Thursday, May 8, 2014

ಕುಡ್ಲದ ಗೋಳಿಬಜೆಗೆ ಇಂದ್ರಭವನ್

* ಸ್ಟೀವನ್ ರೇಗೊ, ದಾರಂದಕುಕ್ಕು ಮಂಗಳೂರಿನ ಇಂದ್ರಭವನ್ ಹೋಟೆಲ್‌ನ ಪರಿಚಯ ಬಹಳಷ್ಟು ಮಂದಿಗೆ ಗೊತ್ತಿದೆ. ಕಾರಣ ಇಷ್ಟೇ ಕಳೆದ ೬೪ ವರ್ಷಗಳಿಂದ ಈ ಹೋಟೆಲ್ ಮಂಗಳೂರಿನ ಜನತೆಯ ಹೊಟ್ಟೆ ತುಂಬಿಸುತ್ತಾ ಕಾಲ ಕಳೆಯುತ್ತಿದೆ. ಇಂದ್ರಭವನ್ ಹೋಟೆಲ್‌ನ ಕಟ್ಟಡ ಕಂಡಾಗಲೇ ಅದೊಂದು ಹಳೆಯ ಹೋಟೆಲ್ ಎನ್ನುವ ಮಾಹಿತಿ ರವಾನೆಯಾಗುತ್ತದೆ. ಆದರೆ ತಿಂಡಿ-ತಿನಸುಗಳ ವಿಚಾರದಲ್ಲಂತೂ ಇಂದ್ರಭವನ ತನ್ನ ಗತ್ತು- ಗೈರತ್ತುವನ್ನು ಕಳೆದುಕೊಂಡಿಲ್ಲ.ಈಗಲೂ ಇಂದ್ರಭವನ ಹೋಟೆಲ್‌ಗೆ ಹಳೆಯ ಗಿರಾಕಿಗಳು ಹುಡುಕಿಕೊಂಡು ಬರುತ್ತಾರೆ. ಉಳಿದಂತೆ ಹೊಸ ಹೊಸ ಗ್ರಾಹಕರನ್ನು ಕೂಡ ಸೆಳೆಯುವಲ್ಲಿ ಇಂದ್ರಭವನ ತನ್ನ ಹೆಸರನ್ನು ಉಳಿಸಿಕೊಂಡಿದೆ. ಇಂದ್ರಭವನ ಯಾಕೆ ತನ್ನ ಖ್ಯಾತಿ ಉಳಿಸಿಕೊಂಡಿದೆ ಎನ್ನುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಗ್ರಾಹಕರು ಹಾಗೂ ಹೋಟೆಲ್ ಮಾಲೀಕರು ಹೇಳುತ್ತಾರೆ. ಮಂಗಳೂರಿನ ನಗರ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳನ್ನು ಲೆಕ್ಕಹಾಕುತ್ತಾ ಹೋದರೆ ಈ ಹೋಟೆಲ್‌ನಲ್ಲಿ ತಿಂಡಿ- ತಿನಸುಗಳಿಗೆ ಬೆಲೆ ಕಡಿಮೆ. ಆದರೆ ಗುಣಮಟ್ಟದಲ್ಲಂತೂ ರಾಜಿ ಇಲ್ಲ. ಇದರ ಜತೆಗೆ ದಿನಕ್ಕೊಂದು ಬಗೆಯ ದೋಸೆ ಐಟಂಗಳು ಇಲ್ಲಿ ಲಭ್ಯ. ಮಸಾಲೆ ದೋಸೆ, ಸಾದಾ ದೋಸೆ ದಿನನಿತ್ಯನೂ ದೊರೆಯುತ್ತದೆ. ಆದರೆ ಮಧ್ಯಾಹ್ನ ನಂತರವಂತೂ ದೋಸೆ ಐಟಂಗಳೇ ಹೈಲೇಟ್.
ಒಂದೊಂದು ದಿನನೂ ಒಂದೊಂದು ಬಗೆಯ ದೋಸೆಗಳನ್ನು ಮಾಡಿ ಗ್ರಾಹಕರಿಗೆ ಕೊಡಲಾಗುತ್ತದೆ. ಹೋಟೆಲ್ ಟೈಮಿಂಗ್ಸ್ ನಲ್ಲೂ ಇಂದ್ರಭವನ್‌ನಲ್ಲಿ ವಿಶೇಷತೆ ಇದೆ. ಬೆಳಗ್ಗೆ ೬ರಿಂದ ಮಧ್ಯಾಹ್ನ ೧ರ ವರೆಗೆ ಹೋಟೆಲ್ ತೆರೆದಿರುತ್ತದೆ. ಈ ಬಳಿಕ ಮಧ್ಯಾಹ್ನ ೩ ರಿಂದ ಸಂಜೆ ೭ ಗಂಟೆಯ ವರೆಗೆ ಇಂದ್ರಭವನನಲ್ಲಿ ತಿಂಡಿ- ತಿನಸುಗಳನ್ನು ತಿನ್ನಬಹುದು. ಇಂದ್ರಭವನದಲ್ಲಿ ಈ ಹಿಂದೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಇತ್ತು. ಈಗವಂತೂ ಊಟದ ವ್ಯವಸ್ಥೆ ಇಲ್ಲ. ಆದರೆ ಮಂಗಳೂರಿನ ನಗರ ಹೋಟೆಲ್‌ಗಳಲ್ಲಿ ಸಿಗದ ತಿಂಡಿ ತಿನಸುಗಳಂತೂ ಇಲ್ಲೇ ಇದ್ದೇ ಇದೆ. ವಿಶೇಷವಾಗಿ ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಕ್ಯಾಪ್ಸಿಕಮ್, ಪಾಲಕ್, ಬಾಳೆಹಣ್ಣು ದೋಸೆಯನ್ನು ತಯಾರಿಸಲಾಗುತ್ತದೆ. ಸ್ಪ್ರಿಂಗ್ ಆನಿಯನ್ (ಈರುಳ್ಳಿ) ದೋಸೆ, ರಾಗಿ ರೊಟ್ಟಿ ಮತ್ತು ಅಕ್ಕಿ ರೊಟ್ಟಿಗಳು ದೋಸೆ ವಿಭಾಗದಲ್ಲಿ ವಿಶಿಷ್ಟವೆನಿಸುತ್ತದೆ. ಅಲ್ಲದೆ ಹೆಸರು ಬೇಳೆ ಉಸ್ಲಿ, ಸೇಮಿಗೆ ಬಾತ್, ಬಾಳೆಹಣ್ಣಿನ ಬೋಂಡ, ಬಿಸ್ಕೆಟ್ ರೊಟ್ಟಿ, ಪತ್ರೊಡೆ, ಮೂಡೆ ಮತ್ತು ತೊವ್ವೆ, ಕೊಟ್ಟಿಗೆ, ಸೇಮಿಗೆ, ಕಾಯಿಹಾಲು, ಕಟ್ಲೆಟ್, ಗೋಳಿಬಜೆ, ಬಾಳೆಹಣ್ಣು ಪೋಡಿ, ಕ್ಯಾಪ್ಸಿಕಮ್ ಪೋಡಿ, ಗುಳ್ಳ ಪೋಡಿ, ಅವಲಕ್ಕಿ ಕಡ್ಲೆ, ಸಜ್ಜಿಗೆ ಬಜಿಲು (ಅವಲಕ್ಕಿ ಸಜ್ಜಿಗೆ)ಯೂ ಲಭ್ಯವಿದೆ. ಗೋಳಿಬಜೆಯಲ್ಲಿ ನಂಬರ್ ವನ್: ತೀರಾ ಇತ್ತೀಚೆಗೆ ಖಾಸಗಿ ರೇಡಿಯೋ ವಾಹಿನಿಯೊಂದು ಮಂಗಳೂರು ನಗರದ ಹೋಟೆಲ್‌ಗಳ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಗ್ರಾಹಕರು ಯಾವ ಹೋಟೆಲ್‌ನಿಂದ ಯಾವ ತಿಂಡಿಯನ್ನು ಹೆಚ್ಚು ಇಷ್ಟ ಪಡುತ್ತಾರೆ ಎನ್ನುವ ಪ್ರಶ್ನೆ ಕೇಳಿ ಉತ್ತರ ಹುಡುಕಲು ಪ್ರಯತ್ನ ಮಾಡಿತ್ತು. ಮಂಗಳೂರಿನ ಇಂದ್ರಭವನ್ ಹೋಟೆಲ್‌ವಂತೂ ಗೋಳಿಬಜೆಯಲ್ಲಿ ನಂಬರ್ ಒಂದು ಪಟ್ಟವನ್ನು ಪಡೆದುಕೊಂಡಿತು. ಅಂದಹಾಗೆ ಗೋಳಿಬಜೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಕುರಿತು ಇಂದ್ರಭವನ್‌ನ ಹೋಟೆಲ್ ಮಾಲೀಕರಾದ ಪ್ರಕಾಶ್ ಭಟ್ ಹೇಳುವುದು ಹೀಗೆ: ನಾಲ್ಕು ಮಂದಿಯ ಲೆಕ್ಕಚಾರದಲ್ಲಾದರೆ ಬೇಕಾಗುವ ವಸ್ತುಗಳು : ೧/೪ ಕೆಜಿ ಮೈದಾ ಹಿಟ್ಟು, ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ, ಕರಿಬೇವಿನಸೊಪ್ಪು (೫ ಎಸಳು), ಹಸಿಶುಂಠಿ (ಒಂದು ಸಣ್ಣ ತುಂಡು) ೪ ಹಸಿಮೆಣಸು (ಸ್ವಲ್ಪ ಖಾರ ಹೆಚ್ಚು ಬೇಕಾದವರು ಇನ್ನೆರಡು ಮೆಣಸು ಹಾಕಿಕೊಳ್ಳಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ, ಕರಿಯಲು ಎಣ್ಣೆ, ಎರಡೂವರೆ ಟೀ ಚಮಚ ಉಪ್ಪು ಇದ್ದಾರೆ ಗೋಳಿ ಬಜೆ ಸಿದ್ಧವಾಯಿತು ಎನ್ನುತ್ತಾರೆ ಅವರು. ಕರಿಬೇವು, ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ (ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ) ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ. ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು. ಒಂದು ಮಧ್ಯದ ಹದವಿರಬೇಕು. ನಂತರ ಒಂದೈದು ನಿಮಿಷ ಬಿಡಿ. ಇಷ್ಟರ ಮಧ್ಯೆ ಹೇಗಿದ್ದರೂ ಒಲೆ ಹೊತ್ತಿಸಿ, ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟಿರುತ್ತೀರಾ. ಅದು ಕಾದಾಗ, ಈ ಹಿಟ್ಟನ್ನು ಮತ್ತೊಮ್ಮೆ ಕಲೆಸಿಕೊಂಡು ಬಜ್ಜಿ ಬಿಡುವಂತೆ ಬೆರಳಿನಲ್ಲಿ ಹಿಟ್ಟನ್ನು ಎಳೆದುಕೊಂಡು ಉಂಡೆ ಉಂಡೆಯಂತೆ ಎಣ್ಣೆಗೆ ಬಿಡುವುದು. ಕೆಂಪಾದ ಮೇಲೆ ತೆಗೆಯುವುದು. ಇದಕ್ಕೆ ಕಾಯಿ ಚಟ್ನಿ ಇದ್ದರೆ ತಿನ್ನಲು ರುಚಿ. ಮನೆಯಲ್ಲಿ ಗೋಳಿಬಜೆ ತಯಾರಿಸುವಾಗ ಕೆಲವೊಂದು ಟಿಪ್ಸ್‌ಗಳನ್ನು ಭಟ್ಟರು ಹೇಳುತ್ತಾರೆ. ಕೇಳಿ.... ಮನೆಯಲ್ಲಿ ಮಾಡುವಾಗ ಸ್ವಲ್ಪ ಕಡಿಮೆಯೇ ಸೋಡಾ ಹಾಕಿ. ಇದರಿಂದ ಏನೂ ಆಗದು. ಬಜ್ಜಿ ಸ್ವಲ್ಪ ಗಟ್ಟಿ ಎನಿಸುವುದು ಹೌದು. ಆದರೆ ಇದರಿಂದ ತಿನ್ನುವಾಗ ಸುಸ್ತು ಎನಿಸಲಾರದು. ಹಿಟ್ಟು ನೀರಾದರೆ ಬಜ್ಜಿ ಎಣ್ಣೆಯನ್ನು ಹೆಚ್ಚು ಕುಡಿಯುತ್ತದೆ., ಸೋಡಾ ಜಾಸ್ತಿ ಹಾಕಿದರೆ ಬಜ್ಜಿ ಬಹಳ ಮೃದುವಾಗಿ ಬರುತ್ತದೆ. ಆದರೆ, ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಅಲ್ಲದೇ ಸ್ವಲ್ಪ ತಣ್ಣಗಾದ ಕೂಡಲೇ ರಬ್ಬರ್ ಮಾದರಿ ಬಜ್ಜಿ ಆಗುತ್ತದೆ. ಇದಕ್ಕೆ ಕೆಲವರು ಜೀರಿಗೆ ಹಾಕುವುದುಂಟು. ಆದರೆ ಅದನ್ನು ಹಾಕಿದರೆ ಸ್ವಲ್ಪ ಕಹಿ ಎನಿಸುತ್ತದೆ ಎನ್ನುತ್ತಾರೆ ಪ್ರಕಾಶ್ ಭಟ್ಟರು. ಟೋಟಲಿ ಒಂದ್ ಸಾರಿ ಮಂಗಳೂರಿಗೆ ಬಂದಾಗ ಇಂದ್ರಭವನ್‌ನಲ್ಲಿ ಕೂತು ಒಂದು ಪ್ಲೇಟ್ ಗೋಳಿಬಜೆ ತಿಂದು ನೋಡಿ. ಮತ್ತೇ ತಪ್ಪದೇ ಗೋಳಿಬಜೆಯನ್ನು ತಿನ್ನಲು ಇಲ್ಲಿಗೆ ಬಂದೇ ಬರುತ್ತೀರಿ.

No comments:

Post a Comment