Thursday, December 11, 2014

ಕರಾವಳಿಯ ದೈವ ದೇವರುಗಳ ನಂಬಿಕೆಯ ‘ಬೊಲ್ಕಿರ್’

ಸ್ಟೀವನ್ ರೇಗೊ, ದಾರಂದಕುಕ್ಕು ‘ಬೊಲ್ಕಿರ್’ ಇದು ಪಕ್ಕಾ ತುಳು ಭಾಷೆಯ ಪದ. ಅದನ್ನು ಇಡೀಯಾಗಿ ಕನ್ನಡಕ್ಕೆ ತಂದರೆ ಬೆಳಕು ಎನ್ನುವ ಅರ್ಥ ನೀಡುತ್ತದೆ. ಅಂದಹಾಗೆ ‘ಬೊಲ್ಕಿರ್’ ಕಾರ್ನಿಕೋದ ತುಡರ್ ಎನ್ನುವ ಹೆಸರಿನ ಪುಟ್ಟ ಸಾಕ್ಷ್ಯಚಿತ್ರವೊಂದು ರೆಡಿಯಾಗಿದೆ. ಕರಾವಳಿಯ ದೈವ- ದೇವರುಗಳ ಕುರಿತಾದ ನಂಬಿಕೆ ಒಂದೆಡೆಯಾದರೆ ಮತ್ತೊಂದೆಡೆ ದೇಶದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರಗಳಿಗೆ ದೈವಗಳ ಯಾವ ರೀತಿಯಲ್ಲಿ ಪರಿಹಾರ ಕೊಡುತ್ತದೆ ಎನ್ನುವ ಸಾರ ಹೊತ್ತಿರುವ ‘ಬೊಲ್ಕಿರ್’ ತುಳು ಚಿತ್ರ ವಿಶ್ವ ತುಳುವೆರೆ ಪರ್ಬದಲ್ಲಿ ಬಿಡುಗಡೆ ಕಾಣಲಿದೆ. ಅಂದಹಾಗೆ ೩೦ ನಿಮಿಷಗಳ ಸಣ್ಣ ಸಾಕ್ಷ್ಯಾಚಿತ್ರದಲ್ಲಿ ಕರಾವಳಿಯ ಸಂಸ್ಕೃತಿಯ ಜತೆಗೆ ದೈವ, ದೇವರುಗಳ ಮೇಲಿನ ನಂಬಿಕೆಗಳು ಇಲ್ಲಿಯವರನ್ನು ಯಾವ ರೀತಿಯಲ್ಲಿ ಬದುಕಲು ಕಲಿಸಿಕೊಟ್ಟಿದೆ. ಕಷ್ಟ ಕಾರ್ಪಣ್ಯಗಳು ಎದುರುಗೊಂಡಾಗ ದೈವಗಳು ಯಾವ ರೀತಿಯಲ್ಲಿ ನೆರವಾಗುತ್ತದೆ ಎನ್ನುವ ಕಲ್ಪನೆಯೊಳಗೆ ಮೂಡಿಬಂದ ‘ಬೊಲ್ಕಿರ್’ ಸಾಕ್ಷ್ಯಾಚಿತ್ರವನ್ನು ಮೂಡುಬಿದಿರೆಯ ಯುವ ಚಿತ್ರ ಸಾಹಿತಿ ಪ್ರಸ್ತುತ ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿರುವ ಲೋಕು ಕುಡ್ಲ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕರಾಗಿ ಅಖಿಲ ಭಾರತ ತುಳು ಒಕ್ಕೂಟಗಳ ಅಧ್ಯಕ್ಷ ಹಾಗೂ ಮುಂಬಯಿ ಉದ್ಯಮಿ ಧರ್ಮಪಾಲ ಯು. ದೇವಾಡಿಗ ಸಾಥ್ ಕೊಟ್ಟಿದ್ದಾರೆ. ಯೂಟೂಬ್‌ನಲ್ಲೂ ಮೊಳಗಿದ ಹಾಡು: ‘ಬೊಲ್ಕಿರ್’ ಚಿತ್ರದ ‘ಜನ್ಮಾ ಇರೇ ಕೊರ್‌ತೀನಾ...’ ಹಾಡು ಈಗಾಗಲೇ ತುಳು ಪ್ರಿಯರನ್ನು ಮೋಡಿ ಮಾಡಿದ ಸಾಮಾಜಿಕ ತಾಣಗಳು ಸೇರಿದಂತೆ ಯೂ ಟ್ಯೂಬ್‌ನಲ್ಲೂ ಸಿಕ್ಕಾಪಟ್ಟೆ ಲೈಕ್‌ಗಳನ್ನು ಪಡೆಯುತ್ತಾ ಮುಂದೆ ಸಾಗುತ್ತಿದೆ. ಯುವಜನತೆಯಲ್ಲೂ ಮೋಡಿ ಮಾಡಿದ ಈ ಹಾಡನ್ನು ಕರಾವಳಿ ಮೂಲದ ದುಬಾಯಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ ಅಕ್ಷತಾ ರಾವ್ ಕಂಠಸಿರಿಯಿಂದ ಹೊರಬಂದಿದೆ. ಈಗಾಗಲೇ ‘ನಿರೆಲ್’ ತುಳು ಚಿತ್ರದ ಮೂಲಕ ಗಮನ ಸೆಳೆದ ಅಕ್ಷತಾ ರಾವ್‌ಗೆ ಇದು ಎರಡನೇ ತುಳು ಹಾಡು. ಇದರ ಸಾಹಿತ್ಯದಲ್ಲೂ ಲೋಕು ಕುಡ್ಲ ಕೆಲಸ ಕಾಣಿಸಿಕೊಂಡಿದೆ. ‘ಬೊಲ್ಕಿರ್’ ತುಳು ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಪ್ರತಿನಿಽಸಲು ಮಾಡಿರುವ ಸಾಕ್ಷ್ಯಾಚಿತ್ರ. ಯುವಜನತೆಯಲ್ಲೂ ದೈವ, ದೇವರುಗಳ ಬಗ್ಗೆ ಇರುವ ನಂಬಿಕೆಯನ್ನು ತಿಳಿಯಪಡಿಸಲು ಕರಾವಳಿಯಲ್ಲಿರುವ ಯುವ ನಟರನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ತುಳು ಭಾಷೆಯಲ್ಲಿ ಅದ್ಧೂರಿತನದಲ್ಲಿ ಈ ಸಿನಿಮಾ ಮೂಡಿಬಂದಿದೆ ಎಂದು ಚಿತ್ರದ ನಿರ್ದೇಶಕ ಲೋಕು ಕುಡ್ಲ ಹೇಳುತ್ತಾರೆ. ಬೊಲ್ಕಿರ್‌ನಲ್ಲಿ ಯುವಜನರದ್ದೇ ಕಾರುಬಾರು: ಯುವಜನರೇ‘ಬೊಲ್ಕಿರ್’ ಸಾಕ್ಷ್ಯಾಚಿತ್ರದ ತುಂಬಾ ಕಾಣಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತೀಕ್ ಶೆಟ್ಟಿ, ವಿಜೆಯಾಗಿರುವ ಅಮಿತಾ ಕುಲಾಲ್, ಆರ್‌ಜೆ ಅನುರಾಗ್, ವಿಜೆ ರಕ್ಷಾ ಶೆಣೈ, ಆರ್‌ಜೆ ವಿನೀತ್, ಪೂಜಾ ರೈ, ರತೀಶ್ ಶೆಟ್ಟಿ ಮೊದಲಾದ ಯಂಗ್ ಟೀಮ್ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಕಾಪು ಹಾಗೂ ಎಲ್ಲೂರು ಸುತ್ತಮುತ್ತದಲ್ಲಿಯೇ ಚಿತ್ರೀಕರಣಗೊಂಡ ‘ಬೊಲ್ಕಿರ್’ ಚಿತ್ರದಲ್ಲಿ ಕಮರ್ಷಿಯಲ್ ದೃಷ್ಟಿಕೋನವಿಲ್ಲದೇ ಶುದ್ಧ ತುಳುವಿನ ನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ನಿಲ್ಲುತ್ತದೆ. ದೇಶದಲ್ಲಿ ದಿನನಿತ್ಯ ನಡೆಯುವ ಆತ್ಯಾಚಾರಗಳಿಗೆ ಮುಕ್ತಿ ಕೊಡುವ ಸಂದೇಶ ಚಿತ್ರದಲ್ಲಿ ತೊಡಗಿಕೊಂಡಿರೋದು ಚಿತ್ರವನ್ನು ಗಮನವಿಟ್ಟು ನೋಡುವಂತೆ ಮಾಡಿ ಹಾಕುತ್ತದೆ. (vk published dis article on 11.12.2014)

No comments:

Post a Comment