Wednesday, March 20, 2013

ಕೊಚ್ಚಿಯ ಹುಡುಗರು ಕಟ್ಟಿದ ‘ಕ್ರಾಸ್ ಟಾಕ್’ !

ಕೊಚ್ಚಿಯ ಹುಡುಗರು ಕ್ರಾಸ್ ಟಾಕ್ ಎನ್ನುವ ಬ್ಯಾಂಡ್‌ವೊಂದನ್ನು ಕಟ್ಟಿಕೊಂಡು ಊರೂರು ಸುತ್ತಾಡಿ ಧರ್ಮ, ಸಂಸ್ಕೃತಿ, ಆಚಾರ- ವಿಚಾರ ಮೊದಲಾದ ವಿಚಾರಗಳಲ್ಲಿ ಹಾಡುಗಳನ್ನು ಹಾಡುತ್ತಾ ಜಾಗೃತಿಯ ಕಿಚ್ಚು ಹತ್ತಿಸುತ್ತಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು ಇಂದಿನ ಯುವಜನತೆ ದಾರಿ ತಪ್ಪುತ್ತಿದೆ ಎನ್ನುವ ಮಾತುಗಳು ನಾಮಪಲಕದಂತೆ ಕಣ್ಣ ಮುಂದೆ ಬಂದು ಕುಣಿಯುತ್ತದೆ. ಆಧುನಿಕ ತಂತ್ರಜ್ಞಾನದ ಒಡಲಿನಲ್ಲಿ ಸಿಕ್ಕಿಕೊಂಡಿರುವ ಯುವನಜತೆ ಫೇಸ್ ಬುಕ್, ಇಂಟರ್‌ನೆಟ್ ಅದರಲ್ಲೂ ಸಮಯ ಉಳಿದುಬಿಟ್ಟರೆ ಕ್ಲಬ್, ಪಾರ್ಟಿಯಲ್ಲಿ ರಂಗೇರಿಸುವ ಪರಿಯಂತೂ ಸಾಮಾನ್ಯವಾಗಿ ಕಣ್ಣಿಗೆ ಕಾಣುತ್ತಾ ಸಾಗುತ್ತಿದೆ. ಆದರೆ ಇದಕ್ಕೆಲ್ಲ ಅಪವಾದ ಎನ್ನುವಂತೆ ಕೊಚ್ಚಿಯ ಯುವಕರು ಹೊಸ ಹಾದಿಯಲ್ಲಿ ಸಾಗಿದ್ದಾರೆ. ತಮ್ಮದೇ ಕ್ರಾಸ್ ಟಾಕ್ ಎನ್ನುವ ಬ್ಯಾಂಡ್‌ವೊಂದನ್ನು ಕಟ್ಟಿಕೊಂಡು ಊರೂರು ಸುತ್ತಾಡಿ ಧರ್ಮ, ಸಂಸ್ಕೃತಿ, ಆಚಾರ- ವಿಚಾರ ಮೊದಲಾದ ವಿಚಾರಗಳಲ್ಲಿ ಹಾಡುಗಳನ್ನು ಹಾಡುತ್ತಾ ಜಾಗೃತಿಯ ಕಿಚ್ಚು ಹತ್ತಿಸುತ್ತಿದ್ದಾರೆ. ಅಂದಹಾಗೆ ‘ಕ್ರಾಸ್ ಟಾಕ್’ ಇದು ಕೊಚ್ಚಿಯ ಹುಡುಗರು ಕಟ್ಟಿದ ವಿನೂತನ ಬ್ಯಾಂಡ್. ಇಲ್ಲಿ ನಾನಾ ವೃತ್ತಿಯಲ್ಲಿರುವ ೨೦ಕ್ಕೂ ಹೆಚ್ಚಿನ ಯುವಕ- ಯುವತಿಯರು ತಂಡದ ಸದಸ್ಯರು. ಅಮೆರಿಕ ಸೇರಿದಂತೆ ವಿಶ್ವದಲ್ಲಿರುವ ಕೆಲವೊಂದು ಕ್ರೈಸ್ತ ಧರ್ಮ ಪಾಲಿಸುತ್ತಿರುವ ರಾಷ್ಟ್ರಗಳಲ್ಲಿ ಇಂತಹ ಬ್ಯಾಂಡ್‌ಗಳು ಸಾಮಾನ್ಯವಾಗಿ ಕಾಣ ಸಿಗುತ್ತದೆ. ಆದರೆ ಭಾರತ ಹಲವು ಧರ್ಮಗಳ ತಾಣ. ಇಲ್ಲಿ ಇಂತಹ ಬ್ಯಾಂಡ್‌ಗಳು ಕಾಣ ಸಿಗುವುದು ತೀರಾ ವಿರಳ. ಅದರಲ್ಲೂ ಯುವಜನತೆಯೇ ಬ್ಯಾಂಡ್ ಕಟ್ಟಿಕೊಂಡು ಮುನ್ನಡೆಯುವುದು ಬಹಳ ಅಪರೂಪ. ಇದಕ್ಕೆ ಜೀವಂತ ಉದಾಹರಣೆ ಕ್ರಾಸ್ ಟಾಕ್. ಕ್ರಾಸ್ ಟಾಕ್ ನಲ್ಲಿ ಏನಿದೆ ?: ಕೊಚ್ಚಿಯಲ್ಲಿ ಹುಟ್ಟಿರುವ ಈ ಕ್ರಾಸ್ ಟಾಕ್‌ನಲ್ಲಿ ಬೈಬಲ್ ಆಧಾರಿತ ಉಪದೇಶ, ಸಂದೇಶಗಳನ್ನು ಯುವಜನತೆಗೆ ಪಾಶ್ಚಿಮಾತ್ಯ ಸಂಗೀತದ ಮೂಲಕ ಹರಡುವ ಕೆಲಸ ನಡೆಯುತ್ತಿದೆ. ಭಾರತೀಯ ಸಂಗೀತ ಹಾಗೂ ಪಾಶ್ಚಿಮಾತ್ಯದ ಸಂಗೀತದ ಮಿಳಿತದಿಂದ ಕೂಡಿದ ಬೈಬಲ್ ಗೆ ಸಂಬಂಧಪಟ್ಟ ಹಾಡುಗಳು ಈ ಯುವಕರ ತಂಡ ಹಾಡುತ್ತಿದೆ. ಅಂದಹಾಗೆ ಕ್ರಾಸ್ ಟಾಕ್ ಎನ್ನುವ ಪದ ಬೈಬಲ್‌ಗೆ ಸಂಬಂಧಪಟ್ಟದ್ದು ಕ್ರಾಸ್ ಎಂದರೆ ಶಿಲುಬೆ. ಟಾಕ್ ಎಂದರೆ ಕ್ರೈಸ್ತನ ಸಿದ್ಧಾಂತ ಎನ್ನುವುದು ಈ ಬ್ಯಾಂಡ್‌ನ ನಿಜಾರ್ಥ ಎನ್ನುತ್ತಾರೆ ತಂಡದ ಸಂಚಾಲಕ ಸೀಜೀನ್ ಥಾಮಸ್. ಆಧ್ಯಾತ್ಮಿಕ ಜಗತ್ತಿನಲ್ಲಿ ವಿಶೇಷ ಅನುಭವ ಹಾಗೂ ಕ್ರೈಸ್ತನ ಕುರಿತು ಜಾಗೃತಿ ನೀಡುವಂತಹ ಹಾಡುಗಳನ್ನು ಯುವಜನತೆಗೆ ಕೇಳಿಸುವ ಮೂಲಕ ಅವರಲ್ಲಿರುವ ಧರ್ಮದ ಕುರಿತಾಗಿ ಇರುವ ಗೊಂದಲಗಳನ್ನು ನಿವಾರಿಸಿ, ಹೊಸ ಬೆಳಕು ನೀಡುವಂತಹ ಕೆಲಸ ಈ ಬ್ಯಾಂಡ್ ನಿಂದ ನಡೆಯುತ್ತಿದೆ ಎನ್ನೋದು ಸೀಜೀನ್ ಥಾಮಸ್ ಮಾತು. ೨೦೦೭ರಲ್ಲಿ ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ನಿಂದ ಪ್ರೇರಿತಗೊಂಡ ಕೊಚ್ಚಿಯ ಹುಡುಗರು ತಮ್ಮ ನಾನಾ ವೃತ್ತಿಗಳ ಜತೆಯಲ್ಲಿ ತಮ್ಮ ಉಳಿಕೆಯ ಅವಧಿಗಳಲ್ಲಿ ಇಂತಹ ತಂಡ ಕಟ್ಟಲು ಕಾರಣವಾಯಿತು ಎನ್ನುತ್ತದೆ ಕ್ರಾಸ್ ಟಾಕ್‌ನ ಇತಿಹಾಸ. ಅಲ್ಲಿಂದ ಈ ಯುವಕರ ಕ್ರಾಸ್ ಟಾಕ್ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್ ಸೇರಿದಂತೆ ದೇಶ- ವಿದೇಶದಲ್ಲಿ ಸಂಗೀತ ಕಾರ‍್ಯಕ್ರಮಗಳನ್ನು ನೀಡುತ್ತಿದೆ. ಟೋಟಲಿ ಆಧ್ಯಾತ್ಮಿಕದ ಒಲುವು ಹೆಚ್ಚಿಸುವ ಇಂತಹ ತಂಡದ ಕಾರ‍್ಯಕ್ರಮವೊಂದನ್ನು ಮಿಸ್ ಮಾಡದೇ ನೋಡಬೇಕು ಎನ್ನೋದು ಕ್ರಾಸ್ ಟಾಕ್‌ನ ಸೆಳೆತಕ್ಕೆ ಸಿಕ್ಕಿರುವ ಅಭಿಮಾನಿಗಳ ಗಟ್ಟಿ ಮಾತು. ... ಚಿತ್ರ : ಸುಧಾಕರ ಎರ್ಮಾಳ್ ......

No comments:

Post a Comment