Wednesday, May 16, 2012

ಕುಡ್ಲದ ಹುಡುಗರ ‘ಪಾಣಿಘಾಸ್’

ಬ್ಲರ್ಬ್: ಸಂಗೀತದ ಮೇಲೆ ವಿಶೇಷ ಹುಚ್ಚು ಹಿಡಿಸಿ ಕೊಂಡ ಯುವಕರ ತಂಡದ ಕತೆಯಿದು. ಬೆಂಗಳೂರಿನ ಕಾರ್ಪೋರೇಟ್ ರಂಗದಲ್ಲಿ ಪಾಣಿಘಾಸ್ ಎಂದಾಕ್ಷಣ ಕೇಳುವ ಕಿವಿಗಳು ಒಂದ್ ಸಾರಿ ನೆಟ್ಟಗೆ ನಿಂತು ಕೇಳಿಸಿ ಕೊಳ್ಳೋಣ ಮಾರಾಯ್ರೆ ಎನ್ನುತ್ತದೆ. ಬನ್ನಿ ಹುಡುಗರ ಮಾತಿನಲ್ಲೇ ಕೇಳಿ ಬಿಡೋಣ... ಬ್ಲರ್ಬ್:
ಈಗಷ್ಟೇ ಶಿಕ್ಷಣ ಮುಗಿಸಿ ಕೆಲಸ ಸೇರಿಕೊಳ್ಳುವ ಜೋಶ್. ಹಳ್ಳಿಯ ಗೂಡಿನಿಂದ ಹುಡುಗರು ಪಟ್ಟಣ ಸೇರುವ ಹುಮ್ಮಸ್ಸು. ದಿನನಿತ್ಯದ ಕೆಲಸದ ನಡುವೆ ಒಂಚೂರು ಟೈಮ್ ಸಿಕ್ಕಾಗ ತಮ್ಮ ಪ್ರವೃತ್ತಿಗೆ ಕೀ ಕೊಡುವ ಉತ್ಸಾಹ. ಸಂಗೀತದ ಮೇಲೆ ಇಟ್ಟುಕೊಂಡ ಅಪಾರ ಪ್ರೀತಿ. ಎಲ್ಲವೂ ಸೇರಿಕೊಂಡಾಗ ಅದರ ಹೆಸರೇ ಪಾಣಿಘಾಸ್. ಇದು ಟೋಟಲಿ ಸಂಗೀತ ಕೇಳುವ ಕಿವಿಗಳಿಗೆ ಸಿಗುವ ಮನರಂಜನೆ. ಇಂತಹ ಒಂದು ತಂಡವನ್ನು ಕಟ್ಟಿ ಕಾರ್ಪೋರೇಟ್ ದುನಿಯಾದಲ್ಲಿ ಮಿಂಚು ಹರಿಸುವ ಹುಡುಗರೆಲ್ಲರೂ ಕರಾವಳಿಯ ತಟದವರು. ಕಳೆದ ಒಂದು ವರ್ಷದಿಂದ ಬೆಂಗಳೂರಿನ ಕಾರ್ಪೋರೇಟ್ ರಂಗದಲ್ಲಿ ಈ ಹುಡುಗರು ಹೆಸರು ಮಾಡುತ್ತಿದ್ದಾರೆ. ಪಾಣಿಘಾಸ್ ಎಂದಾಕ್ಷಣವೇ ಅಲ್ಲೊಂದು ಸಂಗೀತದ ಅಲೆ ನಿಧಾನವಾಗಿ ಮೈಚಾಚಿಕೊಳ್ಳುತ್ತದೆ. ನಿಜವಾದ ಸಂಗೀತದ ಅಭಿಮಾನಿಗಳು ಪಾಣಿಘಾಸ್ ತಂಡದ ಸಂಗೀತ ಕೇಳಿದಾಕ್ಷಣ ಒಂದು ಸಾರಿ ಕಿವಿ ನಿಮಿರಿ ನಿಲ್ಲುತ್ತದೆ. ಇದು ಪಾಣಿಘಾಸ್ ಕ್ರಿಯೇಟ್ ಮಾಡಿದ ಸಂಗೀತ ಲೋಕದ ಹೊಸ ಕ್ರೇಜ್. ಅಂದಹಾಗೆ ‘ಪಾಣಿಘಾಸ್’ ಯಾಕೆ ಇತರ ಸಂಗೀತ ಬ್ಯಾಂಡ್‌ಗಳಿಗಿಂತ ಭಿನ್ನ ಅಂತೀರಾ..? ಹಾಗಾದರೆ ನಿಮ್ಮ ಪ್ರಶ್ನೆಯ ಮೊಣಚಿನಲ್ಲಿಯೇ ಉತ್ತರ ಕೂಡ ಇದೆ ಅನ್ನಬಹುದು. ‘ಪಾಣಿಘಾ’ ಇದು ಪಕ್ಕಾ ಸಂಸ್ಕೃತ ಪದಕೋಶದಿಂದ ಬಳಕೆಯಾದ ಪದ ಎನ್ನುವುದು ತಂಡದ ಮಾತು. ಆಂಗ್ಲ ಭಾಷೆಯಲ್ಲಿಯೇ ಇದರ ಅರ್ಥವನ್ನು ಹೇಳುವುದಾದರೆ ಪರ್ಕಸನಿಷ್ಟ್. ಅಚ್ಚ ಕನ್ನಡ ಭಾಷೆಯಲ್ಲಿ ಹೇಳುವುದಾದರೆ ಬರೀ ಕೈಯಲ್ಲಿಯೇ ಸಂಗೀತ ಪರಿಕರಗಳನ್ನು ಬಡಿಯುವವರಿಗೆ ‘ಪಾಣಿಘಾ’ ಎನ್ನಲಾಗುತ್ತದೆ. ಪಾಣಿಘಾಸ್ ಎಂದರೆ ಬರೀ ಕೈಯಲ್ಲಿ ಸಾಧನಾ ಬಡಿಯುವ ಹುಡುಗರು ಎನ್ನುವ ಅರ್ಥ ಬರುತ್ತದೆ. ಹುಡುಕಾಟದ ಹುಡುಗರು: ಪಾಣಿಘಾಸ್ ಟೋಟಲಿ ಭಿನ್ನ. ಇಲ್ಲಿ ದೇಶ- ವಿದೇಶಗಳಲ್ಲಿ ಬಳಸುವ ಸಂಗೀತ ಪರಿಕರಕಗಳೇ ಮುಖ್ಯ ಐಟಂಗಳು. ಅರೇಬಿಯನ್ ದೇಶಗಳಲ್ಲಿ ಜಾಸ್ತಿಯಾಗಿ ಕಂಡು ಬರುವ ಬೆಲ್ಲಿ ಡ್ಯಾನ್ಸ್‌ಗೆ ಬಳಸಲಾಗುವ ದರುಬೂಕಾ ಎನ್ನುವ ವಿಶಿಷ್ಟ ಮಾದರಿಯ ಸಂಗೀತ ಪರಿಕರಕವನ್ನು ತಂಡ ಹೊಂದಿದೆ. ಇದರ ಜತೆಯಲ್ಲಿ ಆಪ್ರಿಕನ್ ದೇಶದಿಂದ ಜಂಬೆ, ಕ್ಯೂಬಾ ರಾಷ್ಟ್ರದಿಂದ ತಂದ ಪೊಂಗೋ ಎನ್ನುವ ಸಂಗೀತ ಸಾಧನ ತಂಡದ ಮುಖ್ಯ ಬೇಸ್ ಪಾಯಿಂಟ್. ಇದರ ಜತೆಗೆ ದೇಶದಲ್ಲಿರುವ ನಾನಾ ಅದಿವಾಸಿ ಸಮುದಾಯದಿಂದ ತಂದ ಸಂಗೀತ ಪರಿಕರಕಗಳು, ಲೋಕಲ್ ಆಗಿ ಸಿಗುವ ಚೆಂಡೆ, ತಾಸೆ, ಜಾಗಟೆಯಂತಹ ಐಟಂಗಳು ಈ ತಂಡದಲ್ಲಿದೆ. ಡಿಜಿರೆಡೋ ಆಸೀಸ್‌ನ ಅದಿವಾಸಿ ಸಂಗೀತ ಪರಿಕರಕಗಳು, ಕರಾವಳಿ ಮೂಲದ ದುಡಿ ಎಲ್ಲವೂ ಪಾಣಿಘಾಸ್ ತಂಡದ ಸೊತ್ತುಗಳು. ಈಗಲೂ ಇಂತಹ ಸಂಗೀತ ಸಾಧನಾಗಳನ್ನು ಹುಡುಕಾಟದಲ್ಲಿಯೇ ಹುಡುಗರು ಸಂಪೂರ್ಣ ಮಗ್ನವಾಗಿದ್ದಾರೆ. ಒಂದೊಂದು ಸಂಗೀತ ಸಾಧನಕ್ಕಾಗಿ ಬರೋಬರಿ ಎರಡು- ಮೂರು ತಿಂಗಳು ಸುತ್ತಾಟ ಮಾಡಿದ್ದು ಇದೆ ಎನ್ನುತ್ತಾರೆ ಪಾಣಿಘಾಸ್ ತಂಡದ ಸದಸ್ಯ ಕಬೀರ್ ಮಾನವ್. ಸಂಗೀತ ಸಾಧನಗಳು ಹೆಚ್ಚು ಕಡಿಮೆ ಬೆಲೆಬಾಳುವಂತವುಗಳು.. ಮೊದಲು ತಿಂಗಳ ಸಂಬಳ ಕೊಟ್ಟು ಇಡೀ ಒಂದು ತಿಂಗಳು ಉಪವಾಸ ವೃತ್ತ ಮಾಡಿದ ಕತೆಯನ್ನು ಕಬೀರ್ ಬಿಚ್ಚಿಡುತ್ತಾ ರೆ. ಪಾಣಿಘಾಸ್ ತಂಡದಲ್ಲಿರುವ ಒಂದೊಂದು ಸಂಗೀತ ಸಾಧನಗಳು ಒಂದೊಂದು ಕತೆಯನ್ನು ಹೇಳುತ್ತದೆ. ಸಂಗೀತ ಪರಿಕರಕಗಳ ಹುಡುಕಾಟ, ಆರ್ಥಿಕ ಮುಗ್ಗಟ್ಟು, ತಂಡದ ತರಬೇತಿ ಸಮಯದಲ್ಲಿ ಅಕ್ಕಪಕ್ಕದವರು ಮಾಡುವ ಕಿರಿಕಿರಿ ಬಹಳಷ್ಟು ಸಲ ತಂಡವನ್ನು ಘಾಸಿ ಮಾಡಿದ ನೆನಪುಗಳನ್ನು ಕಬೀರ್ ನಿದಾನವಾಗಿ ಬಿಚ್ಚಿಡುತ್ತಾರೆ. ಆದರೆ ತಂಡ ಕಳೆದ ಒಂದು ವರ್ಷದಲ್ಲಿ ಈ ಎಲ್ಲ ಕಹಿ ನೆನಪುಗಳನ್ನು ಮರೆತು ಬಿಟ್ಟು ಹೊಸ ಪರಂಪರೆಯನ್ನು ಹುಟ್ಟಿ ಹಾಕಿದೆ ಎಂದಾಗ ಕಬೀರ್ ಸಂತೃಪ್ತಿಯ ನಗು ಪಸರಿಸುತ್ತಾರೆ. ಪಾಣಿಘಾದ ಬಾಯ್ಸ್ ಝೋನ್: ‘ಪಾಣಿಘಾಸ್’ ಹುಟ್ಟಿದ ಕತೆನೇ ತುಂಬಾನೇ ಭಿನ್ನ. ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದ ಕಬೀರ್ ಮಾನವ್ ಹಾಗೂ ಬೆಂಗಳೂರಿನ ಆಂಟೆನಾ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿರುವ ಮಂಜೇಶ್ವರ ಮೂಲದ ವೆಂಕಟ್ ಇಬ್ಬರಿಗೂ ಸಂಗೀತ ಮೇಲೆ ವಿಶೇಷ ಮೋಹ. ಏನಾದರೂ ಸಾಸಿ ಬಿಡಬೇಕೇನ್ನುವ ಚಟ. ಇದೇ ಮೋಹ ಚಟದ ಪರಿಣಾಮ ‘ಪಾಣಿಘಾ’ ಎನ್ನುವ ಟೋಟಲಿ ಭಿನ್ನ ತಂಡವೊಂದು ಹುಟ್ಟಿಕೊಂಡಿತು. ಇದೇ ಆಸಕ್ತಿಯಿಂದ ಬೆಂಗಳೂರಿನಲ್ಲಿ ಸುತ್ತಾಡಿಕೊಂಡಿದ್ದ ಶೈಲೇಶ್, ದಿನೇಶ್, ಧನುಷ್, ಆಂಜೋ ಜೋಕೆಬ್, ಅರ್ಜುನ್ ಕಜೆ, ರಾಮಕೃಷ್ಣ ಜತೆ ಸೇರಿದರು. ಪಾಣಿಘಾಸ್‌ನ ಟೀಮ್ ಮ್ಯಾನೇಜರ್ ಕೋರಮಂಗಲದಲ್ಲಿದ್ದ ದಿನೇಶ್ ಭಟ್ ಅವರ ಫ್ಲ್ಯಾಟ್ ಮೇಲೆ ಪ್ರತಿ ವಾರಕ್ಕೊಮ್ಮೆ ತರಬೇತಿ ಆರಂಭವಾಯಿತು. ವೆಂಕಟ್ ದುಡಿಯುತ್ತಿದ್ದ ಸಾಫ್ಟ್‌ವೇರ್ ಕಂಪನಿಯಲ್ಲಿ ಪಾಣಿಘಾ ತಂಡ ತನ್ನ ಮೊದಲ ಕಾರ‍್ಯಕ್ರಮ ನೀಡಿತು. ಈ ಬಳಿಕ ಕೋರಮಂಗಲದ ಪಾರ್ಕ್‌ನಲ್ಲಿ ಫ್ಲಾಶ್ ಮೋಬ್, ಮಹಮ್ಮದ್ ಬೊಳುವಾರು ಅವರ ಕೃತಿ ಬಿಡುಗಡೆಯ ಸಮಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ ಅತೀ ದೊಡ್ಡ ಕಾರ‍್ಯಕ್ರಮ ಆಯೋಜಿಸಲಾಗಿತ್ತು. ಈ ಬಳಿಕ ಪಾಣಿಘಾ ತಂಡಕ್ಕೆ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿತು ಎನ್ನುತ್ತಾರೆ ಕಬೀರ್ ಮಾನವ್. ಹುಡುಗರ ಸತತ ಹೋರಾಟ ಹಾಗೂ ಸಾಸಬೇಕೇನ್ನುವ ಛಲ ಪಾಣಿಘಾಸ್ ತಂಡದ ಹೈಲೇಟ್ ಎನ್ನಬಹುದು. ಟೋಟಲಿ ಹೊಸ ಹುಡುಗರ ಪ್ರಯತ್ನಕ್ಕಂತೂ ಶಹಬ್ಬಾಸ್ ಎನ್ನಲೇ ಬೇಕು. ...... ಕೋಟ್ ಕಾರ್ನರ್ ‘ಸಂಗೀತವನ್ನು ನಮ್ಮ ತಂಡ ಯಾವತ್ತೂ ಕೂಡ ಸಿರೀಯಸ್ ಆಗಿ ಸ್ಟಡಿ ಮಾಡಿಲ್ಲ. ಯಾವುದೇ ಉಪಕರಣ ಕೊಟ್ಟರೂ ಅದರಿಂದ ಸಂಗೀತ ಕೇಳಿಸುವಂತಹ ತಾಕತ್ತು ನಮ್ಮಲ್ಲಿದೆ. ಸಂಗೀತದ ಕುರಿತು ನಮ್ಮಲ್ಲಿ ಹುಟ್ಟಿಕೊಂಡ ವಿಶೇಷ ಪ್ರೀತಿಯೇ ಈ ತಂಡದ ರಚನೆಗೆ ಕಾರಣವಾಯಿತು. ವಿನಾಶದ ಅಂಚಿನಲ್ಲಿರುವ ಬಹಳ ಹಳೆಯ ಸಂಗೀತ ಪರಿಕರಕಗಳನ್ನು ಒಂದಾಗಿ ಸೇರಿಸಿಕೊಂಡು ಸಂಸ್ಕೃತಿಯ ಜತೆಗೆ ಕೂಡಿಸುವ ಕೆಲಸ ನಮ್ಮಿಂದ ನಡೆಯುತ್ತಿದೆ ಎನ್ನುವ ಹೆಮ್ಮೆ ನಮ್ಮ ತಂಡದಲ್ಲಿದೆ. - ಕಬೀರ್ ಮಾನವ್, ಪಾಣಿಘಾಸ್ ತಂಡದ ಸದಸ್ಯ. ...................... ವಿಜಯ ಕರ್ನಾಟಕ-ಯುವಘರ್ಜನೆ-೧೨-೧೬-೦೫-೧೨ * ಸ್ಟೀವನ್ ರೇಗೊ, ದಾರಂದಕುಕ್ಕು

No comments:

Post a Comment