Monday, April 1, 2013

ಕುಡ್ಲದ ಹುಡುಗಿಗೆ ಸಿದ್ದಾರ್ಥ ಕ್ಲೀನ್‌ ಬೋಲ್ಡ್‌ !

* ಸ್ಟೀವನ್ ರೇಗೊ ದಾರಂದಕುಕ್ಕು ಆದರೆ ಹರ್ಷಿತಾ ಶೆಟ್ಟಿಯಂತೂ ಸಿನ್ಮಾ ಲ್ಯಾಂಡ್ ಪಕ್ಕಾ ನ್ಯೂ ಕಮರ್ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಅಂದಹಾಗೆ ಹರ್ಷಿತಾ ಶೆಟ್ಟಿ , ಬೇಸಿಕಲಿ ಮಂಗಳೂರಿನ ಹುಡುಗಿ. ಕೋಸ್ಟಲ್ ವುಡ್‌ನಲ್ಲಿ ಭರ್ಜರಿ ವೆಚ್ಚದಲ್ಲಿ ತಯಾರಾಗಿ ಈ ವರ್ಷ ಸಕ್ಸಸ್ ರೇಟ್ ದಾಖಲಿಸಿಕೊಂಡಿರುವ ನಾಟಕಕಾರ ದೇವದಾಸ್ ಕಾಪಿಕಾಡ್ ಅವರ ನಾಟಕ ಆಧರಿತ ಚಿತ್ರ 'ತೆಲಿಕೆದ ಬೊಳ್ಳಿ'ಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡ ಹುಡುಗಿಯೇ ಈ ಹರ್ಷಿತಾ ಶೆಟ್ಟಿ. ಮಂಗಳೂರು ಮೂಲದ ಮುಂಬಯಿಯಲ್ಲಿಯೇ ಜಾಸ್ತಿ ಹೊತ್ತು ಕಳೆಯುತ್ತಿರುವ ಹರ್ಷಿತಾ ಶೆಟ್ಟಿ, ಕಾರ್ಪೊರೇಟ್ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಅದರಲ್ಲೂ ಮುಖ್ಯವಾಗಿ ಮೊದಲ ಚಿತ್ರ ತೆಲಿಕೆದ ಬೊಳ್ಳಿಯಲ್ಲಿ ತೀರಾ ಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ಇಡೀ ಚಿತ್ರದ ಮೂಲ ಬಂಡವಾಳ ಎನ್ನುವಂತೆ ಓಡಾಡಿಕೊಂಡು ತುಳು ಸಿನಿಮಾ ಪ್ರಿಯರಿಗೆ ಹತ್ತಿರವಾದ ಹರ್ಷಿತಾ ಶೆಟ್ಟಿಯು ಈಗ ಕೋಲಿವುಡ್ ಚಿತ್ರದ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಸಿದ್ದಾರ್ಥ್ ಕೇಳಿದ ಹುಡುಗಿ: ಟಾಲಿವುಡ್ ನಟ ಸಿದ್ದಾರ್ಥ್‌ಗೆ ಇದು ದೊಡ್ಡ ಚಿತ್ರವೇ ಸರಿ. ಕಾರಣ ಸಿದ್ದಾರ್ಥ್‌ಗೆ ಈ ಹಿಂದಿನ ಎರಡು ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಅದರಲ್ಲೂ ಚಿತ್ರದ ನಾಯಕಿರ ಕುರಿತು ಸದಾ ಗಾಸಿಪ್‌ಗಳಲ್ಲಿ ಮುಳುಗಿ ಬರುತ್ತಿರುವ ಸಿದ್ದಾರ್ಥ್ ಈ ಬಾರಿ ಹೊಸ ನಾಯಕಿಯನ್ನು ಪರಿಚಯ ಮಾಡಬೇಕು ಎಂದು ನಿರ್ದೇಶಕ ಮಣಿಮಾರನ್ ಅವರಲ್ಲಿ ಹೇಳಿದ್ದರು. ಇದೇ ಕಾರಣದಿಂದ ಹರ್ಷಿತಾ ಶೆಟ್ಟಿ ಆಯ್ಕೆಯಾದರು ಎನ್ನುತ್ತದೆ ಚಿತ್ರದ ತಂಡ. ಅದರಲ್ಲೂ ಹರ್ಷಿತಾರ ಸ್ಕ್ರೀನ್ ಟೆಸ್ಟ್‌ನಲ್ಲಿ ಮಾಡಿದ ಸಾಧನೆ ಈ ಚಿತ್ರದ ಕತೆಗೆ ಅವರೇ ಸರಿಯಾದ ಆಯ್ಕೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಣಿಮಾರನ್. ತಮಿಳಿನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿ ಮಾರನ್ ಅವರ ಸಹಾಯಕರಾಗಿ ದುಡಿದ ಮಣಿಮಾರನ್‌ಗೆ ಇದು ಹೊಸ ಪ್ರಯತ್ನ. ತನ್ನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವುದರಿಂದ ವೆಟ್ರಿ ಮಾರನ್ ಚಿತ್ರಕ್ಕೆ ಅದ್ಭುತವಾದ ಕತೆ ಹೆಣೆದುಕೊಟ್ಟಿದ್ದಾರೆ. ಜತೆಯಲ್ಲಿ ಎ.ಆರ್. ರೆಹಮಾನ್ ಅವರ ಅಳಿಯ ಜಿ.ವಿ. ಪ್ರಕಾಶ್ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ. ಉದಯಂ ಉದಯಿಸಿದ ಪರಿ: 2004ರಲ್ಲಿ ಬಾಲು ಮಹೇಂದ್ರ ಅವರ ಸಿನಿಮಾಕ್ಕೆ ವೆಟ್ರಿ ಮಾರನ್ ಕತೆ ಹೆಣೆದುಕೊಟ್ಟಿದ್ದರು. ಈ ಚಿತ್ರದಲ್ಲಿ ಧನುಷ್ ನಾಯಕನಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣವಾಗಲಿಲ್ಲ. ಆ ಬಳಿಕ ಈ ಚಿತ್ರ ಎರಡು ಬಾರಿ ನಿರ್ಮಾಣ ಮಾಡಲು ಕೋಲಿವುಡ್ ಸಿನ್ಮಾ ಇಂಡಸ್ಟ್ರಿ ಎದ್ದು ನಿಂತು ಮತ್ತೆ ಅಲ್ಲಿಯೇ ಮಲಗಿ ಹೋಯಿತು. ಆನಂತರ 2012ರಲ್ಲಿ ವೆಟ್ರಿ ಮಾರನ್ ಮತ್ತೆ ಸಿನ್ಮಾ ಮಾಡಲು ಅಣಿಯಾದರು. ಈ ಚಿತ್ರವನ್ನು ಉದಂಯಂ ಎನ್‌ಎಚ್ 4 ಎಂದು ಹೆಸರಿಡಲಾಗಿದೆ. ಕಿಶೋರ್, ಕೆ.ಕೆ. ಮೆನನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಕನ್ನಡದ ರಮ್ಯಾ ಕೂಡ ಇದರ ಒಂದು ಪಾತ್ರದಲ್ಲಿ ಕಾಣಸಿಗಲಿದ್ದಾರೆ. ತಮಿಳಿನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ ದಯಾನಿಧಿ ಹಾಗೂ ವೆಟ್ರಿ ಮಾರನ್ ಜತೆಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಉಳಿದಂತೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ಚಿತ್ರ ಬಿಡುಗಡೆಯ ಕನಸು ಕಾಣುತ್ತಿದೆ ಚಿತ್ರ ತಂಡ. (vk lvk published dis article on: 2.04.2013)

No comments:

Post a Comment