Thursday, May 8, 2014

ಬಾಲಿವುಡ್ ಅಂಗಳದಲ್ಲಿ ಬಳ್ಳಾರಿ ಗಣಿ

* ಸ್ಟೀವನ್ ರೇಗೊ, ದಾರಂದಕುಕ್ಕು ಗಣಿಗಾರಿಕೆ ವಿಷ್ಯಾ ಇದು ಬರೀ ಬಳ್ಳಾರಿಗೆ ಮಾತ್ರ ಸೀಮಿತವಲ್ಲ. ಇಡೀ ದೇಶವೇ ಗಣಿಗಾರಿಕೆಯ ಬಗ್ಗೆ ಮಾತನಾಡುತ್ತಿದೆ. ಅದರಲ್ಲೂ ಬಳ್ಳಾರಿಯಲ್ಲಿರುವ ಗಣಿಗಾರಿಕೆಯನ್ನು ಮತ್ತೆ ಕೆದಕುವ ಪ್ರಯತ್ನವನ್ನು ಬಾಲಿವುಡ್ ಅಂಗಳದಲ್ಲಿ ನಿರ್ದೇಶಕರು ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಬಾಲಿವುಡ್ ಅಂಗಳದಲ್ಲಿ ಎರಡು ಸಿನ್ಮಾಗಳು ತೆರೆಗೆ ಬಂದು ಅಪ್ಪಳಿಸಿ ದೊಡ್ಡ ಸುದ್ದಿಮಾಡಿತ್ತು. ಬಾಲಿವುಡ್‌ನಲ್ಲಿ ೧೯೭೯ರಲ್ಲಿ ತೆರೆಗೆ ಬಂದ ‘ಕಾಲ ಪತ್ತರ್ ’ಹಾಗೂ ೨೦೧೨ರಲ್ಲಿ ಬಂದ ‘ಗ್ಯಾಂಗ್ಸ್ ಆ- ವಾಸೇಪುರ್’ನಲ್ಲಿ ಇದೇ ಗಣಿಗಾರಿಕೆಯ ಕುರಿತು ಪ್ರೇಕ್ಷಕರನ್ನು ಕುಟುಕಿದ ಸಿನ್ಮಾವಾಗಿತ್ತು. ತೀರಾ ಇತ್ತೀಚೆಗೆ ಬಂದ ‘ಗುಂಡೇ ’ಸಿನ್ಮಾ ಕೂಡ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಚಿತ್ರದ ಕತೆ ಹಾಗೂ ನಟನೆಯಿಂದಾಗಿ ಈ ಮೂರು ಸಿನ್ಮಾಗಳು ಬಾಕ್ಸಾಫೀಸ್‌ನ ಲೆಕ್ಕಚಾರವನ್ನು ಉಲ್ಟಾಪಲ್ಟಾ ಮಾಡಿತ್ತು. ಅಂದಹಾಗೆ ಬಾಲಿವುಡ್‌ನಲ್ಲಿ ಈಗ ಬರುತ್ತಿರುವ ಸಿನ್ಮಾ ಮಾತ್ರ ಕೊಂಚ ಡಿ-ರೆಂಟ್ ಆಗಲಿದೆ. ಇದಕ್ಕಿರುವ ಕಾರಣ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಕರಾವಳಿಯ ಮೂಲದ ನಟ ಸುನೀಲ್ ಶೆಟ್ಟಿಗೆ ರಾಜ್ಯದಲ್ಲಿರುವ ಗಣಿಗಾರಿಕೆಯ ಕುರಿತು ಅರಿವಿದೆ. ಅದಕ್ಕೂ ಮುಖ್ಯವಾಗಿ ಕರ್ನಾಟಕದ ಗಣಿಗಾರಿಕೆ ಹಾಗೂ ಜಾರ್ಖಂಡ್ ರಾಜ್ಯದ ಗಣಿಗಾರಿಕೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಸಿನ್ಮಾ ಮಾಡಲಾಗುತ್ತಿದೆ. ಚಿತ್ರದ ನಿರ್ದೇಶಕ ಅಶು ತಾರೀಕಾ ಮೂಲತಃ ಜಾರ್ಖಂಡ್ ರಾಜ್ಯದವರು. ಈ ಕಾರಣಗಳಿಂದ ಎರಡು ರಾಜ್ಯದ ಗಣಿಗಾರಿಕೆ ವಿಷ್ಯಾ ಬಾಲಿವುಡ್ ಅಂಗಳದಲ್ಲಿ ಪ್ರೇಕ್ಷಕರಿಗೆ ಕಾಣಸಿಗಲಿದೆ.
ಗಣಿಗಾರಿಕೆಯ ಕುರಿತು ಬರುತ್ತಿರುವ ಸಿನ್ಮಾಕ್ಕೆ ‘ಕೊಯ್ಲಾಂಚಲ’ ಎನ್ನುವ ಹೆಸರಿಡಲಾಗಿದೆ. ಇದರಲ್ಲಿ ಗಣಿಗಾರಿಕೆ, ರಾಜಕೀಯ, ಕಾರ್ಮಿಕರ ಬವಣೆಯನ್ನು ಚಿತ್ರಿಸಲಾಗುತ್ತದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಾಲಿವುಡ್ ನಟರಾದ ವಿನೋದ್ ಖನ್ನಾ ಹಾಗೂ ಸುನೀಲ್ ಶೆಟ್ಟಿ ಇರಲಿದ್ದಾರೆ ಎನ್ನುವುದು ಸದ್ಯಕ್ಕೆ ಚಿತ್ರತಂಡ ಹೊರಬಿಟ್ಟ ಮಾಹಿತಿ. ಉಳಿದ ಮಾಹಿತಿಗಳನ್ನು ಚಿತ್ರತಂಡ ಶೀಘ್ರದಲ್ಲಿಯೇ ಹೊರಗಿಡುವ ಸಾಧ್ಯತೆಗಳನ್ನು ಹೇಳುತ್ತಿದೆ. ಚಿತ್ರದ ನಿರ್ದೇಶಕ ಅಶು ಹೇಳುವಂತೆ ‘ ಅಣ್ಣಾ( ಶೆಟ್ಟಿ) ಅವರ ಜತೆಗೆ ಚಿತ್ರದ ಕುರಿತು ಮಾತುಕತೆ ನಡೆದಿದೆ. ಇದರಲ್ಲಿ ಅಣ್ಣಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಐಎಎಸ್ ಅಽಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದೆ. ಚಿತ್ರ ಕತೆ ಕೇಳಿದಾಕ್ಷಣ ತಾನು ನಟಿಸುವುದಾಗಿ ಒಪ್ಪಿಕೊಂಡರು ಎಂದು ಅಶು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡರೆ ನೆಗೇಟಿವ್ ಶೇಡ್‌ನಲ್ಲಿ ವಿನೋದ್ ಖನ್ನಾ ಕಾಣಿಸುತ್ತಾರೆ. ಈ ಹಿಂದೆ ವಿನೋದ್ ಖನ್ನಾ ಅವರನ್ನು ನೆಗೆಟೀವ್ ಶೇಡ್‌ನಲ್ಲಿ ತೋರಿಸಿದ ದೀವಾನಾ ಪನ್(೨೦೦೧) ಚಿತ್ರ ಕೂಡ ಸಾಕಷ್ಟು ಹೊಗಳಿಕೆಗೆ ಪಾತ್ರವಾಗಿತ್ತು. ಈ ಬಳಿಕ ಅಶು ಅವರ ನಿರ್ದೇಶನದಲ್ಲಿ ವಿನೋದ್ ಖನ್ನಾ ಮತ್ತೊಂದು ಸಲ ನೆಗೆಟೀವ್ ಶೇಡ್‌ನಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಚಿತ್ರದ ಕತೆಯಿಂದ ಸ್ಪೂರ್ತಿ ಪಡೆದ ಖನ್ನಾ ಅವರು ಚಿತ್ರದಲ್ಲಿ ನಟಿಸಲು ತಾನು ರೆಡಿ ಎಂದರಂತೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಶು. ಈ ವರ್ಷದ ಮಧ್ಯಭಾಗದಲ್ಲಿ ಚಿತ್ರದ ಶೂಟಿಂಗ್ ಕೆಲಸಗಳು ಆರಂಭವಾಗಲಿದೆ. ೪೫ ದಿನಗಳ ಒಂದೇ ಶೆಡ್ಯುಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಚಿತ್ರದಲ್ಲಿ ಎರಡು ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತದೆ. ಒಂದನೇಯದ್ದು ಕರ್ನಾಟಕದ ಬಳ್ಳಾರಿ ಹಾಗೂ ಮತ್ತೊಂದು ಜಾರ್ಖಂಡ್‌ನ ರಾಮಘರ್, ಹಜಾರೀಭಾಗ್, ಅರ್‌ಗದಾದಲ್ಲಿ ಆದರೆ ಮೊದಲು ಎಲ್ಲಿ ಶೂಟಿಂಗ್ ಕೆಲಸ ಆರಮಭವಾಗುತ್ತದೆ ಎನ್ನುವುದು ಸಧ್ಯಕ್ಕೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಕನ್ನಡದಲ್ಲಿ ಬಂದ ಪ್ರಥ್ವಿ: ರಾಜ್ಯದ ಗಣಿಗಾರಿಕೆಯ ಕುರಿತು ಬೆಳಕು ಚೆಲ್ಲುವಂತಹ ವಿಶಿಷ್ಟ ಚಿತ್ರಗಳಲ್ಲಿ ಒಂದಾದ ‘ಪ್ರಥ್ವಿ’ಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡೀಸಿ ಪಾತ್ರದಲ್ಲಿ ಮಿಂಚಿದ್ದರು. ಇದರಲ್ಲೂ ಗಣಿಗಾರಿಕೆ, ರಾಜಕೀಯ , ಕಾರ್ಮಿಕರ ಸಮಸ್ಯೆ ಎಲ್ಲವನ್ನು ಕೊಡುವಲ್ಲಿ ಚಿತ್ರದ ನಿರ್ದೇಶಕರು ಗೆದ್ದುಕೊಂಡಿದ್ದರು. ಈಗ ಇಂತಹದ್ದೇ ಕತೆಯನ್ನು ಇಟ್ಟುಕೊಂಡು ಬಾಲಿವುಡ್‌ನಲ್ಲಿ‘ಕೊಯ್ಲಾಂಚಲ’ ಬರುತ್ತಿದೆಯಾ ಎನ್ನುವ ಅನುಮಾನಗಳು ಕಾಡುತ್ತಿದೆ. ಆದರೆ ಬಾಲಿವುಡ್‌ನಲ್ಲಿ ಬರಲಿರುವ ಈ ಚಿತ್ರವನ್ನು ನೋಡಿದ ಬಳಿಕವಷ್ಟೇ ನಿಖರವಾಗಿ ಹೇಳಿಬಿಡಬಹುದು ಅಲ್ವಾ..? ಚಿತ್ರಬರುವರೆಗೆ ಕಾಯಬೇಕಾಗುತ್ತದೆ ಎನ್ನುವುದು ಪ್ರೇಕ್ಷಕ ಮಹಾಪ್ರಭುಗಳ ಮಾತು.

No comments:

Post a Comment