Friday, February 7, 2014

ಕುಡ್ಲದ ಕಡಲತೀರಕ್ಕೆ ನಟರ ಠಿಕಾಣಿ !

* ಸ್ಟೀವನ್ ರೇಗೊ, ದಾರಂದಕುಕ್ಕು ಒಂದೆಡೆ ಕೋಸ್ಟಲ್‌ವುಡ್ ಸಿನಿಮಾ ನಗರಿ ಗರಿ ಬಿಚ್ಚಿಕೊಳ್ಳುತ್ತಿದ್ದಂತೆ ಮತ್ತೊಂದು ಕಡೆ ಕರಾವಳಿ ಪ್ರವಾಸಿ ತಾಣಗಳು ಇತರ ಭಾಷೆಗಳ ಸಿನಿಮಾ ಲೋಕದ ಮಂದಿ ಕಣ್ಣು ಹಾಕಿ ಕೂತಿದ್ದಾರೆ ಎನ್ನುವ ಮಾಹಿತಿ ಕುಡ್ಲದಲ್ಲಿ ಕಾಣ ಸಿಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕನ್ನಡದ ಸಿನಿಮಾ ಮಂದಿಯ ಜತೆಗೆ ಮಲಯಾಳಂ ಸಿನಿಮಾ ನಿರ್ದೇಶಕರು ಕೂಡ ಕರಾವಳಿಯ ಪ್ರವಾಸಿ ತಾಣಗಳು ಮೆಚ್ಚುಗೆಯಾಗುತ್ತಿದೆ. ಕಳೆದ ಒಂದು ವಾರದಿಂದ ಮಲಯಾಳಂ ನಟ ಮೋಹನ್ ಲಾಲ್ ತನ್ನ ಚಿತ್ರವೊಂದಕ್ಕೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಬೆವರು ಇಳಿಸಿಕೊಳ್ಳುತ್ತಿದ್ದಾರೆ. ಕೇರಳದ ಬಾಣಸಿಗನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ‘ರಸಂ’ ಚಿತ್ರಕ್ಕಾಗಿ ನಿರ್ದೇಶಕ ರಾಜೀವ್ ನಾಥ್ ಜತೆಗೆ ಮೋಹನ್ ಲಾಲ್ ಕರಾವಳಿಯಲ್ಲಿ ಓಡಾಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ಮಮ್ಮುಟ್ಟಿ ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ‘ ಮಂಗ್ಲೀಸ್’ ಚಿತ್ರಕ್ಕೆ ಕರಾವಳಿಯ ತಾಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ‘ಮಂಗ್ಲೀಸ್’ ಚಿತ್ರದಲ್ಲಿ ನಟ ಮಮ್ಮುಟ್ಟಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಚಿತ್ರತಂಡ ಕರಾವಳಿಯ ಮೀನುಗಾರಿಕೆ ಪ್ರದೇಶಗಳಲ್ಲಿ ಕ್ಯಾಮೆರಾ ಹೊಂದಿಸಿಕೊಳ್ಳಲು ವರ್ಕ್ ಔಟ್ ಮಾಡಿಕೊಳ್ಳುತ್ತಿದೆ. ‘ಮಂಗ್ಲೀಸ್’ ಚಿತ್ರವನ್ನು ಮಲಯಾಳಂನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಲಾಂ ಬಾಪು ಮಾಡುತ್ತಿದ್ದಾರೆ. ಕರಾವಳಿಯ ಮೀನುಗಾರಿಕೆ ಹಾಗೂ ಬೀಚ್‌ಗಳಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದೆ. ಇದರ ಜತೆಯಲ್ಲಿ ಕಳೆದ ವರ್ಷ ಹಿಂದಿಯಲ್ಲಿ ಬಂದ ‘ಡೇವಿಡ್’ ಚಿತ್ರದ ಬಹುಭಾಗ ಕರಾವಳಿಯಲ್ಲಿ ಚಿತ್ರೀಕರಣವಾಗಿತ್ತು. ಚಿತ್ರದ ನಾಯಕ ನಟ ಚಿಯನ್ ವಿಕ್ರಂ ಹಾಗೂ ಬಾಲಿವುಡ್ ನಟಿ ತಬು ಕರಾವಳಿ ತೀರದಲ್ಲಿ ಹದಿನೈದು ದಿನಗಳ ಕಾಲ ತಂಗಿದ್ದರು. ಕನ್ನಡದ ೧೫ ಚಿತ್ರಗಳಲ್ಲಿ ೨ರಿಂದ ೩ ಚಿತ್ರಗಳು ಕರಾವಳಿಯ ಪ್ರವಾಸಿ ತಾಣಗಳನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ. ಕರಾವಳಿ ಪ್ರವಾಸಿ ತಾಣ ಯಾಕೆ ಇಷ್ಟ: ಕರಾವಳಿಯಲ್ಲಿರುವ ಪ್ರವಾಸಿ ತಾಣಗಳು ಸಿನಿಮಾ ಮಂದಿಗೆ ಬೇಕಾದ ರೀತಿಯಲ್ಲಿ ಸಿಗುತ್ತದೆ. ಚಿತ್ರೀಕರಣಕ್ಕೆ ಜಾಸ್ತಿ ಒದ್ದಾಟ ನಡೆಸುವ ಅನಿವಾರ್ಯತೆ ಇರೋದಿಲ್ಲ. ಎಲ್ಲವೂ ರೆಡಿಮೇಡ್ ಆಗಿ ಕರಾವಳಿಯಲ್ಲಿ ಸಿಗುತ್ತದೆ ಎನ್ನುವುದು ‘ಚೆಲ್ಲಾಪಿಳ್ಳಿ’ ಚಿತ್ರದ ನಿರ್ದೇಶಕ ಸಾಯಿಕೃಷ್ಣ ಹೇಳುವ ಮಾತು. ಅವರು ಈ ಹಿಂದೆ ‘ಚೆಲ್ಲಾಪಿಳ್ಳಿ’ಯ ಮುಕ್ಕಾಲು ಭಾಗವನ್ನು ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದರು. ಕರಾವಳಿಯ ಬಹುಮುಖ್ಯ ರಂಗಭೂಮಿ ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದಿದ್ದರು. ‘ಕರಾವಳಿ ಪ್ರವಾಸಿ ತಾಣಗಳು ಎಲ್ಲರಿಗೂ ಇಷ್ಟವಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡಬೇಕಾದರೆ ಕರಾವಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಗಾಟ, ವಸತಿ, ಚಿತ್ರೀಕರಣಕ್ಕೆ ಬೇಕಾದ ವಸ್ತುಗಳು ಶೀಘ್ರದಲ್ಲಿ ಲಭ್ಯವಾಗುವ ತಾಣ ಎಂದೇ ಪರಿಗಣಿಸಬಹುದು ಎನ್ನುತ್ತಾರೆ ಖ್ಯಾತ ಕ್ಯಾಮೆರಾಮನ್ ರಾಮದಾಸ್ ಸಸಿಹಿತ್ಲು ಅವರು. ಈಗಾಗಲೇ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ದುಡಿದಿರುವ ರಾಮದಾಸ್ ತಮ್ಮಲ್ಲಿಗೆ ಬರುವ ಚಿತ್ರ ನಿರ್ದೇಶಕರಿಗೆ ಕರಾವಳಿಯ ಪ್ರವಾಸಿ ತಾಣಗಳನ್ನೇ ಚಿತ್ರಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ೪೦ಕ್ಕೂ ಅಧಿಕ ಚಿತ್ರಗಳು ಕರಾವಳಿಯ ನಾನಾ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣವಾಗುತ್ತಿದೆ. ಇದು ಕರಾವಳಿಯ ಗತ್ತನ್ನು ಎತ್ತಿ ಹಿಡಿಯುತ್ತಿದೆ.

Thursday, February 6, 2014

ಕುಡ್ಲದ ಬೆಡಗಿಗೆ ಲಾಲ್ ರಸಂ

* ಸ್ಟೀವನ್ ರೇಗೊ, ದಾರಂದಕುಕ್ಕು ಕೋಸ್ಟಲ್ ವುಡ್ ಸಿನಿಮಾ ನಗರಿಗೆ ಸಿಹಿ ಸುದ್ದಿಯೊಂದು ರವಾನೆಯಾಗಿದೆ. ಅದೇನಪ್ಪಾ ಅಂದರೆ ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಜೆಟ್ ಹೊತ್ತುಕೊಂಡು ಬರುತ್ತಿರುವ ದುಬಾಯಿಯಲ್ಲಿ ನಿರ್ಮಾಣವಾದ ‘ನಿರೆಲ್’(ನೆರಳು) ಚಿತ್ರದ ಲೀಡ್ ನಾಯಕಿ ವರುಣ ಶೆಟ್ಟಿಗೆ ಮಲಯಾಳಂ ಭಾಷೆಯಿಂದ ಆಫರ್ ಬಂದಿದೆ. ಅದು ಕೂಡ ಮಲಯಾಳಂನ ಸ್ಟಾರ್ ನಟರಾದ ಮೋಹನ್ ಲಾಲ್ ಹಾಗೂ ಇಂದ್ರಜೀತ್ ನಟಿಸುತ್ತಿರುವ ‘ರಸಂ’ ಚಿತ್ರದಲ್ಲಿ ವರುಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೇರಳದ ಬಾಣಸಿಗರೊಬ್ಬರ ಕತೆಯನ್ನು ಹೊತ್ತುಕೊಂಡು ಬರುತ್ತಿರುವ ‘ರಸಂ’ಗಾಗಿ ಕೇರಳ ಸೇರಿದಂತೆ ನಾನಾ ಕಡೆ ಹೊಸ ನಾಯಕಿಗೆ ಶೋಧ ಕಾರ‍್ಯ ಆರಂಭವಾಗಿತ್ತು. ಅದರಲ್ಲೂ ಚಿತ್ರದ ಕತೆಗೆ ಒಪ್ಪುವಂತಹ ನಾಯಕಿಯ ಅಗತ್ಯ ಇದೆ ಎಂದುಕೊಂಡು ರಸಂ ಚಿತ್ರದ ನಿರ್ದೇಶಕ ರಾಜೀವ್ ನಾಥ್ ಕೊನೆಗೆ ದುಬಾಯಿ ಕಡೆಗೆ ಕಣ್ಣು ಹಾಕಿದರು. ಇದೇ ಸಮಯದಲ್ಲಿ ‘ನಿರೆಲ್’ ಚಿತ್ರದಿಂದ ಕ್ಲಿಕ್ ಆಗಿರುವ ಹುಡುಗಿ ವರುಣ ಕಣ್ಣಿಗೆ ಬಿದ್ದರು ಎನ್ನುತ್ತಿದ್ದಾರೆ ರಸಂ ಚಿತ್ರತಂಡ. ‘ರಸಂ’ ಚಿತ್ರದಲ್ಲಿ ವರುಣ ಶೆಟ್ಟಿ ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದಾರೆ.ದುಬಾಯಿಯಲ್ಲಿ ನೃತ್ಯಗಾರ್ತಿಯಾಗಿ ಚಿತ್ರದೊಳಗೆ ವರುಣ ಎಂಟ್ರಿ ಪಡೆಯುತ್ತಾರೆ. ಅವರು ದೇವನ್(ನಡುಮುಡಿ ವೇಣು) ಅವರ ಪುತ್ರಿಯಾಗಿ ಇಂದ್ರಜೀತ್ ಅವರನ್ನು ವಿವಾಹವಾಗುತ್ತಾರೆ. ದೇವನ್ ಅವರ ಸ್ನೇಹಿತರಾಗಿ ಮೋಹನ್ ಲಾಲ್ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರದ ನಿರ್ದೇಶಕ ರಾಜೀವ್ ನಾಥ್ ಹೇಳುತ್ತಾರೆ. ಈಗಾಗಲೇ ಚಿತ್ರದ ಮುಹೂರ್ತ ನಡೆದು ತಿರುವನಂತಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಹಾಡಿಗೆ ಸರಿಸುಮಾರು ೨೫೦ ನೃತ್ಯಗಾರ್ತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಬಹುಭಾಗ ಕತಾರ್, ದುಬಾಯಿ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುವುದು ಚಿತ್ರತಂಡದ ಮಾತು. ಅಂದಹಾಗೆ ವರುಣ ಶೆಟ್ಟಿ ಮೂಲತಃ ಪಡುಬಿದ್ರಿಯ ಹುಡುಗಿ. ತೀರಾ ಇತ್ತೀಚೆಗೆ ಎಂಬಿಎ ಶಿಕ್ಷಣ ಮುಗಿಸಿಕೊಂಡು ದುಬಾಯಿಯಲ್ಲಿ ಹೆತ್ತವರ ಜತೆಗೆ ವಾಸವಾಗಿದ್ದಾರೆ.ಅದರಲ್ಲೂ ಸಿನಿಮಾದ ಕುರಿತು ಅತೀವ ಆಸಕ್ತಿ ಹೊತ್ತುಕೊಂಡಿರುವ ವರುಣ ಫ್ಯಾಶನ್ ಲೋಕದಲ್ಲೂ ಸಾಕಷ್ಟು ಗುರುತಿಸಿಕೊಂಡಿದ್ದಾರೆ.ಓದುವುದರ ಜತೆಯಲ್ಲಿ ಶಾಪಿಂಗ್ ಮಾಡುವುದು ಎಂದರೆ ವರುಣ ಶೆಟ್ಟಿಗೆ ಹೆಚ್ಚು ಇಷ್ಟ. ನಿರೆಲ್‌ನಲ್ಲಿ ಬಂತು ಅವಕಾಶ: ದುಬಾಯಿಯಲ್ಲಿ ಚಿತ್ರೀಕರಣಗೊಂಡು ಫೆ.೧೪ರಂದು ಪ್ರೇಮಿಗಳ ದಿನದಂದು ದುಬಾಯಿಯಲ್ಲೇ ತೆರೆಗೆ ಬರುತ್ತಿರುವ ‘ನಿರೆಲ್’ ಚಿತ್ರದಲ್ಲಿ ವರುಣ ಶೆಟ್ಟಿಗೆ ಬಹುಮುಖ್ಯವಾದ ಪಾತ್ರವಿದೆ. ಗೆಳೆತನ ಹಾಗೂ ಸಂಬಂಧಗಳ ಸುತ್ತ ನಡೆಯುವ ನಿರೆಲ್ ಚಿತ್ರವನ್ನು ಮಂಗಳೂರು ಮೂಲದ ರಂಜೀತ್ ಬಜಪೆ ನಿರ್ದೇಶನ ಮಾಡುತ್ತಿದ್ದಾರೆ. ಕೋಸ್ಟಲ್‌ವುಡ್ ಸಿನಿಮಾ ನಗರಿಯಲ್ಲೇ ‘ನಿರೆಲ್’ ಚಿತ್ರ ಬಹು ವೆಚ್ಚದಾಗಿದೆ ಎನ್ನುವುದು ನಿರ್ಮಾಪಕರ ಮಾತು. ಚಿತ್ರದ ಮುಕ್ಕಾಲು ಭಾಗ ದುಬಾಯಿಯಲ್ಲಿ ಚಿತ್ರೀಕರಣಗೊಂಡಿರುವ ನಿರೆಲ್‌ನಲ್ಲಿ ಕನ್ನಡದ ನಟ ರಮೇಶ್ ಅರವಿಂದ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

Wednesday, February 5, 2014

ಸುಮನ್ ಗೆ ಬಾಲಿವುಡ್ ಟಿಕೆಟ್

* ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್‌ನಲ್ಲಿ ‘ಗಬ್ಬರ್’ಅಬ್ಬರಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗುತ್ತಿದೆ. ಈಗಾಗಲೇ ಮೂರು ಭಾಷೆಯಲ್ಲಿ ಭರ್ಜರಿಯಾಗಿ ಖಾತೆ ತೆರೆದ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಕ್ರಿಶ್ ಬಾಲಿವುಡ್ ಅಂಗಳದಲ್ಲಿ ತಂದು ಕೂರಿಸಿದ್ದಾರೆ. ಅಂದಹಾಗೆ ಯಾವುದು ಈ ಚಿತ್ರ ಎನ್ನುವ ಡೌಟ್ ಬಂದರೆ ೨೦೦೨ರಲ್ಲಿ ತಮಿಳಿನಲ್ಲಿ ವಿಜಯಕಾಂತ್ ನಟಿಸಿದ ‘ರಾಮಣ್ಣ’ ಚಿತ್ರವೇ ಹಿಂದಿಯಲ್ಲಿ ಬರುತ್ತಿರುವ ‘ಗಬ್ಬರ್’ಎನ್ನುವುದು ಮಾಹಿತಿ. ಈ ಚಿತ್ರದ ಮೂಲಕ ಪಂಚಭಾಷೆ ತಾರೆ ಸುಮನ್ ಬಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ.
ಈ ಹಿಂದೆ ಈ ಚಿತ್ರಕ್ಕೆ ಖ್ಯಾತ ನಟ ಪ್ರಕಾಶ್ ರಾಜ್ ಹಾಗೂ ಸೋನು ಸೂದ್ ಆಯ್ಕೆಯಾಗಿದ್ದರು. ತೆಲುಗಿನ ಚಿತ್ರವೊಂದನ್ನು ನೋಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸುಮನ್ ತಮ್ಮ ಚಿತ್ರದಲ್ಲಿ ನಟಿಸಬೇಕು ಎಂದು ಪಟ್ಟು ಹಿಡಿದರು. ಇದೇ ಕಾರಣದಿಂದ ಸುಮನ್ ‘ಗಬ್ಬರ್’ ಚಿತ್ರ ತಂಡದಲ್ಲಿ ಸೇರುವ ಚಾನ್ಸ್ ಗಿಟ್ಟಿಸಿಕೊಂಡರು ಎನ್ನುತ್ತದೆ ಚಿತ್ರದ ತಂಡ. ‘ಗಬ್ಬರ್’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಶ್ರುತಿಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುಮನ್ ಚಿತ್ರದಲ್ಲಿ ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಕರೀನಾ ಕಪೂರ್ ಚಿತ್ರದ ಮುಖ್ಯ ಭಾಗವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಸಿಗುತ್ತಾರೆ. ೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಗಬ್ಬರ್’ ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಮಾಡಬೇಕಾಗಿತ್ತು. ಆದರೆ ಮುರುಗದಾಸ್ ತನ್ನದೇ ಚಿತ್ರವೊಂದರಲ್ಲಿ ಬ್ಯುಸಿಯಾಗಿರುವ ಕಾರಣ ತೆಲುಗಿನ ನಿರ್ದೇಶಕ ಕ್ರಿಶ್ ಹೆಗಲಿಗೆ ಜವಾಬ್ದಾರಿ ಬಂದು ಬಿದ್ದಿದೆ. ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಣ ಹಾಕುವ ಕೆಲಸ ಹೊತ್ತುಕೊಂಡಿದ್ದಾರೆ. ನಟ ಸುಮನ್ ‘ಗಬ್ಬರ್’ ಕುರಿತು ಹೇಳುವುದು ಹೀಗೆ: ಗಬ್ಬರ್ ಚಿತ್ರದಲ್ಲಿ ಒಳ್ಳೆಯ ಪಾತ್ರ. ಮುಖ್ಯ ಪಾತ್ರದ ಜತೆಯಲ್ಲಿಯೇ ನನ್ನ ಪಾತ್ರ ಸಾಗುತ್ತದೆ. ನಿರ್ದೇಶಕ ಕ್ರಿಶ್ ಜತೆಗೆ ಈ ಹಿಂದೆ ತೆಲುಗಿನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದೆ. ನನ್ನ ಗೆಳೆಯನ ವಿವಾಹದ ದಿನವೇ ನನಗೆ ಈ ಅವಕಾಶ ಬಂದಿರುವುದು ನನಗೆ ಅತೀವ ಸಂತೋಷವಾಗಿದೆ. ಅಂದಹಾಗೆ ನಟ ಸುಮನ್ ಬಾಲಿವುಡ್ ಚಿತ್ರದ ಜತೆ ತೆಲುಗಿನ ಬಹುಕೋಟಿ ವೆಚ್ಚದ ‘ರುದ್ರಮ್ಮ ದೇವಿ’, ನಟ ಬಾಲಕೃಷ್ಣ ಜತೆಗೆ ‘ಲೆಜೇಂಡ್’ ಹಾಗೂ ನಟ ನಾಗಚೈತನ್ಯ ಜತೆಯಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಮಿಳು ಹಾಗೂ ಕನ್ನಡ ಚಿತ್ರಕ್ಕೆ ಸುಮನ್ ಬುಕ್ ಆಗಿದ್ದಾರೆ. ಟೋಟಲಿ ಸುಮನ್ ಪಾಲಿಗೆ ಈ ವರ್ಷ ವರವಾಗುವ ಸಾಧ್ಯತೆಗಳೇ ಜಾಸ್ತಿ.

Tuesday, February 4, 2014

ಕೋಸ್ಟಲ್‌ವುಡ್‌ನಲ್ಲಿ ಮನೋಹರ ಆಟಕ್ಕೆ ಬ್ರೇಕ್

ಸ್ಟೀವನ್ ರೇಗೊ, ದಾರಂದಕುಕ್ಕು ಕೋಸ್ಟಲ್‌ವುಡ್ ಸಿನಿಮಾ ನಗರಿ ಏಕ್‌ದಂ ಕಿಕ್ ಏರಿಸಿಕೊಳ್ಳುತ್ತಿದೆ. ಕಳೆದ ವರ್ಷದ ಕೊನೆಯಲ್ಲಿಯೇ ಸರಿಸುಮಾರು ೪೦ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿತ್ತು.ಈ ಬಾರಿ ಮತ್ತೆ ಹೊಸ ಸಿನಿಮಾಗಳು ನೋಂದಣಿಗಾಗಿ ಕಾದು ಕೂತಿದೆ. ಕೋಸ್ಟಲ್‌ವುಡ್‌ನಲ್ಲಿ ಒಳ್ಳೆಯ ಪೈಪೋಟಿಯ ಜತೆಗೆ ಗುಣ ಮಟ್ಟದ ಚಿತ್ರಗಳು ಬರುವ ಸಾಧ್ಯತೆಗಳು ಈ ಬಾರಿ ದಟ್ಟವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ತಿಂಗಳಿಗೆ ಒಂದರಂತೆ ತುಳು ಸಿನಿಮಾಗಳು ಥಿಯೇಟರ್‌ನ ಮುಂದೆ ಬರಲು ದೊಂಬಾಲು ಬಿದ್ದಿದೆ. ಇದರ ನಡುವೆ ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ಬಿರುಗಾಳಿಯೊಂದು ಎದ್ದು ಕೂತಿದೆ. ಕನ್ನಡದ ಸಂಗೀತ ನಿರ್ದೇಶಕ ವಿ.ಮನೋಹರ್ ತುಳು ಚಿತ್ರ ‘ಚಾಳಿಪೋಲಿ’ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಡೀ ಚಿತ್ರ ತಂಡವೇ ವಿ.ಮನೋಹರ್ ತುಳು ಚಿತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಯನ್ನು ಸುನಾಮಿಯಂತೆ ಎಬ್ಬಿಸಿ ಕೂತಿದ್ದರು. ಚಿತ್ರದ ಕತೆಯಿಂದ ಹಿಡಿದು ಚಿತ್ರ ತಾರಾಗಣ ಎಲ್ಲವನ್ನು ಆಯ್ಕೆ ಮಾಡುವ ವರೆಗೂ ವಿ. ಮನೋಹರ್ ನಿರ್ದೇಶಕರಾಗಿಯೇ ಉಳಿದು ಬಿಟ್ಟಿದ್ದರು. ಯಾಕೋ ‘ಚಾಳಿಪೋಲಿ’ ಚಿತ್ರದ ಚಿತ್ರೀಕರಣ ಆರಂಭ ಮಾಡಬೇಕು ಎನ್ನುವಷ್ಟರಲ್ಲಿ ವಿ.ಮನೋಹರ್ ಅವರ ನಿರ್ದೇಶಕನ ಸ್ಥಾನಕ್ಕೆ ಸಂಕಟ ಬಂದಿದೆ. ಅವರ ಜಾಗಕ್ಕೆ ಈಗ ಹೊಸ ಹೆಸರು ಕೇಳಿ ಬಂದಿದೆ. ‘ಚಾಳಿಪೋಲಿ’ಯ ಕತೆ ಬರೆದವರಲ್ಲಿ ಒಬ್ಬರಾದ ಕಾವೂರಿನ ವೀರೇಂದ್ರ ಶೆಟ್ಟಿ. ಚಿತ್ರದ ಸೂತ್ರಧಾರನಾಗುವ ಚಾನ್ಸ್ ಸಿಕ್ಕಿದೆ ಎನ್ನುವುದು ಚಿತ್ರ ತಂಡದ ಗುಪ್ತ ಮಾಹಿತಿ. ಈ ಹಿಂದೆ ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ವಿ.ಮನೋಹರ್ ಬರೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶಕರಾಗಿ ಉಳಿದುಬಿಟ್ಟಿದ್ದಾರೆ. ಕನ್ನಡದ ನಿರ್ದೇಶಕರೊಬ್ಬರು ತುಳು ಸಿನಿಮಾಕ್ಕೆ ಬರುವ ಕ್ಷಣಕ್ಕೆ ಮುಹೂರ್ತ ಕೂಡಿಬಂದಿಲ್ಲ ಎನ್ನುವುದು ಈ ಮೂಲಕ ಸ್ವಷ್ಟವಾಗುತ್ತಿದೆ. ಚಾಳಿಪೋಲಿಯಲ್ಲಿ ಕಿರಿಕ್ ಆಯಿತಾ..? ತುಳು ಸಿನಿಮಾಗಳು ಒಂದರ ಹಿಂದೆ ಒಂದರಂತೆ ನೋಂದಣಿಯಾಗುತ್ತಿದ್ದಾಗ ‘ಚಾಳಿಪೋಲಿ’ ಎನ್ನುವ ಟೈಟಲ್ ಕಾರ್ಡ್ ಏಕ್‌ದಂ ರಿಜಿಸ್ಟ್ರಾರ್ ಆಯಿತು. ಚಿತ್ರದಲ್ಲಿ ಹೊಸ ಕಲಾವಿದರು ಹಾಗೂ ಹೊಸ ಕತೆ ಇಟ್ಟುಕೊಂಡೇ ಸಿನಿಮಾ ಮಾಡಲಾಗುತ್ತಿದೆ ಎಂದೇ ಚಿತ್ರದ ನಿರ್ಮಾಪಕರು ಹೇಳಿಕೊಂಡು ಬಂದಿದ್ದರು. ಅದರಂತೆ ಸಿನಿಮಾದ ಕುರಿತು ಸಹಜವಾಗಿಯೇ ಕೋಸ್ಟಲ್‌ವುಡ್‌ನಲ್ಲಿ ನಿರೀಕ್ಷೆಗಳಿತ್ತು. ಚಿತ್ರಕ್ಕೆ ಖ್ಯಾತನಾಮರನ್ನು ಹುಡುಕಿಕೊಂಡು ತಂದುಕೂರಿಸುವ ಕೆಲಸಗಳು ಭರದಿಂದ ನಡೆಯುತ್ತಾ ಸಾಗುತ್ತಿತ್ತು. ಇದೇ ಸಮಯದಲ್ಲಿ ವಿ. ಮನೋಹರ್ ನಿರ್ದೇಶಕರಾಗಿ ಮಾಡುವ ಕೆಲಸ ನಡೆಯಿತು. ಕನ್ನಡ ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳುವಂತೆ ‘ ಚಾಳಿಪೋಲಿ ಚಿತ್ರ ತಂಡದ ಜತೆಗೆ ಯಾವುದೇ ಗೊಂದಲಗಳಿಲ್ಲ. ನನಗೆ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋವೊಂದಕ್ಕೆ ಜಡ್ಜ್ ಆಗಿ ಬುಕ್ ಮಾಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿದೆ.ಅದಕ್ಕೂ ಮುಖ್ಯವಾಗಿ ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶಕ. ಈಗಾಗಲೇ ಹಿನ್ನೆಲೆ ಸಂಗೀತ ನೀಡಿದ್ದೇನೆ. ೫ ಹಾಡುಗಳಿಗೆ ಟ್ಯೂನ್ ಕಳಿಸಿಕೊಟ್ಟಿದ್ದೇನೆ. ತುಳು ಸಿನಿಮಾ ಮಾಡುವಾಗ ಮಂಗಳೂರಿನಲ್ಲೇ ಇರಬೇಕಾಗುತ್ತದೆ. ಚಿತ್ರಕ್ಕೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ನಾನೇ ನಿರ್ದೇಶಕನ ಸ್ಥಾನದಿಂದ ಕಿತ್ತು ಹಾಕಿ ಎಂದು ನಿರ್ಮಾಪಕರಿಗೆ ಹೇಳಿದ್ದೆ ಅದರಂತೆ ಅವರು ಮಾಡಿದ್ದಾರೆ ಎನ್ನುತ್ತಾರೆ ಅವರು. ಆದರೆ ಮತ್ತೊಂದು ಮೂಲದ ಪ್ರಕಾರ ‘ಚಾಳಿಪೋಲಿ’ಯಲ್ಲಿ ಮನೋಹರ್ ಮೂಲ ಕತೆಯಲ್ಲಿ ಬದಲಾವಣೆ ಮಾಡುವ ಮೂಲಕ ಚಿತ್ರದ ಬಜೆಟ್ ಏರಿಸಿದ್ದಾರೆ ಎನ್ನುವ ಆಧಾರದಲ್ಲಿ ಚಿತ್ರದ ನಿರ್ದೇಶಕನ ಸ್ಥಾನದಿಂದ ವಂಚಿತನಾಗಬೇಕಾಯಿತು ಎನ್ನುವ ಮಾತು ಕೂಡ ಕೋಸ್ಟಲ್‌ವುಡ್ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಯಾವುದು ಸತ್ಯ ಯಾವುದು ಮಿಥ್ಯ ಎನ್ನುವ ಪ್ರಶ್ನೆ ಮಾತ್ರ ಬಾಕಿ ಉಳಿದಿದೆ. ತುಳುವಿಗೆ ಬರುತ್ತಾರಾ ಮನೋಹರ್?: ಮೂಲತಃ ಪುತ್ತೂರಿನ ವಿಟ್ಲ ನಿವಾಸಿಯಾದ ವಿ.ಮನೋಹರ್ ಬೆಳೆದದ್ದು ಎಲ್ಲವೂ ಕನ್ನಡದಲ್ಲಿ ಎನ್ನುವುದು ಚಿತ್ರ ರಸಿಕರಿಗೆ ಗೊತ್ತಿರುವ ವಿಚಾರ. ಆದರೆ ತುಳುವಿನ ಚಿತ್ರಗಳಿಗೆ ಹಾಡು ಬರೆದುಕೊಡುವ ಜತೆಗೆ ಸಂಗೀತ ನೀಡುವ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುವ ಮನೋಹರ್ ತುಳು ಚಿತ್ರವನ್ನು ನಿರ್ಮಾಣ, ನಿರ್ದೇಶನ ಮಾಡುವ ಕೆಲಸಕ್ಕೆ ಎಂದಿಗೂ ಕೈ ಹಾಕಿಲ್ಲ. ಈಗ ಬಂದ ಅವಕಾಶವನ್ನು ಕೂಡ ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ. ಈ ಮೂಲಕ ಮನೋಹರ್ ತುಳು ಸಿನಿಮಾಕ್ಕೆ ಬರುವ ವಿಚಾರ ಸಧ್ಯಕ್ಕಂತೂ ಬ್ರೇಕ್ ಬಿದ್ದಿದೆ.

Tuesday, January 7, 2014

ಕ್ಯಾಂಪಸ್ ಯುವಜನತೆಯನ್ನು ಮೋಡಿ ಮಾಡಲು ಸ್ಟೈಲ್ ಮಂತ್ರ!

*ಸ್ಟೀವನ್ ರೇಗೊ, ದಾರಂದಕುಕ್ಕು ಕುಡ್ಲದ ಯೂತ್ ಬ್ರಿಗೇಡ್ ಮತ್ತೆ ರಾಕಿಂಗ್ ಮೂಡ್‌ಗೆ ತಲುಪುವ ಸುದ್ದಿಯೊಂದು ಕುಡ್ಲದ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಅದರಲ್ಲೂ ಕಾಲೇಜು ಮೆಟ್ಟಿಲು ಹತ್ತಿದ ಬರೋಬರಿ ೧೮ರಿಂದ ೨೮ರ ಅಸುಪಾಸಿನ ವಿದ್ಯಾರ್ಥಿಗಳಿಗಂತೂ ಈ ಸ್ಟೈಲ್ ಮಂತ್ರದಲ್ಲಿ ತಮ್ಮ ಚಮಕ್‌ಗಿರಿ ತೋರಿಸುವ ಚಾನ್ಸ್ ಇದೆ. ಈಗಾಗಲೇ ಮಿಕ್ಸಿಂಗ್ ಕಲ್ಚರ್‌ನಲ್ಲಿ ತಲೆತೂಗುತ್ತಿರುವ ಕುಡ್ಲ ಫ್ಯಾಶನ್ ಹಬ್ ಆಗಿ ಬದಲಾಗುತ್ತಿದೆ. ಈಗಾಗಲೇ ನಗರದಲ್ಲಿ ಫ್ಯಾಶನ್ ಪರೇಡ್‌ಗಳು, ಮೊಡೆಲ್ ಗಳ ರ‍್ಯಾಂಪ್‌ವಾಕ್ ಎಲ್ಲವೂ ಫ್ಯಾಶನ್ ಲೋಕದ ಮಬ್ಬು ಕವಿಸಿದೆ. ಇದರ ಜತೆ ಜತೆಗೆ ರಾಜ್ಯದಲ್ಲಿ ಮೊದಲ ಫ್ಯಾಶನ್ ಟ್ರೈನಿಂಗ್ ಸಂಸ್ಥೆ ಕೂಡ ಮಂಗಳೂರಿನಲ್ಲಿ ಹುಟ್ಟಿಕೊಂಡು ರೂಪದರ್ಶಿಗಳನ್ನು ತಯಾರು ಮಾಡುತ್ತಿದೆ. ಇದೆಲ್ಲವನ್ನು ಕೌಂಟ್ ಲೀಸ್ಟ್‌ನಲ್ಲಿ ತೂಗಿ ಹಾಕುವಾಗ ಕುಡ್ಲದ ಯೂತ್ ಬ್ರಿಗೇಡ್ ಸ್ಟೈಲ್ ಮಂತ್ರಕ್ಕೆ ಶರಣಾಗುತ್ತಿದೆ ಎನ್ನುವುದು ಸ್ವಷ್ಟವಾಗುತ್ತಿದೆ. ಏನಿದು ಸ್ಟೈಲ್ ಮಂತ್ರ: ಸ್ಟೈಲ್ ಮಂತ್ರ ಇದೊಂದು ನಾನಾ ಪದಗಳ ಸಮ್ಮಿಲನ. ಈ ಪದಗಳ ಪುಂಜಗಳು ಜತೆಗೂಡಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸುವುದೇ ಈ ಸ್ಟೈಲ್ ಮಂತ್ರದ ಹೊಸ ವ್ಯಾಖ್ಯೆ. ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶೈಲಿಯ ಕುರಿತಾಗಿ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಪಡೆದು ತಮ್ಮ ಡ್ರೆಸಿಂಗ್ ಸ್ಟೈಲ್, ಹಾವಭಾವಗಳ ಕುರಿತು ಬಿಂದಾಸ್ ಆಗಿ ಹೇಳುವುದು ಈ ಸ್ಟೈಲ್ ಮಂತ್ರದ ಹಕೀಕತ್ತು. ಅಂದಹಾಗೆ ಇದರಲ್ಲಿ ಗೆದ್ದವರಿಗೆ ನಾನಾ ಬಹುಮಾನಗಳ ಜತೆಗೆ ಮೂರು ದಿನಗಳ ಪ್ರವಾಸ ಹಾಗೂ ಮಿಸ್ಟರ್ ಆಂಡ್ ಮಿಸ್ಸಿ ೨೦೧೪ ಸ್ಪರ್ಧೆಗೆ ನೇರ ಪ್ರವೇಶ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ ಫ್ಯಾಶನ್ ಎಬಿಸಿಡಿ ಮೊದಲ ಮಹಡಿ, ಎಂಪಾಯರ್ ಮಾಲ್, ಎಂ.ಜಿ. ರೋಡ್ ಮಂಗಳೂರು ಇವರನ್ನು ಸಂಪರ್ಕಿಸಬಹುದು. ಕೋಟ್ ಕಾರ್ನರ್ ‘ಮಂಗಳೂರಿನ ಯುವಜನತೆ ತಮ್ಮದೇ ಸ್ಟೈಲ್ ಮಂತ್ರಗಳನ್ನು ಹೊಂದಿದ್ದಾರೆ. ಆದರೆ ಅವರಿಗೊಂದು ವೇದಿಕೆಯ ಕೊರತೆ ಇದ್ದೇ ಇದೆ. ತಮ್ಮ ಬದುಕಿನ ಶೈಲಿ, ಟ್ರೆಂಡ್ ಸೆಟ್ಟಿಂಗ್ ವಿಚಾರಗಳಿಂದ ಯುವಜನತೆ ಫ್ಯಾಶನ್ ದುನಿಯಾದಲ್ಲಿ ಹೊಂದಿರುವ ಆಸಕ್ತಿಯನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ’ ಅನುಪಮ ಸುವರ್ಣ, ಮುಖ್ಯಸ್ಥರು ಫ್ಯಾಶನ್ ಎಬಿಸಿಡಿ, ಮಂಗಳೂರು. (vk nammakarvali magazine carried on 8.1.2014)

Sunday, December 29, 2013

ಮಲಾನಿ ಬಾಲಿವುಡ್‌ನಲ್ಲಿ ಹೊಸ ಕಹಾನಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸಂದೀಪ್ ಮಲಾನಿ ಬಾಲಿವುಡ್ ಅಂಗಳದಲ್ಲಿ ಸೈಲೆಂಟ್ ವರ್ಕ್‌ರ್ ಎಂದೇ ಕರೆಸಿಕೊಂಡವರು. ಬಾಲಿವುಡ್ ಅಂಗಳದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸದಾ ಕಾಲ ಬ್ಯುಸಿಯಾಗಿರುವ ಮಂಗಳೂರು ಮೂಲದ ಸಂದೀಪ್ ಮಲಾನಿ ಈಗ ಹೊಸ ಕಹಾನಿಯೊಂದನ್ನು ರೆಡಿ ಮಾಡಿದ್ದಾರೆ. ಅದೇನಪ್ಪಾ ಅಂದರೆ ಅತ್ತ ಕಮರ್ಷಿಯಲ್ ಆಂಗಲ್‌ನಲ್ಲೂ ಇಲ್ಲದ ಇತ್ತ ಆರ್ಟ್ ಕೆಟಗರಿಗೂ ಸೇರದಂತಹ ಮೂರು ಕತೆಗಳನ್ನು ಇಟ್ಟುಕೊಂಡು ಮೂರು ಚಿತ್ರಗಳನ್ನು ಮಾಡಲು ಭರ್ಜರಿ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
‘ಐ ಲವ್ ಹೃತಿಕ್’ ಎನ್ನುವ ಚಿತ್ರದಲ್ಲಿ ಬಾಲಕನ ಮುಗ್ದ ಜಗತ್ತಿನ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುವ ಯೋಜನೆ ಮಲಾನಿ ತಲೆಗೆ ಬಂದಿದೆ. ಇದರ ಜತೆಯಲ್ಲಿ ‘ಓ ಮೈ ಡಾಗ್’ ಅನ್ಯ ಕೋಮಿನ ಯುವಕ -ಯುವತಿಯ ಪ್ರಣಯ ಕತೆಯನ್ನು ಚಿತ್ರದ ಮೂಲಕ ಹೊರತರುವ ಕೆಲಸ ಕೂಡ ಮಲಾನಿ ಕೈಗೆತ್ತಿಕೊಂಡಿದ್ದಾರೆ. ಹಾಹಾ.. ಹ್ಹೀ ಹ್ಹೀ ಎನ್ನುವ ಹಾಸ್ಯ ಚಿತ್ರ ಮಲಾನಿ ಬಾಣಲೆಯಲ್ಲಿ ಸಿದ್ಧವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ಈ ಎಲ್ಲ ಚಿತ್ರಗಳು ಚಿತ್ರೀಕರಣಗೊಂಡು ತೆರೆಗೆ ತರುವ ಕೆಲಸ ಮಲಾನಿಯಿಂದ ನಡೆಯಲಿದೆ. ಈ ಮೂರು ಚಿತ್ರಗಳನ್ನು ಮಲಾನಿ ತಮ್ಮ ಹೋಮ್ ಬ್ಯಾನರ್ ಮಲಾನಿ ಟಾಕೀಸ್ ಮೂಲಕ ಹೊರ ತರುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ತಮ್ಮ ಕುಟುಂಬದ ಸಮೇತರಾಗಿ ಮಂಗಳೂರಿನ ಮನೆಗೆ ಬಂದಿದ್ದಾಗ ನಿರ್ದೇಶಕ ಕಮ್ ಕತೆಗಾರ ಮಲಾನಿ ಲವಲವಿಕೆಯ ಜತೆಯಲ್ಲಿ ತಮ್ಮ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ೨೦೧೩ ನನ್ನ ಪಾಲಿಗೆ ವಿಶೇಷವಾಗಿತ್ತು. ೯ ಸಂಗೀತ ಪ್ರದಾನವಾದ ಡಾಕ್ಯುಮೆಂಟರಿಗಳನ್ನು ಸಿದ್ಧಪಡಿಸಿದ್ದೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಯಶ್‌ರಾಜ್ ಅವರ ನೆನಪಿಗಾಗಿ ‘ಯಶ್‌ರಾಜ್ ಹೀರೋಯಿನ್ಸ್ ದೇ ಜಾಯೆಂಗೆ’ ಹಾಗೂ ಬಾಲಿವುಡ್ ನಟಿ ಶ್ರೀದೇವಿಯ ೫೦ನೇ ಹುಟ್ಟುಹಬ್ಬಕ್ಕಾಗಿ ಶ್ರೀದೇವಿಯ ಬಾಲಿವುಡ್ ಪ್ರಯಾಣ ಕುರಿತಾದ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಡಾಕ್ಯುಮೆಂಟರಿಗಳನ್ನು ಸಿದ್ಧ ಪಡಿಸಿದ್ದೇನೆ ಎಂದರು. ೧೦೦ರ ಸಿನಿಮಾಕ್ಕೆ ಎರಡು ಡಾಕ್ಯುಮೆಂಟರಿ: ಭಾರತೀಯ ಸಿನಿಮಾ ರಂಗ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಎರಡು ಸಂಗೀತ ಡಾಕ್ಯುಮೆಂಟರಿಗಳಾದ ‘ಫಿಲ್ಮ್‌ಮಲಾನಿ’ ಹಾಗೂ ‘ಮಲಾನಿಯೀಸ್ ಚಿತ್ರಹಾರ್’ ೫ ಗಂಟೆಗಳ ಸಂಗೀತ ಕಲೆಕ್ಷನ್‌ಗಳನ್ನು ಸಂದೀಪ್ ಮಲಾನಿ ಹೊರ ತಂದಿದ್ದಾರೆ. ಇದರ ಜತೆಯಲ್ಲಿ ಕೊಂಕಣಿ ಹಾಗೂ ತುಳು ಎರಡು ಭಾಷೆಗಳನ್ನು ಒಂದೇ ಚಿತ್ರದಲ್ಲಿ ಜೋಡಿಸಿಕೊಂಡು ತುಳು ಚಿತ್ರವೊಂದನ್ನು ಮಾಡುತ್ತಿದ್ದಾರೆ. ೨೦೧೪ರ ಕೊನೆ ಭಾಗದಲ್ಲಿ ಈ ಚಿತ್ರವನ್ನು ಕೋಸ್ಟಲ್‌ವುಡ್ ಮಾರುಕಟ್ಟೆಯಲ್ಲಿ ಬಿಡುವ ಕುರಿತು ಮಲಾನಿ ಚಿಂತನೆ ಮಾಡುತ್ತಿದ್ದಾರೆ. ಮಲಾನಿ ದಿಡೀರ್ ಸಿನಿಮಾ ಎಂಟ್ರಿ: ರೋಮನ್ ಕೆಥೋಲಿಕ್ ಕುಟುಂಬದಲ್ಲಿ ೧೯೭೧ರಲ್ಲಿ ಮುಂಬೈನಲ್ಲಿ ಜನಿಸಿದ ಸಂದೀಪ್ ಮಲಾನಿ ಬೆಳದದ್ದು ಮಾತ್ರ ನಮ್ಮ ನಾಡಿನ ಕಡಲ ಕಿನಾರೆ ಮಂಗಳೂರಿನಲ್ಲಿ. ತಂದೆ ಸಿನಿಮಾ ಹಂಚಿಕೆದಾರರಾಗಿದ್ದ ಕಾರಣ ಸದಾ ಮನೆಯಲ್ಲಿ ಸಿನಿಮಾಗಳ ಕುರಿತು ಚರ್ಚೆ ನಡೆಯುತ್ತಿತ್ತು. ಅಂಥಹಾ ಚರ್ಚೆಗಳೇ ಸಂದೀಪ್ ಮಲಾನಿಯನ್ನು ಇಂದು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಮುಟ್ಟಿಸಿ ಮುನ್ನಡೆಸಲು ಕಾರಣವಾಯಿತು. ಬಾಲ್ಯದಿಂದ ಹಿಡಿದು ತರುಣಾವಸ್ತೆ ತಲುಪುವ ತನಕವೂ ಸಂದೀಪ್ ಚಿತ್ರದಲ್ಲಿ ಚಲನಚಿತ್ರಗಳೇ ತುಂಬಿ ತುಳುಕಿದ ಪರಿಣಾಮ ಮುಂದೆಯೂ ಸಿನಿಮಾ ಹುಚ್ಚು ಹಿಡಿದು ನಿರ್ದೇಶಕನಾಗುವ ಹಂತಕ್ಕೆ ಬಂದು ತಲುಪಿತು ! ಓದಿದ್ದು ಒಂದು ಆಗಿದ್ದು ಇನ್ನೊಂದು: ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಪೂರೈಸಿದ ಸಂದೀಪ್ ಪತ್ರಿಕೋದ್ಯಮದತ್ತ ಒಲವು ತೋರಿ ಅಭ್ಯಾಸ ಮಾಡಿದರು. ಮಂಗಳೂರಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದರು. ಹುಡುಗಾಟದಿಂದಲೇ ಪಾಶ್ಚಾತ್ಯ ನೃತ್ಯದಲ್ಲೂ ಸಾಧನೆ ಮಾಡಿದ್ದ ಇವರು ಎರಿಕ್ ತಂಡದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ನಂತರ ಬೆಂಗಳೂರಿಗೆ ಬಂದು ಆಂಗ್ಲ ದೈನಿಕವೊಂದರಲ್ಲಿ ಸ್ವಲ್ಪಕಾಲ ಪತ್ರಕರ್ತರಾದ ಇವರು ಕ್ರಮೇಣ ಕನ್ನಡ ಚಿತ್ರಗಳಿಗೆ ಕತೆ ಬರೆಯಲು ಇಳಿದರು. ಒಂದು ಹಂತದಲ್ಲಿ ಪೂರ್ಣವಾಗಿ ಚಿತ್ರರಂಗದತ್ತ ವಾಲಿದ ಸಂದೀಪ್ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾದರು. ಇದು ಸಂದೀಪ್ ಮಲಾನಿ ಎನ್ನ್ನುವ ಕ್ರಿಯೇಟಿವ್ ನಿರ್ದೇಶಕನ ಬ್ಯಾಕ್ ಗ್ರೌಂಡ್ ಸ್ಟೋರಿ... ............

Saturday, December 28, 2013

ಮದುವೆಯಾಗುತ್ತಿದ್ದೇನೆ ಮರೆಯದೇ ಬನ್ನಿ

ಹೊಸ ವರ್ಷ ಓಡೋಡಿ ಬರುತ್ತಿದೆ. ಗೋಡೆಯಲ್ಲಿ ತೂಗಿಸಿಟ್ಟ ಹಳೆಯ ಕ್ಯಾಲೆಂಡರ್ ವೊಂದು ಕಸದ ಬುಟ್ಟಿ ಸೇರುತ್ತಿದ್ದಂತೆಯೇ ಹೊಸ ಕ್ಯಾಲೆಂಡರ್ ಜನವರಿ ತಿಂಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಟ್ಟಿದೆ. ನನ್ನ ಪಾಲಿಗೆ ಜನವರಿ ಎಂದಾಕ್ಷಣ ಒಂದು ಹೊಸ ಹುರುಪು, ಉಲ್ಲಾಸ ಜತೆಗೆ ಇನ್ನಷ್ಟು ದುಡಿಯಬೇಕು ಎನ್ನುವ ಚಟ ಗೊತ್ತಿಲ್ಲದೇ ನನ್ನೋಳಗೆ ಗಟ್ಟಿಯಾಗುತ್ತದೆ. ಇದು ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಆದರೆ ಈ ವರ್ಷ ಅದರಲ್ಲೂ 2014 ಜನವರಿ 12 ನನ್ನ ಪಾಲಿಗಂತೂ ವಿಶೇಷ ದಿನ. ಕಾರಣ ಇಷ್ಟೇ ಅಂದೇ ನಾನು ಮದುವೆಯಾಗುತ್ತಿದ್ದೇನೆ.
ತುಂಬಾನೇ ಸರಳ ಹಾಗೂ ನನ್ನ ಪತ್ರಿಕೋದ್ಯಮ ವೃತ್ತಿ, ಭಾವನೆ, ಕುಟುಂಬದ ಎಲ್ಲರನ್ನು ಅಪ್ಪಿಕೊಳ್ಳಲು ಮುಂದೆ ಬರುತ್ತಿರುವ ನನ್ನ ಹುಡುಗಿಯ ಕೈ ಹಿಡಿಯುತ್ತಿದ್ದೇನೆ. ಅದರಲ್ಲೂ ನಾನು ಅತೀ ಹೆಚ್ಚುವ ಅಭಿಮಾನದಿಂದ ನೋಡುವ ನನ್ನ ಮಾದರಿ ವ್ಯಕ್ತಿ ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬದ ದಿನವೇ ನನ್ನ ಮದುವೆ ನಡೆಯುತ್ತಿದೆ. ನಾನಾ ಊರುಗಳಲ್ಲಿ ತುಂಬಿರುವ ನನ್ನ ಪ್ರೀತಿಯ ಗೆಳೆಯರಿಗೆ ಮದುವೆಯ ಆಮಂತ್ರಣವನ್ನು ನೀಡಬೇಕು ಎನ್ನೋದು ನನ್ನ ಹೆಬ್ಬಯಕೆಯಾಗಿತ್ತು. ಆದರೆ ಮದುವೆ, ವೃತ್ತಿ ಕೆಲಸದ ಒತ್ತಡ ಜತೆಗೆ ಸಮಯದ ಅಭಾವ ನನ್ನನ್ನು ಬಹಳವಾಗಿ ಕಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಯಾಕೋ ಏನೋ ಜನವರಿ 11ರೊಳಗೆ ನಿಮ್ಮ ಬಳಿಗೆ ನನ್ನ ಮದುವೆ ಆಮಂತ್ರಣ ಪತ್ರ ತಲುಪದೇ ಇರಬಹುದು. ಆದರೆ ಇದೇ ಕಾರಣ ಇಟ್ಟುಕೊಂಡು ನಾನು ಆಮಂತ್ರಣ ಪತ್ರ ನೀಡಿಲ್ಲ ಎಂದು ಬೇಸರಿಸಬೇಡಿ. ತುಂಬಾ ಹತ್ತಿರ ಇದ್ದ ಹುಡುಗ ಮದುವೆಗೇ ಹೇಳಿಯೇ ಇಲ್ಲ ಮಾರಾಯ್ರೆ ಎನ್ನಬೇಡಿ. ನನ್ನ ಹಾಗೂ ನನ್ನ ಪ್ರೀತಿಯ ಹುಡುಗಿಯ ಬದುಕಿನಲ್ಲಿ ಇದೊಂದು ದೊಡ್ಡ ಸಂಭ್ರಮ. ಮದುವೆಗೆ ಹೇಳದೇ ಮರೆತು ಹೋಗಿರುವ ಗೆಳೆಯರಿಗೆ ಹಾಗೂ ಹೇಳಿಕೂಡ ಮರೆದು ಬಿಡುವ ಗೆಳೆಯರಿಗೆ ಇದೇ ಮದುವೆಯ ಆಮಂತ್ರಣ ಪತ್ರ ಎಂದು ತಿಳಿದುಕೊಂಡು ನಮ್ಮಿಬ್ಬರನ್ನು ಪ್ರೀತಿಯಿಂದ ಹರಸಲು ಬನ್ನಿ...
ಅಂದಹಾಗೆ ಜನವರಿ ತಿಂಗಳ ಮೊದಲ ಎರಡು ವಾರ ನನ್ನ ಬದುಕಿನಲ್ಲಿ ಸಂಭ್ರಮದ ಕ್ಷಣಗಳಿಂದಲೇ ತುಂಬಿದೆ. ಜನವರಿ 5ರಂದು ನನ್ನ ಹಾಗೂ ನನ್ನ ಹುಡುಗಿಯ ನಿಶ್ಚಿತಾರ್ಥ, ಜನವರಿ 10ರಂದು ರೋಸ್ ಅರ್ಥಾತ್ ಮದರಂಗಿ ಕಾರ್ಯಕ್ರಮ ಹಾಗೂ ಜನವರಿ 12ರಂದು ಮದುವೆಯ ಸುವರ್ಣ ಕ್ಷಣ. ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವು ಬರಬೇಕು. ಅದರಲ್ಲೂ ಮೂರರಲ್ಲಿ ಒಂದು ಕಾರ್ಯಕ್ರಮದಲ್ಲಾದರೂ ಭಾಗವಹಿಸಲೇ ಬೇಕು ಎನ್ನುವುದು ನನ್ನ ವಿನಂತಿ. ಪ್ರೀತಿ ಇಟ್ಟುಕೊಂಡು ಮದುವೆಗೆ ಬನ್ನಿ... ನಿಮ್ಮ ಮನೆಯ ಹುಡುಗ ಸ್ಟೀವನ್ ರೇಗೊ, ದಾರಂದಕುಕ್ಕು