Friday, May 30, 2014

ಕೊಂಕಣಿ ಕೃತಿಗಳಿಗೆ ಮೊಬೈಲ್ ಕೊಂಕಣಿ ಬಜಾರ್

ಕರ್ನಾಟಕ ಕೊಂಕಣಿ ಅಕಾಡೆಮಿಯ ವಿನೂತನ ಪ್ರಯತ್ನ * ಮನೆ ಬಾಗಿಲಲ್ಲಿ ಕೊಂಕಣಿ ಕೃತಿಗಳ ಬಿಕರಿ * ಸ್ಟೀವನ್ ರೇಗೊ,ದಾರಂದಕುಕ್ಕು
ಸಾಹಿತ್ಯ ಕೃತಿಗಳನ್ನು ಖರೀದಿಸಿ ಓದುವ ಮನಸ್ಸು ಈಗ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಸದಾ ಕಾಲ ಸಾಹಿತ್ಯ ವಲಯದಲ್ಲಿರುವವರನ್ನು ಕಾಡುತ್ತಾ ಬಂದಿದೆ. ಹೊಸ ಹೊಸ ಪ್ರಯತ್ನಗಳ ಮೂಲಕ ಸಾಹಿತ್ಯ ಕೃತಿಗಳನ್ನು ಖರೀದಿ ಮಾಡಿ ಓದಿಸುವ ಕೆಲಸಗಳಂತೂ ಭರ್ಜರಿಯಾಗಿ ನಡೆಯುತ್ತಾ ಸಾಗುತ್ತಿದೆ. ಈ ಎಲ್ಲ ತಯಾರಿಗಳಿಂದ ಕನ್ನಡ ಸಾಹಿತ್ಯ ವಲಯ ಕೂಡ ಬಲಗೊಳ್ಳುತ್ತಿದೆ. ಆದರೆ ಕರುನಾಡಿನಲ್ಲಿರುವ ಕೊಂಕಣಿ ಭಾಷೆಯಲ್ಲಿ ಹೊಸ ಹೊಸ ಲೇಖಕರು ಹುಟ್ಟಿಕೊಳ್ಳುವ ಜತೆಗೆ ಕೊಂಕಣಿ ಪುಸ್ತಕೋದ್ಯಮದಲ್ಲೂ ಹೊಸ ಕೊಂಕಣಿ ಸಾಹಿತ್ಯ ಕೃತಿಗಳು ಲಗ್ಗೆ ಹಾಕುತ್ತಿದೆ. ಆದರೆ ಇಂತಹ ಕೃತಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯಂತೂ ನೆಟ್ಟಗೆ ಇಲ್ಲ ಎನ್ನುವುದು ಕೊಂಕಣಿ ಸಾಹಿತಿಗಳ ಮಾತು. ಇದಕ್ಕೆ ಉತ್ತರ ಎನ್ನುವಂತೆ ಕರ್ನಾಟಕ ಕೊಂಕಣಿ ಅಕಾಡೆಮಿ ಈಗ ಕೊಂಕಣಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ವಿನೂತನವಾದ ಪ್ರಯತ್ನವೊಂದು ಸಾಗಿದೆ. ‘ಮೊಬೈಲ್ ಕೊಂಕಣಿ ಬಜಾರ್’ ಎನ್ನುವ ಕಲ್ಪನೆಯನ್ನು ಹೊತ್ತುಕೊಂಡು ಕೊಂಕಣಿ ಅಕಾಡೆಮಿ ಕೊಂಕಣಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ಹೊರಟಿದೆ. ಏನಿದು ಮೊಬೈಲ್ ಕೊಂಕಣಿ ಬಜಾರ್: ಮೊಬೈಲ್ ಕೊಂಕಣಿ ಬಜಾರ್ ಎನ್ನುವ ಯೋಜನೆಯ ಕರ್ನಾಟಕ ಕೊಂಕಣಿ ಅಕಾಡೆಮಿಯ ಪ್ರಕಟಣೆಗಳ ಜತೆಗೆ ಕೊಂಕಣಿ ಅಕಾಡೆಮಿ ಲೇಖಕರಿಂದ ಪಡೆದುಕೊಳ್ಳುವ ಕೃತಿಗಳು, ಕೊಂಕಣಿ ಭಾಷೆಯ ನಾನಾ ಬಗೆಯ ಧ್ವನಿ ಸುರಳಿಗಳನ್ನು ಟೆಂಪೋ ಟ್ರಾವೆಲ್ಲರ್‌ವೊಂದರ ನೆರವಿನಿಂದ ಊರೂರೂ ಸುತ್ತಾಡಿಕೊಂಡು ಮಾರಾಟ ಮಾಡುವ ವ್ಯವಸ್ಥೆ. ಮುಖ್ಯವಾಗಿ ಸರಳ ಭಾಷೆಯಲ್ಲಿ ಹೇಳುವುದಾದರೆ ಸಂಚಾರಿ ಮಾದರಿಯ ಗ್ರಂಥಾಲಯ ಎನ್ನಬಹುದು. ಈ ಸಂಚಾರಿ ಗ್ರಂಥಾಲಯದಲ್ಲಿ ಒಬ್ಬ ಚಾಲಕ ಸೇರಿದಂತೆ ಅವನಿಗೆ ನೆರವು ನೀಡಲು ಒಬ್ಬ ಸಹಾಯಕನಿರುತ್ತಾನೆ. ಈ ವಾಹನದಲ್ಲಿ ಕೊಂಕಣಿ ಸಾಹಿತ್ಯ ಕೃತಿಗಳ ಕುರಿತು ಊರೂರು ಹೇಳಿಕೊಂಡು ತಿರುಗಾಡಲು ಮೈಕ್ ಹಾಗೂ ಸೌಂಡ್ ಸಿಸ್ಟಂ ಕೂಡ ಜತೆಗಿರುತ್ತದೆ. ಇದರಿಂದ ಪ್ರಕಟವಾದ ಕೊಂಕಣಿಯ ಉತ್ತಮ ಸಾಹಿತ್ಯ ಕೃತಿಗಳು ಕೇವಲ ನಗರ ಕೇಂದ್ರಿತ ಮಾರುಕಟ್ಟೆಯಲ್ಲಿ ಉಳಿಯದೇ, ಹಳ್ಳಿಹಳ್ಳಿಗೂ ತಲುಪುತ್ತದೆ. ಅಂದಹಾಗೆ ಮೊಬೈಲ್ ಕೊಂಕಣಿ ಬಜಾರ್‌ನ ಎರಡು ಭಾಗದಲ್ಲೂ ಯುವ ಕಲಾವಿದ ವಿಲ್ಸನ್ ಕಯ್ಯಾರ್ ಅವರು ಕೊಂಕಣಿ ಸಾಹಿತ್ಯ ಲೋಕದಲ್ಲಿ ವಿಶೇಷವಾಗಿ ದುಡಿದ ಹಿರಿಯ ಚೇತನಗಳನ್ನು ತಮ್ಮ ಕುಂಚದ ಮೂಲಕ ಬಿಡಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಇಡೀ ಮೊಬೈಲ್ ಕೊಂಕಣಿ ಬಜಾರ್‌ನಲ್ಲಿ ಕೊಂಕಣಿ ಸಾಹಿತ್ಯ ಲೋಕದ ದಿಗ್ಗಜರು ಬ್ರಾಂಡ್ ಅಂಬಾಸೀಡರ್‌ಗಳಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಭರ್ಜರಿ ವಹಿವಾಟು: ಮೇ ೨೪ರಂದು ಬೆಂಗಳೂರಿನಲ್ಲಿ ಅಽಕೃತವಾಗಿ ಬಿಡುಗಡೆಯಾದ ‘ಮೊಬೈಲ್ ಕೊಂಕಣಿ ಬಜಾರ್’ ಬರೀ ಒಂದು ವಾರದಲ್ಲಿಯೇ ೫೦ ಸಾವಿರ ರೂಪಾಯಿ ವಹಿವಾಟು ನಡೆಸುವ ಮೂಲಕ ಕೊಂಕಣಿ ಅಕಾಡೆಮಿಯ ಹೊಸ ಪ್ರಯತ್ನಕ್ಕೆ ಗೆಲುವು ಬಂದಿದೆ. ‘ಮೊಬೈಲ್ ಕೊಂಕಣಿ ಬಜಾರ್‌ನ ಆರಂಭದಲ್ಲಿ ಸ್ವಲ್ಪ ಅಳುಕಿತ್ತು. ನಮಗೆ ಕೃತಿಗಳನ್ನು ಮಾರಾಟ ಮಾಡಿ ಲಾಭಗಳಿಸುವ ಇರಾದೆ ಇಲ್ಲ. ಆದರೆ ಕೊಂಕಣಿ ಸಾಹಿತ್ಯ ಕೃತಿಗಳಂತೂ ನಗರ ಮಾತ್ರವಲ್ಲದೇ ಹಳ್ಳಿಯ ಮೂಲೆ ಮೂಲೆಯಲ್ಲೂ ಸಿಗಬೇಕು ಎನ್ನುವ ಉದ್ದೇಶ ಮಾತ್ರವಿತ್ತು. ತಿಂಗಳಿಗೆ ೫೦ ಸಾವಿರ ರೂಪಾಯಿ ವಹಿವಾಟು ನಡೆಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬೆಂಗಳೂರಿನಲ್ಲಿ ಮೊಬೈಲ್ ಕೊಂಕಣಿ ಬಜಾರ್‌ನ ವಹಿವಾಟಿನಿಂದ ಖುಷಿಯಾಗಿದೆ ಎನ್ನುತ್ತಾರೆ ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟೋಲಿನೋ ಹೇಳುತ್ತಾರೆ. ‘ರಾಜ್ಯದಲ್ಲಿ ಈಗ ಸದ್ಯಕ್ಕೆ ಒಂದೇ ಮೊಬೈಲ್ ಕೊಂಕಣಿ ಬಜಾರ್ ವಾಹನ ಇದೆ. ಕೊಂಕಣಿ ಅಕಾಡೆಮಿಯ ಕಾರ‍್ಯಕ್ರಮಗಳು ರಾಜ್ಯದ ಯಾವುದೇ ಪ್ರದೇಶದಲ್ಲಿ ನಡೆಯುವಾಗ ಅಲ್ಲಿಗೆ ಈ ಸಂಚಾರಿ ಗ್ರಂಥಾಲಯ ಹಾಜರಿರುತ್ತದೆ. ಇದರ ಜತೆಗೆ ಕರಾವಳಿಯಲ್ಲಿ ನಡೆಯುವ ಚರ್ಚ್‌ಗಳ ಹಬ್ಬದ ಸಮಯದಲ್ಲೂ ಈ ಮೊಬೈಲ್ ಕೊಂಕಣಿ ಬಜಾರ್ ಹೋಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಿರುವ ಅಕಾಡೆಮಿಯ ಸದಸ್ಯರು ತಮ್ಮ ತಮ್ಮ ಊರುಗಳಲ್ಲಿ ಸಂಚಾರಿ ಗ್ರಂಥಾಲಯಕ್ಕೆ ನೆರವು ನೀಡಲಿದ್ದಾರೆ ಎನ್ನುತ್ತಾರೆ ರೋಯ್. ಕೊಂಕಣಿ ಸಾಹಿತ್ಯ ಕೃತಿಗಳ ಪ್ರಕಟಣೆಯ ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಮಂಗಳೂರಿನ ಕೆಲವೊಂದು ಮಳಿಗೆಯಲ್ಲಿ ಮಾತ್ರ ಕೊಂಕಣಿ ಪುಸ್ತಕಗಳು ಲಭ್ಯವಾಗುತ್ತಿದೆ. ಆದರೆ ಮಂಗಳೂರು ಬಿಟ್ಟು ಬೇರೆ ಊರಿನವರಿಗಂತೂ ಕೊಂಕಣಿ ಸಾಹಿತ್ಯ ಕೃತಿಗಳು, ಧ್ವನಿ ಸುರುಳಿಗಳು ಸುಲಭದಲ್ಲಿ ಸಿಗುವುದಿಲ್ಲ. ಇಂತಹ ಮೊಬೈಲ್ ಕೊಂಕಣಿ ಬಜಾರ್‌ನಿಂದ ಕೊಂಕಣಿ ಸಾಹಿತಿಗಳ ಜತೆಗೆ ಓದುವವರಿಗೂ ಲಾಭವಾಗಲಿದೆ ಎನ್ನುತ್ತಾರೆ ಕೊಂಕಣಿ ಪುಸ್ತಕ ಪ್ರಕಾಶಕ ವಿಕ್ಟರ್ ಮಥಾಯಸ್. ಟೋಟಲಿ ಸರಕಾರದ ಅಕಾಡೆಮಿಯೊಂದು ವಿನೂತನ ಮಾದರಿಯಲ್ಲಿ ಪುಸ್ತಕ ಮಾರಾಟಕ್ಕೆ ಇಳಿದಿರೋದು ಶ್ಲಾಘನೀಯ ಎನ್ನಬಹುದು.

No comments:

Post a Comment