Thursday, May 8, 2014

ಬಾಲಿವುಡ್‌ನಲ್ಲಿ ತಂದೆ ಮಗನ ಜುಗಲ್‌ಬಂಧಿ ಹವಾ ಎಬ್ಬಿಸುತ್ತಿರುವ ಹವಾಯಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸ್ಕೇಟಿಂಗ್ ಕ್ರೀಡೆಯನ್ನು ಸಿನ್ಮಾ ಮಾಡುವ ಯೋಜನೆ, ಯೋಚನೆ ಹಾಲಿವುಡ್ ಇರಲಿ ಬಾಲಿವುಡ್ ಅಂಗಳದಲ್ಲೂ ಇರಲಿಲ್ಲ. ಆದರೆ ಬಾಲಿವುಡ್‌ನಲ್ಲಿ ನಿಧಾನವಾಗಿ ಟ್ರೇಲರ್ ಮೂಲಕ ಹವಾ ಎಬ್ಬಿಸುತ್ತಿರುವ ‘ಹವಾ ಹವಾಯಿ’ ಸಿನ್ಮಾವಂತೂ ಸ್ಕೇಟಿಂಗ್ ಕ್ರೀಡೆಯನ್ನು ಪ್ರಧಾನವಾಗಿಟ್ಟುಕೊಂಡು ಥಿಯೇಟರ್‌ಗೆ ಬರುವ ತಿಂಗಳ ಆರಂಭದಲ್ಲಿ ಲಗ್ಗೆ ಹಾಕುತ್ತಿದೆ. ಬಾಲಿವುಡ್‌ನಲ್ಲಿ ಬರುವ ಎಲ್ಲ ಚಿತ್ರಗಳಂತೆ ಈ ಚಿತ್ರ ಕೂಡ ಇರಲಿದೆ ಎನ್ನುವ ಕಲ್ಪನೆಯನ್ನು ನಿಮ್ಮ ತಲೆಯೊಳಗೆ ತಂದುಹಾಕಿದರೆ ಅದು ನಿಮ್ಮ ತಪ್ಪು ಕಲ್ಪನೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ಚಿತ್ರ ವಿಶ್ವದಲ್ಲಿಯೇ ಮೊದಲ ಪ್ರಯತ್ನ. ಇಲ್ಲಿವರೆಗೂ ಅಥ್ಲೀಟ್, ಕ್ರಿಕೆಟ್, ಹಾಕಿ, ಬಾಕ್ಸಿಂಗ್ ಎಲ್ಲವನ್ನು ಸಿನ್ಮಾದಲ್ಲಿ ತೋರಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಲಾಗಿದೆ. ಆದರೆ ಸ್ಕೇಟಿಂಗ್ ಎನ್ನುವ ಕ್ರೀಡೆಯನ್ನು ಒಂದು ವಿಭಿನ್ನ ರೀತಿಯಲ್ಲಿ ತೋರಿಸುವ ಕೆಲಸ ಹವಾ ಹವಾಯಿಯಲ್ಲಿ ನಡೆದಿದೆ.
ಈ ಹಿಂದೆ ಬಾಲಿವುಡ್ ಅಂಗಳದಲ್ಲಿ ವಿಶೇಷ ಮನ್ನಣೆಗಳಿಸಿದ ‘ಸ್ಟ್ಯಾನ್ಲಿ ಕಾ ಡಬ್ಬಾ’ ಸಿನ್ಮಾವನ್ನು ನಿರ್ದೇಶನ ಮಾಡಿದ ಅಮೂಲ್ ಗುಪ್ತೆ ಈ ಸಿನ್ಮಾದ ನಿರ್ದೇಶಕರು. ‘ಸ್ಟ್ಯಾನ್ಲಿ ಕಾ ಡಬ್ಬಾ’ ಚಿತ್ರದಲ್ಲಿ ನಟಿಸಿದ ಪಾರ್ತೋ ಗುಪ್ತೆ ಈ ಚಿತ್ರದ ಲೀಡ್ ನಟ. ಈ ಹಿಂದಿನ ಚಿತ್ರದಲ್ಲಿ ಪಾರ್ತೋ ನಟನೆಯನ್ನು ಬಾಲಿವುಡ್ ಮಂದಿ ಬಹಳಷ್ಟು ಹೊಗಳಿದ್ದರು. ಅದಕ್ಕೂ ಮುಖ್ಯವಾಗಿ ಪಾತ್ರಕ್ಕಾಗಿ ನಾನಾ ಪ್ರಶಸ್ತಿಗಳು ಕೂಡ ಬಂದಿತ್ತು. ಬಹಳ ಸಣ್ಣ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರ ಬರೀ ಎರಡು ವಾರದಲ್ಲಿ ೩.೫ ಕೋಟಿ ರೂ ವ್ಯವಹಾರ ಮಾಡಿತ್ತು. ಸ್ಟ್ಯಾನ್ಲಿ ಜತೆಗೆ ಐದು ಮಂದಿ ಗೆಳೆಯರು, ಒಂದು ಶಾಲೆ, ಪುಟ್ಟ ಹೋಟೆಲ್‌ನಲ್ಲಿ ಪೂರ್ತಿ ಚಿತ್ರ ಸಿದ್ಧವಾಗಿತ್ತು. ಚಿತ್ರದ ನಿರ್ದೇಶಕರು ಪಾರ್ತೋ ಅವರ ತಂದೆಯಾಗಿರುವ ಕಾರಣ ಚಿತ್ರದ ಕೆಮಸ್ಟಿ ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿತ್ತು. ಈಗ ಇಂತಹ ತಂದೆ- ಮಗ ಮತ್ತೆ ಜತೆಗೂಡಿದ್ದಾರೆ. ಸ್ಕೇಟಿಂಗ್ ಎನ್ನುವ ಕ್ರೀಡೆಯನ್ನು ತಳಮಟ್ಟದಲ್ಲೂ ಕ್ಲಿಕ್ ಮಾಡಲು ಈ ಚಿತ್ರ ವರವಾಗಲಿದೆ. ಹವಾ ಹವಾಯಿ ವಿಭಿನ್ನ ಕತೆ: ‘ಹವಾ ಹವಾಯಿ’ ಎನ್ನುವ ಪದ ಈ ಹಿಂದೆ ಮಿಸ್ಟರ್ ಇಂಡಿಯಾ ಸಿನ್ಮಾದಲ್ಲಿ ಶ್ರೀದೇವಿ ಬಳಸಿದ ಮಾತು. ಆದರೆ ಈ ಚಿತ್ರದಲ್ಲಿ ಮಾತ್ರ ಸ್ಕೇಟಿಂಗ್ ಕಲಿಯುವ ಕನಸ್ಸು ಹೊತ್ತ ಬೀದಿ ಬದಿಯ ಹುಡುಗ ಯಾವ ರೀತಿಯಲ್ಲಿ ಈ ಕ್ರೀಡೆಯನ್ನು ತನ್ನ ಬದುಕಿನಲ್ಲಿ ತೆಗೆದುಕೊಳ್ಳುತ್ತಾನೆ. ಅದಕ್ಕೆ ಬೆಂಬಲ ನೀಡುವ ಕೋಚ್ ಪಾತ್ರದಲ್ಲಿ ನಟ ಸಖೀಬ್ ಸಲಿಂ ಪಡುವ ಕಷ್ಟಗಳು. ಪಾರ್ತೊನ ಗೆಳೆಯರು ಅವನನ್ನು ಸ್ಕೇಟಿಂಗ್ ಸ್ಟಾರ್ ಮಾಡುವ ಮಜಬೂತಾದ ಕತೆ ಚಿತ್ರದಲ್ಲಿ ಕಾಣಸಿಗಲಿದೆ. ಚಿತ್ರವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಅಮೂಲ್ ಗುಪ್ತೆ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀದೇವಿ ಕೂಡ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಆದರೆ ಶ್ರೀದೇವಿ ಚಿತ್ರದ ಕುರಿತು ಅಷ್ಟೊಂದು ಸಿರೀಯಸ್ ರೀತಿಯಲ್ಲಿ ಇಲ್ಲದೇ ಹೋದ ಕಾರಣ ಚಿತ್ರದಲ್ಲಿರುವ ಒಂದು ಪಾತ್ರವನ್ನು ನಟಿಯೊಬ್ಬರು ಮಾಡುತ್ತಿದ್ದಾರೆ. ಅಮೂಲ್ ಗುಪ್ತೆ ಈ ಚಿತ್ರಕ್ಕೆ ಒಂದು ಹಾಡನ್ನು ಬರೆದಿರುವ ಜತೆಗೆ ಹಾಡಿದ್ದಾರೆ. ಉಳಿದ ಹಾಡುಗಳನ್ನು ಹಿತೇಶ್ ಸೋನಿಕ್ ಮಾಡಿದ್ದಾರೆ. ಈ ಚಿತ್ರದ ಕತೆ ಹಾಗೂ ನಿರ್ದೇಶನ ಅಮೂಲ್ ಗುಪ್ತೆ ಮಾಡಿರೋದು ಮತ್ತಷ್ಟೂ ಹೈಫ್‌ಗೆ ಕಾರಣವಾಗಿದೆ. ಈ ಹಿಂದೆ ಅಮೂಲ್ ಬರೆದ ತಾರೇ ಜಮೀನ್ ಪರ್ ಸಿನ್ಮಾ ಬಾಲಿವುಡ್ ಅಂಗಳದಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತ್ತು ಎನ್ನುವ ನೆನಪು ಈಗಲೂ ಪ್ರೇಕ್ಷಕರಲ್ಲಿ ಉಳಿದುಕೊಂಡಿದೆ.

No comments:

Post a Comment