
ಮಲಯಾಳಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ಅವರಿಗೆ ಓಣಂ ವಿಶೇಷ ಹಬ್ಬ . ಸಿನ್ಮಾಕ್ಕೆ ಬರುವ ಮೊದಲು ಓಣಂಗಾಗಿ ಮನೆಯಲ್ಲಿ ಬಹಳಷ್ಟು ಸಿದ್ಧತೆ ನಡೆಯುತ್ತಿತ್ತು. ಈಗ ಸಿನ್ಮಾದಲ್ಲಿ ಬ್ಯುಸಿ ಇದ್ದರೂ ಕೂಡ ಹಬ್ಬದ ಟೈಮ್ನಲ್ಲಿ ಚಿತ್ರದ ಶೆಡ್ಯುಲ್ಗಳನ್ನು ಚೇಂಜ್ ಮಾಡಿ ಮನೆಯಲ್ಲಿಯೇ ಇದ್ದು ಬಿಡುತ್ತೇನೆ ಎನ್ನುತ್ತಾರೆ ಭಾಮಾ. ಅಂದಹಾಗೆ ತಿರುಓಣಂಗಾಗಿ ಭಾಮಾ ಜತೆಯಲ್ಲಿ ವಿಶೇಷ ಚಾಟ್ ಇಲ್ಲಿದೆ.
ಯಾರನ್ನೋ ಹುಡುಕಾಟದಲ್ಲಿರುವ ಸುಂದರ ನಯನಗಳು, ತುಟಿಯಂಚಿನಲ್ಲಿ ಮಿಂಚಿ ಥಟ್ ಅಂತಾ ಮರೆಯಾಗುವ ನಗು, ವೊದಲ ನೋಟದಲ್ಲೇ ಹೋಮ್ಲಿ ಲುಕ್ಕು ಕೊಡುವ ಮೈಮಾಟ, ಈ ಮೈಮಾಟದ ನಡುವೆಯೇ ಆಗಾಗ ಇಣುಕುವ ಗ್ಲಾಮರ್ ಲುಕ್. ಇವೆಲ್ಲವೂ ಒಟ್ಟಾದಾಗ ಕಾಣುವ ಸುಂದರ ಬೆಡಗಿಯೇ ಭಾಮಾ. ಯಾರು ಈ ಭಾಮಾ? ಎಂದು ನಿಮಗೆ ಗೊತ್ತಾಗದಿದ್ದರೆ ಕನ್ನಡದ ‘ವೊದಲಾ ಸಲ’ ಸಿನಿಮಾವನ್ನು ಒಂದ್ ಸಾರಿ ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ಕ್ಯೂಟ್ ಬೆಡಗಿಯಾಗಿ ಕಾಣಿಸಿಕೊಂಡು ಅದೆಷ್ಟೋ ಮಂದಿ ಕನಸು ಕಾಣುವಂತೆ ಮಾಡಿದ್ದು ಇದೇ ಭಾಮಾ ಮಣಿ. ಈಗ ‘ಒಂದು ಕ್ಷಣದಲಿ’ ಹಾಗೂ ಗಣೇಶ್ ನಾಯಕರಾಗಿರುವ ‘ಶೈಲೂ’ ಸೇರಿದಂತೆ ಮಲಯಾಳಂನ ಎರಡು ಸಿನಿಮಾ. ತಮಿಳು, ತೆಲುಗಿನ ಒಂದೊಂದು ಸಿನ್ಮಾಗಳಲ್ಲಿ ಲೀಡ್ ರೋಲ್ನಲ್ಲಿ ಭಾಮಾ ಮಣಿ ಕಾಣಿಸಿಕೊಳ್ಳಲಿದ್ದಾರೆ. ಕೇರಳದ ಕೋಯಿಕೋಡ್ನ ಸುಂದರ ತಾಣದಲ್ಲಿ ಚಿತ್ರೀಕರಣವಾಗುತ್ತಿರುವ ಮಲಯಾಳಂನ ‘ಸೆವೆನ್ಸ್’ನ ಸೆಟ್ನಲ್ಲಿ ಭಾಮಾ ಲವಲವಿಕೆಯ ಕರೆಗೆ ಸಿಕ್ಕಿ ಬಿದ್ದರು. ಸೆವೆನ್ಸ್ನ ಬ್ಯುಸಿ ಶೆಡ್ಯುಲ್ ನಡುವೆನೂ ಭಾಮಾ ತನ್ನ ಚಿತ್ರ ಬದುಕು ಹಾಗೂ ಕೇರಳದ ದೊಡ್ಡ ಹಬ್ಬ ಓಣಂ ಕುರಿತು ಮುಕ್ತವಾಗಿ ಮಾತಿಗೆ ಇಳಿದು ಹೋದರು.
ಭಾಮಾ ಅಂತಾ ಕರೆದರೆ ಬರೀ ಸಿನ್ಮಾ ಇಂಡಸ್ಟ್ರಿಗೆ ಮಾತ್ರ ಗೊತ್ತಾಗುತ್ತದೆ. ಆದರೆ ಭಾಮಾರನ್ನು ಬಹಳಷ್ಟು ಜನ ಕರೆಯುವ ಹೆಸರು ರೇಖಿತಾ. ಸಿನಿಮಾಕ್ಕೆ ಬಂದ ನಂತರ ಭಾಮಾ ಎಂಬ ಹೆಸರು ಬಂದಿದೆ. ಭಾಮಾ ಮಲಯಾಳಂನಲ್ಲಿ ಬಹುಬೇಡಿಕೆಯ ಸಾಲಿನಲ್ಲಿರುವ ನಟಿ. ವೊದಲ ಚಿತ್ರ ‘ನೈವೇದ್ಯಂ’ನಿಂದ ಹಿಡಿದು ವೊನ್ನೆ ವೊನ್ನೆ ತೆರೆಕಂಡ ‘ಕಾಲೇಜ್ ಡೇಸ್’ ಚಿತ್ರಗಳವರೆಗೂ ಭಾಮಾ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಹೌದು, ಭಾಮಾ ಸಿನಿಮಾರಂಗ ಪ್ರವೇಶಿಸಿದ್ದು ಹೇಗೆ? ಎಂಬ ಪ್ರಶ್ನೆಗೆ ಭಾಮಾಮಣಿ ಒಂದು ಕಥೆ ಹೇಳುತ್ತಾಳೆ. ‘ನಾನು ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದೆ. ಆ ಕಾರ್ಯಕ್ರಮ ಕೂಡ ತುಂಬಾ ಜನಪ್ರಿಯವಾಗಿತ್ತು. ಅದೊಂದು ದಿನ ಕಾರ್ಯಕ್ರಮ ನೋಡಿದ ನಿರ್ದೇಶಕ ಲೋಹಿತ್ದಾಸ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಅಲ್ಲಿಂದ ನನ್ನ ಫಿಲ್ಮಿಜರ್ನಿ ಆರಂಭವಾಯಿತು’ ಎನ್ನುತ್ತಾಳೆ ಈ ಮಲಯಾಲಿ ಬೆಡಗಿ. ಅಂದಹಾಗೆ, ಭಾಮಾಗೆ ಆ ಲೋಹಿತ್ದಾಸ್ ಅವರೇ ಗಾಡ್ಫಾದರ್.
ಈಗಾಗಲೇ ಭಾಮಾ ನಾಲ್ಕು ಭಾಷೆಗಳಲ್ಲಿ ನಟಿಸಿದಂತಾಗಿದೆ. ಇನ್ನೊಂದು ಭಾಷೆಯಲ್ಲಿ ನಟಿಸಿದರೆ ಭಾಮಾ ಪಂಚಭಾಷಾ ನಟಿ. ತಮಿಳು, ತೆಲುಗಿನಲ್ಲೂ ಭಾಮಾಗೆ ಒಳ್ಳೆಯ ಬೇಡಿಕೆ ಇದೆಯಂತೆ. ಹಾಗಂತ ತನ್ನ ವೊದಲ ಆದ್ಯತೆ ಮಲಯಾಳಂ ಹಾಗೂ ಕನ್ನಡಕ್ಕೆ ಎನ್ನುವುದು ಈಕೆಯ ಮಾತು. ಶ್ರೀದೇವಿ, ಜಯಪ್ರದಾ ಹಾಗೂ ಕಮಲಹಾಸನ್ ಎಂದರೆ ಭಾಮಾಗೆ ಸಖತ್ ಇಷ್ಟವಂತೆ. ಇವರ ಸಿನಿಮಾಗಳನ್ನು ನೋಡಿ, ತನ್ನ ನಟನೆಯಲ್ಲಿ ಏನೆಲ್ಲಾ ಸುಧಾರಿಸಬಹುದೋ ಅದನ್ನು ಮಾಡುತ್ತಾಳಂತೆ.
‘ಸಿನಿಮಾ ಅನ್ನೋದು ನನ್ನ ಉಸಿರು. ಈ ಫೀಲ್ಡ್ನಲ್ಲಿ ತುಂಬಾ ವರ್ಷ ಇರಬೇಕೆಂಬ ಆಸೆಯೊಂದಿಗೆ ಪ್ರತಿ ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ. ಹೀಗಿರುವಾಗ ನನಗೆ ಇಷ್ಟವಾಗದ ಸಿನಿಮಾವನ್ನು ಯಾಕೆ ಒಪ್ಪಿಕೊಳ್ಳಬೇಕು. ಒಂದು ಸಿನಿಮಾದಲ್ಲಿ ನನ್ನ ಪಾತ್ರ ಕೆಟ್ಟದಾಗಿದ್ದರೂ ಅದು ತನ್ನ ಕೆರಿಯರ್ಗೆ ಪೆಟ್ಟು ಕೊಡುತ್ತದೆ. ಅದಕ್ಕಾಗಿ ನಾನು ಆಯ್ಕೆ ವಿಷಯದಲ್ಲಿ ತುಂಬಾ ಚೂಸಿ. ನನಗೆ ನಾನು ಎಷ್ಟು ಸಿನಿಮಾ ಮಾಡಿದ್ದೇನೆ ಅನ್ನೋದು ಮುಖ್ಯವಲ್ಲ. ಮಾಡಿದ ಸಿನಿಮಾಗಳು ಎಂಥವು ಅನ್ನೋದು ಮುಖ್ಯ. ನನಗೆ ಪ್ರೊಫೆಶನಲ್ ನಟಿಯಾಗಿರಲು ಇಷ್ಟ’ ಎಂಬ ಪ್ರಬುದ್ಧ ಉತ್ತರ ಭಾಮಾರಿಂದ ಹೊರ ಬರುತ್ತದೆ.
ಅದು ತವರುಮನೆ:
ಇದು ಪಕ್ಕದ್ಮನೆ ಕನ್ನಡದಲ್ಲಿ ವೊದಲ ಅವಕಾಶ ಸಿಕ್ಕಾಗ ಭಾಮಾ ಸಿಕ್ಕಾಪಟ್ಟೆ ಥ್ರಿಲ್ ಆದರಂತೆ. ಏಕೆಂದರೆ ಮಲಯಾಳಂನಿಂದ ಅದೆಷ್ಟೋ ನಟಿಯರು ಕನ್ನಡಕ್ಕೆ ಬಂದು ಮಿಂಚಿದ್ದಾರೆ, ಒಳ್ಳೊಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ತನಗೂ ಕನ್ನಡದಿಂದ ಅವಕಾಶ ಬಂದಾಗ ಭಾಮಾಗೆ ಖುಷಿಯೋ ಖುಷಿಯಂತೆ. ಇದೇ ಕಾರಣದಿಂದ ಕಥೆ ಕೇಳಿದಾಕ್ಷಣ ಭಾಮಾ ನಟಿಸಲು ಒಪ್ಪಿಕೊಂಡರಂತೆ. ‘ಮಲಯಾಳಂ ನನಗೆ ತವರು ಮನೆಯಾದರೆ, ಕನ್ನಡ ಪಕ್ಕದ್ಮನೆ ಇದ್ದಂತೆ. ನಮಗೆ ಪಕ್ಕದ್ಮನೆಯಲ್ಲಿ ತುಂಬಾ ಪ್ರೀತಿ, ಸಲುಗೆ ಇರುತ್ತದೆ. ಅಲ್ಲಿ ಯಾವುದೇ ಭಯವಿರುವುದಿಲ್ಲ. ಅದೇ ರೀತಿ ಕನ್ನಡ ಚಿತ್ರರಂಗ ಕೂಡ ನನಗೆ ತುಂಬಾ ಇಷ್ಟವಾದ ಚಿತ್ರರಂಗ. ಇಲ್ಲಿ ನನಗೆ ಎಲ್ಲವೂ ಕಂಫರ್ಟ್. ಅದೇ ಕಾರಣದಿಂದ ನನಗೆ ಕನ್ನಡವೆಂದರೆ ತುಂಬಾ ಪ್ರೀತಿ. ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುತ್ತೇನೆ ನೋಡ್ತಾ ಇರಿ’ ಎಂದು ನಕ್ಕು ಬಿಡುತ್ತಾರೆ ಭಾಮಾ.
ಸಿನಿಮಾ ಎಂದ ಮೇಲೆ ಅಲ್ಲಿ ಗ್ಲಾಮರ್ ಬೇಕೇ ಬೇಕು. ಜತೆ ಜತೆಗೆ ಎಕ್ಸ್ಪೋಸ್ ಕೂಡ. ಕೆಲವು ನಟಿಮಣಿಯರು ಬಣ್ಣದ ಲೋಕದ ಈ ಎರಡಕ್ಕೂ ಸಿದ್ಧರಾಗಿಯೇ ಎಂಟ್ರಿಕೊಟ್ಟಿರುತ್ತಾರೆ. ಇನ್ನು ಕೆಲವರು ಬರೀ ಗ್ಲಾಮರ್ಷ್ಟೇ ಓಕೆ ಅನ್ನುತ್ತಾರೆ. ಭಾಮಾ ಇದರಲ್ಲಿ ಎರಡನೇ ಕೆಟಗರಿಗೆ ಸೇರಿದವಳು. ಈಗಾಗಲೇ ಹೋಮ್ಲಿ ಲುಕ್ಕು ಎಂಬ ಹೆಸರು ಪಡೆದಿರುವ ಭಾಮಾ ಎಕ್ಸ್ಪೋಸ್ ಮಾಡುವುದಿಲ್ಲವಂತೆ. ಅಂತಹ ಚಿತ್ರಗಳು ನನಗೆ ಬೇಕಾಗಿಲ್ಲ ಅನ್ನುತ್ತಾಳೆ. ಹಾಗಂತ ಅಸಹ್ಯವೆನಿಸಿದ ಗ್ಲಾಮರ್ಗೆ ಆಕೆಯ ಅಭ್ಯಂತರವಿಲ್ಲ. ‘ಎಕ್ಸ್ಪೋಸ್ ಮಾಡಲು ನನಗೆ ಇಷ್ಟವಿಲ್ಲ. ಅಸಹ್ಯವೆನಿಸುವಂತೆ ಎಕ್ಸ್ಪೋಸ್ ಮಾಡಿದರೆ ಒಂದಷ್ಟು ಮಂದಿ ಮಾಸ್ ಪ್ರೇಕ್ಷಕರಿಗಷ್ಟೇ ಖುಷಿ ಸಿಗಬಹುದು. ಆದರೆ ಫ್ಯಾಮಿಲಿ ಪ್ರೇಕ್ಷಕರಿಗೆ ಅದು ಇಷ್ಟವಾಗುವುದಿಲ್ಲ. ಹೀಗಿರುವಾಗ ನನಗೆ ಎಕ್ಸ್ಪೋಸ್ ಮಾಡಿ ಹೆಸರು ಮಾಡುವ ಅಗತ್ಯವಿಲ್ಲ. ಆದರೆ ಸಿನಿಮಾಕ್ಕೆ ಬೇಕಾದ ಹಾಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನಾನು ರೆಡಿ’ ಎನ್ನುವುದು ಭಾಮಾ ಮಾತು.
ಅಂದಹಾಗೆ ಓಣಂ ಕುರಿತು ಮಾತಿಗೆ ಇಳಿದಾಗ ಭಾಮಾ ಹೇಳುವುದಿಷ್ಟು: ನಾವು ಮಲಯಾಳಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ನಮಗೆ ಓಣಂ ವಿಶೇಷ ಹಬ್ಬ . ಸಿನ್ಮಾಕ್ಕೆ ಬರುವ ಮೊದಲು ಓಣಂಗಾಗಿ ಮನೆಯಲ್ಲಿ ಬಹಳಷ್ಟು ಸಿದ್ಧತೆ ನಡೆಯುತ್ತಿತ್ತು. ಈಗ ಸಿನ್ಮಾದಲ್ಲಿ ಬ್ಯುಸಿ ಇದ್ದರೂ ಕೂಡ ಹಬ್ಬದ ಟೈಮ್ನಲ್ಲಿ ಚಿತ್ರದ ಶೆಡ್ಯುಲ್ಗಳನ್ನು ಚೇಂಜ್ ಮಾಡಿ ಮನೆಯಲ್ಲಿಯೇ ಇರುತ್ತೇನೆ. ಕುಟುಂಬಿಕರು ಸೇರಿದಂತೆ ಸ್ನೇಹಿತರ ಜತೆ ಸೇರಿ ಹಬ್ಬ ಜೋರಾಗಿ ಆಚರಿಸುತ್ತೇವೆ. ಒಟ್ಟಾಗಿ ಸೇರುವುದರಿಂದ ಓಣಂ ನನಗೆ ವಿಶಿಷ್ಟ ಹಬ್ಬ ಎನ್ನುವುದು ಭಾಮಾರ ಓಣಂ ಹಬ್ಬದ ಮಾತು.
No comments:
Post a Comment