತ್ತಿದ್ದ ವ್ಯಂಗ್ಯಚಿತ್ರಗಳಲ್ಲಿ ಇದ್ದ ಪಾತ್ರಗಳು. ಮಿಸ್ ಪೋನೆಸ್ಕೋ, ಗೋಡ್ ಬೋಲೆ,ಬಂಡಲ್‌ದಾಸ್, ಮೂನ್‌ದಾಸ್ ಫಿಲ್ಮಿಪೇರ್‌ಗಾಗಿ ರಜನಿ ನಿಂಬುಪಾನಿ ರಚಿಸಿದರು. ಕಾಗದದ ಮೇಲೆ ಪೊನೆಸ್ಕೋ, ರಜನಿ ನಿಂಬುಪಾನಿ ವ್ಯಂಗ್ಯಚಿತ್ರದಲ್ಲಿ ಅಂಕುಡೊಂಕುಗಳನ್ನು ಕಾಣಿಸಿಕೊಳ್ಳುತ್ತಿದ್ದಂತೆ ಅತ್ತ ವಿದೇಶಗಳಿಗೆ ಹೋಗಿ ‘ಅಂಕುಡೊಂಕು’ಗಳ ದರ್ಶನ ಭಾಗ್ಯ ಪಡೆದು ಬಂದರು.
ಪ್ಯಾರಿಸ್, ಪ್ರಾಂಕ್ ಪರ್ಟ್, ಟೋಕಿಯೋ, ಜರ್ಮನಿ, ಅಮೆರಿಕ ಅದರಲ್ಲೂ ಹ್ಯಾಂಗ್‌ಬರ್ಗ್‌ನಲ್ಲಿರುವ ಯಾವುದೇ ನಗ್ನ ನೃತ್ಯ ರೆಸ್ಟೋರೆಂಟ್‌ಗಳಿಗೆ ಭೇಟಿ ಕೊಡಲು ಮಾರಿಯೋ ಮರೆಯಲಿಲ್ಲ. ಅಲ್ಲಲ್ಲಿ ತನ್ನ ಕಲಾಕೃತಿಗಳನ್ನು ಪ್ರದರ್ಶನ ಭಾಗ್ಯ ಕೊಟ್ಟರು. ಜತೆಯಲ್ಲಿ ಮಾರಿಯೋ ಕಾರ್ಟೂನ್ ವರ್ಲ್ಡ್‌ನಿಂದ ಪುಸ್ತಕಗಳು ರಚನೆಗೊಂಡು ಮಾರುಕಟ್ಟೆಗೆ ಇಳಿಯಿತು. ಇತ್ತ ಮ್ಯೂರಲ್ ಆರ್ಟ್‌ಗಳನ್ನು ಮಾಡುತ್ತಾ ವಿಶ್ವದ ಶ್ರೀಮಂತ ಕಾರ್ಟೂನಿಸ್ಟ್ ಎನ್ನಿಸಿಕೊಂಡರು. ಜತೆಗೆ ಕೇಂದ್ರ ಸರಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಅವರ ಕಪಾಟಿನೊಳಗೆ ಬಿದ್ದುಕೊಂಡಿದೆ.
ಅಂದಹಾಗೆ ೮೫ರ ಹರೆಯ ಮಾರಿಯೋರ ಪೂರ್ತಿ ಹೆಸರು ಮಾರಿಯೋ ಜೋ ಆ ವೊ ಕಾರ್ಲೊಸ್ ರೊಜಾರಿಯೋ ಡಿ ಬ್ರಿಟ್ಟೋ ಅಂತೆ ಅವರ ವ್ಯಂಗ್ಯಚಿತ್ರದಂತೆ ಅವರ ಹೆಸರು ಕೂಡ ಮೈಲುಗಟ್ಟಲೆ ಇದೆ. ಆದರೆ ಅವರಿಗೆ ಮಾರಿಯೋ ಅಂತಾ ಕರೆದರೆ ಖುಷಿಯಾಗುತ್ತದೆ ಎಂದು ಒಂದ್ ಸಾರಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ಈಗಲೂ ಮಾರಿಯೋ ಅವರ ಕಲಾಕೃತಿಗಳು ನೋಡಿದಾಗ ಇಡೀ ಗೋವಾದ ದರ್ಶನ ಭಾಗ್ಯ ಎದುರುಗೊಳ್ಳುವ ಸತ್ಯ ಎಂದಿಗೂ ಮರೆಮಾಚಲು ಸಾಧ್ಯವಿಲ್ಲ.

Friday, October 7, 2011

ಮಲ್ಲಿಗೆ ಬೆಳೆಯ ಭಯಾನಕ ಕತೆ ‘ಶಂಕರಪುರ’ ಟ್ರ್ಯಾಜಿಡಿ ಊರು !


ಶಂಕರಪುರ ಎಂದಾಗ ಮಲ್ಲಿಗೆಯ ನೆನಪು ಕಾಡುತ್ತದೆ. ಈ ಊರಿಗೂ ಮಲ್ಲಿಗೆಗೂ ಬಹಳ ಹತ್ತಿರದ ನಂಟು. ಸಾವಿರಾರು ಕುಟುಂಬಗಳು ಈ ಮಲ್ಲಿಗೆ ಮ್ಯಾಲೆ ಬದುಕು ಕಟ್ಟುತ್ತಿವೆ. ಆದರೆ ಮಲ್ಲಿಗೆಗೆ ವಿಪರೀತವಾಗಿ ಬಳಸಲಾಗುತ್ತಿರುವ ಗೊಬ್ಬರ, ಕೀಟನಾಶಕ,ರೋಗನಾಶಕಗಳು ಶಂಕರಪುರವನ್ನು ಬರಡು ಮಾಡುತ್ತಿದೆಯಾ..? ಬೆಳೆಗಾರರ ಆರೋಗ್ಯ ಕೆಡಿಸುತ್ತಿದೆಯಾ ಎಂಬ ಪುಟ್ಟ ಕಳವಳ ಮಣ್ಣಿನ ಮಕ್ಕಳದ್ದು.. ಬನ್ನಿ ಅವರ ಬವಣೆ ಕೇಳೋಣ......

ಉಡುಪಿಯ ಶಂಕರಪುರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುವಾಗಲೇ ಮಲ್ಲಿಗೆಯಂತೆ ಮುದ್ದಾಡಿ ಬಿಡೋಣ ಎನ್ನುವ ಆಪ್ತತೆಯೊಂದು ಈ ಊರಿನಲ್ಲಿ ಸೃಷ್ಟಿಯಾಗುತ್ತದೆ. ರಬ್ಬರ್‌ಗೆ ಕೊಚ್ಚಿನ್, ಕ್ಯಾಲಿಕಟ್ ಇದ್ದ ಹಾಗೆ ಮಲ್ಲಿಗೆ ಎಂದಾಗ ಶಂಕರಪುರದ ಮಾರ್ಕೆಟ್ ಕಾಣಿಸಿಕೊಳ್ಳುತ್ತದೆ. ಕಟಪಾಡಿಯಿಂದ ಕೊಂಚ ದೂರಕ್ಕೆ ಹೋದಾಗ ಅಲ್ಲಿ ಶಂಕರಪುರ ಎದುರುಗೊಳ್ಳುತ್ತದೆ. ಅಂದಿಗೂ ಇಂದಿಗೂ ಅಲ್ಲಿನ ಸಾವಿರಾರು ಕುಟುಂಬಗಳು ಮಲ್ಲಿಗೆಯ ಮ್ಯಾಲೆ ಬದುಕು ಕಟ್ಟುತ್ತಿವೆ. ಈ ಮಲ್ಲಿಗೆ ಬೆಳೆಗಾರರ ಬದುಕು ಹಿಂದಿನಂತೆ ಈಗ ಇಲ್ಲ ಎನ್ನುವುದು ಎಲ್ಲರೂ ಒಪ್ಪಲೇ ಬೇಕಾದ ವಿಚಾರ.
ಶಂಕರಪುರದ ಮಲ್ಲಿಗೆ ಈಗ ಕಳೆಗುಂದುತ್ತಿದೆ. ಮಲ್ಲಿಗೆ ಬೆಳೆದವರಿಗೂ ಅದರ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ವಾಸ್ತವವಾಗಿ ಇಲ್ಲಿ ರಸಗೊಬ್ಬರ, ಮನಬಂದಂತೆ ಪ್ರಯೋಗ ಮಾಡುವ ಕೀಟನಾಶಕ, ರೋಗನಾಶಕದ ಪರಿಣಾಮ ಈಗ ಇದ್ಯಾವುದಕ್ಕೂ ಮಲ್ಲಿಗೆ ಬಗ್ಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಂಕರಪುರದ ಫಲವತ್ತಾದ ಮಣ್ಣು ಮಲ್ಲಿಗೆ ಬೆಳೆಗಾರರಿಂದ ಕೈ ಬಿಟ್ಟು ಹೋಗುತ್ತಿದೆ ಎನ್ನುವ ಪುಟ್ಟ ಕಳವಳ ಬೆಳೆಗಾರರಿಗೂ ಬಂದು ಬಿಟ್ಟಿದೆ. ಅದಕ್ಕೆ ತಕ್ಕಂತೆ ಪದೇ ಪದೇ ಮಲ್ಲಿಗೆ ಗಿಡಗಳಿಗೆ ಅಂಟಿಕೊಳ್ಳುವ ಕಾಯಿಲೆಗಳು ಈ ಎಲ್ಲ ವಿಚಾರಗಳಿಗೆ ಮತ್ತಷ್ಟೂ ಪುಷ್ಠಿ ನೀಡುತ್ತಿದೆ. ಜತೆಗೆ ವಿಪರೀತವಾಗಿ ರೋಗನಾಶಕಗಳ ಬಳಕೆಯಿಂದ ಮಲ್ಲಿಗೆ ಬೆಳೆಗಾರರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀಳುತ್ತಿದೆ ಎನ್ನುವ ಅರಿವು ಕೂಡ ಅವರಲ್ಲಿ ಬೆಳದಂತೆ ಕಾಣಿಸುತ್ತಿಲ್ಲ.
ಇಲ್ಲಿನ ಮಲ್ಲಿಗೆ ಉಡುಪಿ, ಮಂಗಳೂರು, ಭಟ್ಕಳ, ಕಾಸರಗೋಡು ಸೇರಿದಂತೆ ಮುಂಬಯಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಕುದುರಿಸಿದೆ. ಶಂಕರಪುರ, ಬಂಟಕಲ್ಲು, ಮಂಚಕಲ್ಲು, ಶಿರ್ವ ಹೀಗೆ ಮಲ್ಲಿಗೆಯ ಹಾದಿ ಹಾಗೂ ಉತ್ಪಾದನೆ ಎರಡೂ ಸಾಕಷ್ಟು ಬೆಳೆದಿದೆ ನಿಜ. ಆದರೆ ಹಿಂದಿನಂತಹ ಪ್ರಗತಿ ಇಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕೀಟನಾಶಕಗಳ ಬಳಕೆ ಇಲ್ಲದೇ ಹೋದರೆ ಮಲ್ಲಿಗೆ ಗಿಡವೇ ಉಳಿಯುವುದಿಲ್ಲ ಎನ್ನುವುದು ಮಂಚಕಲ್ಲುವಿನ ಮಲ್ಲಿಗೆ ಬೆಳೆಗಾರ ರಾಮಯ್ಯ ಅವರ ಮಾತು.
ಶಂಕರಪುರದ ಕತೆ ಏನು:
ವಾಸ್ತವಾಗಿ ಇಲ್ಲಿ ಮಲ್ಲಿಗೆ ಬೆಳೆಯ ಬೆಳೆಗಾರರೇ ತಜ್ಞರು. ಅವರು ಮಾಡಿದ್ದೇ ಕೃಷಿ ಜತೆಗೆ ಅವರು ಮಾಡಿದ್ದೇ ಮದ್ದು. ಇಲ್ಲಿಯ ಗೊಬ್ಬರದಂಗಡಿಯವರೇ ವಿಜ್ಞಾನಿಗಳು. ಕೃಷಿ ವಿವಿಯಿಂದ ಬರುವ ಅಕಾರಿಗಳು ಹೇಳುವ ಮಾತಿಗೆ ಬೆಳೆಗಾರರು ಬರೀ ತಲೆಯಾಡಿಸುವುದರಲ್ಲಿಯೇ ಸಮಯ ಕಳೆದು ಬಿಡುತ್ತಾರೆಯೇ ಹೊರತು. ಅವರು ಹೇಳಿದ ಸಲಹೆಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುವ ನಿರ್ಧಾರಕ್ಕಂತೂ ಬರೋದೆ ಇಲ್ಲ ಎನ್ನುವುದು ಕೃಷಿ ಅಕಾರಿ ರಾಜಣ್ಣ ಅವರ ಅಭಿಪ್ರಾಯ.
ಶಂಕರಪುರದ ಪಕ್ಕದ ಊರು ಇನ್ನಂಜೆಯ ದಡ್ಡುವಿನ ಶೋಭಾಕ್ಕ ೩೮ಮಲ್ಲಿಗೆ ಗಿಡಗಳನ್ನು ನೆಟ್ಟಿದ್ದಾರೆ. ೩೮ ಗಿಡಗಳಿಗೆ ಬರೋಬರಿ ೧೦ ಸಾವಿರ ರೂ. ಖರ್ಚು ಮಾಡುತ್ತಾರೆ. ೫ ಸಾವಿರ ಕೊಟ್ಟು ಎರಡು ಟೆಂಪೊ ಲೋಡು ಹಟ್ಟಿ ಗೊಬ್ಬರ ತಂದು ಮಲ್ಲಿಗೆ ಗಿಡಗಳಿಗೆ ಸುರಿಯುತ್ತಾರೆ. ೮೦೦-೧೦೦೦ರೂ. ಕೊಟ್ಟು ರಾಸಾಯನಿಕ ಗೊಬ್ಬರ ಹಾಗೂ ಔಷಯನ್ನು ತರುತ್ತಾರೆ. ದಿನಕ್ಕೆ ೧೫ ಅಟ್ಟೆಯಷ್ಟು ಮಲ್ಲಿಗೆ ಕೊಯ್ಯುತ್ತಿದ್ದ ಶೋಭಾಕ್ಕನಿಗೆ ಮಳೆಗಾಲದಲ್ಲಿ ಕೊಯ್ಯಲು ಕೂಡ ಮಲ್ಲಿಗೆ ಗಿಡದಲ್ಲಿ ಮಲ್ಲಿಗೆ ಬಿಡಿ ಎಲೆಯೂ ಇಲ್ಲವಂತೆ. ಆದರೂ ಕೊಂಚನೂ ಧೈರ್ಯ ಕುಂದಿಲ್ಲ ಶೋಭಾಕ್ಕನಿಗೆ, ಈಗಲೂ ಪಕ್ಕದ ಔಷಧ ಅಂಗಡಿಯಿಂದ ತಂದು ರಾಸಾಯನಿಕಗಳನ್ನು ಗಿಡಗಳಿಗೆ ಸುರಿಯುತ್ತಿದ್ದಾರೆ.
ತುಂಬಾನೇ ಮುಗ್ದರು:
ಶಂಕರಪುರ, ಬಂಟಕಲ್ಲು, ಕಟಪಾಡಿ ಟೋಟಲಿ ಹತ್ತಕ್ಕಿಂತ ಜಾಸ್ತಿ ರಾಸಾಯನಿಕ ಹಾಗೂ ಕೀಟನಾಶಕಗಳ ದುಕಾನುಗಳಿವೆ. ಇವು ಬರೀ ದುಕಾನುಗಳು ಎಂದರೆ ತಪ್ಪಾಗುತ್ತದೆ. ಮೊಡರ್ನ್ ಭಾಷೆಯಲ್ಲಿ ‘ಚಿಕಿತ್ಸಾಲಯ’ಗಳು ಇದೇ ಸರಿಯಾದ ಪದ. ಶಂಕರಪುರ ಹಾಗೂ ಪಕ್ಕದ ಊರುಗಳಿಗೆ ಇಲ್ಲಿಂದಲೇ ರಾಸಾಯನಿಕಗಳು ಪೂರೈಕೆಯಾಗುತ್ತಿರುವುದು. ದುರಾದೃಷ್ಟವೆಂದರೆ ಕೆಲವು ಮಲ್ಲಿಗೆ ಬೆಳೆಗಾರರಿಗೆ ಈ ರಾಸಾಯನಿಕಗಳ ಹೆಸರೇ ಗೊತ್ತಿಲ್ಲ ಬಿಡಿ. ಅಂಗಡಿಯವರು ಹೇಳುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಮಲ್ಲಿಗೆ ಗಿಡಗಳಿಗೆ ಸುರಿಯಲಾಗುತ್ತಿದೆ. ಹಸಿರು ಪುಡಿ, ಕೇಸರಿ ಪುಡಿ, ತ್ರಿಕೋನ ಮಾರ್ಕಿನ ಬಾಟಲಿ, ಬಾಣ ಮಾರ್ಕಿನ ಸ್ಯಾಚೆಟ್ ಇದೆಲ್ಲವೂ ಇಲ್ಲಿನ ಬೆಳೆಗಾರರು ರಾಸಾಯನಿಕಗಳಿಗೆ ಇಟ್ಟ ಲೋಕಲ್ ಬ್ರಾಂಡ್‌ನೇಮ್‌ಗಳು.
ಮಂಚಕಲ್ಲಿನ ಅಪ್ಪಿ, ಸುಂದರಿ, ಸೂರ‍್ಯ ಮೂಲ್ಯ ಹೇಳುವಂತೆ ‘ಸಾವಯವದಲ್ಲಿ ಬೆಳೆಯುವ ಮಲ್ಲಿಗೆ ಗಿಡಗಳಿಗೆ ರೋಗಗಳು ಇಲ್ಲ ಎನ್ನುವಂತಿಲ್ಲ. ಅಲ್ಲೂ ಇದೆ ಆದರೆ ಅದರ ಪ್ರಮಾಣ ಕೊಂಚ ಕಡಿಮೆ. ಜತೆಗೆ ಇಳುವರಿಗೂ ಬಹಳ ಪೆಟ್ಟಿದೆ. ಕೀಟನಾಶಕಗಳು ಬಳಸದೇ ಇದ್ದರೆ ಮಲ್ಲಿಗೆ ಕೃಷಿ ಬಿಡಬೇಕಾದೀತು’ ಎನ್ನುತ್ತಾರೆ ಅವರು. ಮಲ್ಲಿಗೆಯಲ್ಲಿ ರೋಗಗಳು ಬರಲಿ ಅಥವಾ ಬರದೇ ಇರಲಿ ಕೀಟನಾಶಕಗಳನ್ನು ತಂದು ಹಾಕದೇ ಇದ್ದರೆ ಮುಂದಿನ ವರ್ಷದಿಂದ ಕಾಯಿಲೆಗಳು ಕಟ್ಟಿಟ್ಟ ಬುತ್ತಿ ಎನ್ನುವುದು ಅವರ ಅಭಿಪ್ರಾಯ.
ಹೊಸ ಹೊಸ ರೋಗಗಳು:
ಬಂಟಕಲ್ಲಿನ ರಾಮಕೃಷ್ಣ ಶರ್ಮ ‘ನಾವು ತಂದೆಯ ಕಾಲದಿಂದಲೂ ಮಲ್ಲಿಗೆ ಕೃಷಿ ಮಾಡುತ್ತಾ ಬರುತ್ತಿದ್ದೇವೆ. ಅಂದಿನ ಕಾಲದಲ್ಲಿ ಇಳುವರಿ ಹೆಚ್ಚಿತ್ತು ಜತೆಗೆ ಕಾಯಿಲೆಗಳು ಕೂಡ ಕಡಿಮೆ ಇದ್ದವು. ಆದರೆ ಈಗ ಮಲ್ಲಿಗೆಯ ಗಿಡ ಹಳದಿ ಬಣ್ಣಕ್ಕೆ ತಿರುಗುವುದು, ಎಲೆಗಳಿಗೆ ಚುಕ್ಕೆ ರೋಗ ಕಾಣಿಸಿಕೊಳ್ಳುವುದು, ಗಿಡವೇ ಸತ್ತು ಹೋಗುವುದು, ಹಾವಸೆಯಿಂದ ಇಡೀ ಮಲ್ಲಿಗೆ ಗಿಡವೇ ತುತ್ತಾಗುವುದು ಇತ್ಯಾದಿ ಕಾಯಿಲೆಗಳಿಗೆ ಪರಿಹಾರ ನೀಡಲು ಇಂದಿನ ವರೆಗೂ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಬೆಳೆಗಾರರು ಇಂತಹ ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಾರೆ’ ಎನ್ನುತ್ತಾರೆ ಅವರು.
‘ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಮಲ್ಲಿಗೆಗೆ ಬರುವ ಕಾಯಿಲೆಗಳನ್ನು ತಪಾಸಣೆ ಮಾಡಲು ಕೃಷಿ ವಿವಿಯ ವಿಜ್ಞಾನಿಗಳ ಜತೆಯಲ್ಲಿ ತಜ್ಞರನ್ನು ಕರೆಸಿಕೊಂಡಿದ್ದೇವು. ಆದರೆ ಈ ತಜ್ಞರಿಗೂ ಈ ಕಾಯಿಲೆಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಮಲ್ಲಿಗೆ ಗಿಡಗಳನ್ನು ಹಾವಸೆ ತಿಂದು ಮುಗಿಸುತ್ತದೆ. ಈ ಸಮಯದಲ್ಲಿ ಕೃಷಿಕರಿಗೆ ದಿಕ್ಕೆ ತೋಚುವುದಿಲ್ಲ. ರಾಸಾಯನಿಕ ಅಂಗಡಿಯವರು ಇಂತಹ ಮದ್ದು ಕೊಟ್ಟು ನೋಡಿ ಎಂದು ಬೆಳೆಗಾರರಿಗೆ ಸಲಹೆ ಕೊಡುತ್ತಾರೆ ಇಂತಹ ಉದಾಹರಣೆಗಳೇ ಬಹಳಷ್ಟು ಶಂಕರಪುರಂನಲ್ಲಿ ಕಾಣಿಸಿಕೊಳ್ಳುತ್ತಿದೆ ’ಎನ್ನುತ್ತಾರೆ ಅವರು.
ಕೃಷಿಗೂ,ಕೃಷಿಕರಿಗೂ ತೊಂದ್ರೆ:
ಕೃಷಿ ಪತ್ರಕರ್ತ ನಾ.ಕಾರಂತ ಪೆರಾಜೆ ‘ಕೀಟನಾಶಕ ಹಾಗೂ ರಾಸಾಯನಿಕಗಳ ಪ್ರಯೋಗದಿಂದ ಕೃಷಿ ಭೂಮಿಯ ಜತೆಗೆ ಕೃಷಿಕರ ಆರೋಗ್ಯ ಕೂಡ ಹದಗೆಡುತ್ತದೆ. ಯಾವ ಕೀಟನಾಶಕಗಳು ಯಾವಾಗ ಏನೂ ಮಾಡುತ್ತದೆ ಎನ್ನುವಂತಿಲ್ಲ. ಅದೆಲ್ಲವೂ ಲಾಂಗ್ ಟೈಮ್ ಎಫೆಕ್ಟ್ ಎನ್ನುವುದು ಮಾತ್ರ ನಿಜ. ಕೆಲವು ಕೀಟನಾಶಕಗಳು ಅವುಗಳ ಬಳಕೆಯ ಸಮಯದಲ್ಲಿಯೇ ತನ್ನ ಪ್ರಭಾವವನ್ನು ತೋರಿಸುತ್ತದೆ. ಕೀಟನಾಶಕಗಳನ್ನು ಸಿಂಪಡಣೆ ಮಾಡುವಾಗಲೇ ತಲೆಸುತ್ತು ಬರೋದು ಒಂದು ರೀತಿಯ ಎಫೆಕ್ಟ್ . ಕೆಲವು ವರ್ಷಗಳ ನಂತರ ಕೃಷಿಕರಿಗೆ ಬೇರೆ ರೀತಿಯ ಕಾಯಿಲೆಗಳು ಮುತ್ತಿಡುವ ಚಾನ್ಸ್ ಬಹಳಷ್ಟಿದೆ. ಇದೆಲ್ಲವೂ ಅಧ್ಯಯನದಿಂದ ಮಾತ್ರ ಸಾಧ್ಯ ’ಎನ್ನುತ್ತಾರೆ ಅವರು.
ಮಲ್ಲಿಗೆ ಬೆಳೆಗಾರ ಗೊಂದಲಕ್ಕೆ ಸಿಲುಕಿಕೊಂಡಿರುವುದು ನಿಜ. ರಾಸಾಯನಿಕ ವಸ್ತುಗಳಿಗೆ ಸಾಥ್ ಕೊಡಬೇಕಾ ಅಥವಾ ಸಾವಯವದತ್ತ ಮುಖ ಮಾಡಬೇಕಾ..? ಎಂಬ ಚಿಂತೆಯಲ್ಲಿ ಮುಳುಗಿ ಹೋಗಿದ್ದಾನೆ. ರಾಸಾಯನಿಕದ ಹಾದಿ ಮಲ್ಲಿಗೆ ಬೆಳೆಗಾರನನ್ನು ತಿರುಗಿ ಬರಲಾಗದಂತೆ ಮಾಡಿದೆ ಎನ್ನುವುದು ಶಂಕರಪುರ ಮಲ್ಲಿಗೆ ಊರನ್ನು ನೋಡಿದವರಿಗೆ ಅನ್ನಿಸದೇ ಇರಲಾರದು.

( ೨೦೧೦-೨೦೧೧ರ ಸಾಲಿನ ‘ಕಡಂದಲೆ ಪ್ರಶಸ್ತಿ ’ಪಡೆದುಕೊಂಡ ಲೇಖನವಿದು. ಈ ಲೇಖನ ವಿಜಯ ಕರ್ನಾಟಕದ ೨ನೇ ಮುಖಪುಟದಲ್ಲಿ ಈ ಹಿಂದೆ ಪ್ರಕಟಗೊಂಡಿತ್ತು. )

ಅವಾರ್ಡ್ ಬಂತು ನಿರೀಕ್ಷೆ ಹೆಚ್ಚಾಯಿತು






ವಿಜಯ ಕರ್ನಾಟಕ ಮಂಗಳೂರು ಆವೃತ್ತಿಗೆಉಪಸಂಪಾದಕ/ ವರದಿಗಾರನಾಗಿ ಬಂದು ಬರೋಬರಿ ಐದು ವರ್ಷಗಳು ಉರುಳಿ ಹೋಗಿದೆ. ಕೆಲಸದಲ್ಲಿ ನೆಮ್ಮದಿ, ತೃಪ್ತಿ ಜತೆಗೆ ಗೌರವ, ಹೆಸರು ಎಲ್ಲವೂ ಪುಟ್ಟ ಅವಽಯಲ್ಲಿ ಬಂದು ಆಗಿತ್ತು. ಆದರೆ ಪ್ರಶಸ್ತಿ ಎನ್ನುವ ವಿಚಾರ ಮರೀಚಿಕೆ ಎಂದೇ ನಾನು ನಂಬಿಕೆ ಇಟ್ಟುಕೊಂಡಿದ್ದೆ. ಪತ್ರಿಕೋದ್ಯಮದಲ್ಲಿ ಹಿರಿಯ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ, ಸನ್ಮಾನಗಳು ಮೀಸಲಾಗಿದೆ ಎನ್ನುವ ಕಲ್ಪನೆಯ ಪ್ರಪಂಚದಲ್ಲಿ ದಿನಲೂ ತೇಲಾಡುತ್ತಿದ್ದೆ.
ಆದರೆ ಇದೆಲ್ಲವೂ ಸುಳ್ಳು ಅನ್ನಿಸಿದ್ದು ಮಾತ್ರ ಹಿರಿಯ ಪತ್ರಕರ್ತ ಕೆ.ಜೆ.ಶೆಟ್ಟಿ ಕಡಂದಲೆಯ ಹೆಸರಿನಲ್ಲಿ ಕಿನ್ನಿಗೋಳಿಯ ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡಿದ ಕಡಂದಲೆ ಪ್ರಶಸ್ತಿಸ್ವೀಕಾರ ಮಾಡಿದ ನಂತರ... ‘ಟ್ರ್ಯಾಜಿಡಿ ಊರು ಶಂಕರಪುರ ಮಲ್ಲಿಗೆಯ ಕಟುವಾಸನೆ’ ಎನ್ನುವ ನನ್ನ ಗ್ರಾಮೀಣ ವರದಿಗೆ ಕಡಂದಲೆ ಪ್ರಶಸ್ತಿ ಬಂದಿದೆ. ಕಿನ್ನಿಗೋಳಿಯಲ್ಲಿ ಅಕ್ಟೋಬರ್ ೨ರಂದು ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಪಡೆದುಕೊಂಡ ಕೆಲವೊಂದು ರಸ ನಿಮಿಷಗಳ ಚಿತ್ರವನ್ನು ನನ್ನ ಪತ್ರಕರ್ತ ಗೆಳೆಯ ಮನೋಜ್ ಹಾಗೂ ಸುನೀಲ್ ಹಳೆಯಂಗಡಿ ಸೆರೆ ಹಿಡಿದು ಇಮೇಲ್ ಕಳುಹಿಸಿ ಕೊಟ್ಟಿದ್ದಾರೆ.

Wednesday, September 28, 2011

ಸ್ಟೀವನ್ ರೇಗೊಗೆ ಕಡಂದಲೆ ಪ್ರಶಸ್ತಿ


ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡುವ ಕೆ.ಜೆ.ಶೆಟ್ಟಿ ಕಡಂದಲೆ ಪ್ರಶಸ್ತಿಗೆ ವಿಜಯ ಕರ್ನಾಟಕದ ಮಂಗಳೂರು ಆವೃತ್ತಿಯ ಉಪಸಂಪಾದಕ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕದಲ್ಲಿ ೨೦ಜುಲೈ೨೦೧೦ರಂದು ಪ್ರಕಟವಾಗಿದ್ದ ಸ್ಟೀವನ್ ರೇಗೊ ಅವರ ‘ಮಲ್ಲಿಗೆಯ ಕಟು ವಾಸನೆ, ಟ್ರ್ಯಾಜಿಡಿ ಊರು ಶಂಕರಪುರ ’ ವರದಿಯು ತೀರ್ಪುಗಾರರ ಗಮನ ಸೆಳೆದಿದೆ. ಅತಿಯಾದ ಕೀಟನಾಶಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಅವರ ಲೇಖನವು ಗ್ರಾಮೀಣ ವರದಿಗಾರಿಕೆ ಹಾಗೂ ನಗರಾಭಿವೃದ್ಧಿ ಸೇತುವಾಗಿತ್ತು. ಪತ್ರಕರ್ತ ದಿವಂಗತ ಕೆ.ಜೆ.ಶೆಟ್ಟಿ ಕಡಂದಲೆ ಸ್ಮರಣಾರ್ಥ ನೀಡುವ ಪ್ರಶಸ್ತಿಯು ೧೫ ಸಾವಿರ ರೂ. ನಗದು, ಫಲಕ ಹಾಗೂ ಸನ್ಮಾನ ಪತ್ರ ಒಳಗೊಂಡಿದೆ. ಅ.೨ರಂದು ಸಂಜೆ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.