Sunday, March 3, 2013

ಒಂದು ಭಾಷೆ ಜತೆಗೆ ಐದು ಲಿಪಿ ಮತ್ತು ಗೊಂದಲ !

ಸಂಡೇ ಸಮಾಚಾರ್ ಸ್ಟೀವನ್ ರೇಗೊ, ದಾರಂದಕುಕ್ಕು ಮಂಗಳೂರು: ಭಾರತದಲ್ಲಿರುವ ನೂರಾರು ಭಾಷೆಗಳ ನಡುವೆ ಕೊಂಕಣಿ ಭಾಷೆ ಕೂಡ ಒಂದು. ಕರ್ನಾಟಕದ ಕರಾವಳಿಯಿಂದ ಹಿಡಿದು ಗೋವಾದ ವರೆಗೂ ಈ ಕೊಂಕಣಿಯನ್ನು ಮಾತನಾಡುವವರು ಜಾಸ್ತಿ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಒಂದು ಲೆಕ್ಕಚಾರದ ಪ್ರಕಾರ ಇವರ ಸಂಖ್ಯೆ ಬರೋಬರಿ... ಇದೆ ಎನ್ನೋದು ಸಮೀಕ್ಷೆಗಳಿಂದ ದೃಢಪಟ್ಟ ಮಾಹಿತಿ. ದೇಶದ ಮುಕುಟ ಮಣಿಯಂತೆ ಹೊಳೆಯುತ್ತಿರುವ ಕಾಶ್ಮೀರಿ ಭಾಷೆಗೆ ಮೂರು ಲಿಪಿಗಳಿರುವಂತೆ ಕೊಂಕಣಿ ಭಾಷೆಗೆ ಐದು ಲಿಪಿಗಳಿವೆ. ಆದರೆ ಈ ಎಲ್ಲ ಲಿಪಿಗಳು ಕೊಂಕಣಿ ಸಾಹಿತ್ಯವನ್ನು ಸಮೃದ್ಧವಾಗಿಡಲು ಸಹಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊಂಕಣಿಯನ್ನು ಕರ್ನಾಟಕದಲ್ಲಿ ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತಿದೆ. ಗೋವಾದಲ್ಲಿ ಇದೇ ಕೊಂಕಣಿಯನ್ನು ದೇವನಾಗರಿ ಹಾಗೂ ರೋಮಿ ಲಿಪಿಯಲ್ಲಿ ಅಲೆಯಲಾಗುತ್ತಿದೆ. ಕೇರಳದಲ್ಲಿರುವ ಕೊಂಕಣಿ ಬರಹಗಾರರು ಮಲಯಾಳಂ ಲಿಪಿಯಲ್ಲಿ, ಭಟ್ಕಳ ಹಾಗೂ ಕಾರಾವಾರದಂತಹ ಪ್ರದೇಶಗಳಲ್ಲಿರುವ ಕೊಂಕಣಿ ಬರಹಗಾರರು ಪರ್ಶಿಯನ್( ಅರೇಬಿಕ್) ಲಿಪಿಯನ್ನು ಬಳಸುತ್ತಿದ್ದಾರೆ. ಈ ಪುಟ್ಟ ಭಾಷೆ ಕೊಂಕಣಿ ಭರ್ಜರಿ ಐದು ಲಿಪಿಗಳ ಮೂಲಕ ವಿಭಿನ್ನತೆಯಲ್ಲಿ ಏಕತೆ ಸಾಧಿಸಲು ಹೊರಟಿದೆ. ಕನ್ನಡ ಲಿಪಿ: ಕರ್ನಾಟಕದಲ್ಲಿರುವ ಕೊಂಕಣಿ ಭಾಷಿಗರಿಗೆ ಕನ್ನಡ ಆಡು ಭಾಷೆಯಾಗಿರುವುದರಿಂದ ತಮ್ಮ ಕೊಂಕಣಿ ಕೃತಿಗಳನ್ನು ಕನ್ನಡ ಲಿಪಿಯ ಮೂಲಕವೇ ಓದುಗರಿಗೆ ನೀಡುತ್ತಾರೆ. ಒಂದು ಲೆಕ್ಕಚಾರದ ಪ್ರಕಾರ ಕನ್ನಡ ಲಿಪಿಯನ್ನು ಇಟ್ಟುಕೊಂಡು ಬಂದ ಕೊಂಕಣಿ ಸಾಹಿತ್ಯದಲ್ಲಿ ಶೇ.೮೦ರಷ್ಟು ಕೊಂಕಣಿ ಕೃತಿಗಳು ಇದೇ ಕನ್ನಡ ಲಿಪಿಯನ್ನು ಬಳಸಿಕೊಂಡಿದೆ. ಇದೇ ಕನ್ನಡ ಲಿಪಿಯನ್ನು ಇಟ್ಟುಕೊಂಡು ಕೊಂಕಣಿಯ ಹಿರಿಯ ವಾರ ಪತ್ರಿಕೆ ರಾಕ್ಣೋ, ಮಾಸಿಕಗಳಾದ ಕುಟಾಮ್, ನಮಾನ್ ಬಾಳೊಕ್, ದಿರ್ವೆ ಮೊದಲಾದ ಪಾಕ್ಷಿಕ, ಮಾಸಿಕಗಳು ಕೊಂಕಣಿ ಸಾಹಿತ್ಯವನ್ನು ಬೆಳೆಸಿಕೊಂಡು ಬರುತ್ತಿದೆ. ಕನ್ನಡ ಲಿಪಿಯಲ್ಲಿಯೇ ಬರೆಯುತ್ತಿರುವ ಮೆಲ್ವಿನ್ ರೊಡ್ರಿಗಸ್, ಎಡ್ವರ್ಡ್ ನಜರೇತ್, ಸ್ಟೇನ್ ಅಗೇರಾ, ಸ್ಟೀವನ್ ಕ್ವಾಡರ್ಸ್, ಸಿಜ್ಯೇಸ್ ತಾಕೊಡೆ ಮೊದಲಾದವರು ಕೊಂಕಣಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ದೇವನಾಗರಿ ಲಿಪಿ: ಕೊಂಕಣಿ ಭಾಷೆಯನ್ನು ಇಂಡೋ -ದ್ರಾವಿಡಿಯನ್ ಭಾಷೆಗಳ ಪಂಗಡಕ್ಕೆ ಸೇರಿದೆ ಎನ್ನುವ ವಾದವೊಂದನ್ನು ದೇವನಾಗರಿ ಲಿಪಿ ಬಳಸುವ ಕೊಂಕಣಿ ಭಾಷಿಗರು ನಡೆಸುತ್ತಾ ಬಂದಿದ್ದಾರೆ. ಈ ದೇವನಾಗರಿ ಲಿಪಿಯನ್ನು ಹೆಚ್ಚಾಗಿ ಗೋವಾದಕೊಂಕಣಿ ಭಾಷಿಗರು ಬಳಕೆ ಮಾಡುತ್ತಿದ್ದಾರೆ. ಕೊಂಕಣಿ ಸಾಹಿತ್ಯದ ಶೇ.೨೦ರಷ್ಟು ಭಾಗವನ್ನು ದೇವನಾಗರಿ ಹಾಗೂ ರೋಮಿ ಲಿಪಿಗಳು ಕಸಿದುಕೊಂಡಿದೆ. ಇದೇ ಲಿಪಿಯ ಆಧಾರದಲ್ಲಿ ಗೋವಾದಲ್ಲಿರುವ ಕೊಂಕಣಿ ಭಾಷಿಗರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಪಾಲು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೊಂಕಣಿ ಸಾಹಿತ್ಯವನ್ನು ಯಾವುದೇ ಲಿಪಿಯಲ್ಲೂ ಬರೆದರೂ ನಂತರ ಅದನ್ನು ದೇವನಾಗರಿ ಲಿಪಿಯಲ್ಲಿ ಸಾದರ ಪಡಿಸಬೇಕು ಎನ್ನುವ ಮಾತೊಂದು ಅಕಾಡೆಮಿ ವಲಯದಲ್ಲಿ ಬಹಿರಂಗವಾಗಿ ಕಾಣಸಿಗುತ್ತದೆ. ಇದೇ ಲಿಪಿಯಲ್ಲಿ ಗೋವಾದಲ್ಲಿ ದಿನಪತ್ರಿಕೆ ಸೋನಾಅಪ್ರಾಂತ್(ಗೋಲ್ಡನ್ ಗೋವಾ) ಪ್ರಕಟವಾಗುತ್ತಿದೆ. ತ್ರೈಮಾಸಿಕ ‘ಜಾಗ್’( ದೇವನಾಗರಿ) ‘ಗುಲಾಬ್( ರೋಮಿ ಲಿಪಿ) ಬಿಂಬ್(ದೇವನಾಗರಿ) ಮಾಸಿಕ. ದೇವನಾಗರಿಯಲ್ಲಿ ಬರೆಯುತ್ತಿರುವ ಪುಂಡಳೀಕ್ ನಾರಾಯಣ್ ನಾಯಕ್, ನಾಗೇಶ್ ಕರ್ಮಲಿ, ಕೊಂಕಣಿಯ ಏಕಮಾತ್ರ ಜ್ಞಾನಪೀಠ ಪ್ರಶಸ್ತಿ ವಿಜೇತ ರವೀಂದ್ರ ಖಳೇಕ್ಕರ್, ಕೊಂಕಣಿ ಕವಿತೆಗಳಲ್ಲಿ ಮೊದಲ ಡಾಕ್ಟರೇಟ್ ಪಡೆದ ರಾಜೇಯ್ ಪವಾರ್, ಕಾಶೀನಾಥ್ ಸಾಂಬಾ ಲುಳೇಂಕರ್ ದೇವನಾಗರಿಯ ಮೂಲಕ ಕೊಂಕಣಿ ಸಾಹಿತ್ಯವನ್ನು ಬಲಪಡಿಸಿದ್ದಾರೆ. ರೋಮಿ, ಮಲಯಾಳಂ, ಉರ್ದು: ರೋಮಿ ಲಿಪಿಯನ್ನು ಗೋವಾದಲ್ಲಿ ಬಳಕೆ ಮಾಡಲಾಗುತ್ತಿದೆ. ದೇವನಾಗರಿ ಹಾಗೂ ರೋಮಿ ಲಿಪಿಗಳ ನಡುವೆ ಏರ್ಪಡುವ ವಿವಾದಗಳು ಕೊಂಕಣಿ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನಗಳನ್ನೇ ಸೃಷ್ಟಿ ಮಾಡಿದೆ. ಆಂಗ್ಲ ಭಾಷೆಯನ್ನು ಪ್ರಧಾನವಾಗಿಟ್ಟುಕೊಂಡ ರೋಮಿ ಲಿಪಿಯಲ್ಲೂ ಕೊಂಕಣಿ ಸಾಹಿತ್ಯಗಳು ಮೂಡಿಬಂದಿದೆ. ಕೇರಳದಲ್ಲಿರುವ ಕೊಂಕಣಿ ಭಾಷಿಗರು ಮಲಯಾಳಂ ಲಿಪಿಯನ್ನು ಹಾಗೂ ಭಟ್ಕಳದಲ್ಲಿ ಕೊಂಕಣಿಯನ್ನು ಉರ್ದು ಲಿಪಿಯಲ್ಲಿ ತೂಗಲಾಗುತ್ತದೆ. ಇದು ಅರೇಬಿಕ್- ಪರ್ಶಿಯನ್ ಲಿಪಿಯಾಗಿದೆ. ಕೊಂಕಣಿ ಮಾತನಾಡುವ ನಾನಾ ಪ್ರದೇಶದಲ್ಲಿರುವವರು ತಮ್ಮ ಆಡು ಭಾಷೆಗಳ ಲಿಪಿಯನ್ನೇ ಅಪ್ಪಿಕೊಂಡಿರುವುದರಿಂದ ಕೊಂಕಣಿ ಭಾಷೆಯನ್ನು ಒಂದೇ ಲಿಪಿಗಳ ಕಡೆ ಕೇಂದ್ರೀಕರಿಸಲು ವಿಫಲವಾಗಿದೆ. ಆದರೆ ಕೊಂಕಣಿ ಸಾಹಿತ್ಯವಂತೂ ನಾನಾ ಲಿಪಿಗಳ ಜತೆಯಲ್ಲಿ ಸೇರಿಕೊಂಡು ಹೊಸ ಹೊಸ ಪ್ರಯೋಗಗಳು ನಿಧಾನವಾಗಿ ನಡೆಯುತ್ತಿದೆ ಎನ್ನುವ ಮಾತು ಮಾತ್ರ ಸುಳ್ಳಲ್ಲ. ಎಲ್ಲ ಲಿಪಿಗೂ ಮಾನ್ಯತೆಗೆ ರಿಟ್: ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಾಹಿತ್ಯ ಪ್ರಶಸ್ತಿಯಲ್ಲಿ ಬರೀ ದೇವನಾಗರಿ ಲಿಪಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಾರೆ. ಇತರ ಲಿಪಿಗಳಿಗೂ ಸಮಾನ ಮಾನ್ಯತೆ ನೀಡಿ ಅದರಲ್ಲಿ ರುವ ಉತ್ತಮ ಕೃತಿಗೆ ಪ್ರಶಸ್ತಿ ಕೊಡಬೇಕು ಎನ್ನುವ ರಿಟ್ ಅರ್ಜಿಯೊಂದು ಹೈಕೋರ್ಟ್ ಮೆಟ್ಟಿಲಿನಲ್ಲಿದೆ. ಮಂಗಳೂರಿನ ಎರಿಕ್ ಒಝೋರಿಯೋ, ಮಾರ್ಶಲ್ ಡಿಸೋಜ( ಮಾಚ್ಚಾ ಮಿಲಾರ್), ವಲ್ಲಿ ವಗ್ಗ ಮೈಸೂರು ಇವರೆಲ್ಲರೂ ಸೇರಿಕೊಂಡು ಈ ರಿಟ್ ಅರ್ಜಿಯನ್ನು ನವೆಂಬರ್ ೨೦೧೧ರಲ್ಲಿ ಹೈಕೋರ್ಟ್‌ನಲ್ಲಿ ದಾಖಲಿಸಿದ್ದರು. ಕರಾವಳಿಯಲ್ಲೂ ಮೂಡಿದ ದೇವನಾಗರಿ: ಕೊಂಕಣಿ ಭಾಷೆಯಲ್ಲಿ ದೇವನಾಗರಿ ಲಿಪಿಯ ಮಹತ್ವ ಅರಿವಿಗೆ ಬರಬೇಕಾದರೆ ಕೇಂದ್ರದ ಕೊಂಕಣಿ ಅಕಾಡೆಮಿಯ ಪ್ರಶಸ್ತಿಗಳ ಪಟ್ಟಿಯಲ್ಲಿ ಕಾಣಬಹುದು. ೧೯೮೯ರಲ್ಲಿ ಕರಾವಳಿಯ ಖ್ಯಾತ ಕೊಂಕಣಿ ಸಾಹಿತಿ ದಿ. ಚಾಪ್ರಾ ಡಿಕೋಸ್ತಾ ಅವರ ‘ಸೊಂಸ್ಯಾಚೆಂ ಕಾನ್’( ಮೊಲದ ಕಿವಿ) ಕೃತಿಯನ್ನು ಆರಂಭದಲ್ಲಿ ಕನ್ನಡ ಲಿಪಿಯಲ್ಲಿ ಬರೆದು ನಂತರ ದೇವನಾಗರಿ ಲಿಪಿಯಲ್ಲಿ ಮುದ್ರಿಸಿದ ನಂತರ ಪ್ರಶಸ್ತಿ ಬಂತು. ಅದೇ ರೀತಿ ಜೋನ್ ಬ್ಯಾಪ್ತಿಸ್ಟ್ ಮೊರಾಯಿಸ್( ಬಿರ್ತಲೆಂ ತೂಫಾನ್- ಒಳಗಿನ ಬಿರುಗಾಳಿ),೧೯೯೮ ಜೆ.ಬಿ.ಸಿಕ್ವೇರಾ, ೧೯೯೪ ಗೋಕುಲ್‌ದಾಸ್ ಪ್ರಭು, ೨೦೧೦ರಲ್ಲಿ ಕವಿ ಮೆಲ್ವಿನ್ ರೊಡ್ರಿಗಸ್ ಇವರ ಕೃತಿಗಳು ಕನ್ನಡ ಲಿಪಿಯಲ್ಲಿ ಮುದ್ರಣ ಕಂಡು ನಂತರ ದೇವನಾಗರಿಗೆ ಬದಲಾಯಿತು. ಕೋಟ್ ಕಾರ್ನರ್: ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಬೆಳೆಯಬೇಕಾದರೆ ಐದು ಲಿಪಿಗಳು ಅಗತ್ಯ. ನಾನಾ ಪ್ರದೇಶದಲ್ಲಿರುವ ಕೊಂಕಣಿ ಭಾಷಿಗರು ತಮ್ಮ ತಮ್ಮ ಲಿಪಿಯಲ್ಲೇ ಕೊಂಕಣಿಗೆ ಪ್ರೋತ್ಸಾಹ ನೀಡಬಹುದು. ಕೊಂಕಣಿಗೆ ಒಂದೇ ಲಿಪಿ ಎನ್ನುವ ಮಾತು ತೀರಾ ಅಪ್ರಸ್ತುತ. ವಿತೋರಿ ಕಾರ್ಕಳ್, ಕೊಂಕಣಿ ಪ್ರಚಾರ ಸಂಚಾಲನ್ ಕಾರ‍್ಯಕಾರಿ ಕಾರ್ಯದರ್ಶಿ. ....... ಕೊಂಕಣಿಯಲ್ಲಿ ಲಿಪಿಗಿಂತ ಭಾಷೆ, ಸಾಹಿತ್ಯದ ಕುರಿತು ಚಿಂತನೆ ನಡೆಸುವ ಅಗತ್ಯವಿದೆ. ಲಿಪಿ ಎನ್ನುವ ಕಲ್ಪನೆಯನ್ನು ಬಿಟ್ಟು ಕೊಂಕಣಿ ಭಾಷೆಗಾಗಿ ದುಡಿಯುವ ಕೆಲಸ ನಡೆಯಬೇಕು. ಇದು ಸಮೃದ್ಧ ಕೊಂಕಣಿ ಸಾಹಿತ್ಯದ ಬೆಳವಣಿಗೆಗೆ ಪೂರಕ. ಗುರು ಬಾಳಿಗ ವಿಶ್ವ ಕೊಂಕಣಿ ಕೇಂದ್ರದ ಸಹಾಯಕ ನಿರ್ದೇಶಕ. .... ಕರ್ನಾಟಕದಲ್ಲಿ ಕೊಂಕಣಿ ಭಾಷೆಯ ಕೃತಿಯನ್ನು ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ರಚಿಸಬಹುದು ಎನ್ನೋದು ರಾಜ್ಯದಲ್ಲಿರುವ ಸರಕಾರದ ಆದೇಶ. ಅದೇ ರೀತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬೈಲಾದಲ್ಲಿ ರುವ ನಿಯಮದಂತೆ ದೇವನಾಗರಿ ಲಿಪಿಯಲ್ಲಿ ಬರೆದ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯದಲ್ಲೂ ಕರಾವಳಿಯಲ್ಲಿ ಕನ್ನಡ ಲಿಪಿಯ ಕೃತಿಗಳಿಗೆ ಮೊದಲ ಆದ್ಯತೆ ನೀಡಿದರೆ ಕುಮಟ, ಅಂಕೋಲ ಕಡೆಗಳಲ್ಲಿ ದೇವನಾಗರಿ ಲಿಪಿಗೆ ಒತ್ತು ನೀಡಲಾಗುತ್ತದೆ. ಕೊಂಕಣಿಯಲ್ಲಿರುವ ಲಿಪಿಯ ವೈವಿಧ್ಯತೆಯೇ ಅದರ ಬೆಳವಣಿಗೆಗೆ ಸಾಕ್ಷಿಯಾಗಿದೆ. - ಕಾಸರಗೋಡು ಚಿನ್ನಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ .... (vk main edition anchor news- 3.3.2013)

No comments:

Post a Comment