Tuesday, March 26, 2013
ಕನ್ನಡಿಗನ ಅಂಗೈಯಲ್ಲಿ ಬಾಲಿವುಡ್‌ನ 'ಥೀಮ್' ಪಾರ್ಕ್
* ಸ್ಟೀವನ್ ರೇಗೊ, ದಾರಂದಕುಕ್ಕು
ಸಿನಿಮಾ ಜಗತ್ತಿನಲ್ಲಿ ಮನರಂಜನಾ ಥೀಮ್ ಪಾರ್ಕ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಮುಂಬಯಿ ಎನ್ನುವ ಮಹಾನಗರಿಯಲ್ಲಿ ಥೀಮ್ ಪಾರ್ಕ್ ಮಾಡುವ ಕನಸು ಕಾಣುವುದು ಅಷ್ಟೊಂದು ಸುಲಭದ ಮಾತೇ ಅಲ್ಲ. ಅದರಲ್ಲೂ ಕನ್ನಡಿಗನಂತೂ ಇಂತಹ ಕನಸು ಕಾಣಲು ಸಾಧ್ಯನಾ ಎನ್ನುವ ಪ್ರಶ್ನೆಯ ಜತೆಯಲ್ಲಿಯೇ ಉತ್ತರ ಕೂಡ ಹುಟ್ಟಿಕೊಂಡಿದೆ.
ಅದೇನಪ್ಪ ಎಂದರೆ ಕರ್ನಾಟಕದ ಕರಾವಳಿಯ ಮೂಲ್ಕಿಯಿಂದ ಬಂದಿರುವ ಮನಮೋಹನ್ ಶೆಟ್ಟಿ ಈಗ ಮನರಂಜನಾ ಥೀಮ್ ಪಾರ್ಕ್ ಕಟ್ಟುವ ಕನಸು ನನಸು ಮಾಡಲು ಯತ್ನಿಸುತ್ತಿದ್ದಾರೆ. ಇದು ಬಾಲಿವುಡ್ ಮಾತ್ರವಲ್ಲ ಇಡೀ ಚಿತ್ರರಂಗದಲ್ಲಿಯೇ ಹೊಸ ಪ್ರಯತ್ನವಾಗಲಿದೆ ಅನ್ನೋದು ಮುಂಬಯಿ ಗಲ್ಲಿಯಿಂದ ಹೊರಕ್ಕೆ ಬಿದ್ದಿರುವ ಬಿಸಿಬಿಸಿ ನ್ಯೂಸ್.
ಇಮೇಜಿಕಾ -ಇದು ಮನಮೋಹನ್ ಶೆಟ್ಟಿ ಕಟ್ಟುವ ಥೀಮ್ ಪಾರ್ಕ್‌ನ ಹೆಸರು. ಈ ಥೀಮ್ ಪಾರ್ಕ್‌ಗೆ ತಗಲುವ ಖರ್ಚು 1650 ಕೋಟಿ ರೂಪಾಯಿಗಳು. ಇದರ ವಿಸ್ತಾರ 300 ಎಕರೆ. ಮುಂಬಯಿ ಟು ಪುಣೆ ಎಕ್ಸ್‌ಪ್ರೆಸ್ ಹೈವೇಯ ನಡುವೆ ಸಿಗುವ ಕೋಪೋಲಿಯ ಥಾಲ್‌ಕಲ್ಪೂರಾ ಎನ್ನುವ ಪ್ರದೇಶದಲ್ಲಿ 'ಆ್ಯಡ್‌ಲ್ಯಾಬ್ಸ್ ಇಮೇಜಿಕಾ' ಎನ್ನುವ ಮನರಂಜನೆಯುಕ್ತ ಥೀಮ್ ಪಾರ್ಕ್ ಸಿದ್ಧಗೊಳ್ಳಲಿದೆ.
ಒಂದು ಲೆಕ್ಕಚಾರದ ಪ್ರಕಾರ ಇದು ಚಿತ್ರನಗರಿಯಲ್ಲಿಯೇ ಅತೀ ದೊಡ್ಡ ಬಂಡವಾಳಯುಕ್ತ ಪ್ರಾಜೆಕ್ಟ್. ಐದು ವರ್ಷಗಳ ಹಿಂದೆ ಆ್ಯಡ್‌ಲ್ಯಾಬ್ಸ್ ಎನ್ನುವ ಸಂಸ್ಥೆಯನ್ನು ಮಾರಾಟ ಮಾಡಿದ ನಂತರ ಮನಮೋಹನ್ ಶೆಟ್ಟಿ ಇಷ್ಟು ಮಟ್ಟದಲ್ಲಿ ರೀ ಎಂಟ್ರಿ ಕೊಡುತ್ತಿರುವುದು ಇದು ದೊಡ್ಡ ಸವಾಲಿನ ಹಾದಿಯೇ ಸರಿ ಎನ್ನುತ್ತಾರೆ ಅವರ ಆಪ್ತರು.
ಏನೇನಿರುತ್ತದೆ ?
ಈ ಥೀಮ್ ಪಾರ್ಕ್‌ನ ಮೊದಲ ಹಂತ 110 ಎಕರೆಯಲ್ಲಿ ನಡೆಯಲಿದೆ. ಇದರಲ್ಲಿ 21 ಯೂನಿಕ್ ಅಟ್ರ್ಯಾಕ್ಷನ್ ಸೆಂಟರ್‌ಗಳು, 6 ರೆಸ್ಟೋರೆಂಟ್‌ಗಳು, ಲೈವ್ ಕಾರ‌್ಯಕ್ರಮಗಳಿಗೆ ವೇದಿಕೆಗಳು, 300 ಕ್ಕೂ ಅಧಿಕ ರೂಮ್‌ಗಳಿರುವ ಭರ್ಜರಿ ಹೋಟೆಲ್, ವಾಟರ್ ಪಾರ್ಕ್ ಸಿದ್ಧಗೊಳ್ಳಲಿದೆ. ಇದರಲ್ಲಿ ಹೊಸ ಮಾದರಿಯ ಸಿನಿಮಾ ಥಿಯೇಟರ್, 3ಡಿ ಚಿತ್ರಗಳಿಗೆ ಪ್ರತ್ಯೇಕ ಥಿಯೇಟರ್, 360 ಡಿಗ್ರಿಯಲ್ಲಿರುವ ಡೋಮ್ ಮಾದರಿಯ ಭಾರತದ ಮೊದಲ ಥಿಯೇಟರ್ ಇಲ್ಲಿ ಕಾಣಸಿಗಲಿದೆ. ಇಂತಹ ಥಿಯೇಟರ್‌ನಲ್ಲಿ ಸಿನಿ ಪ್ರೇಕ್ಷಕ ಕೂತರೆ ಆಗಸದಲ್ಲಿ ಹಾರುವಂತೆ ಭಾಸವಾಗುತ್ತದೆಯಂತೆ !
ಈ ಮೊದಲು ಬಾಲಿವುಡ್‌ನ ಕೆಲವೊಂದು ಚಿತ್ರಗಳಿಗೆ ಹಣ ಸುರಿದಿರುವ ಶೆಟ್ಟಿಯವರು ಇದೀಗ ಆ ಬಣ್ಣದ ಜಗತ್ತಿಗೆ ಮರಳಿ ಬಂದಿದ್ದಾರೆ. ಅದರಲ್ಲೂ ದೊಡ್ಡ ಪ್ರಾಜೆಕ್ಟ್‌ನ್ನು ಎತ್ತಿ ತಂದಿದ್ದಾರೆ.
ಈ ಥೀಮ್ ಪಾರ್ಕ್‌ನ ಜತೆಗೆ ಮನಮೋಹನ್ ಶೆಟ್ಟಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಆ್ಯನಿಮೇಷನ್, ಸಾಹಸ ಪ್ರಧಾನ ಚಿತ್ರಗಳನ್ನು ಮಾಡಲು ಶೆಟ್ಟರು ಸಿದ್ಧವಾಗಿದ್ದಾರೆ. ಇವರ ದೊಡ್ಡ ಪ್ರಾಜೆಕ್ಟ್‌ಗೆ ಅವರ ಪುತ್ರಿಯರಾದ ಪೂಜಾ ಶೆಟ್ಟಿ ದೆವೋರಾ ಹಾಗೂ ಆರತಿ ಶೆಟ್ಟಿ ಸಾಥ್ ನೀಡಲಿದ್ದಾರೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಈ ಥೀಮ್ ಪಾರ್ಕ್‌ಗೆ ಚಾಲನೆ ದೊರೆಯಲಿದೆ.
ಮನಮೋಹನ್ ಶೆಟ್ಟಿಯವರ ಸಹೋದರ ಮನೋಹರ್ ಶೆಟ್ಟಿ ಕೂಡ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಮುಂಬಯಿಯಲ್ಲಿ ಕ್ಯೂ ಲ್ಯಾಬ್ಸ್ ಎನ್ನುವ ಸಂಸ್ಥೆಯನ್ನು ಕಟ್ಟಿಕೊಂಡು ಸಿನಿಮಾ ಜಗತ್ತಿಗೆ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ಮನೋಹರ್ ಶೆಟ್ಟಿ ಕರಾವಳಿಯಲ್ಲೂ ಕ್ಯೂ ಲ್ಯಾಬ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇಲ್ಲಿ ವಿಶಿಷ್ಟ ಮಾದರಿಯ ಕ್ಯಾಮೆರಾಗಳು, ಸಂಕಲನ, ಲ್ಯಾಬ್ ಸೇರಿದಂತೆ ಸಿನಿಮಾವೊಂದಕ್ಕೆ ಬೇಕಾದ ಎಲ್ಲ ರೀತಿಯ ಸಾಮಗ್ರಿಗಳು ಲಭ್ಯವಾಗಲಿದೆ. ಈ ಮೂಲಕ ಕರಾವಳಿ ಸೇರಿದಂತೆ ಕೇರಳದ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಡಿಮೆ ಖರ್ಚಿನಲ್ಲಿ ಸಿನಿಮಾ ಹೊರ ತರಲು ಸಾಧ್ಯವಾಗುತ್ತದೆ. ಟೋಟಲಿ ಇಬ್ಬರೂ ಶೆಟ್ಟರು ತಮ್ಮ ಹೊಸ ಪ್ರಯತ್ನಗಳಿಂದಾಗಿ ಸಿನಿಮಾ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ.
(vk lvk published my exclusive report on 27.03.2012)
Subscribe to:
Post Comments (Atom)
No comments:
Post a Comment