Saturday, March 16, 2013

ಸರಳತೆಯ ಪಡಿಯಚ್ಚು ಪೋಪ್ ಫ್ರಾನ್ಸಿಸ್

* ಸ್ಟೀವನ್ ರೇಗೊ, ದಾರಂದಕುಕ್ಕು ಜಗತ್ತಿನ ಹೊಸ ಭಾಗದಿಂದ ಪೋಪ್‌ರನ್ನು ಆಯ್ಕೆ ಮಾಡುವ ಮೂಲಕ ರೋಮನ್ ಕೆಥೋಲಿಕ್ ಚರ್ಚ್‌ನ ಕಾರ್ಡಿನಲ್‌ಗಳು ಬದಲಾವಣೆಯ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಚರ್ಚ್‌ನ ಭವಿಷ್ಯ ಭೂಮಂಡಲದ ದಕ್ಷಿಣ ಭಾಗದಲ್ಲಿದೆ ಹಾಗೂ ಜನ ಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ವಿದ್ವಾಂಸರೊಬ್ಬರು ಧರ್ಮದ ಅನುಯಾಯಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ನೂತನ ಪೋಪ್ ಫ್ರಾನ್ಸಿಸ್ ಅವರ ಆಯ್ಕೆಯೇ ಹೇಳ ಹೊರಟಿದೆ. ಪದೇ ಪದೇ ಬದಲಾವಣೆಯ ಜತೆಯಲ್ಲಿ ರಾಜಿ ಮಾಡಿಕೊಳ್ಳುವಿಕೆ ಕ್ರೈಸ್ತ ಸಮುದಾಯದಲ್ಲಿ ಸಾಮಾನ್ಯವಾದ ಮಾತು. ಹೊಸ ವರ್ಷದ ಆರಂಭದಲ್ಲಿಯೇ ಕ್ರೈಸ್ತ ಧರ್ಮದ ಪರಮೋಚ್ಚ ಗುರು ಪೋಪ್ ಬೆನೆಡಿಕ್ಟ್ ೧೬ ಅವರು ತಾನು ಪೋಪ್ ಪದವಿಗೆ ರಾಜೀನಾಮೆ ನೀಡುತ್ತೇನೆ ಎನ್ನುವ ನಿರ್ಧಾರದಿಂದ ಆರಂಭಗೊಂಡ ಬದಲಾವಣೆಯ ಪರ್ವ ಈಗ ಹೊಸ ಪೋಪ್‌ಗಳ ಆಗಮನದ ವರೆಗೂ ಮುಂದುವರಿದಿದೆ. ಅದರಲ್ಲೂ ಪೋಪ್ ಬೆನೆಡಿಕ್ಟ್ ೧೬ ತಮ್ಮ ಪೋಪ್ ಪದವಿಗೆ ರಾಜೀನಾಮೆ ನೀಡಿದ ಘಟನೆ ಬರೀ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರವಲ್ಲ ವಿಶ್ವದ ಪ್ರಮುಖ ಧರ್ಮಗಳ ಮುಖಂಡರಿಗೂ ಶಾಕಿಂಗ್ ಸುದ್ದಿ. ವಿಶ್ವದಲ್ಲಿರುವ ೧.೫ ಬಿಲಿಯನ್ ರೋಮನ್ ಕೆಥೋಲಿಕರಿಗೆ ಪೋಪ್ ರಾಜೀನಾಮೆಯಿಂದ ಉಂಟಾದ ಕಸಿವಿಸಿಗೆ ನೂತನ ಪೋಪ್‌ಗಳ ಆಯ್ಕೆಯ ಮೂಲಕ ಮದ್ದು ಸಿಕ್ಕಿದೆ. ರೋಮನ್ ಕೆಥೋಲಿಕ್( ಆರ್‌ಸಿ)ಯ ಕೋಡ್ ಆಫ್ ಕ್ಯಾನೋನ್ ಲಾ ಕುರಿತಾಗಿ ಚರ್ಚ್‌ಗಳ ಧರ್ಮಗುರುಗಳಿಗೆ ಮಾತ್ರ ಗೊತ್ತಿರುವ ಸತ್ಯ ಈಗ ಜಗತ್ತು ಅರಿತು ಬಿಟ್ಟಿದೆ. ವಿಶ್ವದ ಕೆಥೋಲಿಕ್ ಕ್ರಿಶ್ಚಿಯನ್ ಸಮುದಾಯದ ನೂತನ ಪೋಪ್ ಆಗಿ ಅರ್ಜೆಂಟೀನಾದ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊ ಅವರ ಆಯ್ಕೆ ನಿಜಕ್ಕೂ ಅಚ್ಚರಿಯ ಬೆಳವಣಿಗೆ. ಬರ್ಗೋಗ್ಲಿಯೊ ಅವರು ಲ್ಯಾಟಿನ್ ಅಮೆರಿಕ ಪ್ರದೇಶದಿಂದ ಆಯ್ಕೆಯಾದ ಮೊದಲ ಪೋಪ್. ಅದರಲ್ಲೂ ಸೊಸೈಟಿ ಆಫ್ ಜೀಸಸ್( ಎಸ್‌ಜೆ) ಎನ್ನುವ ಮೇಳದಿಂದ ಬಂದ ಧರ್ಮಗುರು. ಅಷ್ಟೇ ಅಲ್ಲ ಕಳೆದ ಒಂದು ಶತಮಾನದಲ್ಲಿ ಯೂರೋಪಿನ ಹೊರಗಿನವರೊಬ್ಬರನ್ನು ಪೋಪ್ ಆಗಿ ಆಯ್ಕೆ ಮಾಡುತ್ತಿರುವುದು ಕೂಡಾ ಇದೇ ಮೊದಲು. ಕಳೆದ ಬಾರಿ ಪೋಪ್ ಸ್ಥಾನಕ್ಕೆ ಆಯ್ಕೆ ನಡೆದ ಸಂದರ್ಭದಲ್ಲಿ ಪೋಪ್ ಬೆನೆಡಿಕ್ಟ್ ೧೬ ಅವರ ಜತೆಯಲ್ಲಿ ಜಾರ್ಜ್ ಅವರ ಹೆಸರು ಜೋರಾಗಿ ಕೇಳಿ ಬಂದಿತ್ತು. ಆದರೆ ೨ನೇ ಪೋಪ್ ಜಾನ್ ಪೌಲ್ ಅವರ ಜತೆಯಲ್ಲಿ ತೀರಾ ಹತ್ತಿರದ ಒಡನಾಟ ಇರುವ ಬೆನೆಡಿಕ್ಟ್ ೧೬ ಅವರಿಗೆ ಪೋಪ್ ಪದವಿ ಒಲಿದಿತ್ತು. ಪೋಪ್ ಬೆನೆಡಿಕ್ಟ್ ೧೬ ಪೋಪ್ ಪದವಿಗೆ ತಕ್ಕ ವ್ಯಕ್ತಿ ಎಂದು ಕಾರ್ಡಿನಲ್‌ಗಳು ಮತ ಚಲಾಯಿಸಿದ್ದರು. ಜತೆಗೆ ಜಾರ್ಜ್ ಮಾರಿಯೋ ತುಂಬಾನೇ ಮೃದು ಸ್ವಭಾವದ ವ್ಯಕ್ತಿ ಎನ್ನುವ ಕಾರಣಕ್ಕೆ ಅವರನ್ನು ಪೋಪ್ ಹುದ್ದೆಯಿಂದ ಕಾರ್ಡಿನಲ್‌ಗಳು ದೂರ ಇಟ್ಟಿದ್ದರು. ಆದರೆ ವಿಚಿತ್ರ ಎಂದರೆ ಅಮೆರಿಕದ ಪ್ರಮುಖ ಇಬ್ಬರು ಕಾರ್ಡಿನಲ್ ಈ ಬಾರಿ ಪೋಪ್ ಪದವಿಗೆ ಪೈಪೋಟಿ ನೀಡುತ್ತಾರೆ ಎಂದು ವ್ಯಾಟಿಕನ್ ನ ಮೂಲಗಳು ತಿಳಿಸಿತ್ತು. ಆದರೆ ಜಾರ್ಜ್ ಮಾರಿಯೋ ಹೆಸರು ಮಾತ್ರ ಎಲ್ಲಿಯೂ ಕೇಳಿ ಬಂದಿರಲಿಲ್ಲ. ಅವರಿಗೆ ಹೆಚ್ಚು ವಯಸ್ಸಾಗಿರುವುದರಿಂದ ಅವರ ಹೆಸರನ್ನು ಆ ಸ್ಥಾನಕ್ಕೆ ಕಾರ್ಡಿನಲ್‌ಗಳ ಸಭೆ ಪರಿಗಣಿಸುವುದಿಲ್ಲ ಎಂದು ನಂಬಲಾಗಿತ್ತು. ಹಾಗೆಯೇ ಯೂರೋಪಿನ ಹೊರಗಿನವರೊಬ್ಬರನ್ನು ಪೋಪ್ ಸ್ಥಾನಕ್ಕೆ ಕಾರ್ಡಿನಲ್‌ಗಳ ಸಭೆ ಆಯ್ಕೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಚರ್ಚಿನ ಬಗ್ಗೆ ಆಕರ್ಷಣೆ ಕಡಿಮೆಯಾಗುತ್ತಿರುವ ಯೂರೋಪಿನ ಬದಲಾಗಿ ಧಾರ್ಮಿಕ ಬದ್ಧತೆ ಹೆಚ್ಚು ಇರುವ ಲ್ಯಾಟಿನ್ ಅಮೆರಿಕದ ದೇಶವೊಂದರಿಂದ ಹೊಸ ಪೋಪ್ ಆಯ್ಕೆ ಮಾಡಿರುವುದು ಒಂದು ರೀತಿಯಲ್ಲಿ ಧರ್ಮದ ಪ್ರಭಾವವನ್ನು ಜನರಲ್ಲಿ ಪುನರ್ ಸ್ಥಾಪಿಸುವ ತಂತ್ರವೆಂದೇ ಗುರುತಿಸಲಾಗಿದೆ. ಪೋಪ್ ಒಂದು ಧರ್ಮದ ಗುರುವಾದರೂ ಆ ಧರ್ಮದ ಜನರು ಆಡಳಿತ ನಡೆಸುವ ದೇಶಗಳ ಆಡಳಿತಗಾರರ ಮೇಲೆ ಇರುವ ಅವರ ಪ್ರಭಾವ ಮತ್ತು ಸರಕಾರಗಳು ಅನುಸರಿಸುವ ನೀತಿಗಳ ಮೇಲೆ ಇರುವ ಪ್ರಬಲ ಹಿಡಿತದಿಂದಾಗಿ ಪೋಪ್ ಸ್ಥಾನಕ್ಕೆ ನಡೆಯುವ ಆಯ್ಕೆ ಮುಖ್ಯವಾಗಿದೆ. ಪಾಶ್ಚಿಮಾತ್ಯ ಮತ್ತು ಯೂರೋಪಿನ ಅಭಿವೃದ್ಧಿ ದೇಶಗಳು ಕ್ರಿಶ್ಚಿಯನ್ ಸಮುದಾಯದ ಆಡಳಿತದಲ್ಲಿ ಇರುವುದರಿಂದ ಮತ್ತು ಅಲ್ಲಿನ ಆಡಳಿತಗಾರರು ತೆಗೆದುಕೊಳ್ಳುವ ನಿರ್ಧಾರಗಳು ವಿಶ್ವದ ಇತರ ಬಡ ಹಾಗೂ ಅಭಿವೃದ್ಧಿ ದೇಶಗಳ ಮೇಲೆ ಪರಿಣಾಮ ಬೀರುವುದರಿಂದಾಗಿ ಈ ಬದಲಾವಣೆಗಳು ಮುಖ್ಯ. ಅರ್ಜೆಂಟೀನಾದ ಬ್ಯೂನಸ್ ಐರೀಸ್ ನ ೭೬ರ ಹರೆಯದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊ ೨೬೬ನೇ ಪೋಪ್ ಆಗುವ ಮೂಲಕ ತಮ್ಮ ನಾಮಧೇಯವನ್ನು ಫ್ರಾನ್ಸಿಸ್ ಎಂದು ಬದಲಾಯಿಸಿಕೊಂಡಿದ್ದಾರೆ. ಪೋಪ್ ಪದವಿಗೆ ಬಂದ ನಂತರ ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಪರಿಪಾಟ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಅದಕ್ಕೂ ಮುಖ್ಯವಾಗಿ ೧೩ನೇ ಶತಮಾನದಲ್ಲಿದ್ದ ಇಟಲಿಯ ಸಂತ. ಫ್ರಾನ್ಸಿಸ್ ಆಸ್ಸಿಸಿಯ ನೆನಪಿಗಾಗಿ ಫ್ರಾನ್ಸಿಸ್ ಎನ್ನುವ ಹೆಸರನ್ನು ಪೋಪ್ ಗೆ ಇಡಲಾಗಿದೆ. ಬರ್ಗೋಗ್ಲಿಯೊ ಅಜೆಂಟೀನಾದ ಮಾರಿಯೋ ಜೋಸ್ ಹಾಗೂ ರೇಜಿನಾ ಮಾರಿಯೋ ಅವರ ಐದು ಪುತ್ರದಲ್ಲಿ ಒಬ್ಬರು. ಮಾರಿಯೋ ಜೋಸ್ ಸಾಮಾನ್ಯ ರೈಲ್ವೆ ಉದ್ಯೋಗಿ ಪುತ್ರ. ಇಟಲಿಯಿಂದ ಅರ್ಜೆಂಟೀನಾಕ್ಕೆ ವಲಸೆ ಬಂದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಬರ್ಗೊಗ್ಲಿಯೊ ವೈಭವೋಪೇತ ಜೀವನವನ್ನು ನಿರಾಕರಿಸಿದ ಸರಳ ಜೀವಿ. ಹೀಗಾಗಿ ಇಂದಿಗೂ ಅವರು ಶ್ರಮ ಜೀವಿಗಳ ಪ್ರತಿನಿಧಿಯಂತೆಯೇ ಕಾಣುತ್ತಾರೆ. ಬಾಲ್ಯದಲ್ಲಿ ಪೋಪ್ ಫ್ರಾನಿಸ್ಸ್ ಸನ್ ಲೋರೇನ್ಸೋ ಡೀ ಅಲ್ ಮಾಗ್ರೋ ಎನ್ನುವ ಫುಟ್ಬಾಲ್ ಕ್ಲಬ್ ನ ದೊಡ್ಡ ಅಭಿಮಾನಿಯಾಗಿದ್ದರು. ಕೆಮಿಕಲ್ ಟೆಕ್ನಿಷಿಯನ್ ನಲ್ಲಿ ಪದವಿ ಪಡೆದುಕೊಂಡಿದ್ದರು. ಇದರ ಜತೆಯಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಬ್ಯೂನಸ್ ಐರೀಸ್ ವಿವಿಯಿಂದ ಪಡೆದುಕೊಂಡಿದ್ದಾರೆ. ೨೧ರ ಹರೆಯದಲ್ಲಿ ತಾನೊಬ್ಬ ಕ್ರೈಸ್ತ ಧರ್ಮಗುರುವಾಗಬೇಕೆಂದುಕೊಂಡು ಎಸ್‌ಜೆ ಮೇಳದಲ್ಲಿ ಸೇರಿಕೊಂಡು ನಂತರ ೧೯೬೯ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದುಕೊಂಡರು. ಬ್ಯೂನಸ್ ಐರೀಸ್ ನ ನಾನಾ ಕಡೆ ಕ್ರೈಸ್ತ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ನಂತರ ೧೯೯೨ರಲ್ಲಿ ಬ್ಯೂನಸ್ ಐರೀಸ್ ನ ಬಿಷಪ್ ರಾಗಿ ನಿಯುಕ್ತಿಗೊಂಡರು. ೧೯೯೮ರಲ್ಲಿ ಆಚ್ ಬಿಷಪ್‌ರಾಗಿ ನಂತರ ೨೦೦೧ರಲ್ಲಿ ಬ್ಯೂನಸ್ ಐರೀಸ್ ನ ಕಾರ್ಡಿನಲ್ ಆಗಿ ಸೇವೆ ಸಲ್ಲಿಸಿದ ಪೋಪ್ ಫ್ರಾನ್ಸಿಸ್ ರೋಮನ್ ಕೆಥೋಲಿಕ್ ಚರ್ಚ್‌ನ ಧರ್ಮಗುರುಗಳ ನಾನಾ ಸಮಿತಿಗಳಿಗೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ೨ನೇ ಪೋಪ್ ಜಾನ್ ಪೌಲ್ ಅವರ ನಿಧನದ ಸಮಯದಲ್ಲಿ ಮುಖ್ಯ ಪೋಪಲ್ ಕಾರ್ಡಿನಲ್ ಗಳ ಸಾಲಿನಲ್ಲಿ ಪೋಪ್ ಫ್ರಾನ್ಸಿಸ್ ಕೂಡ ಇದ್ದರು. ಪೋಪ್ ಫ್ರಾನ್ಸಿಸ್ ಬಹುಭಾಷೆಗಳ ಮೇಲೆ ಹಿಡಿತ ಇಟ್ಟುಕೊಂಡಿದ್ದಾರೆ. ಸ್ಪ್ಯಾನಿಷ್, ಲ್ಯಾಟಿನ್, ಜರ್ಮನ್, ಫ್ರೆಂಚ್, ಇಂಗ್ಲೀಷ್ ನಲ್ಲೂ ಪಾಂಡಿತ್ಯವನ್ನು ಮೆರೆದಿದ್ದಾರೆ. ಇದೇ ಕಾರಣದಿಂದ ಲ್ಯಾಟಿನ್ ಅಮೆರಿಕದಲ್ಲಿ ಅತ್ಯಂತ ಸಂಪ್ರದಾಯವಾದಿ ಎನಿಸಿದ್ದ ಅರ್ಜೆಂಟೀನಾ ಚರ್ಚ್ ಸಮುದಾಯವನ್ನು ಆಧುನೀಕರಣಗೊಳಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಬ್ಯೂನಸ್ ಐರಿಸ್‌ನ ಸಾದಾ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ ಅವರು, ಪ್ರತಿನಿತ್ಯ ಬಸ್‌ನಲ್ಲಿಯೇ ಓಡಾಡುತ್ತಿದ್ದರು. ತಪ್ಪದೆ ಕೊಳೆಗೇರಿಗಳಿಗೆ ತೆರಳಿ ಬಡವರ ಸೇವೆಯಲ್ಲಿ ತೊಡಗುತ್ತಿದ್ದರು. ಸದಾ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಬಡವರು, ಶ್ರಮಿಕರು ಮತ್ತು ಅನಾಥರು ಎಂದರೆ ಎಲ್ಲಿಲ್ಲದ ಅಕ್ಕರೆ. ಪೋಪ್ ಫ್ರಾನ್ಸಿಸ್ ಈ ಹಿಂದೆ ಕೆಲಸಕ್ಕೆ ಬಸ್‌ನಲ್ಲಿ ಹೋಗುತ್ತಾರೆ ಎನ್ನುವುದು ಜನರ ಮಾತುಗಳಲ್ಲಿ ಎದ್ದು ಕಾಣುವ ಅಂಶ. ಬಸ್ ಪ್ರಯಾಣದ ವೇಳೆ ಅವರೊಂದಿಗೆ ಮಾತನಾಡಿದ್ದೇವೆ ಎಂದು ಹೇಳುವ ಜನರು ಸಾಕಷ್ಟು ಇದ್ದಾರೆ. ಹೀಗೆ ಬಸ್‌ನಲ್ಲಿ ಪ್ರಯಾಣಿಸುವ ಅವರು ಸಹ ಪ್ರಯಾಣಿಕರೊಂದಿಗೆ ಚರ್ಚ್ ವ್ಯವಹಾರಗಳ ಬಗ್ಗೆ ಕೆಲವು ಸಲ ಚರ್ಚಿಸುತ್ತಾರೆ. ತಾನು ರಾತ್ರಿ ಊಟಕ್ಕೆ ಏನು ಅಡುಗೆ ಮಾಡಲಿದ್ದೇನೆ ಎಂಬ ಬಗ್ಗೆ ಇತರ ಸಂದರ್ಭಗಳಲ್ಲಿ ಅವರು ಇತರ ಪ್ರಯಾಣಿಕರೊಡನೆ ಚರ್ಚಿಸುತ್ತಾರೆ. ಕೆಲವು ಸಲ ಅವರು ತನ್ನ ‘ಟಾಂಗಾ’ ಪ್ರಯಾಣದ ಬಗ್ಗೆ ಜನರೊಡನೆ ಅನುಭವ ಹಂಚಿಕೊಳ್ಳುತ್ತಾರೆ. ಸೋಂಕಿನಿಂದಾಗಿ ಒಂದು ಶ್ವಾಸಕೋಶವನ್ನು ಕಳೆದುಕೊಂಡ ಹೊರತಾಗಿಯೂ ಯುವಕನಾಗಿದ್ದಾಗ ತಾನು ಟಾಂಗ ಪ್ರಯಾಣವನ್ನು ಪ್ರೀತಿಸುತ್ತಿದ್ದೆ ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಪೋಪ್ ಫ್ರಾನ್ಸಿಸ್ ವ್ಯಾಟಿಕನ್‌ನಲ್ಲಿ ತನ್ನನ್ನು ತಾನು ಪ್ರಬಲವಾಗಿ ಸ್ಥಾಪಿಸಿಕೊಂಡು ಚರ್ಚ್‌ನ ಬದಲಾವಣೆಯ ಹರಿಕಾರರಾಗುತ್ತಾರೆಯೇ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. “ಡಾಕ್ಟರ್‌ಗಳ ಆಡಳಿತ ಮುಗಿದಿದೆ, ಇದು ಪಾಸ್ಟರ್‌ಗಳ ಸಾಮ್ರಾಜ್ಯದ ಕಾಲ" ಎಂದು ವ್ಯಾಟಿಕನ್ ಮತ್ತು ಸೆಕಂಡ್ ವ್ಯಾಟಿಕನ್ ಕೌನ್ಸಿಲ್ ಕುರಿತು ಹಲವು ಪುಸ್ತಕಗಳನ್ನು ಬರೆದ ಆಲ್ಬರ್ಟೊ ಮೆಲೋನಿ ಹೇಳುತ್ತಾರೆ. ಅವರ ಆಯ್ಕೆ ಲ್ಯಾಟಿನ್ ಅಮೆರಿಕದಲ್ಲಿ ಸೃಷ್ಟಿಸಿರುವ ಸಂಚಲನವನ್ನು ಗಮನಿಸಿದರೆ, ಹಿಂದಿನ ಪೋಪ್ ಬೆನೆಡಿಕ್ಟ್‌ಗೆ ಹೋಲಿಸಿದರೆ ಧರ್ಮವನ್ನು ಹರಡುವ ನಿಟ್ಟಿನಲ್ಲಿ ಬೃಹತ್ ಹೆಜ್ಜೆಗಳನ್ನು ಇಡುವುದು ನಿಶ್ಚಿತವಾಗಿದೆ. ನೂತನ ಪೋಪ್ ಫ್ರಾನ್ಸಿಸ್ ನಿಲುವು ಏನೇ ಇದ್ದರೂ ತನ್ನ ಪೂರ್ವಾಧಿಕಾರಿ ಬಿಟ್ಟು ಹೋದ ಸವಾಲುಗಳ ಸರಮಾಲೆಯನ್ನೇ ಅವರು ಎದುರಿಸಲಿದ್ದಾರೆ. ಪಾದ್ರಿಗಳ ಕೊರತೆ, ಚರ್ಚನ್ನು ಪರಕೀಯ ಭಾವನೆಯಿಂದ ನೋಡುವ ಪಶ್ಚಿಮದಲ್ಲಿ ಹೆಚ್ಚುತ್ತಿರುವ ಜಾತ್ಯತೀತ ಮನೋಭಾವ, ದಕ್ಷಿಣ ಗೋಳಾರ್ಧದಲ್ಲಿ ಇವ್ಯಾಂಜಲಿಕಲ್ ಚರ್ಚ್ ಗಳು ನೀಡುತ್ತಿರುವ ಪ್ರಬಲ ಪ್ರತಿಸ್ಪರ್ಧೆ ಹಾಗೂ ಚರ್ಚ್‌ನ ನೈತಿಕತೆಯ ಮೇಲೆ ಪ್ರಭಾವ ಬೀರುವ ಲೈಂಗಿಕ ದೌರ್ಜನ್ಯ ಆರೋಪಗಳು. ‘ಹೊರಗಿನ ವ್ಯಕ್ತಿ’ ಎಂಬ ಫ್ರಾನ್ಸಿಸ್‌ರ ಸ್ಥಾನಮಾನ ವ್ಯಾಟಿಕನ್‌ನಲ್ಲಿ ಅವರಿಗೆ ಅನುಕೂಲವೇ ಆಗಬಹುದು ಎಂಬುದಾಗಿ ಕೆಲವು ಪರಿಣತರು ಭಾವಿಸಿದ್ದಾರೆ. ಇಡೀ ವ್ಯಾಟಿಕನ್‌ನ ಆಡಳಿತ ವ್ಯವಸ್ಥೆಯನ್ನು ಅವರು ಹೊಸ ದೃಷ್ಟಿಯಿಂದ ನೋಡಬಹುದು ಹಾಗೂ ಸಮಸ್ಯೆಗಳನ್ನೂ ನೂತನ ಕೋನಗಳಿಂದ ನೋಡುವ ಅವಕಾಶ ಹಾಗೂ ಭಿನ್ನ ರೀತಿಯ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶ ಲಭಿಸುವ ಸಾಧ್ಯತೆಗಳು ದಟ್ಟವಾಗಿದೆ. ಮಾನವೀಯತೆ ಎಡೆಗೆ ನಡೆ ಹಾಗೂ ಸರಳತನವನ್ನು ಪಾಲಿಸು ಎಂದು ಪೋಪ್ ಆಗಿ ಆಯ್ಕೆಯಾದ ಬಳಿಕ ತನ್ನ ಮೊದಲ ಭಾಷಣದಲ್ಲಿ ಅವರು ವಿಶ್ವದ ಚರ್ಚ್‌ಗಳಿಗೆ ಹಾಗೂ ವ್ಯಕ್ತಿಗಳಿಗೆ ಸಂದೇಶ ಸಾರಿದ್ದಾರೆ. ಅನಿರೀಕ್ಷಿತವಾಗಿ ನೂತನ ಪೋಪ್ ಆಗಿ ಆಯ್ಕೆಯಾದ ಕಾರಣ ವಿಶ್ವದಾದ್ಯಂತ ಇರುವ ಚರ್ಚ್‌ಗಳು ಮುಂದೆ ಯಾವ ರೀತಿ ತನ್ನ ದಿಸೆಯನ್ನು ಬದಲಾಯಿಸಬಹುದು ಎನ್ನುವ ಮೂಲಭೂತ ಪ್ರಶ್ನೆ ಇಂದು ಕಾಡತೊಡಗಿದೆ. ಬಹುಪಾಲು ಯುರೋಪಿಯನ್ನರೇ ಇರುವ ಕಾರ್ಡಿನಲ್‌ಗಳ ಪೈಕಿ ಲ್ಯಾಟಿನ್ ಅಮೆರಿಕದ ಈ ಕಾರ್ಡಿನಲ್ ಹೇಗೆ ಪೋಪ್ ಆಗಿ ಆಯ್ಕೆಯಾದರು ಎಂದು ಕೆಲವರು ಚಿಂತಿತರಾಗಿದ್ದಾರೆ. ಇತ್ತೀಚೆಗೆ ಯಥೇಚ್ಛವಾಗಿ ಜಗತ್ತಿನಾದ್ಯಂತ ನಡೆಯುವ ಸಲಿಂಗಕಾಮದ ಕುರಿತು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ ಪೋಪ್ ಇದು ಅನೈತಿಕ ಎಂದು ಬಣ್ಣಿಸಿದ್ದಾರೆ. ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಮಾರ್ಚ್ ೧೩ ರಂದು ನಡೆಸಿದ ತನ್ನ ಮೊದಲ ಭಾಷಣದಲ್ಲಿ ಅವರು ಮಂಗಳಮುಖಿಯರ ವಿವಾಹ ಬಂಧವನ್ನು ದೇವರ ತೀರ್ಮಾನದ ಉಲ್ಲಂಘನೆ ಎಂದು ಜರಿದಿದ್ದಾರೆ. ಈ ಮೂಲಕ ನೂತನ ಪೋಪ್ ಫ್ರಾನ್ಸಿಸ್ ಆರಂಭದಲ್ಲಿಯೇ ವಿವಾದಗಳ ಜತೆಯಲ್ಲಿ ಗುದ್ದಾಟ ಮಾಡುವ ಪರಂಪರೆ ಬೆಳೆಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸರಳ ಜೀವನದಲ್ಲಿ ನಂಬಿಕೆ ಮತ್ತು ಬಡವರ ಬಗ್ಗೆ ಕಳಕಳಿ ಇರುವ ಪೋಪ್ ಫ್ರಾನ್ಸಿಸ್ ಅವರಿಂದ ಕೆಥೋಲಿಕ್ ಕ್ರಿಶ್ಚಿಯನ್ನರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮೊದಲನೆಯದಾಗಿ ಭ್ರಷ್ಟಾಚಾರ, ಸೆಕ್ಸ್ ಹಗರಣಗಳಿಂದಾಗಿ ಕಳಂಕಿತವಾಗಿರುವ ಚರ್ಚ್ ವ್ಯವಸ್ಥೆಯನ್ನು ಅವರು ಶುದ್ಧಗೊಳಿಸಬೇಕಿದೆ. ಇದಕ್ಕಾಗಿ ಅವರು ಚರ್ಚ್‌ಗಳ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಸಲಿಂಗಿಗಳ ನಡುವೆ ವಿವಾಹ, ಸಂತಾನ ನಿಯಂತ್ರಣ, ಭ್ರೂಣ ಹತ್ಯೆ, ಧರ್ಮಗುರು ಸ್ಥಾನಕ್ಕೆ ಮಹಿಳೆಯರ ನೇಮಕ ಮುಂತಾದ ವಿಚಾರಗಳಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಗಳನ್ನು ನಿವಾರಿಸಬೇಕಿದೆ. ಇದು ದೊಡ್ಡ ಸವಾಲೇ ಸರಿ. ಆದರೆ ಈ ವಿಚಾರಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಂಪ್ರದಾಯ ವಾದಿಯಾಗಿರುವುದರಿಂದ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಹಾಗೆ ನೋಡಿದರೆ ಅವರು ಲ್ಯಾಟಿನ್ ಅಮೆರಿಕದಲ್ಲಿನ ಕ್ರಾಂತಿಕಾರಿ ಹೋರಾಟದ ವಾತಾವರಣದಲ್ಲಿ ಬೆಳೆದಿದ್ದರೂ ವ್ಯವಸ್ಥೆಯ ವಿರುದ್ಧವಾಗಿ ಎಂದೂ ಹೋದವರಲ್ಲ. ಅರ್ಜೆಂಟೀನಾದಲ್ಲಿ ೭೦ರ ದಶಕದಲ್ಲಿ ದೇಶದ ಮಿಲಿಟರಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಕ್ರಾಂತಿಕಾರಿಗಳು ಮತ್ತು ಚರ್ಚ್‌ಗಳ ಕೆಲವು ಧರ್ಮಗುರುಗಳು ಹೋರಾಟದ ದಾರಿ ತುಳಿದಾಗ ಅವರ ಜತೆ ಬರ್ಗೋಗ್ಲಿಯೊ ಅವರು ಕೈಜೋಡಿಸಲಿಲ್ಲ ಎಂಬ ಟೀಕೆ ಅವರ ವಿರುದ್ಧ ಇದೆ. ಧರ್ಮವನ್ನು ಸಾಮಾನ್ಯರ ಬಳಿಗೆ ಕೊಂಡೊಯ್ದು ಬಡವರ ಪರವಾಗಿ ಹೆಚ್ಚು ಸೇವಾ ಕಾರ್ಯಗಳನ್ನು ಅವರು ಮಾಡಬಹುದಷ್ಟೇ ಎನ್ನುವ ಮಾತುಗಳು ವ್ಯಾಟಿಕನ್ ಸಿಟಿಯ ಮೂಲಗಳಿಂದ ಜೋರಾಗಿ ಕೇಳಿ ಬರುತ್ತಿದೆ. (vk main eddition vakthigata colum put my story on 17.03.2013) more detile: http://vijaykarnataka.indiatimes.com/articleshow/19009132.cms

No comments:

Post a Comment